ವಿದ್ಯಾರ್ಥಿಗಳೇ ಗಮನಿಸಿ : ಪಿಯುಸಿ ನಂತರ ಮುಂದೇನು? ವಿವಿಧ ಕೋರ್ಸ್ ಹಾಗೂ ಉದ್ಯೋಗಗಳ ಮಾಹಿತಿಯ ಸಂಕ್ಷಿಪ್ತ ವಿವರ ಇಲ್ಲಿದೆ

By | 08/12/2021

ವಿಜ್ಞಾನ ವಿಭಾಗ

ಡಿಪ್ಲೋಮಾ ಮತ್ತು ಇಂಜಿನಿಯರಿಂಗ್ : ವಿಜ್ಞಾನ ವಿಭಾಗದಲ್ಲಿ ಕಲಿತಿರುವ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಡಿಪ್ಲೋಮಾ ಮತ್ತು ಎಂಬಿಬಿಎಸ್. ಇವೆಲ್ಲದರ ಹೊರತಾಗಿ ಅನೇಕ ವಿಶಿಷ್ಟ ಬ್ರಾಂಚ್ ಗಳ ಆಯ್ಕೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಿದೆ.

ಡಿಪ್ಲೋಮಾದಲ್ಲಿ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಬೇಕರಿ ಮತ್ತು ಕನ್ಫೆಕ್ಷನರಿ, ಫುಡ್ ಪ್ರೊಡಕ್ಷನ್, ಫ್ಯಾಷನ್ ಡಿಸೈನ್, ಬಿಜಿನೆಸ್, ಹೋಟೆಲ್ ಮ್ಯಾನೇಜ್ಮೆಂಟ್ ಹಾಗೂ ಕಮರ್ಷಿಯಲ್ ಪ್ರಾಕ್ಟೀಸ್ ಆಯ್ಕೆಗಳಿವೆ.

ಇಂಜಿನಿಯರಿಂಗ್ ಮಾಡುವ ವಿದ್ಯಾರ್ಥಿಗಳಿಗೆ ಸಿವಿಲ್, ಮೆಕ್ಯಾನಿಕ್, ಎಲೆಕ್ಟ್ರಾನಿಕ್ ಆಂಡ್ ಕಮ್ಯೂನಿಕೇಶನ್, ಕಂಪ್ಯೂಟರ್ ಸೈನ್ಸ್, ಏರೋನಾಟಿಕಲ್, ಮರೈನ್, ಆಟೋ ಮೊಬೈಲ್, ಇನ್ಫಾಮೇಶನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಆಂಡ್ ಎಲೆಕ್ಟ್ರಿಕಲ್, ಕೆಮಿಕಲ್ ಇಂಜಿನಿಯರಿಂಗ್ ಅದರಲ್ಲಿ ಪ್ರಮುಖವಾದವು.

ನರ್ಸಿಂಗ್ ವೃತ್ತಿ : ಪಿಯುಸಿ ನಂತರ ನರ್ಸಿಂಗ್ ಪದವಿಗೆ ಬೇಡಿಕೆ ಇದೆ. ನರ್ಸಿಂಗ್ ಪದವಿ ಶಿಕ್ಷಣವನ್ನು ರಾಜ್ಯದ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ಜಿಲ್ಲಾಸ್ಪತ್ರೆಗಳಿಗೆ ಹೊಂದಿಕೊಂಡಿರುವ ಸರಕಾರಿ ನರ್ಸಿಂಗ್ ಶಾಲೆಗಳಲ್ಲಿ ನೀಡಲಾಗುತ್ತದೆ. ವೈದ್ಯಕೀಯ ಕಾಲೇಜುಗಳಿರುವ ಕಡೆಗಳಲ್ಲಿ ನರ್ಸಿಂಗ್ ಪದವಿ ಕೋರ್ಸ್ ಗಳನ್ನು ಆರಂಭಿಸಲಾಗಿರುತ್ತದೆ. ಜೊತೆಗೆ ಖಾಸಗಿ ಸಂಸ್ಥೆಗಳು, ಆಸ್ಪತ್ರೆಗಳಲ್ಲೂ ನರ್ಸಿಂಗ್ ಶಿಕ್ಷಣ ನೀಡುವ ಕಾಲೇಜುಗಳನ್ನು ತೆರೆಯಲಾಗಿರುತ್ತದೆ.

ವಾಯುಮಂಡಲ ಶಾಸ್ತ್ರಜ್ಞ ( ಮೆಟಿರೊಲಾಜಿಸ್ಟ್) : ಪಿಯುಸಿ ನಂತರ ಮೆಟಿರೊಲಾಜಿಯಲ್ಲಿ ಡಿಪ್ಲೋಮಾ ಅಥವಾ ಬಿಎಸ್ ಸಿ ( ಪಿಸಿಎಂ) ನಂತರ ಮೆಟಿರೊಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಈ ಹುದ್ದೆಗೆ ಅರ್ಹತೆ ಪಡೆಯುತ್ತಾರೆ. ಹವಾಮಾನ ವರದಿ ಸಂಸ್ಥೆಗಳು, ವಿಮಾನ ನಿಲ್ದಾಣ, ಬಂದರು, ರಾಜ್ಯ ಹಾಗೂ ಕೇಂದ್ರ ಸರಕಾರಿ ಸಂಸ್ಥೆಗಳಲ್ಲಿ, ಹವಾಮಾನ ಮುನ್ಸೂಚನಾ ಕೇಂದ್ರಗಳಲ್ಲಿ ಇಂಥ ಪರಿಣತರಿಗೆ ಉದ್ಯೋಗವಕಾಶ ಇದೆ.

ಅರಣ್ಯ ಸಂರಕ್ಷಣೆ ಅಧಿಕಾರಿ : ಪಿಯುಸಿ ವಿಜ್ಞಾನ ನಂತರ ಪದವಿಯಲ್ಲಿ ಅರಣ್ಯ ವಿಜ್ಞಾನ ಓದಿದವರು ಹಾಗೂ ಇಂಜಿನಿಯರಿಂಗ್ ಮಾಡಿದವರು ಎಸಿಎಫ್ ಹುದ್ದೆಗೆ ಅರ್ಹರು. ಇದು ಕೆಪಿಎಸ್ ಸಿ ಮೂಲಕ ನೇಮಕಾತಿ ಮಾಡಲಾಗುವಂಥದ್ದು. ಆದರೆ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರಣ್ಯ ಇಲಾಖೆ ನೇಮಕಾತಿ ಮಾಡಿಕೊಳ್ಳುತ್ತದೆ.

ಸಹಾಯಕ ದಂತ ತಂತ್ರಜ್ಞ : ಪಿಸಿಬಿಯವರು ದಂತ ಕಾಲೇಜುಗಳಲ್ಲಿ ವೈದ್ಯರಿಗೆ ಸಹಾಯಕರಾಗಬಹುದು. ಓರಲ್ ಹೈಜಿನ್ ನಲ್ಲಿ ಡಿಪ್ಲೋಮಾ/ ಸರ್ಟಿಫಿಕೇಟ್ ಕೋರ್ಸ್ ಮಾಡಿದವರು ಈ ಉದ್ಯೋಗಕ್ಕೆ ಅರ್ಹರು. ಖಾಸಗಿ ಮತ್ತು ಸರಕಾರಿ ದಂತ ವೈದ್ಯಕೀಯ ಆಸ್ಪತ್ರೆಗಳಲ್ಲಿ, ಚಿಕಿತ್ಸಾಲಯಗಳಲ್ಲಿ ತರಬೇತಿ ಪಡೆದವರಿಗೆ ಅವಕಾಶಗಳಿದೆ.

ಫಿಸಿಯೋಥೆರಪಿಸ್ಟ್ ಕೋರ್ಸ್ : ಪಿಯುಸಿ ( ಪಿಸಿಎಂಬಿ) ಇದರಲ್ಲಿ ತೇರ್ಗಡೆ ಹೊಂದಿದವರು ಬ್ಯಾಚುಲರ್ ಡಿಗ್ರಿಯಲ್ಲಿ ಫಿಸಿಯೊಥೆರಪಿಯಲ್ಲಿ 4 ವರ್ಷಗಳ ಅಧ್ಯಯನ ಮತ್ತು 6 ತಿಂಗಳ ಶಸ್ತ್ರಚಿಕಿತ್ಸೆ ತರಬೇತಿ ಪಡೆಯಬೇಕಾಗುತ್ತದೆ. ಈ ಕೋರ್ಸ್ ನಲ್ಲಿ ಕಾರ್ಡಿರೀ ಥೊರಾಸಿಕ್ ಡಿಸೀಸಸ್, ಜಿರಿಯಾಟ್ರಿಕ್ ಫಿಸಿಯೋಥೆರಪಿ, ಹ್ಯಾಂಡ್ ರಿಹ್ಯಾಬಿಲಿಟೇಷನ್ ಮುಂತಾದ ವಿಶೇಷ ಕೌಶಲಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.

ವೈದ್ಯಕೀಯ ದಾಖಲೆಗಳ ತಂತ್ರಜ್ಞ : ಪಿಯುಸಿ ವಿಜ್ಞಾನ ತೇರ್ಗಡೆಯಾದರೆ ಮೂರು ವರ್ಷದ ಬ್ಯಾಚುಲರ್ ಡಿಗ್ರಿ ಇನ್ ಹೆಲ್ತ್ ಇನ್ ಫಮೇಷನ್ ಅಡ್ಮಿನಿಸ್ಟ್ರೇಶನ್ ( ಬಿಎಸ್ಸಿ ಎಚ್ ಐ.ಎ) ಮಾಡಬಹುದು. ಈ ಪದವಿ ಪಡೆದವರಿಗೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಪ್ರಯೋಗಾಲಯಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಸಂಶೋಧನಾ ಕೇಂದ್ರಗಳಲ್ಲಿ ಉದ್ಯೋಗವಕಾಶ ದೊರೆಯಲು ಹೆಚ್ಚಿನ ಅವಕಾಶವಿದೆ.

ಮೆಡಿಕಲ್ ಇಮೇಜಿಂಗ್ ಟೆಕ್ನಿಶಿಯನ್ : ಪಿಯುಸಿ, ವಿಜ್ಞಾನ, ಬಳಿಕ ಬ್ಯಾಚುಲರ್ ಡಿಗ್ರಿ ಮಾಡಿ ನಂತರ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಪದವಿ ಅಥವಾ ಡಿಪ್ಲೋಮಾ/ ಸರ್ಟಿಫಿಕೇಟ್ ಕೋರ್ಸ್ ಇನ್ ಮೆಡಿಕಲ್ ಇಮೇಜಿಂಗ್ ಮಾಡಿರಬೇಕು. ಇದನ್ನು ಮಾಡಿದವರಿಗೆ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಲ್ಯಾಬ್ ಗಳಲ್ಲಿ ಉದ್ಯೋಗವಕಾಶ ಇರುತ್ತದೆ.

ಗಗನಸಖಿ : ಪಿಯುಸಿ ನಂತರ ಏರ್ ಹೋಸ್ಟೇಸ್ ತರಬೇತಿ ಅಥವಾ ಹೋಟೆಲ್ ಮ್ಯಾನೇಜ್ಮೆಂಟ್ / ಟೂರಿಸಮ್ಲಿ ಡಿಪ್ಲೋಮಾ ಮಾಡಿದವರು ಗಗನಸಖಿಯರಾಗಬಹುದು. ಈ ಶಿಕ್ಷಣದಲ್ಲಿ ಸಂವಹನ ಕೌಶಲ ಮತ್ತು ಆದರಾತಿಥ್ಯ ಸೇವಾ ಮನೋಭಾವ ಹೆಚ್ಚಾಗಿರಬೇಕು. ಈ ಶಿಕ್ಷಣ ಪಡೆದವರಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಏರ್ ಲೈನ್ಸ್ ಸಂಸ್ಥೆಗಳು ಹಾಗೂ ಐಷರಾಮಿ ಸಾರಿಗೆ ಹಾಗೂ ಸೇವಾ ಸಂಸ್ಥೆಗಳ ಬಸ್ ಮತ್ತು ರೈಲುಗಳಲ್ಲಿ ಉದ್ಯೋಗವಕಾಶ ವಿಫುಲವಾಗಿದೆ.

ದೃಷ್ಟಿ ಮಾಪನ ವೈದ್ಯಕೀಯ ತಂತ್ರಜ್ಞಾನ : ಪಿಯುಸಿ ವಿಜ್ಞಾನ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಮೂಲಕ ಬಿಎಸ್ ಸಿ ಆಪ್ಟೋಮೆಟ್ರಿ ಸೇರಿ ಈ ತಂತ್ರಜ್ಞರಾಗಬಹುದು. ಅಥವಾ ದೃಷ್ಟಿ ಮಾಪನದ ಡಿಪ್ಲೋಮಾ/ ಸರ್ಟಿಫಿಕೇಟ್ ಕೋರ್ಸ್ ಮಾಡಿ ತಂತ್ರಜ್ಞರಾಗಬಹುದು.

ಕಾಮರ್ಸ್ ವಿಭಾಗ :

ಕಾಸ್ಟ್ ಅಕೌಂಟೆಂಟ್ : ಪಿಯು ವಾಣಿಜ್ಯ ಮಾಡಿ ಬಿಕಾಂ ಸೇರಿದವರಿಗೆ ಸಿಎ ಆಕಾಂಕ್ಷಿಗಳಾಗಬಹುದು. ಇದೇ ರೀತಿಯ ಇನ್ನೊಂದು ವೃತ್ತಿಪರ ಸಾಧ್ಯತೆಯ ಅವಕಾಶ ನೀಡುತ್ತದೆ, ಕಾಸ್ಟ್ ಆಂಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ ಕೋರ್ಸ್. ದಿ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆ ಈ ಪರೀಕ್ಷೆಗಳನ್ನು ಮಾಡುತ್ತದೆ. ಸಿಎ ಪರೀಕ್ಷೆಯಂತೆಯೇ ಇಲ್ಲಿಯೂ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಕಮರ್ಷಿಯಲ್ ಪ್ರ್ಯಾಕ್ಟೀಸ್ ಕೋರ್ಸ್ : 2 ವರ್ಷಗಳ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಕೋರ್ಸ್ ( ಡಿಸಿಪಿ) ಸೇರಿಕೊಳ್ಳಬಹುದು. ಈ ಶಿಕ್ಷಣ ಪಡೆದವರು ಸಚಿವರ ಹಾಗೂ ಅಧಿಕಾರಿಗಳ ಆಪ್ತ ಕಾರ್ಯದರ್ಶಿ/ ಸಹಾಯಕರಾಗಬಹುದು. ನಂತರ ಉನ್ನತ ಹುದ್ದೆಗಳಿಗೂ ಪದೋನ್ನತಿ ಪಡೆಯುವುದಲ್ಲದೆ, ಉತ್ತಮ ವೇತನ ಭತ್ಯೆಗಳು ಲಭ್ಯವಾಗುತ್ತವೆ. ಸಾಫ್ಟ್‌ವೇರ್ ಇಂಜಿನಿಯರ್ ಗಳಷ್ಟೇ ಇದಕ್ಕೂ ಉತ್ತಮ ಭವಿಷ್ಯವಿದೆ.

ಲೆಕ್ಕ ಪರಿಶೋಧಕರು : ಪಿಯುಸಿ ನಂತರ ಸಿಎ ಫೌಂಡೇಶನ್, ಇಂಟರ್ ಹಾಗೂ ಸಿಎ ಫೈನಲ್ ಪಾಸ್ ಮಾಡಬೇಕು. ನಂತರ 5 ವರ್ಷಗಳ ಕಾಲ ಐಸಿಎಐ ಸಂಸ್ಥೆಯಲ್ಲಿ ತರಬೇತಿ ಪಡೆಯಬೇಕು. ಈ ಚಾರ್ಟರ್ಡ್ ಅಕೌಂಟೆಂಟ್ ಗಳು ಬ್ಯಾಂಕ್, ಕಂಪನಿ, ಹಣಕಾಸು ಸಂಸ್ಥೆಗಳು, ಉದ್ದಿಮೆಗಳಲ್ಲದೆ ಸ್ವಂತವಾಗಿ ಪ್ರಾಕ್ಟೀಸ್ ಮಾಡಬಹುದು.

ಅರ್ಥಶಾಸ್ತ್ರಜ್ಞರು ಸಂಖ್ಯಾಶಾಸ್ತ್ರ ಜ್ಞರು : ಪಿಯುಸಿಯಿಂದ ಸ್ನಾತಕೋತ್ತರ ಪದವಿವರೆಗೂ ಅರ್ಥಶಾಸ್ತ್ರ ಮತ್ತು ಅನ್ವಯಿಕ ಸಂಖ್ಯಾಶಾಸ್ತ್ರ ಅಧ್ಯಯನ ಮಾಡಿ ಪಿಎಚ್ ಡಿ ವರೆಗೂ ಅಧ್ಯಯನ ಮಾಡಿದವರು ಅರ್ಥಶಾಸ್ತ್ರಜ್ಞರಾಗುತ್ತಾರೆ. ಭಾರತದ ಆರ್ಥಿಕ ಸೇವಾ ಪರೀಕ್ಷೆ ( ಐಇಎಸ್) ಮೂಲಕ ಹಾಗೂ ರಾಜ್ಯ ಸರಕಾರದ ಆರ್ಥಿಕ ಸಾಂಖ್ಯಿಕ ಇಲಾಖೆಗಳಲ್ಲಿ ಬ್ಯಾಂಕ್, ದೊಡ್ಡಕೈಗಾರಿಕೆ, ಏಜೆನ್ಸಿಗಳಲ್ಲಿ ಉದ್ಯೋಗವಕಾಶವಿದೆ‌.

ಕಲಾ ವಿಭಾಗ :

ಕಾನೂನು ಪದವಿ : ಪಿಯುಸಿ ನಂತರ ಐದು ವರ್ಷದ ಕಾನೂನು ಪದವಿ ಕೋರ್ಸ್ ಗೆ ವಿದ್ಯಾರ್ಥಿಗಳು ಸೇರಬಹುದು. ಹೀಗೆ ಶಿಕ್ಷಣ ಪಡೆದವರು ಭವಿಷ್ಯದ ಉತ್ತಮ ವಕೀಲರಾಗಿ ಪ್ರಾಕ್ಟೀಸ್ ಮಾಡಬಹುದು. ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ನ್ಯಾಯಾಧೀಶರಾಗಬಹುದು. ಸರಕಾರದ ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ ವಕೀಲರಾಗಬಹುದು. ಬಹುರಾಷ್ಟ್ರೀಯ ಕಂಪನಿಗಳಿಗೆ, ಬ್ಯಾಂಕ್ ಗಳಿಗೆ ಕಾನೂನು ಸಲಹೆಗಾರರಾಗಬಹುದು. ಹೈಕೋರ್ಟ್ ನಲ್ಲಿ ಕಾನೂನು ಸಹಾಯಕ ಕಾರ್ಯದರ್ಶಿಯಾಗಿ ಸೇರಬಹುದು.

ಶೀಘ್ರಲಿಪಿಗಾರರು : ಪಿಯುಸಿಯೊಂದಿಗೆ ಖಾಸಗಿ ವಾಣಿಜ್ಯ ಶಾಲೆಗಳಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳಲ್ಲಿ ಕೆಎಸ್ ಇಇಬಿ ಬೋರ್ಡ್ ಮಟ್ಟದಲ್ಲಿ ಉತ್ತೀರ್ಣರಾಗಿರಬೇಕು. ಇಂತಹ ತರಬೇತಿ ಪಡೆದವರಿಗೆ ರಾಜ್ಯದ ಸರಕಾರಿ ಕಚೇರಿಗಳಲ್ಲಿ ಶೀಘ್ರಲಿಪಿಗಾರರಾಗಿ ನ್ಯಾಯಾಲಯಗಳಲ್ಲಿ ತೀರ್ಪು ಬರಹಗಾರರಾಗಿ ಕೇಂದ್ರ ಸರಕಾರದ ಕಚೇರಿಗಳಲ್ಲಿ ಕೆಲಸವಿದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸಿಬ್ಬಂದಿ ಆಯ್ಕೆ ಆಯೋಗ, ರಾಜ್ಯ ಸರಕಾರದ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಗ್ರಂಥಪಾಲಕ : ಎಸ್ ಎಸ್ ಎಲ್ ಸಿ ನಂತರ ಸರ್ಟಿಫಿಕೇಟ್ ಕೋರ್ಸ್ ಅಥವಾ ಪಿಯುಸಿ ನಂತರ ಡಿಪ್ಲೋಮಾ ಶಿಕ್ಷಣ, ಬಿ.ಲಿಬ್ ಅಥವಾ ಎಂ.ಲಿಬ್ ಮಾಡಿದವರು ಗ್ರಂಥಪಾಲಕ ಹುದ್ದೆಗೆ ಅರ್ಹರಾಗುತ್ತಾರೆ. ಈ ಶಿಕ್ಷಣ ಪಡೆದವರಿಗೆ ಗ್ರಂಥಾಲಯಗಳು, ಶಿಕ್ಷಣ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು, ಪತ್ರಿಕಾಲಯದ ಗ್ರಂಥಾಲಯಗಳಲ್ಲಿ ಉದ್ಯೋಗಾವಕಾಶಗಳಿವೆ‌

ಭಾಷಾಂತರರಿಗಿದೆ ಮನ್ನಣೆ : ಪಿಯುಸಿ ನಂತರ ನಿರ್ದಿಷ್ಟ ಭಾಷೆಯಲ್ಲಿ ಸ್ನಾತಕ/ಸ್ನಾತಕೋತ್ತರ ಪದವಿಯನ್ನು ಪಡೆಯಬೇಕು. ಭಾಷಾಂತರದಲ್ಲಿ ಡಿಪ್ಲೋಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಮಾಡಿರಬೇಕು. ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ, ಸಾಹಿತ್ಯ ಕ್ಷೇತ್ರದಲ್ಲಿ ನಿರ್ದಿಷ್ಟವಾದ ಕೌಶಲ ಹೊಂದಿರಬೇಕು. ಅನುವಾದಕರಿಗೆ ಭಾರೀ ಬೇಡಿಕೆ ಇದೆ.

ಉದ್ಘೋಷಕರು, ನಿರೂಪಕರಿಗಿದೆ ಭಾರೀ ಬೇಡಿಕೆ : ಪಿಯುಸಿ ನಂತರ ಎಲೆಕ್ಟ್ರಾನಿಕ್ ಮೀಡಿಯಾ ಡಿಪ್ಲೋಮಾ ಅಥವಾ ಸ್ನಾತಕೋತ್ತರ ಪದವಿ ಡಿಪ್ಲೋಮಾದಲ್ಲಿ ಪತ್ರಿಕೋದ್ಯಮ, ಎಲೆಕ್ಟ್ರಾನಿಕ್ ಮಾಧ್ಯಮದ ಶಿಕ್ಷಣ ಪಡೆದವರು ಈ ಹುದ್ದೆಗೆ ಅರ್ಹರು. ಉದ್ಘೋಷಕರು ಅಥವಾ ನಿರೂಪಕರಿಗೆ ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುವ ಸಂಘ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶ ಲಭ್ಯವಾಗುತ್ತದೆ. ಧ್ವನಿ ಏರಿಳಿತಗಳಲ್ಲಿ ಪ್ರಾವೀಣ್ಯ ಪಡೆದು ಕಂಠದಾನ ಕಲಾವಿದರಾಗಿಯೂ ಇವರು ಸೇವೆ ಸಲ್ಲಿಸಬಹುದು. ಇಂಥವರಿಗೆ ಟಿವಿ, ಸಿನಿಮಾ ಹಾಗೂ ಇತರ ರಂಗಗಳಲ್ಲಿ ಭಾರೀ ಬೇಡಿಕೆಯಿದೆ.

ಸಾರ್ವಜನಿಕ ಸಂಪರ್ಕಾಧಿಕಾರಿ: ಪಿಯುಸಿ ಆದ ಮೇಲೆ ಸಾರ್ವಜನಿಕ ಸಂಪರ್ಕದಲ್ಲಿ ಡಿಪ್ಲೋಮಾ ಅಥವಾ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದವರು ಅಥವಾ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದವರು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಲು ಅರ್ಹರಾಗುತ್ತಾರೆ. ಈ ಹುದ್ದೆಯು ಬಹುರಾಷ್ಟ್ರೀಯ ಕಂಪನಿಗಳು, ಸರಕಾರಿ ಇಲಾಖೆ ಮುಂತಾದ ಕಡೆಗಳಲ್ಲಿ ಲಭ್ಯವಿರುತ್ತವೆ.

ದೈಹಿಕ ಶಿಕ್ಷಣ ಶಿಕ್ಷಕ ವೃತ್ತಿ : ಪಿಯುಸಿಯೊಂದಿಗೆ ಡಿ.ಪಿ.ಇಡಿ ತೇರ್ಗಡೆಯಾದವರು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾಗಲು ಅರ್ಹರಾಗಿರುತ್ತಾರೆ. ಡಿಇಡಿ ಕಾಲೇಜುಗಳಲ್ಲಿ ಡಿ.ಪಿ.ಇಡಿ ಶಿಕ್ಷಣ ಇರುತ್ತದೆ. ಈ ತರಬೇತಿ ಪಡೆದವರಿಗೆ ಶಿಕ್ಷಣ ಸಂಸ್ಥೆಗಳು, ಹೆಲ್ತ್ ಕ್ಲಬ್ ಮುಂತಾದೆಡೆ ಉದ್ಯೋಗವಕಾಶಗಳು ಲಭ್ಯವಾಗುವುದಲ್ಲದೆ, ಸ್ವಂತವಾಗಿ ಫಿಟ್ ನೆಸ್ ಸೆಂಟರ್ ಗಳನ್ನು ನಡೆಸಬಹುದು. ಕೇಂದ್ರ ರಾಜ್ಯ ಸರಕಾರದ ಕ್ರೀಡಾ ತರಬೇತಿ ಕೇಂದ್ರಗಳಲ್ಲೂ ನೇಮಕಾತಿಗೆ ಅವಕಾಶವಿರುತ್ತದೆ.

ಸಿನಿಮಾ ಕ್ಷೇತ್ರದಲ್ಲಿ : ಸಿನಿಮಾ ಕ್ಷೇತ್ರ ಛಾಯಾಚಿತ್ರಣ, ಸ್ಕ್ರಿಪ್ಟ್ ರೈಟಿಂಗ್, ಡೈರೆಕ್ಷನ್, ಕೋರಿಯಾಗ್ರಫಿಗೆ ದೊಡ್ಡ ವೇದಿಕೆ ಮಾಡಿಕೊಡುತ್ತದೆ. ಪಿಯುಸಿ ನಂತರ ಸಿನಿಮಾಟೋಗ್ರಫಿಯಲ್ಲಿ ಡಿಪ್ಲೋಮಾ ಮಾಡಬಹುದು. ಚಲನಚಿತ್ರ ನಿರ್ದೇಶನ ವ್ಯಾಸಂಗಕ್ಕೆ ರಾಜ್ಯದಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿವೆ. ಹಾಗೆಯೇ ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳ ನೃತ್ಯ ಮತ್ತು ನಾಟಕ ಶಿಕ್ಷಣ ವಿಭಾಗದಲ್ಲಿ ಈ ಕೋರಿಯೋಗ್ರಫರ್ ಬಗ್ಗೆ ತರಬೇತಿ ನೀಡಲಾಗುತ್ತದೆ.

ಸಮಾಜ ಕಾರ್ಯ ಪದವೀಧರರು:

ಭಾಷೆ, ಸಾಮಾನ್ಯ ಜ್ಞಾನ ಇರುವ ಪತ್ರಕರ್ತರಿಗೆ ಬೇಡಿಕೆ : ಪಿಯುಸಿ ನಂತರ ಪದವಿಯಲ್ಲಿ ಪತ್ರಿಕೋದ್ಯಮ ಅಥವಾ ಸ್ನಾತಕೋತ್ತರ ಪದವಿ, ಡಿಪ್ಲೋಮಾದವರು ಪತ್ರಕರ್ತರಾಗಬಹುದು. ಹೀಗೆ ಶಿಕ್ಷಣ ಪಡೆದವರು ಪತ್ರಿಕೆಗಳಲ್ಲಿ , ಖಾಸಗಿ ಮತ್ತ ಸರಕಾರದ ದೂರದರ್ಶನ ಕೇಂದ್ರಗಳಲ್ಲಿ ಉದ್ಯೋಗವಕಾಶ ಗಳನ್ನು ಪಡೆಯಬಹುದು.

ಪದವಿಯಲ್ಲಿ ಸಮಾಜಶಾಸ್ತ್ರ ಅಥವಾ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವೀಧರರು ಈ ಹುದ್ದೆ ಅಥವಾ ಉದ್ಯೋಗಕ್ಕೆ ಅರ್ಹರು. ಸಮಾಜ ಕಾರ್ಯ ಪದವಿ ಪಡೆದವರಿಗೆ ಸಮುದಾಯ ಕೇಂದ್ರ, ಆಸ್ಪತ್ರೆ, ಪೊಲೀಸ್ ಇಲಾಖೆ, ಕಾರಾಗೃಹ ಇಲಾಖೆಯಲ್ಲಿ ಮತ್ತು ವಿವಿಧ ಕಂಪನಿಗಳಲ್ಲಿ ಉದ್ಯೋಗವಕಾಶಗಳಿವೆ.

ಚಿನ್ನಾಭರಣ ವಿನ್ಯಾಸ : ವಿನ್ಯಾಸದಲ್ಲಿ ಹೊಸತನ ನೀಡುವವರಿಗೆ ಜ್ಯುವೆಲ್ಲರಿ ಡಿಸೈನ್ ಕೋರ್ಸ್ ಇಷ್ಟದ ಆಯ್ಕೆಯಾಗಬಹುದು. ಅಲ್ಪಾವಧಿ ಹಾಗೂ ದೀರ್ಘಾವಧಿ ಕೋರ್ಸ್ ಕೂಡಾ ವ್ಯಾಸಂಗ ಮಾಡಲು ಅವಕಾಶವಿದೆ‌. ದೂರ ಶಿಕ್ಷಣದ ಮೂಲಕವೂ ನೀವು ಇದನ್ನು ಕಲಿಯಬಹುದು. ಎಸ್ಸೆಸ್ಸೆಲ್ಸಿ , ಪಿಯುಸಿ ನಂತರ ಆರಂಭಿಕ ಕೋರ್ಸನ್ನು ಮಾಡಬಹುದು. 1 ವರ್ಷದ ಡಿಪ್ಲೋಮಾ ಕೋರ್ಸ್ ಗೆ ಸೇರಲು ಪಿಯುಸಿ ಪಾಸಾಗಿರಬೇಕು. ಬಿಎಸ್ಸಿ ( ಜ್ಯುವೆಲ್ಲರಿ ಡಿಸೈನ್ ), ಬಿಎ ( ಜ್ಯುವೆಲ್ಲರಿ ಡಿಸೈನ್ ಆಂಡ್ ಟೆಕ್ನಾಲಜಿ ) ಎಂಬ ಪದವಿ ಕೋರ್ಸ್ ಗಳಿವೆ.

ಮರವಿಜ್ಞಾನ, ತಂತ್ರಜ್ಞಾನ ಕೋರ್ಸ್ : ಮರದ ಉತ್ಪನ್ನಗಳ ಉದ್ಯಮದಲ್ಲಿ ವಿಜ್ಞಾನ- ತಂತ್ರಜ್ಞಾನದ ಬಗೆಗಿನ ಕೋರ್ಸ್ ಇದು. ಮರದ ಉದ್ಯಮ, ವಿವಿಧ ಉದ್ದೇಶಗಳಿಗೆ ಕಟ್ಟಿಗೆ ಬಳಕೆ ಕುರಿತು ತರಬೇತಿ ಇರುತ್ತದೆ. ನಂತರ ಅಭ್ಯರ್ಥಿಗಳು ಮರದ ತಿರುಳು, ಪೇಪರ್, ಫರ್ನಿಚರ್, ಕಂಪೋಸಿಟ್ ಬೋರ್ಡ್, ಫ್ಲೈವುಡ್ ಸೇರಿ ಹಲವು ಅರಣ್ಯಾಧಾರಿತ ಉದ್ಯಮಗಳ ನಿರ್ವಹಣಾ ಕೌಶಲ ಪಡೆದುಕೊಳ್ಳುತ್ತಾರೆ‌

ಪ್ರವಾಸಿ ಮಾರ್ಗದರ್ಶಿ ಕೋರ್ಸ್ : ಪಿಯುಸಿ ಆದಮೇಲೆ ಪದವಿಯಲ್ಲಿ ಇತಿಹಾಸ, ಪ್ರವಾಸೋದ್ಯಮ ಅಧ್ಯಯನ ಮಾಡಿದ್ದರೆ ಒಳ್ಳೆಯದು. ಯಾವುದೇ ಪದವಿ ಜೊತೆಗೆ ಟೂರ್ ಗೈಡ್ ಡಿಪ್ಲೋಮಾ/ ಸರ್ಟಿಫಿಕೇಟ್ ಕೋರ್ಸ್ ಮಾಡಿರಬೇಕು. ಈ ಶಿಕ್ಷಣ ಪಡೆದವರಿಗೆ ಪ್ರವಾಸೋದ್ಯಮ ಇಲಾಖೆ, ಪ್ರವಾಸಿ ಸಂಸ್ಥೆಗಳಲ್ಲಿ ಕೆಲಸ ಮಾಡಲು ಅವಕಾಶ ಇದೆ ಅಥವಾ ಸ್ವಂತ ಪ್ರವಾಸ ಮಾರ್ಗದರ್ಶಿಯಾಗಬಹುದು.

Leave a Reply

Your email address will not be published. Required fields are marked *