ಸಣ್ಣ ಕತೆ:’ಸಿಂಗಾರಜ್ಜಿಯ ಮುತ್ತಿನ ಬುಗುಡಿ’

  • ಪವಿತ್ರ ಶೆಟ್ಟಿ

ಹಾವು ಹರಿದಂತಿರುವ ರಸ್ತೆಯಲ್ಲಿ ಬಸಿರಿಯಂತೆ ತೇಕುತ್ತಾ ಬರುತ್ತಿದ್ದ ಬಸ್ ನೋಡಿ ಸಿಂಗಾರಜ್ಜಿ ತನ್ನ ರವಿಕೆಯೊಳಗೆ ಕೈ ಹಾಕಿ ಕರ್ಚಿಫಿನ ಗಂಟೊಂದನ್ನು ತೆಗೆದಿಟ್ಟುಕೊಂಡಳು. ಮುದುರಿ ಹೋಗಿದ್ದ ನೋಟುಗಳನ್ನು ಕರ್ಚಿಫಿನಿಂದ ಹೊರತೆಗೆದು ತನ್ನ ಚೂಪು ಕಣ್ಣಿನಲ್ಲಿಯೇ ಅದನ್ನು ಮೇಲೆ ಕೆಳಗೆ ನೋಡತೊಡಗಿದಳು. ಈಗಿನ ಕ್ಷಣಕ್ಕೊಂದು ಬಣ್ಣ ಬದಲಾಯಿಸುವ ಮನುಷ್ಯರ ಹಾಗೇ ಈ ನೋಟುಗಳು ಕೂಡ ತಮ್ಮ ರೂಪ ಬದಲಿಸಿಕೊಂಡು ಬಣ್ಣ ಬಣ್ಣದ್ದಾಗಿವೆ. ಐವತ್ತು, ಇನ್ನೂರು ರೂಪಾಯಿಗಳ ನೋಟೇ ಗೊತ್ತಾಗುತ್ತಿಲ್ಲ ಎಂದು ಕಣ್ಣಿಗೆ ಇನ್ನೂ ಹತ್ತಿರ ಹಿಡಿದುಕೊಂಡು ನೋಡತೊಡಗಿದಳು. ಯಾರಾ ಹತ್ತಿರವಾದರೂ ಕೇಳುವ ಎಂದರೆ  ಯಾರೂ ಕೂಡ ಕತ್ತೆತ್ತಿ ನೋಡುವ ಸ್ಥಿತಿಯಲ್ಲಿ ಇಲ್ಲ. ತಮ್ಮ ತಮ್ಮ ಬದುಕಿನ ಜಂಜಾಟದಲ್ಲಿಯೇ ಮುಳುಗಿದ್ದವರ ಹಾಗೇ ಹ್ಯಾಪು ಮೊರೆ ಹೊತ್ತುಕೊಂಡು ಕುಳಿತಿದ್ದರು.

ಕೆಂಬಣ್ಣ ಹೊತ್ತ ಬಸ್ ಗರ್ರಕ್ಕನೆ ಬ್ರೇಕ್ ಹಾಕಿದಾಗ ಸಿಂಗಾರಜ್ಜಿ ತನ್ನ ಕರ್ಚಿಫಿನ ಗಂಟನ್ನು ಮತ್ತೊಮ್ಮೆ ಬಿಗಿಯಾಗಿ ಬೆವರೊಡೆದ ಅಂಗೈಯಲ್ಲಿ ಬೆಚ್ಚಗೆ ಹಿಡಿದುಕೊಂಡು ಬಸ್ ಏರಿಯೇ ಬಿಟ್ಟಳು.. ಸಾಗರದಿಂದ  ಬೆಂಗಳೂರಿಗೆ ಹೊರಡಲು ಬಸ್ ಕೂಡ ಸಜ್ಜಾಯಿತು. ಕಿಟಕಿ ಪಕ್ಕ ಸಿಕ್ಕ ಸೀಟಿನಲ್ಲಿ ಮೊದಲೇ ಮುದುರಿದ ಜೀವವನ್ನು ಮತ್ತಷ್ಟು ಮುದುರಿಸಿಕೊಂಡು ಸೀರೆ ಇರುವ ಬಟ್ಟೆ ಗಂಟನ್ನು ಕಾಲಡಿ ಇಟ್ಟುಕೊಂಡು ಕುಳಿತು ಬಿಟ್ಟಳು. ಆಗೊಮ್ಮೆ ಈಗೊಮ್ಮೆ  ಕಿಟಕಿಯತ್ತ ಕಣ್ಣು ಆನಿಸಿ ಹಾದು ಹೋಗುವ ಮನೆಗಳನ್ನು ನೋಡುತ್ತಾ ನಿಟ್ಟುಸಿರು ಬಿಡುತ್ತಿದ್ದಳು. ಮಗದೊಮ್ಮೆ ಕಂಡೆಕ್ಟರ್ ಬಂದಾನಾ…? ಎಂದು ಕತ್ತೆತ್ತಿ ನೋಡುತ್ತಿದ್ದಳು. ಪಕ್ಕದಲ್ಲಿ  ಯಾರೂ ಇಲ್ಲದಿರುವುದಕ್ಕೆ ಒಂದು ಕ್ಷಣ ಖುಷಿ ಎನಿಸಿದರೂ, ಯಾಕೋ ಬದುಕ ಪಯಣದಲ್ಲಿ ಯಾರೂ ಕೂಡ ನನ್ನ ಜತೆ ಇಲ್ಲ ಎಂಬುದು ಇಲ್ಲೂ ಕೂಡ ಸಾಬೀತಾಗಿದೆ ಎಂದು ಸುಮ್ಮನಾದಳು. ಟಿಕೆಟ್.. ಟಿಕೆಟ್… ಎಂದು ಕೂಗುತ್ತಾ ಬಂದವನಿಗೆ ದುಡ್ಡು ಕೊಟ್ಟು ಬೆಂಗಳೂರು ಎಂದಷ್ಟೇ ಹೇಳಿದಾಗ, ನೀವು ಒಬ್ಬರೇನಾ ಅಜ್ಜಿ, ಬೇರೆ ಯಾರು ಇಲ್ವಾ ಎಂದಾಗ, ನಾನೊಂದು ಒಂಟಿ ಪಿಶಾಚಿ ಕಣಪ್ಪಾ ಎಂದಷ್ಟೇ ಹೇಳಿ ಕಿಟಕಿಯಾಚೆ ಮುಖ ಮಾಡಿದಳು. ಎಷ್ಟೆಲ್ಲಾ ಕಷ್ಟ ಉಂಡ ಬಡ ಜೀವ ಸಿಂಗಾರಜ್ಜಿಯ ಬಾಯಲ್ಲಿ ಇದೇ ಮೊದಲ ಬಾರಿಗೆ ಜೀವನದ ಮೇಲೊಂದು ಜಿಗುಪ್ಸೆ ಬಂದಿತ್ತು. ಎಲ್ಲಿಯೂ ಇಲ್ಲದ ಅವಳ ಬದುಕ ಮೇಲೆ ಅವಳಿಗೊಂದು ಅಸಹನೀಯವಾದ ಕೋಪ ಎದ್ದು ಕಾಣುತ್ತಿತ್ತು. ಹಾಗೋ ಹೀಗೂ ತನ್ನ ದುಃಖವನ್ನು ನಿಯಂತ್ರಿಸಿಕೊಳ್ಳುತ್ತಾ  ಅವಳ ಕೈ ಸೀದಾ ಕಿವಿಯತ್ತ ಹೋಯ್ತು. ಕಿವಿಯನ್ನು ಮುಟ್ಟಿಕೊಳ್ಳುತ್ತಲೇ ಸಿಂಗಾರಜ್ಜಿ ಅದ್ಯಾವುದೋ ಖುಷಿಯಲ್ಲ ತೇಲಿ ಹೋದಂತೆ ಕಂಡು ಬಂದಳು, ಬಸ್ಸಿನ ಮತ್ತೊಂದು ಬದಿಯ  ಸೀಟಿನಲ್ಲಿ ಕುಳಿತ ತಿಂಗಳು ತುಂಬಿದ ಬಸಿರಿಯೊಬ್ಬಳು ಸಿಂಗಾರಜ್ಜಿಯ ಈ ನಡವಳಿಕೆ ನೋಡಿ, ತನ್ನ ಸನಿಹ ಕುಳಿತ ಗಂಡನ ಕಿವಿಯಲ್ಲಿ ಅದೇನೋ ಪಿಸುಗುಟ್ಟಿ ಮುಸಿ ಮುಸಿ ನಕ್ಕುಬಿಟ್ಟಳು. ಸಿಂಗಾರಜ್ಜಿಗೆ ಒಮ್ಮೆಲೇ ಮುಜುಗರವಾಗಿ ತನ್ನ ಮುದರಿದ ಕಿರುಬೆರಳಿನಲ್ಲಿಯೇ ಕಿವಿಯ ಮುತ್ತಿನ ಬುಗುಡಿಯ ಮೇಲೆ ಕೈಯಾಡಿಸತೊಡಳಿದಳು. ತಣ್ಣಗೆ ಬೀಸುತ್ತಿದ್ದ ಗಾಳಿಗ ಆ ಬುಗುಡಿಯ ಕೆಳಗಿರುವ ಮುತ್ತುಗಳು ಆಚೀಚೆ ನಿಧಾನಕ್ಕೆ ಓಲಾಡುತ್ತಿದ್ದವು. ಒಂದು ಕಡೆ ಖುಷಿ ಅನಿಸಿದರೆ ಮತ್ತೊಂದು ಕಡೆ ತನ್ನ ಕನಸಿನ ಪುಟ್ಟ ಸಂಸಾರ ಒಡೆದದ್ದಕ್ಕೆ ಈ ಬುಗುಡಿಯೂ ಸಾಕ್ಷಿಯಾಗಿದ್ದು ನೆನಪಾಗಿ ಕಣ್ಣೀರು ಒತ್ತರಿಸಿಕೊಂಡು ಬಂತು. ಜತೆಗೆ ನೆನಪುಗಳು ಕೂಡ ಅಲ್ಲಿಲ್ಲಿ ಮೋಡ ಕಟ್ಟಿ ಮಳೆ ಸುರಿಸಲು ಸಜ್ಜಾದವು.

ಸಿಂಗಾರಜ್ಜಿ  ಹುಟ್ಟಿದ್ದು  ಚಿಕ್ಕಮಗಳೂರಿನ ಕೂಲಿ ರಾಮಣ್ಣನ ಮನೆಯಲ್ಲಾದರೂ. ಬೆಳೆದಿದ್ದು ಮಾತ್ರ ಬೀದಿ ಬದಿಯ ಜೋಪಡಿಯಲ್ಲಿ!  ಹುಟ್ಟುವಾಗಲೇ ಆಕೆಯ ಹೆಸರಿನೊಂದಿಗೆ ಅಜ್ಜಿ ಎಂಬ ವಿಶೇಷಣ ಸೇರಿಕೊಂಡಿರಲಿಲ್ಲ. ಆದರೆ ಸಿಂಗಾರಿ ಹೆಸರಿನ ಲಕ್ಷಣಗಳು ಆಕೆಯ ಬದುಕಿನಲ್ಲೆಂದೂ ಕಾಣಿಸಿಕೊಳ್ಳಲಿಲ್ಲ. ಸಿಂಗಾರಜ್ಜಿ ಹುಟ್ಟುವಾಗಲೇ ಕಪ್ಪಗಿದ್ದರೂ, ಮುಖದಲ್ಲಿ ಅದೇನೋ ಲಕ್ಷಣ ಎದ್ದು ಕಾಣುತ್ತಿತಂತೆ. ಬಲ ತುಟಿಯ ಪಕ್ಕದಲ್ಲಿ ಮಚ್ಚೆ ಕೂಡ ಇದ್ದಿತ್ತು. ಅಲಲೆ….. ನನ್ನ ಸಿಂಗಾರಿ ಎಂದು ಅಪ್ಪ ಕರೆದಾಗ ಅದೇ ಖಾಯಂ ಹೆಸರಾಗಿ ಬಿಟ್ಟಿತು. ಕೇರಿಯ ಮಕ್ಕಳೆಲ್ಲಾ ಸಿಂಗಾರಿ ಎಂದು ಕರೆದಾಗ ತುಸು ನಾಚಿಕೆಯಾದರೂ ತನ್ನ ಹೆಸರಿನ ಮೇಲೆ ಅದೇನೋ ಮಮಕಾರ ಸಿಂಗಾರಜ್ಜಿಗೆ. ಹಾಗೋ ಹೀಗೋ ಇದ್ದದ್ದರಲ್ಲಿಯೇ ಖುಷಿಯಾಗಿದ್ದ ಸಿಂಗಾರಜ್ಜಿಯ ಅಪ್ಪ ಒಂದು ದಿನ ಮಾಡಿದ ಸಾಲ ತೀರಿಸಲಾಗದೇ ನೇಣಿಗೆ ಕೊರಳೊಡ್ಡಿ ಬಿಟ್ಟರು. ಅದಾದ ಸ್ವಲ್ಪ ದಿನದಲ್ಲಿ ತಾಯಿ ಕೂಡ ಹಾಸಿಗೆ ಹಿಡಿದು ಇಹ ಲೋಕದ ಯಾತ್ರೆ ಮುಗಿಸಿದಳು. ಸಿಂಗಾರಜ್ಜಿ ಮಾತ್ರ ಅಕ್ಷರಶಃ ದಿಕ್ಕ ತೋಚದ ಕರುವಿನಂತಾಗಿದ್ದಳು. ಆಗ ಆಕೆಯ ಪ್ರಾಯ ಹದಿನೈದು ಸಮೀಪಿಸಿತ್ತು. ಮೈ ನೆರೆದಿದ್ದರಿಂದ ಎದೆಯ ಮೇಲಿನ ಮೊಲೆಚೊಟ್ಟು ನಿಧಾನಕ್ಕೆ ತನ್ನ ಇರುವಿಕೆ ತೋರಿಸುತ್ತಿತ್ತು.

ಇವಳು ಇಲ್ಲಿಯೇ ಇದ್ದರೆ, ತಮಗೆ ತಲೆನೋವು ಎಂದು ಸಿಂಗಾರಜ್ಜಿಯ ಅಪ್ಪನ ಸಂಬಂಧಿಕರೆಲ್ಲಾ ಸೇರಿ ಪಕ್ಕದ ಕೇರಿಯ ಕೇಶವನಿಗ ಗಂಟು ಹಾಕಿಬಿಟ್ಟರು. ಮದುವೆ, ಸಂಸಾರದ ಬಗ್ಗೆ ಯಾವ ಕನಸು ಕಂಡಿರದ ಸಿಂಗಾರಜ್ಜಿಗೆ ಯಾವುದೋ ಕತ್ತಲಿನ ಬಾವಿಯೊಳಕ್ಕೆ ನೂಕಿದಂತೆ ಆಯ್ತು. ಇದ್ದ ನಾಲ್ಕು ಜತೆ ಬಟ್ಟೆ, ಅಮ್ಮನ ಹತ್ತಿ ಸೀರೆ, ಒಂದೆರೆಡು ಪಾತ್ರೆಯನ್ನು ವಯರ್  ಬುಟ್ಟಿಗೆ ತುಂಬಿಕೊಂಡು ಕೇಶವನ ಹಿಂದೆ ಪಕ್ಕದ ಕೆರಿಗೆ ನಡೆದೇ ಬಿಟ್ಟಳು. ಹೇಳಿಕೊಳ್ಳಲು ಒಂದು ಮನೆಯೂ ಇಲ್ಲದ ಕೇಶವ ಈಗಲೋ, ಆಗಲೋ ಬಿದ್ದು ಹೋಗುವಂತಿದ್ದ ಜೋಪುಡಿಯೊಂದನ್ನು ಕಟ್ಟಿಕೊಂಡಿದ್ದ. ಏನೇ ಆಗಲಿ ಇದೆ ನನ್ನ ಮನೆಯೆಂದು ಸಿಂಗಾರಜ್ಜಿ ಕೂಡ ಅದನ್ನೇ ಒಪ್ಪ ಓರಣ ಮಾಡಿಬಿಟ್ಟಳು. ಊಟಕ್ಕೆ ಗಂಡ ಏನಾದರೂ ತರಬಹುದು ಎಂದು ಕಾದು ಕುಳಿತವಳಿಗೆ ಅಲ್ಲಿಯೇ ತೂಕಡಿಕೆ ಬಂದು ನಿದ್ದೆ ಮಾಡಿಬಿಟ್ಟಿದ್ದಳು. ಬೆಳಿಗೆದ್ದು ನೋಡಿದಾಗ ಜೋಪುಡಿಯ ತಟ್ಟಿ ಕೂಡ ಹಾಕದೇ ಮಲಗಿದ್ದು ನೋಡಿ ಸ್ವಲ್ಪ ಭಯವಾದರೂ ಗಂಡನ ಸುಳಿವಿಲ್ಲದೇ ಇದ್ದಾಗ ತಲ್ಲಣಿಸಿ ಹೋದಳು. ರಾತ್ರಿಯಿಡೀ ಏನೂ ಉಣ್ಣದೇ ಇದ್ದದ್ದಕ್ಕೆ ತಲೆಬೇರೆ ನೋಯುತ್ತಿತ್ತು, ಜತೆಗೆ ಹೊಟ್ಟೆ ಹಸಿವಿನಿಂದ ತಾಳ ಹಾಕುತ್ತಿತ್ತು. ಮಡೆಕೆಯಲ್ಲಿಯೇ ಇದ್ದ ನೀರು ಕುಡಿದು ಮತ್ತೆ ಕಣ್ಣು ಮುಚ್ಚಿಕೊಂಡಳು. ನಡು ಮಧ್ಯಾಹ್ನ ಕೇಶವ ಜೋಪುಡಿಯೊಳಗೆ ಬಂದಾಗ ಸಿಂಗಾರಜ್ಜಿ ನಿಶಕ್ತಿಯಿಂದ  ಏಳಲು ಆಗದೇ ಅಲ್ಲಿಯೇ ಮುಲುಗುತ್ತಿದ್ದಳು. ಯಾವುದೊಂದು ಭಾವವು ತೋರದೇ ಪೇಪರ್ ಕಟ್ಟೊಂದನ್ನು ಅವಳಡೆಗೆ ಚಾಚಿ ಹೋಗೆಬಿಟ್ಟ. ಬೇರೆ ಏನನ್ನು ಯೋಚಿಸದೇ ಸಿಂಗಾರಜ್ಜಿ ಅವನು ತಂದಿಟ್ಟ ಅನ್ನ ಹಾಗೂ ಸಾರನ್ನು ಬಾಯಿ ಚಪ್ಪರಿಸಿಕೊಂಡು ತಿಂದು ಜೋಪುಡಿಯ ಸೂರು ನೋಡುತ್ತ ಮಲಗಿಬಿಟ್ಟಳು. ಕತ್ತಲಾಗುತ್ತಲೇ ಕೇಶವ ಮತ್ತೆ ಬಂದ, ‘ನಿನ್ನ ಬಟ್ಟೆಯ ಗಂಟುಗಳನ್ನು ಕಟ್ಟಿಕೋ  ಹೊರಡಬೇಕಿದೆ’ ಎಂದಷ್ಟೇ ಹೇಳಿದ. ನೀರು ಕಾಣದ ಮೈಗೆ ಸೀರೆಯೊಂದನ್ನು ಸುತ್ತಿಕೊಂಡು, ಬಾಚಣಿಗೆ ಸೋಕದ ತುರುಬನ್ನು ಕಟ್ಟಿಕೊಂಡು ಅವನ ಹಿಂದೆ ನಡೆಯ ತೊಡಗಿದಳು. ದಾರಿಯುದ್ದಕ್ಕೂ ಅವನು ತುಟಿಯೊಡಯಲಿಲ್ಲ. ಇವಳು ಕಮ್ಮಕ್ ಗಿಮ್ಮಕ್ ಅನ್ನಲಿಲ್ಲ. ನಡೆದಷ್ಟು ದಾರಿ ಸಾಗುತ್ತಲೇ ಇತ್ತು!

ಯಾವುದೋ ಬಸ್ ಸ್ಟ್ಯಾಂಡ್ ಬಂದಾಗ ಅವನು ಮೋಟು ಬೀಡಿಗೆ ಬೆಂಕಿ ತಗುಲಿಸಿ ಇವಳತ್ತ ಕಣ್ಣು ಹಾಯಿಸಿದ. ಇವಳು ನಾಚಿಕೆಯಿಂದ ನೀರಾದಳು. ಮೊದಲ ಬಾರಿಗೆ ಅವಳ ಮೈ ಮನದಲ್ಲಿ ಏನೋ ಒಂದು ಬಗೆಯ ಸಂಚಲನ ಮೂಡಿತು. ಇಲ್ಲಿಯೇ ಇರು ಎಂದವನೇ ಆಚೆ ಬದಿಯ ರಸ್ತೆಗೆ ಹೋಗಿ ಒಂದು ಮೊಳ ಹೂ ಹಾಗೂ ಒಂದು ಹಿಡಿ ಜೋನಿ ಬೆಲ್ಲ ಹಿಡಿದುಕೊಂಡು ಬಂದ. ಬಾಚಣಿಗೆಯೇ ಕಾಣದ ಕೂದಲಿನೊಳಗೆ ಅವನು ಕೊಟ್ಟ ಮಲ್ಲಿಗೆಯನ್ನು ತುಂಬು ಅಕ್ಕರೆಯಿಂದ ಸಿಕ್ಕಿಸಿಕೊಂಡು ಬೆಲ್ಲ ಕಚ್ಚಿಕೊಂಡು ನೀರು ಕುಡಿದಳು. ಮೊದಲ ಬಾರಿಗೆ ಅವಳಲ್ಲಿ ಸಂಸಾರದ ಕನಸೊಂದು ಚಿಗುರು ಬಿಟ್ಟಿತು.. ಗಂಡ ಕೊಟ್ಟ ಮಲ್ಲಿಗೆಯ ಪರಿಮಳದ ಮಂಪರಿನಲ್ಲಿಯೇ ಬಸ್ ಏರಿಬಿಟ್ಟಳು. ಎರಡು ಸೀಟಿರುವ ಆ ಬಸ್ಸಿನಲ್ಲಿ ಅವನ ಪಕ್ಕದಲ್ಲಿಯೇ ಕುಳಿತಾಗ ಮೊದಲ ಬಾರಿಗೆ ಅವಳಮ್ಮ ಕಣ್ಣೆದುರಿಗೆ ಬಂದಳು. ನಾ ಪೇಟೆಗೆ ಹೋಗಿ ಸಂಸಾರ ಮಾಡುವುದನ್ನು ಅಮ್ಮ ಇದ್ದಿದ್ರೆ ನೋಡಿ ಖುಷಿ ಪಡುತ್ತಿದ್ದಳು ಎಂದು  ಕಂಬನಿ ಮಿಡಿದಳು. ಕೇಶವನ ಪಕ್ಕದಲ್ಲಿಯೇ ಕುಳಿತು ತನ್ನ ಮುಂದಿನ ಭವಿತ್ಯವದ ಕನಸುಗಳನ್ನು ಪೋಣಿಸತೊಡಗಿದಳು. ಎರಡು ದಿನ ಕಳೆದ ಮೇಲೆ ಒಂದೂರಿಗೆ ಬಂದಿಳಿದರು ಗಂಡ ಹೆಂಡತಿ. ಮೊದಲ ಬಾರಿಗೆ ಅಲ್ಲಿಯ ಜನಜಂಗುಳಿ, ಅದ್ಯಾವುದೋ ಭಾಷೆ ಕಂಡು ಸಿಂಗಾರಜ್ಜಿಗೆ ದಿಗಿಲು ಬಡಿದಂತಾಯಿತು. ಇದು ಬೊಂಬಾಯಿ ನೀ ಹಳ್ಳಿ ಮುಕ್ಕಿಯ ಹಾಗೇ ಇರಬೇಡ ಸ್ವಲ್ಪ ಸರಿಯಾಗಿ ನೋಡ್ಕೋ ಎಂದಾಗ ಅವಳದೆ ಜೋರಾಗಿ ಬಡಿದುಕೊಳ್ಳುವುದಕ್ಕೆ ಶುರುವಾಯ್ತು. ಹುಟ್ಟಿದಾಗಿನಿಂದ ಚಿಕ್ಕಮಗಳೂರನ್ನು ಸರಿಯಾಗಿ ನೋಡದವಳು ಬೊಂಬಾಯಿ ಪೇಟೆಗೆ ಬಂದರೆ ಹೇಗಾಗಿರಬೇಡ. ಆದರೂ ಒಳಗೊಳಗೆ ಖುಷಿ ಅನಿಸಿತ್ತು. ನನ್ನ ಗಂಡನಾದವನು ಕಡಿಯೇನಿಲ್ಲ. ಭಾರಿ ದೊಡ್ಡ ಜನಾನೇ ಎಂದು ಹೆಮ್ಮೆ ಪಟ್ಟಳು.

ಕೋಳಿ ಗೂಡಿನಂತಿರುವ ಮನೆಯೊಳಗೆ ಇವಳನ್ನು ಬಿಟ್ಟು, ಸ್ವಲ್ಪ ಸುಧಾರಿಸಿಕೊ. ಅಲ್ಲಿ ಸ್ವಲ್ಪ ನೀರಿದೆ. ಸ್ನಾನ ಮಾಡು ತಿನ್ನೋಕೆ ಏನಾದರೂ ತರ್ತೀನಿ ಎಂದಷ್ಟೇ ಹೇಳಿ ಹೊರಟೇಬಿಟ್ಟ. ಗುಡಿಸಲಿನಂತರುವ ಆ ಮನೆ ಅವಳಿಗೆ ಅರಮನೆಯಂತೆ ಕಾಣತೊಡಗಿತು. ಗಂಡ ಬರುವುದೊಳಗೆ ಮನೆ ಒಪ್ಪ ಮಾಡಿ ಕುಳಿತುಬಿಟ್ಟಳು. ಬಂದವನೇ ಅದೇನೋ ದೋಸೆಯಂತಿರುವುದನ್ನು ಕೊಟ್ಟಾಗ ಸಿಂಗಾರಜ್ಜಿಯ ಗಂಟಲಿಗೆ ಇಳಿಯಲೇ ಇಲ್ಲ. ಹಾಗೋ ಹೀಗೋ ತಿನ್ನುವ ಶಾಸ್ತ್ರ ಮುಗಿಸಿ ಮಲಗಲು ಅಣಿಯಾದಳು. ಅವನು ಕೂಡ ಇವಳ ಪಕ್ಕ ಬಂದು ಮಲಗಿದಾಗ ಭಯ ಒತ್ತರಿಸಿಕೊಂಡು ಬಂದರೂ ಕಣ್ಮುಚ್ಚಿ ಮಲಗಿ ಬಿಟ್ಟಳು. ಅದ್ಯಾವ ಮಾಯೆಯಲ್ಲಿ ಅವನು ಇವಳನ್ನು ಅವರಿಸಿದನೋ ಗೊತ್ತಿಲ್ಲ. ಬೆಳಿಗ್ಗೆ ಎದ್ದಾಗ ಮೈ ಸಂಧು ಸಂಧಿನಲ್ಲಿ ನೋವು ಕಾಣಿಸಿಕೊಂಡಿತ್ತು. ಅವನೂ ಬಲಿಷ್ಠನಾಗಿಯೇ ಇದ್ದ!  ಬೆಳಿಗ್ಗೆ ಇವಳು ಏಳುವ ಮೊದಲೇ ಅವನು ಅಲ್ಲಿರಲಿಲ್ಲ. ಅದೊಂದೇ ಸಿಂಗಾರಜ್ಜಿಗೆ ಬೇಸರದ ಸಂಗತಿಯಾಗಿತ್ತು.

ಹೀಗೆ ಒಂದು ವಾರ ಸಂಸಾರ ಮಾಡಿದರು. ಒಂದು ದಿನ ಸಂಜೆ ಬಂದ ಕೇಶವನ ಕೈಯಲ್ಲಿ ಒಂದಷ್ಟು ಹೂ, ಒಂದು ದೊಡ್ಡ ಹೂವಿನ ಚಿತ್ತಾರವಿರುವ ಬೆಡ್ ಶೀಟ್, ನೀರಿನ ಜಗ್ ಇದ್ದಿತ್ತು. ಗಂಡ ಸಂಸಾರದ ಜವಾಬ್ದಾರಿಗೆ ಹೆಗಲುಕೊಡುವ ಮನುಷ್ಯ ಎಂದು ಸಿಂಗಾರಜ್ಜಿ  ಖುಷಿಪಟ್ಟಳು. ಅಂಗಿ ಕಿಸೆಯೊಳಗಿನಿಂದ ಕೆಂಪನೆಯ  ಪುಟ್ಟ ಡಬ್ಬಿ ತೆಗೆದು ಸಿಂಗಾರಜ್ಜಿಯ ಕೈಗೆ ಇಟ್ಟು ಸ್ನಾನ ಮಾಡಿ, ಹೂ ಮುಡಿದುಕೊಂಡು ಈ ರಂಗನ್ನು ತುಟಿಗೆ ಗಾಢವಾಗಿಯೇ ಹಚ್ಚಿಕೋ ಎಂದಷ್ಟೆ ಹೇಳಿ ಮತ್ತೆ ಮಾಯವಾದ! ಗಂಡ ಹೇಳಿದ ಮಾತನ್ನು ಚಾಚೂ ತಪ್ಪದೇ ಪಾಲಿಸಲು ಸಿಂಗಾರಜ್ಜಿಯೂ ಸಿದ್ಧಳಾದಳು. ಮನೆಯ ಪಕ್ಕದಲ್ಲಿಯೇ ಇದ್ದ ತುಂಡಾದ ಕನ್ನಡಿಯ ತುಂಡೊಂದನ್ನು ತಂದು, ಕಾಲನ್ನು ಉದ್ದಕ್ಕೆ ನೀಡಿಕೊಂಡು ಮೊಣಕಾಲು ಗಂಟುಗಳ ಮಧ್ಯೆ ಅದನ್ನು ಕನ್ನಡಿಯ ಹಾಗೇ ಸಿಕ್ಕಿಸಿಕೊಂಡಳು. ತಲೆಯ ಸಿಕ್ಕು ಬಿಡಿಸಿಕೊಂಡು ಮಲ್ಲಿಗೆ ಮುಡಿದು, ತುಟಿಗೆ ರಂಗನ್ನು ಮೆತ್ತಿಕೊಂಡಳು. ಹಾಗೇ ಹಚ್ಚುವಾಗ ಅವಳ ಹಲ್ಲಿಗೂ ಒಂದಷ್ಟು ತಾಕಿ ವಿಚಿತ್ರವಾಗಿ ಕಂಡಳು! ಗಂಡ ಬರುವುದೊಳಗೆ ತಕ್ಕಮಟ್ಟಿಗೆ ಸಿಂಗರಿಸಿಕೊಂಡಿದ್ದಳು. ಆದರೆ ಗಂಡನ ಹಿಂದೆ ಬಂದ ಮತ್ತೊಂದು ನೆರಳನ್ನು ನೋಡಿ ಸಿಂಗಾರಜ್ಜಿ ತುಸು ಗಲಿಬಿಲಿಗೊಂಡಳು. ಒಳಗೆ ಬಂದ ಕೇಶವ ಅವನ ಜತೆ ಸ್ವಲ್ಪ ಹೊತ್ತು ಮಲ್ಕೋ ಎಂದಾಗ ಸಿಂಗಾರಜ್ಜಿ ಹೌಹಾರಿ ಬಿಟ್ಟಳು. ಗಂಡನ ಮೇಲೆ ಕಟ್ಟಿಕೊಂಡ ಕನಸಿನ ಸೌಧ ಧುತ್ತೆಂದು ಕುಸಿಯತೊಡಗಿತು. ಬೊಂಬಾಯಿ ಪೇಟೆಯ ಕರಾಳ ರೂಪ ಕೂಡ ಅವಳಿಗೆ ದರ್ಶನವಾಯಿತು.

ನಾ ಹೀಗೆಲ್ಲಾ ಮಲಗೋದಿಲ್ಲ. ನೀ ಸೋಳೆಗಾರಿಕೆ ಮಾಡೋದಕ್ಕೆ ನನ್ನ ಇಲ್ಲಿ ಕರೆದುಕೊಂಡು ಬಂದ್ಯಾ ಎಂದು ಜೋರಾಗಿ ಅಳೋದಕ್ಕೆ ಶುರುಮಾಡಿಬಿಟ್ಟಳು. ಶಾಂತ ಮೂರ್ತಿಯಂತಿದ್ದ ಕೇಶವ ಒಮ್ಮಲೇ ಗುಡುಗಿಬಿಟ್ಟ. ಮತ್ತೇನು ನಿನ್ನ ಅಂದ ಚೆಂದ ನೋಡಿ ನಾನು ಮದುವೆಯಾಗಿದ್ದ…?ಬೇಡವೆಂದರೂ ನಿನ್ನ ಚಿಕ್ಕಪಂದಿರು ನನ್ನ ತಲೆಗೆ ನಿನ್ನ ಕಟ್ಟಿಬಿಟ್ಟರು. ಮೂರು ಹೊತ್ತು ಹೊಟ್ಟೆಗೆ ಬೇಕು ಎಂದರೆ ಅವನ ಜೊತೆ ಮಲಗು ರಂಡೇ ಎಂದು ಹೇಳಿ ಕದಮುಚ್ಚಿ ಬಿಟ್ಟ. ಹೊರಗಡೆಯಿದ್ದವನು ಹಿಂದಿಯಲ್ಲಿಯೇ ಏನು ಹೇಳತೊಡಗಿದಾಗ ಸಿಂಗಾರಜ್ಜಿ ಮಾತ್ರ ಮುಡಿಯಲ್ಲಿದ್ದ ಹೂವನ್ನೆಲ್ಲಾ ಬಿಸಾಡಿ ಬಾಗಿಲು ಗುದ್ದ ತೊಡಗಿದಳು.ಹಿಂದಿಯವನು ಬಂದ ದಾರಿಗೆ ಸುಂಕ ಇಲ್ಲದವನ ಹಾಗೇ ನಡೆದೇ ಬಿಟ್ಟ. ಎರಡು ದಿನ ಊಟ ಕಾಣದ ಸಿಂಗಾರಜ್ಜಿ ಮಾರನೇ ದಿನ ಪಕ್ಕದವಳ ಜತೆ ಕೈ ಸನ್ನೆಯಲ್ಲಿಯೇ ಏನೇನೂ ಮಾತನಾಡಿ ಮನೆ ಕೆಲಸವೊಂದನ್ನು ಹಿಡಿದುಕೊಂಡು ಬಿಟ್ಟಳು. ತಿಂಗಳಿಗೆ ಒಂದಷ್ಟು ರೂಪಾಯಿ. ಕೂಡ ಫಿಕ್ಸ್ ಆಯಿತು. ಕೇಶವನ ಜತೆ ಮಾತು ಕೂಡ ಕಡಿಮೆಯಾಯಿತು.

ಆದರೆ ವಿಧಿ ಲಿಖಿತವೇ ಬೇರೆ ಆಗಿತ್ತು. ಸಿಂಗಾರಜ್ಜಿಯ ಹೊಟ್ಟೆಯೊಳಗೆ ಕೇಶವನ ಕುಡಿ ಮೆಲ್ಲಗೆ ತನ್ನ ಕದಲಿಕೆ ತೋರಿಸಲು ಶುರುಮಾಡಿತ್ತು. ವಾಂತಿ ಶುರುವಾಗಿ ತಲೆ ಸುತ್ತು ಬಂದರೂ ಕೇಶವ ಸಿಂಗಾರಜ್ಜಿಯತ್ತ ಕಣ್ಣೆತ್ತಿಯೂ ನೋಡಲಿಲ್ಲ. ಆಸ್ಪತ್ರೆ, ಮಾತ್ರೆ ಇದೆಲ್ಲವೂ ದೂರದ ಮಾತಾಗಿತ್ತು. ಬೇಡದ ಪಿಂಡ ಅನಿಸಿ ನಾಲ್ಕೈದು ಇನ್ನೂ ಸರಿಯಾಗಿ ಹಣ್ಣಾಗದ ಪಪ್ಪಾಯಿ ಕಾಯಿಗಳನ್ನು ತಂದು ತಿಂದಳು.ಯಾವುದಕ್ಕೂ ಜಗ್ಗದ ಗಟ್ಟಿಪಿಂಡ ಅದು. ಹೊಟ್ಟೆಯಲ್ಲಿಯೇ ಬೆಳೆದು ಬಿಟ್ಟಿತು. ತಿಂಗಳು ತುಂಬಿ ಹೆತ್ತು ಬಿಟ್ಟಳು. ಮಗ್ಗುಲಲ್ಲಿದ್ದು ಹೆಣ್ಣು ಕೂಸು ಎಂದು ಗೊತ್ತಾದಾಗ ಮುಖ ನೊಮ್ಮೆ ಸಿಂಡರಿಸಿಕೊಂಡೇ ಮೊಲೆಚೊಟ್ಟನ್ನು ಬಾಯಿಗಿಟ್ಟಳು. ಅದು ಕೂಡ ಚಪ ಚಪ ಎಂದು ಬಾಯಿ ಚಪ್ಪರಿಸಿತು. ಮಗುವಿನ ಮುಖ ಕೂಡ ಕೇಶವ ನೋಡಲಿಲ್ಲ.  ವಾರ ಸರಿದಂತೆ. ಮಗುವನ್ನು ಕಟ್ಟಿಕೊಂಡೇ ಮನೆಕಲಸಕ್ಕೆ ಹೋಗತೊಡಗಿದಳು. ಇವೆಲ್ಲದರ ಮಧ್ಯೆ ಸಿಂಗಾರಜ್ಜಿಗೆ ಒಂದು ಹೊಸ ಆಸೆ ಹುಟ್ಟಿಕೊಂಡಿತ್ತು. ತಾನು ಕೆಲಸ ಮಾಡುತ್ತಿದ್ದ ಮನೆಯೊಡತಿ ಱರಿಸುತ್ತಿದ್ದ ಮುತ್ತಿನ ಬುಗುಡಿಯೊಂದನ್ನು ಕಂಡು, ಸಾಯುವುದರೊಳಗೆ ಒಮ್ಮೆಯಾದರೂ ಮುತ್ತಿನ ಬುಗುಡಿಯನ್ನು ತೆಗೆದುಕೊಳ್ಳಬೇಕು ಎಂದು ಕನಸು ಕಟ್ಟತೊಡಗಿದಳು. ಮನೆಯಲ್ಲಿ ಗಂಡ ಇರುವಾಗ ತುಸು ಜೋರಾಗಿಯೇ ತನ್ನ ಪರಿಸ್ಥಿತಿಯನ್ನು ಹಳಹಳಿಸುತ್ತಾ, ಬುಗುಡಿಯ ಆಸೆಯನ್ನು ಒತ್ತಿ ಹೇಳುತ್ತಿದ್ದಳು. ಎಂದಾದರೊಂದು ದಿನ ಗಂಡ ಸರಿಯಾಗುತ್ತಾನೆ ಎಂಬ ದೂರದ ಆಸೆ ಆಕೆಯದ್ದು!

ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಕೇಶವ  ಆವೊತ್ತೊಂದು ಮುಂಜಾನೆ ಮನೆಯೆದರು ಧುತ್ತನೇ ಹಾಜರಾದ. ಎಲ್ಲಿ ಹೋಗಿದ್ದೆ ಎಂದು ಸಿಂಗಾರಜ್ಜಿಯೂ ಕೇಳಲಿಲ್ಲ ಅವನೂ ಹೇಳಲಿಲ್ಲ. ಕೇಶವ ಹೋಗಿ ಒಂದು ವಾರ ಎಲ್ಲಾ ಕಡೆ ಹುಡುಕಿ ಕೊನೆಗೆ ಅವನ ದೋಸ್ತಿಯೊಬ್ಬನಿಂದ ಕೇಶವ ಹೈದ್ರಾಬಾದ್ ಗೆ ಹೋಗಿದ್ದು ಗೊತ್ತಾಗಿ ಸುಮ್ಮನಾಗಿದ್ದಳು ಸಿಂಗಾರಜ್ಜಿ. ಬೆಳಿಗ್ಗೆ ಅವನ ದರ್ಶನವಾದ ಕೂಡಲೇ ತುಸು ಸಮಾಧಾನದ ನಿಟ್ಟುಸಿರುಬಿಟ್ಟು ಮಗುವನ್ನು ಕರೆದುಕೊಂಡು ಮನೆಕೆಲಸಕ್ಕೆ ಹೊರಟುಬಿಟ್ಟಳು. ಸಂಜೆ ಕೇಶವ ಮನೆಗೆ ಬರುವಾಗ ಮೀನು ತೆಗೆದುಕೊಂಡು ಬಂದಿದ್ದ. ಸಿಂಗಾರಜ್ಜಿಗೆ ಆಶ್ಚರ್ಯದ ಜತೆಗೆ ಬದಲಾದ ಗಂಡನ ನಡವಳಿಕೆಯ ಮೇಲೆ ಅನುಮಾನ ಕೂಡ ಮೂಡಿತು. ಒಂದು ಪುಟ್ಟ ಜೋಳಿಗೆಯನ್ನು ಕೇಶವ ಗೋಡೆಗೆ ನೇತು ಹಾಕಿ ಹೊರಗೆ ಹೊರಟ. ಗಂಡ ಅತ್ತ ಕಡೆ ಹೋದ ಕೂಡಲೇ ಜೋಳಿಗೆಯ ಒಳಗೇನಿದ ಎಂದು ಹುಡುಕಲು ಶುರುಮಾಡಿದಳು ಸಿಂಗಾರಜ್ಜಿ. ಮೊದಲಿಗೆ ಸಿಕ್ಕಿದ್ದು ಒಂದು ಪುಟ್ಟ ಡಬ್ಬಿ. ಅದರ ಬಾಯಿ ತೆರೆದಾಗ ಪುಟ್ಟ ಪುಟ್ಟ ಮುತ್ತುಗಳಿದ್ದವು. ಒಮ್ಮೆಲೇ ಖುಷಿಯಾಗಿ ಕೂಗಬೇಕು ಅನಿಸಿತು. ಕೊನೆಗೂ ತನ್ನ ಮುತ್ತಿನ ಬುಗುಡಿಯ ಆಸೆ ಈಡೇರಿತು ಎಂದು ಸಮಾಧಾನಪಟ್ಟಳು. ಮಗಳು ಹುಟ್ಟಿದ ಗಳಿಗೆ ಇರಬೇಕು ಗಂಡನಿಗೆ ಒಳ್ಳೆ ಬುದ್ಧಿ ಬಂದಿದೆ ಎಂದು ಸಿಂಗಾರಜ್ಜಿ ಮೀನು ಸಾರು ಮಾಡಲು ಹೊರಟಳು. ಆದರೆ ಮೀನಿನ ಕಲಕಕ್ಕೆ ಬೇಕಾದ ಸಾಮಾನು ಇಲ್ಲದೇ, ಸೀದಾ ಪಕ್ಕದ ಮನೆಯವಳ ಹತ್ತಿರ ಹೋಗಿ ಒಂದಷ್ಟು ಮೆಣಸು, ಕೊತ್ತಂಬರಿ, ಓಮದ ಕಾಳು, ತಂದವಳೇ ಒರಳು ಕಲ್ಲಿಗೆ ಒಂಚೂರು ತೆಂಗಿನ ಕಾಯಿ ಹಾಕಿ ನುಣ್ಣಗೆ ರುಬ್ಬಿ ಒಲೆ ಮೇಲೆ ಕುದಿಯಲು ಇಟ್ಟಳು. ಕೇರಿ ತುಂಬಾ ಇವಳ ಮೀನಿನ ಸಾರಿನ ಘಮಲು ತುಂಬಿ ಹೋಯ್ತು. ಗಂಡ ಬರುವುದೊಳಗೆ ಸೀರೆ ಉಟ್ಟು, ಮಗುವಿಗೆ ಊಟ ತಿನ್ನಿಸಿ ಮಲಗಿಸಿಬಿಟ್ಟಳು. ಎಷ್ಟು ವರುಷವಾಯ್ತೋ ಜೀವಕ್ಕೆ ಜೀವ ತಾಕಿ, ಯಾವುದೋ ಕೆಟ್ಟ ಗಳಿಗೆ ಹಾಗೇ ಮಾಡಿದ. ಈಗ ಸುಧಾರಿಸಿದ್ದಾನೆ ಎಂದು ಗಂಡನ ಬರವಿಗಾಗಿ ಕಾಯತೊಡಗಿದಳು. ಕತ್ತಲಾದ ಮೇಲೆ ಕೇಶವ ಬಾಗಿಲ ಬಳಿ ಬಂದ ಸದ್ದಾಯಿತು. ಖುಷಿಯಿಂದ ಎದ್ದವಳಿಗೆಗೆ ಮತ್ತೊಂದು ನೆರಳು ನೋಡಿ ಮೈ ಮತ್ತೊಮ್ಮೆ ನಡುಗಿಬಿಟ್ಟಿತು. ಯಾರೆಂದು ಇಣುಕಿ ನೋಡುವುದೊಳಗೆ ಆ ನೆರಳು ಮನೆಯೊಳಗೆ ಪ್ರವೇಶಿಸಿಯೇ ಬಿಟ್ಟಿತು. ಹತ್ತಿರ ಬಂದಾಗಲೇ ಹೆಣ್ಣು ಎಂಬುದು ಸಿಂಗಾರಜ್ಜಿಗೆ ಗೊತ್ತಾಯಿತು. ಮಾಡಿಟ್ಟ ಮೀನಿನ ಸಾರನ್ನು ಅವರಿಬ್ಬರೂ ತಿಂದು ಮುಗಿಸಿ ಏಳುವವರೆಗೂ ಸಿಂಗಾರಜ್ಜಿ ಕಲ್ಲುಬಂಡೆಯಂತೆ ಕುಳಿತೇ ಇದ್ದಳು. ಮತ್ತೊಮ್ಮೆ ಅವಳ ನಂಬಿಕೆಯ ಸೌಧ ಪೂರ್ತಿಯಾಗಿ ಕುಸಿದು ಹೋಗಿತ್ತು.

ಜೋಳಿಗೆಯೊಳಗಿದ್ದ ಮುತ್ತಿನ ಡಬ್ಬಿಯನ್ನು ಕೇಶವ ಆ ಹೆಣ್ಣಿನ ಕೈಗಿಡುತ್ತಲೇ ಸಿಂಗಾರಜ್ಜಿ ರೌದ್ರವಾತಾರ ತಾಳಿದಳು. ಅಲ್ಲಿಯೇ ಇದ್ದ ಪೊರಕೆ ತೆಗೆದುಕೊಂಡು ಗಂಡನಿಗೂ ಅವಳಿಗೂ ಬಾರಿಸತೊಡಗಿದಳು. ಯಾವುದೋ ಹುಚ್ಚು ಆವೇದಲ್ಲಿ ಏನೇನೂ ಬಡಬಡಾಯಿಸಿ ಮೂಲೆಯಲ್ಲಿ ಮಲಗಿದ್ದ ಮಗುವನ್ನು ಎದೆಗವಚಿಕೊಂಡು ಜೋರಾಗಿ ಅಳ ತೊಡಗಿದಳು. ಅವಳ ರೋಧನ ಕೇಳುವವರು ಮಾತ್ರ ಯಾರೂ ಇರಲಿಲ್ಲ. ಗಂಡ ಮುತ್ತಿನ ಡಬ್ಬಿ ಬಿಟ್ಟು ಆ ಹೆಂಗಸಿನ ಹಿಂದೆ ಹೊರಟು ಹೋಗಿದ್ದ. ಅತ್ತೆಲ್ಲಾ ಸಮಾಧಾನವಾದಾಗ ಸಿಂಗಾರಜ್ಜಿ ಉಳಿದ ಮೀನಿನ ಸಾರು ಹಾಕಿಕೊಂಡು ಗಂಡನ ಮೇಲಿನ ಸಿಟ್ಟಿನಲ್ಲಿಯೇ ಅದನ್ನೆಲ್ಲಾ ತಿಂದು ಮುಗಿಸಿದ್ದಳು. ಮುತ್ತಿನ ಡಬ್ಬಿಯನ್ನು ಮಾತ್ರ ಜತನದಿಂದ ಎತ್ತಿಟ್ಟಳು. ಬೆಳಿಗ್ಗೆ ಮಾಮೂಲಿಯಂತೆ ಕೆಲಸಕ್ಕೆ ಹೋಗಲು ರೆಡಿಯಾಗಿ ಮಗುವನ್ನು ಎತ್ತಲು ಹೋದಾಗ ಮಗುವಿನ ಮೈ ಕೆಂಡದಂತೆ ಸುಡುತ್ತಿತ್ತು. ಮಗುವಿನ ತಲೆಯ ಮೇಲೊಂದು ಚಂಡಿ ಬಟ್ಟೆ ಇಟ್ಟು ಪಕ್ಕದ ಮನೆಯವಳನ್ನು ಕರೆಯಲು ಓಡಿದಳು. ಮನೆಗೆ ಬರುವುದೊರಳಗೆ ಮಗುವಿನ ದೇಹ ಮಾತ್ರ ನಿಶ್ಚಲವಾಗಿತ್ತು. ಬೇಡದ ಗರ್ಭವೆಂದುಕೊಂಡಿದ್ದರೂ, ಮಗು ಹುಟ್ಟಿದ ಮೇಲೆ ಸಿಂಗಾರಜ್ಜಿ ಮಗುವಿಗಾಗಿ ಬದುಕಲು ಶುರುಮಾಡಿದ್ದಳು. ಮಗಳನ್ನು ಓದಿಸಬೇಕು ಎಂಬ ಆಸೆ ಕಟ್ಟಿಕೊಂಡಿದ್ದಳು. ಅಳುವುದಕ್ಕೆ ಆಗದೇ ಅಸಹಾಯಕಳಾಗಿ ಮಗುವಿನ ಕಾಲ ಬುಡದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಳು. ಬದುಕಲು ಇರುವುದಕ್ಕೆ ಇದ್ದ ಒಂದೇ ಒಂದು ಆಶಾಕಿರಣ ಕೂಡ ಅವಳ ಪಾಲಿಗೆ ಇಲ್ಲದೇ ಹೋಗಿತ್ತು.

ಒಂದು ತಿಂಗಳು ಮಗುವಿನ ಯೋಚನೆಯಲ್ಲಿಯೇ ಮಲಗಿದ್ದವಳಿಗೆ ಬೆಳಿಗ್ಗೆ ಯಾರೋ ಬಾಗಿಲು ಬಡಿದ ಶಬ್ಧವಾಗಿತ್ತು. ಹೊರಗಡೆ ಬಂದಾಗ ನಾಲ್ಕೈದು ಜನ ಬಂದು ನಾಳೆನೇ ಮನೆ ಬಿಡುವಂತೆ ತಾಕೀತು ಮಾಡಿಹೋದರು. ದಿಕ್ಕೇ ತೋಚದಂತೆ ಕುಳಿತ ಸಿಂಗಾರಜ್ಜಿ ತನ್ನದೆರೆಡು ಜತೆ ಸೀರೆಯನ್ನು ಒಂದು ಚೀಲಕ್ಕೆ ತುಂಬಿಕೊಂಡು ಹೊರಟು ನಿಂತಾಗ ಮುತ್ತಿನ ಡಬ್ಬ ನೆನಪಾಯಿತು. ಬಿಟ್ಟು ಹೋಗೋಣವೆಂದರೆ ಯಾರದ್ದೋ ಪಾಲಾಗುತ್ತೆ ಎಂದು ತನ್ನ ಚೀಲದೊಳಗೆ ತುಂಬಿಕೊಂಡು ಮಗುವಿನ ಮುಖವನ್ನೊಮ್ಮೆ ಮನದಲ್ಲಿಯೇ ಮೂಡಿಸಿಕೊಂಡು ನಡೆದೇ ಬಿಟ್ಟಳು. ಯಾವುದೋ ಆಸ್ಪತ್ರೆಯಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡು ಆಮೇಲೆ  ಅಲ್ಲಿನ ಹೆರಿಗೆ ಮಾಡಿಸುವ ಡಾಕ್ಟರಿಗೆ ಸಹಾಯ ಮಾಡುವ ಕೆಲಸ ಕೂಡ ಮಾಡತೊಡಗಿದಳು. ಅಷ್ಟು ವರ್ಷದ ಬದುಕಿನಲ್ಲಿ ಕೇಶವನನ್ನು ಮಾತ್ರ ಒಮ್ಮೆಯೂ ಅವಳು ನೆನಪು ಮಾಡಿಕೊಳ್ಳಲಿಲ್ಲ. ದುಡಿದ ದುಡ್ಡೆಲ್ಲಾ ಒಟ್ಟು ಸೇರಿಸಿ ದುಡ್ಡಿನಲ್ಲಿ ಒಂದು ಜತೆ ಮುತ್ತಿನ ಬುಗುಡಿ ಕೂಡ ಮಾಡಿಸಿಕೊಂಡು ಬಿಟ್ಟಳು.

ಒಂದು ದಿನ ಸಿಂಗಾರಜ್ಜಿ ಆಸ್ಪತ್ರೆಯ ಹೊರಗಡೆ ಕುಳಿತಿದ್ದಾಗ ನಾಲ್ಕೈದು ಜನ ಯಾರೋ ಒಬ್ಬನನ್ನು ಎತ್ತಿಕೊಂಡು ಬರುತ್ತಿದ್ದು ನೋಡಿ ಅತ್ತ ಕಣ್ಣು ಹಾಯಿಸಿದಳು. ಬಂದವರು ಮಲಗಿದ್ದ ವ್ಯಕ್ತಿಗೆ ಬಾಯಿಗೆ ಬಂದಂತೆ ಹಿಂದಿಯಲ್ಲಿ ಬೈಯುತ್ತಿದ್ದರು. ಈಗ ಹಿಂದಿ ಭಾಷೆಯಲ್ಲಿ  ಸಿಂಗಾರಜ್ಜಿಯೂ ಹಿಡಿತ ಸಾಧಿಸಿದ್ದಳು. ಕುಡಿದುಕೊಂಡು ಯಾರದ್ದೋ ಮನೆ ಬಾಗಿಲು ತಟ್ಟಿದನಂತೆ. ಅದಕ್ಕೆ ಅಲ್ಲಿದ್ದವರೆಲ್ಲಾ ಸೇರಿಸಿ ಹೊಡೆದು ಬಿಸಾಡಿದರಂತೆ. ರಸ್ತೆ ಬದಿಯಲ್ಲಿ ಹೆಣದಂತೆ ಬಿದ್ದಿರುವವನ್ನು ಎತ್ತಿಕೊಂಡು ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದರು. ಹತ್ತಿರ ಬರುತ್ತಿದ್ದಂತೆ ಅದು ಕೇಶವ ಎಂದು ಸಿಂಗಾರಜ್ಜಿಗೆ ಗೊತ್ತಾಯಿತು. ತುಂಬಾ ಸೊರಗಿ ಹೋಗಿದ್ದ ಕೇಶವನನ್ನು ನೋಡುತ್ತಲೇ ಸಿಂಗಾರಜ್ಜಿಯ ಕಣ್ಣಂಚು ಒದ್ದೆಯಾಯಿತು. ದೇಹದಲ್ಲಿ ಉಸಿರು ನಿಂತು ಹೋಗಿ ಸುಮಾರು ಹೊತ್ತಾಗಿತ್ತು ಎಂದು ಯಾರೋ ಹೇಳಿದ ಮಾತು ಕಿವಿಗೆ ಬೀಳುತ್ತಿದ್ದಂತೆ ಸಿಂಗಾರಜ್ಜಿ ಹಣೆಯಲ್ಲಿದ್ದ ಕುಂಕುಮ, ಕೊರಳಲಿದ್ದ ಬೀಣಿದಾರದಲ್ಲಿ ಪೋಣಿಸಿಕೊಂಡಿದ್ದ ಕಪ್ಪುಮಣಿಗಳ ಸರವನ್ನು ತೆಗೆದುಹಾಕಿ ಅಂದು ರಾತ್ರಿ ಊಟ ಕೂಡ ಮಾಡದೇ ಮಲಗಿಬಿಟ್ಟಳು. ಕಿವಿಯಲ್ಲಿದ್ದ ಮುತ್ತಿನ ಬುಗುಡಿ ಮಾತ್ರ ಹಾಗೇ ಇತ್ತು.  ಆಸ್ಪತ್ರೆಯಲ್ಲಿದ್ದ  ಉಳಿದ ಕೆಲಸಗಾರರಿಗೆ ಸಿಂಗಾರಜ್ಜಿಯ ಈ ನಡವಳಿಕೆ ಆಶ್ಚರ್ಯ ತರಿಸಿದರೂ ಯಾರು ಕೂಡ ಅದರ ಬಗ್ಗೆ ಸೊಲ್ಲೆತ್ತಲಿಲ್ಲ. ಮಾರನೇ ದಿನವೇ ಸಿಂಗಾರಜ್ಜಿ ಬೊಂಬಾಯಿ ಪೇಟೆ ಸಾಕೆಂದು ಯಾರದ್ದೋ ಪರಿಚಯದ ಮೂಲಕ ಸಾಗರಕ್ಕೆ ಬಂದಿಳಿದಳು. ತನ್ನ ಭೂತಕಾಲದ ನೋವನ್ನೆಲ್ಲಾ ಗಂಟು ಮೂಟೆ ಕಟ್ಟಿ ಮೂಲೆಗೆ ಬಿಸಾಕಿ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಅಲ್ಲಿ ಹುಟ್ಟುವ ಪ್ರತಿಯೊಂದು ಮಗುವಿನ ಮುಖ ನೋಡಿದಾಗ ತನ್ನ ಮಗಳ ಮುಖ ನೆನಪಾಗಿ ಕಣ್ಣೀರು ಹಾಕುತ್ತಿದ್ದಳು. ಸಾಗರಕ್ಕೆ ಸಿಂಗಾರಜ್ಜಿಯ ಬದುಕು ತುಂಬಾ ಚೆನ್ನಾಗಿಯೇ ಹೊಂದಿಕೊಂಡಿತ್ತು. ಆದರೆ ಯಾವುದೋ ಡೆಲಿವರಿ ಕೇಸ್ ನಲ್ಲಿ ಡಾಕ್ಟರ್ ಮಾಡಿದ ಎಡವಟ್ಟಿನಿಂದ ಡಾಕ್ಟರ್ ಜತೆಗೆ ಸಹಾಯಕಿಯಾಗಿದ್ದ ಸಿಂಗಾರಜ್ಜಿಯ ಕೆಲಸ ಕೂಡ ಹೋಗಿತ್ತು. ಬೆಂಗಳೂರಿನಲ್ಲಿ ಕೆಲಸ ಸಿಗುತ್ತೆ ಎಂದು ಯಾರೋ ಹೇಳಿದ್ದು ಕೇಳಿ ಸಿಂಗಾರಜ್ಜಿ ಬೆಂಗಳೂರಿನ ಬಸ್ಸು ಹತ್ತಿದ್ದಳು.

ಬೆಂಗಳೂರಿಗೆ ಸಾಗುತ್ತಿದ್ದ ಬಸ್ ಪೆಟ್ರೋಲ್ ತುಂಬಿಸಿಕೊಳ್ಳಲೆಂದು ಬ್ರೇಕ್ ಹಾಕಿದಾಗ ಸಿಂಗಾರಜ್ಜಿ ಕೂಡ ತನ್ನ ಹಳೆಯ ನೆನಪುಗಳಿಂದ ವಾಪಾಸ್ಸಾದಳು. ಬಸ್ಸನಲ್ಲಿದ್ದವರೆಲ್ಲಾ ಇಳಿದು ಹೋಟೆಲ್ ಕಡೆ ನಡೆಯ ತೊಡಗಿದರು. ಹೊಟ್ಟೆ ಚುರುಗುಟ್ಟುತ್ತಿದ್ದರೂ ಕೈಯಲ್ಲಿದ್ದ ಬಿಡಿಗಾಸು ಖಾಲಿಯಾಗುತ್ತದ ಎಂಬ ಅಂಜಿಕೆಯಲ್ಲಿಯೇ ಕುಳಿತೇ ಇದ್ದಳು. ಪಕ್ಕದ ಸಾಲಿನಲ್ಲಿದ್ದ ಬಸಿರಿ ಸಣ್ಣಗೆ ಮುಲುಗಲು ಶುರುಮಾಡಿದಳು. ಗಂಡ ಬೇರೆ ಅಲ್ಲಿರಲಿಲ್ಲ. ನಿಧಾನಕ್ಕೆ ಶುರುವಾದ ಅವಳ ಹೊಟ್ಟೆ ನೋವು ಮತ್ತೆ ಜೋರಾಗತೊಡಗಿತು. ಅಲ್ಲಿದ್ದವರ್ಯಾರೋ ಅವಳ ಗಂಡನನ್ನು ಕರೆದಾಗ ಅವನು ಕೈಯಲ್ಲಿದ್ದ ಇಡ್ಲಿಯನ್ನು ಬಿಸಾಟು ಓಡಿ ಬಂದ. ಸಿಂಗಾರಜ್ಜಿ ಅಷ್ಟಾರಗಲೇ ಹೆರಿಗೆ ಮಾಡಿಸೋದಕ್ಕೆ ತಯಾರಾಗಿ ಬಿಟ್ಟಿದ್ದಳು. ತನ್ನಲಿದ್ದ ಒಂದದು ಜೊತೆ ಹತ್ತಿ ಸೀರೆಯನ್ನು ಹರಿದು ಎರಡು ತುಂಡು ಮಾಡಿ, ಒಂದು ತುಂಡನ್ನು ಅಡ್ಡಕಟ್ಟಿ ಆ ಹೆಣ್ಣುಮಗಳಿಗೆ ಸಮಾಧಾನ ಮಾಡತೊಡಗಿದಳು. ಬಸ್ಸನಲ್ಲಿದವರೆಲ್ಲಾ ನಿದ್ದೆಯನ್ನೆಲ್ಲಾ ಮರೆತು ಮಗುವಿನ ಅಳು ಕೇಳುವುದಕ್ಕಾಗಿ ಕತ್ತು ಉದ್ದ ಮಾಡಿಕೊಂಡು ನಿಂತರು. ಗುಂಪಿನಲ್ಲಿದ್ದವರ್ಯಾರೋ ಆ ಅಜ್ಜಿಗೇನು ಗೊತ್ತು…? ಯಾವುದಾದರೊಂದು ಆಸ್ಪತ್ರೆಗೆ ಸೇರಿಸಿದರೆ ಆಗಾಕಿಲ್ವಾ ಎಂದು ದನಿ ಏರಿಸಿ ಹೇಳುತ್ತಿದ್ದರು. ಹತ್ತಿರದಲ್ಲಿ ಯಾವುದು ಆಸ್ಪತ್ರೆ ಇಲ್ಲ. ಇರುವುದು ಇದೊಂದೇ ಹೋಟೆಲ್ ಎಂದು ಇನ್ಯಾರೋ ದನಿಗೂಡಿಸಿದ್ದರು. ಅರ್ಧ ಗಂಟೆ ಕಳೆಯುವುದರೊಳಗೆ ಹೆರಿಗೆನೂ ಆಯ್ತು. ಮಗುನೂ ಅತ್ತಿತು. ಯಾರೋ ಹೋಟೆಲ್ ನಿಂದ ಬಿಸಿನೀರು ತಂದು ಕೊಟ್ಟರು. ಹೆಣ್ಣುಮಗು ಒಳ್ಳೆ ಬೆಳದಿಂಗಳಂತೆ ಹೊಳೆಯುತ್ತಿತ್ತು!

ತಣಿದ ನೀರಿಗೆ ಒಂಚೂರು ಸಕ್ಕರೆ ಹಾಕಿ ಮಗುವಿನ ಬಾಯಿಗೆ ತಾಕಿಸಿದ ಸಿಂಗಾರಜ್ಜಿ  ತನ್ನ ಕಿವಿಯಲ್ಲಿದ್ದ  ಮುತ್ತಿನ ಬುಗುಡಿಯನ್ನು ಕಳಚಿ ಆ ಮಗುವಿನ ಪುಟ್ಟ ಕೈಯಲ್ಲಿಟ್ಟಳು. ಬಾಣಂತಿ ಮಾತ್ರ ಸಿಂಗಾರಜ್ಜಿ ಕೈ ಹಿಡಿದು ಗೋಳೋ ಎಂದು ಅತ್ತುಬಿಟ್ಟಳು. ದೇವತೆ ಹುಟ್ಟಿದ್ದಾಳೆ ಚೆನ್ನಾಗಿ ನೋಡ್ಕೋ ಎಂದಷ್ಟೇ ಹೇಳಿ ಸಿಂಗಾರಜ್ಜಿ  ತನ್ನ ಸೀಟಿನತ್ತ ಹೊರಟು ಬಿಟ್ಟಳು.  ಹೆಂಡತಿ ಹಾಗೂ ಮಗುವಿನ ಮುಖ ನೋಡುತ್ತಾ ಗಂಡ ಖುಷಿ ಪಡುತ್ತಿದ್ದ. ಸಿಂಗಾರಜ್ಜಿ ಕಿಟಕಿಯತ್ತ ಮುಖ ಆನಿಸಿಕೊಂಡು ಯಾವುದೋ ಸಮಾಧಾನದಲ್ಲಿ  ಕಣ್ಣುಮುಚ್ಚಿ ಉಸಿರು ಎಳೆದುಕೊಂಡಳು. ಮತ್ತೆಂದೂ ಸಿಂಗಾರಜ್ಜಿ ಕಣ್ಣು ತೆರೆಯಲಿಲ್ಲ!

-ಪವಿತ್ರಾ ರಾಘವೇಂದ್ರ ಶೆಟ್ಟಿ

Leave a Reply

Your email address will not be published. Required fields are marked *