ಸಾಂತಾಕ್ಲಾಸ್‌ನಿಂದ ಏನು ಕಲಿಯುವಿರಿ? ಸಾಂತಾಕ್ಲಾಸ್ ಕರಿಯರ್ ಪಾಠ ಕೂಡ ಮಾಡ್ತಾನೆ ಅಂದ್ರೆ ನಂಬ್ತಿರಾ?

By | 15/10/2021
shallow focus photo of crystal ball on person s hand

ಜಗತ್ತಿನ ಎಲ್ಲಾ ಮಕ್ಕಳಿಗೂ ಉಡುಗೊರೆ ನೀಡುವ ಸಾಂತಾಕ್ಲಾಸ್ ನಮ್ಮ ರೋಲ್ ಮಾಡೆಲ್ ಆಗಬಹುದು.

ಸಾಂತಾ ಕ್ಲಾಸ್ ಒಳ್ಳೆಯ ವ್ಯಕ್ತಿತ್ವದ, ನಗುಮುಖದ, ಬಿಳಿದಾಡಿಯುಳ್ಳ, ದೊಡ್ಡ ಹೊಟ್ಟೆಯ ವ್ಯಕ್ತಿ. ಕ್ರಿಸ್ಮಸ್ ಹಿಂದಿನ ದಿನ ಹಿಮಜಿಂಕೆಗಳಿಂದ ತನ್ನ ಗಾಡಿಯಲ್ಲಿ ಹಾರುತ್ತ ಜಗತ್ತಿನ ಎಲ್ಲರ ಮನೆಗೆ ಹೋಗಿ ಅಲ್ಲಿರುವ ಮಕ್ಕಳಿಗೆ ಉಡುಗೊರೆಗಳನ್ನು ಇಟ್ಟು ಹೋಗುತ್ತಾನೆ. ದೊಡ್ಡವರು ಈ ಕತೆಯನ್ನು ನಂಬದೆ ಇರಬಹುದು. ಆದರೆ, ಮಕ್ಕಳು ನಂಬುತ್ತಾರೆ. ಮಕ್ಕಳು ದೊಡ್ಡವಾರದಂತೆ ಇದೊಂದು ಕಾಲ್ಪನಿಕ ಅಥವಾ ಜನಪದ ಕತೆ ಎಂದು ತಿಳಿದುಕೊಳ್ಳುತ್ತಾರೆ. 

ಕರಿಯರ್‍ನಲ್ಲಿ ಯಶಸ್ಸು ಪಡೆಯಲು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾರನ್ನಾದರೂ ರೋಲ್ ಮಾಡೆಲ್ ಅಥವಾ ಆದರ್ಶ ವ್ಯಕ್ತಿಗಳಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಬರಹಗಾರ, ಜನಪ್ರಿಯ ಆಟಗಾರ, ಯಶಸ್ವಿ ಉದ್ಯಮಿ, ರಾಜಕಾರಣಿ ಮುಂತಾದವರನ್ನು ಸೂರ್ತಿದಾಯಕ ವ್ಯಕ್ತಿಗಳಾಗಿ ಕೆಲವರು ಸ್ವೀಕರಿಸುತ್ತಾರೆ. ಜನಪದ ಕತೆಯಂತೆ ಇರುವ ಸಾಂತಾಕ್ಲಾಸ್‍ನನ್ನೂ ರೋಲ್ ಮಾಡೆಲ್ ಆಗಿ ಸ್ವೀಕರಿಸಬಹುದು. ಸಾಂತಾಕ್ಲಾಸ್‍ನಿಂದಲೂ ಕರಿಯರ್ ಪಾಠ ಕಲಿಯಬಹುದು.

ಸಾಂತಾ ಅತ್ಯುತ್ತಮ ಮ್ಯಾನೇಜರ್

ಜಗತ್ತಿನಲ್ಲಿರುವ ಎಲ್ಲಾ ಮಕ್ಕಳಿಗೂ ಕೇವಲ ಒಂದೇ ದಿನದಲ್ಲಿ ಉಡುಗೊರೆ ತಲುಪಿಸುವ ಸಲುವಾಗಿ ಎಲ್ಲೋ ಉತ್ತರ ಧ್ರುವದಲ್ಲಿ  ತನ್ನ ತಂಡದೊಂದಿಗೆ, ಹಿಮಜಿಂಕೆಗಳೊಂದಿಗೆ ಇದ್ದು, ಅವುಗಳಿಗೆ/ಅವರಿಗೆ ಸೂರ್ತಿ ನೀಡುತ್ತ ಉಡುಗೊರೆ ಸಿದ್ಧಪಡಿಸುವ ವಿಷಯವನ್ನು ನೋಡಿದರೆ ಸಾಂತಾಕ್ಲಾಸ್ ಅತ್ಯುತ್ತಮ ಮ್ಯಾನೇಜರ್ ಎಂದುಕೊಳ್ಳಬಹುದು. ನಿಮ್ಮ ಉದ್ಯೋಗವು ಒತ್ತಡದಿಂದ ಕೂಡಿದ್ದು, ಪ್ರತಿದಿನ ಡೆಡ್‍ಲೈನ್‍ನಿಂದ ಕೂಡಿರುತ್ತದೆ ಎಂದು ಭಾವಿಸಿದ್ದರೆ, ಸಾಂತಾಕ್ಲಾಸ್‍ನ ಕೆಲಸವನ್ನು ನೆನಪಿಸಿಕೊಳ್ಳಿ. ನೀವು ಸಾಂತಾಕ್ಲಾಸ್‍ನಂತೆ ಒಬ್ಬ ನಾಯಕ ಎಂದುಕೊಳ್ಳಿ. ಸಾಂತಾಕ್ಲಾಸ್ ತನ್ನ ತಂಡವನ್ನು ಉತ್ತೇಜಿಸಿ ಕೆಲಸ ತೆಗೆದಂತೆ ನೀವೂ ನಿಮ್ಮ ತಂಡವನ್ನು ಉತ್ತೇಜಿಸಬಹುದು.

ಕೆಲಸದ ಮೇಲೆ ಗಮನವಿರಲಿ

ಕ್ರಿಸ್ಮಸ್ ಇವ್ ದಿನದಂದು ತನ್ನ ಪಾತ್ರದ ಮಹತ್ವದ ಕುರಿತು ಸಾಂತಾ ಕ್ಲಾಸ್‍ಗೆ ಗೊತ್ತು. ಆದರೆ, ಇದರ ಬಗ್ಗೆ ಸಾಂತಾ ಕ್ಲಾಸ್‍ನಲ್ಲಿ ಒತ್ತಡವಿಲ್ಲ. ಆತ ಗುರಿ ಮತ್ತು ಕೆಲಸದ ಕಡೆಗೆ ಮಾತ್ರ ಗಮನ ನೀಡುವ ವ್ಯಕ್ತಿತ್ವದವನು ಎಂದು ಸಾಂತಾಕ್ಲಾಸ್ ಜನಪದ ಕತೆಗಳು ಹೇಳುತ್ತವೆ. ನಮ್ಮಲ್ಲಿಯೂ ಕೆಲಸದ ವಿಷಯದಲ್ಲಿ ಸಾಕಷ್ಟು ಒತ್ತಡಗಳು ಇರಬಹುದು. ಆದರೆ, ಗುರಿ ಕಡೆಗೆ ಅಚಲ ಗಮನವಿಟ್ಟು ಕೆಲಸ ಮಾಡಿದರೆ ಯಶಸ್ಸು ಪಡೆಯಬಹುದು.

ತಾಳ್ಮೆ ಕಳೆದುಕೊಳ್ಳಬೇಡಿ

ಅಬ್ಬಾ, ಜಗತ್ತಿನೆಲ್ಲೆಡೆ ಇರುವ ಮಕ್ಕಳಿಗೆ ಉಡುಗೊರೆ ಸಿದ್ಧಪಡಿಸುವುದು ಎಂದರೆ ಸುಲಭದ ಕೆಲಸವೇ. ಆದರೆ, ಇಂತಹ ಸನ್ನಿವೇಶದಲ್ಲಿಯೂ ಸಾಂತಾ ಕ್ಲಾಸ್ ತಾಳ್ಮೆ ಕಳೆದುಕೊಳ್ಳುವುದಿಲ್ಲ. ತನ್ನಿಂದ ಅದು ಸಾಧ್ಯವಿಲ್ಲ, ಇದು ಸಾಧ್ಯವಿಲ್ಲ ಎಂಬ ಮಾತಿಲ್ಲ. ಸಾಂತಾಕ್ಲಾಸ್ ಎಂಬ ವ್ಯಕ್ತಿತ್ವವೇ ಅಂತಹದ್ದು. ನಮ್ಮ ಕರಿಯರ್‍ನಲ್ಲಿಯೂ ತಾಳ್ಮೆ ಕಳೆದುಕೊಳ್ಳದೆ ಸಮಚಿತ್ತದಿಂದ ವರ್ತಿಸಿ ಯಶಸ್ಸಿನತ್ತ ಸಾಗಬೇಕು. 

ಅತ್ಯುತ್ತಮ ಮನೋಭಾವ ಇರಲಿ

ಅದು ಮೈ ಕೊರೆಯುವ ಚಳಿ ಇರಲಿ, ಕೆಟ್ಟ ವಾತಾವರಣ ಇರಲಿ, ರಾತ್ರಿ ಹೊತ್ತು ಇರಲಿ, ಸಾಂತಾ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಂತೋಷದಿಂದ ಸಾಂತಾ ಕ್ಲಾಸ್ ಕೆಲಸ ಮಾಡುತ್ತಾನೆ. ಅದಕ್ಕೆಲ್ಲ ಕಾರಣವಾಗಿರುವುದು ಆತನ ಆ್ಯಟಿಟ್ಯೂಡ್. ಕೆಲಸ ಯಾವುದು, ಎಷ್ಟು ಕಷ್ಟವಿದೆ, ಎಷ್ಟು ಒತ್ತಡದಿಂದ ಕೂಡಿದೆ ಎನ್ನುವುದು ಮುಖ್ಯವಲ್ಲ. ಅತ್ಯುತ್ತಮ ಮನೋಭಾವದಿಂದ ಕೆಲಸ ಮಾಡುವುದು ಮುಖ್ಯ. ಹೀಗೆ ಮಾಡಿದರೆ ನಮ್ಮಲ್ಲಿಯೂ ಕೆಲಸದ ಕುರಿತು ಅತ್ಯುತ್ತಮ ಮನೋಭಾವ ಇರಬೇಕು. ಹೀಗೆ ಮಾಡಿದರೆ ಅಂತಿಮವಾಗಿ ನಿಮಗೆ ಅದ್ಭುತ ಫಲಿತಾಂಶ ದೊರಕಿಯೇ ದೊರಕುತ್ತದೆ.

ಅರ್ಪಣಾ ಮನೋಭಾವ

ಸಾಂತಾಕ್ಲಾಸ್ ಬರುವುದು ಕ್ರಿಸ್‍ಮಸ್‍ನ ಮೊದಲ ದಿನ. ನಿಗದಿತ ದಿನಕ್ಕೆ ಬದಲು ತುಂಬಾ ಬೇಗ ಅಥವಾ ತಡವಾಗಿ ಬರುವ ನಿದರ್ಶನವಿಲ್ಲ. ಸಮಯ ಪರಿಪಾಲನೆ, ಅರ್ಪಣಾ ಮನೋಭಾವ ಇತ್ಯಾದಿ ವಿಷಯಗಳನ್ನೂ ಸಾಂತಾನಿಂದ ಕಲಿಯಬಹುದು. ಯಾರು ಅರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಾರೋ ಅವರು ಯಶಸ್ಸು ಪಡೆದೇ ಪಡೆಯುತ್ತಾರೆ.

ಈ ಕ್ರಿಸ್‍ಮಸ್ ಸಮಯದಲ್ಲಿ  ಸಾಂತಾ ಕ್ಲಾಸ್ ಉಡುಗೊರೆ ನೀಡುವಂತೆ ನೀವು ಇತರರ ಕರಿಯರ್ ಪ್ರಗತಿಗೆ ಸಹಾಯ ಮಾಡಿ. ವಿದ್ಯಾರ್ಥಿಗಳು ಯಾವ ಕರಿಯರ್ ಆಯ್ಕೆ ಮಾಡಬೇಕು ಎಂದು ಗೊಂದಲದಲ್ಲಿದ್ದರೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ. ಕರಿಯರ್‍ನಲ್ಲಿ ಪ್ರಗತಿ ಕಾಣಲು ತೊಂದರೆ ಅನುಭವಿಸುವವರಿಗೆ ನೆರವು ನೀಡಿ. ಹ್ಯಾಪಿ ಕ್ರಿಸ್‍ಮಸ್.

(ವಿಜಯ ಕರ್ನಾಟಕ ವಿಕೆ ಮಿನಿಯಲ್ಲಿ ಪ್ರಕಟಿತ)

Leave a Reply

Your email address will not be published. Required fields are marked *