ಇಸ್ರೊದಲ್ಲಿ ಉದ್ಯೋಗ ಪಡೆಯುವುದು ಹೇಗೆ?

ಇಸ್ರೊದಲ್ಲಿ ಉದ್ಯೋಗ ಪಡೆಯುವ ಕನಸಿದೆಯೇ? ಶ್ರೀಮಂತರು ಮಾತ್ರವಲ್ಲದೆ ಬಡವರೂ ಇಸ್ರೊ ಸೇರುವ ಕನಸು ರೂಪಿಸಿಕೊಳ್ಳಬಹುದು. ಇಸ್ರೊ ಸೇರುವ ಕನಸಿರುವವರು ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯುತ್ತಮ ಅಂಕ ಪಡೆಯಿರಿ. ನಂತರ ನಮ್ಮ ಶಕ್ತಿ ಅನುಸಾರ ಸರಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಪಿಯುಸಿಗೆ ಸೇರಿರಿ. ನೆನಪಿಡಿ: ಪಿಯುಸಿಯಲ್ಲಿ ವಿಜ್ಞಾನವನ್ನು (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ಆಯ್ಕೆ ಮಾಡಿಕೊಳ್ಳಬೇಕು. ಸಿಬಿಎಸ್‍ಇ ಪಠ್ಯಕ್ರಮ ಓದಿದರೆ ಇನ್ನೂ ಉತ್ತಮ. ಪಿಯುಸಿ ಸಮಯದಲ್ಲಿ ಜೆಇಇ ಮೇನ್ಸ್ ಮತ್ತು ಅಡ್ವಾನ್ಸಡ್ ಪರೀಕ್ಷೆ ಬರೆಯಬೇಕು. ಅಡ್ವಾನ್ಸಡ್‍ನಲ್ಲಿ ಸಾಧ್ಯವಿರುವಷ್ಟು ಅತ್ಯುತ್ತಮ ರ್ಯಾಂಕ್ ಪಡೆಯಬೇಕು. ಪಿಯುಸಿಯಲ್ಲಿ ಶೇಕಡ 75ಕ್ಕಿಂತ ಹೆಚ್ಚು ಅಂಕ ಪಡೆಯಬೇಕು.

ಭಾರತದ ಬಾಹ್ಯಾಕಾಶ ಸಂಶೋಧನಾ ಇಲಾಖೆಯಡಿ ಬರುವ ಸ್ವಾಯುತ್ತ ವಿಶ್ವವಿದ್ಯಾಲಯವಾಗಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆಂಡ್ ಟೆಕ್ನಾಲಜಿ(ಐಐಎಸ್‍ಟಿ)ಯು ಪ್ರತಿವರ್ಷ ಮೇ-ಜೂನ್ ನಡುವೆ ಅಂಡರ್ ಗ್ರಾಜುಯೇಟ್ ಪದವಿಗೆ ಅರ್ಜಿ ಆಹ್ವಾನಿಸುತ್ತದೆ. ಅದಕ್ಕೆ ನೀವು ಅರ್ಜಿ ಸಲ್ಲಿಸಬೇಕು. ಐಐಎಸ್‍ಟಿಯಲ್ಲಿ ವಿವಿಧ ಕೋರ್ಸ್‍ಗಳು ಲಭ್ಯ. ಏರೋಸ್ಪೇಸ್ ಎಂಜಿನಿಯರಿಂಗ್‍ನಲ್ಲಿ 4 ವರ್ಷದ ಬಿ.ಟೆಕ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‍ನಲ್ಲಿ 4 ವರ್ಷದ ಬಿ.ಟೆಕ್, 5 ವರ್ಷದ ಡ್ಯುಯೆಲ್ ಡಿಗ್ರಿ (ಬಿಟೆಕ್ ಮತ್ತು ಮಾಸ್ಟರ್ ಆಫ್ ಸೈನ್ಸ್/ಮಾಸ್ಟರ್ ಆಫ್ ಟೆಕ್ನಾಲಜಿ) ಪಡೆಯಬಹುದು.

ಐಐಎಸ್‍ಟಿ ಇರುವುದು ಕೇರಳದ ತಿರುವನಂತಪುರದಲ್ಲಿ. ಇದು ಐಸ್ಯಾಟ್(ಐಎಸ್‍ಎಟಿ) ಪರೀಕ್ಷೆ ನಡೆಸುತ್ತದೆ. ಇಲ್ಲಿ ಜೆಇಇಯಲ್ಲಿ ಉತ್ತಮ ಅಂಕ ಪಡೆದವರಿಗೆ ಸದಾ ಸ್ವಾಗತ ಇರುತ್ತದೆ. ಇಲ್ಲಿ ಎಲ್ಲವೂ ಉಚಿತ. ಟ್ಯೂಷನ್ ಫೀಸ್ ಇಲ್ಲ. ಹಾಸ್ಟೇಲ್ ಫೀಸ್ ಇಲ್ಲವೇ ಇಲ್ಲ. ಮೆಸ್ ಅಂತೂ ಸಂಪೂರ್ಣ ಉಚಿತ. ಪುಸ್ತಕ ಖರೀದಿಸೋಕೆ ಅಂತ ಈ ಸಂಸ್ಥೆಯೇ ನಿಮಗೆ ತಿಂಗಳಿಗೆ 3 ಸಾವಿರ ರೂಪಾಯಿ ಕೊಡುತ್ತದೆ. ನಿಮ್ಮೆಲ್ಲ ಖರ್ಚುವೆಚ್ಚವನ್ನು ಇಸ್ರೊ/ಡಿಒಎಸ್ ನೋಡಿಕೊಳ್ಳುತ್ತದೆ. ಹಾಗಾದರೆ, ಏನು ಕೊಡಬೇಕು ಎನ್ನುವಿರಾ? ಪ್ರತಿ ಸೆಮಿಸ್ಟರ್‍ನಲ್ಲೂ ಐಐಎಸ್‍ಟಿ ನಿಗದಿಪಡಿಸಿದಷ್ಟು ಅಂಕವನ್ನು ನೀವು ಪಡೆಯಲೇಬೇಕು. ಅಷ್ಟು ಅಂಕ ದೊರಕದೆ ಇದ್ದರೆ ನಿಮಗೆ ಮುಂದಿನ ಸೆಮಿಸ್ಟರ್‍ಗೆ ಸ್ಕಾಲರ್‍ಷಿಪ್ ದೊರಕುವುದಿಲ್ಲ. ನಿಮ್ಮ ಶುಲ್ಕವನ್ನು ನೀವೇ ತುಂಬಬೇಕು. ಉಚಿತದೊಂದಿಗೆ ಒಂದು ನಿಬಂದನೆಯೂ ಇದೆ. ನೀವು ಇಂತಿಷ್ಟು ವರ್ಷ ಇಸ್ರೊದಲ್ಲಿ ಕೆಲಸ ಮಾಡಬೇಕೆಂಬ ನಿಯಮವಿದೆ. ಎಲ್ಲಾದರೂ ಅಮೆರಿಕದ ನಾಸಾದಲ್ಲಿ ಕೆಲಸ ಸಿಗ್ತು ಅಂತ ಇಸ್ರೊದಲ್ಲಿ ಕೆಲಸ ಮಾಡದೆ ಹೋದರೆ ನೀವು ದಂಡ (10 ಲಕ್ಷಕ್ಕಿಂತ ಹೆಚ್ಚು ಇರಬಹುದು) ಪಾವತಿಸಬೇಕಾಗುತ್ತದೆ. ಬಿಟೆಕ್ ಪೂರ್ಣಗೊಂಡ ನಂತರ ಇಸ್ರೊದ ವಿವಿಧ ಕೇಂದ್ರಗಳಲ್ಲಿ ಕೆಲಸ ಮಾಡುವ ಅವಕಾಶ ದೊರಕುತ್ತದೆ. ನೀವು ಉತ್ತಮ ಅಂಕಪಡೆದಿದ್ದರೆ ಬೆಂಗಳೂರಿನಲ್ಲಿಯೂ ಕೆಲಸ ಪಡೆಯಬಹುದಾಗಿದೆ. ಕನಸು ಈಡೇರಿಸಿಕೊಳ್ಳುವ ಮೊದಲ ಹೆಜ್ಜೆಯಾಗಿ ಸಂಪೂರ್ಣ ಮಾಹಿತಿಯನ್ನು ಐಐಎಸ್‍ಟಿ ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು.

ಇಸ್ರೊ ಸೇರಲು ಬೇರೆ ಆಯ್ಕೆಗಳೂ ಇವೆ. ದೇಶದ ಯಾವುದೇ ಅಂಗೀಕೃತ ಶಿಕ್ಷಣ ಸಂಸ್ಥೆಯಲ್ಲಿ ನೀವು ಬಿಟೆಕ್/ಎಂಟೆಕ್/ಪಿಎಚ್.ಡಿ ಪಡೆದರೂ ಇಸ್ರೊದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಬಹುದು. ಅದಕ್ಕಾಗಿ ನೀವು ಐಸಿಆರ್‍ಬಿ ಪರೀಕ್ಷೆ ಬರೆಯಬೇಕು. ಇದು ಇಸ್ರೊದ ಸೆಂಟ್ರಲೈಸ್ಡ್ ರಿಕ್ರೂಟ್‍ಮೆಂಟ್ ಬೋರ್ಡ್. ಪ್ರತಿವರ್ಷ ಇದರ ಮೂಲಕ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಇದು ಆಗಾಗ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತ ಇರುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಉತ್ತಮವಾಗಿ ಮಾಡಿದರೆ ಇಸ್ರೊದಲ್ಲಿ ಕೆಲಸ ಪಡೆಯಬಹುದು.

ಇದನ್ನೂ ಓದಿ  ಕ್ರಾಫ್ಟ್ ಕಾರ್ನರ್: ಮೊಟ್ಟೆಯಾಕಾರದ ಕ್ಯಾಂಡಲ್

ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್(ಐಐಆರ್‍ಎಸ್) ಡೆಹ್ರಡೂನ್, ಬಿರ್ಲಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೆಸ್ರಾ, ರಾಂಚಿ ಸೇರಿದಂತೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಯಲ್ಲಿ ಕಲಿತರೂ ಇಸ್ರೊದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದಾಗಿದೆ.

  •  ಪ್ರವೀಣ್ ಚಂದ್ರ ಪುತ್ತೂರು

ವಿಜ್ಞಾನಿ ಆಗುವುದು ಹೇಗೆ? ಕಲಿಕೆ ಮತ್ತು ತಯಾರಿ ಹೇಗಿರಬೇಕು?