ಗೂಗಲ್ ನ್ಯೂಸ್‌ನಲ್ಲಿ ನಿಮ್ಮ ವೆಬ್‌ಸೈಟ್‌ ನೋಂದಣಿ ಮಾಡುವುದು ಹೇಗೆ?

By | 21/12/2020

ಗೂಗಲ್‌ ನ್ಯೂಸ್‌ನಲ್ಲಿ ಸುದ್ದಿಗಳನ್ನು ಓದಲು ಹೆಚ್ಚಿನವರು ಇಷ್ಟಪಡುತ್ತಾರೆ. ಮುಖ್ಯವಾಗಿ ಇತ್ತೀಚಿನ ಸುದ್ದಿಗಳನ್ನು ಓದಲು ಇದೊಂದು ಅಗ್ರಿಗೇಟರ್‌ ರೀತಿ ಕಾರ್ಯನಿರ್ವಹಿಸುತ್ತದೆ. ಆದರೆ, ಗೂಗಲ್‌ ನ್ಯೂಸ್‌ನಲ್ಲಿ ಎಲ್ಲರ ವೆಬ್‌ಸೈಟ್‌ಗಳು ಇರುತ್ತವೆ ಎಂದು ಹೇಳಲಾಗದು. ಮುಖ್ಯವಾಗಿ ದೊಡ್ಡ ದೊಡ್ಡ ಸುದ್ದಿ ತಾಣಗಳ ಸುದ್ದಿಗಳು, ಲೇಖನಗಳು ಅಲ್ಲಿ ರಾರಾಜಿಸುತ್ತವೆ. ಅಲ್ಲಿ ನಿಮ್ಮ ವೆಬ್‌ಸೈಟ್‌ ಅನ್ನು ಸಬ್‌ಮಿಟ್‌ ಮಾಡುವ ಅವಕಾಶ ಈಗ ಬಂದಿದೆ. ಇಲ್ಲಿ ಗ್ರಾಹಕರಿಗೆ ಉಚಿತ ಅಥವಾ ಪಾವತಿಸಿ ಓದುವ ಅವಕಾಶವಿದೆ. ಬಹುತೇಕ ಜನರು ಉಚಿತವಾಗಿಯೇ ಓದಲು ಬಯಸುವ ಕಾರಣ ಪಾವತಿಸಿ ಓದುವ ವ್ಯವಸ್ಥೆ ಸದ್ಯಕ್ಕೆ ವರ್ಕ್‌ ಆಗದು.

ಹಣ ಕೊಟ್ಟಾದರೂ ಓದಲೇಬೇಕು ಎಂಬಂತಹ ಕಂಟೆಂಟ್‌ ನಿಮ್ಮದಾಗಿದ್ದರೆ ಮಾತ್ರ ಪಾವತಿಸಿ ಓದುವ ಆಯ್ಕೆ ಜನರ ಮುಂದೆ ಇಡಬಹುದು. ಆದರೆ, ಆ ರೀತಿ ಮಾಡಲು ನನ್ನ  ವೆಬ್‌ಸೈಟ್‌ ದಿ ಹಿಂದೂ ಅಥವಾ ವಾಷಿಂಗ್ಟನ್‌ ಪೋಸ್ಟ್‌ ಲೆವೆಲ್‌ಗೆ ಇಲ್ಲವೆಂದುಕೊಳ್ಳುತ್ತೇನೆ. ಹೀಗಾಗಿ, ಪಾವತಿಸಿ ಓದುವ ಆಯ್ಕೆಯನ್ನು ಗೂಗಲ್‌ನಲ್ಲಿ ನಾನಂತು ಆನ್‌ ಮಾಡುವುದಿಲ್ಲ. ಆದರೆ, ಗೂಗಲ್‌ ನ್ಯೂಸ್‌ಗೆ ನೀವು ನಿಮ್ಮ ನ್ಯೂಸ್‌ ಅಥವಾ ಬ್ಲಾಗ್‌ ಅಥವಾ ಕಂಟೆಂಟ್ ವೆಬ್‌ಸೈಟ್‌ ಅನ್ನು ಸಲ್ಲಿಸಬಹುದು. ಒಂದಿಷ್ಟು ದಿನ ಪರಿಶೀಲಿಸಿ (ನೆನಪಿಡಿ, ಗೂಗಲ್‌ನ ಉದ್ಯೋಗಿಗಳೇ ಪರಿಶೀಲಿಸುತ್ತಾರೆ, ಮೆಷಿನ್‌ ಪರಿಶೀಲನೆಯಲ್ಲ) ನಿಮ್ಮ ವೆಬ್‌ಸೈಟ್‌ಗೆ ಗೂಗಲ್‌ ನ್ಯೂಸ್‌ನಲ್ಲಿ ಅವಕಾಶ ದೊರಕಬಹುದು.

ಗೂಗಲ್‌ ನ್ಯೂಸ್‌ಗೆ ವೆಬ್ಸೈಟ್‌ ಸಲ್ಲಿಸುವ ಮೊದಲು ಗಮನಿಸಬೇಕಾದ ಸಂಗತಿಗಳು

  • ಮೊದಲಿಗೆ ನಿಮ್ಮ ವೆಬ್‌ಸೈಟ್‌ ಗೂಗಲ್‌ ಗೈಡ್‌ಲೈನ್ಸ್‌ಗೆ ಪೂರಕವಾಗಿರಬೇಕು. ಪ್ರತಿದಿನ ಲಕ್ಷಲಕ್ಷ ಲೇಟೆಸ್ಟ್‌ ನ್ಯೂಸ್‌ ಬರುವ ಕಾರಣ ಗೂಗಲ್‌ ಅಷ್ಟು ಸುಲಭವಾಗಿ ನಿಮ್ಮ ವೆಬ್‌ಸೈಟ್‌ಗೆ ಅನುಮತಿ ನೀಡುವುದಿಲ್ಲ. ಗೂಗಲ್‌ ನಿಮ್ಮ ವೆಬ್‌ಸೈಟ್‌ ಅನ್ನು ರಿಜೆಕ್ಟ್‌ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಮೊದಲಿಗೆ ಗೂಗಲ್‌ ನ್ಯೂಸ್‌ನ ಗೈಡ್‌ಲೈನ್‌ಗಳನ್ನು ಓದಿಕೊಂಡು ನಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಿ. ಅವಸರ ಮಾಡಬೇಡಿ.
  • ಗೂಗಲ್‌ ನ್ಯೂಸ್‌ನ ಸಾಮಾನ್ಯ ಗೈಡ್‌ಲೈನ್‌ಗಳು ಈ ಮುಂದಿನಂತೆ ಇವೆ. ಇತ್ತೀಚಿನ ಸುದ್ದಿಗಳನ್ನು ನೀಡುವ ನ್ಯೂಸ್‌ ಕಂಟೆಂಟ್‌ಗಳು ಇರಲಿ. ನಿಮ್ಮ ವೆಬ್‌ಸೈಟ್‌ನಲ್ಲಿ ಒರಿಜಿನಲ್‌ ಕಂಟೆಂಟ್‌ ಇರಲಿ. ಮತ್ತೊಂದು ವೆಬ್‌ಸೈಟ್‌ನ ನ್ಯೂಸ್‌ ಅನ್ನು ಸಂಪೂರ್ಣವಾಗಿ ಬದಲಿಸದೆ ಹಾಕುವ ವೆಬ್‌ಸೈಟ್‌ ನಿಮ್ಮದಾಗಿದ್ದರೆ ದಯವಿಟ್ಟು ಅರ್ಜಿ ಸಲ್ಲಿಸಿ ಸಮಯ ವ್ಯರ್ಥ ಮಾಡಬೇಡಿ. ಅಕ್ಷರ ತಪ್ಪುಗಳು, ವ್ಯಾಕರಣ ತಪ್ಪುಗಳು ಇಲ್ಲದಂತೆ ಎಚ್ಚರವಹಿಸಿ. ನೆನಪಿಡಿ, ಗೂಗಲ್‌ ಕಂಪನಿಯಲ್ಲಿ ಕನ್ನಡಿಗರೂ ಇದ್ದಾರೆ. ಕನ್ನಡಿಗರೇ ಕನ್ನಡ ಬ್ಲಾಗ್‌ ಮತ್ತು ವೆಬ್‌ಸೈಟ್‌ಗಳನ್ನು ಪರಿಶೀಲಿಸುತ್ತಾರೆ. ನಾನು ಕರ್ನಾಟಕ ಬೆಸ್ಟ್‌.ಕಾಂಗೆ ಅರ್ಜಿ ಸಲ್ಲಿಸಿದಾಗ ನನ್ನ ವೆಬ್‌ಸೈಟ್‌ನಲ್ಲಿರುವ ಲೊಗೊಕ್ಕೂ ನಾನು ಸಲ್ಲಿಸಿದ ಲೋಗೊದ ನಡುವೆ ಇರುವ ವ್ಯತ್ಯಾಸವನ್ನು ಫೋಟೊದಲ್ಲಿ ಗೆರೆ ಹಾಕಿ ತೋರಿಸಿ ನನಗೆ ಮಾರುತ್ತರ ಕಳುಹಿಸಿದ್ದರು. ಸಾಕ್ಷಿಗೆ ಈ ಕೆಳಗಿನ ಫೋಟೊ ನೋಡಿ.
  • ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಪೆರ್ಮಲಿಂಕ್‌, ಸ್ಲಗ್‌ ಅಥವಾ ಯುಆರ್‌ಎಲ್‌ ಓದುವಂತೆ ಇರಲಿ. ಪೆರ್ಮಲಿಂಕ್‌ ಎನ್ನುವುದು ಪ್ರಮುಖವಾಗಿದ್ದು, ಎಚ್ಚರಿಕೆಯಿಂದ ಬರೆಯಿರಿ. ಇದರೊಂದಿಗೆ ಟ್ಯಾಗ್‌, ಕೆಟಗರಿ ಇತ್ಯಾದಿಗಳನ್ನೂ ಸಮರ್ಪಕವಾಗಿ ಬಳಸಿ.
  • ನಿಮ್ಮವೆಬ್‌ಸೈಟ್‌ಗೆ ಸೈಟ್‌ ಮ್ಯಾಪ್‌ ರಚಿಸಿರಬೇಕು. ಆರ್‌ಎಸ್‌ಎಸ್‌ ಫೀಡ್‌ನಲ್ಲಿ ಸುದ್ದಿ ಬರುವಂತೆ ಇರಬೇಕು. ಈ ರೀತಿ ಸಂಪೂರ್ಣವಾಗಿ ವೆಬ್‌ಸೈಟ್‌ ಅಡಿಟ್‌ ಮಾಡಿ ನಂತರ ಅರ್ಜಿ ಸಲ್ಲಿಸಿ.

ಗೂಗಲ್‌ ನ್ಯೂಸ್‌ಗೆ ನಿಮ್ಮ ವೆಬ್‌ಸೈಟ್‌ ಸಲ್ಲಿಸುವುದು ಹೇಗೆ?

ಮೊದಲಿಗೆ ಗೂಗಲ್‌ ನ್ಯೂಸ್‌ಗೆ ವೆಬ್‌ಸೈಟ್‌ ಸಲ್ಲಿಸುವ ಪಬ್ಲಿಷರ್‌ ಸೆಂಟರ್‌ ಗೂಗಲ್‌ ನ್ಯೂಸ್‌ ವಿಭಾಗಕ್ಕೆ ಭೇಟಿ ನೀಡಿ. ಆ ಲಿಂಕ್‌ ಅನ್ನು ಈ ಲೇಖನದ ಕೊನೆಗೆ ನೀಡಲಾಗಿದೆ.

  • ಮೊದಲಿಗೆ ಜನರಲ್‌ ವಿಭಾಗದಲ್ಲಿ ನಿಮ್ಮ ವೆಬ್‌ಸೈಟ್‌ ಹೆಸರು ಮತ್ತು ವಿವರಣೆ ಬರೆಯಿರಿ. ಯಾವ ಕೆಟಗರಿಯದ್ದು ಮತ್ತು ಯಾವ ಭಾಷೆಯದ್ದು ಎಂದು ನಮೋದಿಸಿ. ವೆಬ್‌ಸೈಟ್‌ ಪ್ರಾಪರ್ಟಿ ಯುಆರ್‌ಎಲ್‌, ಕಾಂಟ್ಯಾಕ್ಟ್ಸ್‌, ಡಿಸ್ಟ್ರಿಬ್ಯೂಷನ್‌, ಟ್ರ್ಯಾಕಿಂಗ್‌ಗೆ ಗೂಗಲ್‌ ಅನಾಲಿಟಿಕ್ಸ್‌ ಐಡಿ ನಮೂದಿಸಿ.
  • ಕಂಟೆಂಟ್‌ ವಿಭಾಗ ಅತ್ಯಂತ ಮುಖ್ಯವಾದದ್ದು. ಇಲ್ಲಿ ನೀವು ಸೆಕ್ಷನ್‌ ವಿಭಾಗದಲ್ಲಿ ವೆಬ್‌ಸೈಟ್‌ ಫೀಡ್ ಲಿಂಕ್‌ ಮತ್ತು ವಿವಿಧ ಸೆಕ್ಷನ್‌ ಲಿಂಕ್‌ಗಳನ್ನು ಹಾಕಬೇಕು. ಇಲ್ಲಿಂದ ಕಂಟೆಂಟ್‌ ಅನ್ನು ಗೂಗಲ್‌ ಸೆಳೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ಇದು ಅತ್ಯಂತ ಮುಖ್ಯವಾದ ವಿಭಾಗ ಎಂದು ನಾನು ಹೇಳಿದೆ. ಈ ವಿಭಾಗದಲ್ಲಿ ಕಂಟೆಂಟ್‌ ಲೇಬಲ್‌ ಎಂಬ ವಿಭಾಗವಿದ್ದು, ನ್ಯೂಸ್‌ ಅಥವಾ ಬ್ಲಾಗ್‌ ಎಂದು ಕಂಟೆಂಟ್‌ ಲೇಬಲ್‌ಗಳನ್ನು ಆಯ್ಕೆ ಮಾಡಿಕೊಳ್ಳಿರಿ. ಮುಂದೆ ವೇರಿಫೈ ಎಂಬ ಆಯ್ಕೆಯಿದ್ದು, ಸರ್ಚ್‌ ಕನ್ಸೋಲ್‌ ಮೂಲಕ ವೇರಿಫೈ ಮಾಡಿಕೊಳ್ಳಿ.
  • ಮುಂದೆ ನಿಮಗೆ ಇಮೇಜಸ್‌ ಎಂಬ ಆಯ್ಕೆ ದೊರಕುತ್ತದೆ. ಇಲ್ಲಿ ನೀವು ವೆಬ್‌ಸೈಟ್‌ನಲ್ಲಿ ಬಳಸಿರುವ ಲೊಗೊವನ್ನು ಅಪ್ಲೋಡ್‌ ಮಾಡಿಕೊಳ್ಳಬೇಕು. ಸಮಸ್ಯೆ ಏನೆಂದರೆ ಇಲ್ಲಿ ಮೊಬೈಲ್‌ ಮತ್ತು ವೈಡ್‌ ಲೊಗೊಗಳನ್ನು ಹಾಕಬೇಕು. ಮೊಬೈಲ್‌ ಲೋಗೊಗೆ 512 by 512 px ಗಾತ್ರಕ್ಕಿಂತ ಕಡಿಮೆ ಇಲ್ಲದಂತೆ ಲೊಗೊ ಬಳಸಬೇಕು. ವೈಡ್‌ ಲೋಗೊಗೆ 200 px wide and 20 px high ಗಾತ್ರದ ಲೊಗೊ ಬಳಸಬೇಕು. ಇಲ್ಲಿ ನೀವು ಚಿಕ್ಕ ಗಾತ್ರದ ಲೊಗೊ ಬಳಸಿದರೆ ಖಂಡಿತವಾಗಿಯೂ ನಿಮ್ಮ ಅರ್ಜಿ ನಿರಾಕರಿಸಲ್ಪಡುತ್ತದೆ.
  • ಗೂಗಲ್‌ ಎಷ್ಟು ಜಾಹೀರಾತನ್ನು ನಿರ್ವಹಿಸಬೇಕು ಎಂಬ ಆಯ್ಕೆ ಮುಂದೆ ಬರುತ್ತದೆ. ಇಲ್ಲಿ ೩೦ ಪರ್ಸೆಂಟ್‌ ಅಥವಾ ೫೦ ಪರ್ಸೆಂಟ್‌ ಆಯ್ಕೆ ನೀಡಿ. ನಿಮ್ಮ ಇಷ್ಟದ ಎಷ್ಟು ಆಯ್ಕೆಯನ್ನು ನೀಡಬಹುದು.
  • ಸಿಎಸ್‌ಎಸ್‌ ಅಥವಾ ಕೋಡಿಂಗ್‌ ಅನುಭವ ಇಲ್ಲದೆ ಇದ್ದರೆ ಮುಂದಿನ ಅಡ್ವಾನ್ಸಡ್‌ ಹಂತವನ್ನು ಬದಲಾಯಿಸಲು ಹೋಗಬೇಡಿ.
  • ಮುಂದೆ ರಿವ್ಯೂ ಮತ್ತು ಪಬ್ಲಿಷ್‌ ಆಯ್ಕೆ ದೊರಕುತ್ತದೆ. ನಿಮ್ಮ ವೆಬ್‌ಸೈಟ್‌ ಅನ್ನು ಗೂಗಲ್‌ ರಿವ್ಯೂ ಮಾಡುತ್ತದೆ. ಇದಕ್ಕೆ ಕೆಲವು ದಿನ ಬೇಕಾಗುತ್ತದೆ. ಈ ಕುರಿತು ಇಮೇಲ್‌ ಬರಬಹುದು. ಅಥವಾ ಅದರ ಲಿಂಕ್‌ಗೆ ಹೋಗಿ ಭೇಟಿ ನೀಡಬಹುದು.

ಮೊದಲಿಗೆ ನೀವು ಗೂಗಲ್‌ ನ್ಯೂಸ್‌ನಲ್ಲಿ ಕರ್ನಾಟಕ ಬೆಸ್ಟ್‌ ವೆಬ್‌ಸೈಟ್‌ ಅನ್ನು ಫಾಲೊ ಮಾಡಿ.

ಎರಡನೆಯದಾಗಿ ನೀವು ನಿಮ್ಮ ವೆಬ್‌ಸೈಟ್‌ ಅನ್ನು ಗೂಗಲ್‌ ನ್ಯೂಸ್‌ಗೆ ಸಬ್‌ಮಿಟ್‌ ಮಾಡಿ. ಶುಭವಾಗಲಿ. ಈ ಕೆಲಸ ನೀವೇ ಮಾಡಿ. ನನಗೆ ಸದ್ಯ ಸಮಯದ ಅಭಾವ ಇದೆ. ಅಥವಾ ಈ ಸೇವೆಯನ್ನು ಕರ್ನಾಟಕ ಬೆಸ್ಟ್‌ ಮೂಲಕ ಖರೀದಿಸಬಹುದು (ವಿವರ ಶೀಘ್ರದಲ್ಲಿ ನೀಡುವೆ). ಅರ್ಜಿ ಸಲ್ಲಿಸಲು ಮತ್ತು ನಿಮ್ಮ ವೆಬ್‌ಸೈಟ್‌ ಅಡಿಟ್‌ ಮಾಡಲು ಸುಮಾರು ಕನಿಷ್ಠ ೧ ಗಂಟೆ ಬೇಕಿರುತ್ತದೆ. ಹೀಗಾಗಿ ಇದು ಪೆಯ್ಡ್‌ ಸರ್ವೀಸ್‌. ಹಣ ಕೊಡುವುದಕ್ಕಿಂತ ನೀವೇ ಮಾಡಿಕೊಂಡರೆ ನಿಮ್ಮ ಕಿಸೆಗೆ ಉಳಿತಾಯ.  

ಪಬ್ಲಿಷರ್‌ ಸೆಂಟರ್‌ ಗೂಗಲ್‌ ನ್ಯೂಸ್‌ ಕೊಂಡಿ:

Leave a Reply

Your email address will not be published. Required fields are marked *