ಇದು ಮನಸ್ಸಿನ ವಿಷಯ: ಸಂಗಾತಿಯ ಸಾಂಗತ್ಯವಿಲ್ಲದ ಮೇಲೆ…

ನನ್ನ ಪರಿಚಯದವರೊಬ್ಬರಿದ್ದರು. ತುಂಬಾ ದರ್ಪದ ಮನುಷ್ಯ. ತಾನು ಹೇಳಿದ್ದೇ ವೇದವಾಕ್ಯ ಅನ್ನುವ ಮನೋಭಾವದವರು. ಒಂದು ಗಂಡು, ಒಂದು ಹೆಣ್ಣು ಮಕ್ಕಳು ಇದ್ದರು. ಹೆಂಡತಿ ಮಕ್ಕಳು ಗಂಡನ ಮಾತಿಗೆ ಎದುರಾಡುತ್ತಿರಲಿಲ್ಲ, ಅವರು ಮನೆಗೆ ಬರುತ್ತಿದ್ದಾರೆ ಎಂದು ಸುಳಿವು ಸಿಕ್ಕಾಗ ಮನೆಮಂದಿಯೆಲ್ಲಾ ಗಪ್ ಚುಪ್.ಅವರ ಊಟ ತಿಂಡಿ ಎಲ್ಲವೂ ಶಿಸ್ತಿನ ಪ್ರಕಾರ ನಡೆಯಬೇಕಿತ್ತು. ಅದೆಲ್ಲವೂ ಹೆಂಡತಿಯ ಕೆಲಸವಾಗಿತ್ತು. ಕಾಲಕ್ರಮೇಣ ಮಕ್ಕಳಿಗೆಲ್ಲಾ ಮದುವೆಯಾಯಿತು. ಒಂದು ದಿನ ಅವರ ಹೆಂಡತಿ ಆಕಸ್ಮಿಕವಾಗಿ ಸತ್ತು ಹೋದರು. ಹೆಂಡತಿ ಇರುವಾಗ ಎಲ್ಲರ ಮೇಲೆ ದರ್ಪ ತೋರಿಸುತ್ತಿದ್ದ ಅವರು ಹೆಂಡತಿ ಸತ್ತ ವರುಷದೊಳಗೆ ಬಾಲ ಮುದುರಿದ ಬೆಕ್ಕಿನಂತಾದರೂ. ತಾನು ಕಟ್ಟಿದ ಮನೆ ಬಿಟ್ಟು ಮಕ್ಕಳ ಮನೆಯಲ್ಲಿ ಒಂದಷ್ಟು ತಿಂಗಳು ಕಾಲ ಇರತೊಡಗಿದರು. ಗಂಡುಮಕ್ಕಳ ಮನೆಯಲ್ಲಿ ಇವರ ಮಾತಿಗಿಂತ ಸೊಸೆಯರ ಮಾತೇ ಹೆಚ್ಚು ನಡೆಯುತ್ತಿತ್ತು. ಸೊಸೆ ಕೊಟ್ಟಿದ್ದನ್ನು ತಿಂದು ಸೊಲ್ಲೆತ್ತದೇ ಇರಬೇಕಾಯಿತು. ಇನ್ನು ಮಗಳ ಮನೆಯೇ ವಾಸಿ ಎಂದು ಅಲ್ಲಿಗೆ ಹೋದರೆ ಮಗಳು ಒಂದಷ್ಟು ದಿನ ಸುಮ್ಮನಿದ್ದು ಆಮೇಲೆ ನಿಧಾನಕ್ಕೆ, ಅಪ್ಪ, ತರಕಾರಿ ತೆಗೆದುಕೊಂಡು ಬಾ, ಗಿಡಗಳಿಗೆ ನೀರು ಹಾಕು, ಮಕ್ಕಳನ್ನು ಸ್ಕೂಲಿನಿಂದ ಕರೆದುಕೊಂಡು ಬಾ ಅನ್ನುವ ಕೆಲಸ ಹಚ್ಚುವುದಕ್ಕೆ ಶುರುಮಾಡಿದಳು. ಇನ್ನು ಟಿವಿ ನೋಡಿದರೆ ಮಕ್ಕಳು ಓದಲ್ಲ ಈ ಟಿವಿ ಶೋ ಎಲ್ಲಾ ಹಾಕಬೇಡಿ ಎಂದು ಅಳಿಯ ಮಹಾಶಯ ತಾಕೀತು ಮಾಡುವ ದನಿಯಲ್ಲಿಯೇ ಹೇಳಿದ. ತಾನೊಬ್ಬ ದಂಡಪಿಂಡ. ಹೆಂಡತಿ ಇರುವಾಗ ಇವರೆಲ್ಲಾ ನನಗೆ ಎಷ್ಟು ಭಯಪಡುತ್ತಿದ್ದರು. ಅಪ್ಪಯ್ಯಾ ಎಂದು ಬಾಯಿತುಂಬಾ ಕರೆಯುತ್ತಿದ್ದರು. ಇದೆಲ್ಲಾ ನಾಟಕನಾ… ಎಂಬುಷ್ಟರ ಮಟ್ಟಿಗೆ ಅವರು ರೋಸಿ ಹೋಗಿದ್ದರು. ಕೊನೆಗೆ ತಾನು ಕಟ್ಟಿದ ಮನೆ ಬಿಟ್ಟು ಮಕ್ಕಳ ಮನೆಗೆ ಅಲೆದು ಜೀವಮಾನವಿಡಿ ನೋವಿನಲ್ಲಿಯೇ ಕಳೆದರು. ಬಾಳಸಂಜೆಯಲ್ಲಿ ಅವರ ಮಾತು ಕೇಳಿಸಿಕೊಳ್ಳುವ ಯಾವ ಜೀವವೂ ಅವರ ಬಳಿ ಇರಲಿಲ್ಲ.

ಇನ್ನು ಗೆಳತಿಯ ತಾಯಿಯೊಬ್ಬಳು ಗಂಡನ ಜತೆ ಬಾಳುವುದಕ್ಕೆ ಆಗದೇ ಮನೆಯಿಂದ ಹೊರಗೆ ಬಂದಿದ್ದರು. ಗಂಡು ದಿಕ್ಕಿಲ್ಲದ ಅವರ ಜೀವನವನ್ನು ಒಂದು ದಡಕ್ಕೆ ತಲುಪಿಸಲು ಸಾಕಷ್ಟು ಕಷ್ಟಪಟ್ಟಿದ್ದರು ಆಕೆ. ತನ್ನೆಲ್ಲಾ ಆಸೆ, ಕನಸುಗಳನ್ನು ಮಗಳಿಗಾಗಿ ಮೀಸಲಿಟ್ಟಿದ್ದರು. ಬೇರೊಂದು ಮದುವೆಯಾದರೆ ಬಂದ ಗಂಡಸು ಹೇಗಿರುತ್ತಾನೋ ಎಂಬ ಭಯ ಜತೆಗೆ ಮಗಳು ಪ್ರಾಯಕ್ಕೆ ಬರುತ್ತಿರುವಾಗ ತನಗ್ಯಾಕೆ ಮದುವೆ ಎಂದು ತನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಸುಮ್ಮನಾಗಿದ್ದರು. ಮಗಳಿಗೆ ಮದುವೆ ಮಾಡಿಸಿ ಗಂಡನ ಜತೆ ಕಳುಹಿಸಿದ್ದರು. ಮಗಳ ಜತೆ ಹೋದರೆ ತನ್ನಿಂದ ಅವರಿಗೆಲ್ಲಿ ರಗಳೆ ಆಗುತ್ತದೆಯೋ ಎಂದು ಮನೆಯಲ್ಲಿ ಒಂಟಿಯಾಗಿಯೇ ಜೀವನ ಸಾಗಿಸಿದರು.

ಇವೆರೆಡು ಉದಾಹರಣೆ ಅಷ್ಟೇ. ಇಂತಹದ್ದೆ ನೂರಾರು ಮಂದಿ ನಮ್ಮ ಕುಟುಂಬದಲ್ಲಿ, ನಮ್ಮ ನೆರೆಹೊರೆಯಲ್ಲಿ ಇರುತ್ತಾರೆ. ಯಾವುದೋ ಕಾರಣಕ್ಕೆ ಗಂಡನಿಂದ ಬೇರೆಯಾದವರು, ಹೆಂಡತಿಯಿಂದ ದೂರವಾದರೂ ಅಥವಾ ಸಂಗಾತಿಯ ಅಕಾಲಿಕ ಮರಣದಿಂದ ದಿಕ್ಕು ಕಾಣದೇ ಇದ್ದವರು ನಮ್ಮ ನಡುವೆಯೇ ಇರುತ್ತಾರೆ. ಗಂಡನ ಹಿಂಸೆಯಿಂದ ಬೇಸತ್ತವರು ಅಥವಾ ಹೆಂಡತಿಯಿಂದ ಮಾನಸಿಕ ನೋವು ತಿಂದವರು ನನಗಿನ್ನು ಜನ್ಮದಲ್ಲಿ ಸಂಗಾತಿಯ ಸಾಂಗತ್ಯ ಬೇಡವೆಂದು ಹೇಳಿ ಸುಮ್ಮನಾಗುತ್ತಾರೆ. ಆದರೆ ಇದು ಎಷ್ಟು ದಿನ ಸಾಧ್ಯ….? ಒಂದು ಗಂಡಿಗೊಂದು ಹೆಣ್ಣು ಬೇಕೆ ಬೇಕು ಅಲ್ಲವೇ? ಕಷ್ಟನೋ ಸುಖನೋ ಜೀವನದ ಬಂಡಿ ಇಬ್ಬರೂ ಹೆಗಲು ಕೊಟ್ಟರೇ ಮಾತ್ರ ಸುಸೂತ್ರವಾಗಿ ನಡೆಯಲು ಸಾಧ್ಯ? ಏಕಾಂಗಿ ಪಯಣ ಎಲ್ಲಿಯ ತನಕ ಸಾಗಬಹುದು….?

ಸಾಮಾನ್ಯವಾಗಿ ಹೆಣ್ಣುಮಕ್ಕಳು ಗಂಡನಿಂದ ವಿಚ್ಛೇದನ ಪಡೆದ ನಂತರವೋ ಅಥವಾ ಗಂಡನ ಅಕಾಲಿಕ ಮರಣದಿಂದಲೋ ಒಂಟಿಯಾಗಿತ್ತಾರೆ. ಅವರಲ್ಲಿ ಮಕ್ಕಳಿದ್ದವರು ನಮಗೆ ಮತ್ತೊಮ್ಮೆ ಈ ಮದುವೆ, ಗಂಡನ ಉಸಾಬಾರಿ ಬೇಡವೆಂದು ಮಕ್ಕಳಿಗಾಗಿಯೇ ತಮ್ಮ ಜೀವನ ಮುಡಿಪಾಗಿಡುತ್ತಾರೆ. ಇನ್ನು ಕೆಲವರು ಸರಿಯಾಗಿ ಕಣ್ತೆರೆದು ಜೀವನವನ್ನು ಕಾಣುವ ಮೊದಲೇ ಇಂತಹದ್ದೊಂದು ಅಘಾತಕ್ಕೆ ಒಳಪಟ್ಟು ಮುಂದೇನು ಎಂಬ ಚಿಂತೆಯಲ್ಲಿರುತ್ತಾರೆ. ಪುನಃ ಮದುವೆಗೆ ಕೊರಳೊಡ್ಡಿದರೆ ಸರಿಯಾದ ಸಂಗಾತಿ ಸಿಗುತ್ತಾನಾ  ಎಂಬ ಆತಂಕವು ಕಾಡುತ್ತಿರುತ್ತದೆ. ಗೆಳತಿಯರು  ಅವರವರ ಗಂಡ ಮಕ್ಕಳ ಜತೆ ನಗುತ್ತಾ ಸುಖವಾಗಿರುವಾಗ ನಾನ್ಯಾರ ಬಳಿ ನೋವು ಹೇಳಿಕೊಳ್ಳುವುದು ತನ್ನ ದುಃಖಕ್ಕೆ ಯಾರ ಹೆಗಲೊರಗುವುದು ಎಂಬ ಚಿಂತೆ ಕಾಡುತ್ತದೆ. ಮನೆಯವರ ಬಳಿಯೂ ಈ ವಿಷಯದ ಕುರಿತು ಮಾತನಾಡುವುದಕ್ಕೆ ಆಗದೇ ಒಳಗೊಳಗೆ ಪರಿತಪಿಸುತ್ತಿರುತ್ತಾರೆ.

ಹಾಗಂತ ಗಂಡಿಗೆ ಈ ಚಿಂತೆ ಇಲ್ಲವೆಂದು ತಿಳಿದುಕೊಳ್ಳಬೇಡಿ. ಹೆಣ್ಣು ತನ್ನ ಭಾವನೆಗಳನ್ನು ಕಣ್ಣಿರಿನ ಮೂಲಕವಾದರೂ ವ್ಯಕ್ತಪಡಿಸಬಹುದು ಆದರೆ ಗಂಡು ಈ ವಿಷಯದಲ್ಲೂ ಅಸಹಾಯಕ. ಹೆಂಡತಿಯಿಲ್ಲದ ಗಂಡು ಕೂಡ ಅಂತರಂಗದಲ್ಲಿ ನೋವಿನ ಮೂಟೆಯನ್ನೇ ಹೊತ್ತುಕೊಂಡಿರುತ್ತಾನೆ. ಹೆಂಡತಿ ಬಿಟ್ಟು ಹೋಗಿದ್ದರೆ ‘ಇವನ ಜತೆ ಬಾಳುವುದಕ್ಕೆ ಆಗದೇ ಬಿಟ್ಟು ಹೋಗಿದ್ದಾಳೆ’ ಎಂದು ಕೆಲವರು ಮೂದಲಿಸಿದರೆ ಇನ್ನು ಕೆಲವರು ‘ಇವನಿಗೆ ಇನ್ಯಾವುದೋ ಸಂಬಂಧವಿರಬೇಕು’ ಎಂದು ಏನೇನೋ ತಮಗೆ ತೋಚಿದ್ದು ಹೇಳುತ್ತಾರೆ. ಆದರೆ ಮನೆಗೆ ಬಂದಾಗ ಒಂದು ಲೋಟ ನೀರು ಕೊಡುವುದಕ್ಕೂ ತನ್ನವರಾರು ಇಲ್ಲದೇ ಇದ್ದಾಗ ಆ ಗಂಡಸು ಅನುಭವಿಸುವ ನೋವು ಯಾರಿಗೂ ಕಾಣಿಸುವುದೇ ಇಲ್ಲ. ನೋಡುವವರಿಗೆಲ್ಲಾ ಅವನ ಸುಖಿ ಎಂದೆನಿಸಬಹುದು ಆದರೆ ಅವನ ದುಃಖ ಅವನದ್ದು.

ವಯಸ್ಸಿರುವಾಗ ತನಗೆ ಗಂಡನ ಅಗತ್ಯವಿಲ್ಲವೆಂದು ಹೆಣ್ಣು, ತನಗೆ ಹೆಣ್ಣಿನ ಅವಶ್ಯಕತೆ ಇಲ್ಲವೆಂದು ಗಂಡು ಹೇಳಬಹುದು. ಆದರೆ ಬದುಕು ಸೋತಾಗ, ಆರೋಗ್ಯ ಕೆಟ್ಟಾಗ, ತನ್ನ ನೋವು, ನಲಿವು ಕೇಳಿಸಿಕೊಳ್ಳುವ ಒಂದು ಜೀವ ಬೇಕು. ತನ್ನದೇ ಒಂದು ಕುಟುಂಬ ಬೇಕು ಎಂದು ಅನಿಸುತ್ತದೆ. ಸಂಗಾತಿಯ ಸಾಂಗತ್ಯವಿಲ್ಲದ ಬದುಕು ಒಮ್ಮೊಮ್ಮೆ ಜಿಗುಪ್ಸೆ ಮೂಡಿಸುತ್ತದೆ. ಹೆಂಡತಿ ಸಾಂಗತ್ಯ ಇಲ್ಲದ ಗಂಡನ ಬದುಕು ಹೇಗೆ ಅಪೂರ್ಣವೋ, ಗಂಡನಿಲ್ಲದ ಹೆಂಡತಿಯ ಬದುಕು ಕೂಡ ಅಷ್ಟೇ ಅಪೂರ್ಣ. ದೈಹಿಕ ವಾಂಛೆಗಾಗಿ ಮಾತ್ರ ಹೆಣ್ಣಿಗೊಂದು ಗಂಡು, ಗಂಡಿಗೊಂದು ಹೆಣ್ಣು ಅವಶ್ಯವಿರುವುದು ಅಲ್ಲ. ಇವಿಲ್ಲದಕ್ಕೂ ಮಿಗಿಲಾಗಿ ಬಾಳಸಂಗಾತಿಯ ಅಗತ್ಯವಿರುತ್ತದೆ. ಅದನ್ನು ಅರಿಯುವ ಮನಸ್ಸಿರಬೇಕು.

ಇಂತಹ ಸಂದರ್ಭದಲ್ಲಿ ಕುಟುಂಬದ ಇತರೆ ಸದಸ್ಯರು ಅವರಿಗೆ ಸಾಂತ್ವನ ತುಂಬಬೇಕು.  ಮಗನೋ/ಮಗಳೊ ಯಾವ ಸಂಬಂದವೂ ಬೇಡವೆಂದು ಹೇಳಿದಾಗ ಯಾವುದೋ ಕಹಿ ಘಟನೆ ಅವರನ್ನು ಹಾಗೇ ಘಾಸಿಮಾಡಿರಬಹುದು. ಆದರೆ ಅವರ ಮನಸ್ಸು ತಿಳಿಯಾದಾಗ ಬುದ್ಧಿ ಹೇಳಿ ಸಾಂಗತ್ಯದ ಸಿಹಿಯ ರುಚಿಯನ್ನು ಅವರಿಗೆ ತಿಳಿಸಬೇಕು. ತಂದೆ-ತಾಯಿ, ಅಕ್ಕ-ತಮ್ಮ ಯಾರೂ ನಮ್ಮ ಮುಪ್ಪಿನ ಕಾಲದಲ್ಲಿ ಬರುವುದಿಲ್ಲ. ಕಟ್ಟಿಕೊಂಡವನೋ, ಕೈಹಿಡಿದವಳು ಮಾತ್ರ ನಮ್ಮದೆಯ ನೋವಿಗೆ ದನಿಯಾಗುತ್ತಾರೆ ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು.

Leave a Reply

Your email address will not be published. Required fields are marked *