ಹೋಮ್‌ ಲೋನ್‌ ಮೇಲೆ ವಿಮೆ ಯಾಕೆ ಅಗತ್ಯ?

By | 01/08/2021

ಕೋವಿಡ್-19 ಸಮಯದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಸವಾಲು, ಸಂಕಷ್ಟ. ಉದ್ಯೋಗವಿಲ್ಲದೆ, ವ್ಯವಹಾರವಿಲ್ಲದೆ ಇಎಂಐ ಕಟ್ಟಲಾಗದ ಪರಿಸ್ಥಿತಿ ಒಂದೆಡೆಯಾದರೆ, ಸಾಲ ಮಾಡಿದ ವ್ಯಕ್ತಿ ಗತಿಸಿಹೋದರೆ ಆಗುವ ಪರಿಣಾಮ ಇನ್ನೊಂದು ರೀತಿಯದು. ಗೃಹಸಾಲ ಪಡೆದವರು ಗತಿಸಿದರೆ ಸಂಗಾತಿಗೆ ಪ್ರೀತಿಪಾತ್ರರ ಅಗಲಿಕೆಯ ನೋವಿನ ಜೊತೆಗೆ ಅಗಲಿದವರ ಋಣಭಾರಕ್ಕೂ ಹೆಗಲು ನೀಡಬೇಕಾಗುತ್ತದೆ.

ಬೆಂಗಳೂರಿನ ಎಕ್ಸ್ (ಉದ್ದೇಶಪೂರ್ವಕವಾಗಿ ಹೆಸರು ಉಲ್ಲೇಖಿಸಿಲ್ಲ) ಎಂಬ ವ್ಯಕ್ತಿಯು ಗೃಹಸಾಲ ತೆಗೆದುಕೊಂಡಿದ್ದರು. ಗೃಹಸಾಲ ಮಾಡಿ ಸುಮಾರು ಆರು ವರ್ಷಗಳಾಗಿದ್ದವು. ದೊಡ್ಡ ಮೊತ್ತದ ಡೌನ್‍ಪೇಮೆಂಟ್ ಮಾಡಿದ್ದರು. ಸಾಲ ಬೇಗ ಮುಗಿಸುವ ಉದ್ದೇಶದಿಂದ ದೊಡ್ಡ ಮೊತ್ತದ ಇಎಂಐ ಪಾವತಿಸುತ್ತಿದ್ದರು. ಮಾರ್ಚ್ ತಿಂಗಳಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗಿ ಆಕ್ಸಿಜನ್ ಸಮಸ್ಯೆಯಿಂದ ಮೃತಪಟ್ಟರು. ಇವರೇ ಕುಟುಂಬಕ್ಕೆ ಆಧಾರವಾಗಿದ್ದರು. ಅವರ ಪತ್ನಿ ಹಣಕಾಸು ವಿಷಯದಲ್ಲಿ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ. ಮಕ್ಕಳ ಓದು, ಮನೆ ನಿಭಾಯಿಸುವುದರಲ್ಲಿ ಬ್ಯುಸಿಯಾಗಿದ್ದರು. ತನ್ನ ಗಂಡನ ಬ್ಯಾಂಕ್ ಬ್ಯಾಲೆನ್ಸ್, ಬ್ಯಾಂಕ್ ಸಾಲ, ಹೂಡಿಕೆ, ವಿಮೆ ಇತ್ಯಾದಿಗಳ ಯಾವುದೇ ಮಾಹಿತಿ ಅವರಿಗೆ ಇರಲಿಲ್ಲ. ಗಂಡ ಸಡನ್ ಆಗಿ ನಿರ್ಗಮಿಸಿದಾಗ ಸಾಕಷ್ಟು ನೋವು ಅನುಭವಿಸಿದರು. ತಾವು ವಾಸಿಸುತ್ತಿರುವ ಚಂದದ ಮನೆಯನ್ನೇ ಕಳೆದುಕೊಳ್ಳುವ ಹಂತಕ್ಕೂ ತಲುಪಿದರು.
ಪತಿ ಮೃತಪಟ್ಟ ಬಳಿಕ ಎಷ್ಟು ಹುಡುಕಿದರೂ ಮನೆಯಲ್ಲಿ ಗೃಹಸಾಲದ ಯಾವುದೇ ದಾಖಲೆಗಳು ದೊರಕಲಿಲ್ಲ. ಬ್ಯಾಂಕ್‍ನಲ್ಲಿ ವಿಚಾರಿಸಿದಾಗ ಎಲ್ಲಾ ಇಎಂಐ ಸರಿಯಾಗಿ ಪಾವತಿಸಿರುವುದು ತಿಳಿಯಿತು. ಮುಂದೆ ಏನು ಎಂದು ಚರ್ಚಿಸುವಾಗ ಗೃಹಸಾಲಕ್ಕೆ ವಿಮೆ ಮಾಡಲಾಗಿರುವ ವಿಷಯ ತಿಳಿಯಿತು. ಇನ್ನು ಮುಂದೆ ಇಎಂಐ ಕಡಿತ ಮಾಡಬೇಡಿ. ವಿಮೆಯ ಹಣದಿಂದ ಬಾಕಿ ಪಡೆದುಕೊಳ್ಳಿ ಎಂದು ಬ್ಯಾಂಕ್‍ಗೆ ತಿಳಿಸಿದಾಗ ಬ್ಯಾಂಕ್ ಅದಕ್ಕೆ ಸಂಬಂಧಪಟ್ಟಂತೆ ಕಾರ್ಯಪ್ರವೃತವಾಯಿತು. ಈ ಕುರಿತು ವಿಮಾ ಕಂಪನಿಗೆ ಇಮೇಲ್ ಮಾಡಲಾಯಿತು. ಆದರೆ, ವಿಮಾ ಕಂಪನಿಯ ಮಾರುತ್ತರ ನೋಡಿ ಈಕೆಗೆ ಶಾಕ್ ಆಯಿತು. `ಗೃಹಸಾಲಕ್ಕೆ ಕೇವಲ 5 ವರ್ಷದ ವಿಮೆ ಮಾತ್ರ ಮಾಡಲಾಗಿದೆ, ಹೀಗಾಗಿ ವಿಮೆಯ ಮೂಲಕ ಬ್ಯಾಲೆನ್ಸ್ ಪಾವತಿಸಲಾಗದು’ ಎಂದು ವಿಮಾ ಕಂಪನಿ ಸ್ಪಷ್ಟವಾಗಿ ತಿಳಿಸಿತು. ಬಾಕಿ ಮೊತ್ತವನ್ನು ಪಾವತಿಸುವುದೋ, ಈ ಮನೆ ಮಾರಿ ಸಾಲ ತೀರಿಸಿ ಸಣ್ಣ ಮನೆಗೆ ಹೋಗುವುದೋ ಎಂಬ ಸಂದಿಗ್ಧತೆ ಆಕೆಯ ಮುಂದೆ ಬಂತು.


ಇನ್ನೊಂದು ಪ್ರಕರಣದಲ್ಲಿ, ಅತ್ಯಕ ವೇತನ ಹೊಂದಿರುವ ಪತ್ನಿಯು ತನ್ನ ಪತಿಯ ಹೆಸರಲ್ಲಿ ಗೃಹ ಸಾಲ ಪಡೆದಿದ್ದರು. ಈಕೆಯೇ ಇಎಂಐ ಪಾವತಿಸುತ್ತಿದ್ದರು. ಇವರು ಸಾಲದ ಮೇಲೆ ವಿಮೆಯನ್ನು ಮಾಡಿಸಿದ್ದರು. ಈ ಕೊರೊನಾ ಸಂದರ್ಭದಲ್ಲಿ ಪತ್ನಿಯು ಮರಣ ಹೊಂದಿದರು. ಪತಿಯ ಹೆಸರಲ್ಲಿ ಸಾಲ ಉಳಿಯಿತು. ಈತ ಜೀವಂತವಾಗಿದ್ದು, ಸಾಲ ಈತನ ಹೆಸರಿನಲ್ಲಿ ಇರುವುದರಿಂದ ಯಾವುದೇ ವಿಮಾ ಮೊತ್ತ ಪರಿಹಾರ ದೊರಕಲಿಲ್ಲ.

ಕುಟುಂಬದ ಬಗ್ಗೆ ಯೋಚಿಸಿ


ಬಹುತೇಕ ಸಂದರ್ಭಗಳಲ್ಲಿ ಪತಿ ಅಥವಾ ಪತ್ನಿಯಲ್ಲಿ ಒಬ್ಬರು ಹಣಕಾಸು ಜವಾಬ್ದಾರಿ ಹೊಂದಿರುತ್ತಾರೆ. ಇನ್ನೊಬ್ಬರು ಹಣಕಾಸು ವ್ಯವಹಾರಗಳ ಬಗ್ಗೆ ತಲೆಕೆಡಿಸಿಕೊಂಡಿರುವುದಿಲ್ಲ. ಮನೆಗಾಗಿ ಎಷ್ಟು ಸಾಲ ಪಡೆದಿದ್ದಾರೆ. ಇನ್ನು ಎಷ್ಟು ಕಂತು ಪಾವತಿಸಲು ಬಾಕಿ ಉಳಿದಿದೆ ಇತ್ಯಾದಿ ವಿವರಗಳನ್ನು ತಿಳಿದಿರುವುದಿಲ್ಲ. ಗೃಹಸಾಲ ಪಡೆದವರು ಮರಣ ಹೊಂದಿದರೆ, ದೊಡ್ಡಮೊತ್ತದ ಗೃಹಸಾಲ ಬಾಕಿ ಇದ್ದರೆ ಸಂಗಾತಿಗೆ ಬಾಕಿ ಕಂತು ಕಟ್ಟುವುದು ಕಷ್ಟವಾಗಬಹುದು. ಸಾಲ ಪಾವತಿಸದೆ ಇದ್ದರೆ ಆಸ್ತಿಯನ್ನು ಬ್ಯಾಂಕ್ ಮುಟ್ಟುಗೋಲು ಹಾಕಬಹುದು. ಇಂತಹ ಕಷ್ಟದ ಸಮಯದಲ್ಲಿ ಸಾಲದ ಮೇಲೆ ವಿಮೆ ಮಾಡಿಸಿದ್ದರೆ ಸಾಲದಾರ ಮಾತ್ರವಲ್ಲದೆ ಸಾಲದಾತರ ಅವಲಂಬಿತರು ನಿರಾಳವಾಗಿರಬಹುದು.

  • ಪ್ರತಿಯೊಬ್ಬರೂ ತಮ್ಮ ಸಂಗಾತಿಗೆ ತಾವು ಮಾಡಿರುವ ವಿವಿಧ ವಿಮೆಗಳು, ತಮ್ಮ ಆಸ್ತಿ, ಬಾಂಕ್‌ ಖಾತೆಗಳ ವಿವರವನ್ನು ನೀಡಬೇಕು. ಪ್ರಮುಖ ದಾಖಲೆಗಳನ್ನು ಇಬ್ಬರೂ ಸುಲಭವಾಗಿ ಪಡೆಯುವಂತೆ ನಿಗದಿತ ಸ್ಥಳದಲ್ಲಿ ಇಡಬೇಕು. ಇಬ್ಬರಿಗೂ ದಾಖಲೆಗಳ ಕುರಿತು ಅರಿವು ಇರಬೇಕು.
  • ಸಾಲ ಮಂಜೂರಾತಿ ಪತ್ರವು ಪ್ರಮುಖ ದಾಖಲೆಯಾಗಿದೆ. ಇದರಲ್ಲಿ ಸಾಕಷ್ಟು ಪ್ರಮುಖ ವಿವರಗಳು ಇರುತ್ತವೆ. ನೀವು ಸಾಲ ಪಡೆದ ಸಂದರ್ಭದಲ್ಲಿ ಓದಿದ್ದರೂ, ಓದಿಲ್ಲದೆ ಇದ್ದರೂ ಈಗ ಮತ್ತೊಮ್ಮೆ ಅದನ್ನು ಓದಿ ಅದರ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳಿ.
  • ನೀವು ಗೃಹಸಾಲದ ಮೇಲೆ ಮಾಡಿರುವ ವಿಮೆಯು ಸಾಲದ ಪೂರ್ತಿ ಮೊತ್ತಕ್ಕೆ ಮತ್ತು ಪೂರ್ಣಾವಗೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅರ್ಧ ಅವಧಿಗೆ ವಿಮೆ ಮಾಡಿಸಬೇಡಿ.
  • ಗೃಹಸಾಲ ಮಾಡುವಾಗ ಪ್ರೀತಿ, ಭಾವನಾತ್ಮಕತೆಗೆ ಒಳಗಾಗಬೇಡಿ. ಯಾರಿಗೆ ಇಎಂಐ ಕಟ್ಟುವ ಸಾಮಥ್ರ್ಯ ಇದೆಯೋ ಅವರ ಹೆಸರಿನಲ್ಲಿಯೇ ಗೃಹಸಾಲ ಮಾಡಿ.
  • ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಗೃಹಸಾಲ ಅಥವಾ ಇತರೆ ಸಾಲದ ಮೇಲೆ ವಿಮೆ ಮಾಡಿಸಿ. ಇಲ್ಲವಾದರೆ ಸಾಲದ ಶೂಲಕ್ಕೆ ನೀವು ಮಾತ್ರವಲ್ಲದೆ ನಿಮ್ಮ ಕುಟುಂಬದ ಸದಸ್ಯರೂ ಸಿಕ್ಕಬಹುದು.

Leave a Reply

Your email address will not be published. Required fields are marked *