ಸುದ್ದಿಜಾಲ ಉದ್ಯೋಗ ಮಾರ್ಗದರ್ಶಿ
ಉದ್ಯೋಗಾನ್ವೇಷಣೆಯಲ್ಲಿರುವವರಿಗೆ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಉದ್ಯೋಗ ಪಡೆಯಲು ಇಂಟರ್‍ನೆಟ್ ನೆರವಾಗಿದೆ.
ವಿವಿಧ ಉದ್ಯೋಗ ತಾಣಗಳ ಮೂಲಕ ಪ್ರೊಫೈಲ್ ರಚಿಸಿ ಕೆಲವೇ ನಿಮಿಷದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಅದ್ಭುತ ಇಂಟರ್‍ನೆಟ್ ಜಗತ್ತಿನಲ್ಲಿ ವಂಚಕರು ಸಹ ಬಕಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಇದೇ ಕಾರಣಕ್ಕೆ ಇಂದು ಆನ್‍ಲೈನ್ ಮೂಲಕ ಯಾವುದಾದರೂ ಉದ್ಯೋಗದ ಆಫರ್ ಬಂದಾಗ ಅದು ನಿಜವೋ, ಸುಳ್ಳೋ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಫೇಕ್ ಉದ್ಯೋಗದ ಆಫರ್ ಅನ್ನು ಪತ್ತೆಹಚ್ಚಲು ಇಲ್ಲೊಂದಿಷ್ಟು ದಾರಿಗಳಿವೆ.

- ಸಾಮಾನ್ಯವಾಗಿ ವಂಚಕ ಜಾಬ್ ಇಮೇಲ್‍ಗಳು ಉದ್ಯೋಗ, ಹುದ್ದೆ, ಕಂಪನಿ ಮತ್ತು ಪ್ಯಾಕೇಜ್ ಕುರಿತು ವಿವರವಾದ ಮಾಹಿತಿಯನ್ನು ಒದಗಿಸುವುದಿಲ್ಲ. ನಿಮಗೆ ಉದ್ಯೋಗದ ಆಫರ್ ನೀಡಿದ ಇಮೇಲ್‍ನಲ್ಲಿ ಅಸ್ಪಷ್ಟ, ಖಚಿತತೆ ಇಲ್ಲದ ಮಾಹಿತಿ ಇದ್ದರೆ ಅದನ್ನು ಫೇಕ್ ಎಂದೇ ತಿಳಿಯಿರಿ.

- ಎಲ್ಲಾದರೂ ನಿಮ್ಮಲ್ಲಿ ಹಣ ಕೇಳಿದರೆ ಅದು ಖಂಡಿತವಾಗಿಯೂ ಫೇಕ್ ಜಾಬ್. ಯಾಕೆಂದರೆ, ಯಾವುದೇ ಪ್ರತಿಷ್ಠಿತ ಕಂಪನಿಯೂ ಬಾಂಡ್ಅಥವಾ ಸೆಕ್ಯುರಿಟಿ ಡೆಪಾಸಿಟ್ ಹೆಸರಿನಲ್ಲಿ ಹಣ ಕೇಳುವುದಿಲ್ಲ. ಉದ್ಯೋಗದ ಆಸೆಗಾಗಿ ಅಪರಿಚಿತ ಖಾತೆಗಳಿಗೆ ಹಣ ಹಾಕಲು ಹೋಗಬೇಡಿ.

- ಫೇಕ್ ಉದ್ಯೋಗದ ಆಫರ್ ಜೊತೆಗೆ ನಿಮ್ಮೊಂದಿಗೆ ಹಂಚಿಕೊಂಡ ಮಾಹಿತಿಗಳಲ್ಲಿ ಕಂಪನಿಯ ಉನ್ನತ ಮಟ್ಟದ ವ್ಯಕ್ತಿಗಳ ಮಾಹಿತಿಯೂ
ಇರುತ್ತದೆ. ಯಾವುದೇ ನಿಜವಾದ ಕಂಪನಿಯು ಉದ್ಯೋಗದ ಆಫರ್ ನೀಡುವಾಗ ಇಂತಹ ಮಾಹಿತಿಗಳನ್ನು ಹಂಚಿಕೊಳ್ಳಲು ಹೋಗುವುದಿಲ್ಲ.
- ಸಾಮಾನ್ಯವಾಗಿ ಫೇಕ್ ಉದ್ಯೋಗದ ಆಫರ್‍ಗಳು ನಿಮ್ಮ ಇಮೇಲ್‍ನ ಸ್ಪ್ಯಾಮ್ ಫೋಲ್ಡರ್‌ನಲ್ಲಿ ಇರುತ್ತವೆ. ಇಂತಹ ವಂಚಕರು ಬಲ್ಕ್ಅಥವಾ ಒಂದೇ ಬಾರಿಗೆ ಸಾವಿರಾರು ಜನರಿಗೆ ಇಮೇಲ್ ಕಳುಹಿಸಿರುತ್ತವೆ. ಸಹಜವಾಗಿ ಇವು ಸ್ಪ್ಯಾಮ್ ಫೋಲ್ಡರ್‌ಗೆ ಹೋಗುತ್ತವೆ. ಸಾಕಷ್ಟು ಜನರು ಈಗಾಗಲೇ ಈ ಇಮೇಲ್ ಅನ್ನು ಸ್ಪ್ಯಾಮ್ ಲಿಸ್ಟ್‌ಗೆ ಸೇರಿಸಿರುತ್ತಾರೆ.
- ನಿಜವಾದ ಉದ್ಯೋಗದಾತರು ತಮ್ಮ ಕಂಪನಿಯ ಹೆಸರಿನ ಇಮೇಲ್‍ನಲ್ಲಿ ಉದ್ಯೋಗದ ಆಫರ್ ಅನ್ನು ಕಳುಹಿಸುತ್ತಾರೆ. ಆದರೆ, ಹೆಚ್ಚಿನ ಫೇಕ್ ಇಮೇಲ್‍ನಲ್ಲಿ ಜಿಮೇಲ್, ಯಾಹೂ, ಹಾಟ್‍ಮೇಲ್ ಹೆಸರು ಇರುತ್ತದೆ. ಕೆಲವು ಚಾಣಾಕ್ಷ್ಯ ವಂಚಕರು ಯಾವುದಾದರೂ ಕಂಪನಿಯ ಹೆಸರನ್ನು ಹೋಲುವ ಇಮೇಲ್ ಹೆಸರಿನಲ್ಲಿಯೇ ಇಮೇಲ್ ಕಳುಹಿಸಬಹುದು. ಈ ಕುರಿತೂ ಎಚ್ಚರವಹಿಸಿ.

- ಫೇಕ್ ಜಾಬ್ ಲೆಟರ್‌ನ ಕೆಳಗೆ ನೀಡಿರುವ ಆಫೀಸ್ ವಿಳಾಸವು ತಪ್ಪಾಗಿರಬಹುದು. ನಿಜವಾದ ಕಂಪನಿಯ ವಿಳಾಸವನ್ನು ಇಂಟರ್‍ನೆಟ್‍ನಲ್ಲಿ ಹುಡುಕಿ ಮತ್ತು ಇಮೇಲ್‍ನಲ್ಲಿರುವ ವಿಳಾಸದ ಜೊತೆಗೆ ಹೋಲಿಕೆ ಮಾಡಿನೋಡಿ.
- ನಿಮಗೆ ಉದ್ಯೋಗದ ಆಫರ್ ಇಮೇಲ್‍ನಲ್ಲಿ ಸಾಕಷ್ಟು ವ್ಯಾಕರಣ, ಕಾಗುಣಿತ ತಪ್ಪುಗಳು ಇರಬಹುದು. ಇದು ವೃತ್ತಿಪರರು ಕಳುಹಿಸಿದ ಇಮೇಲ್ ಅಲ್ಲವೆಂದು ತಿಳಿಯಿರಿ. ಜೊತೆಗೆ, ನಿಮಗೆ ಉದ್ಯೋಗದ ಆಫರ್ ನೀಡಿ ಕರೆ ಮಾಡಿದವರ ಭಾಷೆಯೂ ವೃತ್ತಿಪರವಾಗಿರದೆ ಇದ್ದರೆಅದು ಫೇಕ್ ಎಂದು ತಿಳಿಯಿರಿ.
- ನಿಮಗೆ ಕರೆ ಮಾಡಿದವರು ನಿಮ್ಮ ಜನ್ಮದಿನಾಂಕ, ಸೋಷಿಯಲ್ ಸೆಕ್ಯುರಿಟಿ ಸಂಖ್ಯೆ ಅಥವಾ ಇತರೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ಅದು ಫೇಕ್ ಉದ್ಯೋಗವೆಂದು ತಿಳಿಯಿರಿ. ನಿಜವಾದ ಕಂಪನಿಗಳು ಇಂತಹ ಮಾಹಿತಿಗಳನ್ನು ಕೇಳುವುದು ಅಪರೂಪ. ಉದ್ಯೋಗದ ಆಫರ್ ನೀಡುವ ಮೊದಲು ಅಂತು ಕೇಳುವುದಿಲ್ಲ. ನಿಮ್ಮನ್ನು ಶಾರ್ಟ್‍ಲಿಸ್ಟ್ ಮಾಡಿದ ಬಳಿಕ ಹಿನ್ನೆಲೆ ಪರಿಶೀಲನೆ ಉದ್ದೇಶಕ್ಕಾಗಿ ಈ ಮಾಹಿತಿಗಳನ್ನು ನಿಜವಾದ ಕಂಪನಿಗಳು ಕೇಳಬಹುದು.
ಸುರಕ್ಷಿತವಾಗಿ ಇರಲು, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮೊದಲು ಕಂಪನಿಯ ಕುರಿತು ಕೊಂಚ ರಿಸರ್ಚ್ ಮಾಡಿ. ಕಂಪನಿಯ ಕರಿಯರ್ ಪುಟದಲ್ಲಿ ಓಪನಿಂಗ್ ಇದೆಯೇ ಪರಿಶೀಲಿಸಿ. ಕಂಪನಿಯ ವೆಬ್‍ಸೈಟ್‍ನಲ್ಲಿ ನೀಡಲಾದ ಸಂಪರ್ಕ ಮಾಹಿತಿಗೂ ನಿಮಗೆ ಬಂದಿರುವ ಸಂಪರ್ಕ ಮಾಹಿತಿಗೂ (ಇಮೇಲ್ ವಿಳಾಸ ಇತ್ಯಾದಿ) ಯಾವುದಾದರೂ ಹೋಲಿಕೆ ಇದೆಯೇ ತಿಳಿದುಕೊಳ್ಳಿ.