ಲೇಖನ: ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ…

ನನಗೆ ಪರಿಚಯದ ಹುಡುಗಿಯೊಬ್ಬಳು ಇತ್ತೀಚೆಗೆ ಡೈವೋರ್ಸ್ ಗೆ ತೆಗೆದುಕೊಂಡಳು. ಕಾರಣ ಕೇಳಬೇಕು ಎಂಬ ಕುತೂಹಲ ನನಗಿರಲಿಲ್ಲ. ಬೇಸರದಲ್ಲಿದ್ದಾಳೆ ಎಂದು ಪೋನ್ ಮಾಡಿದರೆ ಅವಳೇ ಕಾರಣಗಳನ್ನು ಹೇಳುತ್ತಾ ಸಾಗಿದಳು. ಅವಳು ಹೇಳುವ ದೂರುಗಳು ಇಂತಿವೆ; ಬೆಳಿಗ್ಗೆ ಕೆಲಸಕ್ಕೆ ಹೋದ ಗಂಡ ರಾತ್ರಿ ಮನೆಗೆ ಬರುತ್ತಾನೆ. ಬಂದ ಮೇಲೆ ನೀನು ಹೇಗಿದ್ದಿಯಾ, ಎಂದು ಕೇಳುವುದಿಲ್ಲ. ಊಟ ತಿಂದು ಮಲಗುತ್ತಾರೆ. ಇಡೀ ಹೊತ್ತು ಮನೆಯಲ್ಲಿ ಕುಳಿತುಕೊಂಡು ನನಗೂ ಬೋರ್ ಆಗಿರುತ್ತದೆ. ಒಂದು ಸ್ವಲ್ಪ ಹೊತ್ತಾದರೂ ಮಾತನಾಡಬೇಕು ಅನಿಸುತ್ತೆ. ಆದರೆ ಮಾತನಾಡುವುದು ಯಾರ  ಜತೆ? ಅವರು ಅವರ ಫೋನ್ ನಲ್ಲಿ ಬ್ಯುಸಿಯಾಗಿ ಬಿಡುತ್ತಾರೆ. ಹಾಗಂತ ನನ್ನ ಗಂಡನಿಗೆ ಬೇರೊಂದು ಸಂಬಂಧವಿದೆ ಎಂದು ನಾನು ಹೇಳುತ್ತಿಲ್ಲ. ಮನೆಗೆ ಬಂದಾಗ ಅವರು ವಾಟ್ಸಾಪ್ , ಫೇಸ್ ಬುಕ್,  ಟಿ.ವಿಯಲ್ಲಿ ಮುಳುಗಿರುತ್ತಾರೆ. ನಾನೇದರೂ ಮಾತನಾಡಿ ಎಂದರೆ, ನಮ್ಮಿಬ್ಬರ ಮಧ್ಯೆ ಮಾತೇ ಇರುವುದಿಲ್ಲ. ಇದರ ಬಗ್ಗೆ ಕೇಳಿದರೆ ಏನು ಮಾತನಾಡುವುದಿಲ್ಲ…? ಜತೆಗೇ ಇದ್ದೆವೆಲ್ಲಾ ಎಂದು ಉಡಾಫೆ ಮಾತನಾಡುತ್ತಾರೆ. ಅಗ ನನಗೆ ಏಲ್ಲಿಲ್ಲದ ಸಿಟ್ಟು ಒತ್ತರಿಸಿಕೊಂಡು ಬರುತ್ತದೆ. ಇದೆ ಕಾರಣಕ್ಕೆ ನಮ್ಮಿಬ್ಬರ ಮಧ್ಯೆ ಆಗಾಗ ದೊಡ್ಡ ಜಗಳವೇ ನಡೆಯುತ್ತದೆ. ಮಾತಿಗಿಂತ ಮೌನವೇ ಜಾಸ್ತಿಯಾಗಿದೆ. ಅವರ ಈ ಗುಣವೇ ನನಗೆ ಹಿಡಿಸಿಲ್ಲ. ಇವತ್ತು ಸರಿ ಹೋಗ್ತಾರೆ, ನಾಳೆ ಸರಿ ಹೋಗ್ತಾರೆ ಎಂದು ನಾನು ಕಾದೆ, ಆದರೆ ಅವರು ಮತ್ತೆದೇ ಹಳೆ ಚಾಳಿ ಶುರುಮಾಡಿಕೊಂಡಿದ್ದಾರೆ. ನನ್ನ ಗೆಳತಿಯರೆಲ್ಲಾ ಅವರವರ ಗಂಡನ ಜತೆ ಸುಖವಾಗಿ ಇದ್ದಾರೆ. ನನ್ನ ಬದುಕು ಈ ರೀತಿ ಆಗಿದೆ. ಮದುವೆ ಆಗಿಯೇ ತಪ್ಪು ಮಾಡಿದ್ದೆ ಅನಿಸುತ್ತೆ. ಇನ್ನು ಹೆಚ್ಚು ದಿನ ಈ ಉಸಿರುಗಟ್ಟಿಸುವ ವಾತಾವರಣದಲ್ಲಿದ್ದರೆ ಕಷ್ಟ ಎಂದು ದೂರ ಆಗುವ ನಿರ್ಧಾರ ತೆಗೆದುಕೊಂಡು ಬಿಟ್ಟೆ. ನನಗೂ ಬದುಕುವ ದಾರಿ ಗೊತ್ತು. ಗಂಡನಿಲ್ಲದೇ ಹೆಣ್ಣು ಬಾಳಬಲ್ಲಳು, ಬೆಂಗಳೂರಿನಲ್ಲಿ ಕಂಪೆನಿಗಳಿಗೇನೂ ಬರವೇ…? ಯಾವುದಾದರೊಂದು ಕೆಲಸ ಸಿಕ್ಕೆ ಸಿಗುತ್ತದೆ ಎಂದು ಬಿಟ್ಟಳು. ಅವಳು ಹೇಳುತ್ತಿದ್ದ ಕಾರಣ ಯಾವುದು ನನಗೆ ಪ್ರಿಯವೆನಿಸಿರಲಿಲ್ಲ. ಅವಳ ಬದುಕು ಅವಳದು ಎಂದು ಸುಮ್ಮನಾದೆ. ಬೆಂಗಳೂರಿನಲ್ಲಿ ಕೆಲಸ ಸಿಗಬಹುದು! ಆದರೆ ಮತ್ತದೇ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಾ…?

ತಂತ್ರಜ್ಞಾನ, ಜಾಗತಿಕರಣ ನಮ್ಮನ್ನು ವಿಚಾರಶೂನ್ಯರನ್ನಾಗಿ ಮಾಡಿದೆಯಾ…? ಈ ಸಂಬಂಧಗಳು ಇಷ್ಟು ಸಡಿಲವಾಗುವುದಕ್ಕೆ ಮುಖ್ಯ ಕಾರಣವಾದರೂ ಏನು…? ನಮ್ಮಲ್ಲಿನ ಸಂಸ್ಕಾರದ ಕೊರತೆನಾ…? ತಾಳ್ಮೆ ಇಲ್ಲದಿರುವಿಕೆಯ ಅಥವಾ ಅಹಂಕಾರನಾ…? ‘ತಣ್ಣಿರನ್ನಾದರೂ ತಣಿಸಿ ಕುಡಿಯಬೇಕು’ ಎಂದು ಹಿರಿರು ಹೇಳುತ್ತಾರೆ. ಆದರೆ ಇದಕ್ಕೆಲ್ಲಾ ನಮ್ಮ ಬಳಿ ಸಮಯವೆಲ್ಲಿದೇ…? ಎಲ್ಲವೂ ಫಾಸ್ಟ್ ಆಗಿ ಆಗಬೇಕು ಎಂಬ ಹಪಹಪಿಗೆ ಬಿದ್ದಿರುತ್ತೇವೆ. ನಮ್ಮ ಬದುಕನ್ನು ಇನ್ಯಾರ್ದೋ ಬದುಕಿಗೆ ಹೋಲಿಸಿಕೊಂಡು ಬಾಳುತ್ತವೆ. ಅರೆ… ಅವರೆಷ್ಟು ಚೆನ್ನಾಗಿದ್ದಾರೆ. ಮೊನ್ನೆಯಷ್ಟೆ ಲಂಡನ್ ಟ್ರಿಪ್ ಗೆ ಹೋಗಿ ಬಂದಿದ್ದಾರೆ. ಅವಳ ಗಂಡ ಅವಳ ಹುಟ್ಟುಹಬ್ಬಕ್ಕೆ ನೆಕ್ಲೆಸ್ ಕೊಡಿಸಿದ್ದಾರೆ. ನೀವು ಇದ್ದೀರಿ ಮದುವೆಯಾಗಿ ಇಷ್ಟು ವರ್ಷ ಆದರೂ ಏನೂ ಕೊಡಿಸಿಲ್ಲ. ನನಗೂ ಸಾಕಾಗಿ ಹೋಗಿದೆ ಎಂದು ಚುಚ್ಚು ಮಾತುಗಳ ಮಳೆಗರೆಯುತ್ತೇವೆ. ಇನ್ಯಾರದ್ದೋ ಜೀವನದೊಂದಿಗೆ ನಮ್ಮ ಜೀವನವನ್ನು ಹೋಲಿಸಿಕೊಂಡಾಗಲೇ ಸಂಸಾರದಲ್ಲೊಂದು ಅಸಮಾಧಾನ ಮೆಲ್ಲಗೆ ಹೊಗೆಯಾಡುವುದಕ್ಕೆ ಶುರುವಾಗುತ್ತದೆ. ಹೊಗೆ ಬೆಂಕಿಯ ಜ್ವಾಲೆಯಾಗಿ ಮನಸ್ಸಿನ ನೆಮ್ಮದಿಯನ್ನು ಅಪೋಶನ ತೆಗದುಕೊಳ್ಳುತ್ತದೆ. ಅದರೂ ನಮ್ಮೊಳಗಿನ ಹೋಲಿಕೆ ಮಾಡುವ ಗುಣ ಮಾತ್ರ ಕಡಿಮೆಯಾಗಲ್ಲ. ಇರುವುದೆಲ್ಲವ ಬಿಟ್ಟು ಇರದದರೆಡೆಗೆ ಮನಸ್ಸು ತುಡಿಯುತ್ತಲೆ ಇರುತ್ತದೆ.

ನಮ್ಮಲ್ಲಿ ಈಗ ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಹೊಂದಾಣಿಕೆ. ನಾನ್ಯಾಕೆ ನೀ ಹೇಳಿದ್ದು ಕೇಳಬೇಕು ಎಂಬ ಭಾವ. ಇದೇ ಸಂಸಾರದ ಒಡಕಿಗೆ ಕಾರಣವಾಗುತ್ತದೆ. ಒಬ್ಬರ ಮಾತನ್ನು ಇನ್ನೊಬ್ಬರು ಗೌರವಿಸುವ ಗುಣ ಬೆಳೆಸಿಕೊಂಡರೆ ಬದುಕು ಸುಂದರಮಯವಾಗುತ್ತದೆ. ಕೈಯಲ್ಲಿರುವ ಎಲ್ಲ ಬೆರಳುಗಳು ಹೇಗೆ ಸಮನಾಗಿರುವುದಿಲ್ಲವೋ ಹಾಗೇ ಗಂಡ ಹೆಂಡಿರ ಮಧ್ಯೆ ಎಲ್ಲ ಭಾವನೆಗಳು ಸಮನಾಗಿರುವುದಿಲ್ಲ. ಒಬ್ಬರು ಇನ್ನೊಬ್ಬರ ಭಾವನೆಯನ್ನು ಗೌರವಿಸುವ, ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕಿದೆ. 

ಪ್ರೀತಿ ಹಾಗೂ ಸರಸದ ಮಾತಿಗಿಂತ ಅಹಂಕಾರ ಹಾಗೂ ಚುಚ್ಚು ಮಾತುಗಳೇ ಸಂಸಾರದದಲ್ಲಿ ಹೆಚ್ಚಾದರೆ ನಮ್ಮ ಕೀಳು ಮಾತಿನಿಂದ ನಾವೇ  ಬೆಲೆ ತೆರಬೇಕಾಗುತ್ತದೆ. ಕೆಲಸ ಮಾಡಿ ಬಂದಿರುವ ಗಂಡನಿಗೆ ನೂರೊಂದು ಒತ್ತಡವಿದ್ದಿರಬಹುದು. ಹೆಣ್ಣು ಸ್ವಲ್ಪ ಅರಿತು ಬಾಳಿದರೆ ಜೀವನ ಹೊಸ ದೊಂದು ತಿರುವು ತೆಗೆದುಕೊಳ್ಳುತ್ತದೆ. ಹಾಗೇ ಹೆಣ್ಣು ಮನೆಯಲ್ಲಿದ್ದಾಳೆ ಎಂದ ಮಾತ್ರಕ್ಕೆ ಅವಳದ್ದು ತಾತ್ಸಾರದ ಬದುಕಲ್ಲ. ಹೊತ್ತು ಹೊತ್ತಿಗೆ ತುತ್ತುಬೇಯಿಸಿ ಹಾಕಿ ಗಂಡ, ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಸುಲಭವೆಂದವರು ಯಾರು?

ನಿನ್ನನ್ನು ಕಟ್ಟಿಕೊಂಡು ನಾನೇನು ಸುಖ ಪಟ್ಟೆ, ನನಗೆ ಬೇಕಾದಷ್ಟು ಸಂಬಂಧ ಬಂದಿತ್ತು. ನಿನ್ನ ಕಟ್ಟಿಕೊಂಡು ಹೀಗಾದೆ ಎಂದು ಗಂಡ ಅಥವಾ ಹೆಂಡತಿ ಹೇಳುತ್ತಿದ್ದರೆ ಆ ಸಂಸಾರದಲ್ಲಿ ಬಿರುಗಾಳಿಯೇ ಏಳುತ್ತದೆ. ಇನ್ನು ನಮ್ಮ ಜಗಳವನ್ನು ಮಕ್ಕಳು ನೋಡುತ್ತಿದ್ದರೆ ಅದು ಅವರ ಮುಗ್ಧ ಮನಸ್ಸಿನ ಮೇಲೂ ಪ್ರಭಾವ ಬೀರುತ್ತದೆ. ನಾನು ನಿಮ್ಮಷ್ಟೇ ದುಡಿಯುತ್ತೇನೆ ಎಂಬ ಅಹಂಕಾರ ಹೆಣ್ಣಿಗೂ ಬೇಡ. ಇಬ್ಬರು ದುಡಿಯುವುದು ಸಂಸಾರಕ್ಕಾಗಿ ಹಾಗೂ ಅವರಿಬ್ಬರ ಮುಂದಿನ ಭವಿಷ್ಯಕ್ಕಾಗಿ ಎಂಬ ಸಣ್ಣದೊಂದು ಅರಿವಿದ್ದರೆ ಅಹಂಕಾರ ತಲೆ ಎತ್ತುವುದಿಲ್ಲ.ಸಂಸಾರದಲ್ಲಿ ಹೆಣ್ಣು ಕನಿಷ್ಠ ಅಲ್ಲ, ಗಂಡು ಗರಿಷ್ಠ ಅಲ್ಲ. ಇಬ್ಬರೂ ಸಂಸಾರದ ಕಣ್ಣು.

ಇನ್ನು ಗಂಡನಾಗಲಿ ಹೆಂಡತಿಯಾಗಲಿ  ಐದು ನಿಮಿಷ ಕುಳಿತು ಆ ದಿನದ ಆಗುಹೋಗುಗಳ ಕುರಿತು ಮಾತನಾಡುವಷ್ಟು ಸಮಯವನ್ನು ಹೊಂದಿಸಿಕೊಳ್ಳಬೇಕು. ಆಗ ಇಬ್ಬರ ಮನಸ್ಸಿಗೂ ಖುಷಿಯಾಗುತ್ತದೆ. ಒಬ್ಬರು ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳುವಷ್ಟು ತಾಳ್ಮೆ ಇರಬೇಕು.

ಹೆಂಡತಿಯ ತಪ್ಪನ್ನು ಗಂಡ ತನ್ನ ಮನೆಯವರ ಬಳಿ ಮಾತನಾಡುವುದು ಇನ್ನು ಗಂಡನ ತಪ್ಪನ್ನು ಹೆಂಡತಿ ತನ್ನ ತಾಯಿಯ ಬಳಿ ಹೇಳುವುದನ್ನು ಮಾಡಬಾರದು. ನಮ್ಮ ಬದುಕು ನಮ್ಮದು. ಇನ್ಯಾರೋ ಅಭಿಪ್ರಾಯ ನಮ್ಮೊಳಗಿನ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಗಂಡನ ಬಗ್ಗೆ ಅಥವಾ ಹೆಂಡತಿಯ ಬಗ್ಗೆಯಾಗಲಿ ಇನ್ನೊಬ್ಬರ ಬಳಿ ಚಾಡಿ ಹೇಳಬಾರದು. ಇದರಿಂದ ನಾವೇ ನಗೆಪಾಟೀಲಿಗೆ ಈಡಾಗಬೇಕಾಗುತ್ತದೆ. ನಮ್ಮ ಗಂಡ ಅಥವಾ ಹೆಂಡತಿಯ ಬಗ್ಗೆ ನಾವೇ ಇನ್ನೊಬ್ಬರರಿಗೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಟ್ಟ ಹಾಗೇ ಆಗುತ್ತದೆ.

ವ್ಯಾಟ್ಸಾಫ್, ಮೊಬೈಲ್ ಡಿ.ಪಿಯಲ್ಲಿ ಫೋಟೊ ಹಾಕಿ ಮಿಸ್ ಯೂ, ಲವ್ ಯೂ ಅನ್ನುವುದಕ್ಕಿಂತ ನೇರಾ ನೇರವಾಗಿ ಹೇಳುವುದರಿಂದ ಸಂಬಂಧದ ಗಾಢತೆ, ಭಾಂದವ್ಯ ಮತ್ತಷ್ಟು ಹೆಚ್ಚುತ್ತದೆ. ನಮ್ಮ ಸಂಬಂಧ ತೋರಿಕೆಯಾದರೆ ಅದು ಬೇಗ ಬೆಲೆ ಕಳೆದುಕೊಳ್ಳುತ್ತದೆ.  ಇಬ್ಬರೂ ಕೆಲಸ ಮಾಡುತ್ತಿದ್ದರೆ, ಮನೆಕೆಲಸದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವ ಇಟ್ಟುಕೊಳ್ಳಬೇಕು. ಆಯಾಸವೆಂಬುದು ಹೆಣ್ಣಿಗೆ ಕಡಿಮೆ, ಗಂಡಿಗೆ ಜಾಸ್ತಿ ಎಂದು ಇಲ್ಲ.

ಒಂದು ಹೆಣ್ಣಿಗೊಂದು ಗಂಡು, ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದ ಕನಸು ಕಂಡು, ಮಾತಿಗೊಲಿಯದಮೃತವುಂಡು ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೆ ಎಂಬ ಕವಿತೆಯಂತೆ ಬದುಕು ಸುಂದರಮಯವಾಗಿರಲಿ.

Leave a Reply

Your email address will not be published. Required fields are marked *