ಮೊದಲ ಮನೆ ಖರೀದಿ ಸಮಯದಲ್ಲಿ ಮಾಡಬಾರದ ತಪ್ಪುಗಳಿವು

By | 21/09/2020

ಮೊದಲ ಮನೆ ಖರೀದಿಯು ನಿಮ್ಮ ಜೀವನದ ದೊಡ್ಡ ನಿರ್ಧಾರಗಳಲ್ಲಿ ಒಂದು. ಇದು ಖುಷಿಕೊಡುವುದರ ಜೊತೆಗೆ ಸಾಕಷ್ಟು ಆತಂಕವನ್ನೂ ಉಂಟುಮಾಡುತ್ತದೆ. ನೀವು ಹೊಸದಾಗಿ ಮನೆ ಖರೀದಿಸಲು ಬಯಸುವುದಾದರೆ ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

1. ಸಾಲದ ಕುರಿತು ತೀರ್ಮಾನಿಸದೆ ಮನೆ ನೋಡುವುದು

ಬ್ಯಾಂಕ್‍ನಿಂದ ಸಾಲ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಿಂದ ಹೆಚ್ಚಿನವರು ಮೊದಲು ಮನೆ ನೋಡುತ್ತಾರೆ, ಬಳಿಕ ಸಾಲಕ್ಕಾಗಿ ಬ್ಯಾಂಕ್‍ಗಳನ್ನು ಎಡತಾಕುತ್ತಾರೆ. ಕೆಲವೊಮ್ಮೆ ಬ್ಯಾಂಕ್‍ಗಳಲ್ಲಿ ಸಾಕಷ್ಟು ಹಣದ ಹರಿವು ಇರದೆ ಇರಬಹುದು. ಹೀಗಾಗಿ ನಿಮಗೆ ಸಾಲ ಸಿಗದೆ ಇರಬಹುದು. ಇನ್ನು ಕೆಲವೊಮ್ಮೆ ನಿಮ್ಮ ಮಾಸಿಕ ವೇತನ ಅಥವಾ ಇತರೆ ಆದಾಯಗಳು ಸಾಲ ಪಡೆಯಲು ಸೂಕ್ತವಾಗಿರದೆ ಇರಬಹುದು. ಹೀಗಾಗಿ ಮೊದಲು ಬ್ಯಾಂಕ್‍ನಲ್ಲಿ ಸಾಲದ ಕುರಿತು ಮಾತನಾಡಿ. `ಮೊದಲೇ ಪ್ರೀಅಪ್ರೂವ್ಡ್ ಲೋನ್ ಸಿಕ್ಕರೆ ನೀವು ಸೀರಿಯಸ್ ಆಗಿ ಮನೆ ಹುಡುಕುತ್ತಿದ್ದೀರಿ ಎಂಬ ಭಾವನೆಯನ್ನೂ ಉಂಟು ಮಾಡುತ್ತದೆ’ ಎಂದು ತಜ್ಞರು ಹೇಳುತ್ತಾರೆ.

2. ಕೇವಲ ಒಂದೇ ಬ್ಯಾಂಕ್‍ನಲ್ಲಿ ವಿಚಾರಿಸುವುದು

ಇಂತಹ ತಪ್ಪನ್ನೂ ಮಾಡಬೇಡಿ. ನಿಮಗೆ ಬಡ್ಡಿದರದಲ್ಲಿ 0.01 ಪರ್ಸೆಂಟ್ ಉಳಿತಾಯವಾದರೂ ಸಾಕಷ್ಟು ಹಣ ಉಳಿತಾಯ ಮಾಡಬಹುದು. ಕನಿಷ್ಠ ಮೂರು ಬ್ಯಾಂಕ್‍ಗಳಿಗೆ ಭೇಟಿ ನೀಡಿ. ಅಲ್ಲಿ ನೀಡುವ ಗೃಹ ಸಾಲ ಆಯ್ಕೆಗಳನ್ನು ನೋಡಿ. `ನೀವು ಈ ರೀತಿ ಹಲವು ಬ್ಯಾಂಕ್‍ಗಳಿಗೆ ಭೇಟಿ ನೀಡಿದರೆ ನಿಮಗೂ ಒಳ್ಳೆಯ ಡೀಲ್ ಪಡೆಯುವ ಅವಕಾಶ ಸಿಗುತ್ತದೆ’ ಎಂದು ತಜ್ಞರು ಹೇಳುತ್ತಾರೆ. ವಿವಿಧ ಬ್ಯಾಂಕ್‍ಗಳು ಮತ್ತು ಮೋರ್ಟಗೇಜ್ ಬ್ರೋಕರ್ ಜೊತೆ ನೀವು ಮಾತನಾಡಿದರೆ ವಿವಿಧ ಬಡ್ಡಿದರಗಳು, ಬ್ಯಾಂಕ್‍ಗಳು ವಿಸುವ ಶುಲ್ಕ ಮತ್ತು ಸಾಲದ ನಿಯಮಗಳನ್ನು ಹೋಲಿಕೆ ಮಾಡಿನೋಡಲು ಸಾಧ್ಯವಾಗುತ್ತದೆ.

3. ನಿಮ್ಮ ಬಜೆಟ್ ಮೀರಿ ಮನೆ ಖರೀದಿ

ನಿಮ್ಮ ಬಜೆಟ್‍ಗಿಂತ ಮಿಗಿಲಾದ ಮನೆಯ ಮೇಲೆ ಪ್ರೀತಿ ಹುಟ್ಟುವುದು ಸಹಜ. ಆದರೆ, ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಎಂದಿಗೂ ಒಳ್ಳೆಯದು. `ಎಲ್ಲಾದರೂ ಹಣಕಾಸು ಬಿಕ್ಕಟ್ಟು ಆರಂಭವಾದಗ ನೀವು ನಿಮ್ಮ ಮನೆಯನ್ನು ಕಳೆದುಕೊಳ್ಳಬೇಕಾಗಬಹುದು. ಹೀಗಾಗಿ ಬಜೆಟ್ ಗಮನದಲ್ಲಿಟ್ಟುಕೊಂಡು ಮನೆ ಖರೀದಿಸಿ’ ಎಂದು ತಜ್ಞರು ಎಚ್ಚರಿಸುತ್ತಾರೆ. ಇದಕ್ಕಾಗಿ ನೀವು ನಿಮ್ಮ ತಿಂಗಳ ಬಜೆಟ್ ಗಮನದಲ್ಲಿಟ್ಟುಕೊಳ್ಳಿ. ಎಷ್ಟು ವರ್ಷಗಳ ಕಾಲ ಈ ರೀತಿ ಇಎಂಐ ಕಟ್ಟಬಹುದು ಎನ್ನುವ ಕುರಿತು ಸ್ಪಷ್ಟತೆ ಇರಲಿ. ನಿಮ್ಮ ಇಎಂಐ ಜೊತೆಗೆ ಬೇರೆ ಖರ್ಚುಗಳೂ ವರ್ಷಗಳು ಕಳೆದಂತೆ ಹೆಚ್ಚಾಗುವುದರ ಕುರಿತು ಗಮನವಿರಲಿ.

4. ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವುದು

ಈ ತಪ್ಪನ್ನೂ ಮಾಡಬೇಡಿ. ಮನೆ ಖರೀದಿಯು ಸಂಕೀರ್ಣವಾದ ವಿಷಯ. ಇದಕ್ಕೆ ಒಂದಿಷ್ಟು ಸಮಯ ಬೇಕೆಬೇಕು. ನೀವು ಅವಸರ ಮಾಡಿ ಖರೀದಿಸಿದರೆ ನಿಮಗೆ ಭವಿಷ್ಯದಲ್ಲಿ ಹೊರೆಯಾಗಿಬಿಡಬಹುದು. `ತಮ್ಮ ಖರೀದಿಗೆ ಮೊದಲು ಸಾಕಷ್ಟು ಪ್ಲ್ಯಾನ್ ಮಾಡದೆ ಇರುವುದು ಮೊದಲ ಬಾರಿ ಮನೆ ಖರೀದಿ ಮಾಡುವವರು ಮಾಡುವ ತಪ್ಪಾಗಿದೆ’ ಎಂದು ರಿಯಾಲ್ಟಿ ತಜ್ಞ ನಿಕ್ ಬಸ್ ಹೇಳುತ್ತಾರೆ.

5. ಉಳಿತಾಯ ಬರಿದಾಗಿಸುವುದು

ನೀವು ಕಷ್ಟಪಟ್ಟು ಉಳಿಸಿಟ್ಟ ಎಲ್ಲಾ ಉಳಿತಾಯದ ಹಣವನ್ನು ಮನೆ ಖರೀದಿಗೆ ಖಾಲಿ ಮಾಡುವ ತಪ್ಪನ್ನೂ ಮೊದಲ ಬಾರಿ ಮನೆ ಖರೀದಿಸುವವರು ಮಾಡುತ್ತಾರೆ. `ಕೆಲವು ಖರೀದಿದಾರರು ತಮ್ಮ ಶೇಕಡ 20 ಡೌನ್‍ಪೇಮೆಂಟ್ ಪಾವತಿಸಲು ಎಲ್ಲಾ ಉಳಿತಾಯದ ಹಣವನ್ನು ಖರ್ಚು ಮಾಡಿಬಿಡುತ್ತಾರೆ. ಬಳಿಕ ಅವರಲ್ಲಿ ಸಾಲದ ವಿಮೆ ಇತ್ಯಾದಿಗಳಿಗೆ ಪಾವತಿಸಲು ಸಹ ಹಣ ಇರುವುದಿಲ್ಲ. ಬಳಿಕ ನೀವು ಹಣ ಹೊಂದಿಸಲು ಸಾಕಷ್ಟು ಪರದಾಡಬೇಕಾಗಬಹುದು’ ಎಂದು ತಜ್ಞರು ಎಚ್ಚರಿಸುತ್ತಾರೆ.

6. ಕ್ರೆಡಿಟ್ ಸ್ಕೋರ್ ಬಗ್ಗೆ ಗಮನ ನೀಡದೆ ಇರುವುದು

ಸಾಲ ಅನುಮತಿ ನೀಡುವ ಮೊದಲೇ ನಿಮ್ಮ ಕ್ರೆಡಿಟ್ ವರದಿಯಲ್ಲಿ ಏನಾದರೂ ಬದಲಾವಣೆ ಮಾಡಿಬಿಡಬಹುದು. ಹೀಗಾಗಿ ಸದಾ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಗಮನ ಇಟ್ಟಿರಿ. ಅಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದು ನೋಡಿರಿ. ಇಲ್ಲವಾದರೆ ಅಂತಿಮವಾಗಿ ಸಾಲದ ಅನುಮತಿ ಸಿಕ್ಕಾಗ ನೀವು ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ. ಈ ರೀತಿ ಸಾಲ ಪಡೆಯುವ ಸಮಯದಲ್ಲಿ ಹಳೆಯ ಇಎಂಐ ಬಾಕಿ ಉಳಿಸುವುದು, ಹೊಸ ಕ್ರೆಡಿಟ್ ಕಾರ್ಡ್ ಪಡೆಯುವುದು ಇತ್ಯಾದಿಗಳನ್ನು ಮಾಡಲು ಹೋಗಬೇಡಿ. ನಿಮ್ಮ ಕ್ರೆಡಿಟ್ ಸ್ಕೋರ್ ಏರುಪೇರು ಮಾಡಬಹುದಾದ ಯಾವುದೇ ವ್ಯವಹಾರಗಳಲ್ಲಿ ತೊಡಗಬೇಡಿ ಎಂದು ತಜ್ಞರು ಎಚ್ಚರಿಸುತ್ತಾರೆ.

7. ಸೂಕ್ತ ಸ್ಥಳ ಆಯ್ಕೆ ಮಾಡದೆ ಇರುವುದು

ಹೊಸ ಮನೆ ಖರೀದಿ ಸಮಯದಲ್ಲಿ ನೀವು ಪ್ರದೇಶದ ಕಡೆಗೂ ಗಮನ ನೀಡಬೇಕು. ಯಾಕೆಂದರೆ, ಮನೆಖರೀದಿಸಿದ ಬಳಿಕ ನೀವು ಜೀವನಪೂರ್ತಿ ಆ ಪ್ರದೇಶದಲ್ಲಿಯೇ ಇರಬೇಕು. `ಸೂಕ್ತ ನಗರ, ಸೂಕ್ತ ಪ್ರದೇಶ ಆಯ್ಕೆ ಮಾಡಿಕೊಳ್ಳದೆ ಇದ್ದರೆ ನೀವು ಮುಂದೆ ಪರಿತಪಿಸಬೇಕಾಗುತ್ತದೆ. ನಿಮ್ಮ ಸಂಸ್ಕøತಿ, ಜೀವನಶೈಲಿ, ಆಚಾರವಿಚಾರ ಇತ್ಯಾದಿಗಳಿಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ತಜ್ಞರು ಟಿಪ್ಸ್ ನೀಡುತ್ತಾರೆ.

8. ಭಾವನಾತ್ಮಕವಾಗಿ  ನಿರ್ಧಾರ ತೆಗೆದುಕೊಳ್ಳುವುದು

ಮನೆ ಖರೀದಿಯು ಜೀವನದ ಪ್ರಮುಖ ಮೈಲಿಗಲ್ಲು. ಕೆಲವೊಮ್ಮೆ ನೀವು ಭಾವನಾತ್ಮಕವಾಗಿ ಮನೆ ಖರೀದಿ ನಿ`ರ್Áರ ತೆಗೆದುಕೊಳ್ಳಬಹುದು. ಇಂತಹ ಸಮಯದಲ್ಲಿ ಪ್ರಾಕ್ಟಿಕಲ್ ಥಿಂಕಿಂಗ್ ಅತ್ಯಂತ ಅಗತ್ಯ. ಇಲ್ಲವಾದರೆ ಭಾವನೆಯ ಸುಳಿಗೆ ಸಿಲುಕಿ ಹಲವು ಲಕ್ಷ ರೂ. ಹೆಚ್ಚು ಖರ್ಚು ಮಾಡಬೇಕಾಗಬಹುದು. `ನಾನು ಹತ್ತು ವರ್ಷದಿಂದ ಇದೇ ಸ್ಥಳದಲ್ಲಿ ಬಾಡಿಗೆಗೆ ಇದ್ದೇನೆ.  ಇದೇ ಸ್ಥಳದಲ್ಲಿ ಫ್ಲ್ಯಾಟ್ ಖರೀದಿಸುವೆ’ ಎನ್ನುವುದು ಕೂಡ ಭಾವನಾತ್ಮಕ ವಿಷಯವಾಗಿದೆ. ಈ ರೀತಿ ಭಾವನಾತ್ಮಕ ಅಂಶಗಳಿಗೆ ಜೋತುಬಿದ್ದರೆ ನಿಮಗೆ ಇನ್ನಷ್ಟು ಒಳ್ಳೆಯ ಮನೆ ಪಡೆಯುವ ಅವಕಾಶ ತಪ್ಪಿ ಹೋಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

Author: Rashmi Kannadathi

Profession: consultant optometrist. Hobby: Web Developer, SEO Consultaņt, Bloggȩr

Leave a Reply

Your email address will not be published. Required fields are marked *