ಮುಗಿಯದ ಕಥೆ: ಶ್ರಾವಣಿ

ಹೊಸದಾಗಿ ಬಂದಿದ್ದಾಳೆ. ಹಾಗಂತ ಸರ್ ಹೇಳಿದಾಗ ಅನಾಸಕ್ತಿಯಿಂದಲೇ ತಲೆಮೇಲೆತ್ತಿ ನೋಡಿದೆ. ಕ್ಯೂಟ್ ಮುಖದ ಸಪೂರ ಸುಂದರಿ ನಿಂತಿದ್ದಳು. ನನ್ನನ್ನೇ ನೋಡುತ್ತಿದ್ದಳು. ಆರು ಸೆಕೆಂಡು ಕಾಲ ಕಣ್ಣುಗಳ ನೋಡುತ್ತಲೇ ಬಾಕಿಯಾದೆವು. ಹಾಗೆ ನಮ್ಮ ಫ್ಯಾಕ್ಟರಿಗೆ ಬಂದವತ್ತೇ ನನ್ನ ಹೃದಯಕ್ಕೆ ಬಲಗಾಲಿಟ್ಟು ಪ್ರವೇಶಿಸಿದವಳ ಹೆಸರು ಶ್ರಾವಣಿ.

ಪಟಪಟನೇ ಮಾತನಾಡುವುದನ್ನು ನೋಡುತ್ತಲೇ ನಾನು ಮೂಕನಾಗುತ್ತಿದ್ದೆ. ಕಣ್ಣರಳಿಸಿ ನೋಡಿ ನನ್ನ ಕಣ್ಣಲ್ಲಿ ಕನಸು ತುಂಬುತ್ತಿದ್ದಳು. ಅವಳಿಗೆ ನಮ್ಮ ಫ್ಯಾಕ್ಟರಿಯ ಯಂತ್ರಗಳ ಪರಿಚಯವಿರಲಿಲ್ಲ. ನನಗಂತೂ ಒಂದೆರಡು ವರ್ಷದ ನಂಟು. ಅವಳಿಗೆ ಹೇಳಿಕೊಡುತ್ತಲೇ ಇನ್ನಷ್ಟು ಹತ್ತಿರವಾದೆ.

ಸಂಜೆ ಕಾಫಿ ಅಂಗಡಿಲಿ, ಕ್ಯಾಂಟಿನಲ್ಲಿ, ಐಸ್ ಕ್ರೀಂ ಅಂಗಡಿಯಲ್ಲಿ, ಗೊಲ್ ಕಪ್ಪ ತಿನ್ನುತ್ತ ಇಡೀ ಜಗತ್ತಿನ ವಿಷಯವನ್ನೆಲ್ಲ ಮಾತನಾಡುತ್ತಿದ್ದೇವು, ಪ್ರೀತಿ ವಿಷಯವೊಂದನ್ನು ಬಿಟ್ಟು. ಅವಳು ಫ್ಯಾಕ್ಟರಿಗೆ ಬರದ ದಿನ ಬೇಜಾರಾಗುತ್ತಿತ್ತು. ನಾನೂ ಬರದಿದ್ರೂ, ಬೇಜಾರು ಅನ್ನುತ್ತಿದ್ದಳು.

ಪ್ರತಿ ಕೆಲಸವನ್ನೂ ಶೃದ್ಧೆಯಿಂದ ಮಾಡುತ್ತಿದ್ದಳು. ಯಂತ್ರ ಕೆಟ್ಟರೆ ನನ್ನಿಂದ ರಿಪೇರಿ ಮಾಡಿಸಿಕೊಳ್ಳುತ್ತಿದ್ದಳು. ಬಾಸ್ ಬೈದ್ರೆ ಮುಖ ಗಂಟಿಕ್ಕಿಕೊಂಡು ಕುಳಿತಿರುತ್ತಿದ್ದಳು. ಸತ್ ಬಿಡೋಣ ಎನಿಸುತ್ತೆ ಅಂತ ಕಣ್ಣೀರಾಗುತ್ತಿದ್ದಳು. ಉದ್ದ ಜಡೆಯನ್ನು ಸವರತ್ತ ಸಮಧಾನ ಮಾಡಬೇಕೆನಿಸುತ್ತಿತ್ತು. ಸಂಯಮ ಕಟ್ಟೆಯೊಡೆಯುತ್ತಿರಲಿಲ್ಲ.

ಕಾಲದ ಪಿಸ್ಟನ್‌ಗಳು ತಿರುಗುತ್ತಿದ್ದವು. ಮತ್ತೊಂದು ಫ್ಯಾಕ್ಟರಿಯಿಂದ ಅವಳಿಗೆ ಕರೆಬಂತು. ಮನಸಿಲ್ಲದ ಮನಸಿನಿಂದ ಅಲ್ಲಿಗೆ ಸೇರಿಕೊಂಡಳು. ಸೇರುವ ಮುನ್ನ ಸಾಕಷ್ಟು ಅತ್ತಳು. ನನ್ನನ್ನು ಮರೆತು ಬಿಡಬೇಡ ಎಂಬ ವಾಕ್ಯಗಳನ್ನು ಸಾವಿರ ಸಲ ಹೇಳಿಕೊಂಡೆವು. ಅವಳಿಲ್ಲದ ಫ್ಯಾಕ್ಟರಿ ಖಾಲಿ ಖಾಲಿ ಎನಿಸುತ್ತಿತ್ತು.

ಆಮೇಲೆ ಅವಳು ಅಪರೂಪಕ್ಕೊಮ್ಮೆ ಕರೆ ಮಾಡುತ್ತಿದ್ದಳು. ನಾನು ಕರೆ ಮಾಡಿದ್ರೆ ಅಪರೂಪವೆಂಬಂತೆ ರಿಸೀವ್ ಮಾಡುತ್ತಿದ್ದಳು. ಯಾಕೋ ಒಂದೀನ ನನ್ನ ಮನಸ್ಸು ಕೆಟ್ಟು ಹೋಗಿತ್ತು. ಅವಳು ಅಷ್ಟು ಕಾಡುತ್ತಿದ್ದಳು. ನಾನು ನಿನ್ನ ಪ್ರೀತಿಸುತ್ತಿದ್ದೇನೆ ಎಂಬ ಸುದ್ದಿಯನ್ನು ಅವಳಿಗೆ ತಲುಪಿಸಿದೆ.

ನಂತರ ಅವಳು ನನ್ನ ಡಿಸ್ ಕನೆಕ್ಟ್ ಮಾಡಿದಳು. ಪೂಫ್….!