ಹೊಸ ಮನೆಗೆ ಪ್ರವೇಶ ಮಾಡಿದ ಬಳಿಕ ಬೆಡ್‍ರೂಂನಲ್ಲಿ ಯಾವ ದಿಕ್ಕಿಗೆ ಬೆಡ್ ಜೋಡಿಸಬೇಕು? ಯಾವ ದಿಕ್ಕಿಗೆ ತಲೆಯಿಟ್ಟು ನಿದ್ದೆ ಮಾಡಬೇಕು? ಇತ್ಯಾದಿ ಗೊಂದಲಗಳು ಬಹುತೇಕರಲ್ಲಿ ಇರುತ್ತದೆ. ಸ್ಥಳಾವಕಾಶ ನೋಡಿಕೊಂಡು ಬೇಕಾಬಿಟ್ಟಿ ಬೆಡ್ ಜೋಡಿಸಿ ಮಲಗುವುದಕ್ಕಿಂತ ವಾಸ್ತುಪ್ರಕಾರ ಬೆಡ್ ಇಟ್ಟು, ಸರಿಯಾದ ದಿಕ್ಕಿಗೆ ತಲೆಯಿಟ್ಟು ಮಲಗುವುದು ಶ್ರೇಯಸ್ಕರ ಎಂದು ವಾಸ್ತುಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಳಗ್ಗೆ ಎದ್ದು ಉಲ್ಲಾಸದಿಂದ ದಿನವನ್ನು ಆರಂಭಿಸಬೇಕಾದರೆ ರಾತ್ರಿಯ ನಿದ್ದೆ ಚೆನ್ನಾಗಿರಬೇಕು. ರಾತ್ರಿ ನಿದ್ರಾ ಹೀನತೆಯಿಂದ ಬಳಲುವವರು ತಮ್ಮ ಆರೋಗ್ಯದ ಸಮಸ್ಯೆ, ತಮ್ಮ ಕೆಲಸ ಕಾರ್ಯಗಳ ರೀತಿಯ ಜೊತೆಗೆ ಮಲಗುವ ದಿಕ್ಕಿನ ಕುರಿತೂ ಗಮನ ನೀಡಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿ, ಸರಿಯಾದ ದಿಕ್ಕಿನಲ್ಲಿ ಮಲಗಲು ನಮ್ಮ ಪುರಾತನ ವಾಸ್ತ್ರು ಶಾಸ್ತ್ರ ಸೂಚಿಸುತ್ತದೆ.

ಮೊದಲನೆಯದಾಗಿ ನಮ್ಮ ಆರೋಗ್ಯದ ಮೇಲೆ ಕಾಂತೀಯ ಮತ್ತು ವಿದ್ಯುತ್ಕಾಂತೀಯ ಶಕ್ತಿಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳಬೇಕು. ಭೂಮಿ ಮತ್ತು ಮಾನವ ದೇಹ ಎರಡೂ ಕಾಂತೀಯ ದ್ರುವಗಳನ್ನು ಹೊಂದಿವೆ. ನಮ್ಮ ಗ್ರಹವು ಉತ್ತರದಿಂದ ದಕ್ಷಿಣಕ್ಕೆ ಕಾಂತೀಯ ಧ್ರುವಗಳನ್ನು ಹೊಂದಿವೆ. ಉತ್ತರದಲ್ಲಿ ಧನಾತ್ಮಕ ಮತ್ತು ದಕ್ಷಿಣದಲ್ಲಿ ಋಣಾತ್ಮಕ ಧ್ರುವಗಗಳಿವೆ. ಭೂಮಿಯ ಕಾಂತೀಯ ಸೆಳೆತದಿಂದಾಗಿ ಉತ್ತರದಂತಹ ಕೆಲವು ದಿಕ್ಕುಗಳ ಕಡೆಗೆ ಮಲಗುವುದು ಸೂಕ್ತವಲ್ಲ.
ವಾಸ್ತುಶಾಸ್ತ್ರದ ಪ್ರಕಾರ ನೀವು ಉತ್ತರ ಗೋಳಾರ್ಧದಲ್ಲಿದ್ದರೆ ಪೂರ್ವ ಮತ್ತು ದಕ್ಷಿಣ ದಿಕ್ಕಿನಲ್ಲಿ ಮಲಗುವುದು ಉತ್ತಮ. ಉತ್ತಮ ಶಕ್ತಿಯ ಹರಿವಿಗೆ ಮತ್ತು ಗುಣಮಟ್ಟದ ನಿದ್ದೆಗಾಗಿ ಸರಿಯಾದ ರೀತಿಯಲ್ಲಿ ಬೆಡ್ ಜೋಡಿಸುವುದೂ ಅಗತ್ಯವಾಗಿದೆ.
ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗುವುದು ಅತ್ಯುತ್ತಮ ಯಾಕೆ?

ಪೂರ್ವದಲ್ಲಿ ಸೂರ್ಯನು ಉದಯಿಸುತ್ತಾನೆ. ಈ ದಿಕ್ಕು ನಿದ್ದೆಗೆ ಮಾತ್ರವಲ್ಲದೆ ಧ್ಯಾನ ಮತ್ತು ಇತರೆ ಆಧ್ಯಾತ್ಮಿಕ ಚಟುವಟಿಕೆಗಳಿಗೂ ಉತ್ತಮ ಎಂದು ನಂಬಲಾಗಿದೆ. ತಲೆಯನ್ನು ಪೂರ್ವ ದಿಕ್ಕಿಗೆ, ಕಾಲನ್ನು ಪಶ್ಚಿಮದ ದಿಕ್ಕಿಗಿಟ್ಟು ಮಲಗುವುದರಿಂದ ಉತ್ತಮ ನಿದ್ದೆ ಬರುತ್ತದೆ. ಇದು ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಿಕೊಳ್ಳಲೂ ಪೂರಕ. ಹೀಗಾಗಿ, ವಿದ್ಯಾರ್ಥಿಗಳು ಈ ದಿಕ್ಕಿನಲ್ಲಿ ಮಲಗುವುದನ್ನು ತಪ್ಪಿಸಿಕೊಳ್ಳಲೇಬಾರದು. ಮಕ್ಕಳ ಕೋಣೆಯಲ್ಲಿ ಅವರ ಹಾಸಿಗೆಯನ್ನು ಪೂರ್ವ ದಿಕ್ಕಿಗೆ ಅಭಿಮುಖವಾಗಿ ಜೋಡಿಸಲು ಮರೆಯಬೇಡಿ.
ನಮ್ಮ ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ. ಈ ದಿಕ್ಕಿನಲ್ಲಿ ಹರಿಯುವ ಅಲೆಗಳು ಧನಾತ್ಮಕವಾಗಿರುತ್ತವೆ. ಆಯುರ್ವೇದಲ್ಲಿ ಹೇಳಿರುವ ಮೂರು ದೋಷಗಳಾದ ವಾತ,ಪಿತ್ತ ಮತ್ತು ಕಫ ದೋಷವನ್ನೂ ನಿವಾರಿಸುತ್ತದೆ.