ಕನ್ನಡ ವೆಬ್ ಸೈಟ್ ಗಳಿಗೆ ಜಾಹೀರಾತು ಮೂಲಗಳು ಯಾವುದಿವೆ?

By | December 1, 2019

ಭಾರತದ ಕೆಲವು ಭಾಷೆಗಳಿಗೆ ಗೂಗಲ್ ಆ್ಯಡ್ ಸೆನ್ಸ್ ಇನ್ನೂ ಬೆಂಬಲ ನೀಡುತ್ತಿಲ್ಲ. ಗೂಗಲ್  ಆ್ಯಡ್ ಸೆನ್ಸ್ ನಲ್ಲಿ ಬೆಂಬಲಿತ ಭಾಷೆಗಳಲ್ಲಿ ಕನ್ನಡ ಭಾಷೆಯಿನ್ನೂ ಸೇರ್ಪಡೆಯಾಗಿಲ್ಲ (ಗೂಗಲ್ ನ್ಯೂಸ್ ನಲ್ಲಿಯೂ ಕನ್ನಡವಿನ್ನು ಬಂದಿಲ್ಲ).

ಈ ವರ್ಷದ ಆರಂಭದಲ್ಲಿ ತಮಿಳು ಭಾಷೆಗೆ ಗೂಗಲ್ ಆ್ಯಡ್ ಸೆನ್ಸ್ ಬೆಂಬಲ ದೊರಕಿದೆ. ತಮಿಳು ವೆಬ್ ಸೈಟ್ ಗಳು, ಬ್ಲಾಗ್ ಗಳು ಆ್ಯಡ್ ಸೆನ್ಸ್ ಅಳವಡಿಸಿಕೊಂಡು ಹಣ ಸಂಪಾದಿಸಬಹುದು. ವಿಶೇಷವೆಂದರೆ ಕರ್ನಾಟಕದ ಇನ್ನೊಂದು ನೆರೆ ರಾಜ್ಯವಾದ ತೆಲುಗು ಭಾಷೆಗೂ ಈಗ ಆ್ಯಡ್ ಸೆನ್ಸ್ ಬೆಂಬಲ ದೊರಕುತ್ತದೆ. ಹಿಂದಿ ಭಾಷೆಗಂತೂ ಆ್ಯಡ್ ಸೆನ್ಸ್ ಬೆಂಬಲ ದೊರಕಿ ಬಹಳ ಸಮಯ ಕಳೆದುಹೋಗಿದೆ.

ಆದರೆ, ಕನ್ನಡಕ್ಕಿನ್ನೂ ಗೂಗಲ್ ಆ್ಯಡ್ ಸೆನ್ಸ್ ಬೆಂಬಲ ದೊರಕಿಲ್ಲ!

ಹೀಗಾಗಿ, ಬ್ಲಾಗ್, ವೆಬ್ ಸೈಟಿನಲ್ಲಿ ಹಣ ಸಂಪಾದನೆಗೆ ಮುಖ್ಯ ದಾರಿಯೇ ಮುಚ್ಚಿದಂತಾಗಿದೆ. ಇದೇ ಕಾರಣಕ್ಕೆ ಕನ್ನಡದಲ್ಲಿ ಕೆಲವೇ ಕೆಲವು ಸುದ್ದಿ ಪೋರ್ಟಲ್ ಗಳು ಇವೆ. ಕೆಲವರು ಉತ್ಸಾಹದಿಂದ ವೆಬ್ ಸೈಟ್ ಗಳನ್ನು ಆರಂಭಿಸಿದರೂ ಫಂಡ್ ಅಥವಾ ಸ್ಪಾನ್ಸರ್ ಗಳು ಕೈ ಕೊಟ್ಟಾಗ ಮುಚ್ಚುವಂತೆ ಆಗಿವೆ.

ವೆಬ್ ಸೈಟ್ ನಿರ್ಮಾಣವೆನ್ನುವುದು ಕಡಿಮೆ ಖರ್ಚಿನಿಂದ ಆರಂಭಿಸಬಹುದಾದರೂ ದಿನ ಕಳೆದಂತೆ ಹೆಚ್ಚು ಹಣ ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ವೆಬ್ ಸೈಟ್ ನಲ್ಲಿ ಕಂಟೆಂಟ್ ಗಳು ತುಂಬುತ್ತಾ ಹೋದಂತೆ ಅದರ ಖರ್ಚು ಹೆಚ್ಚುತ್ತ ಹೋಗುತ್ತದೆ. ಇದಕ್ಕೆ ಪರ್ಯಾಯ ಆಯ್ಕೆಗಳೂ ಇವೆ. ಅವುಗಳ ಕುರಿತು ಬೇರೆ ಲೇಖನದಲ್ಲಿ ಮಾಹಿತಿ ನೀಡಲಾಗುವುದು. ಈಗ ಕನ್ನಡ ವೆಬ್ ಸೈಟ್ ಗಳಿ ಇರುವ ಜಾಹೀರಾತು ಮೂಲಗಳ ವಿಷಯಕ್ಕೆ ಬರೋಣ.

2018ರಿಂದ ಕನ್ನಡ ಬ್ಲಾಗ್, ವೆಬ್ ಸೈಟ್ ಗಳಿಗೂ ಆಶಾದಾಯಕವಾಗುವ ಸಾಕಷ್ಟು ಸಂಗತಿಗಳು ಇವೆ. ಯಾಕೆಂದರೆ ಗೂಗಲ್ ಆ್ಯಡ್ ಸೆನ್ಸಿಗೆ ಪರ್ಯಾಯವಾಗಿ ಸಾಕಷ್ಟು ಆಯ್ಕೆಗಳು ಇವೆ. ಇವುಗಳ ಪಾವತಿ ಆ್ಯಡ್ ಸೆನ್ಸ್ ನಷ್ಟು ಇಲ್ಲವಾದರೂ ನಿರಾಶೆಗೊಳಿಸುವಂತೆ ಇಲ್ಲ.

ಗೂಗಲ್ ಆ್ಯಡ್ ಸೆನ್ಸ್ ಗೆ ಪರ್ಯಾಯವಾಗಿ ಬಳಸಬಹುದಾದ ವಿವಿಧ ಜಾಹೀರಾತು ಮೂಲಗಳು

ಆ್ಯಡ್ ಝೀಬ್ರಾ(https://adgebra.in)

ಮುಖ್ಯವಾಗಿ ಸಣ್ಣ, ಮಧ್ಯಮ ಗಾತ್ರದ ಕನ್ನಡ ವೆಬ್ ಸೈಟ್ ಗಳಿಗೆ ಜಾಹೀರಾತು ಪಡೆಯಲು ಆ್ಯಡ್ ಝೀಬ್ರಾ ಸೂಕ್ತ. ಇಲ್ಲಿ ಜಾಹೀರಾತುಗಳು ಲೇಖನದ ರೂಪದಲ್ಲಿರುತ್ತವೆ. ಅಂದರೆ, ಈ ಆಹಾರವನ್ನು ಸೇವಿಸಿ ಈಕೆ ಒಂದು ವಾರದಲ್ಲಿ 10 ಕೆ.ಜಿ. ತೂಕ ಕಳೆದುಕೊಂಡಿದ್ದಾಳೆ ಅಥವಾ ಬಕ್ಕತಲೆಯಲ್ಲಿ ಕೂದಲು ಬೆಳೆಸಲು ವಿಶೇಷ ಔಷಧ” ಇತ್ಯಾದಿ ಜಾಹೀರಾತುಗಳು ಹೆಚ್ಚಿರುತ್ತವೆ. ಈ ಜಾಹೀರಾತುಗಳನ್ನು ನಿಮ್ಮ ಲೇಖನದ ಆರಂಭದಲ್ಲಿ, ನಡುವೆ, ಕೊನೆಗೆ ಎಲ್ಲಿ ಬೇಕಾದರೂ ಅಳವಡಿಸಬಹುದು. ವಿಶೇಷವೆಂದರೆ, ಈ ತಾಣವನ್ನು ಕನ್ನಡದಂತಹ ಪ್ರಾದೇಶಿಕ ಭಾಷೆಗಳನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲಾಗಿದೆ. ಕರ್ನಾಟಕ ಬೆಸ್ಟ್ ಸಹ ಆ್ಯಡ್ ಝೀಬ್ರಾವನ್ನು ಹೊಂದಿದೆ. ಆದರೆ, ಸದ್ಯ ಜಾಹೀರಾತುಗಳು ಬೇಡವೆಂದು ಕೋಡ್ ಗಳನ್ನು ಆಫ್ ಮಾಡಿಡಲಾಗಿದೆ. ನಿಮ್ಮ ವೆಬ್ ಸೈಟ್ ಗೆ ಭೇಟಿ ನೀಡುವವರ ಸಂಖ್ಯೆ ಸಾಧಾರಣವಾಗಿದ್ದರೂ (ದೊರಕುವ ಹಣವೂ ಸಾಧಾರಣವಾಗಿರುತ್ತದೆ) ಆ್ಯಡ್ ಝೀಬ್ರಾಕ್ಕೆ ಪ್ರಯತ್ನಿಸಬಹುದು.

ಕೊಲಂಬಿಯಾ ಆನ್ ಲೈನ್

ಇದು ಟೈಮ್ಸ್ ನೆಟ್ ವರ್ಕ್ ನ ವೆಬ್ ಸೈಟ್. ಇದು ಸಹ ಲೇಖನ ಕ್ಲಿಕ್ ರೂಪದಲ್ಲಿರುವ ಜಾಹೀರಾತುಗಳು. ಇಂಗ್ಲಿಷ್ ಅಥವಾ ಇತರೆ ಭಾಷೆಗಳಲ್ಲಿ ಜಾಹೀರಾತು ಲೇಖನಗಳು ನಿಮ್ಮ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುತ್ತವೆ. ನಿಮ್ಮ ವೆಬ್ ಸೈಟ್ ಗೆ ಅತ್ಯುತ್ತಮ ಪೇಜ್ ವ್ಯೂಸ್ ಇದ್ದರೆ ಕೊಲಂಬಿಯಾ ಆನ್ ಲೈನ್ ಗೆ ಪ್ರಯತ್ನಿಸಬಹುದು. https://www.colombiaonline.com/

ದೇಶಿ ಪರ್ಲ್

ಇದು ಸಹ ಕಂಟೆಂಟ್ ಮಾರ್ಕೆಂಟಿಂಗ್ ತಂತ್ರವನ್ನು ಬಳಸುತ್ತದೆ. ಇಲ್ಲೂ ಕನ್ನಡ, ಇಂಗ್ಲಿಷ್, ಹಿಂದಿ ಇತ್ಯಾದಿ ಭಾಷೆಗಳ ಲೇಖನ ಲಿಂಕ್ ಗಳ ರೂಪದಲ್ಲಿ ಜಾಹೀರಾತುಗಳು ಕಾಣಿಸುತ್ತವೆ. ಮುಖ್ಯವಾಗಿ ಬಡ ಮಕ್ಕಳಿಗೆ ಸಹಾಯ ಮಾಡಿ ಇತ್ಯಾದಿ ಜಾಹೀರಾತುಗಳು ಹೆಚ್ಚಿರುತ್ತವೆ. https://www.desipearl.com/login/

ಇಷ್ಟು ಮಾತ್ರವಲ್ಲದೆ ಇನ್ನೂ ಹಲವು ಆಯ್ಕೆಗಳು ಇವೆ. ಇವು ಇಂಗ್ಲಿಷ್ ವೆಬ್ ಸೈಟ್ ಗಳಿಗೆ ನೀಡುವಷ್ಟು ಹಣವನ್ನು ನೀಡುವುದಿಲ್ಲವೆಂಬ ದೂರಿದೆ. ಆದರೂ, ಅತ್ಯುತ್ತಮ ಪೇಜ್ ವ್ಯೂಸ್ ಇರುವವರು ಬೇರೆ ಜಾಹೀರಾತು ಮೂಲಗಳಿಗೂ ಪ್ರಯತ್ನಿಸಬಹುದು. ಗೂಗಲ್ ಆ್ಯಡ್ ಸೆನ್ಸ್ ಆಲ್ಟರ್ನೇಟೀವ್ ಎಂದು ಹುಡುಕಿದರೆ ಸಾಕಷ್ಟು ಜಾಹೀರಾತು ಮೂಲಗಳು ದೊರಕಬಹುದು. ಆದರೆ, ಅವುಗಳನ್ನು ಕರ್ನಾಟಕ ಬೆಸ್ಟ್ ಪರೀಕ್ಷಿಸಿ ನೋಡಿಲ್ಲದೆ ಇರುವುದರಿಂದ ಇಲ್ಲಿ ರೆಕಮಂಡ್ ಮಾಡುತ್ತಿಲ್ಲ.

ಮೀಡಿಯಾ ನೆಟ್

ನಿಮ್ಮ ವೆಬ್ ಸೈಟ್ ಗೆ ತಿಂಗಳಿಗೆ ಕನಿಷ್ಠ 10 ಲಕ್ಷ ಪೇಜ್ ವ್ಯೂಸ್ ಇದ್ದರೆ ಮೀಡಿಯಾ.ನೆಟ್ ಎಂಬ ಆನ್ ಲೈನ್ ಜಾಹೀರಾತು ಸೇವೆಗೆ ನೋಂದಣಿ ಪಡೆಯಬಹುದು.

ಅಫಿಲಿಯೇಟ್ ಎಂಬ ಜಾಹೀರಾತು ಮೂಲಗಳು

ಕನ್ನಡದ ವೆಬ್ ಸೈಟ್ ಬ್ಲಾಗ್ ಗಳಿಗೂ ಅಫಿಲಿಯೇಟ್ ಜಾಹೀರಾತುಗಳು ಅತ್ಯುತ್ತಮ ಆದಾಯದ ಮೂಲಗಳಾಗಬಹುದು. ಉದಾಹರಣೆಗೆ ನೀವು ಅಮೇಝಾನ್ ವೆಬ್ ಸೈಟ್ ನ ಅಫಿಲಿಯೇಟ್ ವಿಭಾಗಕ್ಕೆ ಹೋಗಿ ನೋಂದಾಯಿಸಿಕೊಂಡರೆ ಅಮೇಝಾನ್ ನಲ್ಲಿರುವ ಉತ್ಪನ್ನಗಳ ಲಿಂಕ್, ಕೋಡ್ ಪಡೆದು ನಿಮ್ಮ ವೆಬ್ ಸೈಟಿನಲ್ಲಿ ಪ್ರದರ್ಶಿಸಬಹುದು. ಉದಾಹರಣೆಗೆ ನೀವು 10 ಸಾವಿರ ರೂಪಾಯಿಯ ಅಮೇಝಾನ್ ತಾಣದಲ್ಲಿದ್ದ ಮೊಬೈಲ್ ಅನ್ನು ಪ್ರದರ್ಶನಕ್ಕಿಟ್ಟರೆ, ನಿಮ್ಮ ವೆಬ್ ಸೈಟಿಗೆ ಬಂದ ಓದುಗರು ಆ ಮೊಬೈಲ್ ಕುರಿತು ಆಕರ್ಷಿತರಾಗಿ, ನಿಮ್ಮ ವೆಬ್ ಸೈಟಿನಲ್ಲಿರುವ ಲಿಂಕ್ ಮೂಲಕ ಅಮೇಝಾನ್ ಪ್ರವೇಶಿಸಿ ಖರೀದಿಸಿದರೆ ನಿಮಗೆ ಕಮಿಷನ್ ದೊರಕುತ್ತದೆ. ಕೆಲವೊಂದು ಉತ್ಪನ್ನಗಳಿಗೆ 10-15 ಪರ್ಸೆಂಟ್ ಕಮಿಷನ್ ದೊರಕುತ್ತದೆ. ಕಮಿಷನ್ ಎನ್ನುವುದು ಉತ್ಪನ್ನದಿಂದ ಉತ್ಪನ್ನಕ್ಕೆ ಭಿನ್ನವಾಗಿರುತ್ತದೆ. 10 ಸಾವಿರ ರೂ.ಗೆ 10 ಪರ್ಸೆಂಟ್ ಕಮಿಷನ್ ಎಂದರೆ 1000 ರೂ. ನಿಮ್ಮ ಪಾಲಾಗುತ್ತದೆ. ಉದಾಹರಣೆಗೆ ಈ ಕೆಳಗೆ ಒಂದು ಜಾಹೀರಾತು ನೀಡಲಾಗಿದೆ. ಹೋಗಿ ಖರೀದಿಸಿರಿ J

ಇಲ್ಲಿ ಅಮೇಝಾನ್ ಎನ್ನುವುದು ಉದಾಹರಣೆಯಷ್ಟೇ. ಬಹುತೇಕ ಆನ್ ಲೈನ್ ವ್ಯವಹಾರಗಳು ಇಂದು ಅಫಿಲಿಯೇಟ್ ಹೊಂದಿವೆ. ನೀವು ನಿಮಗೆ ಬೇಕಾದ ಅಫಿಲಿಯೇಟ್ ಪ್ರೋಗ್ರಾಂಗೆ ಸೇರಬಹುದು.

ನೀವೇ ಜಾಹೀರಾತುದಾರರನ್ನು ಹುಡುಕಿ

ನೀವೇ ಗ್ರಾಹಕರನ್ನು ಹುಡುಕಿ ಅವರಿಂದ ಜಾಹೀರಾತುಗಳನ್ನು ಪಡೆದು ನಿಮ್ಮ ವೆಬ್ ಸೈಟ್ ನಲ್ಲಿ ಪ್ರದರ್ಶಿಸಬಹುದು. ಸುದ್ದಿಪತ್ರಿಕೆಗಳ ಜಾಹೀರಾತುಗಳಂತೆ ಅಥವಾ ಕೊಂಚ ಕೋಡಿಂಗ್ ಗೊತ್ತಿದ್ದರೆ ಫ್ಲಾಷ್, ಝಿಪ್ ಜಾಹೀರಾತುಗಳನ್ನು ಪ್ರದರ್ಶಿಸಬಹುದು. ಇದಕ್ಕೆ ನೀವೇ ಜಾಹೀರಾತುದಾರರನ್ನು ಹುಡುಕಬೇಕಾಗಬಹುದು. ಜಾಹೀರಾತು ಏಜೆನ್ಸಿಗಳ ಮೂಲಕವೂ ಪ್ರಯತ್ನಿಸಬಹುದು.

ಆನ್ ಲೈನ್ ಇನ್ ಫ್ಲೂಯೆನ್ಸರ್

ನೀವು ಆನ್ ಲೈನ್ ನಲ್ಲಿ ಉತ್ಪನ್ನಗಳನ್ನು ಉತ್ತೇಜಿಸುವ ಇನ್ ಫ್ಲೋಯೆನ್ಸರ್ ತಾಣಗಳಲ್ಲಿಯೂ ನೋಂದಣಿ ಮಾಡಬಹುದು. ವಿವಿಧ ಉತ್ಪನ್ನಗಳು, ಸಂಸ್ಥೆಗಳು, ಕಂಪನಿಗಳು, ಬ್ರಾಂಡ್ ಗಳ ಕುರಿತು ನಿಮ್ಮ ವೆಬ್ ಸೈಟ್ ನಲ್ಲಿ ಪ್ರಚಾರ ಮಾಡಬೇಕಾಗುತ್ತದೆ. ಕನ್ನಡದಲ್ಲಿ ಇದಕ್ಕೆ ಸೀಮಿತ ಆಯ್ಕೆಗಳು ಇರುತ್ತವೆ.  ಉದಾಹರಣೆಗೆ ಮಂತ್ರಿ ಮಾಲ್ ಸೀಸನ್ ಎಂಡ್ ಸೇಲ್ ಎಂಬ ಆಯ್ಕೆಯನ್ನು ಇನ್ ಫ್ಲೂಯೆನ್ಸರ್ ಗಳಿಗೆ ನೀಡಬಹುದು. ನೀವು ಅದಕ್ಕೆ ಸಂಬಂಧಪಟ್ಟ ಇನ್ ಫ್ಲೂಯೆನ್ಸರ್ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಬೇಕು. ನಂತರ ಇದಕ್ಕೆ ಅಪ್ಲೈ ಮಾಡಬೇಕು. ನಂತರ ಮಂತ್ರಿಮಾಲ್ ಗೆ ಹೋಗಿ ನಿಮಗೆ ಸೂಚಿಸಿದಂತೆ ಅಲ್ಲಿ ಫೋಟೊ ತೆಗೆದು, ನಿಮ್ಮ ವೆಬ್ ಸೈಟ್ ನಲ್ಲಿ ಲೇಖನ ಬರೆಯಬೇಕು. ಕನ್ನಡದಲ್ಲಿ ಬರೆಯುವ ಜಾಹೀರಾತುಗಳು ನಿಮಗೆ ಅಪರೂಪಕ್ಕೆ ದೊರಕಬಹುದು.

ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.