ಕನ್ನಡ ವೆಬ್‌ಸೈಟ್‌ಗಳು ಆಡ್‌ಸೆನ್ಸ್‌ ಮೂಲಕ ಎಷ್ಟು ಆದಾಯ ಗಳಿಸಬಹುದು?

By | 30/05/2021

ಈ ಲೇಖನವು ಧ್ವನಿರೂಪದಲ್ಲಿಯೂ ಲಭ್ಯ. ಇದು ಪಾಡ್‌ ಕಾಸ್ಟ್‌ ಪ್ರಾಯೋಗಿಕ ಧ್ವನಿ(ವೃತ್ತಿಪರವಾಗಿಲ್ಲ)

ವೆಬ್‌ಸೈಟ್‌ಗಳಿಗೆ ಬರುವ ವೀಕ್ಷಣೆಗಳ ಸಂಖ್ಯೆಗಳಿಗೆ ತಕ್ಕಂತೆ ಹಣಗಳಿಕೆ ಮಾಡಲು ಸಾಕಷ್ಟು ಅವಕಾಶ ಇಂಟರ್‌ನೆಟ್‌ನಲ್ಲಿದೆ. ಆನ್‌ಲೈನ್‌ನಲ್ಲಿ ಹಣ ಗಳಿಸುವ ಹಲವು ಆಯ್ಕೆಗಳಲ್ಲಿ ಗೂಗಲ್ ಆಡ್ಸೆನ್ಸ್ ಜನಪ್ರಿಯವಾದದ್ದು. ಹಾಗಾದರೆ, ಕನ್ನಡ ವೆಬ್ಸೈಟ್ಗಳು ದಿನಕ್ಕೆ ಸರಾಸರಿ ಎಷ್ಟು ಆದಾಯವನ್ನು ಆಡ್‌ಸೆನ್ಸ್‌ ಮೂಲಕ ಗಳಿಸಬಹುದು ಎನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.


ಇಂಟರ್ನೆಟ್ನಲ್ಲಿ ಹುಡುಕಿದರೆ ಆಡ್‌ಸೆನ್ಸ್‌ ಆದಾಯದ ಕುರಿತು ವಿವಿಧ ಮಾಹಿತಿಗಳು ನಿಮಗೆ ದೊರಕಬಹುದು. ಆದರೆ, ಅವು ಬಹುತೇಕವಾಗಿ ಇಂಗ್ಲಿಷ್ ಬ್ಲಾಗ್, ಇಂಗ್ಲಿಷ್ ವೆಬ್ಸೈಟ್ಗಳಿಗೆ ಸಂಬಂಧಪಟ್ಟವು. ಅವುಗಳ ಲೆಕ್ಕಾಚಾರ ನಮ್ಮ ಕನ್ನಡದ ಬ್ಲಾಗ್, ವೆಬ್‌ಸೈಟ್‌ಗಳಿಗೆ ಹೋಲಿಕೆಯಾಗವು. ಮುಖ್ಯವಾಗಿ ಅವುಗಳಿಗೆ ಜಗತ್ತಿನ ಮೂಲೆಮೂಲೆಗಳಿಂದ ಓದುಗರಿದ್ದಾರೆ. ಅವರ ವೆಬ್ ಸೈಟ್ಗಳಲ್ಲಿ ಪ್ರಕಟವಾಗುವ ಆಡ್ ದರವೂ ಹೆಚ್ಚಿರುತ್ತದೆ.

ಕರ್ನಾಟಕದ ಸುಮಾರು ೫೦ಕ್ಕೂ ಹೆಚ್ಚು ಬ್ಲಾಗ್, ನ್ಯೂಸ್ ವೆಬ್ಸೈಟ್ಗಳನ್ನು ಮತ್ತು ಅವುಗಳು ಗಳಿಸುವ ಆಡ್ಸೆನ್ಸ್ ಆದಾಯವನ್ನು ಅವಲೋಕಿಸಿ ಈ ಬ್ಲಾಗ್ ಬರಹದಲ್ಲಿ ಹೆಚ್ಚಿನ ವಿವರವನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಆಡ್ಸೆನ್ಸ್ ಮೂಲಕ ಯೂಟ್ಯೂಬ್ನಲ್ಲಿಯೂ ಹಣಗಳಿಸಬಹುದು. ಈ ಲೇಖನದಲ್ಲಿ ಮುಖ್ಯವಾಗಿ ಬ್ಲಾಗ್ ಬರಹಗಳು, ಸಣ್ಣ ನ್ಯೂಸ್ ವೆಬ್ಸೈಟ್ಗಳು ಆಡ್ಸೆನ್ಸ್ ಮೂಲಕ ಎಷ್ಟು ಆದಾಯ ಪಡೆಯಬಹುದು ಎನ್ನುವುದನ್ನು ವಿಶ್ಲೇಷಿಸಲಾಗಿದೆ.

ಗೂಗಲ್ ಆಡ್‌ಸೆನ್ಸ್‌ ಕುರಿತು ಮಾಹಿತಿ

ಗೂಗಲ್ ಕಂಪನಿಯು ಪಬ್ಲಿಷರ್‌ಗಳಿಗಾಗಿ ೨೦೦೩ರ ಆಸುಪಾಸಿನಲ್ಲಿ ಗೂಗಲ್ ಆಡ್ಸೆನ್ಸ್ ಎಂಬ ಜಾಹೀರಾತು ಆಯ್ಕೆಯ ಮೂಲಕ ಹಣಗಳಿಸುವ ಆಯ್ಕೆಯನ್ನು ನೀಡಿತ್ತು. ಪ್ರತಿವರ್ಷ ಆನ್ಲೈನ್ ಪಬ್ಲಿಷರ್ಗಳಿಗೆ ಗೂಗಲ್ ಸುಮಾರು ೧೦ ಶತಲಕ್ಷ ಡಾಲರ್ ಅನ್ನು ಆದಾಯದ ರೂಪದಲ್ಲಿ ನೀಡುತ್ತಿದೆ. ಹೀಗಾಗಿ, ಇದು ಜಾಗತಿಕವಾಗಿಯೇ ಹೆಚ್ಚು ಜನಪ್ರಿಯತೆ ಪಡೆದಿರುವ ಇಂಟರ್ನೆಟ್ ಜಾಹೀರಾತು ಆಯ್ಕೆಯಾಗಿದೆ.

ಜಾಹೀರಾತು ನೀಡುವವರಿಗೆ ಮತ್ತು ಜಾಹೀರಾತು ಪ್ರದರ್ಶಿಸುವವರಿಗೆ ಉತ್ತಮ ಭದ್ರತೆ, ಪಾರದರ್ಶಕತೆಯನ್ನು ಗೂಗಲ್ ನೀಡುತ್ತಿದೆ. ನೀವು ನಿಮ್ಮ ಬ್ಲಾಗ್ನಲ್ಲಿ ಹೆಚ್ಚು ಆದಾಯ ಗಳಿಸಲು ಅಡ್ಡ ಹಾದಿ ಹಿಡಿದರೆ ಮುಲಾಜಿಲ್ಲದೆ ನಿಮ್ಮ ಆಡ್ಸೆನ್ಸ್ ಖಾತೆ ಬ್ಲಾಕ್ ಆಗುತ್ತದೆ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಆಡ್ಸೆನ್ಸ್ನಲ್ಲಿ ಕಾರ್ಯನಿರ್ವಹಿಸಬೇಕು. ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್ಗಳಿಗೆ ವಿವಿಧ ಸೈಜ್ನ, ರೆಸ್ಪಾನ್ಸಿವ್ ಜಾಹೀರಾತು ಮಾದರಿಗಳು ಆಡ್ಸೆನ್ಸ್ನಲ್ಲಿ ಲಭ್ಯವಿದೆ. ನಿಮ್ಮ ವೆಬ್ಸೈಟ್ನಲ್ಲಿ ಎಷ್ಟು ಪ್ರಮಾಣದಲ್ಲಿ ಜಾಹೀರಾತು ತುಂಬಬೇಕು ಎನ್ನುವ ಆಯ್ಕೆಯೂ ಇದೆ.

ಒಮ್ಮೆ ನೂರು ಡಾಲರ್ ಆಗುವ ತನಕ ಆಡ್ಸೆನ್ಸ್ನ ವಿವಿಧ ನಿಯಮಗಳನ್ನು ಅನುಸರಿಸಿ, ವಿಳಾಸ, ಪಿನ್ ದೃಢೀಕರಣ, ಬ್ಯಾಂಕ್ ವಿವರ ನಮೂದಿಸುವುದು ಇತ್ಯಾದಿಗಳನ್ನು ಮಾಡಿಬಿಟ್ಟರೆ ಪ್ರತಿತಿಂಗಳೂ ೧೦೦ ಡಾಲರ್ಗಿಂತ ಹೆಚ್ಚು ಮೊತ್ತವಾದ ತಕ್ಷಣ ನಿಗದಿತ ಸಮಯದಲ್ಲಿ ನಿಮ್ಮ ಖಾತೆಗೆ ಹಣ ಠಣ್ ಎಂದು ಬೀಳುತ್ತದೆ. ನೀವು ಗುಣಮಟ್ಟದ ಕಂಟೆಂಟ್ ನೀಡಲು ಗಮನ ನೀಡಿದರೆ ಸಾಕು. ಹೆಚ್ಚು ವೀಕ್ಷಕರು ನಿಮ್ಮ ವೆಬ್ಸೈಟ್ಗೆ ಬರುತ್ತಿದ್ದಂತೆ ಆದಾಯದ ಪ್ರಮಾಣವೂ ಹೆಚ್ಚುತ್ತ ಹೋಗುತ್ತದೆ.

ಇದನ್ನೂ ಓದಿ: ಗೂಗಲ್‌ ಆಡ್‌ಸೆನ್ಸ್‌ ಇದೀಗ ಕನ್ನಡ ಭಾಷೆಯಲ್ಲಿಯೂ ಲಭ್ಯ- ಕನ್ನಡ ಬ್ಲಾಗ್‌, ಸುದ್ದಿತಾಣಗಳಿಗೆ ಶುಭಸುದ್ದಿ

ಆಡ್ಸೆನ್ಸ್ ಮೂಲಕ ಎಷ್ಟು ಆದಾಯ ಗಳಿಸಬಹುದು?

ಮೊದಲಿಗೆ ಭಾರತದಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಬ್ಲಾಗ್ ಹೊಂದಿರುವವರು ಎಷ್ಟು ಆದಾಯ ಗಳಿಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಕೊಳ್ಳೋಣ. ಅಮಿತ್‌ ಅಗರ್‌ವಾಲ್‌ ಎನ್ನುವ ವ್ಯಕ್ತಿ ದೇಶದಲ್ಲಿ ಹೆಚ್ಚು ಆದಾಯ ಗಳಿಸುವ ಬ್ಲಾಗರ್‌. ಅವರ ಆಡ್‌ಸೆನ್ಸ್‌ ಆದಾಯ ತಿಂಗಳಿಗೆ ೨೫ ಸಾವಿರ ಡಾಲರ್‌ ಇದೆ. ಅಂದರೆ ಅವರು ಆಡ್‌ಸೆನ್ಸ್‌ ಮೂಲಕವೇ ತಿಂಗಳಿಗೆ ೧೮ ಲಕ್ಷ ರೂ. ಹಣ ಗಳಿಸುತ್ತಾರೆ. ಅವರು ಲ್ಯಾಬ್‌ನಲ್. ಆರ್ಗ್ ಎಂಬ ಬ್ಲಾಗ್ ಹೊಂದಿದ್ದಾರೆ. ಇವರಿಗೆ ಆಡ್‌ಸೆನ್ಸ್‌ ಒಂದೇ ಆದಾಯದ ಮೂಲವಲ್ಲ. ಇದೊಂದು ಆದಾಯದ ಭಾಗವಷ್ಟೇ.

ಇದೇ ರೀತಿ ಶೌಟ್‌ಮಿಲೌಡ್‌ ಎಂಬ ಬ್ಲಾಗ್‌ನ ಹರ್ಷ್‌ ಅಗರ್‌ವಾಲ್‌ ತನ್ನ ಹಲವು ಬ್ಲಾಗ್‌ಗಳ ಮೂಲಕ ತಿಂಗಳಿಗೆ ೧೫-೧೮ ಸಾವಿರ ಡಾಲರ್‌ ಆದಾಯ ಗಳಿಸುತ್ತಾರಂತೆ. ಇಂತಹ ಮಾಹಿತಿ ಗೂಗಲ್‌ನಲ್ಲಿ ನಿಮಗೆ ದೊರಕುತ್ತದೆ. Top 10 Google Adsense Earners in India ಅಥವಾ Top 10 Google Adsense Earners in World ಇತ್ಯಾದಿ ಕೀವರ್ಡ್‌ಗಳ ಮೂಲಕ ಗೂಗಲ್‌ನಲ್ಲಿ ಹುಡುಕಿದರೆ ಸಾಕಷ್ಟು ಮಾಹಿತಿಗಳು ದೊರಕುತ್ತವೆ.

ಯೂಟ್ಯೂಬ್‌ನಲ್ಲಿ ನಿಮ್ಮ ಮನೆಯ ಚಿಕ್ಕ ಮಕ್ಕಳು ನೋಡುತ್ತಿರಬಹುದಾದ vlad and niki ಹುಡುಗರು ಯೂಟ್ಯೂಬ್‌ ಚಾನೆಲ್ ಮೂಲಕ ವರ್ಷಕ್ಕೆ ಹದಿನಾರು ಕೋಟಿ ರೂಪಾಯಿಗಿಂತಲೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಇವೆಲ್ಲ ನೋಡಿದಾಗ ನಮಗೆ ನಿಮಗೆ ಇದೇ ರೀತಿ ಆದಾಯ ಗಳಿಸುವ ಬಯಕೆ ಆಗಬಹುದು. ಯೂಟ್ಯೂಬ್‌ನಲ್ಲಿ ಏನಾದರೂ ಕ್ರಿಯೇಟಿವಿಟಿ ತೋರಿಸಿ ಜಗತ್ತನ್ನು ಸೆಳೆಯುವ ಶಕ್ತಿ ನಿಮ್ಮಲ್ಲಿಯೂ ಇರಬಹುದು. ನೀವೂ ಇದೇ ರೀತಿ ಲಕ್ಷಲಕ್ಷಗಳಲ್ಲಿ, ಕೋಟಿಕೋಟಿಗಳಲ್ಲಿ ಆದಾಯ ಗಳಿಸುವಂತೆ ಆಗಬಹುದು. ದಯವಿಟ್ಟು ಪ್ರಯತ್ನಿಸಿ.

ಈಗ ಮುಖ್ಯ ವಿಷಯಕ್ಕೆ ಬರೋಣ. ಕನ್ನಡದ ಬ್ಲಾಗ್‌ ಮತ್ತು ಸಣ್ಣಪುಟ್ಟ ನ್ಯೂಸ್‌ವೆಬ್ಸೈಟ್‌ಗಳು ಎಷ್ಟು ಆದಾಯ ಗಳಿಸಬಹುದು ಎನ್ನುವ ಕುರಿತು ಒಂದಿಷ್ಟು ಮಾಹಿತಿ ಪಡೆಯೋಣ. ಲಕ್ಷಲಕ್ಷ ಗಳಿಸುವ ನಿಮ್ಮ ಆಸೆಗೆ ಈ ಮುಂದಿನ ಮಾಹಿತಿಗಳು ನಿರಾಶೆ ಹುಟ್ಟಿಸಬಹುದು. ಆದರೆ, ಕೆಲವೊಂದು ಫ್ಯಾಕ್ಟ್ ಗಳನ್ನು ಅರ್ಥ ಮಾಡಿಕೊಂಡರೆ ಮಾತ್ರ ಯಶಸ್ಸು ಪಡೆಯಬಹುದು.

  • ಕನ್ನಡದಲ್ಲಿ ತಾಲೂಕು ಮಟ್ಟದಲ್ಲಿ ನಡೆಯುವ ನ್ಯೂಸ್‌ ಪೋರ್ಟಲ್‌ವೊಂದಕ್ಕೆ ದಿನಕ್ಕೆ 1-5 ಸಾವಿರ ಪೇಜ್‌ವ್ಯೂಸ್‌ ಬರುತ್ತಿದೆ. ಇವರಿಗೆ ತಿಂಗಳಿಗೆ ಸುಮಾರು 60-80 ಡಾಲರ್‌ ಆದಾಯ ಬರುತ್ತಿದೆ. ಇವರ ದಿನದ ಆದಾಯ ೧-೩ ಡಾಲರ್‌ ಆಸುಪಾಸಿನಲ್ಲಿದೆ.
  • ಇನ್ನೊಂದು ತಾಲೂಕು ಮಟ್ಟದ ವೆಬ್‌ಸೈಟ್‌ ಸಾಕಷ್ಟು ವೈರಲ್‌ ಸುದ್ದಿಗಳನ್ನೂ ಪ್ರಕಟಿಸುತ್ತಿದ್ದು, ದಿನಕ್ಕೆ ಸರಾಸರಿ ೫೦ ಸಾವಿರ ಪೇಜ್‌ವ್ಯೂಸ್‌ ಪಡೆಯುತ್ತಿದೆ. ಇವರ ದಿನದ ಆಡ್‌ಸೆನ್ಸ್‌ ಆದಾಯ ೧೩-೨೦ ಡಾಲರ್‌ ಇದ್ದು, ತಿಂಗಳಿಗೆ 300-450 ಡಾಲರ್‌ ಆದಾಯ ಪಡೆಯುತ್ತಿದ್ದಾರೆ.
  • ರಾಜ್ಯ ಮಟ್ಟದಲ್ಲಿ ಇತ್ತೀಚೆಗೆ ಆರಂಭವಾದ ನ್ಯೂಸ್ ವೆಬ್‌ಸೈಟ್‌ ದಿನದ ಪೇಜ್‌ವ್ಯೂಸ್‌ ೧-೨ ಸಾವಿರ ಇದ್ದು, ದಿನಕ್ಕೆ ಒಂದು ಡಾಲರ್‌, ೨ ಡಾಲರ್‌ ದೊರಕುತ್ತಿದೆ.
  • ಇನ್ನು ಹಲವು ವೆಬ್‌ಸೈಟ್‌ಗಳು ದಿನಕ್ಕೆ ಹತ್ತು ಸಾವಿರದೊಳಗೆ ಪೇಜ್‌ವ್ಯೂಸ್‌ ಹೊಂದಿದ್ದು, ತಿಂಗಳ ಕೊನೆಗೆ ೧೦೦ ಡಾಲರ್‌ ಆಸುಪಾಸಿನಲ್ಲಿ ಆದಾಯ ಪಡೆಯುತ್ತಿವೆ.
  • ಕೆಲವೊಂದು ವೆಬ್‌ಸೈಟ್‌ಗಳಲ್ಲಿ ತುಂಬಾ ಕಷ್ಟಪಟ್ಟು ಗುಣಮಟ್ಟದ ಕಂಟೆಂಟ್‌ ನೀಡಿದರೂ ಪೇಜ್‌ವ್ಯೂಸ್‌ ಕಡಿಮೆ ಇರುತ್ತದೆ. ಆದಾಯ ಕಡಿಮೆ ಬರುತ್ತದೆ. ಅವರ ಪಟ್ಟ ಕಷ್ಟಕ್ಕೆ ತಕ್ಕಂತೆ ಆದಾಯ ದೊರಕುತ್ತಿಲ್ಲ.
  • ಇನ್ನು ಕೆಲವು ವೆಬ್ಸೈಟ್‌ಗಳು ಕಾಪಿಪೇಸ್ಟ್‌, ಅತ್ಯಾಕರ್ಷಕ ಶೈಲಿ, ದಾರಿತಪ್ಪಿಸುವ ಹೆಡ್‌ಲೈನ್‌ ಮೂಲಕ ಹೆಚ್ಚು ಪೇಜ್‌ವ್ಯೂಸ್‌ ಪಡೆಯುತ್ತಿವೆ. ಅವುಗಳ ಆದಾಯ ಉತ್ತಮವಿದೆ.

ಕರ್ನಾಟಕ ಬೆಸ್ಟ್‌ ಸಲಹೆ ಏನು?

ನೀವು ಹೆಚ್ಚು ಪುಟ ವೀಕ್ಷಣೆ ಬಯಸುವ ವೆಬ್‌ಸೈಟ್‌ ಬಯಸಿದರೆ ಹೋಸ್ಟಿಂಗ್‌ ವೆಚ್ಚ ಅಧಿಕವಾಗಿರುತ್ತದೆ. ಅಂದರೆ ದಿನಕ್ಕೆ ೫೦ ಸಾವಿರ ಪೇಜ್‌ವ್ಯೂಸ್‌, ೧ ಲಕ್ಷ ಪೇಜ್‌ವ್ಯೂಸ್‌, ೨ ಲಕ್ಷ ಪೇಜ್‌ವ್ಯೂಸ್‌ ಬಂದರೆ ಆಡ್‌ಸೆನ್ಸ್‌ ಆದಾಯ ಹೆಚ್ಚಿರುತ್ತದೆ. ಹೋಸ್ಟಿಂಗ್ ಗೆ ಕೊಂಚ ಅಧಿಕ ಪಾವತಿಸಬೇಕಿರುತ್ತದೆ.
ದಿನಕ್ಕೆ ಹತ್ತಿಪ್ಪತ್ತು ಸಾವಿರ ಪೇಜ್ ವ್ಯೂಸ್‌ ಮಾತ್ರ ಬಂದರೆ ಕಡಿಮೆ ದರದ ಹೋಸ್ಟಿಂಗ್‌ ಸಾಕಾಗುತ್ತದೆ. ಆಡ್‌ಸೆನ್ಸ್‌ ಆದಾಯ ಕಡಿಮೆ ಇರುತ್ತದೆ.
ಆಡ್‌ಸೆನ್ಸ್‌ ಆದಾಯವನ್ನೇ ನೆಚ್ಚಿಕೊಳ್ಳುವುದಾದರೆ ನೀವು ಹೆಚ್ಚು ಪೇಜ್‌ವ್ಯೂಸ್‌ ಪಡೆಯಲು ಇರುವ ಹಾದಿಗಳನ್ನೆಲ್ಲ ಬಳಸಿಕೊಳ್ಳಬೇಕಾಗುತ್ತದೆ. ಆದರೆ, ಕಡಿಮೆ ಪೇಜ್‌ವ್ಯೂಸ್‌ ಸಾಕು, ಒಳ್ಳೆಯ ಬ್ರ್ಯಾಂಡ್‌ ಕ್ರಿಯೆಟ್‌ ಆಗಬೇಕು ಎಂದಾದರೆ ಗುಣಮಟ್ಟದ ಪತ್ರಿಕೋದ್ಯಮ, ಬ್ಲಾಗಿಂಗ್‌ಗೆ ಆದ್ಯತೆ ನೀಡಿ. ಖಂಡಿತ ತಡವಾಗಿಯಾದರೂ ಉತ್ತಮ ಫಲಿತಾಂಶ ದೊರಕಬಹುದು.


ನಿಮ್ಮ ಬ್ಲಾಗ್‌, ವೆಬ್‌ಸೈಟ್‌ಗಳ ಬ್ರ್ಯಾಂಡ್‌ ಗುಣಮಟ್ಟ ಉತ್ತಮವಿರಲಿ. ಆದಷ್ಟು ಸ್ಥಳೀಯ ಜಾಹೀರಾತುಗಳನ್ನು ಪಡೆಯಲು ಪ್ರಯತ್ನಿಸಿ. ವಿವಿಧ ಬಿಸ್ನೆಸ್‌ಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳಿ.


ನಿಮಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ೧೦ ಲೋಕಲ್ (ಅಥವಾ ಹೆಚ್ಚು ಪ್ರಚಾರವಿರುವ ಕಂಪನಿಯ ಗ್ಲೋಬಲ್ ಜಾಹೀರಾತು) ಜಾಹೀರಾತು ದೊರಕಿದರೆ ತಿಂಗಳಿಗೆ ೨೦ ಸಾವಿರ ರೂ. ಆದಾಯ ದೊರಕುತ್ತದೆ. ಎಲ್ಲಾದರೂ ಇದೇ ರೀತಿ ೨೦ ನಿರಂತರ ಆಡ್‌ ದೊರಕಿದರೆ ಆದಾಯ ೪೦ ಸಾವಿರ ಆಗುತ್ತದೆ. ಇವುಗಳಲ್ಲಿ ಹತ್ತು ಜಾಹೀರಾತುಗಳು ದೊಡ್ಡ ಮಟ್ಟದ್ದಾಗಿದ್ದು, ತಿಂಗಳಿಗೆ ಒಂದೊಂದು ಜಾಹೀರಾತಿಗೆ ೫ ಸಾವಿರ ರೂ. ಇದ್ದರೆ ಆದಾಯ ಎಷ್ಟಾಗಬಹುದು ಲೆಕ್ಕ ಹಾಕಿ. ಇದರ ಜೊತೆ ಆಡ್‌ಸೆನ್ಸ್‌ ಜಾಹೀರಾತು ಕೆಲವು ಸಾವಿರ ರೂಪಾಯಿಯಲ್ಲಿ ದೊರಕಿದರೂ ನಿಮ್ಮ ಹೋಸ್ಟಿಂಗ್, ಇಂಟರ್ನೆಟ್‌ ಬಿಲ್‌, ಕರೆಂಟ್‌ ಬಿಲ್‌ ಸರಿದೂಗಿಸಲು ಸಾಕಾಗಬಹುದು.


ನಾನು ಕೇವಲ ಕಂಟೆಂಟ್‌ ಬರೆಯುತ್ತೇನೆ. ಕುಳಿತಲ್ಲಿಗೆ ಆದಾಯ ಬರಬೇಕು ಎಂದಾದರೆ ಕೇವಲ ಆಡ್‌ಸೆನ್ಸ್ ನೀಡುವ ಕೆಲವು ಸಾವಿರ ರೂ. ಆದಾಯಕ್ಕೆ ತೃಪ್ತಿಪಡಿ. ಒಳ್ಳೆಯ ಬ್ರಾಂಡ್‌ ಕ್ರಿಯೆಟ್‌ ಮಾಡಿ ನೇರ ಜಾಹೀರಾತುದಾರರನ್ನು ಪಡೆಯಬೇಕೆಂದಿದ್ದರೆ ಒಂದಿಷ್ಟು ಫೀಲ್ಡ್‌ವರ್ಕ್‌, ಇಮೇಲ್‌ ಸಂವಹನದ ಮೂಲಕ ಕಂಪನಿಗಳ ಜೊತೆ ಡೀಲ್‌ ಮಾಡುತ್ತಿರಬೇಕಾಗುತ್ತದೆ.


ನೆನಪಿಡಿ, ಎಲ್ಲಕ್ಕಿಂತ ಮುಖ್ಯವಾಗಿರುವುದು ಈ ಸಮಾಜಕ್ಕೆ ನಾವು ಏನನ್ನು ನೀಡುತ್ತಿದ್ದೇವೆ ಎನ್ನುವುದು. ನಿಮ್ಮ ಬ್ಲಾಗ್, ವೆಬ್‌ಸೈಟ್ ಮೂಲಕ ಸಮಾಜಕ್ಕೆ ಏನು ನೀಡುವಿರಿ ಎನ್ನುವುದು ಅತ್ಯಂತ ಮುಖ್ಯವಾದದ್ದು. ನೀವು ಒಳ್ಳೆಯ ಓದುಗರ ಸಮುದಾಯವನ್ನು ಸೃಷ್ಟಿಸಿ. ನಿಮ್ಮ ಬ್ಲಾಗ್ ಅಥವಾ ವೆಬ್‌ಸೈಟ್‌ ಒಳ್ಳೆಯ ಬ್ರ್ಯಾಂಡ್‌ ಆಗಲಿ. ಜನರಿಗೆ ಒಳ್ಳೆಯದನ್ನೇ ನೀಡಲು ಪ್ರಯತ್ನಿಸಿ. ನಿಮಗೆ ಖಂಡಿತ ಒಳ್ಳೆಯದೇ ದೊರಕುತ್ತದೆ.
ವೆಬ್‌ಸೈಟ್‌ನಲ್ಲಿ ಆದಾಯ ಗಳಿಸಲು ಇರುವ ವಿವಿಧ ಆಯ್ಕೆಗಳ ಕುರಿತು ಇನ್ನೊಂದು ಬ್ಲಾಗ್ ಬರಹದಲ್ಲಿ ಹೆಚ್ಚಿನ ಮಾಹಿತಿ ನೀಡುವೆ. ನಿಮ್ಮ ಪ್ರತಿಕ್ರಿಯೆ ದಾಖಲಿಸಲು ಮರೆಯಬೇಡಿ.

ಆಡ್‌ಸೆನ್ಸ್‌ ಮತ್ತು ಹಣ ಸಂಪಾದನೆಗೆ ಸಂಬಂಧಪಟ್ಟಂತೆ ನೀವು ಓದಬೇಕಾದ ಇತರೆ ಲೇಖನಗಳು

  1. ಗೂಗಲ್‌ ಆಡ್‌ಸೆನ್ಸ್‌ ಇದೀಗ ಕನ್ನಡ ಭಾಷೆಯಲ್ಲಿಯೂ ಲಭ್ಯ- ಕನ್ನಡ ಬ್ಲಾಗ್‌, ಸುದ್ದಿತಾಣಗಳಿಗೆ ಶುಭಸುದ್ದಿ
  2. ಆನ್ಲೈನ್ ಪೋರ್ಟಲ್ ಆರಂಭಿಸುವಿರಾ? ಸವಾಲು ಮತ್ತು ಅವಕಾಶ ತಿಳಿದುಕೊಳ್ಳಿರಿ
  3. ನಿಮ್ಮ ವೆಬ್ಸೈಟ್ಗೆ ಗೂಗಲ್ ಆಡ್ಸೆನ್ಸ್ ಅನುಮತಿ ದೊರಕಿಲ್ಲವೇ? ಈ ಟಿಪ್ಸ್ ಗಮನಿಸಿ
  4. ಗೂಗಲ್ ಆಡ್‌ಸೆನ್ಸ್‌ ಬ್ಲಾಕ್ ಆಗಬಹುದು! ಈ ಸಲಹೆಗಳನ್ನು ತಪ್ಪದೇ ಪಾಲಿಸಿ
  5. ಕೊರೊನಾ ಕಾಲದಲ್ಲಿ ಹಣ ಗಳಿಕೆಗೆ ಕೆಲವು ಅದ್ಭುತ ಉಪಾಯಗಳು!
  6. ನಿಮಗೊಂದು ಸ್ವಂತ ವೆಬ್‌ಸೈಟ್‌ ಬೇಕೆ? ಇಲ್ಲಿದೆ ಹೆಚ್ಚಿನ ಮಾಹಿತಿ
Author: Rashmi Kannadathi

Profession: consultant optometrist. Hobby: Web Developer, SEO Consultaņt, Bloggȩr

Leave a Reply

Your email address will not be published. Required fields are marked *