Book Review: ಮಾವೋನ ಕೊನೆಯ ನರ್ತಕ

By | 24/11/2018

ಲೀ ಕುನ್ ಕ್ಸಿನ್ ಆತ್ಮಕತೆಯನ್ನು ಕೊಂಚ ತಡವಾಗಿ ಓದಿದೆ. ಪುಸ್ತಕ ಓದುವ ಅಭ್ಯಾಸವನ್ನು ಇತ್ತೀಚೆಗೆ ಪುನರಾಂಭಿಸಿದ್ದು ಇದಕ್ಕೆ ಕಾರಣ. ಈ ಪುಸ್ತಕದಲ್ಲಿ ಇಷ್ಟವಾದ ಒಂದಿಷ್ಟು ಸಂಗತಿಗಳನ್ನು ನಿಮ್ಮ ಮುಂದಿಡುತ್ತೇನೆ. ನೆನಪಿಡಿ, ಇದು  ವಿಮರ್ಶೆಯಲ್ಲ. ಪುಸ್ತಕದ ಕುರಿತು ಟಿಪ್ಪಣಿ ಎಂದುಕೊಳ್ಳಬಹುದು.

ಪುಸ್ತಕದ ಹೆಸರು: ಲೀ ಕುನ್ ಕ್ಸಿನ್ ಆತ್ಮಕತೆ, ಮಾವೋನ ಕೊನೆಯ ನರ್ತಕ

ಅನುವಾದ: ಜಯಶ್ರೀಭಟ್

ಅನುವಾದದ ಗುಣಮಟ್ಟ: ಅತ್ಯುತ್ತಮ

ಮೊದಲ ಮುದ್ರಣ: 2012

ಓದಿದ ರೀತಿ: ನರ್ತಕಿಯರ ಬಗ್ಗೆ ಗೊತ್ತು. ಆದರೆ, …. ನರ್ತಕ ಎಂಬ ಹೆಸರಿನ  ಪುಸ್ತಕವೊಂದು ಸ್ನೇಹ ಬುಕ್ ಹೌಸ್ ನಲ್ಲಿ ಕಂಡಾಗ ತಕ್ಷಣ ಕೈಗೆತ್ತಿಕೊಂಡೆ. ಇತ್ತೀಚೆಗೆ ಪುಸ್ತಕಗಳನ್ನು ಓದುವ ಶೈಲಿ ಕಾಲೇಜು ದಿನಗಳಂತೆ ಇಲ್ಲ. ಮೊದಲು ಒಂದು ಪುಸ್ತಕವನ್ನು ಕೈಗೆತ್ತಿಕೊಂಡರೆ ಇಹದ ಪರಿ ಮರೆತು ಒಂದೇ ಉಸಿರಲ್ಲಿ ಪುಸ್ತಕ ಮುಗಿಸುವವರೆಗೆ ಓದುತ್ತಿದ್ದೆ. ಆದರೆ, ಈಗ ಒಂದು ಪುಸ್ತಕ ಓದಬೇಕಾದರೆ ಹಲವು ಸಣ್ಣ ಮತ್ತು ದೊಡ್ಡ ಬ್ರೇಕ್ ಗಳು ಬೇಕು. ಆದರೆ, ಇತ್ತೀಚಿಗೆ ಒಂದೇ ಉಸಿರಿಗೆ ಓದಿದ ಪುಸ್ತಕ “ಮಾವೋನ ಕೊನೆಯ ನರ್ತಕ’.

ಇದ್ಯಾವುದೋ ಕಮ್ಯುನಿಸ್ಟ್ ಸಿದ್ಧಾಂತದ, ಎಡಪಂಥೀಯ ವಿಚಾರದಾರೆಯ ಪುಸ್ತಕವೆಂಬ ಭಾವ ಪುಸ್ತಕದ ಶೀರ್ಷಿಕೆ ನೋಡಿದಾಗ ಅನಿಸಬಹುದು. ವಿಶೇಷವೆಂದರೆ ಈ ಪುಸ್ತಕದಲ್ಲಿ ಯಾವುದೇ ವಿಚಾರ ಧಾರೆಯ ಭಾರವಿಲ್ಲ. ಒಬ್ಬ ಬಡ ಕುಟುಂಬದಲ್ಲಿ ಬೆಳೆದ ಹುಡುಗನೊಬ್ಬ ತನ್ನ ಪ್ರತಿಭೆ, ಪ್ರಯತ್ನದ ಮೂಲಕ ಆಧುನಿಕ ಜಗತ್ತಿಗೆ ಪ್ರವೇಶಿಸುತ್ತಾನೆ. ತನ್ನ ಬಡತನ, ಕುಟುಂಬದ ಕಷ್ಟನಷ್ಟಗಳಿಂದ, ಚೀನಾದ ಕಮ್ಯುನಿಸ್ಟ್ ಹಿಡಿತದಿಂದ ಪಾರಾಗಲು ನೃತ್ಯಾಭ್ಯಾಸ ಮಾಡುತ್ತಾನೆ.

ಈ ಕತೆ ಚೀನಾದಲ್ಲಿ ಆರಂಭಗೊಂಡರೂ ನಮ್ಮ ಯಾವುದೋ ಊರಿನಲ್ಲಿ ಯಾವುದೋ ಕಾಲದಲ್ಲಿ ನಡೆದಂತೆ ಭಾಸವಾಗುತ್ತದೆ.

ತೆ ಆರಂಭವಾಗುವುದು ಲೀ ಕುನ್ ಕ್ಸಿನ್ ನ ತಂದೆತಾಯಿಯ ಪರಿಚಯದಿಂದ. ಬಡತನದಲ್ಲಿಯೂ ಸ್ವಾಭಿಮಾನದ ಹೆಣ್ಣು ಲೀ ಅವರ ತಾಯಿ. ಆ ತಾಯಿಯ ವಾತ್ಸಲ್ಯವನ್ನು ಓದಿದಾಗ ಜಗತ್ತಿನ ಎಲ್ಲೆಡೆಯೂ ಅಮ್ಮನ ವಾತ್ಸಲ್ಯ ಒಂದೇ ರೀತಿ ಇರುತ್ತದೆ ಎಂದೆನಿಸುತ್ತದೆ. ಜೊತೆಗೆ, ಹೆಚ್ಚು ಮಾತನಾಡದ, ಕಠಿಣ ಪರಿಶ್ರಮಿ ಅಪ್ಪನೂ ನಮ್ಮ ಸುತ್ತಮುತ್ತ ಇರುವ ಪಾತ್ರಗಳಂತೆಯೇ ಕಾಣಿಸುತ್ತದೆ.

ಬಡತನದಲ್ಲಿ ಅಮ್ಮ, ಅಜ್ಜಿ, ಅಪ್ಪನ ಪ್ರೀತಿಯಲ್ಲಿ, ಸಹೋದರರ ಒಡನಾಟದಲ್ಲಿ ಲೀ ಬೆಳೆಯುವ ಬಾಲ್ಯದ ಕತೆಗಳು ನಮಗೂ ನಮ್ಮ ಬಾಲ್ಯವನ್ನು ನೆನಪಿಸಬಹುದು.
ಚೀನಾದಲ್ಲಿ ಆಗ ಮಾವೋನ ಹಿಡಿತ ಜೋರಾಗಿತ್ತು. ಮಕ್ಕಳಿಗೆ ಶಾಲೆಯಲ್ಲಿಯೂ “ಮಾವೋನೇ ನಮ್ಮ ದೇವರು’ ಎಂಬಂತಹ ಪಾಠಗಳನ್ನು ಓದಿಸಲಾಗುತ್ತಿತ್ತು. ವಿರೋಧಿಗಳನ್ನು ಮಾವೋನ ಕಡೆಯವರು “ಕಾಣೆ”ಯಾಗಿಸುತ್ತಿದ್ದರು. ಲೀ ಅನುಭವವನ್ನೇ ಹೇಳುವುದಾದರೆ, “ಒಮ್ಮೆಯಂತೂ ನಾವು ಚಿಕ್ಕ ಹುಡುಗರು ಒಂದು ಮೆರವಣಿಗೆಯನ್ನು ಹಿಂಬಾಲಿಸುತ್ತ ಹೋದೆವು. ಸುಮಾರು ಹದಿನೈದು ಭೂಮಾಲಿಕರು, ಕಾರ್ಖಾನೆ ಮಾಲಿಕರು, ಕಮ್ಯುನಿಸ್ಟ್ ವಿರೋಧಿಗಳ ದೊಡ್ಡ ಗುಂಪನ್ನು ಕುರಿಮಂದೆಯಂತೆ ಕರೆದುಕೊಂಡು ಹೋಗಿ, ಮೈದಾನದಲ್ಲಿ ನಿಲ್ಲಿಸಿ ತಮ್ಮ ತಪ್ಪಿನ ವರದಿಯನ್ನು ಒಪ್ಪಿಸಿದರು. ನಂತರ ಅವರನ್ನೆಲ್ಲ ಲಾರಿಯಲ್ಲಿ ಹಾಕಿಕೊಂಡು ಹತ್ತಿರದ ಹೊಲಕ್ಕೆ ಕರೆದೊಯ್ಯಲಾಯಿತು. ನಾವು ಗುಂಪಿನಲ್ಲಿ ನುಸುಳಿ ಅಲ್ಲಿ ಏನು ನಡೆಯುತ್ತದೆ ಎಂದು ನೋಡಿದೆವು. ಮಣ್ಣಿನ ಗೋಡೆಗೆ ಮುಖಮಾಡಿ ನಿಂತಿದ್ದ ಅವರನ್ನೆಲ್ಲ ಒಂದೇ ಸಲಕ್ಕೆ ಗುಂಡಿನ ಮಳೆ ಸುರಿದು ಸುಟ್ಟು ಹಾಕಲಾಯಿತು”.

ಇಂತಹ ವಾತಾವರಣದಲ್ಲಿ ಬೆಳೆಯುತ್ತಿದ್ದ ಲೀಗೆ ಮಾವೋ ಎಂದರೆ ಯಾವುದೋ ಅದ್ಭುತ ಎಂಬ ಭಾವ ಮೂಡಿತ್ತು. ಆದರೆ,  ಬೀಜಿಂಗ್ ನ ಬ್ಯಾಲೆ ಅಕಾಡೆಮಿಗೆ ಸೇರಿದ ಬಳಿಕ ಮಾವೋನ ಕುರಿತು, ಸಿದ್ಧಾಂತಗಳ ಕುರಿತು ಇದ್ದ ಎಲ್ಲಾ ಭಾವನೆ ಬದಲಾಗುತ್ತದೆ.

ಲೀಯು ಮಾವೋನ ಕೊನೆಯ ನರ್ತಕನಾಗುವುದು ಒಂದು ಸಾಹಸಿ ಪ್ರಯಾಣ. ಕೊನೆಯವರೆಗೂ ಆಸಕ್ತಿಯಿಂದ ಓದಬಹುದಾದ, ಹೃದಯ ತಟ್ಟುವಂತಹ ಕಥಾನಕ ಇದಾಗಿದೆ. ಹೀಗಾಗಿ ಸಮಯ ಸಿಕ್ಕರೆ ಈ ಪುಸ್ತಕ ಖರೀದಿಸಿ ಓದಿರಿ.

ಬೆನ್ನುಡಿ: ಚೀನಾದ ಸಾಂಸ್ಕೃತಿಕ ಕ್ರಾಂತಿ ತಾರಕದಲ್ಲಿದ್ದ ಕಾಲದಲ್ಲಿ ಅಲ್ಲಿನ ಕಡು ಬಡ ಹಳ್ಳಿಯೊಂದರಲ್ಲಿ ಬೆಳೆಯುತ್ತಿದ್ದ ಹುಡುಗ ಈ ಕುನ್ ಕ್ಸಿನ್. ಅವನ ಬಾಲ್ಯ ತನ್ನ ಸಮುದಾಯ, ಕುಟುಂಬ ಮತ್ತು ಮಾವೋನ ಕೆಂಪು ಪುಸ್ತಕದ ಸುತ್ತವೇ ಗಿರಕಿ ಹೊಡೆಯುತ್ತಿತ್ತು. ಬೀಜಿಂಗ್ ನ ಬ್ಯಾಲೆ ಅಕಾಡೆಮಿಗೆ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಬಂದ ಮೇಡಂ ಮಾವೋರ ಸಾಂಸ್ಕೃತಿಕ ರಾಯಭಾರಿಗಳ ಕೈಗೆ ಸಿಲುಕುವ ಲೀ ಪೂರ್ತಿ ಅಪರಿಚಿತವಾದ ಪ್ರಪಂಚವೊಂದಕ್ಕೆ ನೂಕಲ್ಪಟ್ಟ. ದೈರ್ಯ ಮತ್ತು ದೃಢಸಂಕಲ್ಪಗಳಿಂದ ಮುಂದೆ ಸಾಗಿದ ಅವನಿಗೆ ಈ ಹೊಸ ದಾರಿಯೂ ಚೀನಾದ ಎಲ್ಲೆಯ ಆಚೆಗಿನ ಬದುಕು ಮತ್ತು ಪ್ರೀತಿಯನ್ನು ತೆರೆದು ತೋರಿಸಿತು. ಪಟ್ಟು ಬಿಡದೆ ಸಾಧನೆ ಮಾಡಿ ಮಾವೋನ ಕೊನೆಯ ನರ್ತಕನಾದ ಲೀ ತನ್ನ ಅಸಾಧಾರಣ ಹಾಗೂ ಸ್ಪೂರ್ತಿದಾಯಕ ಕಥಾನಕವನ್ನು ಇಲ್ಲಿ ತಮ್ಮದೇ ಅನನ್ಯ ಧ್ವನಿಯಲ್ಲಿ ಹೇಳಿದ್ದಾರೆ.

ನೀವು ಓದಿರುವ ಪುಸ್ತಕದ ವಿಮರ್ಶೆಯನ್ನು [email protected] ಗೆ ಇಮೇಲ್ ಮಾಡಿದರೆ ಕರ್ನಾಟಕ ಬೆಸ್ಟ್.ಕಾಂನಲ್ಲಿ ಪ್ರಕಟಿಸಲಾಗುವುದು.

Leave a Reply

Your email address will not be published. Required fields are marked *