ಆನ್ಲೈನ್ ಪೋರ್ಟಲ್ ಆರಂಭಿಸುವಿರಾ? ಸವಾಲು ಮತ್ತು ಅವಕಾಶ ತಿಳಿದುಕೊಳ್ಳಿರಿ

By | 28/06/2020

ಮುದ್ರಣ ಮಾಧ್ಯಮಕ್ಕೆ ಭವಿಷ್ಯವಿಲ್ಲವೆಂಬ ಸುದ್ದಿ ಸುದ್ದಿಮನೆಯಿಂದ ಸುದ್ದಿಮನೆಯೊಳಗೆ ಬಂದು ಸಾಕಷ್ಟು ವರ್ಷಗಳು ಕಳೆದಿವೆ. ಆದರೂ, ಇನ್ನೂ ಹತ್ತಿಪ್ಪತ್ತು ವರ್ಷಗಳು ಏನಾಗಾದೂ ಎಂಬ ಸ್ವಯಂ ನಂಬಿಕೆಯಿಂದ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಕೊರೊನಾ ಎಂಬುಂದು ಕಾಲಘಟ್ಟವನ್ನು ಸಾಕಷ್ಟು ಸರಿಸಿಬಿಟ್ಟಿದೆ. ಮುದ್ರಣ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುವ ದೊಡ್ಡಪಡೆಯೇ ಕೆಲಸ ಕಳೆದುಕೊಂಡಾಗಿದೆ. ಇದೇ ಸಮಯದಲ್ಲಿ ಡಿಜಿಟಲ್‌ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಕಳೆದ ಒಂದು ವರ್ಷದಿಂದ ಸಾಕಷ್ಟು ಆನ್‌ಲೈನ್‌ ಪೋರ್ಟಲ್‌ಗಳು ಹುಟ್ಟಿಕೊಂಡಿವೆ.

ಆನ್‌ಲೈನ್‌ನಲ್ಲಿ ಹೊಸತು ಆರಂಭಿಸಲು ಹೆಚ್ಚು ಹಣ ಬೇಕಿಲ್ಲ. ಒಂದು ಹೋಸ್ಟಿಂಗ್‌, ಡೊಮೈನ್‌ ಇದ್ದರೆ ಸಾಕು. ಜೊತೆಗೆ ಒಂದು ವೆಬ್‌ಸೈಟ್‌ ವಿನ್ಯಾಸವಿದ್ದರೆ ಸಾಕು.  ನಿಮ್ಮ ಕನಸಿನ ಆನ್‌ಲೈನ್‌ ವ್ಯವಹಾರ ಆರಂಭಿಸಬಹುದು. ಅದು ಪ್ರಾಡಕ್ಟ್‌ ಮಾರಾಟ ಇರಬಹುದು. ವಿಡಿಯೋ, ಪೊಡೊಕಾಸ್ಟ್‌ ಅಥವಾ ಕಂಟೆಂಟ್‌ ಬರವಣಿಗೆ ಇರಬಹುದು. ಈ ಎಲ್ಲಾ ವ್ಯವಹಾರಗಳ ಹಿಂದೆ ಸಹಜವಾಗಿ ಹಣ ಸಂಪಾದನೆಯ ಕನಸು ಇರುತ್ತದೆ. ಆದರೆ, ಬಹುತೇಕರಿಗೆ ಕನಸು ಇರುತ್ತದೆ. ಆನ್‌ಲೈನ್‌ ಜಗತ್ತಿನ ಕುರಿತು ಸರಿಯಾದ ಅರಿವು ಇರುವುದಿಲ್ಲ.

ಆನ್‌ಲೈನ್‌ ಪೋರ್ಟಲ್‌ ಅಥವಾ ಇತರೆ ಡಿಜಿಟಲ್‌ ವ್ಯವಹಾರಕ್ಕೆ ಹಣಕ್ಕಿಂತ ಹೆಚ್ಚಿಗೆ ಬೇಕಿರುವುದು ನಿಮ್ಮ ಸಮಯ. ನೀವು ದಿನದ ೨೪ ಗಂಟೆಯಲ್ಲಿ ಕನಿಷ್ಠ ೧೫ ಗಂಟೆಯಾದರೂ ಡಿಜಿಟಲ್‌ ಕ್ಷೇತ್ರಕ್ಕೆ ಮೀಸಲಿಡಲು ಸಿದ್ಧರಿರಬೇಕು. ಹಾಗಿದ್ದರೆ ಮಾತ್ರ ನಿಮ್ಮ ಡಿಜಿಟಲ್‌ ಕೂಸು ಬೆಳೆಯಲು ಸಾಧ್ಯ.

ಡಿಜಿಟಲ್ ಪತ್ರಿಕೋದ್ಯಮದ ಮುಂದೆ ಇರುವ ಸವಾಲುಗಳು

  • ಈಗ ಎಷ್ಟು ಆನ್‌ಲೈನ್ ಪೋರ್ಟಲ್‌ಗಳು ಕನ್ನಡದಲ್ಲಿ ಇವೆ ಎಂಬ ಗಣತಿ ಸಾಧ್ಯವಿಲ್ಲ. ಯಾಕೆಂದರೆ, ಪುಟ್ಟ ಗ್ರಾಮಮಟ್ಟದಿಂದ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಕನ್ನಡ ಸುದ್ದಿ ಪೋರ್ಟಲ್‌ಗಳು ಇವೆ. ಆದರೆ, ಇವುಗಳಲ್ಲಿ ಬಹುತೇಕ ಪೋರ್ಟಲ್ ಗಳ ಆಯಸ್ಸು ಒಂದು ವರ್ಷ ದಾಟುವುದಿಲ್ಲ. ಯಾಕೆಂದರೆ, ಆ ಒಂದು ವರ್ಷದಲ್ಲಿ ವೆಬ್‌ ಸೈಟ್ ಮಾಲಿಕರು ಸಾಕಷ್ಟು ಭ್ರಮಾನಿರಸನಗೊಂಡಿರುತ್ತಾರೆ.
  • ಬಹುತೇಕ ನ್ಯೂಸ್ ಪೋರ್ಟಲ್‌ಗಳು ಒನ್‌ ಮ್ಯಾನ್ ಆರ್ಮಿ. ಪತ್ರಿಕೋದ್ಯಮದ ಕೊಂಚ ಗಂಧಗಾಳಿ ಇರುವವರು ಆರಂಭಿಸಿದ್ದಾಗಿರುತ್ತದೆ. ಆದರೆ, ಒಬ್ಬರೇ ಒಂದು ವೆಬ್‌ಸೈಟ್‌ಗೆ ಎಷ್ಟು ಕಂಟೆಂಟ್‌ ತುಂಬಿಸಲು ಸಾಧ್ಯ. ಇಂತಹ ಪ್ರಯತ್ನದಲ್ಲಿ ಯಶಸ್ಸು ಪಡೆದವರೂ ಇದ್ದಾರೆ. ಹೆಚ್ಚು ಬರಹಗಾರರು ಬೇಕೆಂದರೆ ಅವರಿಗೆ ವೇತನ ನೀಡುವ ಶಕ್ತಿ ವೆಬ್ ಮಾಲಿಕರಲ್ಲಿ ಇರುವುದಿಲ್ಲ. ಸ್ವಂತ ಹಣ ನೀಡಿದರೂ, ಆ ಹಣ ಮತ್ತೆ ಹುಟ್ಟುತ್ತದೆ ಎನ್ನುವ ಭರವಸೆ ಇರುವುದಿಲ್ಲ.
  • ಡಿಜಿಟಲ್ ಪತ್ರಿಕೋದ್ಯಮದ ಮುಂದಿರುವ ಪ್ರಮುಖ ಸವಾಲು ಜಾಹೀರಾತು ಆದಾಯ ಉತ್ತಮವಾಗಿರದೆ ಇರುವುದು. ಈ ಸಮಸ್ಯೆ ಕೊರೊನಾ ಪೂರ್ವದಲ್ಲಿ ಹೆಚ್ಚಿತ್ತು. ಆದರೆ, ಇದೀಗ ಗೂಗಲ್‌ ಆಡ್‌ಸೆನ್ಸ್‌ ಕನ್ನಡಕ್ಕೆ ಲಭ್ಯವಿರುವುದರಿಂದ ಉತ್ತಮ ಕಾರ್ಯಕ್ಕೆ ಕೊಂಚವಾದರೂ ಪ್ರತಿಫಲ ದೊರಕಿಯೇ ದೊರಕಬಹುದು.
  • ಕನ್ನಡ ಡಿಜಿಟಲ್ ಪತ್ರಿಕೋದ್ಯಮಕ್ಕೆ ಮತ್ತೊಂದು ಸವಾಲೆಂದರೆ ಗುಣಮಟ್ಟವಿಲ್ಲದ ಬರಹಗಳು. ಹತ್ತಿಪ್ಪತ್ತು ಸಾವಿರ ರೂ.ಗೆ ವೆಬ್‌ಸೈಟ್‌ ಮಾಡಬಹುದು. ಆದರೆ, ಬರೆಯಲು ಗೊತ್ತಿಲ್ಲದೆ ಇದ್ದರೆ, ಕೇವಲ ಪೇಜ್‌ವ್ಯೂಸ್ ಮಾತ್ರ ಬರಬೇಕೆಂದು ಏನೇನೋ ಬರೆದು ಹಾಕುತ್ತಿದ್ದರೆ ಜನರು ಒಟ್ಟಾರೆ ಡಿಜಿಟಲ್ ಮಾಧ್ಯಮದ ಬಗ್ಗೆ ಸಂಶಯದಿಂದ ನೋಡುವಂತಾಗುತ್ತದೆ. ಪತ್ರಿಕೋದ್ಯಮವು ಅವಸರದ ಉದ್ಯೋಗವಾದರೆ ಡಿಜಿಟಲ್ ಪತ್ರಿಕೋದ್ಯಮವು ಅತ್ಯವಸರದ ಕೆಲಸವಾಗಿದೆ.
  • ಮಾರ್ಕೆಟಿಂಗ್‌ ಕುರಿತು ಸ್ಪಷ್ಟತೆ ಇಲ್ಲದೆ ಇರುವುದು ಬಹುತೇಕ ಡಿಜಿಟಲ್ ಪೋರ್ಟಲ್ ಗಳ ಸಮಸ್ಯೆಯಾಗಿದೆ. ಡಿಜಿಟಲ್ ಪೋರ್ಟಲ್‌ಗಳಿಗೆ ನೇರ ಜಾಹೀರಾತು ಪಡೆಯುವ ಕಷ್ಟವೇ ಬಹುತೇಕ ವೆಬ್‌ ಮಾಲಿಕರನ್ನು ಹೈರಾಣಾಗಿಸಿಬಿಡಬಹುದು. ಬಹುತೇಕರು ಕಂಟೆಂಟ್‌ ಬಗ್ಗೆ ಮಾತ್ರ ಗಮನ ನೀಡಿ, ಮಾರ್ಕೆಟಿಂಗ್ ಅನ್ನು ಕಡೆಗಣಿಸುತ್ತಾರೆ. ಇದರಿಂದ ಡಿಜಿಟಲ್ ಪೋರ್ಟಲ್ ಹೊರೆಯಾಗಿ ಪರಿಣಮಿಸಬಹುದು.
  • ಇಂತಹ ನೂರಾರು ಸವಾಲುಗಳ ನಡುವೆಯೂ ಡಿಜಿಟಲ್ ಹೊಸ ಆರಂಭವು ಅವಕಾಶದ ಹೆಬ್ಬಾಗಿಲಾಗಿದೆ. ಅದರ ಕುರಿತು ಮುಂದೆ ಚರ್ಚಿಸೋಣ.

ಡಿಜಿಟಲ್ ಕ್ಷೇತ್ರದ ಅವಕಾಶಗಳು

  • ಹೊಸ ಕ್ಷೇತ್ರದ ಕುರಿತು ಹೆಚ್ಚು ಖರ್ಚಿಲ್ಲದೆ ಜ್ಞಾನ ಸಂಪಾದಿಸಬಹುದು. ಈಗ ಒಂದು ಮೊಬೈಲಿಗೆ ಹತ್ತಿಪ್ಪತ್ತು ಸಾವಿರ ರೂ. ಖರ್ಚು ಮಾಡುವಾಗ ಹತ್ತಿಪ್ಪತ್ತು ಸಾವಿರ ರೂ.ಗೆ ಒಂದು ವೆಬ್‌ಸೈಟ್ ನಿರ್ಮಿಸಿ ಡಿಜಿಟಲ್ ಜಗತ್ತನ್ನು ಕಲಿಯಬಹುದು. ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಜ್ಞಾನ ಸಂಪಾದಿಸಬಹುದು. ಇದಕ್ಕಾಗಿ ನೀವು ಹಲವು ಲಕ್ಷ ರೂ. ವಿನಿಯೋಗಿಸಬೇಕಾಗಿಲ್ಲ. ವಿನಿಯೋಗಿಸಬೇಕಿರುವುದು ನಿಮ್ಮ ಅಮೂಲ್ಯ ಸಮಯ ಮಾತ್ರ.
  • ಕೆಲವು ಸಾವಿರ ಜನರ ಭೇಟಿಯಿಂದ ಆರಂಭವಾದ ವೆಬ್‌ಸೈಟ್ ದೊಡ್ಡಮಟ್ಟಕ್ಕೆ ಬೆಳೆಯಿತು ಎಂದುಕೊಳ್ಳಿ. ಆಗ ನಿಮಗೆ ಅತ್ಯುತ್ತಮ ಆದಾಯ ಬರಬಹುದು. ಜಗತ್ತಿನ ಬಹುತೇಕ ದೊಡ್ಡ ವೆಬ್‌ಸೈಟ್‌ಗಳು ಆರಂಭವಾಗಿರುವುದು ಇಂತಹ ಸಣ್ಣ ಹೆಜ್ಜೆಯಿಂದ ಎನ್ನುವುದು ನೆನಪಿರಬೇಕು.
  • ಕೊರೊನಾ ಕಾಲದಲ್ಲಿ ಎಷ್ಟು ಯೂಟ್ಯೂಬ್ ಚಾನೆಲ್ ರಚನೆಯಾಗಿವೆ ಎನ್ನುವ ಲೆಕ್ಕ ಬಹುಶಃ ಗೂಗಲ್‌ ಬಳಿಯೂ ಇರದು. ಡಿಜಿಟಲ್ ಜಗತ್ತಿನಲ್ಲಿ ಏನೋ ಸಾಧಿಸಬಹುದು ಎಂಬ ಜನರು ಕನಸು ಇಂತಹ ರಚನೆಗಳಿಗೆ ಕಾರಣ. ಆದರೆ, ಯೂಟ್ಯೂಬ್‌ನಲ್ಲಿ ಆದಾಯ ಬರಲು ಆರಂಭವಾಗಬೇಕಾದರೆ ಕನಿಷ್ಠ ೧ ಸಾವಿರ ಚಂದಾದಾರರು, ೪ ಸಾವಿರ ಗಂಟೆ ವೀಕ್ಷಣೆ ಕಳೆಯಬೇಕು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಜೊತೆಗೆ, ಸಾವಿರ, ಲಕ್ಷ ಲೆಕ್ಕದಲ್ಲಿ ವೀಕ್ಷಣೆ ಪಡೆದರೆ ಕೆಲವೊಮ್ಮೆ ಆದಾಯ ಕೆಲವು ಸಾವಿರ ದಾಟದು ಎಂಬ ಅರಿವೂ ಇರದು. ಬಿಡುವಿನ ವೇಳೆಯಲ್ಲಿ ಅಡುಗೆ ಸೇರಿದಂತೆ ವಿವಿಧ ವಿಡಿಯೋ ಅಪ್ಲೋಡ್ ಮಾಡಿ ಕೈತುಂಬಾ ಹಣ ಸಂಪಾದಿಸುವ ಯೂಟ್ಯೂಬ್ ಚಾನೆಲ್‌ಗಳ ಓನರ್‌ಗಳೇ ಇಂತಹ ಸಾಹಸಕ್ಕೆ ಸ್ಪೂರ್ತಿ.

ಇಂತಹ ಹಲವು ಪ್ರಯೋಜನಗಳನ್ನು ಈಗಿನ ಡಿಜಿಟಲ್ ಮಾಧ್ಯಮ ಎಲ್ಲರಿಗೂ ನೀಡಿದೆ. ಏನೂ ಮಾಡದೆ ಇರುವುದಕ್ಕಿಂತ ಡಿಜಿಟಲ್ ಕ್ಷೇತ್ರದಲ್ಲಿ ಏನಾದರೂ ಮಾಡುತ್ತ ಇರಿ. ಇದರಿಂದ ನಿಮ್ಮ ಭವಿಷ್ಯ ಬದಲಾಗಲೂಬಹುದು. ಇಲ್ಲವಾದರೆ ನಿಮಗೆ ಒಳ್ಳೆಯ ಡಿಜಿಟಲ್ ಪಾಠವಾಗಬಲ್ಲದು.

ವೆಬ್‌ಸೈಟ್ ರಚನೆ ಗೈಡ್, ಆಡ್‌ಸೆನ್ಸ್‌ ಮಾಹಿತಿ ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನು ಕಳೆದ ೧೦ ವರ್ಷಗಳಿಂದ ಈ ವೆಬ್ಸೈಟ್‌ನಲ್ಲಿ ನೀಡುತ್ತ ಬರಲಾಗಿದೆ. ಓದಿರಿ, ಹಂಚಿಕೊಳ್ಳಿರಿ. ಡಿಜಿಟಲ್ ಜಗತ್ತು ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ.  

ಓದಿ: ಕನ್ನಡ ವೆಬ್‌ಸೈಟ್ ನಿರ್ಮಿಸುವವರಿಗೆ ಸಂಪೂರ್ಣ ಗೈಡ್

Leave a Reply

Your email address will not be published. Required fields are marked *