ವೆಬ್ ಸೈಟ್ ಗೈಡ್: ಕರ್ನಾಟಕ ಬೆಸ್ಟ್ ಸಂಪೂರ್ಣ ಮಾರ್ಗದರ್ಶಿ

By | 07/01/2019

Featured post on IndiBlogger, the biggest community of Indian Bloggers

ಎಲ್ಲರಿಗೂ ನಮಸ್ಕಾರ. ಕರ್ನಾಟಕ ಬೆಸ್ಟ್.ಕಾಂ ಮೂಲಕ ಒಂದು ಸಂಪೂರ್ಣ ಟೆಕ್ ಪಾಠ ಹೇಳಿಕೊಡುವ ಪ್ರಯತ್ನದ ಆರಂಭವಿದು. ನಿಮಗೂ ಇದು ಇಷ್ಟವಾದೀತು ಎಂಬ ನಂಬಿಕೆ ನನ್ನದು.

ಕರ್ನಾಟಕ ಬೆಸ್ಟ್‌ ವೆಬ್‌ಸೈಟ್‌ ಗೈಡ್ನಲ್ಲಿ ಪೂರ್ಣಗೊಂಡ ಲೇಖನಗಳು

ವರ್ಡ್ ಪ್ರೆಸ್ ವೆಬ್ ಸೈಟ್ ಗೈಡ್ ಭಾಗ-1: ಪೀಠಿಕೆ

ಜ್ಞಾನ ಇರುವುದು ಹಂಚಿಕೊಳ್ಳುವುದಕ್ಕೆ ಎಂದು ಎಲ್ಲೋ ಓದಿದ ನೆನಪು. ಈ ಮಾತನ್ನೇ ಸ್ಫೂರ್ತಿಯಾಗಿಟ್ಟುಕೊಂಡು ವರ್ಡ್ ಪ್ರೆಸ್ ಗೈಡ್ ಎಂಬ ಶೀರ್ಷಿಕೆಯಡಿಯಲ್ಲಿ ನನಗೆ ಗೊತ್ತಿರುವ ವೆಬ್ ಸೈಟ್ ಟಿಪ್ಸ್ ಮತ್ತು ಟ್ರಿಕ್ಸ್ ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ಮೂಲಕ ನೀವೂ ಇತರರ ನೆರವು ಇಲ್ಲದೆ ಸ್ವಂತವಾಗಿ ವರ್ಡ್ ಪ್ರೆಸ್ ವೆಬ್ ಸೈಟ್ ನಿರ್ಮಿಸಿಕೊಳ್ಳುವಿರಿ ಎಂಬ ನಂಬಿಕೆ ನನ್ನದು.

ಆರಂಭದಲ್ಲಿ ಒಂದಿಷ್ಟು ಥಿಯರಿ ಪಾಠಗಳು ಇರುತ್ತವೆ. ಓದಿದಾಗ ನಿಮಗೆ ಬೋರ್ ಎನಿಸಬಹುದು. ಅವು ನಿಮಗೆ ಕೊರೆತದಂತೆ ಅನಿಸಲೂಬಹುದು. ಆದರೆ, ಅವನ್ನು ಮಿಸ್ ಮಾಡದೆ ಓದಿ. ಯಾಕೆಂದರೆ, ಕೆಲವೊಂದು ಅಮೂಲ್ಯ ಅಂಶಗಳನ್ನು ಕಲಿಯಲು ಇದನ್ನು ನೀವು ಓದಲೇಬೇಕು.

ಕನ್ನಡದಲ್ಲಿಯೂ ಈಗ ಸಾಕಷ್ಟು ವೆಬ್ ಸೈಟ್ ಗಳು ಆರಂಭವಾಗುತ್ತಿವೆ. ಅವುಗಳಲ್ಲಿ ಬಹುತೇಕ ವೆಬ್ ಸೈಟ್ ಗಳು ವರ್ಡ್ ಪ್ರೆಸ್ ಮೂಲಕ ನಿರ್ಮಿಸಿರುವುದು ಎನ್ನುವುದು ಸಂತೋಷಕೊಡುವ ಸಂಗತಿ. ಕನ್ನಡದಲ್ಲಿಯೂ ಇಂತಹ ವೆಬ್ ಸೈಟ್ ಸಂತತಿ ಸಾವಿರವಾಗಲಿ. ಟೆಕ್ ಜಗತ್ತಿನಲ್ಲಿ ಕನ್ನಡ ವೆಬ್ ಸೈಟ್ ಗಳ ಸಂಖ್ಯೆ ಕಡಿಮೆಯಿಲ್ಲವೆಂದು ಗೂಗಲ್ ಗೂ ಅನಿಸಲಿ. ಗೂಗಲ್ ಆ್ಯಡ್ ಸೆನ್ಸ್ ಇತ್ಯಾದಿ ಸೌಲಭ್ಯಗಳನ್ನು ಕನ್ನಡಿಗರಿಗೂ ನೀಡಲಿ ಎಂಬ ಆಶಯ ನನ್ನದು.

ವೆಬ್ ಸೈಟ್ ಇಂದಿನ ಅವಶ್ಯಕತೆ

ಈ ಇ-ಕಾಲದಲ್ಲಿ ಸ್ವಂತ ವೆಬ್‍ಸೈಟ್ ಹೊಂದುವುದು ವ್ಯವಹಾರಗಳಿಗೆ ಅಥವಾ ವೈಯಕ್ತಿಕವಾಗಿ ಅವಶ್ಯಕತೆ ಎನ್ನಬಹುದು.

  • ನನ್ನಂತವರು ಬ್ಲಾಗ್ ಬರಹಗಳಿಗಾಗಿ ವೆಬ್‍ಸೈಟ್ ನಿರ್ಮಿಸಿಕೊಳ್ಳಬಹುದು.
  • ಸಣ್ಣಪುಟ್ಟ ಬಿಸ್ನೆಸ್ ಮಾಡುವವರು ತಮ್ಮ ವ್ಯವಹಾರವನ್ನು ಡಿಜಿಟಲೀಕರಣ ಮಾಡುವ ಸಲುವಾಗಿ ವೆಬ್‍ಸೈಟ್ ರಚಿಸಬಹುದು.
  • ಒಟ್ಟಾರೆಯಾಗಿ, ನಿಮ್ಮ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಒಂದು ಸರಳ ವೆಬ್‍ಸೈಟ್, ಸ್ವಂತ ಬ್ಲಾಗ್, ನ್ಯೂಸ್‍ಪೋರ್ಟಲ್, ಆನ್‍ಲೈನ್ ಅಂಗಡಿ ಅಥವಾ ಇ-ಶಾಪ್… ಹೀಗೆ ಒಂದು ವೆಬ್‍ಸೈಟ್ ನಿರ್ಮಾಣದ ಅಗತ್ಯ ನಿಮಗೆ ಬೀಳಬಹುದು. 

ನನಗೊಂದು ವೆಬ್ ಸೈಟ್ ನಿರ್ಮಿಸಿಕೊಡಿ

ವೆಬ್ ಸೈಟ್ ಬೇಕು ಎಂಬ ಅವಶ್ಯಕತೆ ಕಂಡಾಗ ನೀವು ತಕ್ಷಣ ನೀವು ವೆಬ್‍ಸೈಟ್ ಡಿಸೈನರ್‍ಗಳನ್ನು ಸಂಪರ್ಕಿಸಬಹುದು. ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಅತ್ಯುತ್ತಮವಾಗಿ ವೆಬ್‍ಸೈಟ್ ರಚಿಸುವ ಸಾಕಷ್ಟು ಒಳ್ಳೆಯ ಸಂಸ್ಥೆಗಳು ಈಗ ಇವೆ. ಆದರೆ, ಅದೇ ರೀತಿ ಗ್ರಾಹಕರಿಂದ ಹಣ ಸುಲಿಗೆ ಮಾಡಲೆಂದೇ ಹುಟ್ಟಿಕೊಂಡ ಸಾಕಷ್ಟು ವೆಬ್‍ಡಿಸೈನ್ ಸಂಸ್ಥೆಗಳು ಗಲ್ಲಿಗೊಂದರಂತೆ ಸಿಗುತ್ತವೆ. ನಿಮಗೆ ವೆಬ್‍ಸೈಟ್ ಅವಶ್ಯಕತೆ ಇರುವುದರಿಂದ ಇಂತಹ ಸಂಸ್ಥೆಯನ್ನು ಸಂಪರ್ಕಿಸುವಿರಿ. 

`ಸಾರ್, ನನಗೊಂದು ವೆಬ್‍ಸೈಟ್ ಬೇಕಿತ್ತು?’

`ಮಾಡಿಕೊಡೋಣ, ಎಷ್ಟು ನಿಮ್ಮ ಬಜೆಟ್?’

ನೆನಪಿಡಿ ಬಹುತೇಕರು ಕೇಳುವುದೇ ಬಜೆಟ್. ಕಾಸಿಗೆ ತಕ್ಕ ಕಜ್ಜಾಯ. ಇದರಲ್ಲಿ ವೆಬ್ ಡಿಸೈನರ್‍ಗಳದ್ದು ತಪ್ಪೇನಿಲ್ಲ. 

ನೀವು ಹತ್ತು ಸಾವಿರ ರೂ. ಬಜೆಟ್ ಎಂದಿರಿ ಎಂದಿಟ್ಟುಕೊಳ್ಳಿ. 

ಡೊಮೈನ್ ಹೆಸರು, ಹೋಸ್ಟಿಂಗ್ ಮತ್ತು ಇನ್ನೊಂದು ಥೀಮ್ ಈ ಮೂರನ್ನು ಜೋಡಿಸಿ ನಿಮಗೆ ಸರಳವಾದ ವೆಬ್‍ಸೈಟ್ ನಿರ್ಮಿಸಿಕೊಡುತ್ತಾರೆ.

ಇಲ್ಲಿ ಡೊಮೈನ್‍ಗೆ ಮಾತ್ರ ಆ ವಿನ್ಯಾಸಕರು ಆ ಸಮಯದಲ್ಲಿ ಹಣ ಪಾವತಿ ಮಾಡುತ್ತಾರೆ. ಹೋಸ್ಟಿಂಗ್ ಮತ್ತು ಥೀಮ್ ಬಂಡಲ್‍ಗಳನ್ನು ಈ ಮೊದಲೇ ಖರೀದಿಸಿ ಇಡುತ್ತಾರೆ. ಉದಾಹರಣೆಗೆ ಅನ್‍ಲಿಮಿಟೆಡ್ ಹೋಸ್ಟಿಂಗ್ ಖರೀದಿಸಿ ಅದರಲ್ಲಿ ಎಲ್ಲಾಗ್ರಾಹಕರ ವೆಬ್‍ಸೈಟ್‍ಗಳನ್ನು ಪಾರ್ಕ್ ಮಾಡಲಾಗುತ್ತದೆ.  ಅ

ಆರಂಭಿಕ ಸಣ್ಣ ವೆಬ್‍ಸೈಟ್ ಅನ್ನು ನೀವೇ ವರ್ಡ್‍ಪ್ರೆಸ್‍ನಲ್ಲಿರುವ ವಿವಿಧ ಪ್ಲ್ಯಾನ್‍ಗಳ ಮುಖಾಂತರ ರಚಿಸಿಕೊಳ್ಳಬಹುದು. ಆದರೆ, ಈಗಲೇ ವರ್ಡ್‍ಪ್ರೆಸ್‍ನಿಂದ ಖರೀದಿಸಬೇಡಿ. ಯಾಕೆಂದರೆ, ಈ ಗೈಡ್ ಮೂಲಕ ನಾನು ನಿಮಗೆ ಇನ್ನೂ ಒಳ್ಳೆಯ ಆಯ್ಕೆಗಳ ಕುರಿತು ಮಾಹಿತಿ ನೀಡುತ್ತೇನೆ. ಸುಮಾರು ಒಂದು ತಿಂಗಳ ಈ ಮಾರ್ಗದರ್ಶಿ ಲೇಖನ ಮುಗಿದ ನಂತರ ಯಾವುದನ್ನು ಖರೀದಿಸಬೇಕು ಮತ್ತು ಯಾವುದನ್ನು ಖರೀದಿಸಬಾರದು ಎನ್ನುವುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವಿರಿ.

ವೆಬ್ ಡಿಸೈನರ್ ನೀಡಿರುವ ಆಯ್ಕೆಯಲ್ಲಿ ಕಡಿಮೆ ಬಜೆಟ್ ನ ವೆಬ್ ಸೈಟ್ ನಿರ್ಮಿಸಿಕೊಳ್ಳುವಿರಿ. ನೀವು ಹತ್ತು ಸಾವಿರ ರೂ.ಗೆ ಸಿದ್ಧಪಡಿಸಿಕೊಂಡ ವೆಬ್‍ಸೈಟ್ ತುಂಬಾ ಸರಳವಾಗಿರುತ್ತದೆ. ಯಾಕೋ, ನಿಮಗೆ ಅದನ್ನು ನೋಡಿ ಸಮಧಾನವೇ ಆಗದು.

ಇನ್ನಷ್ಟು ಚೆನ್ನಾಗಿರುವುದು ಬೇಕು ಎಂದೆನಿಸುತ್ತದೆ. ಮತ್ತೆ 10 ಸಾವಿರ ಕೇಳುತ್ತಾರೆ. ಮತ್ತಷ್ಟು ಮಾರ್ಪಾಡು ಮಾಡುತ್ತಾರೆ. ಹೀಗೆ, ನಿಮ್ಮ ಅಭಿರುಚಿಗೆ ತುಸುವಾದರೂ ಹತ್ತಿರದ ವೆಬ್‍ಸೈಟ್ ರೂಪುಗೊಳ್ಳಲು ಸುಮಾರು 50 ಸಾವಿರ ರೂ. ತನಕವೂ ಬಜೆಟ್ ಹೋಗಬಹುದು. 

ಈಗ ವರ್ಡ್ ಪ್ರೆಸ್ ಮೂಲಕ ಕಡಿಮೆ ಬಜೆಟ್ ನ ವೆಬ್ ಸೈಟ್ ಸಹ ನಿರ್ಮಿಸುವುದು ತುಂಬಾ ಸರಳ. ಒಂದು ಐದು ಸಾವಿರ ರೂ. ಖರ್ಚಾಗುವ ವೆಬ್ ಸೈಟ್ ಅನ್ನು ವೆಬ್ ಡಿಸೈನರ್ ಗಳು ಅವರ ಪೇಮೆಂಟ್ ಸೇರಿಸಿ ಸುಮಾರು 15-20 ಸಾವಿರ ರೂ.ಗೆ ನಿರ್ಮಿಸಿಕೊಡಬಹುದು.

ಆದರೆ, ವರ್ಡ್ ಪ್ರೆಸ್ ಬಿಟ್ಟು ಬೇರೆ ಮಾದರಿಗಳಲ್ಲಿ ನೀವು ವೆಬ್ ಸೈಟ್ ನಿರ್ಮಿಸಿದರೆ ಸಾಕಷ್ಟು ಹಣ ಖರ್ಚುಮಾಡಬೇಕಾಗುತ್ತದೆ. ವೆಬ್ ಡಿಸೈನರ್ ಗಳು ನೀವು ಬಯಸುವ ಪ್ರತಿಪುಟಕ್ಕೂ ಕೋಡ್ ಬರೆಯಬೇಕಾಗುತ್ತದೆ. ಅವರಿಗೂ ಅದು ಅಧಿಕ ಶ್ರಮ ಬಯಸುವ ಕೆಲಸ. ನಿಮ್ಮ ಕಿಸೆಗೂ ಭಾರ. ಮುಂದೆ ಪ್ರತಿಯೊಂದಕ್ಕೂ ಅವರನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯೂ ಇರುತ್ತದೆ.

ವರ್ಡ್ ಪ್ರೆಸ್ ಹೊರತುಪಡಿಸಿದ ಬೇರೆ ಮಾದರಿಯಲ್ಲಿ ವೆಬ್ ಸೈಟ್ ವಿನ್ಯಾಸ ಮಾಡಿಸಿಕೊಳ್ಳಲು ಹೋಗಿ ಸುಮಾರು 10 ಸಾವಿರ ರೂಪಾಯಿ ಕಳೆದುಕೊಂಡ ನನ್ನ ಅನುಭವವನ್ನೂ ಇಲ್ಲಿ ಸೇರಿಸುತ್ತಿದ್ದೇನೆ.

ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಒಂದು ಡೊಮೈನ್ ಹೆಸರು ಖರೀದಿಸಿದ್ದೆ. ಖರೀದಿ ಸಮಯದಲ್ಲಿ ನಾನು ನೀಡಿದ ಮಾಹಿತಿಯನ್ನು ಆಧರಿಸಿ( ಈ ರೀತಿ ಖರೀದಿಸುವಾಗ ನಾವು ನೀಡಿದ whois ಮಾಹಿತಿಗಳನ್ನು ಹಲವು ವೆಬ್ ಡಿಸೈನರ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ) ನನಗೆ ಸಾಕಷ್ಟು ವೆಬ್ ಡಿಸೈನರ್ ಗಳಿಂದ ಕಾಲ್ ಬಂದಿತ್ತು.

ಬೆಂಗಳೂರಿನ ಒಂದು ವೆಬ್ ಡೆವಲಪ್ ಮೆಂಟ್ ಕಂಪನಿಯಿಂದ ಸುಮಾರು ಮೂರು ಸಾವಿರ ರೂಪಾಯಿಯಿಂದ ಸ್ವಂತ ವೆಬ್ ಸೈಟ್ ನಿರ್ಮಿಸುವ ಆಫರ್ ದೊರಕಿತು. ನನ್ನ ಕನಸಿನ ಡಿಫರೆಂಟ್ ವೆಬ್ ಸೈಟ್ ನಿರ್ಮಿಸಲು ಇದು ಸೂಕ್ತ ಸಮಯವೆಂದುಕೊಂಡು ಅವರಲ್ಲಿಯೂ ಆಸಕ್ತಿ ವ್ಯಕ್ತಪಡಿಸಿದೆ. ಆ ಮ್ಯಾನೇಜರ್ ನನ್ನ ಐಡಿಯಾಗಳನ್ನೆಲ್ಲ ಕೇಳಿ 10 ಸಾವಿರ ಬಜೆಟ್ ಗೆ ಇಂತಹ ವೆಬ್ ಸೈಟ್ ನಿರ್ಮಿಸಬಹುದೆಂದರು.

ಮೊದಲು 3 ಸಾವಿರ ರೂ ಪಾವತಿಸಿ ಕೆಲಸ ಆರಂಭಿಸಿದರು. ಯಾವುದೇ ವಿದೇಶಿ ವೆಬ್ ಸೈಟ್ ನ ನಕಲಿಯಂತೆ ನನ್ನ ವೆಬ್ ಪುಟವಿತ್ತು. ಮತ್ತೆ ಪಾವತಿಸಲು ತಿಳಿಸಿದರು. ಒಟ್ಟು 7 ಸಾವಿರವಾಯಿತು. ಮೊದಲ ಪುಟ ಬಿಟ್ಟು ಬೇರೆ ಯಾವುದೇ ಡೆವಲಪ್ ಮೆಂಟ್ ಆಗಲಿಲ್ಲ. ಸ್ಟೋರಿ ಅಪ್ಲೋಡ್ ಮಾಡೋಕೆ ಕಂಟ್ರೋಲ್ ಪ್ಯಾನೇಲ್ ಬೇಕೆಂದಾಗ ಮತ್ತೆ 3 ಸಾವಿರ ರೂಪಾಯಿ. ಒಂದು ಡಬ್ಬಾ ಪ್ಯಾನೆಲ್ ರಚಿಸಿಕೊಟ್ಟರು. ಅಲ್ಲಿ ಸರಿಯಾಗಿ ಯಾವುದೇ ಮಾಹಿತಿಯನ್ನು ಅಪ್ಲೋಡ್ ಮಾಡಲಾಗುತ್ತಿರಲಿಲ್ಲ.

ನನ್ನ ವೆಬ್ ಸೈಟ್ ಕೇವಲ ಒಂದು ಪುಟವಿತ್ತು. ಅಲ್ಲಿ ವೆಬ್ ಡಿಸೈನರ್ ಗಳು ಸ್ವಂತವಾಗಿ ರಚಿಸಿದ ವಿಭಾಗಗಳು ತೀರಾ ಕಡಿಮೆ ಇದ್ದವು. ಒಂದು ಕೆಟ್ಟ ವೆಬ್ ಸೈಟ್ ವಿನ್ಯಾಸ ಹೇಗಿರಬೇಕೋ ಹಾಗಿತ್ತು. ಅವನ್ನುಸರಿಪಡಿಸಿಕೊಡಲು ಇನ್ನೂ 30 ಸಾವಿರ ರೂಪಾಯಿ ಬೇಕಾಗಬಹುದು ಎಂದರು. ಒಂದಿಷ್ಟು ಜಗಳ ಮಾಡಿದೆ. ಪ್ರಯೋಜನವಾಗಲಿಲ್ಲ.

ನನಗೆ ವೆಬ್ ಸೈಟ್ ಬೇಕಿದ್ದರೆ ಅವರು ಹೇಳಿದ್ದಷ್ಟು ಹಣ ನೀಡುತ್ತ ಇರಬೇಕು. ಲೈಫ್ ಲಾಂಗ್…

ಹತ್ತು ಸಾವಿರ ರೂಪಾಯಿ ದೊಡ್ಡ ಮೊತ್ತ ನಿಜ. ನಾನು ಹಿಂದೆ ಸರಿಯದೆ ಇದ್ದರೆ ನನಗೆ ಇನ್ನಷ್ಟು ಸಾವಿರ.. ಲಕ್ಷ ರೂ.ವರೆಗೆ ಖರ್ಚಾಗುವುದು ಗ್ಯಾರಂಟಿ ಎಂದೆನಿಸಿತು. ಅಲ್ಲಿಗೆ ನನ್ನ ಆ ವೆಬ್ ಸೈಟ್ ಕತೆ ಮುಗಿಯಿತು.

ನನಗೆ ಗೊತ್ತಿರುವ ವ್ಯಕ್ತಿಯೊಬ್ಬರು ಇತ್ತೀಚೆಗೆ ಇ-ಕಾಮರ್ಸ್ ತಾಣವೊಂದನ್ನು ಆರಂಭಿಸಿದ್ದರು. ಅದರ ನಿರ್ಮಾಣಕ್ಕೆ ಸುಮಾರು 1 ಲಕ್ಷ ರೂಪಾಯಿ ವ್ಯಯಿಸಿದ್ದರು. ಆದರೆ, ನನ್ನ ಪ್ರಕಾರ ಆ ಇ-ಕಾಮರ್ಸ್ ತಾಣ ತುಂಬಾ ಕಳಪೆ. ಅದಕ್ಕಿಂತ ಆಕರ್ಷಕವಾಗಿ ಸುಮಾರು 20-30 ಸಾವಿರ ರೂ.ಗೆ ನಾನೇ ಆ ವೆಬ್‍ಸೈಟ್ ನಿರ್ಮಿಸಿಕೊಡುತ್ತಿದ್ದೆ. ಈಗ ನನ್ನ ಆ ಸ್ನೇಹಿತರಿಗೂ ಇದರ ಸತ್ಯ ಗೊತ್ತಾಗಿದೆ. ಅವರೇ ಅದಕ್ಕಿಂತ ಚೆನ್ನಾಗಿ ವೆಬ್‍ಸೈಟ್ ನಿರ್ಮಿಸುವಷ್ಟು ಈಗ ಕಲಿತಿದ್ದಾರೆ.

ವೆಬ್‍ಸೈಟ್ ಆರಂಭಿಸಲು ಮಾತ್ರ ಕಡಿಮೆ ಹಣ. ನಂತರ ಅದು ನಮಗೆ ಉಪಯೋಗಕ್ಕೆ ಬರಬೇಕಾದರೆ 10, 20, 50 ಸಾವಿರ ರೂ. ಹೀಗೆ ಹಣ ಪಾವತಿಸುತ್ತಲೇ ಇರಬೇಕಾಗುತ್ತದೆ. ಮುಂದಿನ ವರ್ಷ ಮತ್ತೆ ಖರ್ಚು ಹೆಚ್ಚಾಗುತ್ತದೆ. ಕಂಟೆಂಟ್ ಜಾಸ್ತಿಯಾದಂತೆ ಹಲವು ಲಕ್ಷ ರೂಪಾಯಿಯನ್ನು ವೆಬ್‍ಸೈಟ್‍ಗಾಗಿ ಖರ್ಚು ಮಾಡಬೇಕಾಗುತ್ತದೆ. ಆಮೇಲೆ ಅವರು ನಮಗೆ ಬೇಕಾದಂತೆ ಸಂಪರ್ಕಕ್ಕೂ ಸಿಗುವುದಿಲ್ಲ. ಹಣ ನೀಡಿ, ಸರಿಮಾಡಿಕೊಡ್ತಿವಿ ಎಂಬ ರೀತಿ ಇರುತ್ತಾರೆ.

ಒಮ್ಮೆ ಬೇರೆಯವರಿಂದ ವೆಬ್‍ಸೈಟ್ ನಿರ್ಮಿಸಿಕೊಂಡ ಬಳಿಕ ನಂತರ ಏನೂ ಮಾಡಲಾಗದು. ಹಣ ಇನ್ವೆಸ್ಟ್ ಮಾಡಿದ ತಪ್ಪಿಗೆ ಕೆಲವು ವರ್ಷ ಅದರಲ್ಲಿಯೇ ಹೆಣಗಾಡುವುದು ಅನಿವಾರ್ಯವಾಗುತ್ತದೆ. ಪರಿಸ್ಥಿತಿ ಈ ರೀತಿಯಿದ್ದರೆ ಸ್ಟಾರ್ಟಪ್ ಮಾಡುವವರ ಉತ್ಸಾಹ ತಗ್ಗುತ್ತದೆ. ಎಲ್ಲಾ ವೆಬ್‍ ಡಿಸೈನರ್‍ಗಳು ಈ ರೀತಿ ಹಣ ಕಬಳಿಸುತ್ತಾರೆ ಎಂದು ನಾನು ದೂರುವುದಿಲ್ಲ.

ಅವರು ಸ್ವಂತ ಬಿಸ್ನೆಸ್ ಮಾಡುತ್ತಿರುವುದರಿಂದ ಗ್ರಾಹಕರಿಂದ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುವುದು ಅವರಿಗೆ ಅನಿವಾರ್ಯವಾಗಿರಬಹುದು. ಆದರೆ, ಕೆಲವೊಂದು ಸಾಮಾನ್ಯ ಟೆಕ್ ಕೌಶಲ ಪಡೆದುಕೊಂಡು ನಾವೇ ಸರಳವಾಗಿ ಸಣ್ಣಪುಟ್ಟ ವೆಬ್‍ಸೈಟ್‍ಗಳನ್ನು ನಿರ್ಮಿಸಿಕೊಳ್ಳಬಹುದು.

ನನ್ನಂತೆಯೇ ನೀವು ಕೂಡ ವೆಬ್‍ಸೈಟ್‍ಗೆ 20-30 ಸಾವಿರ ರೂ.ಗಿಂತ ಹೆಚ್ಚು ಖರ್ಚು ಮಾಡಲು ಬಯಸದವರು ಆಗಿರಬಹುದು. 5-10 ಸಾವಿರ ರೂ.ಗೂ ಸರಳವಾಗಿ ವೆಬ್‍ಸೈಟ್ ನಿರ್ಮಿಸಿಕೊಳ್ಳಲು ಬಯಸುವವರು ಆಗಿರಬಹುದು. ಇಂತಹವರಿಗೆ ಕರ್ನಾಟಕ ಬೆಸ್ಟ್‍ನಿಂದ ಕಂಪ್ಲೀಟ್ ವರ್ಡ್‍ಪ್ರೆಸ್ ಗೈಡ್ ಆರಂಭಿಸಲಾಗಿದೆ. ಇದು ಈ ವರ್ಡ್‍ಪ್ರೆಸ್ ಮಾರ್ಗದರ್ಶಿಯ ಮೊದಲ ಪೀಠಿಕೆ. ಪೀಠಿಕೆ ಕೊಂಚ ಹೆಚ್ಚಾಯಿತು. 

ನಾನು ಓದಿರುವುದು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಟೆಕ್ ಪದವೀಧರನಲ್ಲ. ಆದರೂ, ಬ್ಲಾಗರ್ ಮತ್ತು ವರ್ಡ್‍ಪ್ರೆಸ್  ಮೂಲಕ ವೆಬ್‍ಸೈಟ್ ರಚನೆಯನ್ನು ಒಂದಿಷ್ಟು ಕಲಿತಿದ್ದೇನೆ. ಕೋಡಿಂಗ್ ಕಲಿಯಲೂ ಪ್ರಯತ್ನಿಸಿದ್ದೇನೆ. ನಾನು ಏನು ಕಲಿತಿರುವೇನೋ ಅದನ್ನು ಇತರರಿಗೆ ಕಲಿಸಿಕೊಡಲು ನನಗೆ ಆಸಕ್ತಿಯಿದೆ. ಇದಕ್ಕಾಗಿ ಈ ವಿಶೇಷ ಗೈಡ್ ರಚಿಸುತ್ತಿದ್ದೇನೆ.

ವೆಬ್ ಸೈಟ್ ನೀವೇ ರಚಿಸಿಕೊಳ್ಳಿ ಅಥವಾ ವೆಬ್ ನಿರ್ಮಾಣ ಸಂಸ್ಥೆಯ ಮೂಲಕ ರಚಿಸಿಕೊಳ್ಳಿ. ಎಲ್ಲದಕ್ಕೂ ಮೊದಲು ಈ ಗೈಡ್ ನಲ್ಲಿ ತಿಳಿಸುವ ಮಾಹಿತಿ ನಿಮಗೆ ಗೊತ್ತಿದ್ದರೆ ಮುಂದೆ ನಿಮಗೆ ತುಂಬಾ ಅನುಕೂಲವಾದೀತು.

ಸರಳವಾಗಿ ವೆಬ್ ಸೈಟ್ ನಿರ್ಮಿಸಲು ನೀವೂ ಕಲಿಯಬೇಕೆಂದರೆ ನಮ್ಮ ಪಾಲಿಗೆ ಇರುವ ಆಪತ್ ಬಾಂಧವನೆಂದರೆ ವರ್ಡ್ ಪ್ರೆಸ್. ನನ್ನ ಪಾಲಿಗೆ ಮಾತ್ರವಲ್ಲ, ಈಗ ಜಗತ್ತಿನ ಬಹುತೇಕ ವೆಬ್ ಸೈಟ್ ಗಳು ವರ್ಡ್ ಪ್ರೆಸ್ ಮೂಲಕವೇ ನಡೆಯುತ್ತಿವೆ. ಯಾಕೆಂದರೆ,

ಇದಕ್ಕೆ ಉತ್ತರ ದೊರೆಯಬೇಕಾದರೆ ವರ್ಡ್ ಪ್ರೆಸ್ ಗೈಡ್ ಗಾಗಿ ನಾನು ಬರೆದ ಎರಡನೇ ಲೇಖನವನ್ನು ನೀವು ಓದಬೇಕು.

ಇಲ್ಲಿ ನೀವು ನಿಮ್ಮ ಇಮೇಲ್ ವಿಳಾಸ ನಮೂದಿಸಿ. ಇಮೇಲ್ ಗೆ ಹೋಗಿ ಖಚಿತಪಡಿಸಿ. ಮುಂದಿನ ಸಂಚಿಕೆ ಪ್ರಕಟಗೊಂಡ ತಕ್ಷಣ ನಿಮ್ಮ ಇಮೇಲ್ ಗೆ ಲೇಖನ ತಲುಪುತ್ತದೆ.

ಅಧ್ಯಾಯ-2

ವೆಬ್ ಸೈಟ್ ಗೈಡ್: ಯಾಕೆ ವರ್ಡ್ ಪ್ರೆಸ್ ಬೆಸ್ಟ್?

5 thoughts on “ವೆಬ್ ಸೈಟ್ ಗೈಡ್: ಕರ್ನಾಟಕ ಬೆಸ್ಟ್ ಸಂಪೂರ್ಣ ಮಾರ್ಗದರ್ಶಿ

  1. Pingback: ವೆಬ್ ಸೈಟ್ ಗೈಡ್: ಯಾಕೆ ವರ್ಡ್ ಪ್ರೆಸ್ ಬೆಸ್ಟ್? | ಕರ್ನಾಟಕ Best

  2. Suhas

    Plz share ur contact number or whats app me at ********. And i wanna get notification for your next update.

    Thankyou. Nice effort. Solmelu.

    Reply
  3. Pingback: ಕೊರೊನಾ ಕಾಲದಲ್ಲಿ ಹಣ ಗಳಿಕೆಗೆ ಕೆಲವು ಅದ್ಭುತ ಉಪಾಯಗಳು! – Karnataka BEST

Leave a Reply

Your email address will not be published. Required fields are marked *