ಕವಿತೆ: ನಾನು ನಾನಾಗಿದ್ದು ಯಾವಾಗ…?

ನೀನು ನೀನಾಗಿದ್ದು ಯಾವಾಗ?

ಕೇಳಿತು ಮನಸ್ಸು ಕುಟುಕುತ್ತಲೇ

ಗೊತ್ತೇ ಇಲ್ಲ ನನಗೆ  ನಾನು ಯಾವಾಗ ನಾನಾಗಿದ್ದೆ…?

ಮರೆತೇ ಹೋಗಿದ್ದೇ  ನನ್ನ ನಾ..

ಮಿತಿಯಿಲ್ಲದ ಸಂಬಂಧಗಳ ಸುಳಿಯೊಳಗೆ

ಮುಚ್ಚಿದ  ಕೋಣೆಯ ಬಾಗಿಲೊಳಗೆ!

***

ತಂದ ಬಂಗಾರ ಕಡಿಮೆ ಎಂದು ಮೂದಲಿಸಿದವರನ್ನು

ಚೆಂದವಿಲ್ಲವೆಂದು ಆಡಿಕೊಂಡವರನ್ನು

ಮಾತು ಮಾತಿಗೂ ಮುನಿಯುವ ಗಂಡನನ್ನು

ನನ್ನೊಳಗಿನ ಕನಸನ್ನು ಕೊಂದವರನ್ನು

ಮರೆವಿನ ಪಟ್ಟಿಗೆ ಸೇರಿಸಿ ನಗುವಿನ ಮುಖವಾಡ ಕಟ್ಟಿಕೊಂಡಿದ್ಯಾವಾಗ?

***

ಒಗ್ಗರಣೆ ಸೌಟಿನೊಳಗಿನ ಸಾಸಿವೆ ಪಟ್ಟೆಂದು ಸಿಡಿದಾಗ,

ಬಚ್ಚಲ ಒಲೆಗೆ ತುಂಬಿದ ತರಗಲೆ ಗಳ್ಳೆಂದು ಉರಿದಾಗ

ಏನನ್ನೋ ಕಳೆದುಕೊಂಡಿದ್ದೇನೆ ಎಂದು ತಳಮಳಿಸುತ್ತೇನೆ

ಸಿಡಿದು ಉರಿಯಬೇಕಿದ್ದ ಮನವನ್ನು ಹತ್ತಿಕ್ಕಿಕೊಂಡಿದ್ದಕ್ಕೆ

ಮಾತು- ನಗುವಿನ ಸ್ವಾತಂತ್ರ್ಯವನ್ನು ಗಿರವಿ ಇಟ್ಟಿದ್ದಕ್ಕೆ  ಮರಗುತ್ತೇನೆ

ಮತ್ತದೇ ಕುದಿವ ನೀರಿನ ಜತೆ ಬಿಸಿ ಕಣ್ಣೀರಿನ ಅಭ್ಯಂಜನ ಮಾಡಿ ಕಳಚಿಟ್ಟ

ಭಾವನೆಯ ಅಂಗಿಗಳನ್ನೆಲ್ಲಾ ತೊಟ್ಟು ಗರತಿಯಾಗುತ್ತೇನೆ

Leave a Reply

Your email address will not be published. Required fields are marked *