ಎಫ್ ಡಿಎ ಅರ್ಹತಾ ಪಟ್ಟಿ ಅನುಮಾನಕ್ಕೆ ಕೆಪಿಎಸ್ ಸಿ ಸ್ಪಷ್ಟನೆ

By | 14/09/2021

ಕರ್ನಾಟಕ ಲೋಕಸೇವಾ ಆಯೋಗವು 2019-20 ನೇ ಸಾಲಿನ ಸಹಾಯಕರು/ ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 09-09-2021 ರಂದು ಅರ್ಹತಾ ಪಟ್ಟಿಯನ್ನು ಪ್ರಕಟಿಸಿತ್ತು. ಈ ಅರ್ಹತಾ ಪಟ್ಟಿಯಲ್ಲಿ ಒಂದೇ ಸಮುದಾಯದ (ಜಾತಿಯ) 70 ಅಭ್ಯರ್ಥಿಗಳ ಹೆಸರು ಇತ್ತು. ಈ ಕಾರಣ ಹಲವು ಅನುಮಾನಗಳು ಕೆಪಿಎಸ್ ಸಿ ಬಗ್ಗೆ ವ್ಯಕ್ತವಾಗಿದ್ದವು. ಇವರೆಲ್ಲ ಒಂದೇ ಕೇಂದ್ರದಲ್ಲಿ ಪರೀಕ್ಷೆಗಳನ್ನು ಬರೆದು ಪಾಸಾಗಿರುತ್ತಾರೆ. ಹಾಗೂ ನಕಲು ಮಾಡಿರುವ ಶಂಕೆ ಇದೆ ಎಂದು ಮಾಧ್ಯಮಗಳಲ್ಲಿ ಕನ್ನಡ ಸುದ್ದಿ ಪತ್ರಿಕೆಗಳಲ್ಲಿ ಅನುಮಾನ ವ್ಯಕ್ತಪಡಿಸಿ ವರದಿ ಮಾಡಲಾಗಿತ್ತು. ಇದಕ್ಕೆ ಸ್ಪಷ್ಟೀಕರಣ ಕೆಪಿಎಸ್ ಸಿಯು ನೀಡಿದೆ.

ಸುದ್ದಿ ಪತ್ರಿಕೆಗಳು ಮಾಡಿರುವ ಆರೋಪ, ಅನುಮಾನ‌ ಸತ್ಯಕ್ಕೆ ದೂರವಾದ ಹಾಗೂ ಆಧಾರ ರಹಿತವಾದ ಅಂಶಗಳಾಗಿವೆ ಎಂದು ಕೆಪಿಎಸ್ ಸಿ ಹೇಳಿದೆ.

ಅರ್ಹತೆ ಪಡೆದ ಒಂದೇ ಸಮುದಾಯದ 70 ಅಭ್ಯರ್ಥಿಗಳು ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದವರಲ್ಲ. ವಿವಿಧ ಜಿಲ್ಲೆಗಳ ವಿವಿಧ ಪರೀಕ್ಷಾ ಉಪ ಕೇಂದ್ರಗಳ ವಿವಿಧ ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ಬರೆದು, ನಿಯಮಾನುಸಾರ ವಿವಿಧ ಮೀಸಲಾತಿಯಡಿ ಅರ್ಹತಾ ಪಟ್ಟಿಯಲ್ಲಿ ಆಯ್ಕೆ ಹೊಂದಿದ್ದಾರೆ.

ಒಂದೇ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಇವರಾಗಿದ್ದು, ಒಂದೇ ಕೇಂದ್ರದಿಂದ ಪಾಸ್ ಆಗಿರುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ಆರೋಪ. ಅಲ್ಲದೇ ಪ್ರಸ್ತುತ ಪ್ರಕಟಿಸಿರುವ ಪಟ್ಟಿಯು ಕೇವಲ ಅರ್ಹತಾ ಪಟ್ಟಿಯಾಗಿದೆ. ನೋಂದಣಿ ಸಂಖ್ಯೆ ಆಧಾರದ ಮೇಲೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿರುತ್ತದೆಯೇ ಹೊರತು ಇದು ಜ್ಯೇಷ್ಠತಾ ಪಟ್ಟಿ ಆಗಿರುವುದಿಲ್ಲ ಎಂದು ಆಯೋಗ ತಿಳಿಸಿದೆ.

ಕೆಪಿಎಸ್ ಸಿ ಯು ಕಳೆದ ಫೆಬ್ರವರಿ ತಿಂಗಳಲ್ಲಿ ರಾಜ್ಯಾದ್ಯಂತ ಎಫ್ ಡಿಎ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು.‌ ಸುಮಾರು 2,49,175 ಅಭ್ಯರ್ಥಿಗಳು ಪರೀಕ್ಷೆಗಳನ್ನು ಬರೆದಿದ್ದರು, ಆಯೋಗವು ಅಧಿಸೂಚನೆಯಲ್ಲಿ ಅಧಿಸೂಚಿಸಿರುವ ಹುದ್ದೆಗಳಿಗೆ 1:3 ಅನುಪಾತದಲ್ಲಿ ಹಾಗೂ ಕೆಲವೊಂದು ವರ್ಗಗಳಿಗೆ ( ಅಂಗವಿಕಲ, ಯೋಜನಾ ನಿರಾಶ್ರಿತರು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ)1:5 ರ ಅನುಪಾತದಲ್ಲಿ ಅರ್ಹತಾ ಪಟ್ಟಿಯನ್ನು ಸೆಪ್ಟೆಂಬರ್ 09,2021 ರಂದು ಪ್ರಕಟಿಸಿತ್ತು.

Leave a Reply

Your email address will not be published. Required fields are marked *