ವೆಬ್ ಡಿಸೈನರ್ ಅಥವಾ ಡೆವಲಪರ್ ಮಾತುಗಳನ್ನು ಗಂಭೀರವಾಗಿ ಕೇಳುವ ಅಗತ್ಯವಿದೆಯೇ?

By | 13/12/2020

ಈಗಿನ ಕಾಲದಲ್ಲಿ ಯೂಟ್ಯೂಬ್‌ ಅಥವಾ ಇನ್ಯಾವುದೋ ಮಾಧ್ಯಮದ ಸಹಾಯದಿಂದ ಬೇಸಿಕ್‌ ವೆಬ್‌ಡಿಸೈನಿಂಗ್‌ ತಂತ್ರವನ್ನು ಕಲಿಯಬಹುದು (ಕಲಿಯುವ ಆಸಕ್ತಿಯಿದ್ದರೆ ಮಾತ್ರ). ಇಂತಹ ಸಮಯದಲ್ಲಿ ವೆಬ್‌ಡಿಸೈನರ್‌ ಮೂಲಕ ಸಿದ್ಧಪಡಿಸಿಕೊಂಡ ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರಯೋಗ ಮಾಡಲು ನಿಮಗೆ ಆಸಕ್ತಿ ಮೂಡಬಹುದು. ಆದರೆ, ಕಲಿಯುವ ಉದ್ದೇಶವಿದ್ದರೆ ಪ್ರತ್ಯೇಕ ಹೋಸ್ಟಿಂಗ್‌ ತೆಗೆದುಕೊಂಡು ಕಲಿಯುವುದು ಒಳ್ಳೆಯದು. ಅಥವಾ ಲೋಕಲ್‌ ಹೋಸ್ಟ್‌ ಮೂಲಕ ಪ್ರಯತ್ನಿಸಬಹುದು.

ಈ ಲೇಖನದಲ್ಲಿ ಚರ್ಚಿಸಲು ಉದ್ದೇಶಿಸಿರುವ ವಿಷಯ ಇದಲ್ಲ. ಈಗಾಗಲೇ ಹತ್ತು ಹಲವು ವೆಬ್‌ಸೈಟ್‌ಗಳನ್ನು ಕರ್ನಾಟಕ ಬೆಸ್ಟ್‌ ಫ್ರಿಲ್ಯಾನ್ಸಿಂಗ್‌ ಮೂಲಕ ಮಾಡಿರುವುದರಿಂದ ವೈವಿಧ್ಯಮಯ ಜನರ ಪರಿಚಯವಾಗಿದೆ. ಹೊಸ ಪರಿಚಯ ಹರುಷ ತರುವ ವಿಷಯವೇ ಹೌದು. ನಾನು ವೆಬ್‌ಸೈಟ್‌ ಸಿದ್ಧಪಡಿಸಿದ ಬಳಿಕ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿಯೇ ನೀಡುತ್ತೇನೆ. ಇಲ್ಲವಾದರೆ ಕರ್ನಾಟಕ ಬೆಸ್ಟ್‌ ವೆಬ್‌ ಗೈಡ್‌ಗಳ ಮೂಲಕ ಈ ವೆಬ್‌ಸೈಟ್‌ನಲ್ಲಿ ಸಲಹೆಗಳನ್ನು ನೀಡಿರುತ್ತೇನೆ. ಆದರೆ, ಇವುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎನ್ನುವ ಪ್ರಶ್ನೆಗೆ ಉತ್ತರಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ.

ಆರೋಗ್ಯ ಸರಿಯಿಲ್ಲದೆ ಇರುವಾಗ ಡಾಕ್ಟರ್‌ ಬಳಿಗೆ ಹೋಗಬೇಕೆ? ನೀವೇ ಮೆಡಿಕಲ್‌ಗೆ ಹೋಗಿ ಮದ್ದು ತರಬಹುದೇ? ಕೆಲವೊಂದು ಸಂದರ್ಭಗಳಲ್ಲಿ ನಾವಾಗಿಯೇ ಮೆಡಿಕಲ್‌ನಿಂದ ತಂದ ಮಾತ್ರೆಯಿಂದ ಗುಣವಾಗಬಹುದು. ಆದರೆ, ಡಾಕ್ಟರ್ ಸಮಲೋಚನೆ ಇಲ್ಲದೆ ತಂದರೆ ಅಡ್ಡಪರಿಣಾಮಗಳೂ ಉಂಟಾಗಬಹುದು. ಕೆಲವೊಮ್ಮೆ ಪರಿಣಾಮ ಭೀಕರವೂ ಆಗಬಹುದು. ಇದೇ ರೀತಿ ವೆಬ್‌ ಡಿಸೈನರ್‌ ಮತ್ತು ಡೆವಲಪರ್‌ಗಳ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ ಎನ್ನುವುದು ಮೊದಲ ಕೋರಿಕೆ.

ಈ ವಿಷಯದ ಗಂಭೀರತೆ ತಿಳಿಯಬೇಕಾದರೆ ನೀವು ಈ ಲೇಖನವನ್ನು ಕೊನೆಯವರೆಗೆ ಓದಲೇಬೇಕು.

ಪಕ್ಕದ ಮನೆಯವನ ಹೆಂಡತಿ ಚೆನ್ನಾಗಿ ಕಾಣಿಸಬಹುದು!

ಕೆಲವೊಮ್ಮೆ ನಮಗೆ ನಮ್ಮ ಹೆಂಡತಿಗಿಂತ ಬೇರೆಯವರ ಹೆಂಡತಿ ಚೆನ್ನಾಗಿ ಕಾಣುತ್ತಾರೆ. ವೆಬ್‌ಸೈಟ್‌ ವಿಷಯದಲ್ಲಿಯೂ ಹಾಗೆಯೇ. ಒಮ್ಮೆ ಕನಸಿನ ವೆಬ್‌ಸೈಟ್‌ ಕೈಗೆ ಸಿಕ್ಕ ಬಳಿಕ ಕೆಲವು ದಿನಗಳ ಬಳಿಕ ಬೇರೆ ವೆಬ್ಸೈಟ್‌ಗೆ ಇಣುಕುವುದು ಹೆಚ್ಚಾಗುತ್ತದೆ. ನಮಗಿಂತ ಅವರ ವೆಬ್ಸೈಟ್‌ ಚೆನ್ನಾಗಿದೆ ಎನಿಸಲಾರಂಭಿಸುತ್ತದೆ. ಪಕ್ಕದ ಮನೆಯವರು ಕಾರು ತಂದರೆ ನಮ್ಮನೆಯಲ್ಲಿಯೂ ಕಾರು ಬೇಕೆನಿಸುತ್ತದೆ. ಇದೇ ರೀತಿ ಬೇರೊಬ್ಬರ ವೆಬ್ಸೈಟ್‌ನಲ್ಲಿ ವಾಟ್ಸಪ್‌ ಬಟನ್‌ ಇದ್ದರೆ ನಮ್ಮ ವೆಬ್‌ನಲ್ಲಿ ಬೇಕೆನಿಸುತ್ತದೆ. ಬೇರೊಬ್ಬರು ವೆಬ್‌ಸೈಟ್‌ನಲ್ಲಿ ವಿಡಿಯೋ ಜಾಹೀರಾತುಗಳನ್ನು ಹಾಕಿದ್ದರೆ ನಮಗೂ ಅದನ್ನೇ ಹಾಕಬೇಕೆನಿಸುತ್ತದೆ. ಮತ್ತೊಬ್ಬರು ಪಾಪಪ್‌ ಜಾಹೀರಾತು ಹಾಕಿದ್ದರೆ ಅದೂ ನಮಗೂ ಬೇಕೆನಿಸುತ್ತದೆ. ಆ ವೆಬ್‌ಸೈಟ್‌ನಲ್ಲಿ ಇರುವ ಫೀಚರ್‌ಗಳೆಲ್ಲ ನಿಮಗೂ ಬೇಕೆನಿಸಬಹುದು.

ಈ ರೀತಿ ಕೇಳಿದರೆ ಕೆಲವೊಮ್ಮೆ ನಾನಂತು “ಆಗುವುದಿಲ್ಲ’’ ಎನ್ನುತ್ತೇನೆ. ಆದರೆ, ಅದನ್ನು ಕೆಲವರು “ಇವನ ಕೈಲಾಗುವುದಿಲ್ಲ’’ ಎಂದು ತಿಳಿದುಕೊಳ್ಳುತ್ತಾರೆ. ಕೆಲವು ಈ ರೀತಿ ತಿಳಿದುಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ನಾನೂ ಆ ಫೀಚರ್‌ಗಳನ್ನು “ಅನಿವಾರ್ಯವಾಗಿ’’ ಹಾಕಿ ಕೊಡಬೇಕಾಗುತ್ತದೆ. ಆದರೆ, ಅದನ್ನು ಹಾಕೋದು ಬೇಡ ಎಂದು ನಾನು ಹೇಳಿದಾಗ ದಯವಿಟ್ಟು ಅದನ್ನು ಗಂಭೀರ ಎಚ್ಚರಿಕೆಯೆಂದೇ ತಿಳಿಯಿರಿ!

ಸಮಸ್ಯೆ ಏನು?: ಪ್ರತಿಯೊಂದು ವೆಬ್‌ಸೈಟ್‌ ಬೇರೆಯೇ ರೀತಿ ರಚಿಸಲಾಗಿರುತ್ತದೆ. ನಿಮ್ಮ ವೆಬ್ಸೈಟ್‌ಗೆ ಬಳಸಿದ ಥೀಮ್‌ಗೂ ಮತ್ತೊಂದರ ಥೀಮ್‌ಗೂ ವ್ಯತ್ಯಾಸ ಇರುತ್ತದೆ. ಅದರ ಕೋರ್‌ ಫೈಲ್‌ಗಳು, ಕೋಡ್‌ಗಳಲ್ಲಿ ವ್ಯತ್ಯಾಸವಿರುತ್ತವೆ. ಈಗ ನಿಮ್ಮ ವೆಬ್‌ಸೈಟ್‌ಗೆ ಬಳಸಿದ ಪ್ರೀಮಿಯಂ ಥೀಮ್‌ಗೆ ಮತ್ತೊಂದು ಯಾರೋ ಮಾಡಿರುವ ಪ್ಲಗಿನ್‌ ಹಾಕಿದರೆ ವೆಬ್‌ಸೈಟ್‌ ಫರ್ಮಾಮೆನ್ಸ್‌ಗೆ ಹಾನಿಯಾಗುತ್ತದೆ.

ಎಲ್ಲಾ ಪ್ಲಗಿನ್‌ಗಳು ಸರಿಯಾಗಿ ಕೋಡಿಂಗ್‌ ಮಾಡಲಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಒಂದು ಬಾರಿ ಸರಿಯಾಗಿ ಕೋಡಿಂಗ್‌ ಮಾಡಿದ್ದರೂ, ತಿಂಗಳಿಗೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ಅಪ್‌ಡೇಟ್‌ ಆಗುವ ವರ್ಡ್‌ಪ್ರೆಸ್‌ಗೆ ತಕ್ಕಂತೆ ಅದನ್ನು ಮಾರ್ಪಾಡಿಸಲಾಗಿದೆಯೇ ಎಂದು ಖಚಿತವಿರುವುದಿಲ್ಲ. ನಿಮ್ಮ ಮೊಬೈಲ್‌ನಲ್ಲಿ ಆಪ್‌ಗಳು ಹೇಗೆ ಅಪ್‌ಡೇಟ್‌ ಆಗುತ್ತವೆಯೋ ಅದೇ ರೀತಿ ಥೀಮ್‌ಗಳು, ಪ್ಲಗಿನ್‌ಗಳು ಅಪ್‌ಡೇಟ್‌ ಆಗುತ್ತಿರಬೇಕು, ಆಗಲೇಬೇಕು. ಆದರೆ, ಎಂದೋ ಮಾಡಿದ ಯಾವುದೋ ಪ್ಲಗಿನ್‌ ಆಮೇಲೆ ಅಪ್‌ಡೇಟ್‌ ಆಗದೆ ಇದ್ದರೆ ಅದು ನಿಮ್ಮ ವೆಬ್‌ಸೈಟ್‌ಗೆ ಹಾನಿ ಉಂಟು ಮಾಡಬಲ್ಲದು. ಮತ್ತೊಬ್ಬರು ಇಂತಹ ತೊಂದರೆ ಗಮನಿಸದೆ ವೆಬ್‌ಸೈಟ್‌ಗೆ ಆ ಫೀಚರ್ ಹಾಕಿರಬಹುದು. ಹೀಗಾಗಿ ನಾನು ಆ ಫೀಚರ್‌ ಬೇಡ ಎಂದರೆ ಇಂತಹ ಹಲವು ಕಾರಣಗಳು ಇರುತ್ತದೆ, ನನ್ನಿಂದ ಹಾಕಿಕೊಡಲು ಸಾಧ್ಯವಿಲ್ಲವೆಂದಲ್ಲ.

ಬ್ಯಾಕಪ್‌ ತೆಗೆದುಕೊಳ್ಳುವುದಿಲ್ಲ, ಏನಾಗುತ್ತದೆ?

ಗೋಡ್ಯಾಡಿ ಅಥವಾ ಇನ್ಯಾವುದೋ ತಾಣದಿಂದ ಹೋಸ್ಟಿಂಗ್‌, ಡೊಮೈನ್‌ ತೆಗೆದುಕೊಂಡಿದ್ದೀರಿ ಎಂದಿರಲಿ. ಆ ಹೋಸ್ಟಿಂಗ್‌ಗೆ ಬೇಕಾದ ಸಾಫ್ಟ್‌ವೇರ್‌ ಇನ್‌ಸ್ಟಾಲ್‌ ನೀವೇ ಮಾಡಬೇಕು. ಕನಿಷ್ಠ ನೇಮ್‌ ಸರ್ವರ್‌ ಬದಲಾವಣೆಯನ್ನೂ ನೀವೇ ಮಾಡಬೇಕು. ಆದರೆ, ಟಿಂಟುಹೋಸ್ಟ್‌.ಕಾಂ ಮೂಲಕ ಖರೀದಿಸಿದವರಿಗೆ ನೇಮ್‌ ಸರ್ವರ್‌ ಬದಲಾಯಿಸುವುದು, ಉಚಿತ ಎಸ್‌ಎಸ್‌ಎಲ್‌ ಸರ್ಟಿಫಿಕೇಟ್‌ ಕನೆಕ್ಟ್‌ ಮಾಡಿಕೊಡುವುದು, ಡೇಟಾಬೇಸ್‌ ರಚಿಸುವುದು, ಕೊನೆಗೆ ವರ್ಡ್‌ಪ್ರೆಸ್‌ ಇನ್‌ಸ್ಟಾಲ್‌ ಮಾಡಿಕೊಡುವುದು ಸೇರಿದಂತೆ ಸರ್ವರ್‌ ಕಡೆಯ ಎಲ್ಲಾ ಕೆಲಸಗಳನ್ನು ಬಹುತೇಕ ಉಚಿತವಾಗಿಯೇ ಮಾಡಿಕೊಡಲಾಗುತ್ತದೆ. ಈ ಹಂತದಲ್ಲಿ ಏನಾದರೂ ತಪ್ಪಾದರೆ ವೆಬ್‌ಸೈಟ್‌ನಲ್ಲಿ ತೊಂದರೆ ಕಾಡುತ್ತಿರುತ್ತದೆ. ಹೀಗಾಗಿ, ಇದು ಅತ್ಯಂತ ಜತನವಾಗಿ ಮಾಡಬೇಕಾದ ಕೆಲಸ. ಈ ರೀತಿ ನಾನೊಂದು ನೂರು ವೆಬ್‌ಸೈಟ್‌ ಮಾಡಿದೆ ಎಂದಿರಲಿ. ಆದರೆ, ಆ ತಿಂಗಳಿಗೊಮ್ಮೆ ಎಲ್ಲರ ಖಾತೆಗೆ ಲಾಗಿನ್‌ ಆಗಿ ಬ್ಯಾಕಪ್‌ ತೆಗೆದುಕೊಳ್ಳುವುದು ನನ್ನಿಂದ ಸಾಧ್ಯವಿಲ್ಲ. ಅದು ನನ್ನ ಕೆಲಸವೂ ಅಲ್ಲ. ಅದಕ್ಕಾಗಿ ಬ್ಯಾಕಪ್‌ ತೆಗೆದುಕೊಳ್ಳಿ ಎಂದು ಎಲ್ಲರಲ್ಲಿಯೂ ಹೇಳುತ್ತ ಇರುತ್ತೇನೆ. ಆದರೆ, ನಿಮ್ಮಲ್ಲಿ ಎಷ್ಟು ಜನರು ಬ್ಯಾಕಪ್‌ ತೆಗೆದುಕೊಂಡಿದ್ದೀರಾ? ಇದು ಕರ್ನಾಟಕ ಬೆಸ್ಟ್‌ ಹೊರತುಪಡಿಸಿದ ಇತರೆ ಓದುಗರಲ್ಲಿಯೂ ವೆಬ್‌ಸೈಟ್‌ ಇದ್ದರೆ ಕೇಳಿಕೊಳ್ಳಬೇಕಾದ ಪ್ರಶ್ನೆ.

ಎಲ್ಲೋ ಈ ಟೆಕ್‌ ಜಗತ್ತಿನಲ್ಲಿ ಏನೋ ಸಂಭವಿಸಿ ಒಂದಿಷ್ಟು ವೆಬ್ಸೈಟ್‌ಗಳು ಸರ್ವನಾಶವಾದವು ಎಂದಿರಲಿ. ಹೋಸ್ಟಿಂಗ್‌ ಖರೀದಿಸಿರುವ ಕಾರಣ ನನ್ನಲ್ಲಿ ಆ ಹೋಸ್ಟಿಂಗ್‌ ಹಾಗೆಯೇ ಇರುತ್ತದೆ. ಆದರೆ, ಅದರೊಳಗಿರುವ ಫೈಲ್‌ಗಳ ಜವಾಬ್ದಾರಿ ನಿಮ್ಮದು ಆಗಿರುತ್ತದೆ. ವೆಬ್‌ಸೈಟ್‌ಗೆ ಎಲ್ಲಾದರೂ ಹಾನಿಯಾದರೆ ಈ ಬ್ಯಾಕಪ್‌ ಫೈಲ್‌ಗಳ ಮೂಲಕ ಮತ್ತೆ ಜೋಡಿಸಿಕೊಳ್ಳಬಹುದು. ಆಟೋಮ್ಯಾಟಿಕ್‌ ಬ್ಯಾಕಪ್‌ ತೆಗೆದುಕೊಳ್ಳುವ ಸಾಫ್ಟ್‌ವೇರ್‌ಗಳು ಇದೆ. ಅದನ್ನು ಈ ಲಿಂಕ್‌ ಮೂಲಕ ಖರೀದಿಸಬಹುದು. ಆದರೆ, ನ್ಯೂಸ್‌ ವೆಬ್‌ಸೈಟ್‌ನಲ್ಲಿ ನೀವು ರಚಿಸುವ ಅಷ್ಟೊಂದು ಪುಟಗಳ ಬ್ಯಾಕಪ್‌ ತೆಗೆದುಕೊಳ್ಳುವುದು ತುಂಬಾ ದುಬಾರಿ. ಅದಕ್ಕಿಂತ ಸುಲಭವಾಗಿ ನೀವೇ ಮಾಡಬಹುದಾದ ಬ್ಯಾಕಪ್‌ ದಾರಿಯನ್ನೇ ಅನುಸರಿಸಿ. ಬೇಕಿದ್ದರೆ ಬ್ಯಾಕಪ್‌ ತೆಗೆದುಕೊಳ್ಳುವುದು ಹೇಗೆ ಎನ್ನುವ ಲೇಖನವನ್ನು ಇನ್ನೊಮ್ಮೆ ಓದಿ.

ಇಮೇಜ್‌ ಗಾತ್ರದ ಬಗ್ಗೆ ಸ್ಪಷ್ಟತೆ ಇರಲಿ

ಡಿಎಸ್‌ಎಲ್‌ಆರ್‌ ಕ್ಯಾಮೆರಾದಲ್ಲಿ ತೆಗೆದ ಫೋಟೊವನ್ನು ನೇರವಾಗಿ ಅಪ್ಲೋಡ್‌ ಮಾಡಬೇಡಿ ಎಂದು ಎಲ್ಲರಲ್ಲಿಯೂ ಹೇಳುತ್ತೇನೆ. ಈಗಿನ ಮೊಬೈಲ್‌ನಲ್ಲಿ ತೆಗೆದ ಫೋಟೊಗಳೂ ಹೆವಿ ಇರುತ್ತವೆ. ಹೀಗಾಗಿ ಇವುಗಳ ಗಾತ್ರವನ್ನು 1000x 6000 ಮಾಡಿಕೊಳ್ಳಿ. ಅದಕ್ಕಿಂತ ಹೆಚ್ಚಿನ ಗಾತ್ರ ಬೇಡ. ಆದರೆ, ಈ ಹಿತವಚನ ಕಿವಿಗೆ ಹಾಕಿಕೊಳ್ಳದೆ ಒಂದಿಷ್ಟು ತಿಂಗಳು ಕಳೆದ ಬಳಿಕ ವೆಬ್‌ಸೈಟ್‌ ಪರ್ಫಾಮೆನ್ಸ್‌ ಬಗ್ಗೆ ತಲೆಕೆಡಿಸಿಕೊಂಡರೆ ಏನು ಪ್ರಯೋಜನ. ನಾವು ಅನ್‌ಲಿಮಿಟೆಡ್‌ ಹೋಸ್ಟೀಂಗ್‌ ಖರೀದಿಸಿದ್ದೇವೆ, ಏನೂ ಬೇಕಾದರೂ ಮಾಡುತ್ತೇವೆ, ಎಷ್ಟು ದೊಡ್ಡ ಫೋಟೊ ಬೇಕಾದರೂ ಹಾಕುತ್ತೇವೆ ಎಂದುಕೊಂಡರೆ ಅದರಿಂದ ನಿಮಗೇ ತೊಂದರೆ. ಹೀಗಾಗಿ ವೆಬ್‌ ಡಿಸೈನರ್‌ಗಳು ಹೇಳುವ ಫೈಲ್‌ ಗಾತ್ರವನ್ನು ಅನುಸರಿಸಿ.

ಡಿಸೈನ್‌ ಆಗಾಗ ಮಾರ್ಪಾಡು ಮಾಡಬೇಡಿ

ಹೊಸ ಥೀಮ್‌ ಖರೀದಿಸಲು ಸುಮಾರು ಐದು ಸಾವಿರ ರೂ. ಬೇಕಾಗಬಹುದು. ಆದರೆ, ಅದನ್ನು ಮರುಜೋಡಿಸಲು ಹೊಸ ವೆಬ್‌ಸೈಟ್‌ಗಿಂತ ಹೆಚ್ಚು ಕೆಲಸ ಮತ್ತು ಸಮಯ ಬೇಕಾಗುತ್ತದೆ. ಹೀಗಾಗಿ ಮರುವಿನ್ಯಾಸಕ್ಕೆ ೨೦ ಸಾವಿರ ರೂಪಾಯಿ ಬೇಕಾದರೂ ಕೇಳಬಹುದು. ಆದರೆ, ನಾನು ಈ ಸೇವೆಯನ್ನು ಐದು ಸಾವಿರ ರೂ.ಗೆ ಮಾಡಿಕೊಡುತ್ತ ಬಂದಿದ್ದೇನೆ.(ಥೀಮ್‌ ದರವನ್ನು ನೀವೇ ಪ್ರತ್ಯೇಕವಾಗಹಿ ಖರೀದಿಸಬೇಕು). ಐದು ಸಾವಿರಕ್ಕೆ ಮರುವಿನ್ಯಾಸ ಮಾಡಿಕೊಳ್ಳಲು ಬಯಸುವವರು ಈ ಲಿಂಕ್‌ ಮೂಲಕ ಆ ಸೇವೆಯನ್ನು ಖರೀದಿಸಬಹುದು. ಈ ಸೇವೆ ಪಡೆಯದೆ ಎಲ್ಲಾದರೂ ನೀವು ಇರುವ ಥೀಮ್‌ನಲ್ಲಿಯೇ ಏನಾದರೂ ಬದಲಾವಣೆ ಬಯಸಿದರೆ ಅದನ್ನೂ ಮಾಡಿಕೊಡಲಾಗುತ್ತದೆ. ಅದಕ್ಕೂ ಇದೇ ಸೇವೆ ಖರೀದಿಸಬೇಕು.

ಈ ವಿಷಯಕ್ಕೂ ಈ ಲೇಖನಕ್ಕೂ ಏನು ಸಂಬಂಧ ಎಂದು ನೀವು ಕೇಳಬಹುದು. ಕೆಲವರು ಒಮ್ಮೆ ಥೀಮ್‌ ಖರೀದಿಸಿದ ಬಳಿಕ ಹಲವು ಬಾರಿ ವಿನ್ಯಾಸವನ್ನು ಬದಲಾಯಿಸಿಕೊಳ್ಳುತ್ತಾರೆ. ಈ ರೀತಿ ಮಾಡಬೇಕಾದರೆ ನಾವು ಮತ್ತೆಮತ್ತೆ ಹೊಸ ಟೆಂಪ್ಲೆಟ್‌ಗಳನ್ನು ರಚಿಸಬೇಕಾಗುತ್ತದೆ. ಇದರಿಂದ ವೆಬ್‌ಸೈಟ್‌ನಲ್ಲಿ ಅನಗತ್ಯ ಟೆಂಪ್ಲೆಟ್‌ಗಳು ಸೃಷ್ಟಿಯಾಗುತ್ತವೆ. ಕೆಲವೊಮ್ಮೆ ಅವುಗಳನ್ನು ಡಿಲೀಟ್‌ ಮಾಡಿದರೂ ಕ್ಯಾಚಿ ರೂಪದಲ್ಲಿ ಅವು ಬೇರೆಲ್ಲೋ ಇರಬಹುದು. ಅದು ಆಗಾಗ ತೊಂದರೆ ಕೊಡುತ್ತ ಇರಬಹುದು. ಹೀಗಾಗಿ, ದಿನಕ್ಕೊಂದು ಬದಲಾವಣೆ ಹೇಳುವುದಕ್ಕಿಂತ ಒಂದೇ ಬಾರಿ ಸ್ಪಷ್ಟವಾಗಿ ಮಾಹಿತಿ ನೀಡಿ ವಿನ್ಯಾಸ ಮಾಡಿಕೊಂಡರೆ ಒಳ್ಳೆಯದು. ಇದೇ ಕಾರಣಕ್ಕೆ ವೆಬ್‌ ಡಿಸೈನರ್‌ಗಳು ಡಿಸೈನ್‌ ಕೆಲಸಕ್ಕೆ ೫೦ ಸಾವಿರ, ೮೦ ಸಾವಿರವೆಂದು ಕೇಳುತ್ತಾರೆ. ಪ್ರತಿ ಬದಲಾವಣೆ ಬಯಸಿದರೂ ಅದಕ್ಕೊಂದು ಹೆಚ್ಚುವರಿ ಶುಲ್ಕ ವಿಧಿಸುತ್ತಾರೆ. ಯಾಕೆಂದರೆ, ಒಂದು ಪುಟ್ಟ ಬದಲಾವಣೆ ಮಾಡಲು ಹೆಚ್ಚು ಶ್ರಮ, ಸಮಯ ಬೇಕಾಗುತ್ತದೆ. ಹೀಗಾಗಿ, ವಿನ್ಯಾಸದ ಕುರಿತು ಮೊದಲೇ ಸ್ಪಷ್ಟತೆ ಇರಲಿ.

ಪ್ಲಗಿನ್‌ ನೀವೇ ಹಾಕಿಕೊಳ್ಳುವಿರಾ?

ವರ್ಡ್‌ಪ್ರೆಸ್‌ ಕಲಿಯದೆ ನೀವೇ ಯಾವುದಾದರೂ ಪ್ಲಗಿನ್‌ ಹಾಕಿಕೊಳ್ಳಲು ಉದ್ದೇಶಿಸಿದ್ದೀರಾ? ಆದರೆ, ನೀವು ಈ ರೀತಿ ಮಾಡಬೇಡಿ ಎಂದು ವೆಬ್‌ ಡಿಸೈನರ್‌ ಹೇಳಬಹುದು. ಆದರೆ, ಅದನ್ನು ನೀವು ಗಂಭೀರವಾಗಿ ತೆಗೆದುಕೊಳ್ಳದೆ ಒಂದು ಪ್ಲಗಿನ್‌ ಆಕ್ಟಿವೇಟ್‌ ಮಾಡಿಬಿಡಬಹುದು. ಈ ಕಡೆ ನೋಡಿದರೆ ವೆಬ್ಸೈಟ್‌ (ಅಪರೂಪಕ್ಕೆ )ನಲ್ಲಿ ಯಾವುದೋ ಕ್ರೂಷಿಯಲ್‌ ಸರ್ವರ್‌ ಎರರ್‌ ಮೆಸೆಜ್‌ ಕಾಣಿಸಬಹುದು. ಮತ್ತೆ ವೆಬ್‌ ರಿಪೇರಿ ಮಾಡಬೇಕಾದರೆ ಕೆಲಸ ಎಷ್ಟು ಇದೆ ಎಂಬ ಅರಿವು ನಿಮಗೆ ಇಲ್ಲದೆ ಇರಬಹುದು. ಬ್ಯಾಕಪ್‌ ಇಲ್ಲದೆ ಇದ್ದರಂತೂ ಸಾಕಷ್ಟು ತೊಂದರೆ ಅನುಭವಿಸಬೇಕಾಗಬಹುದು. ವರ್ಡ್‌ಪ್ರೆಸ್‌ನಲ್ಲಿರುವ ಪ್ಲಗಿನ್‌ಗಳಲ್ಲಿ ಎಲ್ಲವೂ ಸರಿಯಾಗಿ ಕೋಡಿಂಗ್‌ ಬರೆದಿರುವುದಲ್ಲ, ಅಲ್ಲಿ ಸಾಕಷ್ಟು ಜಳ್ಳುಗಳು ಇರುತ್ತವೆ. ನಾವು ಯಾವುದೇ ಪ್ಲಗಿನ್‌ಗಳನ್ನು ಹಾಕುವ ಮೊದಲು ಲೋಕಲ್‌ ಹೋಸ್ಟ್‌ನಲ್ಲಿ ಟೆಸ್ಟ್‌ ಮಾಡುತ್ತೇವೆ. ಮತ್ತೆ ನಿಮ್ಮ ವೆಬ್‌ಸೈಟ್‌ನಲ್ಲಿರುವ ಥೀಮ್‌ ಸೆಟ್ಟಿಂಗ್‌ಗೂ, ನೀವು ಹಾಕಿರುವ ಪ್ಲಗಿನ್‌ಗೂ “ಹೊಂದಾಣಿಕೆಯ ಕೊರತೆಯೂ’ ಇರಬಹುದು. ಇದರಿಂದ ತೊಂದರೆ ಆದರೆ ಸರಿಪಡಿಸುವುದು “ವೆಚ್ಚದಾಯಕ’’.

ಹೀಗಾಗಿ, ಡಾಕ್ಟರ್‌ ಬಳಿ ಹೋಗಿ ಔಷಧಿ ತೆಗೆದುಕೊಳ್ಳುವುದಕ್ಕೂ ನೀವು ಗೂಗಲ್‌ನಲ್ಲಿ ಹುಡುಕಿ ಜ್ವರಕ್ಕೆ ಮಾತ್ರೆಯನ್ನು ಮೆಡಿಕಲ್‌ನಲ್ಲಿ ತೆಗೆದುಕೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಇದರ ಬದಲು ನೀವು ಬೇರೆ ಹೋಸ್ಟಿಂಗ್‌ನಲ್ಲಿ ಸರಿಯಾಗಿ ಕಲಿತು, ಬಳಿಕ ಅಳವಡಿಸಿಕೊಳ್ಳಬಹುದು. ಕಲಿಕೆ ಎಂದರೆ ಒಂದೆರಡು ತಿಂಗಳು ಆಗುವುದಲ್ಲ. ನಾನು ಇತರರಿಗೆ ವೆಬ್‌ಸೈಟ್‌ ಮಾಡಿಕೊಡುವ ಧೈರ್ಯ ಮಾಡಿದ್ದು, ಸುಮಾರು ೮ ವರ್ಷಗಳ ಅನುಭವ, ಪ್ರಯೋಗಗಳಿಂದ. ಯಾಕೆಂದರೆ ಸರ್ವರ್‌ಗಳು ಕೊಡುವಷ್ಟು ಕಾಟ ಬೇರೆ ಯಾರೂ ನೀಡುವುದಿಲ್ಲ. ಇವುಗಳನ್ನೆಲ್ಲ ಅನುಭವಿಸಿಯೇ ಕಲಿಯಬೇಕು. ಹೀಗಾಗಿ, ಸ್ವಯಂ ಡಾಕ್ಟರ್‌ ಆಗುವ ಮೊದಲು ಸಮಲೋಚನೆ ಮಾಡಿಕೊಳ್ಳಿ.

ವೆಬ್‌ಸೈಟ್‌ ಸುರಕ್ಷತೆ, ವೆಬ್‌ಸೈಟ್‌ ಸ್ಟ್ರಕ್ಚರ್‌ ಹಾಳುಮಾಡಿದರೆ ದೀರ್ಘಕಾಲದ ತೊಂದರೆಗಳು, ಅಡ್ಡಪರಿಣಾಮಗಳು ಕಾಡುತ್ತಿರುತ್ತವೆ. ಮೆಡಿಕಲ್‌ನಲ್ಲಿ ತೆಗೆದುಕೊಂಡ ಔಷಧಿಯಂತೆ.

ವೆಬ್‌ಸೈಟ್‌ ಗೈಡ್‌ನ ಇತರೆ ಲೇಖನಗಳು ಇಲ್ಲಿವೆ.

Leave a Reply

Your email address will not be published. Required fields are marked *