ಹಾಗಲಕಾಯಿ ಕಿಸ್ಮುರಿ ಸವಿದಿದ್ದೀರಾ…?

By | August 23, 2018
Bisibele bath recipe kannada
Mobile Apps Category (English)234x60

* ಪವಿತ್ರಾ

ಹಾಗಲಕಾಯಿ ಎಂದರೆ ಮುಖ ಕಿವುಚುವವರೇ ಜಾಸ್ತಿ. ತಿನ್ನಲು ಕಾಯಿ ಆದರೂ ಇದಕ್ಕೆ ನಮ್ಮ ದೇಹಕ್ಕೆ ಮಾತ್ರ ಔಷಧಿ ಎಂದು ಹೇಳಬಹುದು. ಹಾಗಲಕಾಯಿ ಎಂದರೆ ಅದು ಮಧುಮೇಹಿಗಳಿಗೆ ಮಾತ್ರ ಸೇವಿಸಬಹುದು. ಉಳಿದವರು ತಿನ್ನಲು ಇದು ರುಚಿಕರವಲ್ಲ ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ಈ ಹಾಗಲಕಾಯಿಯಲ್ಲೂ ರುಚಿಕರವಾದ ಅಡುಗೆ ಮಾಡಬಹುದು. ಅಡುಗೆ ಮಾಡುವ ಕಲೆ ಗೊತ್ತಿದ್ದರೆ ಹಾಗಲಕಾಯಿಯಾದರೇನು? ಬೆಂಡೆಕಾಯಿಯಾದರೇನು. ಮಾಡುವ ಮನಸ್ಸು ಆರೋಗ್ಯದ ಕಾಳಜಿ ಇದ್ದರೆ ಹಾಗಲಕಾಯಿ ಕೂಡ ನಿಮ್ಮ ಅಚ್ಚುಮೆಚ್ಚಿನ ಖಾದ್ಯವಾಗುವುದರಲ್ಲಿ ಎರಡು ಮಾತಿಲ್ಲ.

ಹಾಗಲಕಾಯಿ ಗೊಜ್ಜು ಸಾಮಾನ್ಯವಾಗಿ ನೀವು ಸವಿದಿರುತ್ತೀರಿ ಇಲ್ಲಿ ನಾನು ಹಾಗಲ ಕಾಯಿ ಕಿಸ್ಮುರಿಯನ್ನು ಹೇಗೆ ಮಾಡಬಹುದು ಎಂಬುದರ ಕುರಿತು ಮಾಹಿತಿ ನೀಡಿದ್ದೇನೆ. ಒಮ್ಮೆ ನಿಮ್ಮ ಮನೆಯಲ್ಲಿ ತಯಾರಿಸಿ ನೋಡಿ. ರುಚಿಯ ಜತೆಗೆ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು.

ಅಂದ ಹಾಗೇ ಇದನ್ನು ಮಾಡುವುದುಕ್ಕೆ ಬೇಕಾಗಿರುವುದು ಇಷ್ಟೆ. ಸಣ್ಣಗೆ ಹಚ್ಚಿಕೊಂಡ ಹಾಗಲಕಾಯಿ 1 1/2 ಕಪ್, ಹಸಿಮೆಣಸಿನಕಾಯಿ-3 ಹದ ಗಾತ್ರದ್ದು. ಖಾರ ಕಡಿಮೆ ಬೇಕೆಂದರೆ ಎರಡೇ ಹಾಕಿ ಸಾಕು. ಹುಣಸೆ ಹಣ್ಣು-ಒಂದು ಚಿಕ್ಕ ಉಂಡೆಯಷ್ಟು. ತೆಂಗಿಕಾಯಿ ತುರಿ-ಕಾಲು ಕಪ್, 1/2 ಚಮಚ-ಮೆಣಸಿನ ಪುಡಿ,  ಚಿಟಿಕೆ ಯಷ್ಟು ಅರಿಶಿನ, 1 ಚಮಚದಷ್ಟು ಕೊತ್ತಂಬರಿಪುಡಿ, ½ ಚಮಚದಷ್ಟು ಜೀರಿಗೆ, ಸ್ವಲ್ಪ ಕೊತ್ತಂಬರಿಸೊಪ್ಪು ಸಣ್ಣಗೆ ಹಚ್ಚಿದ್ದು, ಎಣ್ಣೆ-3 ದೊಡ್ಡ ಚಮಚ, ಉಪ್ಪು-ರುಚಿಗೆ ತಕ್ಕಷ್ಟು.

ಮೊದಲಿಗೆ ಹಾಗಲಕಾಯಿ ಮೇಲಿನ ಸಿಪ್ಪೆಯನ್ನು ತೆಗೆಯಿರಿ. ನಂತರ ಇದನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಅರ್ಧಗಂಟೆ ಹಾಗೇ ಇಡಿ. ಆಮೇಲೆ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಅದಕ್ಕೆ ಚಿಕ್ಕದ್ದಾಗಿ ಕತ್ತರಿಸಿಕೊಂಡ ಹಾಗಲಕಾಯಿಯನ್ನು ಹಾಕಿ. ಹಾಕುವಾಗ ಅದರಲ್ಲಿರುವ ನೀರನ್ನು ಹಾಕಬೇಡಿ. ಉಪ್ಪು ಹಾಕಿರುವುದರಿಂದ ಹಾಗಲಕಾಯಿ ನೀರು ಬಿಟ್ಟಿರುತ್ತದೆ. ಎಣ್ಣೆಯಲ್ಲಿ ಹಾಗಲಕಾಯಿಯನ್ನು ಗರಿಗರಿಯಾಗಿ ಹುರಿದು ತೆಗೆಯಿರಿ. ಗ್ಯಾಸ್ ಅನ್ನು ಮೀಡಿಯಂ ಫ್ಲೇಮ್ ಅಲ್ಲಿ ಇಟ್ಟುಕೊಳ್ಳಿ.

ಒಂದು ಅಗಲವಾದ ಪಾತ್ರೆಗೆ ಕತ್ತರಿಸಿಟ್ಟುಕೊಂಡ ಹಸಿಮೆಣಸಿನಕಾಯಿ, ಮೆಣಸಿನ ಪುಡಿ, ಅರಿಸಿನ ಪುಡಿ, ಕೊತ್ತಂಬರಿ ಪುಡಿ, ಹುಣಸೇ ಹಣ್ಣಿನ ರಸ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಲ್ಲಿ ಚೆನ್ನಾಗಿ ಹಿಸುಕಿ. ನಂತರ ಅದಕ್ಕೆ ಹುರಿದಿಟ್ಟುಕೊಂಡ ಹಾಗಲಕಾಯಿ ಯನ್ನು ಸೇರಿಸಿದರೆ ಕಿಸ್ಮುರಿ ರೆಡಿ. ಊಟದ ಜತೆ ಇದನ್ನು ಸೇವಿಸಬಹುದು. ಇನ್ನೇನು ತಡ ಹಾಗಲಕಾಯಿಯ ಕಿಸ್ಮುರಿಯನ್ನು ಮನೆಯಲ್ಲಿ ಮಾಡಿನೋಡಿ.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 
ನಮ್ಮ ಇಮೇಲ್ ವಿಳಾಸ: bpchand@gmail.com