ಕೊರೊನಾ ಕಾಲದಲ್ಲಿ ಹಣ ಗಳಿಕೆಗೆ ಕೆಲವು ಅದ್ಭುತ ಉಪಾಯಗಳು!

By | 14/07/2020

ಕೋವಿಡ್‌-೧೯ ಸಂಕಷ್ಟದ ಸಮಯವಿದು. ದೊಡ್ಡ ಉದ್ಯಮಿಯೇ ಇರಲಿ, ಸಣ್ಣ ಉದ್ಯೋಗಿಯೇ ಇರಲಿ. ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಹಣಕಾಸು ಸಂಕಷ್ಟ ಉಂಟಾಗಿಯೇ ಇರುತ್ತದೆ. ಜಗತ್ತಿನ ಅರ್ಥವ್ಯವಸ್ಥೆಯೇ ಸ್ಥಗಿತಗೊಂಡ ಅನುಭವ ಎಲ್ಲರಿಗೂ ಆಗಬಹುದು. ಹೀಗಾಗಿ, ಈ ಕೊರೊನಾ ಸಂಕಷ್ಟದ ಕಾಲದಲ್ಲಿ ನೀವು ಸಕಾರಾತ್ಮಕವಾಗಿ ಯೋಚಿಸುವುದಾದರೆ, ಜೀವನದಲ್ಲಿ ಏನಾದರೂ ಸಾಧಿಸಲು ಬಯಸುವಿರಾದರೆ ಒಂದಿಷ್ಟು ಹಣ ಗಳಿಕೆಯ ಹಾದಿಗಳನ್ನು ಹೇಳುತ್ತಿದ್ದೇನೆ. ಇವುಗಳಲ್ಲಿ ನಿಮಗೆ ಯಾವುದಾದರೂ ನಿಮಗೆ ಸೂಕ್ತವೆನಿಸಿದರೆ ಹೆಚ್ಚು ಯೋಚಿಸದೆ ಮುಂದುವರೆಯಿರಿ.

ಸ್ವಂತ ಕಂಪನಿ ಆರಂಭಿಸಿ

ಹಣವೇ ಇಲ್ಲ. ಹೊಸ ಕಂಪನಿ ಆರಂಭಿಸಬೇಕೆ? ಎಂದು ನೀವು ಅನುಮಾನದಿಂದ ನೋಡಬೇಡಿ. ಆದರೆ, ಕೆಲಸ ಕಳೆದುಕೊಂಡವರು, ಕೆಲಸವಿದ್ದರೂ ಅನಿಶ್ಚಿತತೆಯಲ್ಲಿ ಇರುವವರು, ಮನೆಯಲ್ಲಿ ಹೆಚ್ಚು ಕೆಲಸ ಇಲ್ಲದೆ ಇರುವ ಬಹುತೇಕರು ಈಗ ಸ್ವಂತ ಬಿಸ್ನೆಸ್‌ ಆರಂಭಿಸುವ ಕುರಿತು ಆಲೋಚಿಸುತ್ತಿದ್ದಾರೆ. ಭವಿಷ್ಯ ಚೆನ್ನಾಗಿರಬೇಕು ಎಂಬ ಕನಸು ಕಾಣುತ್ತಿದ್ದಾರೆ. ಈ ಸಮಯದಲ್ಲಿ ಹಿಂದಿನ ಗಡಿಬಿಡಿಯ ಕೊರೊನಾ ಪೂರ್ವ ಅವಧಿಗಿಂತ ಒಳ್ಳೊಳ್ಳೆಯ ಐಡಿಯಾಗಳು ಜನರಲ್ಲಿ ಮೂಡುತ್ತಿವೆ. ಆದರೆ, ಅಂತಹ ಐಡಿಯಾಗಳನ್ನು ಸಾಕಾರಗೊಳಿಸುವ ಧೈರ್ಯ ತೋರುವವರು ಕೆಲವರು ಮಾತ್ರ. ಭವಿಷ್ಯದಲ್ಲಿ ಖಂಡಿತವಾಗಿಯೂ ಅವರೆಲ್ಲರೂ ಯಶಸ್ವಿ ಬಿಸ್ನೆಸ್‌ಮ್ಯಾನ್‌ಗಳಾಗುತ್ತಾರೆ.

ನಿಮಗೆ ಗೊತ್ತೆ, ಕೆಲವು ಯಶಸ್ವಿ ಉದ್ಯಮಗಳು ಆರಂಭವಾಗಿರುವುದೇ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ. ಸಂಕಷ್ಟದ ಸಮಯದಲ್ಲಿ ಹುಟ್ಟಿದ ಕಂಪನಿಗಳು ಈಗ ಯಶಸ್ವಿ ಕಂಪನಿಗಳಾಗಿ, ದೊಡ್ಡಮಟ್ಟದ ಉದ್ಯಮಗಳಾಗಿ ಹೊರಹೊಮ್ಮಿವೆ. ಹೀಗಾಗಿ, ಈ ಕೊರೊನಾ ಸಂಕಷ್ಟ ಸಮಯವು ನಿಮ್ಮ ಹೊಸ ಬಿಸ್ನೆಸ್‌ ಆರಂಭಕ್ಕೆ ಪ್ರಶಸ್ತ ಸಮಯ.

ಆದರೆ, ಸಂಕಷ್ಟದ ಸಮಯದಲ್ಲಿ ನಿಮ್ಮ ಹೂಡಿಕೆಯ ಬಗ್ಗೆ ಗಮನಹರಿಸಿ. ಕರ್ನಾಟಕಬೆಸ್ಟ್‌ ವೆಬ್‌ಸೈಟ್‌ನಲ್ಲಿ ಹೇಳಿರುವ ಈ ಲೇಖನ ಓದಿ ನಿಮ್ಮಲ್ಲಿರುವ ಆಪತ್ಕಾಲಕ್ಕೆ ಇಟ್ಟಿರುವ ಹಣವನ್ನೆಲ್ಲ ನಿಮ್ಮ ಬಿಸ್ನೆಸ್‌ಗೆ ಹೂಡಿಕೆ ಮಾಡಬೇಡಿ. ಆದಷ್ಟು ಕಡಿಮೆ ಹೂಡಿಕೆ ಬಯಸುವ ವ್ಯವಹಾರವನ್ನು ಆರಂಭಿಸಿ. ಅದು ಹತ್ತು ಸಾವಿರ ರೂ. ಆಗಿರಬಹುದು. ೨೦ ಸಾವಿರ ರೂ. ಆಗಿರಬಹುದು. ಲಕ್ಷಲಕ್ಷ ವಿನಿಯೋಗಿಸಲು ಈಗ ಹೋಗಬೇಡಿ. ಉದ್ಯಮ ಆರಂಭ ಎಂದರೆ ನಿಮ್ಮ ಕನಸೆಂಬ ಆಲದ ಮರವನ್ನು ಉಂಟು ಮಾಡುವುದು. ಆಲದ ಮರ ಒಂದು ದಿನದಲ್ಲಿ ಸೃಷ್ಟಿಯಾಗುವುದಿಲ್ಲ. ಆಲದ ಬೀಜ ಅಥವಾ ಗಿಡವನ್ನು ನೆಡುವ ಕೆಲಸವನ್ನು ಈಗ ಮಾಡಿ. ಬೀಜ ಬಿತ್ತನೆಗೆ ಲಕ್ಷಲಕ್ಷ ಹೂಡಿಕೆ ಬೇಡ ಎನ್ನುವುದು ನೆನಪಿನಲ್ಲಿ ಇರಲಿ. ಈ ಸಮಯದಲ್ಲಿ ನಿಮ್ಮ ಹೊಸ ಬಿಸ್ನೆಸ್‌ ಆರಂಭದ ಕನಸಿಗೆ ತಣ್ಣೀರು ಎರೆಯಲು ಸಾಕಷ್ಟು ಜನ ಕಾಯುತ್ತಿರಬಹುದು. ಅಂತಹ ಮಾತುಗಳಿಗೆ ಭಯಪಡದೆ ಆದಷ್ಟು ಕಡಿಮೆ ಹೂಡಿಕೆಯಲ್ಲಿ ಏನಾದರೂ ಬಿಸ್ನೆಸ್‌ ಆರಂಭಿಸಿ. ಅದು ಸಣ್ಣ ಅಂಗಡಿ ಸ್ಥಾಪನೆ ಆಗಿರಬಹುದು, ವೆಬ್‌ಸೈಟ್‌ ಸ್ಥಾಪನೆ ಆಗಿರಬಹುದು, ಇ-ಕಾಮರ್ಸ್‌ ಸ್ಥಾಪನೆ ಆಗಿರಬಹುದು. ನೀವು ಹೊಸ ಬಿಸ್ನೆಸ್‌ ಆರಂಭಿಸಲು ಮುಂದಾಗುವಿರಾದರೆ ನಿಮಗೆ ಕರ್ನಾಟಕ ಬೆಸ್ಟ್‌ ಕಡೆಯಿಂದ ಮೊದಲ ಆಲ್‌ ದಿ ಬೆಸ್ಟ್‌.

ಮನೆಯಿಂದಲೇ ಕೆಲಸ ಮಾಡುವ ಅವಕಾಶ ಹುಡುಕಿ

ಮನೆಯಲ್ಲಿ ಕುಳಿತು ಅಗರಬತ್ತಿ ತಯಾರಿಸಿ, ಕ್ಯಾಂಡಲ್‌ ತಯಾರಿಸಿ, ಅಣಬೆ ತಯಾರಿಸಿ ಇತ್ಯಾದಿಗಳ ಕುರಿತು ನಾನು ಹೇಳುತ್ತಿಲ್ಲ. ಅಥವಾ ಇಮೇಲ್‌ ಕಳುಹಿಸಿ ಹಣ ಸಂಪಾದಿಸಿ, ಡೇಟಾ ಎಂಟ್ರಿ ಮಾಡಿ ತಿಂಗಳಿಗೆ ೨೦ ಸಾವಿರ ರೂ. ಗಳಿಸಿ ಇತ್ಯಾದಿಗಳನ್ನು ನಂಬಲು ಹೋಗಬೇಡಿ. ಮನೆಯಲ್ಲಿ ಕುಳಿತು ಕೆಲಸ ಹುಡುಕುವವರನ್ನು ಮೋಸ ಮಾಡಲೆಂದೇ ಇಂತಹ ಜಾಹೀರಾತುಗಳು ಇರುತ್ತವೆ.

ಹಾಗಾದರೆ ಮನೆಯಿಂದಲೇ ಮಾಡುವ ಕೆಲಸ ಯಾವುದು ಎಂದು ಕೇಳುವಿರಾ?

ನಿಮ್ಮಲ್ಲಿ ನಿಮ್ಮದೇ ಆದ ಟೆಕ್‌ ಅಥವಾ ಇತರೆ ಕೌಶಲಗಳು ಇರುತ್ತವೆ. ಅವುಗಳಿಗೆ ಸಂಬಂಧಪಟ್ಟ ಫ್ರೀಲ್ಯಾನ್ಸ್‌ ಉದ್ಯೋಗದ ಹುಡುಕಾಟ ನಡೆಸಿ. ನೀವು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅಥವಾ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಮಾಡುವ ಪರಿಣತಿ ಹೊಂದಿದ್ದರೆ ಅದಕ್ಕಾಗಿ ಇರುವ ಕೆಲವು ವೆಬ್‌ಸೈಟ್‌ಗಳಲ್ಲಿ ಹೆಸರು ನೋಂದಾಯಿಸಬಹುದು. ಉದಾಹರಣೆಗೆ ಟ್ರಾನ್ಸ್‌ಲೇಟರ್‌ಡೈರೆಕ್ಟರಿ. ನಿಮ್ಮಲ್ಲಿರುವ ಕೌಶಲಗಳಿಗೆ ತಕ್ಕಂತೆ ಡೆವಲಪರ್‌, ಡಿಸೈನರ್‌, ಕಂಟೆಂಟ್‌ ರೈಟಿಂಗ್‌, ಫೋಟೊ ಎಡಿಟಿಂಗ್‌, ವಿಡಿಯೋ ಎಡಿಟರ್‌, ಡಿಜಿಟಲ್‌ ಮಾರ್ಕೆಟಿಂಗ್‌, ಎಸ್‌ಇಒ ಸೇರಿದಂತೆ ನೂರಾರು ಬಗೆಯ ಉದ್ಯೋಗಗಳನ್ನು ಫ್ರೀಲ್ಯಾನ್ಸಿಂಗ್‌ ವೆಬ್‌ಸೈಟ್‌ಗಳಲ್ಲಿ ಹುಡುಕಬಹುದು. ಇದಕ್ಕಾಗಿ ನೀವು ಫ್ರಿಲ್ಯಾನ್ಸರ್‌.ಕಾಂ, ಅಪ್‌ವರ್ಕ್‌.ಕಾಂ ಇತ್ಯಾದಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು.

ಆನ್‌ಲೈನ್‌ ಟೀಚರ್‌ ಅಥವಾ ಟ್ಯೂಟರ್‌ ಆಗಿ

ಈ ಕೊರೊನಾ ಸಂಕಷ್ಟದ ಸಮಯದಲ್ಲಿ ಆನ್‌ಲೈನ್‌ ಶಿಕ್ಷಣ ಹೆಚ್ಚು ಮುಂಚೂಣಿಗೆ ಬಂದಿದೆ. ಸಹಜವಾಗಿ ಆನ್‌ಲೈನ್‌ ಟ್ಯೂಟರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಆನ್‌ಲೈನ್‌ ಟ್ಯೂಟರ್‌ ಜಾಬ್ಸ್‌ ಎಂದು ಗೂಗಲ್‌,ಫೇಸ್‌ಬುಕ್‌, ಲಿಂಕ್ಡ್‌ಇನ್‌ ಮುಂತಾದ ಕಡೆ ಹುಡುಕಿದರೆ ಸೂಕ್ತವಾದ ಅವಕಾಶಗಳು ನಿಮಗೆ ದೊರಕಬಹುದು.

ಬ್ಲಾಗ್‌ ಆರಂಭಿಸಿ

ಈಗಾಗಲೇ ಕನ್ನಡಕ್ಕೆ ಆಡ್‌ಸೆನ್ಸ್‌ ಬಂದಿರುವ ವಿಷಯವನ್ನು ಮೊದಲ ಬಾರಿಗೆ ಕರ್ನಾಟಕ ಬೆಸ್ಟ್ ತನ್ನ ಓದುಗರಿಗೆ ತಿಳಿಸಿತ್ತು. ಬ್ಲಾಗ್‌, ನ್ಯೂಸ್‌ವೆಬ್‌ಸೈಟ್‌ ಇತ್ಯಾದಿಗಳನ್ನು ಹೊಂದಿರುವ ಹಲವು ಕನ್ನಡಿಗರು ಈಗ ಆಡ್‌ಸೆನ್ಸ್‌ ಅನುಮತಿ ಪಡೆದಿದ್ದಾರೆ. ನನಗೆ ವೈಯಕ್ತಿಕವಾಗಿ ಕರೆ ಮಾಡಿ ಥ್ಯಾಂಕ್ಸ್‌ ಹೇಳಿದ್ದಾರೆ. ಆಡ್‌ಸೆನ್ಸ್‌ ಅಳವಡಿಸಲು ತೊಂದರೆಪಟ್ಟವರು ನನ್ನನ್ನು ಸಂಪರ್ಕಿಸಿ ಟಿಪ್ಸ್‌ಗಳನ್ನು ಪಡೆದಿದ್ದಾರೆ. ಇರಲಿ, ಆಡ್‌ಸೆನ್ಸ್‌ ಬಿಟ್ಟು ಬ್ಲಾಗಿಂಗ್‌ ಬಗ್ಗೆ ಮಾಹಿತಿ ನೀಡುತ್ತೇನೆ.

ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬ್ಲಾಗರ್‌ಗಳು ಕೊಂಚ ಆದಾಯ ಪಡೆಯುತ್ತಿದ್ದಾರೆ. ಬ್ಲಾಗಿಂಗ್‌ ಮೂಲಕ ನಿಮ್ಮ ಬಿಸ್ನೆಸ್‌ ಅನ್ನೂ ಪ್ರಚಾರ ಮಾಡಬಹುದು. ಬ್ಲಾಗ್‌ ಮೂಲಕ ಹಣ ಗಳಿಸಬೇಕಿದ್ದರೆ ನಿಮ್ಮಲ್ಲಿ ಕೊಂಚ ತಾಳ್ಮೆ ಇರಬೇಕು. ನಿಮ್ಮ ಬ್ಲಾಗ್‌ ಒಂದು ಬ್ರ್ಯಾಂಡ್‌ ಆಗಬೇಕು. ಸುಮಾರು ಆರು ತಿಂಗಳು ಹಳೆಯದಾದ ಬ್ಲಾಗ್‌ ಅಥವಾ ನ್ಯೂಸ್‌ವೆಬ್ಸೈಟ್‌ಗೆ ಗೂಗಲ್‌ ಆಡ್‌ಸೆನ್ಸ್‌ ಅನುಮತಿ ನೀಡುತ್ತದೆ. ಹಾಗಂತ, ಎಲ್ಲಾ ಬ್ಲಾಗ್‌ಗಳಿಗೂ ಆಡ್‌ಸೆನ್ಸ್‌ ಅನುಮತಿ ನೀಡುವುದಿಲ್ಲ. ಅವರ ನೀತಿನಿಯಮಗಳಿಗೆ ಪೂರಕವಾದ ವೆಬ್ಸೈಟ್‌ಗಳಿಗೆ ಮಾತ್ರ ಅನುಮತಿ ದೊರಕುತ್ತದೆ. ಅದಕ್ಕಾಗಿ ಬ್ಲಾಗ್‌ ವೆಬ್‌ಸೈಟ್‌ ಅನ್ನು ಎಚ್ಚರಿಕೆಯಿಂದ ರಚಿಸಬೇಕು. ನಿಮಗೆ ಬರುವ ಪೇಜ್‌ವ್ಯೂಸ್‌ಗೆ ತಕ್ಕಂತೆ ಆದಾಯ ಪಡೆಯಬಹುದು.

ನಿಮಗೆ ವೆಬ್‌ಬ್ಲಾಗ್‌ ಬೇಕಿದ್ದರೆ ಮೊದಲು ಸರ್ವರ್‌ಹಗ್‌.ಕಾಂಗೆ ಹೋಗಿ ಒಂದು ಡೊಮೈನ್‌ ಹೆಸರು ಖರೀದಿಸಿ. ಬಳಿಕ ನಿಮ್ಮ ಅವಶ್ಯಕತೆಗೆ ತಕ್ಕಂತೆ ಸರ್ವರ್‌ಹಗ್‌ನಲ್ಲಿ ಶೇರ್ಡ್‌ ಲಿನಕ್ಸ್‌ ಹೋಸ್ಟಿಂಗ್‌ ಖರೀದಿಸಿ. ಇಲ್ಲಿ ಖರೀದಿಸಿದ ಗ್ರಾಹಕರಿಗೆ ಕರ್ನಾಟಕಬೆಸ್ಟ್‌ ಕಡೆಯಿಂದ ಉಚಿತವಾಗಿ ಸರ್ವರ್‌ ಸೆಟಪ್‌ ಮಾಡಿಕೊಟ್ಟು ವರ್ಡ್‌ಪ್ರೆಸ್‌ ಇನ್‌ಸ್ಟಾಲ್‌ ಮಾಡಿಕೊಡಲಾಗುತ್ತದೆ. ಬಳಿಕ ನಿಮಗೆ ಬ್ಲಾಗ್‌ ಅಥವಾ ವೆಬ್ಸೈಟ್‌ ವಿನ್ಯಾಸ ಮಾಡಿಕೊಡಬೇಕಿದ್ದರೆ ಕರ್ನಾಟಕ ಬೆಸ್ಟ್‌ ವೆಬ್‌ ಡಿಸೈನರ್‌ಗಳು ನೆರವಾಗುತ್ತಾರೆ. ಅದಕ್ಕೆ ಹಣ ಹೂಡಿಕೆ ಮಾಡಲು ನೀವು ಸಿದ್ಧರಿಲ್ಲದೆ ಇದ್ದರೆ ವರ್ಡ್‌ಪ್ರೆಸ್‌ನಲ್ಲಿರುವ ಉಚಿತ ಥೀಮ್‌ಗಳನ್ನು ಬಳಸಿ ನೀವು ಬ್ಲಾಗ್‌ ರಚಿಸಿಕೊಳ್ಳಬಹುದು. ವರ್ಡ್‌ಪ್ರೆಸ್‌ನಲ್ಲಿ ವೆಬ್‌ಸೈಟ್‌ ರಚಿಸುವುದು ಹೇಗೆ ಎಂದು ಕರ್ನಾಟಕ ಬೆಸ್ಟ್‌ ಹಲವು ಸರಣಿ ಲೇಖನಗಳನ್ನು ಬರೆದಿದೆ. ನೀವು ಆ ಲೇಖನಗಳನ್ನು ಓದಿ ನಿಮ್ಮ ವರ್ಡ್‌ಪ್ರೆಸ್‌ ವೆಬ್‌ ಬ್ಲಾಗ್ ರಚಿಸಿಕೊಳ್ಳಬಹುದು.

ಯೂಟ್ಯೂಬ್‌ ಮೂಲಕ ಹಣ ಗಳಿಸಬಹುದೇ?

ಈ ಕೊರೊನಾ ಸಂಕಷ್ಟದ ಕಾಲದಲ್ಲಿ ಅದೆಷ್ಟು ಸಾವಿರ ಯೂಟ್ಯೂಬ್‌ ಚಾನೆಲ್‌ಗಳು ಆರಂಭವಾದವೋ? ಲೆಕ್ಕ ಇಡುವುದು ಕಷ್ಟ. ನಿಮಗೆ ಒಂದು ವರ್ಷದಲ್ಲಿ ಒಂದು ಸಾವಿರ ಸಬ್‌ ಸ್ಕ್ರೈಬರ್‌, ೪ ಸಾವಿರ ಗಂಟೆ ವಿಡಿಯೋ ವೀಕ್ಷಣೆ ಸಾಧ್ಯವಿದ್ದರೆ ಬಳಿಕ ನಿಮ್ಮ ಯೂಟ್ಯೂಬ್‌ನಲ್ಲಿ ಆಡ್‌ಸೆನ್ಸ್‌ ಜಾಹೀರಾತು ಬರುತ್ತದೆ. ಬಳಿಕ ವಿಡಿಯೋ ವೀಕ್ಷಣೆಗೆ ತಕ್ಕಂತೆ ಆದಾಯ ಗಳಿಸಬಹುದು. ಆದರೆ, ನನ್ನಂತವರು ಒಂದೆರಡು ವಿಡಿಯೋ ಎಡಿಟ್‌ ಮಾಡಿ, ಅಪ್ಲೋಡ್‌ ಮಾಡಿ ಸುಸ್ತಾಗುತ್ತಾರೆ.

ಫೇಸ್‌ಬುಕ್‌ ಇನ್‌ಸ್ಟಾಂಟ್‌ ಆರ್ಟಿಕಲ್ಸ್‌

ನಿಮ್ಮಲ್ಲಿ ಹಲವು ಲಕ್ಷ ಫಾಲೋವರ್ಸ್‌ ಇರುವ ಫೇಸ್‌ಬುಕ್‌ ಪೇಜ್‌ ಇದ್ದರೆ, ಜೊತೆಗೆ ಒಂದು ಸರಳ ವೆಬ್‌ಸೈಟ್ ಇದ್ದರೆ ಫೇಸ್‌ಬುಕ್‌ ಇನ್‌ಸ್ಟಾಂಟ್‌ ಆರ್ಟಿಕಲ್ಸ್‌ ಮೂಲಕ ಉತ್ತಮ ಆದಾಯ ಗಳಿಸಬಹುದು. ನಿಮ್ಮ ಫೇಸ್‌ಬುಕ್‌ ಪುಟಕ್ಕೆ ಜನರು ಬರುವುದು ಕಡಿಮೆ ಆದಾಗ ಮಿನಿಮಲ್‌ ಪೇಜ್‌ವ್ಯೂಸ್‌ ಕಾರಣದಿಂದ ಆದಾಯ ಆಗಾಗ ನಿಂತುಹೋಗುತ್ತದೆ.

ಟಿಕ್‌ಟಾಕ್‌ ಸದ್ಯ ಇಲ್ಲ

ಟಿಕ್‌ಟಾಕ್‌ ಇತ್ಯಾದಿಗಳಲ್ಲಿ ಸ್ಟಾರ್‌ ಆಗಿ ಒಳ್ಳೆಯ ಆದಾಯ ಪಡೆಯುವವರು ಇದ್ದಾರೆ. ಸದ್ಯ ಟಿಕ್‌ಟಾಕ್‌ ಬ್ಯಾನ್‌ ಆಗಿರುವುದರಿಂದ ಸಾಕಷ್ಟು ಜನರಿಗೆ ಆದಾಯ ಕೈ ತಪ್ಪಿ ಹೋಗಿದೆ. ಇದೇ ರೀತಿ ಇನ್‌ಸ್ಟಾಗ್ರಾಂನಲ್ಲಿಯೂ ಹಲವು ಲಕ್ಷ ಫಾಲೋವರ್ಸ್‌ ಇದ್ದರೆ ನೀವು ಇನ್‌ಫ್ಯೂಲನ್ಸರ್‌ ಆಗಿ ವಿವಿಧ ಜಾಹೀರಾತುಗಳನ್ನು ಪಡೆಯಬಹುದು.

ಇ-ಕಾಮರ್ಸ್‌ ತಾಣ ಆರಂಭಿಸಿ

ಈ ಸಮಯದಲ್ಲಿ ಆನ್‌ಲೈನ್‌ ಖರೀದಿ ಕೊಂಚ ಕಡಿಮೆ ಆಗಿರಬಹುದು. ಆದರೆ, ಭವಿಷ್ಯದಲ್ಲಿ ಮತ್ತೆ ಇ-ಕಾಮರ್ಸ್‌ ಗರಿಗೆದರಲಿದೆ. ನಿಮ್ಮಲ್ಲಿರುವ ಪ್ರಾಡಕ್ಟ್‌ಗಳಿಗಾಗಿ ಒಂದು ೧೫- ೨೦ ಸಾವಿರ ರೂ. ಖರ್ಚು ಮಾಡಿ ಒಂದು ಇ-ಕಾಮರ್ಸ್‌ ತಾಣ ತೆರೆಯಿರಿ. ಇದಕ್ಕೆ ಸಂಬಂಧಪಟ್ಟಂತೆ ಒಂದು ಲೇಖನ ಬರೆದಿದ್ದೇನೆ. ಅದನ್ನೂ ಓದಬಹುದು.

ಇದನ್ನೂ ಓದಿ: ಒಂದು ಇ-ಕಾಮರ್ಸ್ ವೆಬ್‌ಸೈಟ್‌ ನಿರ್ಮಿಸಲು ಎಷ್ಟು ಖರ್ಚಾಗುತ್ತದೆ?

ಹೀಗೆ ಕೊರೊನಾ ಕಾಲದಲ್ಲಿ ನಕಾರಾತ್ಮಕವಾಗಿ ಯೋಚಿಸುವುದನ್ನು ಬಿಟ್ಟು ಸಕಾರಾತ್ಮಕವಾಗಿ ಐಡಿಯಾ ಮಾಡುತ್ತ ದಿಟ್ಟ ಹೆಜ್ಜೆ ಇಡುವುದು ಒಳ್ಳೆಯದು. ಸುಮ್ಮನೆ ಏನೂ ಮಾಡದೆ ಇರುವುದಕ್ಕಿಂತ ಏನಾದರೂ ಪ್ರಯತ್ನಪಡುವುದು ಒಳ್ಳೆಯದಲ್ಲವೇ?

Leave a Reply

Your email address will not be published. Required fields are marked *