Guide to Buying a Resale Flats: ಹಳೆಯ ಅಪಾರ್ಟ್‌ಮೆಂಟ್‌ ಖರೀದಿಸಬಹುದೇ? ಮರುಮಾರಾಟಕ್ಕಿಟ್ಟ ಮನೆ ಖರೀದಿಸಬಹುದೇ?

By | 05/03/2021

ರಿ-ಸೇಲ್‌ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದರೆ ಹಲವು ಲಾಭಗಳ ಜೊತೆ ಕೆಲವೊಂದು ತೊಂದರೆಗಳೂ ಉಂಟಾಗಬಹುದು. ಹೀಗಾಗಿ, ಮರುಮಾರಾಟಕ್ಕಿಟ್ಟ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸುವ ಮೊದಲು ಸಾಕಷ್ಟು ರಿಸರ್ಚ್‌ ಅಗತ್ಯ ಎನ್ನುತ್ತಾರೆ ತಜ್ಞರು.


ಹೊಸ ಅಪಾರ್ಟ್‌ಮೆಂಟ್‌ ಖರೀದಿಸಲು ಹೋದಾಗ ಕೆಲವೊಂದು ಹಳೆ ಅಪಾರ್ಟ್‌ಮೆಂಟ್‌ಗಳು ಮಾರಾಟಕ್ಕಿಟ್ಟಿರುವುದು ನಿಮ್ಮ ಗಮನಕ್ಕೆ ಬೀಳಬಹುದು. ಕೆಲವು ವ್ಯಕ್ತಿಗಳು ಮರುಮಾರಾಟಕ್ಕಾಗಿಯೇ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿಡುವುದುಂಟು. ಈಗ ಭೂಮಿಯ ಲಭ್ಯತೆ ಕಡಿಮೆ ಇರುವುದರಿಂದ ಹೊಸ ಪ್ರಾಜೆಕ್ಟ್ಗಳಿಗೆ ನಗರಗಳಲ್ಲಿ ಸಾಕಷ್ಟು ಸ್ಥಳಾವಕಾಶವೂ ದೊರಕುವುದಿಲ್ಲ. ಇದೇ ಕಾರಣಕ್ಕೆ ನಗರದ ಹೊರವಲಯಗಳಲ್ಲಿ ಅಪಾರ್ಟ್‌ಮೆಂಟ್‌ ಪ್ರಾಜೆಕ್ಟ್ಗಳು ಹೆಚ್ಚುತ್ತಿವೆ. ಕೆಲವರಿಗೆ ನಗರದೊಳಗೆ ಮನೆ ಬೇಕೆಂದಿರುತ್ತದೆ. ಆದರೆ, ನಗರದೊಳಗಿನ ಹೊಸ ಅಪಾರ್ಟ್‌ಮೆಂಟ್‌ ದರ ಎಲ್ಲರ ಬಜೆಟ್‌ಗೆ ಸೂಕ್ತವಾಗಿದೆ ಎಂದು ಹೇಳುವಂತಿಲ್ಲ. ಇಂತಹ ಸಮಯದಲ್ಲಿ ನಗರದೊಳಗೆ ಯಾರಾದರೂ ತಮ್ಮ ಅಪಾರ್ಟ್‌ಮೆಂಟ್‌ ಮಾರಾಟಕ್ಕಿಟ್ಟರೆ ಖರೀದಿಸುವುದು ಒಳ್ಳೆಯದು ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ತಜ್ಞರು.


ನಗರದಲ್ಲಿ ಬಹುತೇಕ ಐಟಿ-ಬಿಟಿ ಉದ್ಯೋಗಿಗಳು ತಮ್ಮಲ್ಲಿ ಕೈತುಂಬಾ ಹಣ ಓಡಾಡುತ್ತಿರುವಾಗ ಅಪಾರ್ಟ್‌ಮೆಂಟ್‌ ಖರೀದಿಸಿ ಅದರಲ್ಲಿ ವಾಸಿಸುತ್ತಾರೆ. ಈ ರೀತಿ ಬೆಂಗಳೂರಿನಲ್ಲಿ ಮನೆ ಮಾಡಿದ ಉದ್ಯೋಗಿಯ ಭವಿಷ್ಯ ಅವರು ಅಂದುಕೊಂಡಂತೆ ಇರದೆ ಇರಬಹುದು. ಬೇರೊಂದು ಊರಿಗೆ ಕೆಲಸ ಬದಲಾಯಿಸಬೇಕಾಗಬಹುದು. ವಿದೇಶದಲ್ಲಿ ಪರ್ಮನೆಂಟ್‌ ಉದ್ಯೋಗ ದೊರಕಬಹುದು. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿದ್ದ ಅಪಾರ್ಟ್‌ಮೆಂಟ್‌ ಮಾರಾಟ ಮಾಡಲು ಬಯಸಿರಬಹುದು. ‘‘ಸೆಕೆಂಡ್‌ ಹ್ಯಾಂಡ್‌ ವಸ್ತುಗಳನ್ನು ಮಾರಾಟ ಮಾಡುವ ವೆಬ್‌ಸೈಟ್‌ಗಳಲ್ಲಿ ‘ಮಾಲೀಕರು ಬೇರೆ ಊರಿಗೆ ಶಿಫ್ಟ್‌ ಆಗುತ್ತಿದ್ದಾರೆ, ಅರ್ಜೆಂಟಾಗಿ ಕಾರು ಮಾರಾಟಕ್ಕಿಟ್ಟಿದ್ದಾರೆ’ ಇತ್ಯಾದಿ ಜಾಹೀರಾತು ನೋಡಿರಬಹುದು. ಇಂತಹ ಜಾಹೀರಾತುಗಳಲ್ಲಿ ಸಾಕಷ್ಟು ಫೇಕ್‌ ಇರಬಹುದು. ಆದರೆ, ಅಸಲಿ ಜಾಹೀರಾತುಗಳೂ ಸಾಕಷ್ಟು ಇರುತ್ತವೆ. ಈ ರೀತಿ ಶಿಫ್ಟ್‌ ಆಗುವ ಸಮಯದಲ್ಲಿ ಶಿಫ್ಟ್‌ ಮಾಡಲಾಗದ ವಸ್ತುಗಳನ್ನು, ಸ್ಥಿರಾಸ್ತಿಗಳನ್ನು ಮಾರಾಟ ಮಾಡಬೇಕಾಗುತ್ತದೆ. ಕೆಲವೊಮ್ಮೆ ಸಿಕ್ಕ ದರಕ್ಕೆ ಈ ರೀತಿ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಅಪಾರ್ಟ್‌ಮೆಂಟ್‌ ವಿಷಯದಲ್ಲಿಯೂ ಈ ರೀತಿ ಆಗುವುದುಂಟು. ಇಂತಹ ರಿ-ಸೇಲ್‌ ಅಪಾರ್ಟ್‌ಮೆಂಟ್‌ಗಳಲ್ಲಿ ಈಗಾಗಲೇ ಇಂಟೀರಿಯರ್‌ ಕೆಲಸ ಮಾಡಲಾಗಿರುತ್ತದೆ. ಖರೀದಿದಾರರಿಗೆ ಹಲವು ಲಾಭಗಳಾಗುತ್ತವೆ’’ ಎಂದು ರಿಯಾಲ್ಟಿ ತಜ್ಞರಾದ ಮುರುಳಿ ಹೇಳಿದ್ದಾರೆ.

ಹಳತಾ? ಹೊಸತಾ?


‘‘ನಾವು ಹೊಸ ಮನೆ ಹುಡುಕಿದ ಸಂದರ್ಭದಲ್ಲಿ ಹತ್ತಿರದಲ್ಲಿ ಯಾವುದೇ ಪ್ರಮುಖ ಹೊಸ ನಿರ್ಮಾಣ ಪ್ರಾಜೆಕ್ಟ್ಗಳು ಇರಲಿಲ್ಲ. ಕೆಲವೊಂದು ಪ್ರಾಜೆಕ್ಟ್ಗಳು ನಮ್ಮ ಬಜೆಟ್‌ಗೆ ಸೂಕ್ತವಾಗಿರಲಿಲ್ಲ. ಇಂತಹ ಸಮಯದಲ್ಲಿ ನಮ್ಮ ಬ್ರೋಕರ್‌ ನಮಗೆ ಹಳೆ ಕಟ್ಟಡಗಳನ್ನು ತೋರಿಸಲು ಆರಂಭಿಸಿದ. ನಮಗೆ ಆಶ್ಚರ್ಯವಾಯಿತು, ಕೆಲವೊಂದು ಮನೆಗಳು ಹಳೆಯದಾಗಿದ್ದರೂ ಅದ್ಭುತವಾಗಿದ್ದವು. ದೊಡ್ಡ ಗಾತ್ರದ ಬಾಲ್ಕನಿಗಳು, ಎತ್ತರದ ಸೀಲಿಂಗ್‌ಗಳು, ಆಕರ್ಷಕ ಸೋಷಿಯಲ್‌ ಇನ್‌ಫ್ರಾಸ್ಟ್ರಕ್ಚರ್‌ಗಳಿದ್ದವು. ಹೊಸ ಅಪಾರ್ಟ್‌ಮೆಂಟ್‌ಗಳಲ್ಲಿ ಇಂತಹ ಸೌಲಭ್ಯ ದೊರಕುವುದು ಸಾಧ್ಯವಿರಲಿಲ್ಲ. ಕೊನೆಗೆ ನಾವು ರಿ-ಸೇಲ್‌ ಅಪಾರ್ಟ್‌ಮೆಂಟ್‌ ಖರೀದಿಸುವುದೇ ಸೂಕ್ತವೆಂಬ ಅಭಿಪ್ರಾಯಕ್ಕೆ ಬಂದೆವು. ನಾವು ಖರೀದಿಸಿದ ಅಪಾರ್ಟ್‌ಮೆಂಟ್‌ನ ಬಾಲ್ಕನಿಯನ್ನು ಮಿನಿ ಟೇರಸ್‌ ಎಂದೇ ಕರೆಯಬಹುದು’ ಎಂದು ಬೆಂಗಳೂರಿನ ನಿವಾಸಿಯೊಬ್ಬರು ಹೇಳಿದ್ದಾರೆ.


ಆದರೆ, ಈ ಅಭಿಪ್ರಾಯವನ್ನು ಕೆಲವು ಮನೆ ಖರೀದಿದಾರರು ಒಪ್ಪುವುದಿಲ್ಲ. ‘‘ಮೊದಲು ನಾವೂ ಹಳೆ ಅಪಾರ್ಟ್‌ಮೆಂಟ್‌ ಖರೀದಿಸುವುದು ಸೂಕ್ತ ಎಂದುಕೊಂಡೆವು. ಆದರೆ, ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಹಳೆ ಅಪಾರ್ಟ್‌ಮೆಂಟ್‌ ದರಕ್ಕಿಂತ ಕಡಿಮೆ ದರದಲ್ಲಿ ಹೊಸ ಅಪಾರ್ಟ್‌ಮೆಂಟ್‌ ದೊರಕುತ್ತದೆ. ಹೊರವಲಯದಲ್ಲಿ ಖರೀದಿಸುವುದಾದರೆ ಹೆಚ್ಚು ವಿಶಾಲವಾದ ಅಪಾರ್ಟ್‌ಮೆಂಟ್‌ಗಳು ಕಡಿಮೆ ದರದಲ್ಲಿ ದೊರಕುತ್ತವೆ. ಈ ಕಾರಣದಿಂದ ಹಳೆಯದಕ್ಕಿಂತ ಹೊಸತೇ ಬೆಟರ್‌ ಎಂದು ಖರೀದಿಸಿದೆವು’’ ಎಂದು ಮೈಸೂರು ರಸ್ತೆ ನಿವಾಸಿ ಅಪರ್ಣಾ ಭಟ್‌ ಹೇಳಿದ್ದಾರೆ.

ಲಾಭ ಹಲವು


‘ನಿಮಗೆ ಎಲ್ಲಿ ಬೇಕೋ ಅಲ್ಲೇ ಮನೆ ದೊರಕುತ್ತದೆ’ ಎನ್ನುವುದು ರಿ-ಸೇಲ್‌ ಮಾರುಕಟ್ಟೆಯ ಪ್ರಮುಖ ಪ್ರಯೋಜನವಾಗಿದೆ. ‘‘ನಗರಗಳಲ್ಲಿ ಹಲವು ಪ್ರಮುಖ ಲೊಕೆಷನ್‌ಗಳಿವೆ. ಇಲ್ಲಿ ಹೊಸ ಪ್ರಾಜೆಕ್ಟ್ಗಳು ಇರುವುದು ಕಡಿಮೆ. ಇಂತಹ ಲೊಕೆಷನ್‌ನಲ್ಲಿ ವಾಸಿಸಲು ಬಯಸುವವರು ರಿ-ಸೇಲ್‌ ಫ್ಲಾಟ್‌ ಮೇಲೆ ಹೂಡಿಕೆ ಮಾಡುವುದು ಉತ್ತಮ’’ ಎಂದು ತಜ್ಞರು ಹೇಳಿದ್ದಾರೆ.


ನಿಮ ಮಗುವಿನ ಶಾಲೆಗೆ ಹತ್ತಿರದಲ್ಲಿ ಮನೆ ಖರೀದಿಸಬೇಕೆ? ನಿಮ್ಮ ಹೆತ್ತವರು ಇರುವ ಸ್ಥಳಕ್ಕೆ ಹತ್ತಿರದಲ್ಲಿ ಮನೆ ಬೇಕೆ? ನಿಮ್ಮ ಉದ್ಯೋಗ ಸ್ಥಳಕ್ಕೆ ಹತ್ತಿರದಲ್ಲಿ ಮನೆ ಬೇಕೆ? ಇಂತಹ ಸ್ಥಳಗಳಲ್ಲಿ ಹೊಸ ಮನೆ ದೊರಕುವುದು ಕಷ್ಟ. ಆದರೆ, ರಿ-ಸೇಲ್‌ ಫ್ಲಾಟ್‌ ಖಂಡಿತವಾಗಿಯೂ ದೊರಕಬಹುದು. ಹೊಸದಾಗಿ ಅಭಿವೃದ್ಧಿಪಡಿಸುತ್ತಿರುವ ಅಪಾರ್ಟ್‌ಮೆಂಟ್‌ ಖರೀದಿಸಿದರೆ ಹಲವು ಡಿಸ್ಕೌಂಟ್‌ಗಳು, ಆಫರ್‌ಗಳು ದೊರಕುತ್ತವೆ. ಆದರೆ, ರಿಸೇಲ್‌ ಫ್ಲಾಟ್‌ನಲ್ಲಿ ಡಿಸ್ಕೌಂಟ್‌ ಇಲ್ಲದೆಯೇ ಡಿಸ್ಕೌಂಟ್‌ ದೊರಕಿರುತ್ತದೆ.

ಚೌಕಾಶಿ ಅಗತ್ಯ


ಮರುಮಾರಾಟಕ್ಕಿಟ್ಟ ಮನೆಯನ್ನು ಖರೀದಿಸುವ ಸಂದರ್ಭದಲ್ಲಿ ಸಾಕಷ್ಟು ಚೌಕಾಶಿ ಮಾಡುವ ಮೂಲಕ ಉತ್ತಮ ಡೀಲ್‌ ನಿಮ್ಮದಾಗಿಸಿಕೊಳ್ಳಬೇಕು ಎಂದು ಅನುಭವಿಗಳು ಹೇಳಿದ್ದಾರೆ. ‘‘ಚೌಕಾಶಿ ಮಾಡುವ ಸಂದರ್ಭದಲ್ಲಿ ಒಳ್ಳೆಯ ಆಫರ್‌ಗಳು ದೊರಕುತ್ತವೆ. ನಾವು ಮನೆ ಖರೀದಿಸಿದ ಸಂದರ್ಭದಲ್ಲಿ ಮನೆಯಲ್ಲಿದ್ದ ಕೆಲವು ಪ್ರಮುಖ ವಸ್ತುಗಳನ್ನು ಬಿಟ್ಟುಬಿಡಲು ಮಾಲೀಕರು ಒಪ್ಪಿದರು. ಹೀಗಾಗಿ, ಏಸಿ, ವಾಟರ್‌ ಹೀಟರ್‌ ಇತ್ಯಾದಿಗಳು ಉಚಿತವಾಗಿ ದೊರಕುತ್ತವೆ. ಎರಡು ಬೆಡ್‌ರೂಂನಲ್ಲಿದ್ದ ಎರಡು ಏಸಿ ಮತ್ತು ಇತರೆ ವಸ್ತುಗಳಿಂದ ನನಗೆ ಕಡಿಮೆಯೆಂದರೂ 50 ಸಾವಿರ ರೂ. ಉಳಿತಾಯವಾಗಿದೆ’’ ಎಂದು ಇತ್ತೀಚೆಗೆ ಮರುಮಾರಾಟಕ್ಕಿದ್ದ ಮನೆಯನ್ನು ಖರೀದಿಸಿದ ಸುನಿಲ್ ಹೇಳಿದ್ದಾರೆ. ‘‘ಹಳೆ ಮನೆ ಮಾಲೀಕರು ಉಚಿತವಾಗಿ ಪೇಂಟ್‌ ಮಾಡಿ ಕೊಟ್ಟಿದ್ದಾರೆ. ಅವರ ಹೊಸ ಮನೆಗೆ ಫಿಟ್‌ ಆಗುವುದಿಲ್ಲವೆಂದು ವಾಲ್‌ ಯೂನಿಟ್‌ಗಳನ್ನೂ ಬಿಟ್ಟು ಹೋಗಿದ್ದರು. ನಮಗೆ ರಿ-ಸೇಲ್‌ ಫ್ಲಾಟ್‌ ಖರೀದಿಯಿಂದ ಸಾಕಷ್ಟು ಲಾಭವಾಯಿತು’’ ಎಂದು ಹೇಳಿದ್ದಾರೆ.

ತೆರಿಗೆ ಮತ್ತು ಗೃಹಸಾಲ


ರಿ-ಸೇಲ್‌ ಪ್ರಾಪರ್ಟಿಗೆ ಗೃಹಸಾಲ ಮತ್ತು ತೆರಿಗೆ ಪ್ರಯೋಜನಗಳೂ ದೊರಕುತ್ತವೆ. ‘‘ಆದಾಯ ತೆರಿಗೆ ಕಾಯಿದೆಯ ಪ್ರಕಾರ ಮನೆ ಸ್ವಾಧೀನಪಡಿಸಿಕೊಂಡ ತಕ್ಷಣದಿಂದ ಬಡ್ಡಿದರದ ಮೇಲೆ ವಿನಾಯಿತಿ ಪಡೆಯಬಹುದು. ಮೊದಲ ಇಎಂಐಗೆ ಪಾವತಿಸಿದ ಬಡ್ಡಿದರದ ಮೇಲೆ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಬಹುದು’’ ತಜ್ಞರು ಹೇಳಿದ್ದಾರೆ. ‘‘ರಿಸೇಲ್‌ ಮನೆಗಳು ಪ್ರವೇಶಕ್ಕೆ ಸಿದ್ಧವಾದ ಮನೆಗಳಾಗಿದ್ದು, ನಿರ್ಮಾಣ ಹಂತದ ಆಸ್ತಿಗಳಂತೆ ಅನಿರೀಕ್ಷಿತ ತೊಂದರೆಗಳನ್ನು ನೀಡುವುದಿಲ್ಲ’’ ಎಂದು ಅವರು ಹೇಳಿದ್ದಾರೆ.

ಈ ಅಂಶಗಳನ್ನು ಗಮನದಲ್ಲಿಡಿ

  • ಕಟ್ಟಡದ ನಿರ್ಮಾಣ ಗುಣಮಟ್ಟ ಪರಿಶೀಲಿಸಿ. ಸಾಕಷ್ಟು ರಿಪೇರಿ ಅವಶ್ಯಕತೆ ಇರುವ ಅಪಾರ್ಟ್‌ಮೆಂಟ್‌ ಮೇಲೆ ಹೂಡಿಕೆ ಮಾಡಬೇಡಿ.
  • ಹೊಸ ಅಪಾರ್ಟ್‌ಮೆಂಟ್‌ಗಳಲ್ಲಿ ದೊರಕುವಷ್ಟು ಅಮೆನಿಟೀಸ್‌ಗಳು ಹಳೆ ಅಪಾರ್ಟ್‌ಮೆಂಟ್‌ಗಳಲ್ಲಿ ದೊರಕದೆ ಇರಬಹುದು.
  • ಹಳೆಯ ಗೇಟೆಡ್‌ ಕಮ್ಯುನಿಟೀಸ್‌ಗಳಲ್ಲಿ ಕೆಲವು ಅಮೆನೀಟಿಸ್‌ಗಳು ಇರಬಹುದು. ಹೀಗಾಗಿ, ಹಳೆ ಅಪಾರ್ಟ್‌ಮೆಂಟ್‌ನಲ್ಲಿ ನಿಮಗೆ ಅವಶ್ಯವಿರುವ ಅಮೆನೀಟಿಸ್‌ಗಳು ಇವೆಯೇ ಎಂದು ಪರಿಶೀಲಿಸಿ.
  • ಬಹುತೇಕ ವಿಮಾ ಕಂಪನಿಗಳು ಹಳೆ ಮನೆ ಖರೀದಿಗೆ ವಿಮೆ ನೀಡುವುದಿಲ್ಲ.
  • ಮನೆಯ ಕಾನೂನುಬದ್ಧ ಮಾಲೀಕತ್ವಕ್ಕೆ ಸಂಬಂಧಪಟ್ಟಂತೆ ತಕರಾರುಗಳು ಇರಬಹುದು. ಸ್ವತಂತ್ರ ಮನೆಯಾಗಿದ್ದರೆ ಭೂಮಿಗೆ ಸಂಬಂಧಪಟ್ಟ ವ್ಯಾಜ್ಯಗಳು ಇರಬಹುದು. ಸರಕಾರಕ್ಕೆ ತೆರಿಗೆ, ಬಿಲ್‌ಗಳು, ಮೇಂಟೆನ್ಸ್‌ ಶುಲ್ಕ ಇತ್ಯಾದಿಗಳನ್ನು ಪಾವತಿಸದೆ ಇರಬಹುದು. ಹೀಗಾಗಿ, ಹಳೆ ಮನೆ ಖರೀದಿಸುವ ಸಂದರ್ಭದಲ್ಲಿ ಮನೆಯ ಕುರಿತು ಸಾಕಷ್ಟು ರಿಸರ್ಚ್‌ ಮಾಡಬೇಕು ಮತ್ತು ಸಂಬಂಧಪಟ್ಟ ತಜ್ಞರ ಅಭಿಪ್ರಾಯ ಪಡೆಯುವುದು ಒಳ್ಳೆಯದು.

Leave a Reply

Your email address will not be published. Required fields are marked *