ಬೆಸ್ಟ್ ತುಳು ಸಿನಿಮಾ: ಕಾಡುವ “ಪಡ್ಡಾಯಿ” ಕಡಲು

paddayi tulu movie

ಗಿರಿರಾಜ್ ನಿರ್ದೇಶನದ “ಸುಗಂಧದ ಸೀಮೆಯಾಚೆ” ನೋಡಿದಾಗ ಅದರಲ್ಲಿ ಸುಗಂಧ(ಸೆಂಟ್)ವನ್ನು ಬಳಸಿಕೊಂಡ ರೀತಿ ತುಂಬಾ ಇಷ್ಟವಾಗಿತ್ತು. ಅಲ್ಲಿ ಅತ್ತರಿನ ಪರಿಮಳದ ಸುತ್ತ ನೆತ್ತರಿನ ಕಲೆಯಿತ್ತು. ಆದರೆ, ಬೆಂಗಳೂರಿನ ಇತ್ತೀಚೆಗೆ (ಬೆಂಗಳೂರಿನಲ್ಲಿರುವುದರಿಂದ ನೋಡುವುದು ತಡವಾಯಿತು) ಸುಚಿತ್ರಾ ಸಿನಿಮಾದಲ್ಲಿ ನೋಡಿದ ತುಳು ಸಿನಿಮಾ “ಪಡ್ಡಾಯಿ”ಯಲ್ಲಿಯೂ ಮೀನಿನ ಬೆವರಿನ ಜೊತೆಗೆ ಅತ್ತರಿನ ಘಾಟು ಇತ್ತು.

ಮಾಧವ ಮೀನು ಹಿಡಿಯುವಲ್ಲಿ ಪರಿಣಿತ. ಆತನಿಗೆ ಕಡಲ ಗುಳಿಗ ಎಂಬ ಹೆಸರೂ ಇದೆ. ಆತ ನೀರಿನಲ್ಲಿ ಮೀನುಗಳ ಜಾಡು ಹಿಡಿದು ಬಲೆ ಬೀಸುವಲ್ಲಿ ಸಾಕಷ್ಟು ಪರಿಣಿತ ಎಂಬ ಕಾರಣಕ್ಕೆ ಈ ಹೆಸರು. ಈತ ಈ ಸಿನಿಮಾದ ಹೀರೋ (ವಿಲನ್ ಸಹ ಹೌದು). ಗುಳಿಗ ಎಂದರೆ ತುಳುನಾಡಿನ ಕಾರಣಿಕದ ದೈವ. ಗುಳಿಗ ನೃತ್ಯವನ್ನು ನೋಡಲು ಬಯಸುವಿರಾದರೆ ಕರ್ನಾಟಕ ಬೆಸ್ಟ್ ನ ಈ ಲಿಂಕ್ ಗೆ ಪ್ರವೇಶಿಸಬಹುದು.

ಕಡಲ ಗುಳಿಗ “ಮಾಧವ” ಮತ್ತು ಸೆಂಟಿನ ಸುವಾಸನೆಗೆ ಮೋಹಿತಳಾಗುವ ಮತ್ಸ್ಯಗಂಧಿ “ಸುಗಂಧಿ” ಚಿತ್ರದ ಪ್ರಮುಖ ಸೂತ್ರದಾರಿಗಳು.

ಆರಂಭದಲ್ಲಿ ಮೀನಿನ ಪರಿಮಳದ  ನಡುವೆ ಮುಗ್ಧ ಪ್ರೇಮ, ಕಾಮದಿಂದ ಸುಖವಾಗಿರುವ ಇವರು ದುಬಾರಿ ಸೆಂಟಿನ ವಾಸನೆಯತ್ತ ಮೋಹಿತರಾಗುತ್ತಾರೆ. ದುಬಾರಿ ಸೆಂಟ್ ಎಂದರೆ ತಮ್ಮ ಈಗಿನ ಜೀವನಮಟ್ಟವನ್ನು ಡಿಢೀರ್ ಆಗಿ ಬದಲಾಯಿಸಿ ಶ್ರೀಮಂತರಾಗುವ ಕನಸು. ಇದಕ್ಕಾಗಿ ಅವರು ಹಿಡಿದದ್ದು ವಿಕ್ಷಿಪ್ತ ಹಾದಿ.

ಚಿತ್ರದ ಆರಂಭದಲ್ಲಿ ಕೆಲವೊಂದು ದೃಶ್ಯಗಳು “ಎ” ಕತ್ತರಿ ಹಾಕದೆ ಉಳಿದಿವೆ. ಆದರೆ, ಅವು ಅಸಹ್ಯ ಎನಿಸದು. ಮುಗ್ಧ ಪ್ರಣಯವಾಗಿ ಕಾಡಬಹುದು. ವಿಶೇಷವೆಂದರೆ ಮೀನಿನ ಪರಿಮಳದಲ್ಲಿ ಮಾತ್ರ ಅಂತಹ ರತಿಯಿದೆ. ಸೆಂಟ್ ಬಂದಮೇಲೆ ಅಂತಹ ಪ್ರಣಯ ದೃಶ್ಯಗಳು ಕಾಣಿಸುವುದಿಲ್ಲ. ಚಿತ್ರದಲ್ಲಿ ಮೀನಿನ ವಾಸನೆ ಮತ್ತು ಸೆಂಟಿನ ಪರಿಮಳವನ್ನು ಅದ್ಭುತ ರೂಪಕವಾಗಿ ಬಳಸಲಾಗಿದೆ.

ಪಡ್ಡಾಯಿ ಎಂದರೆ ಪಶ್ಚಿಮ. ಪಶ್ಚಿಮ ಎಂದರೆ ಪಾಶ್ಚಿಮಾತ್ಯ. ಪಾಶ್ಚಿಮಾತ್ಯವೆಂದರೆ ನಮ್ಮದಲ್ಲದು. ಪಶ್ಚಿಮ ಉಂಟು ಮಾಡಿದ ತಲ್ಲಣದ ಕುರಿತು ಚಿತ್ರ ಮೌನವಾಗಿ ಮಾತನಾಡುತ್ತದೆ. ಆದರೆ, ಶೇಕ್ಸ್ ಪಿಯರ್ ನ ಮ್ಯಾಕ್ ಬೆತ್‍ ಸಿನಿಮಾದಿಂದ ಸ್ಪೂರ್ತಿ ಪಡೆದಿದ್ದರೂ ಪಡ್ಡಾಯಿ ಸಂಪೂರ್ಣ ತುಳುನಾಡಿನ ಸೊಗಡಿನ ಸಿನಿಮಾ. ಪಡ್ಡಾಯಿ ಸಿನಿಮಾ ಮುಗ್ಧವಾಗಿದೆ, ಮುದ್ದಾಗಿದೆ. ಅಲ್ಲಿ ಯಾವುದೂ ಅತಿರೇಕಗಳು ಇಲ್ಲ. ಕಡಲಿನ ಅಲೆಯೆಂತೆ ಹೃದಯದಲ್ಲಿ ಭೋರ್ಗರೆಯುವ, ಮನಸ್ಸಿನಲ್ಲಿ ಒಂದಿಷ್ಟು ತವಕ ತಲ್ಲಣಗಳನ್ನು ಮೂಡಿಸುತ್ತದೆ. ಇಂತಹ ಅದ್ಭುತ ಕಟ್ಟಿಕೊಟ್ಟ ನಿರ್ದೇಶಕ ಅಭಯ್ ಸಿಂಹರಿಗೆ ಧನ್ಯವಾದ. ಸಿನಿಮಾಟೊಗ್ರಫಿ ಮತ್ತು ಸಂಗೀತವೂ ಪಡ್ಡಾಯಿಗೆ  ಜೀವಾಳ.

ಪಡ್ಡಾಯಿಯಲ್ಲಿ ಕಡಲು ಇದೆ. ಮೀನುಗಾರರು ಇದ್ದಾರೆ. ಬೋಟುಗಳು ಇವೆ. ಮೀನಿನ ವಾಸನೆ ಇದೆ. ಸೆಂಟಿನ ವಾಸನೆಯೂ ಇದೆ. ಅಪ್ಪಟ ತುಳು ಸೊಗಡಿದೆ. ಭೂತವಿದೆ. ಯಕ್ಷಗಾನವಿದೆ. ದುಬೈಗೆ ಹೋಗಿ ದುಡ್ಡುಮಾಡಬೇಕೆಂಬ ಆಸೆಯೂ ಇದೆ. ಸಾಂಪ್ರದಾಯಿಕ ಮೀನುಗಾರಿಕೆ ಸಾಕು ಎನ್ನುವವರು ಇದ್ದಾರೆ. ಸ್ಟೀಲ್ ಬೋಟ್ ಮಾಡಿ ಮಳೆಗಾಲದಲ್ಲಿಯೂ ಪ್ರಕೃತಿಗೆ ವಿರುದ್ಧವಾಗಿ ಮೀನು ಹಿಡಿಯುವ ವ್ಯಾವಹಾರಿಕತೆಯ ಕುರಿತೂ ಸಿನಿಮಾ ಮಾತನಾಡುತ್ತದೆ.

ಹೆಚ್ಚಿನ ತುಳು ಸಿನಿಮಾಗಳೆಂದರೆ ತುಳು ಹಾಸ್ಯ ನಾಟಕಗಳನ್ನು ತೆರೆಯ ಮೇಲೆ ನೋಡಿದಂತೆ ಭಾಸವಾಗುತ್ತದೆ. ಜನರಿಗೆ ತುಳು ಹಾಸ್ಯ ಮತ್ತು ಹಾಸ್ಯ ಕಲಾವಿದರು ಇಷ್ಟ. ತುಳುವರಿಗೆ ಹಾಸ್ಯ ಕಲಾವಿದರೇ ಹೀರೋ. ಜನರು ಇದನ್ನೇ ಬಯಸುತ್ತಾರೆ ಎಂದು ಬಹುತೇಕ ಸಿನಿಮಾಗಳು ಇದೇ ರೀತಿ ಬಂದವು. ಆದರೆ, ಇಂತಹ ಸಮಯದಲ್ಲಿ “ಪಡ್ಡಾಯಿ” ಸಂಪೂರ್ಣ ಭಿನ್ನ.

ಇದನ್ನೂ ಓದಿ  ರೈಲ್ವೆ ಜಾಬ್ ಯಾಕೆ ಬೆಸ್ಟ್? ರೈಲ್ವೆಯು ನೀಡುವ ಸೌಲಭ್ಯಗಳೇನು?

ಚಿತ್ರದಲ್ಲಿ ಎಲ್ಲಾ ನಟರೂ ಮನೋಜ್ಞವಾಗಿ ನಟಿಸಿದ್ದಾರೆ. ಬಹುತೇಕ ಎಲ್ಲಾ ನಟರು ನೀನಾಸಂನಿಂದ ತರಬೇತಿ ಪಡೆದವರು. ಮಾಧವನಾಗಿ ಮೋಹನ್, ಸುಗಂಧಿಯಾಗಿ ಬಿಂದು ರಕ್ಷಿದಿ ಇಷ್ಟವಾಗುತ್ತಾರೆ. ದಿನೇಶಣ್ಣನಾಗಿ ಗೋಪಿನಾಥ್ ಪಾತ್ರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುವಂತೆ ಇದೆ. ಚಂದ್ರಹಾಸ್, ರವಿ, ವಾಣಿ, ಶ್ರೀಧರ್ ಆಚಾರ್, ಅವಿನಾಶ್, ಪ್ರಭಾಕರ್ ಮುಂತಾದವರೂ ಕೊಟ್ಟ ಪಾತ್ರಕ್ಕೆ ಮೋಸ ಮಾಡಿಲ್ಲ. ಇಲ್ಲಿ ಯಾರೂ ನಾಯಕರಿಲ್ಲ ಅಥವಾ ಎಲ್ಲರೂ ನಾಯಕರೇ ಎನ್ನಬಹುದು!

ಕರ್ನಾಟಕಬೆಸ್ಟ್.ಕಾಂ  ಶಿಫಾರಸು.

ಪಡ್ಡಾಯಿ ತುಳು ಭಾಷಿಗರು ಮಾತ್ರ ನೋಡುವ ಸಿನಿಮಾವಲ್ಲ. ಇಂಗ್ಲಿಷ್ ಸಬ್ ಟೈಟಲ್ ಇರುವುದರಿಂದ ಇತರೆ ಭಾಷೆಯವರೂ ನೋಡಬಹುದು.  ಎಲ್ಲರೂ ನೋಡಬೇಕಾದ ಬೆಸ್ಟ್ ಸಿನಿಮಾ ಎನ್ನುವುದು ಕರ್ನಾಟಕಬೆಸ್ಟ್.ಕಾಂ ಕಡೆಯಿಂದ ಶಿಫಾರಸು.

ಹೇಳಲು ಮರೆತೆ, ಪಡ್ಡಾಯಿ ಸಿನಿಮಾಕ್ಕೆ 65ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯು “ಬೆಸ್ಟ್ ಫೀಚರ್ ಫಿಲ್ಮ್ ಇನ್ ತುಳು” ವಿಭಾಗದಲ್ಲಿ ದೊರಕಿದೆ.

ಪಡ್ಡಾಯಿ ತುಳು ಸಿನಿಮಾದ ಟ್ರೇಲರ್ ಇಲ್ಲಿದೆ ನೋಡಿ