Blogging Guide: ಬ್ಲಾಗ್ ಲೇಖನ ರಚನೆ ಹೇಗೆ?

By | 26/11/2018

ಸೋಷಿಯಲ್ ಮೀಡಿಯಾ ಉತ್ತುಂಗದಲ್ಲಿರುವ ಈ ಕಾಲದಲ್ಲಿ ಬ್ಲಾಗಿಂಗ್ ಎಂದರೆ ಕೆಲವರು ಮೂಗು ಮುರಿಯುತ್ತಾರೆ.  ಆದರೆ, ನೀವು ಗಮನಿಸಿರಬಹುದು. ಈಗ ಬ್ಲಾಗಿಂಗ್ ಎನ್ನುವುದು ವೆಬ್ ಸೈಟ್ ಗಳ ರೂಪದಲ್ಲಿ ಹೊಸ ರೂಪ ಪಡೆದಿದೆ. ಡೊಮೈನ್ ಹೆಸರು ಖರೀದಿ, ಹೋಸ್ಟಿಂಗ್ ಖರೀದಿ ಮಾಡಿ ಸ್ವಂತ ಸರಳ ವೆಬ್ ಸೈಟ್ ರಚಿಸಲು ಹೆಚ್ಚಿನವರು ಆದ್ಯತೆ ನೀಡುತ್ತಿದ್ದಾರೆ. ನೀವು ಸಹ ಬ್ಲಾಗ್ ಪೋಸ್ಟ್ ಬರೆಯಲು ಇಚ್ಚಿಸಿದ್ದರೆ ಒಂದಿಷ್ಟು ಮಾಹಿತಿ ಇಲ್ಲಿದೆ.

ವೆಬ್ ಸೈಟ್ ರೂಪದಲ್ಲಿ ಬ್ಲಾಗ್ ಬರೆಯುವ ಮೊದಲು ನಿಮ್ಮಲ್ಲಿ ಒಂದು ಬ್ಲಾಗ್ ಇರಬೇಕು. ನೀವು ಇನ್ನೂ ಬ್ಲಾಗ್ ರಚನೆ ಮಾಡದೆ ಇದ್ದರೆ ಈ ಹಿಂದೆ ಕರ್ನಾಟಕ ಬೆಸ್ಟ್ ನಲ್ಲಿ ಪ್ರಕಟಿಸಿದ ಈ ಕೆಳಗಿನ ಲಿಂಕ್ ಗಳು ನಿಮಗೆ ನೆರವಾಗಬಹುದು.

  1. ಉಚಿತ ಬ್ಲಾಗರ್ ರಚಿಸುವುದು ಹೇಗೆ?
  2. ಬ್ಲಾಗರ್ ಗೆ ವೆಬ್ ಸೈಟ್ ರೂಪ ನೀಡುವುದು ಹೇಗೆ?
  3. 1 ಸಾವಿರ ರೂ.ಗಿಂತ ಕಡಿಮೆ ದರದಲ್ಲಿ ಸ್ವಂತ ವೆಬ್ ಸೈಟ್ ರಚನೆ ಹೊಂದುವುದು ಹೇಗೆ? (ಸ್ವಂತ ಹೋಸ್ಟಿಂಗ್ ಇಲ್ಲದೆ ವೆಬ್ ರಚನೆ ಹೇಗೆ?)
  4. ವರ್ಡ್ ಪ್ರೆಸ್ ನಲ್ಲಿ ಬ್ಲಾಗ್ ರಚನೆ ಹೇಗೆ?
  5. ವೆಬ್ ಸೈಟ್ ಗೈಡ್: ಡೊಮೈನ್ ಖರೀದಿ ಹೇಗೆ?

ಮೇಲೆ ತಿಳಿಸಿದ ವಿವಿಧ ಲೇಖನಗಳು ಬ್ಲಾಗಿಂಗ್ ಕುರಿತು ಮತ್ತು ವೆಬ್ ಸೈಟ್ ರಚನೆ ಕುರಿತು ಒಂದಿಷ್ಟು ಮಾಹಿತಿ ನಿಮಗೆ ಒದಗಿಸಿರಬಹುದು. ಬ್ಲಾಗ್ ಬರಹ ಬರೆಯುವುದು ಹೇಗೆ ಎನ್ನುವ ಅಂಶವನ್ನು ಚರ್ಚಿಸೋಣ.

1. ವಿಷಯದ ಆಯ್ಕೆ

ನೀವು ಯಾವುದೇ ವಿಷಯದ ಕುರಿತು ಬ್ಲಾಗ್ ಬರೆಯಬಹುದು. ಅದನ್ನು ನಿಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಬಹುದು. ಆದರೆ, ಅದನ್ನು ಓದುವುದು ಅಥವಾ ಬಿಡುವುದು ಓದುಗರಿಗೆ ಬಿಟ್ಟದ್ದು. ನೀವು ಕಷ್ಟಪಟ್ಟು ಬರೆದಿರುವ ಬ್ಲಾಗ್ ಹೆಚ್ಚು ಜನರಿಗೆ ತಲುಪದೆ ಇದ್ದರೆ ನಿಮ್ಮ ಶ್ರಮ ವ್ಯರ್ಥ. ಹೀಗಾಗಿ, ಬ್ಲಾಗ್ ರಚನೆ ಹೆಚ್ಚು ಜನರಿಗೆ ತಲುಪಬೇಕು. ಬ್ಲಾಗ್ ರಚನೆ ಎನ್ನುವುದು ನಿಮ್ಮಿಂದ ಒಂದಿಷ್ಟು ಕೌಶಲ ಬೇಡುತ್ತದೆ.

ಮೊದಲಿಗೆ ಯಾವ ವಿಷಯದ ಕುರಿತು ಬ್ಲಾಗ್ ಬರೆಯಬೇಕು ಎಂದು ಯೋಚಿಸಿ. ನಿಮ್ಮ ಓದುಗರಿಗೆ ಒಂದಿಷ್ಟು ಅನುಕೂಲವಾಗುವ, ಸಹಾಯವಾಗುವ ವಿಷಯವನ್ನು ಆಯ್ಕೆ ಮಾಡಿಕೊಳ್ಳಿರಿ. ಬ್ಲಾಗ್ ವಿಷಯವನ್ನು ಆಯ್ಕೆ ಮಾಡಲು ಸಾಕಷ್ಟು ಸಮಯ ವಿನಿಯೋಗಿಸಿ ಯೋಚನೆ ಮಾಡಿರಿ.

2. ಚಂದದ ಶೀರ್ಷಿಕೆ ಬರೆಯಿರಿ

ಬ್ಲಾಗ್ ತಲೆ ಬರಹ ಅಥವಾ ಶೀರ್ಷಿಕೆಯನ್ನು ಬ್ಲಾಗ್ ಪೋಸ್ಟ್ ಬರೆಯುವ ಮೊದಲು ಬರೆಯುವಿರೋ ಅಥವಾ ಪೋಸ್ಟ್ ಬರೆದ ಬಳಿಕ ಬರೆಯುವಿರೋ ನಿಮಗೆ ಬಿಟ್ಟ ವಿಷಯ. ಆದರೆ, ನಿಮ್ಮ ಲೇಖನವನ್ನು ಜನರು ಕ್ಲಿಕ್ ಮಾಡಬೇಕಿದ್ದರೆ, ಅವರ ಗಮನಸೆಳೆಯುವಂತಹ ಶೀರ್ಷಿಕೆ ಬರೆಯಬೇಕು.

ಆದರೆ, ಈ ರೀತಿ ಗಮನಸೆಳೆಯುವ ಶೀರ್ಷಿಕೆ ಬರೆಯುವ ಧಾವಂತದಲ್ಲಿ ಈಗಿನ ಬಹುತೇಕ ವೆಬ್ ಸೈಟ್ ಗಳಲ್ಲಿ ರೋಚಕ ಹೆಡ್ ಲೈನ್ ಬರೆಯಲಾಗುತ್ತದೆ. ಅಂತಹ ಹೆಡ್ ಲೈನ್ ಬರೆದರೆ ನಿಮ್ಮ ವೆಬ್ ಸೈಟ್ ನ ವಿಶ್ವಾಸರ್ಹತೆ ಕಳೆದುಹೋಗುತ್ತದೆ. ಅಂತಹ ಹೆಡ್ ಲೈನ್ ಗಳಿಗೆ ಕೆಲವು ಉದಾಹರಣೆ “ಇಲ್ಲಿದೆ ಕುತೂಹಲಕಾರಿ ಮಾಹಿತಿ” “ಈ ಸುದ್ದಿಯನ್ನು ನೀವು ಓದಿದರೆ ಬೆಚ್ಚಿ ಬೀಳುತ್ತೀರಾ?’’ “ಈ ಲೇಖನ ಓದಿದರೆ ನಿಮ್ಮ ಹೃದಯ….” ಹೀಗೆ ಏನೇನೋ ಹೆಡ್ ಲೈನ್ ಗಳು, ಕ್ಲಿಕ್ ಮಾಡಿದರೆ ಒಳಗೆ ಸುದ್ದಿ ಟೊಳ್ಳು. ಇಂತಹ ಅತಿರಂಜಕ ಹೆಡ್ ಲೈನ್ ಗಳು ನಿಮ್ಮ ವೆಬ್ ಸೈಟಿನ ಬ್ರಾಂಡ್ ಮೌಲ್ಯವನ್ನು ಮಕಾಡೆ ಮಲಗಿಸಿಬಿಡುತ್ತದೆ.

ಹೀಗಾಗಿ, ನೀರಸವಲ್ಲದ, ಒಂದಿಷ್ಟು ಪದದ ಆಟವಿರುವ ಮತ್ತು ನೀವು ಬರೆದಿರುವ ಲೇಖನಕ್ಕೆ ಹೋಲಿಕೆಯಾಗುವ ಹೆಡ್ ಲೈನ್ ಬರೆಯಿರಿ.

3 ಲೇಖನದ ಆರಂಭ

ಜನರು ನಿಮ್ಮ ಲೇಖನದ ಹಣೆಬರಹವನ್ನು ಮೊದಲ ವಾಕ್ಯ, ಪ್ಯಾರಾದಲ್ಲಿಯೇ ಗುರುತಿಸಿಬಿಡುತ್ತಾರೆ. ಹೀಗಾಗಿ, ಫಸ್ಟ್ ಇಂಪ್ರೆಷನ್ ಇಸ್ ಬೆಸ್ಟ್ ಇಂಪ್ರೆಷನ್ ಎಂಬ ಮಾತು ನೆನಪಿರಲಿ. ಮೊದಲ ನೋಟಕ್ಕೆ, ಓದಿಗೆ ಸೆಳೆಯುವಂತೆ ಬ್ಲಾಗ್ ಬರಹ ಆರಂಭಿಸಿ.

4. ಲೇಖನದಲ್ಲಿ ತಿಳಿಸುವ ಅಂಶಗಳು

ನಿಮ್ಮ ಬರಹ ಗಂಭೀರವಾಗಿದ್ದು, ಸಾಕಷ್ಟು ಅಕ್ಷರಗಳ ಪದಗಳ ರಾಶಿಗಳಂತೆ ಇದ್ದರೆ ಬಹುತೇಕರ ಓದುವುದಿಲ್ಲ. ಸಂಪಾದಕೀಯ ಅಥವಾ ಗಂಭೀರ ಅಂಕಣ ಬರಹಗಳಂತಹ ಬರಹಗಳನ್ನು ವೆಬ್ ನಲ್ಲಿ ಓದುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ, ನೀವು ಬ್ಲಾಗಿನಲ್ಲಿ ಏನು ಬರೆಯುವಿರೋ, ಅದನ್ನು ಪಾಯಿಂಟ್ ಪಾಯಿಂಟ್ ಆಗಿ ವಿವರಿಸುತ್ತ ಹೋಗುವುದು ಸೂಕ್ತ.

5. ಗುಣಮಟ್ಟ ಸುಧಾರಣೆ, ಪಾಲೀಶ್ ಮಾಡಿ

ಬ್ಲಾಗ್ ಲೇಖನ ಬರೆದ ತಕ್ಷಣ ಪ್ರಕಟಿಸಬೇಡಿ. ಆ ಲೇಖನವನ್ನು ಹಲವು ಬಾರಿ ಓದಿ. ಆ ಲೇಖನವನ್ನು ಇನ್ನಷ್ಟು ಡೆವಲಪ್ ಮಾಡಬಹುದೇ ಎಂದು ಪರಿಶೀಲಿಸಿರಿ. ತಪ್ಪುಗಳು ಇದ್ದರೆ ಕಂಡುಹಿಡಿಯಿರಿ. ಲೇಖನ ಡೆಪ್ತ್ ಆಗಿರಲಿ. ಅನವಶ್ಯಕ ಅಂಶಗಳಿದ್ದರೆ ತೆಗೆಯಿರಿ.

6. ಯಾವ ಸಮಯದಲ್ಲಿ ಪೋಸ್ಟ್ ಮಾಡುವಿರಿ

ನೀವು ಲೇಖನ ಬರೆದು ಮುಗಿದಾಗ ಮಧ್ಯರಾತ್ರಿಯಾಗಿರಬಹುದು. ಆಗಲೇ ಪ್ರಕಟಿಸಬೇಡಿ. ಬೆಳಗ್ಗೆ ಅಥವಾ ಮಧ್ಯಾಹ್ನ ಹೆಚ್ಚು ಜನರು ಓದುವ ಸಮಯದಲ್ಲಿ ಬ್ಲಾಗ್ ಪ್ರಕಟಿಸಲು ಪ್ರಯತ್ನಿಸಿ.

7. ಪ್ರಮೋಷನ್

ಲೇಖನ ಪ್ರಕಟಿಸಿದರೆ ಸಾಲದು. ಅದು ಸಾಕಷ್ಟು ಜನರಿಗೆ ತಲುಪಬೇಕು. ಫೇಸ್ ಬುಕ್, ಟ್ವಿಟರ್, ವಾಟ್ಸಪ್ ಇತ್ಯಾದಿಗಳಲ್ಲಿ ಹಂಚಿಕೊಳ್ಳಿರಿ. ಯಾವ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವಿರಿ ಎನ್ನುವುದೂ ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲರೂ ಮಲಗಿದ್ದ ಸಮಯದಲ್ಲಿ ನೀವು ಫೇಸ್ಬುಕ್ ನಲ್ಲಿ ಹಂಚಿಕೊಂಡರೆ ಮರುದಿನ ನೀವು ಹಂಚಿಕೊಂಡಿರುವ ಮಾಹಿತಿಯು ಫೇಸ್ಬುಕ್ ನ ತಳ ಸೇರಿರಬಹುದು.

8.ಲೇಖನಕ್ಕೆ ಸೂಕ್ತ ಚಿತ್ರವಿರಲಿ

Art By: Geetha Binthodi

ನಿಮ್ಮ ಬ್ಲಾಗ್ ಬರಹವನ್ನು ಆಕರ್ಷಕಗೊಳಿಸುವ ಶಕ್ತಿ ಚಿತ್ರಗಳಿಗಿದೆ. ಹೀಗಾಗಿ, ನಿಮ್ಮ ಲೇಖನಕ್ಕೆ ಸೂಕ್ತವಾಗುವ ಚಿತ್ರಗಳನ್ನು ಜೋಡಿಸಿರಿ. ಆದರೆ, ಗೂಗಲ್ ನಿಂದ ಕಾಪಿರೈಟ್ ಇರುವ ಚಿತ್ರಗಳನ್ನು ತೆಗೆಯಬೇಡಿ. ನೀವು ಸ್ವಂತ ಕ್ಲಿಕ್ಕಿಸಿದ ಪೋಟೊಗಳಾದರೆ ಉತ್ತಮ. ಈಗಿನ ಸ್ಮಾರ್ಟ್ ಫೋನ್ ಕಾಲದಲ್ಲಿ ಈ ರೀತಿ ಫೋಟೊ ತೆಗೆಯುವುದು ಕಷ್ಟವಲ್ಲ. ಪೇಂಟಿಂಗ್ ಇತ್ಯಾದಿಗಳನ್ನೂ ಅಪ್ಲೋಡ್ ಮಾಡಿ ಲೇಖನವನ್ನು ಅಂದಗೊಳಿಸಬಹುದು.

ವೆಬ್ ಸೈಟಿನಲ್ಲಿ ಲೇಖನ ಪ್ರಕಟಣೆ ಹೇಗಿರಬೇಕು? ಯಾವ ರೀತಿ ಪುಟ ವಿನ್ಯಾಸ ಮಾಡಬೇಕು? ಇತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿರಬಹುದು. ಈ ಕುರಿತು ಮುಂದಿನ ಲೇಖನದಲ್ಲಿ ಹೇಳುತ್ತೇನೆ. ಅಲ್ಲಿಯವರೆಗೆ, ಈ ವೆಬ್ ಸೈಟಿನಲ್ಲಿರುವ ಇತರೆ ಲೇಖನಗಳನ್ನು ಓದಿರಿ. ಜೊತೆಗೆ, ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.

 

One thought on “Blogging Guide: ಬ್ಲಾಗ್ ಲೇಖನ ರಚನೆ ಹೇಗೆ?

  1. Dharanesh

    ಅತ್ಯುತ್ತಮ ಮಾಹಿತಿ. ಧನ್ಯವಾದ

    Reply

Leave a Reply

Your email address will not be published. Required fields are marked *