ಕಥಾಲೋಕ: ಒಡಲೊಳಗಿನ ಕೆಂಡಸಂಪಿಗೆ…

  • ಪವಿತ್ರಾ ಶೆಟ್ಟಿ

ಎಲ್ಲಾದರೂ ಬಿಟ್ಟು ಬಾ ಈ ಮಗೂನಾ ಶಂಕರಣ್ಣಾ ನೀ ಒಂಬ್ನೆ ಹೆಂಗೇ ಸಾಕ್ತಿಯಾ…? ಹುಟ್ಟಿದ್ದು ಬೇರೆ ಹೆಣ್ಣು ಕೂಸು, ಅವಳ ಪಾಪದ ಪಿಂಡಕ್ಕೆ ನೀ ಯಾಕೆ ಹೊಣೆಗಾರ ಆಗ್ತಿಯಾ…? ಅದರ ಮೂಸುಡಿಯಲ್ಲಿರೋ ಆ ಮಚ್ಚೆ ನೋಡಿದರೆ ಗೊತ್ತಾಗುದಿಲ್ವಾ ಅದು ನಿನ್ನ ರಕ್ತಕ್ಕೆ ಹುಟ್ಟಿದ್ದು ಅಲ್ಲಾ ಅಂತ! ಎಂದು ಬುಡ್ಡಮ್ಮಜ್ಜಿ ಮುದುರಿ ಹೋದ ವೀಳ್ಯದೆಲೆಯ ಮೇಲೆ ಸುಣ್ಣ ಸವರಿಕೊಳ್ತಾ ಅದರ ಮಧ್ಯೆ ಎರಡು ಅಡಿಕೆ ಹೋಳು, ತಲೆಕೂದಲಿನಂತಿರುವ ಹೊಗೆಸೊಪ್ಪನ್ನ ಸೇರಿಸಿ ಬಾಯಲ್ಲಿಟುಕೊಂಡು ಚೆನ್ನಾಗಿ ಜಗಿದು ಪಿಚಕ್ ಎಂದು ಉಗಿದುಬಿಟ್ಟಳು! ತುಸು ಹಸಿನಾ ಹಾಲಿದ್ದರೆ ಕೂಡವ್ವಾ… ಮಗೀಗೆ ಹಸಿವಾಗಿರಬೇಕು ತುಟಿಯಲ್ಲಾ ಬಾಡಿಹೋಗಿದೆ ನೋಡಿಲ್ಲಿ. ಹಾಗೆ ಆಚೆ ಮನೆ ಗಿರಿಜಾಕ್ಕನ ಮಗಳು ಸುಂದರಿ ಹೆತ್ತಿದ್ದಾಳೆ ಅಲ್ವಾ… ‘ಅವ್ವಾ ನೀ ಅವಳ ಹತ್ತಿರ ಈ ಮಗೀನ ಬಿಟ್ಟು ಬಾ…’ಒಂದು ಸಲ ಎದಿಹಾಲು ಚೀಪಲಿ ಮಗು. ಥೂ ಹಾಳಾದವ್ನೆ ನಿಂಗೆ ಎಷ್ಟು ಹೇಳಿದರೂ ಅಷ್ಟೇ. ಇದೇನು ನಿಂಗೆ ಹುಟ್ಟಿದ್ದಾ…? ಅಷ್ಟು ಯಾಕೆ ಪಾಪ ಪುಣ್ಯ ತೋರಿಸ್ತಿಯಾ…? ಯಾರದ್ದೊ ಪಿಂಡಕ್ಕೆ ಸುಂದರಿ ಯಾಕೆ ಹಾಲು ಕುಡಿಸ್ತಾಳೆ?  ಅವಳ ಎದಿ ಹಾಲು ಅವಳ ಮಗೀಗೆ ಸಾಕಾಗ್ತದೋ ಇಲ್ವೊ…? ಈ ಹಾದರಕ್ಕೆ ಹುಟ್ಟಿದ ಮಗುವಿಗೆ ಸುಂದರಿ ಎದಿ ಹಾಲು ಬೇರೆ ಕೇಡು!

 ಅವ್ವಾ ನೀ ಇನ್ನೊಂದು ಸಲ ಹಾದರದ ಕೂಸು ಎಂದರೆ ಚೆಂದಾಕಿರಲ್ಲ ನೋಡು. ಅಷ್ಟಕ್ಕೂ ನಾ ನನ್ನ ಅಪ್ಪಯ್ಯಂಗೆ ಹುಟ್ಟಿದ್ದೆ ಅನ್ನೋದಕ್ಕೆ ನಿನ್ನ ತಾವ ಏನು ಗ್ಯಾರಂಟಿ ಇದೆ…? ಶಂಕರಣ್ಣನ ಮಾತು ಕೇಳ್ತಾನೆ ಬುಡ್ಡಮ್ಮಜ್ಜಿ ಮೈ ಮೇಲೆ ದೇವರು ಬಂದ ಹಾಗೇ,’ಹಾಳಾದ್ವನೆ ಹಾದರದವರ ಮನೆ ಹೆಣ್ಣು ಕಟ್ಟಿಕೊಂಡು ಹೆತ್ತವ್ವನ ಮೇಲೆ ಅನುಮಾನ ಪಡ್ತಿಯಾ ನೀ ಒಳಗೆ ಬರಬೇಡ ನಿನ್ನಿಂದ ನನ್ನ ಮರ್ಯಾದೆ ಹೋಯ್ತು, ಯಾಕೆ ನನ್ನ ಹೊಟ್ಟೆಯಲ್ಲಿ ಹುಟ್ಟಿ ಹೆತ್ತಹೊಟ್ಟೆ ಉರಿಸ್ತಿಯಾ…? ನಿನ್ನ ಬದಲು ಒಂದು ನಾಯಿ ಹುಟ್ಟಿದರೂ ಮನೆಯಾದರೂ ಕಾಯ್ತಿರತಿತ್ತು’. ಬುಡ್ಡಮ್ಮಜ್ಜಿಯ ಕೋಪ ಶಂಕರಣ್ಣನ ಮೇಲಿಗಿಂತ ಆ ಮಗು, ಅದರ ಹೆತ್ತಬ್ಬಿ ಶಾರದ ಮೇಲೆ ಜಾಸ್ತಿ ಇಣುಕುತ್ತಿತ್ತು. ಶಂಕರಣ್ಣನಿಗೆ ಕೈಯಲ್ಲಿದ್ದ ಮಗುವಿನ ಅಳು ಒಂದು ಕಡೆಯಾದರೆ, ಲುಂಗಿಯಲ್ಲಿ ಕಟ್ಟಿಕೊಂಡ ಕೆಂಡಸಂಪಿಗೆ ಹೂವು ಕೆಂಡದಂತೆ ಅವನ ಒಡಲು ಸುಡುತ್ತಿತ್ತು!

ಒಂದು ಹಂತದ ಜಗಳ ಮುಗಿದ ಮೇಲೆ ಬುಡ್ಡಮ್ಮಜ್ಜಿ ತಗೋ ಚಾ ಕುಡಿ, ತಲೆನೋವಾದರೂ ಸ್ವಲ್ಪ ಕಡಿಮೆ ಆಗುತ್ತೆ ಎಂದು ಒಂದು ದೊಡ್ಡ ಚೊಂಬಿನಲ್ಲಿ ಚಾ ತಂದು ಶಂಕರಣ್ಣನ ಮುಂದೆ ಇಟ್ಟಾಗ ನನಗೆ ಬೇಡ ನೀನೆ ಗಂಟಲು ಮೇಲೆ ಸುರಿದಿಕೋ ಎಂದು ಚಾ ಚೊಂಬನ್ನು ದೂರಕ್ಕೆ ತಳ್ಳಿ ಬಿಟ್ಟ. ಸಾಯೋ ಕಾಲಕ್ಕೆ ನಾನು ಇನ್ನು ಏನೇನು ನೋಡಬೇಕೋ, ಆ ಶಿವ ನನ್ನ ಯಾವತ್ತು ತೆಗೆದುಕೊಂಡು ಹೋಗ್ತಾನೋ ಆ ಅನಿಷ್ಟನಾ ಕಟ್ಟಿಕೊಂಡಾಗಲೇ ನಮ್ಮ ಮನೆಗೆ ಶನಿ ಒಕ್ಕರಿಸಿಕೊಳ್ತು. ಬೇಡಾ ಬೇಡಾ ಎಂದು ಎಷ್ಟು ಗೋಗೆರೆದರೂ ನನ್ನ ಮಾತು ಕೇಳಿಲ್ಲ ಈ ಮೂದೇವಿ ಎಂದು ಬಾಯಿತುಂಬಾ ಬೈದು ಮನಸ್ಸು ಹಗುರುಮಾಡಿಕೊಂಡಳು ಬುಡ್ಡಮ್ಮಜ್ಜಿ. ಇವಳ ಗಟ್ಟಿ ದನಿಗೆ ಮಗು ಎಚ್ಚರಗೊಂಡು ಕೀರಲು ದನಿಯಲ್ಲಿ ಅಳಲು ಶುರುಮಾಡಿತು. ಅವ್ವಾ.. ಎಂದು ಶಂಕರಣ್ಣ ಬುಡ್ಡಮ್ಮಜ್ಜಿ ಕಡೆ ನೋಡಿದ. ಅವಳು ಮಗೂನ ಕತ್ತೆತ್ತಿ ಕೂಡ ನೋಡಲಿಲ್ಲ. ನನ್ನ ಮತ್ತು ಶಾರದಾನ ಮೇಲಿನ ದ್ವೇಷ ನೀ ಈ ಹಸಿಗೂಸಿನ ಮೇಲೆ ಯಾಕೆ ತೋರಿಸ್ತಿಯಾ…? ಎಂದು ಶಂಕರಣ್ಣ ಗೋಗೆರೆದರು ಬುಡ್ಡಮ್ಮಜ್ಜಿ ಸೊಲ್ಲೆತ್ತಲಿಲ್ಲ. ಇದನ್ನೆಲ್ಲಾ ನೋಡುತ್ತಿದ್ದ ಪಕ್ಕದ್ಮನೆ ಗೌರಕ್ಕ ಶಂಕರಣ್ಣನ ಕೈಯಲ್ಲಿದ್ದ ಎಳೆಕೂಸನ್ನು ಎತ್ತಿಕೊಂಡು, ಸ್ವಲ್ಪ ಹಾಲು ಕುಡಿಸಿ ತಂದುಕೊಡ್ತೇನೆ. ನೀನು ಒಲೆಗೆ ಕಾಯಿಸಿಪ್ಪೆ ಹಾಕಿ ನೀರು ಕಾಯಿಸು. ಸ್ನಾನ ಮಾಡಿಸ್ತೇನೆ. ಹಂಗೇ, ಹತ್ತಿ ಸೀರೆ ಇದ್ದರೆ ಜೋಲಿ ಕಟ್ಟು ಎಂದಾಗ ಶಂಕರಣ್ಣನ ಮುಖದಲ್ಲಿ ಒಂದು ನಿರಾಳ ಭಾವ !

ಲಗುಬಗೆಯಿಂದ ಒಳಗಡೆ ಹೋದವನೆ ಬಚ್ಚಲು ಒಲೆಗೆ ಬೆಂಕಿ ಹಾಕಿ ಶಾರದನ ಸೀರೆ ಎಲ್ಲಿದೆ ಎಂದು ಹುಡುಕಲು ಶುರುಮಾಡಿದ. ಆವತ್ತು ಶಾರದಾ ಹೇಳಿದ ಮಾತು ತಟ್ಟಂತ ನೆನಪಿಗೆ ಬಂತು. ತಿಳಿ ಗುಲಾಬಿ ಬಣ್ಣದ ಚೌಕಳಿಯ ಸೀರೆಗಾಗಿ ಕೋಣೆಯ ಬುಟ್ಟಿಯಲ್ಲಿದ್ದ ಸೀರೆಯನ್ನೆಲ್ಲಾ ಕಿತ್ತು ಬಿಸಾಡಿದ. ಎಲ್ಲೂ ಸಿಕ್ಕದೆ ಇದ್ದಾಗ ಕಣ್ಣಿಗೆ ಕತ್ತಲು ಆವರಿಸಿಕೊಂಡಂತಾಗಿ ಅಲ್ಲಿಯೇ ಕುಳಿತುಬಿಟ್ಟ. ದುಃಖ ಉಮ್ಮಳಿಸಿ ಬರುತ್ತಿತ್ತಾದರೂ ಅಳಲು ಭಯ. ತನ್ನ ಕಣ್ಣಿರಿಗೂ ತಾಯಿ ಶಾರದಳನ್ನ ಹೊಣೆ ಮಾಡುತ್ತಾಳೆ ಎಂದು ಕಣ್ಣೀರನ್ನು ಕಟ್ಟಿಕೊಂಡ. ಕುಳಿತಲ್ಲಿನಿಂದಲೇ ಚಲ್ಲಾಪಿಲ್ಲಿಯಾಗಿದ್ದ ಶಾರದಳಾ ಸೀರೆಯನ್ನು ನೋಡುತ್ತಾ ಕುಳಿತಿದ್ದವನಿಗೆ ಅಲ್ಲೆ ಇದ್ದ ಒಂದು ವಯರ್ ಬುಟ್ಟಿ ಕಣ್ಣಿಗೆ ಬಿತ್ತು. ಅದನ್ನು ಅಗೆದು ನೋಡಿದರೆ ಮೆತ್ತಗಿನ ಚೌಕುಳಿ ಸೀರೆ ಬೆಚ್ಚಗೆ ಮಲಗಿತ್ತು. ಅದನ್ನು ಶಂಕರಣ್ಣ ಶಾರದಾಳಿಗೆ ಮೊದಲ ಬಾರಿ ಊರ ಜಾತ್ರೆಯಲ್ಲಿ ಕೊಡಿಸಿದ್ದ. ಒಂದೇ ಒಂದು ಬಾರಿ ಆ ಸೀರೆ ಉಟ್ಟಿದ್ದಳು ಶಾರದ. ಆಮೇಲೆ ಮುಟ್ಟಿನ ನೀರು ನಿಂತಿತು ಎಂದು ಗೊತ್ತಾದ ಮೇಲೆ ಅದನ್ನು ಅಂಟುವಾಳ ಕಾಯಿ ನೀರಲ್ಲಿ ನೆನೆಸಿ ಚೆನ್ನಾಗಿ ಒಗೆದು ಜೋಪಾನವಾಗಿ ಮಡಚಿಟ್ಟಿದ್ದಳು. ಹೆಂಡತಿಯ ಈ ಕೆಲಸ ಕಂಡು ಶಂಕರಣ್ಣ ಯಾಕೆ ಈ ಸೀರೆನ ಮಡಚಿ ಇಟ್ಟೆ ಹಾಗೆ ಇಡೋದಕ್ಕೆ ತಗೊಂಡಿದ್ಯಾ ಎಂದಾಗ ಶಾರದ ತುಸು ನಾಚಿಕೊಳ್ಳುತ್ತಾ ‘ನಮ್ಮ ಮಗಿಗೆ ಜೋಲಿ ಕಟ್ಟೋಕೆ ಬೇಕು’ ಎಂದಾಗ ಶಂಕರಣ್ಣನೂ ಸುಮ್ಮನಾಗಿದ್ದ. ಈಗ ಆ ಸೀರೆ ಮುಟ್ಟಿದಾಗ ಶಂಕರಣ್ಣಂಗೆ ಹಳೆಯದೆಲ್ಲಾ ಕಣ್ಮುಂದೆ ಬಂದೆ ಮಂಜಾದ ಕಣ್ಣನ್ನು ಒರೆಸಿಕೊಳ್ಳುತ್ತಾ ಅಲ್ಲಿಯೇ ಕುಳಿತುಬಿಟ್ಟ. ನೀರು ತೆಗೆದುಕೊಂಡು ಬಾ ಎಂದರೆ ಇಲ್ಲೇ  ಮಾಡುತ್ತಿದ್ದಿಯಾ ಶಂಕರಣ್ಣ…? ಎಂದು ಗೌರಕ್ಕ ಮಗುನಾ ಸ್ನಾನ ಮಾಡಿಸಿಕೊಂಡು, ಒಂದು ಬಟ್ಟೆ ಸುತ್ತಿಕೊಂಡು ಶಂಕರಣ್ಣನ ಕೈಯಲ್ಲಿ ಇಟ್ಟಳು. ಇದ್ಯಾಕೆ ಈ ತರ ಬಟ್ಟೆ ಸುತ್ತಿದ್ದಿಯಾ? ಅದಕ್ಕೆ ಉಸಿರಾಡೋದಕ್ಕೆ ಕಷ್ಟ ಆಗ್ತದೆ ನೀ ಇದನ್ನೆಲ್ಲಾ ತೆಗಿ ಗೌರಕ್ಕ ಎಂದಾಗ, ನೀ ಸುಮ್ನಿರು  ನಾನು ಮೂರು ಮಕ್ಕಳನ್ನ ಹೆತ್ತು ಸಾಕಿದ್ದಿನಿ ನೀ ಜೋಲಿ ಕಟ್ಟಿ ಹೊರಗೆ ನಡಿ ಎಂದಾಗ ಮಗುನ ಮುಖದ ಕಡೆ ಒಮ್ಮೆ ನೋಡಿ ಥೇಟ್ ಶಾರದನ್ನ ನೋಡಿದ ಹಾಗೆ ಆಗ್ತದೆ ಅಲ್ವಾ ಗೌರಕ್ಕ…?, ಶಾರದನೂ ಹೀಗೆ ಹಾಲುಬಿಳಿ ಬಣ್ಣ.. ಬಸಿರಿಯಲ್ಲಂತೂ ಅವಳು ಮತ್ತಷ್ಟೂ ಚೆಂದ ಕಾಣುತ್ತಿದ್ದಳು ಎಂದು ಶಂಕರಣ್ಣ ಏನೇನೋ ಬಡಬಡಿಸುತ್ತಲೇ ಇದ್ದ. ಒಳಗಡೆ ಇಷ್ಟೆಲ್ಲಾ ಆಗುತ್ತಿದ್ದರೂ, ಬುಡ್ಡಮ್ಮಜ್ಜಿ ಮಾತ್ರ ಕುಳಿತಲ್ಲಿಂದಲೇ ಮೇಲೆಳಲೇ ಇಲ್ಲ. ಚಾ ಚೆಲ್ಲಿದ ಕಡೆ ನೆಲವೆಲ್ಲಾ ಅಂಟು ಅಂಟಾಗಿ ನೊಣ, ಇರುವೆಯಲ್ಲಾ ಮುತ್ತಿಕೊಂಡಿದ್ದವು. ಶಂಕರಣ್ಣನಿಗೆ ಮನೆ ಯಾಕೋ ಬಿಕೋ ಬಿಕೋ ಅನಿಸಿ ಚಪ್ಪರದಡಿ ಹೋಗಿ ಕುಳಿತುಬಿಟ್ಟ. ಚಾ ಕುಡಿದೇ ಈ ಹಾಳಾದ್ದು ತಲೆನೋವು ಹೋಗಲ್ಲಾ ಅನಿಸಿಬಿಟ್ಟಿತ್ತು. ಅಷ್ಟಕ್ಕೂ ಶಂಕರಣ್ಣ ಚಾ ಕುಡಿದೇ 15 ದಿನ ಆಗಿತ್ತು. ಶಾರದಾ ಸತ್ತು ಹೋಗಿ ಕೂಡ!

******

 ಅವತ್ತು ಬೆಳಿಗ್ಗೆ ಶಾರದ ಒಂದು ಚೊಂಬು ಚಾ ಮಾಡಿ ಇಡ್ತಿನಿ ನನಗೆ ಗೌಡರ ತೋಟದಲ್ಲಿನ ಕೆಂಡಸಂಪಿಗೆ ಹೂ ತಂದು ಕೊಡಿ. ಯಾಕೋ ಅದನ್ನು ಮುಡಿಬೇಕು ಅನಿಸ್ತಿದೆ ಎಂದಾಗ ಬುಡ್ಡಮ್ಮಜ್ಜಿ ‘ಯಾಕೆ ಗೌಡರ ತೋಟದ ಹೂವೆ ನಿನಗೆ ಬೇಕು ಮತ್ತೆಲ್ಲಿಯದ್ದಾದರೂ ನಿನ್ನ ತಲೆ ಬೇಡ ಅನ್ನತ್ತಾ ಎಂದಾಗ’,  ಕೆಂಡಸಂಪಿಗೆ ಮರ ಇರೋದು ಗೌಡರ ತೋಟದಲ್ಲಿನೇ ಮತ್ತೆ ಎಲ್ಲಿಯಾದರೂ ನಿಮ್ಮ ಅಪ್ಪ ಹಾಕಿದ್ದರೆ ಹೇಳಿ ನಾ ಅಲ್ಲಿಯೇ ಹೋಗಿ ತರ್ತಿನಿ ಎಂದು ತುಸು ಜೋರಾಗಿ ಕೂಗಿದ್ದಳು ಶಾರದ. ನಮ್ಮ ಅಪ್ಪ ಯಾಕೆ ಹಾಕಬೇಕು, ನಿನಗೆ ಊರಲ್ಲಿರೋರೆಲ್ಲಾ ಅಪ್ಪ ಅವರು ಯಾರಾದರೂ ಹಾಕಿದ್ದರೆ ನೋಡು ಎಂದು ಬುಡ್ಡಮ್ಮಜ್ಜಿ ಕೊಂಕಾಡಿದಾಗ ಶಾರದ ಏನೂ ಮಾತನಾಡದೇ ಶಂಕರಣ್ಣನ ಕಡೆ ನೋಡಿ ಕಣ್ಣೀರಿಟ್ಟಳು. ಹೀಗೆ ನನ್ನ ಮಗನ್ನ ಮರಳು ಮಾಡಿನೆ ಬುಟ್ಟಿಗೆ ಹಾಕುಂಡು ಬಿಟ್ಟೆ. ಅಪ್ಪಾ ಯಾರಂತ ಗೊತ್ತಿಲ್ಲದಿದ್ದರೂ ಇನ್ನೊಬ್ಬರ ಅಪ್ಪಂದಿರ ಬಗ್ಗೆ ಮಾತಾಡ್ತಾಳೆ ಹಾದರಗಿತ್ತಿ ವಂಶದವಳೇ ಎಂದಾಗ ಶಂಕರಣ್ಣನಿಗೆ ಕೋಪ ಒತ್ತರಿಸಕೊಂಡು ಬಂತು. ನಿನ್ನ ವಯಸ್ಸಿಗೆ ತಕ್ಕ ಮಾತನಾಡು ಅಮ್ಮಾ ತುಂಬಿದ ಬಸಿರಿಗೆ ಹೀಗೆಲ್ಲಾ ಮಾತನಾಡ ಎಂದು ಶಾಲು ಹೆಗಲಿಗೇರಿಸಿಕೊಂಡು ಗೌಡರ ಮನೆ ಕಡೆ ನಡೆದು ಬಿಟ್ಟ. ಅವನು ಮರಳಿ ಮನೆಗೆ ಬಂದಾಗ ಶಾರದ ಮಗುನ ಹೆತ್ತು ಇಹಲೋಕ ತ್ಯೆಜಿಸಿದ್ದಳು. ಉಳಿದಿದ್ದೆಲ್ಲಾ ನೆನಪು ಮಾತ್ರ! ಮಡಿಲಲ್ಲಿದ್ದ ಕೆಂಡ ಸಂಪಿಗೆ ಅವರಿಬ್ಬರ ಕಥೆ ಹೇಳುತ್ತಿತ್ತು.

ಶಂಕರಣ್ಣಂದೂ, ಶಾರದನದ್ದು ಒಂದು ರೀತಿಯ ಪ್ರೇಮ ವಿವಾಹ ಎನ್ನಬಹುದು. ಬಿಟ್ಟು ಎಬ್ಬಿದ ಹಸು ವಾರವಾದರೂ ಪತ್ತೆಇಲ್ಲದೇ ಇದ್ದಾಗ ಬುಡ್ಡಮ್ಮಜ್ಜಿ ಮಗನನ್ನು ಕರೆದು ಹುಡುಕಿಕೊಂಡು ಬಾ ಎಂದು ಕಳುಹಿಸಿದ್ದಳು. ಹೊತ್ತು ಮುಳುಗುವುದರೊಳಗೆ ಮನೆಗೆ ಬಾ, ಯಾರದ್ದಾದರೂ ಮನೆಯಲ್ಲಿ ಚಾ ಕುಡಿಯುತ್ತಾ ಕೂರಬೇಡ ಎಂದು ಮಗನನ್ನು ಮೊದಲೇ ಎಚ್ಚರಿಸಿ ಕಳುಹಿಸಿದ್ದಳು. ಊರೂರು ತಿರುಗಿ, ಬಾಯಿತುಂಬ ಮಾತನಾಡುವ ಖಯಾಲಿ ಇರುವ ಶಂಕರಣ್ಣ ಹಸು ಹೊಡೆದುಕೊಂಡು ಬರುವ ನೆಪದಲ್ಲಿ ಗೊತ್ತಿದ್ದವರು, ಗೊತ್ತಿಲ್ಲದವರ ಮನೆಯಲ್ಲಿ ಚಟವಾಗಿ ಅಂಟಿಸಿಕೊಂಡಿದ್ದ ಚಾವನ್ನು ಯಾವುದೇ ಮುಲಾಜಿಲ್ಲದೇ ಕುಡಿಯುತ್ತಿದ್ದ. ಸದಾ ಹಾಸ್ಯದ ಚಟಾಕಿ ಹಾರಿಸುವ ಶಂಕರಣ್ಣ ಎಂದರೆ ಊರವರಿಗೂ ವಿಶೇಷ ಪ್ರೀತಿ. ಅವನ ಮಾತು ಶುರುವಾಗಬೇಕೆಂದರೆ ಅಲ್ಲಿ ಒಂದು ದೊಡ್ಡ ಲೋಟದಲ್ಲಿ ಚಾ ಇರಬೇಕಿತ್ತು. ಎಲೆಅಡಿಕೆ ಹಾಕಿದ ಬಾಯನ್ನು ಕ್ಯಾಕರಿಸಿ ಒಂದು ಬಾರಿ ಉಗಿದು ಚಾ ಲೋಟ ಕೈಗೆತ್ತಿಕೊಂಡು ಪುರಾಣ ಶುರುವಿಟ್ಟುಕೊಳ್ಳುತ್ತಿದ್ದ. ಹೀಗೆ ಹಸುವನ್ನು ಹುಡುಕುತ್ತ ಪಕ್ಕದಹಳ್ಳಿಗೆ ಹೋಗುತ್ತಿದ್ದಾಗ ಚಾ ಕುಡಿದ ಕಾರಣ ಪಿತ್ತ ನೆತ್ತಿಗೇರಿ ದಾರಿ ಮಧ್ಯೆ ತಲೆಸುತ್ತು ಬಂದು ಬಿದ್ದುಬಿಟ್ಟ. ಅರ್ಧಗಂಟೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವನು ಎದ್ದು ಕಣ್ಣುಬಿಟ್ಟಾಗ ಕಂಡಿದ್ದು ಎರಡು ಜೋಡಿ ಗಿಳಿಗಳ ಪಂಜರ, ಬಣ್ಣದ ಬಣ್ಣದ ಹೂವಿನ ಗಿಡಗಳು, ಮನೆತುಂಬಾ ಒಂದು ರೀತಿಯ ಸುಗಂಧ. ತನಗೆಲ್ಲೋ  ದಾರಿ ತಪ್ಪಿತ್ತು ಎದ್ದು ದಡಬಡಿಸಿ ಎದ್ದು ನಿಂತಾಗ ಒಳಗಿಂದ ಶಾರದ ಹಾಲುತುಂಬಿದ ಚೊಂಬು ಹಿಡಿದುಕೊಂಡು ಬರುತ್ತಿದ್ದಳು. ಅರೆಕ್ಷಣ ಅವಳನ್ನೇ ಮಿಕಮಿಕ ನೋಡಿ ಮತ್ತೆ ತಲೆತಗ್ಗಿಸಿದ. ತಗೊಳ್ಳಿ, ಹಾಲು ಕುಡಿರಿ ನಿಮಗೆ ತಲೆಸುತ್ತು ಬಂದು ಬಿದ್ದುಬಿಟ್ಟಿದ್ದಿರಿ ನಾನು ಬಟ್ಟೆ ತೊಳೆಯುವುದಕ್ಕೆ ಕರೆ ಕಡೆ  ಹೋದಾಗ ಸಿಕ್ಕಿದಿರಿ. ಅಂದ ಹಾಗೇ ನೀವು ನಮ್ಮ ಹಳ್ಳಿ ಅವರು ಅಲ್ಲ ಅನಿಸುತ್ತೆ ಎಂದು ಅರಳುಹುರಿದಂತೆ ಪಟಪಟ ಮಾತನಾಡಿ ಹಾಲುಕೊಟ್ಟಳು. ಈ ಹಾಲೆಲ್ಲ ನನಗೆ ಆಗಿಬರುವುದಿಲ್ಲ. ಇದರ ಬದಲು ಖಡಕ್ ಆಗಿ ಒಂದು ಚಾ ಮಾಡಿಕೊಡಿ ನನ್ನ ಪುರಾಣವನ್ನೆಲ್ಲಾ ಹೇಳುತ್ತೇನೆ ಎಂದಾಗ ಶಾರದ ನಗುತ್ತಾ ಒಳಗೆ ಹೋದಳು. ಒಂದೈದು ನಿಮಿಷದಲ್ಲಿ ಚಾ ಮಾಡಿತಂದು ಕೊಟ್ಟವಳೇ ಅವನ ಎದುರು ಕುಳಿತುಕೊಂಡು ಬಿಟ್ಟಳು. ಹೆಣ್ಣೊಬ್ಬಳು ಹೀಗೆ ಅವನ ಹತ್ತಿರ ಕುಳಿತಿದ್ದು ಇದೇ ಮೊದಲು. ಯಾಕೋ ಒಂಥರಾ ಮುಜುಗರವಾದರೂ ಕೈಯಲ್ಲಿದ್ದ ಚಾ ಲೋಟ ಇರಿಸುಮುರುಸನ್ನೆಲ್ಲಾ ಮರೆಸಿತ್ತು. ಹಸು ಹುಡುಕುತ್ತಾ ಬಂದ ಕಥೆ ಹೇಳಿ ಚಾ ಲೋಟವನ್ನು ಅವಳ ಕೈಗಿಟ್ಟ. ಹಸುವಿಲ್ಲದೇ ಮನೆಯಲ್ಲಿ ಚಾ ಕುಡಿಯೋದಕ್ಕೆ ಹಾಲಿಲ್ಲ. ಒಂದು ವಾರ ಬರೀ ಚಾ ಕಣ್ಣೆ ಕುಡಿದಿದ್ದು ಎಂದು ಜೋರಾಗಿಯೇ ನಕ್ಕ. ಶಾರದಕ್ಕನೂ ಅವನೊಂದಿಗೆ ನಕ್ಕಳು. ಇವನ ಮಾತು ಕೇಳಿ ನಮ್ಮನೆಯಲ್ಲೂ ಹಸುವಿಲ್ಲ. ಪಕ್ಕದ್ಮನೆಯವರಲ್ಲಿ ಹಾಲು ತೆಗೆದುಕೊಳ್ಳುವುದು. ಮೊನ್ನೆಯಷ್ಟೇ  ಒಂದು ಹಸು ಬಂದು ಸೇರಿಕೊಂಡಿದೆ ನಮ್ಮ ಮನೆಗೆ ಎಂದಾಗ ಶಂಕರಣ್ಣ ಕುಳಿತಲ್ಲಿಯೇ ಕತ್ತು ಉದ್ದ ಮಾಡಿ ಹೌದಾ…ಯಾವ ಬಣ್ಣದ್ದು ಎಂದು ಖುಷಿಯಿಂದ ಜೋರಾಗಿಯೇ ಕೇಳಿದ. ತಮ್ಮ ಮನೆಯದ್ದೇ ಇರಬಹುದಾ ಎಂದು ನೋಡುವ ಮನಸ್ಸಾದರೂ ಆಕೆ ಬಳಿ ಕೇಳುವುದಕ್ಕೆ ಮುಜುಗರವಾಗಿ ಸುಮ್ಮನಾಗಿಬಿಟ್ಟ. ಶಾರದ ಮಾತು ಶುರು ಮಾಡಬೇಕು ಅನ್ನುವಾಗಲೇ ಗೇಟ್ ತೆರೆದ ಸದ್ದಾಯಿತು. ಅಷ್ಟೊತ್ತು ಒಳಗಿದ್ದ ಶಾರದನ ಅವ್ವ ನಿಂಗಮ್ಮ ಒಳಗಡೆಯಿಂದನೇ ಹೊರಗೆ ಓಡೋಡಿ ಬಂದಳು. ಧನಿಗಳು ಬಂದವ್ರೆ… ಕಾಲು ತೊಳೆದುಕೊಳ್ಳುವುದಕ್ಕೆ ನೀರು ತೆಗೆದುಕೊಂಡು ಬಾ ಎಂದು ಮಗಳಿಗೆ ಹೇಳಿ ಸೀರೆಯ ಸೆರಗನ್ನು ತುಸು ಸರಿಸಿ ಗೇಟಿನ ಪಕ್ಕ ಹೋದಳು. ನಿಂಗಮ್ಮನೂ ಸುಂದರವಾಗಿಯೇ ಇದ್ದಳು. ಶಾರದನೂ ನಿಂಗಮ್ಮನ ತದ್ರೂಪದಂತಿದ್ದಳು. ನಿಂಗಮ್ಮನ ಗಂಡ ಬಂದಿರಬಹುದೇನೋ ಎಂದು ಪಡಸಾಲೆಯಲ್ಲಿ ಕುಳಿತು ಆಲೋಚಿಸುತ್ತಿದ್ದವನಿಗೆ ನಿಂಗಮ್ಮ ಯಾಕೆ ಆ ತರ ಸೆರಗು ಮಾಡಿಕೊಂಡಳು, ಶಾರದ ಯಾಕೆ ಮುಖ ಸಿಂಡರಿಸಿಕೊಂಡು ನೀರು ತರೋದಕ್ಕೆ ಹೋದಳು ಎಂದು ಶಂಕರಣ್ಣನಿಗೆ ಅರ್ಥವಾಗಲಿಲ್ಲ. ಇವನ್ನೊಬ್ಬ ಯಾಕಾದರೂ ಬರ್ತಾನೋ, ಊರ ಗೌಡನಂತೆ, ಕಟ್ಟಿಕೊಂಡವಳು ಇದ್ದರೂ ಇನ್ನೊಬ್ಬರ ಮನೆ ಹೆಣ್ಣುಮಕ್ಕಳು ಬೇಕು ಇವನ ತೆವಲು ತೀರಿಸಿಕೊಳ್ಳೊದಕ್ಕೆ ಎಂದು ತನ್ನ ಮೊನಚಾದ ಮಾತುಗಳನ್ನು ಎಸೆಯುತ್ತಾ ಬಿಂದಿಗೆ ಮತ್ತು ಚೊಂಬು ತಂದಳು. ಶಂಕರಣ್ಣನಿಗೆ ಇದು ಸ್ವಲ್ಪ ಗೊಂದಲವಾಗಿ ಕಂಡರೂ ಹತ್ತಿರ ಬರುತ್ತಿದ್ದ ಅಸಾಮಿ ತನ್ನೂರಿನ ಗೌಡ ಎಂದು ಗೊತ್ತಾದಾಗ ನಿಧಾನಕ್ಕೆ ಎಲ್ಲ ಅರ್ಥವಾಗಿತ್ತು. ಗೌಡರೂ ಶಂಕರನನ್ನ ನೋಡಿ ಮುಖ ಹುಳ್ಳಗೆ ಮಾಡಿಕೊಂಡು ನೀ ಯಾಕೋ ಇಲ್ಲಿಗೇ ಬಂದಿದ್ದಿಯಾ ಎಂದು ದನಿ ಏರಿಸಿ ಕೇಳಿದಾಗ, ಶಾರದ ಶಂಕರಣ್ಣನ ಮುಖ ನೋಡಿದಳು. ಶಂಕರಣ್ಣ ಹೆಗಲ ಮೇಲಿದ್ದ ಶಾಲು ಕೆಳಗೆ ಇಳಿಸಿಕೊಂಡು ಕುಳಿತಲ್ಲಿಯೇ ಬಗ್ಗಿ ಹಸುನ ಹುಡುಕೊಂಡು ಬಂದಿದ್ದಿನಿ ಒಡೆಯ ಎಂದಾಗ ಗೌಡ ಒಂದು ಬಾರಿ ಶಾರದನತ್ತ ತಿರುಗಿ, ನೋಡು ತನ್ನ ದರ್ಪ ಎಂದು ಬೀಗುತ್ತಿದ್ದ. ಇದ್ಯಾವುದಕ್ಕೂ ಸೊಪ್ಪು ಹಾಕದ ಶಾರದ ನೀರು ಕೊಟ್ಟು ಒಳಗೆ ಹೋಗಿಬಿಟ್ಟಳು. ನಿಂಗಮ್ಮ ಮಾತ್ರ ಹುಡುಗುಬುದ್ಧಿ ಅವಳದ್ದು ಏನೂ ತಿಳಿಯೊದಿಲ್ಲ ನನ್ನ ದೇವರೆ…, ಇನ್ನೊಂದು ಸ್ವಲ್ಪ ದಿನ ಆಮೇಲೆ ಎಲ್ಲಾ ಸರಿಹೋಗುತ್ತದೆ ನೀವು ಬನ್ನಿ ಕಾಲು ಒರೆಸಿಕೊಳ್ಳಿ ನನ್ನೊಡೆಯ ಎಂದಾಗ. ನಿನಗೂ ವಯಸ್ಸಾಗಿದೆ ನಿಂಗಿ, ಮೈಯಲ್ಲಿ ಮೊದಲಿನಷ್ಟು ಕಸುವಿಲ್ಲ. ಶಾರದನ ಕಳುಹಿಸು ಇವತ್ತು ಎಂದಾಗ ನಿಂಗಮ್ಮನ ಹೃದಯ ಬಾಯಿಗೆ ಬಂದ ಹಾಗೆ ಆಯ್ತು. ಇವತ್ತು ಅವಳಿಗೆ ಆಗೋದಿಲ್ಲ. ಮೂರುದಿನ ಮುಟ್ಟಿಸಿಕೊಳ್ಳುವ ಹಾಗೆ ಇಲ್ಲ. ನಾಡಿದ್ದು ಬನ್ನಿ ನೋಡುವ ಎಂದು ಗೌಡನ ಸಮಾಧಾನ ಮಾಡಿದ್ದಳು.

‘ನೀನೇನಾದರೂ ಆ ಗೌಡನ ಹಾಸಿಗೆಗೆ ನನ್ನ ಕಳುಹಿಸಿದರೆ ನನ್ನ ಹೆಣ ನೋಡಬೇಕಾಗುತ್ತದೆ ನೋಡು’ ಎಂದು ವಾರದ ಹಿಂದೆ ಶಾರದ ಹೇಳಿದ ಮಾತು ನಿಂಗಮ್ಮನ ತಲೆಯಲ್ಲಿ ಗುಂಯ್‌ಗುಡುತ್ತಿತ್ತು. ತಮ್ಮ ಕಸುಬೇ ಅಂಥದ್ದು, ನೀನು ಇದನ್ನು ಮಾಡದೇ ಇದ್ದರೂ ಈ ಜನ ನಿನ್ನ ನೋಡದೇ ಹೀಗೆ ನನ್ನ ಪ್ರಾರಬ್ಧ ಏನು ಮಾಡೋದಕ್ಕೆ ಆಗ್ತದೆ, ಹೊಟ್ಟೆಗೆ ಹಿಟ್ಟು ಬೇಕಂದರೆ ಮೈಯನ್ನು ಈ ರೀತಿ ದಂಡಿಸಬೇಕು ಇಲ್ಲೂ ಬೆವರು ಇಳಿಯತ್ತೆ ಆದರೆ ಅದು ನೈತಿಕ ಬೆವರಲ್ಲ, ಅನೈತಿಕ ಎಂಬ ಪಟ್ಟಕಟ್ಟಿದೆ ಸಮಾಜ ಎಂದು ಎಷ್ಟು ಸಮಜಾಯಿಸಿ ಹೇಳಿದರೂ ಶಾರದ ನಿಂಗಮ್ಮನ ಮಾತು ಕೇಳಿಸಿಕೊಳ್ಳುವುದಕ್ಕೆ ತಯಾರಿರಲಿಲ್ಲ. ನನಗೆ ಒಂದು ಮದುವೆ ಮಾಡಿಸು ಅವ್ವಾ ಕುಂಟನಾದರೂ ಅಡ್ಡಿಯಿಲ್ಲ. ನಾ ಒಂದು ಮಗೀನ ಹಡಿಬೇಕು ಅದಕ್ಕೆ ಇವನೇ ನಿನ್ನ ಅಪ್ಪ ಎಂದು ಹೇಳಬೇಕು ಅವನ ಬೆನ್ನ ಮೇಲೆ ಆ ಮಗೀನ ಕೂಸುಮರಿ ಮಾಡಬೇಕು ಎಂದು ಶಾರದ ತನ್ನ ಕನಸನ್ನು ಅವ್ವನ ಬಳಿ ಯಾವೋದು ಒಂದು ಆವೇಗದಲ್ಲಿ ಬಿಚ್ಚಿಟ್ಟಿದ್ದಳು. ತಾಯಿಗೂ ಮಗಳ ಮದುವೆ ಮಾಡಿಸೋ ಕನಸಿದೆ ಅದಕ್ಕಾಗಿ ಅಷ್ಟೊಇಷ್ಟು ಕಾಸು ಕೂಡಿಟ್ಟಿದ್ದಳು. ಆದರೆ ಇಂತಹದೊಂದು ಹಿನ್ನೆಲೆ ಇರುವ ಮನೆಯ ಹೆಣ್ಣನ್ನು ಯಾರು ತಾನೆ ಮದುವೆಯಾಗುತ್ತಾರೆ, ಕಪ್ಪಾಗುತ್ತಿದ್ದಂತೆ ಎಲ್ಲರ ಕಣ್ಣು ತಪ್ಪಿಸಿ ಬರೀ ಚಟ ತೀರಿಸಿಕೊಳ್ಳುವುದಕ್ಕೆ ಇಲ್ಲಿ ಬರುತ್ತಾರೆ ಮತ್ತೆ ನಸುಕಿನಲ್ಲಿ ಎದ್ದು ಹೋಗುತ್ತಾರೆ ಅಷ್ಟೇ. ಮನಸ್ಸಿಲ್ಲದಿದ್ದರೂ, ಮೈ ಸರಿಯಿಲ್ಲದಿದ್ದರೂ ಕೇಳುವವರು ಯಾರೂ ಇಲ್ಲ. ಹೀಗೆ ಯೋಚನೆ ಮಾಡುತ್ತ ಗೌಡನೊಂದಿಗೆ ಒಳಕೋಣೆ ಸೇರಿದ್ದಳು ನಿಂಗಮ್ಮ.

ನಿಂಗಮ್ಮನ ತಲೆಯಲ್ಲಿ ಹೊಸದೊಂದು ಯೋಚೆನೆ ಮಿಂಚಿತ್ತು ಹಾಗಾಗಿ ಹೋಗುವ ಮೊದಲು ಶಂಕರಣ್ಣನಿಗೆ ಇಂದು ರಾತ್ರಿ ಇಲ್ಲಿಯೇ ಇರು ಎಂದು ನಿಧಾನಕ್ಕೆ ಉಸುರಿದ್ದಳು. ಶಂಕರಣ್ಣನಿಗೆ ತಾನು ಇನ್ನು ಹೆಚ್ಚೊತ್ತು ಇಲ್ಲಿ ಇರುವುದು ಸರಿಯಲ್ಲ ಅನಿಸಿತ್ತು. ಆದರೆ ಶಾರದಂಗೆ ಹೇಳದೇ ಹೋಗಲು ಅವನಿಗೆ ಮನಸ್ಸಿರಲಿಲ್ಲ. ಅದೂ ಅಲ್ಲದೇ ನಿಂಗಮ್ಮ ಬೇರೆ ಇಲ್ಲೇ ಇರು ಎಂದಿದ್ದಳು, ಕತ್ತಲು ಆವರಿಸಿಕೊಳ್ತಾ ಇದೆ ತನ್ನ ಹಳ್ಳಿಗೆ ಹೋಗೋದಕ್ಕಂತೂ ಆಗುವುದಿಲ್ಲ. ಅವ್ವಾ ಬೇರೆ ಗಾಬರಿಯಾಗುತ್ತಾಳೆ ಎಂದು ಅಲ್ಲಿಯೇ ಜಗುಲಿ ಮೇಲೆ ಒರಗಿಬಿಟ್ಟ. ಅವ್ವನ ಕೋಣೆಯ ಚಿಲಕ ಬಿದ್ದ ಸದ್ದಾದ ಮೇಲೆ ಶಾರದ ಅಡುಗೆ ಕೋಣೆಯಿಂದ ಹೊರಗೆ ಬಂದಳು. ಬರುವಾಗ ಒಂದು ಲೋಟ ಚಾವನ್ನು ಹಿಡಿದುಕೊಂಡು ಬಂದಿದ್ದಳು. ಶಂಕರಣ್ಣನಿಗೂ ಚಾದ ಅವಶ್ಯಕತೆ ತುಂಬ ಇದ್ದಿತ್ತು. ಏನೊಂದು ಮಾತನಾಡದೇ ಅವನು ಶಾರದ ಕೊಟ್ಟ ಚಾ ಹೀರುತ್ತಿದ್ದ. ಶಾರದನಿಗೂ ಆಗ ಮಾತುಬೇಡವಾಗಿತ್ತು. ಆ ರಾತ್ರಿ ಶಾರದ ಮಾಡಿಕೊಟ್ಟ ಗಂಜಿ ಕುಡಿದು ಶಂಕರಣ್ಣ ಅಲ್ಲಿಯೇ ಒರಗಿಬಿಟ್ಟ. ನಿದ್ದೆ ಎಷ್ಟೊತ್ತಿಗೆ ಅವನನ್ನು ಆವರಿಸಿತ್ತೋ ಒಂದು ತಿಳಿಯದು. ಆದರೆ ಕನಸಿನಲ್ಲಿ ಶಾರದನ ನಗುಮುಖವೇ ತುಂಬಿತ್ತು. ಅಂಬೋ…ಎಂಬ ಶಬ್ಧ ಕೇಳಿ ದಡಬಡಿಸಿ ಎದ್ದವನೇ ಇದು ನಮ್ಮನೇ ಲಕ್ಷ್ಮಿ  ಹಸು ಕೂಗಿದ ಹಾಗೇ ಇದೆ ಅಲ್ವಾ ಎಂದು ಹಟ್ಟಿ ಕಡೆ ಹೋದಾಗ ಅರೆ… ಇದು ನಮ್ಮನೇ ಹಸು ಎಂದು ಜೋರಾಗಿ ಕಿರುಚಿದ. ಇವನ ಕೂಗಿಗೆ ಶಾರದ, ನಿಂಗಮ್ಮ ಓಡೋಡಿ ಬಂದರು. ಶಾರದೂ ಇದು ನಮ್ಮನೇ ಹಸು. ನಾ ಇದನ್ನೇ ಹುಡುಕಿಕೊಂಡು ಬಂದಿದ್ದು ಎಂದು ಖುಷಿಯಿಂದ ಅದರ ಮೈ ದಡವಿದ. ಹಸು ಕೂಡ ಯಜಮಾನ ಸಿಕ್ಕ ಖುಷಿಗೆ ಅವನ ಮುಖವೆಲ್ಲಾ ನಕ್ಕಲು ಶುರುಮಾಡಿತು. ಶಾರದ ಮತ್ತು ನಿಂಗಮ್ಮ ಅವನ ಮುಖವನ್ನೇ ಮಿಕಿಮಿಕಿ ನೋಡುತ್ತಿದ್ದರು. ಅವರು ಯಾಕೆ ಹಾಗೆ ನೋಡುತಿದ್ದಾರೆ ಎಂದು ಶಂಕರಣ್ಣನಿಗೆ ಮೊದಲು ಅರ್ಥವಾಗಲಿಲ್ಲ. ಕೊನೆಗೆ ತಾನಾಡಿದ ಮಾತನ್ನು ನಿಧಾನಕ್ಕೆ ಮೆಲುಕು ಹಾಕತೊಡಗಿದ ಹಸು ಸಿಕ್ಕ ಖುಷಿಯಲ್ಲಿ ತನ್ನೊಡಲೊಳಗೆ ಅಡಗಿದ್ದ ಪ್ರೀತಿಯನ್ನು ಶಾರದೂ ಎಂದು ಕರೆಯುವ ಮೂಲಕ ವ್ಯಕ್ತಪಡಿಸಿದ್ದ.

ಆಮೇಲೆ ನಡೆದಿದ್ದೆಲ್ಲಾ ಸಿನಿಮಾ ಶೈಲಿಯ ಹಾಗಿನ ಮದುವೆ! ಊರ ದೇವಸ್ಥಾನದ ಬಳಿಗೆ ಕರೆದುಕೊಂಡು ಹೋಗಿ  ಶಾರದನ ಕತ್ತಿಗೆ ಒಂದು ಅರಿಶಿನ ಕೊಂಬಿನ ದಾರ ಕಟ್ಟಿ ನಿಂಗಮ್ಮನ ಕಾಲಿಗೆ ಎರಗಿದಾಗ ಶಂಕರಣ್ಣನಿಗೆ ಬುಡ್ಡಮ್ಮಜ್ಜಿಯ ನೆನಪಾಗದೇ ಇರಲಿಲ್ಲ. ಒಂದು ಪೆಟ್ಟಿಗೆ ಅದರೊಳಗೆ ನಾಲ್ಕೈದು ಸೀರೆ ಹಿಡಿದುಕೊಂಡು ಹೊರಟ ಶಾರದನ ನೋಡುತ್ತಾ ನಿಂಗಮ್ಮ ಒಳಗೆ ಅಳುತ್ತಿದ್ದರೂ ಅದನ್ನು ಹೊರಗೆ ತೋರಿಸಿಕೊಳ್ಳದೇ ಮಗಳ ಬಾಳು ಹಸನಾಯಿತು. ಇಲ್ಲಿದ್ದರೆ ನಾಯಿ ಮುಟ್ಟಿದ ಮಡಕೆ ಹಾಗೆ ಬಾಳು ಮೂರಾಬಟ್ಟೆಯಾಗುತ್ತಿತ್ತು ಎಂದು ಮಗಳಿಗೆ ವಿದಾಯ ಹೇಳಿಬಿಟ್ಟಳು. ಇದೇನಾಯ್ತು ತನ್ನ ಬಾಳಲ್ಲಿ ಹಸುನ ಹುಡುಕಿಕೊಂಡು ಬಂದವನು ನಾನು. ಏನೇಲ್ಲಾ ಆಗಿಹೋಯ್ತು…? ಎಂದು ಶಂಕರಣ್ಣ ಆಲೋಚಿಸುತ್ತಿದ್ದರೆ, ಶಾರದ ಮಾತ್ರ ತನ್ನ ಅವ್ವ ಒಬ್ಬಳೇ ಇನ್ನು ಹೇಗಿರ್ತಾಳೆ, ಶಂಕರಣ್ಣನ ಮನೆಯಲ್ಲಿ ತನ್ನ ಹಿನ್ನೆಲೆ ಗೊತ್ತಾದರೆ ಏನಾಗಬಹುದು ಎಂಬ ಭಯದಲ್ಲಿಯೇ ಹೆಜ್ಜೆ ಹಾಕತೊಡಗಿದಳು.

ಊರ ಹೆಬ್ಬಾಗಿಲು ದಾಟುತ್ತಿದ್ದಂತೆ ಎಲ್ಲರ ಕಣ್ಣು ಶಂಕರಣ್ಣನ ಮೇಲೆ ಬಿತ್ತು. ಹಾಲು ಮಾರುವ ಮಾದ ಲೋ ಶಂಕರಣ್ಣ ನಿನ್ನ ಅವ್ವ ನಿನ್ನೆಯಿಂದ ಊರಲ್ಲಿ ಯಾರಿಗೂ ಮಲಗೋಕೆ ಬಿಟ್ಟಿಲ್ಲ ತನ್ನ ಮಗ ಎಲ್ಲೊಗಿದ್ದಾನೆ ನೋಡಿಕೊಂಡು ಬನ್ನಿ ಎಂದು. ನೀನು ನೋಡಿದರೆ ಹಸುನಾ ಹೊಡ್ಕೊಂಡು…ಜತೆಗೆ ಯಾವಾಕಿನೋ ಕಟ್ಕೊಂಡು ಬಂದ ಹಾಗೆ ಇದೆ ಎಂದಾಗ ಏನೊಂದು ಉತ್ತರಿಸದೇ ಶಂಕರಣ್ಣ ಸೀದಾ ನಡೆದ. ಅವರು ಹೀಗೆ ಸಾಗುತ್ತಿರುವಾಗ ಕೆಲವರಿಗೆ ಶಾರದನ ಅವ್ವ ನಿಂಗಮ್ಮನ ಮನೆ ಪರಿಚಯವಿದ್ದ ಕಾರಣ ಶಾರದನ ಗುರುತೂ ಸಿಕ್ಕಿ ಅಲ್ಲೆ ವ್ಯಂಗ್ಯದ ಬಾಣ ಎಸೆಯಲು ಶುರುಮಾಡಿದರು. ಹೋ ಗೊತ್ತಾಯಿತು ಬಿಡಿ ನಿನ್ನೆ ರಾತ್ರಿ ನೀ ಎಲ್ಲಿದ್ದೆ ಎಂದು, ಎಷ್ಟಾದರೂ ಗಂಡಸಲ್ವಾ ಹೇಗೆ ತಡೆದುಕೊಳ್ಳೊದಕ್ಕೆ ಆಗುತ್ತೇ?, ಆದರೆ ಹೀಗೆ ಹೋಗಿ ಹಾಗೆ ಬರಬೇಕಿತ್ತು ಕಟ್ಟಿಕೊಳ್ಳುವ ಉಸಾಬರಿ ಯಾಕೆ ಬೇಕಿತ್ತು ? ಹೀಗೆ ಮಾತುಗಳು ಅವನ ಹಿಂದೆ ಗಿಜಿಗುಡುತ್ತಿದ್ದವು. ಶಂಕರಣ್ಣ ಮನೆಮುಟ್ಟುವ ಮೊದಲೇ ಹಾಲುಮಾರುವ ಮಾದ ಬುಡ್ಡಮ್ಮಜ್ಜಿಗೆ ವಿಷಯ ತಲುಪಿಸಿದ್ದ. ಇವನು ಮನೆಯ ಅಂಗಳಕ್ಕೆ ಬರುತ್ತಿದ್ದಂತೆ ಬುಡ್ಡಮ್ಮಜ್ಜಿ ಪೊರಕೆ ಹಿಡಿದು ಊರಮಾರಿನ ಹೊರಗೆ ಬಿಟ್ಟು ಆಮೇಲೆ ನೀನು ಒಳಗೆ ಬಾ ಎಂದಾಗ ಶಂಕರಣ್ಣ ಅವ್ವಾ… ಎಂದು ಮೆದುವಾಗಿ ಕರೆದ. ನೀನು ಹಸುನ ಹುಡ್ಕೊಂಡು ಹೋದವನು ಸೂಳೆನಾ ಕಟ್ಟಿಕೊಂಡು ಬರುತ್ತಿಯಾ ಎಂದು ನನಗೆ ಗೊತ್ತಿರಲಿಲ್ಲ. ನಮ್ಮದು ಮಾನ ಮರ್ಯಾದೆ ಇರುವ ಮನೆ, ಗಂಡಸರು ಬಂದು ಹೋಗುವ ಮನೆ ಅಲ್ಲ ಎಂಧು ಜೋರಾಗಿ ಕಿರುಚಲು ಶುರುಮಾಡಿದಳು. ಅವ್ವಾ….ಶಾರದನಿಗೆ ಸೂಳೆ ಎಂದರೆ ನಾ ನಿನ್ನ ಪಾಲಿಗೆ ಸತ್ತೆ ಎಂದು ತಿಳ್ಕೊ ಎಂದು ಎಷ್ಟು ಮೆದುವಾಗಿ ಅವ್ವಾ… ಎಂದು ಕರೆದಿದ್ದಾನೋ ಅದಕ್ಕಿಂತ ಕಟುವಾಗಿ ಸೂಳೆ ಎಂದಾಗ ತಾಯಿ ಮೇಲೆ ಹರಿಹಾಯ್ದ. ಕೊನೆಗೆ ರಂಪಾಟಗಳೆಲ್ಲಾ ಮುಗಿದು ಎಲ್ಲರೂ ತಂತಮ್ಮ ಮನೆಗೆ ಹೋದ ಮೇಲೆ ಶಂಕರಣ್ಣ ಶಾರದನಾ ಕರೆದುಕೊಂಡು ಒಳನಡೆದ. ಮಗನ ಬಿಟ್ಟರೆ ಬೇರೆ ಗತಿ ಇಲ್ಲದ ಬುಡ್ಡಮ್ಮಜ್ಜಿಯೂ ಒಂದಷ್ಟು ಹೊತ್ತು ಮನೆಯ ಹೊರಗಿನ ಹಲಸಿನ ಮರದ ಬಳಿ ಕುಳಿತು ಅತ್ತು, ಸೊಸೆಗೆ ಶಾಪ ಹೊಡೆದು ಒಳನಡೆದಿದ್ದಳು. ಆದಾದ ಮೇಲೆ ಒಂದೇ ಮನೆಯಲ್ಲಿ ಅತ್ತೆ-ಸೊಸೆ ವಾಸವಾಗಿದ್ದರೂ, ಮಾತಿಲ್ಲ, ಕತೆಯಿಲ್ಲ. ಸೊಸೆ ಬೇಯಿಸಿದ ಅನ್ನ ಅತ್ತೆ ತಿನ್ನುತ್ತಿರಲಿಲ್ಲ.

ಒಂದು ದಿನ ಬೆಳಿಗ್ಗೆ ಶಾರದ ವಾಂತಿ ಮಾಡಿಕೊಳ್ಳತೊಡಗಿದಾಗ ಶಂಕರಣ್ಣ ಹೆಂಡತಿಗೇನೋ ಆಗಿದೆ ಎಂದು ಚಡಪಡಿಸಿಬಿಟ್ಟ. ಬುಡ್ಡಮ್ಮಜ್ಜಿ ಸೊಸೆಯ ವಾಂತಿ ಶಬ್ಧ ಕಿವಿಗೆ ಬಿದ್ದರೂ, ಎದ್ದು ಬರಲಿಲ್ಲ. ಕೊನೆಗೆ ಶಾರದನ  ಸುಧಾರಿಸಿಕೊಂಡು ಗಂಡನಿಗೆ ತಾನು ಹೊರಗಾಗಿಲ್ಲ ಎಂದು ಹೇಳಿದ ಬಳಿಕ ಶಂಕರಣ್ಣನಿಗೆ ಸಮಾಧಾನವಾಗಿ ಹೊಲದ ಕಡೆ ಕೆಲಸಕ್ಕೆ ಹೋದ. ಆದರೆ ಬುಡ್ಡಮ್ಮಜ್ಜಿ ಮಾತ್ರ ಸಂಜೆ ಮಗ ಮನೆಗೆ ಬರುವುದರೊಳಗೆ ಬೇರೆಯದ್ದೇ ಗುಲ್ಲೆಬ್ಬಿಸಿದ್ದಳು. ಗೌಡ ಮತ್ತು ನಿಂಗಮ್ಮನ ಸಂಬಂಧ, ಗೌಡರು, ಶಾರದನ ಮೇಲೆ ಕಣ್ಣು ಹಾಕಿದ್ದು ಈ ಎಲ್ಲಾ ವಿಚಾರಗಳು ಬುಡ್ಡಮ್ಮಜ್ಜಿಯ ಕಿವಿಗೆ ಹಾಲು ಮಾರುವ ಮಾದ ಮೊದಲೇ ತುಂಬಿದ್ದ. ಹಾಗಾಗಿ ಬುಡ್ಡಮ್ಮಜ್ಜಿ ಇವಳು ಮದುವೆಗಿಂತ ಮೊದಲೇ ಯಾರಿಗೋ ಬಸಿರಾಗಿದ್ದವಳು. ಹೇಗೋ ಒಬ್ಬ ಸಿಕ್ಕಿದ್ದ ಎಂದು ನನ್ನ ಮಗನನ್ನು ಬುಟ್ಟಿಗೆ ಹಾಕಿಕೊಂಡಳು. ನನ್ನ ಮಗ ಇದೆಲ್ಲಾ ತಿಳಿಯದ ಶತದಡ್ಡ ಎಂದು ಎಲ್ಲರ ಎದುರು ಆವಲತ್ತುಕೊಂಡು ಬಂದಳು. ಇದೆಲ್ಲಾ ಶಾರದನಿಗೆ ಗೊತ್ತಾದರೂ ಸುಮ್ಮನಿದ್ದಳು! ಶಂಕರಣ್ಣ ಮನೆಗೆ ಬಂದವನೆ ಶಾರದನ ಹತ್ತಿರ ಹೋಗಿ ಕುಳಿತುಕೊಂಡು ಬಿಟ್ಟ. ಅವನ ಕೈಯನ್ನು ತನ್ನ ಹೊಟ್ಟೆ ಮೇಲೆ ಇಟ್ಟು ಒಂದು ವೇಳೆ ನಾನೆಲ್ಲಿಯಾದರೂ ಸತ್ತು ಹೋದರೆ, ನನ್ನ ಮಗುವನ್ನು ಬೀದಿಗೆ ತಳ್ಳಬೇಡಿ. ಅದು ಈ ಸೂಳೆ, ಅಪವಾದ ಇಂತಹವುಗಳಿಂದ ದೂರವೇ ಇದ್ದು ಒಂದು ಚೆಂದನೆಯ ಬದುಕು ಬಾಳಬೇಕು ಎಂದು. ಯಾಕೆ ಇಂತಹ ಮಾತನಾಡುತ್ತಿ ಈ ಹೊತ್ತಲ್ಲಿ ಎಂದು ಶಂಕರಣ್ಣ ಅವಳ ಬಾಯಿ ಮೇಲೆ ಕೈಯಿಟ್ಟರೂ ಶಾರದ ಮಾತ್ರ ಕಣ್ಣೀರಿಡುತ್ತಾ ಇದಕ್ಕೆ ನೀವೇ ಅಪ್ಪ ನಾನು ಯಾವತ್ತೂ ಪರಸಂಗ ಮಾಡಿಲ್ಲ ಎಂದು ಗಂಡನ ಕಾಲ ಮೇಲೆ ಬಿದ್ದು ಹೊರಳಾಡಿಬಿಟ್ಟಳು. ಶಂಕರಣ್ಣ ತಲ್ಲಣಿಸಿಬಿಟ್ಟ.

ಸಮಯ ಸಿಕ್ಕಾಗಲೆಲ್ಲಾ ಬುಡ್ಡಮ್ಮಜ್ಜಿ ಸೊಸೆಯ ಮೇಲೆ ಮಾತಿನ ಪ್ರಹಾರ ಮಾಡುತ್ತಿದ್ದರೂ, ಶಾರದ ಸೊಲ್ಲೆತ್ತುತ್ತಿರಲಿಲ್ಲ. ಗಂಡನ ಮುಖ ನೋಡಿ ಸುಮ್ಮನಾಗುತ್ತಿದ್ದಳು. ಒಂಭತ್ತು ತಿಂಗಳು ತುಂಬುದಕ್ಕೆ ಇನ್ನೇನು ದಿನಗಳಿವೆ ಎಂಬುವಾಗಲೇ ಶಾರದನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಪಕ್ಕದ್ಮನೆ ಗಿರಿಜಮ್ಮಜ್ಜಿ ಬಂದು ಹೆರಿಗೆ ಮಾಡಿಸಿದ್ದರು ರಕ್ತಸಾವ್ರ ಮಾತ್ರ ನಿಲ್ಲಲೇ ಇಲ್ಲ. ಶಾರದನೂ ಉಳಿಯಲೂ ಇಲ್ಲ. ಮಗೂನ ಅಪ್ಪನ ಬೆನ್ನ ಮೇಲೆ ಕೂರಿಸಿ ಕೂಸುಮರಿ ಮಾಡಿ ಇವರೇ ನಿನ್ನಪ್ಪ ಎಂದು ಹೇಳುವ ಆಕೆಯ ಕನಸು ಕೂಡ ಅವಳೊಂದಿಗೆ ಕಣ್ಣುಮುಚ್ಚಿತ್ತು.

ಜೋಲಿಯಲ್ಲಿ ಕಟ್ಟಿದ್ದ ಮಗು ನಿದ್ದೆ ಕಣ್ಣಿನಲ್ಲಿ ಕಿಟಾರನೇ ಕಿರುಚಿದಾಗ ಶಂಕರಣ್ಣ ಬೆಚ್ಚಿಬಿದ್ದು ಹರವಿಕೊಂಡಿದ್ದ ಯೋಚನೆಗಳನ್ನೆಲ್ಲಾ  ಅಲ್ಲೇ ಕೊಡವಿ ಒಳಗೆ ಓಡಿಬಿಟ್ಟ. ಹದಿನೈದು ದಿನಗಳಿಂದ ಸಾಕಷ್ಟು ರೋಸಿ ಕೂಡ ಹೋಗಿದ್ದ. ತಾಯಿ ಇಲ್ಲದ ತಬ್ಬಲಿ ಮಗುವನ್ನು ನೋಡುವಾಗ ಅವನ ಕರುಳು ಕಿವುಚಿದಂತಾಗುತ್ತಿತ್ತು. ನಿಂಗಮ್ಮನ ಬಳಿಯೇ ಈ ಮಗುನ ಬಿಟ್ಟು ಬರುವುದು ಒಳ್ಳೆಯದು ತನಗಿನ್ನು ಬೇರೆ ದಾರಿ ಇಲ್ಲ ಎಂದು ಅಲ್ಲಿಯೇ ಕಂಬಕ್ಕೊರಗಿ ಕುಳಿತುಬಿಟ್ಟ. ಶಾರದನ ಮಾತು ಕೊನೆಗೂ ಉಳಿಸಿಕೊಳ್ಳುವುದಕ್ಕೆ ತನ್ನ ಕೈಯಿಂದ ಆಗಲ್ಲ ಎಂದು ಕುಳಿತಲ್ಲಿಯೇ ಬಿಕ್ಕಿ ಬಿಟ್ಟ. ಮತ್ತೊಮ್ಮೆ ಜೋಲಿಯೊಳಗಿದ್ದ ಮಗು ನಕ್ಕಂತೆ ಆಗಿ ಹೋಗಿ ನೋಡಿದರೆ ಬುಡ್ಡಮ್ಮಜ್ಜಿ ತನ್ನ ಬೆಚ್ಚು ಬಾಯಿಯನ್ನು ಅಗಲಿಸಿಕೊಂಡು ಮಗುವಿನೊಂದಿಗೆ ಏನೋ ಮಾತನಾಡುತ್ತಿದ್ದಳು. ಶಂಕರಣ್ಣನ ಕಣ್ಣುಗಳರೆಡೂ ನೀರಿನಿಂದ ತುಂಬಿಹೋಗಿತ್ತು!

Leave a Reply

Your email address will not be published. Required fields are marked *