Apartment Buying tips: ಅಪಾರ್ಟ್‌ಮೆಂಟ್‌ ಖರೀದಿಸುವಾಗ ಮೇಲಿನ ಮತ್ತು ಕೆಳಗಿನ ಮಹಡಿಗಳಲ್ಲಿ ಖರೀದಿಗೆ ಯಾವುದು ಸೂಕ್ತ?

By | 08/03/2021

ಅಪಾರ್ಟ್‌ಮೆಂಟ್‌ ಖರೀದಿಸುವಾಗ ನೀವು ಮೇಲಿನ ಮಹಡಿ ಅಥವಾ ಕೆಳಗಿನ ಮಹಡಿಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಇವೆರಡರಲ್ಲಿಯೂ ತನ್ನದೇ ಆದ ಗುಣ ಮತ್ತು ಅವಗುಣಗಳಿವೆ.

ಮುಂಬಯಿ ನಿವಾಸಿ ನೇಹಾ ವಾಸನಿಯು ಅಪಾರ್ಟ್‌ಮೆಂಟ್‌ನಲ್ಲಿ 26ನೇ ಮಹಡಿಯಲ್ಲಿ ಮನೆ ಖರೀದಿಸಿದ್ದರು. ಲಾಕ್‌ಡೌನ್‌ ಸಮಯದಲ್ಲಿ ವರ್ಕ್‌ ಫ್ರಮ್‌ ಹೋಮ್‌ನಿಂದಾಗಿ ಮನೆಯಲ್ಲಿಯೇ ಬಾಲ್ಕನಿಯಲ್ಲಿ ಕುಳಿತು ಹಾಯಾಗಿ ಹೊರಗಡೆ ನೋಡುತ್ತ ಕೆಲಸ ಮಾಡುತ್ತಿದ್ದರು. ‘ಮೇಲ್ಮಡಿಯ ವಾಸಿಯಾಗಿ ನನಗೆ ನಗರದ ಅದ್ಭುತ ನೋಟ ದೊರಕಿದೆ. ಮಾಲಿನ್ಯದ ತೊಂದರೆಯೂ ಇಲ್ಲ. ನೈಸರ್ಗಿಕ ಬೆಳಕು ಮತ್ತು ಗಾಳಿ ಯಥೇಚ್ಛವಾಗಿರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಆರತಿ ಕೃಷ್ಣ ಎಂಬ ಕಂಪ್ಯೂಟರ್‌ ಎಂಜಿನಿಯರ್‌ ಗ್ರೌಂಡ್‌ ಫ್ಲೋರ್‌ನಲ್ಲಿರುವ ಮನೆ ಖರೀದಿಸಿದ್ದಾರೆ. ‘ನಮಗೆ ಗಾರ್ಡನ್‌ ಹತ್ತಿರದಲ್ಲಿದೆ. ಬೇಸಿಗೆಯಲ್ಲಿ ನಮ್ಮ ಮನೆ ಕೂಲ್‌ ಆಗಿರುತ್ತದೆ. ಮೆಟ್ಟಿಲು ಹತ್ತುವ ಕಷ್ಟವಿಲ್ಲ’ ಎಂದು ಆರತಿ ಹೇಳುತ್ತಾರೆ. ಇವರಿಬ್ಬರಿಗೂ ಮೇಲಿನ ಅಥವಾ ಕೆಳಗಿನ ಮಹಡಿಯಲ್ಲಿ ತನ್ನದೇ ಆದ ಒಳಿತುಗಳಿವೆ. ಹಾಗಾದರೆ, ಮೇಲಿನ ಮಹಡಿ ಅಥವಾ ಕೆಳಗಿನ ಮಹಡಿಗಳಲ್ಲಿ ಯಾವುದು ಬೆಸ್ಟ್‌? ಎಂದು ನಿರ್ಧರಿಸುವುದು ಹೇಗೆ?

  • ಸೇಫ್ಟಿ ವಿಷಯ: ಮೇಲಿನ ಮಹಡಿಗಳಿಗೆ ಹೋಲಿಸಿದರೆ ಕೆಳಹಂತದ ಮಹಡಿಗಳು ಹೆಚ್ಚು ಸುರಕ್ಷಿತವಲ್ಲ. ಹೊರಗಿನಿಂದ ಯಾರಾದರೂ ಬಂದು ಸುಲಭವಾಗಿ ಪ್ರವೇಶಿಸಬಹುದು ಎನ್ನುವುದು ಇದರ ಹಿಂದಿನ ಕಾರಣ. ಎಲ್ಲಾದರೂ ನೀವು ಕೆಳಮಹಡಿಯಲ್ಲಿ ಮನೆ ಖರೀದಿಸಬೇಕು ಎಂದಿದ್ದರೆ ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರೀಕ್ಷಿಸಿಕೊಳ್ಳಿ. ಕೆಲವೊಂದು ಡೆವಲಪರ್‌ಗಳು ಅತ್ಯುತ್ತಮವೆನಿಸುವ ಭದ್ರತಾ ವ್ಯವಸ್ಥೆಯನ್ನು ನೀಡಿರಬಹುದು. ಇಂತಹ ಫ್ಲ್ಯಾಟ್‌ಗಳಲ್ಲಿ ಕೆಲಮಹಡಿಗಳಲ್ಲಿ, ತಳಮಹಡಿಗಳಲ್ಲಿ ಇರಬಹುದು. ಆದರೆ, ಕೆಲವೊಂದು ಅಸುರಕ್ಷಿತ ಪ್ರದೇಶಗಳಲ್ಲಿ ಕಳ್ಳರು, ದರೋಡೆಕೋರರು ಅಥವಾ ಇನ್ಯಾವುದೋ ಕ್ರಿಮಿನಲ್‌ಗಳು ಸುಲಭವಾಗಿ ಒಳನುಗ್ಗುವಂತೆ ಇರುವ ಮಹಡಿಗಳು ಸುರಕ್ಷಿತವಲ್ಲ.
  • ಖಾಸಗಿತನ: ಕೆಳಗಿನ ಮಹಡಿಗಳಲ್ಲಿ ವಾಸಿಸುವವರಿಗೆ ನಿತ್ಯ ಬಿಲ್ಡಿಂಗ್‌ನ ಇತರರು ಎದುರಾಗುತ್ತ ಇರುತ್ತಾರೆ. ಇದರಿಂದ ನಿಮ್ಮ ಪ್ರೈವೇಸಿಗೆ ತೊಂದರೆಯಾಗುತ್ತದೆ ಎಂದಾದರೆ ಮೇಲಿನ ಮಹಡಿಗಳನ್ನು ಆಯ್ಕೆ ಮಾಡಿಕೊಳ್ಳಿ.
  • ಫೈರ್‌ ಸೇಫ್ಟಿ: ಹೆಚ್ಚು ಮೇಲಿನ ಮಹಡಿಗಳಲ್ಲಿ ನೀವು ವಾಸಿಸುವಾಗ ಕಳ್ಳಕಾಕರಿಂದ ನೀವು ಸುರಕ್ಷಿತವಾಗಿರಬಹುದು. ಆದರೆ, ಬೆಂಕಿ ಆಕಸ್ಮಿಕವಾದರೆ ಮೇಲಿನ ಮಹಡಿಗಳು ಹೆಚ್ಚು ಸುರಕ್ಷಿತವಲ್ಲ. ಮೇಲಿನ ಮಹಡಿಗಳನ್ನು ಆಯ್ಕೆ ಮಾಡಿಕೊಳ್ಳುವುದಾದರೆ ಅಪಾರ್ಟ್‌ಮೆಂಟ್‌ನ ಫಿಟ್ನೆಸ್‌ ಫಾರ್‌ ಆಕ್ಯುಪೆನ್ಸಿ ವಿವರಗಳನ್ನು ಪರಿಶೀಲಿಸಬೇಕು. ಸ್ಥಳೀಯ ಆಡಳಿತ ನೀಡಿದ ಆಕ್ಯುಪೆನ್ಸಿ ಸರ್ಟಿಫಿಕೇಟ್‌ (ಒಸಿ) ಪರಿಶೀಲಿಸಬೇಕು. ಅನುಮತಿ ನೀಡಿದ ಯೋಜನೆಗಳ ರೀತಿಯಲ್ಲಿಯೇ ಅಪಾರ್ಟ್‌ಮೆಂಟ್‌ ಕಟ್ಟಲಾಗಿದೆಯೇ ಮತ್ತು ಸ್ಥಳೀಯ ಕಾನೂನುಗಳ ಮಾನದಂಡಗಳನ್ನು ಪಾಲಿಸಲಾಗಿದೆಯೇಎಂದು ಆಕ್ಯುಪೆನ್ಸಿ ಸರ್ಟಿಫಿಕೇಟ್‌ ಮೂಲಕ ತಿಳಿದುಕೊಳ್ಳಬಹುದು. ಫ್ಲ್ಯಾಟ್‌ ಖರೀದಿಸಿದಾಗ ಒಸಿಯ ಒಂದು ಪ್ರತಿಯನ್ನು ಮನೆ ಖರೀದಿದಾರರು ಪಡೆಯಬೇಕು. ನೀವು ಆಕ್ಯುಪೆನ್ಸಿ ಸರ್ಟಿಫಿಕೇಟ್‌ ಮೂಲಕ ಅಗ್ನಿಶಾಮಕ ಇಲಾಖೆಯ ಸುರಕ್ಷತಾ ಮಾನದಂಡಗಳ ಪಾಲನೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದುಎಂದು ತಜ್ಞರು ಹೇಳುತ್ತಾರೆ. ಇದರೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೆಂಕಿ ನಂದಿಸುವ ಸಾಧನಗಳ ಲಭ್ಯತೆ ಇದೆಯೇ ತಿಳಿದುಕೊಳ್ಳಿ. ಜೊತೆಗೆ ಫೈರ್‌ ಎಕ್ಸಿಟ್‌ ದಾರಿಗಳು ಸುಲಭವಾಗಿ ಸಿಗುವಂತೆ ಅಥವಾ ಹತ್ತಿರದಲ್ಲಿ ಇದೆಯೇ ತಿಳಿದುಕೊಳ್ಳಿ. ಬೆಂಕಿ ಆಕಸ್ಮಿಕವಾದ ಸಂದರ್ಭದಲ್ಲಿ ರಕ್ಷಣೆ ಪಡೆಯುವುದು ಹೇಗೆ ಎಂಬ ಬೇಸಿಕ್‌ ಟ್ರೇನಿಂಗ್‌ ಪಡೆದುಕೊಳ್ಳಿ.
  • ಮಹಡಿಯಲ್ಲಿನ ವ್ಯತ್ಯಾಸಗಳು: ಕೆಲವೊಂದು ಬಾರಿ ನಿಗದಿತ ನಿರ್ಮಾಣ ಯೋಜನೆಗಳಿಗೆ ಬದಲಾಗಿ ಕೊನೆಯ ಮಹಡಿಗಳಲ್ಲಿ ಕಾನೂನುಬಾಹಿರವಾಗಿ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲಾಗಿರುತ್ತದೆ. ನೀವು ಕೊನೆಯ ಮಹಡಿಗಳಲ್ಲಿ ಮನೆ ಖರೀದಿಸುವುದಾದರೆ ಅಲ್ಲಿ ಅನುಮತಿ ನೀಡಿದ್ದಕ್ಕಿಂತ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲವೆನ್ನುವುದನ್ನು ಖಚಿತಪಡಿಸಿಕೊಳ್ಳಿ.
  • ಸುಂದರ ನೋಟ: ಅಪಾರ್ಟ್‌ಮೆಂಟ್‌ನಿಂದ ಹೊರಗಿನ ಸುಂದರ ನೋಟವನ್ನು ನೋಡಲು ಸಾಧ್ಯವಾಗುವುದು ಅತ್ಯಂತ ಅಗತ್ಯ. ಮೇಲಿನ ಮಹಡಿಗಳಿಂದ ಅತ್ಯುತ್ತಮ ವೀಕ್ಷಣೆ ಸಾಧ್ಯ. ನೀವು ಹೆಚ್ಚು ಹೆಚ್ಚು ಮೇಲಿನ ಮಹಡಿ ಬಯಸಿದರೆ ಅದಕ್ಕೆ ನೀವು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಇದನ್ನೂ ಗಮನದಲ್ಲಿಟ್ಟುಕೊಂಡು ಖರೀದಿ ಮಾಡಿ.
  • ಲಿಫ್ಟ್‌ಗಳ ಸಂಖ್ಯೆ ಮತ್ತು ಮೆಟ್ಟಿಲುಗಳು: ನೀವು ಮೇಲಿನ ಮಹಡಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅಲ್ಲಿ ಲಭ್ಯವಿರುವ ಮೆಟ್ಟಿಲುಗಳು ಮತ್ತು ಲಿಫ್ಟ್‌ಗಳ ಕುರಿತು ಗಮನ ನೀಡಿ. ಒಂದು ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಲಿಫ್ಟ್‌ ಇರುವುದಕ್ಕಿಂತ ಎರಡು ಅಥವಾ ಮೂರು ಲಿಫ್ಟ್‌ಗಳು ಇರುವುದು ಒಳ್ಳೆಯದು. ಎಲ್ಲಾದರೂ ಒಂದು ಲಿಫ್ಟ್‌ ಕಾರ್ಯನಿರ್ವಹಿಸದೆ ಇದ್ದರೆ ಪರಾರ‍ಯಯ ಲಿಫ್ಟ್‌ ಇರುವುದು ಉತ್ತಮ. ನಿಮ್ಮ ಕುಟುಂಬದಲ್ಲಿ ಮಕ್ಕಳು ಅಥವಾ ಹಿರಿಯರು ಇದ್ದರೆ ಸಮರ್ಪಕವಾಗಿರುವ ಲಿಫ್ಟ್‌ನ ಅವಶ್ಯಕತೆ ಹೆಚ್ಚು ಇರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಲಿಫ್ಟ್‌ ಸರಿ ಇಲ್ಲದೆ ಇರಬಹುದು ಅಥವಾ ಸರಿ ಇದ್ದರೂ ಹೆಚ್ಚು ಜನರು ಬಳಸುವಷ್ಟು ಸಮಯ ಇಲ್ಲದೆ ಇರಬಹುದು. ಇದಕ್ಕಾಗಿ ಲಿಫ್ಟ್‌ ಜೊತೆ ಸ್ಟೇರ್‌ಕೇಸ್‌ ಸಹ ಅವಶ್ಯ.
  • ಬೆಳಕು ಮತ್ತು ವಾತಾಯನ ವ್ಯವಸ್ಥೆ: ನೀವು ಎತ್ತರದ ಮಹಡಿಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಅತ್ಯುತ್ತಮ ವೀಕ್ಷಣೆ ಸಾಮರ್ಥ್ಯ‌ದ ಜೊತೆಗೆ ಅತ್ಯುತ್ತಮ ಬೆಳಕು ಮತ್ತು ಅತ್ಯುತ್ತಮ ವಾತಾಯನ ವ್ಯವಸ್ಥೆ ದೊರಕುತ್ತದೆ. ಗ್ರೌಂಡ್‌ ಮತ್ತು ಕೆಳಮಹಡಿಗಳಲ್ಲಿ ಸ್ಥಳೀಯ ಗದ್ದಲಗಳ ಜೊತೆಗೆ ಸೊಳ್ಳೆ, ಇಲಿಗಳ ಕಾಟವೂ ಇರುತ್ತದೆ. ಸೂರ್ಯನ ಬೆಳಕೂ ಸರಿಯಾಗಿ ಬರದೆ ಇರಬಹುದು.
  • ಖರೀದಿ ಉದ್ದೇಶ: ಎಲ್ಲಾದರೂ ನೀವು ಬಾಡಿಗೆಗೆ ನೀಡುವ ಉದ್ದೇಶದಿಂದ ಅಪಾರ್ಟ್‌ಮೆಂಟ್‌ ಖರೀದಿಸಿದ್ದರೆ ಕೆಳಮಹಡಿಗಳು ಹೆಚ್ಚು ಉತ್ತಮ. ಆದರೆ, ಕೆಲವೊಮ್ಮೆ ಬಾಡಿಗೆದಾರರು ಸಹ ಹೆಚ್ಚು ದರವಿದ್ದರೂ ಮೇಲಿನ ಮಹಡಿಗಳನ್ನೇ ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಬೆಂಗಳೂರಿನಂತಹ ನಗರದ ವಾಯುಮಾಲಿನ್ಯವೂ ಕಾರಣ ಎಂದು ತಜ್ಞರು ಹೇಳುತ್ತಾರೆ.
  • ಸಂಪರ್ಕ, ಸವೀರ್‍ಸ್‌ ಇತ್ಯಾದಿ: ಸುರಕ್ಷತೆಯ ದೃಷ್ಟಿಯಿಂದ ಅಪಾರ್ಟ್‌ಮೆಂಟ್‌ನಲ್ಲಿ ಸಿಸಿ ಟೀವಿ ಅಳವಡಿಸಿದ್ದಾರೆಯೇ ಎಂದು ಪರಿಶೀಲಿಸಬೇಕು. ಯಾವುದೇ ಮಹಡಿ ಆಗಿದ್ದರೂ ಅಲ್ಲಿ ಕಾರಿಡಾರ್‌ ವಿಶಾಲವಾಗಿದೆಯೇ ಎಂದು ಗಮನಿಸಿ.
  • ನೆಟ್‌ವರ್ಕ್‌ ಕನೆಕ್ಷನ್‌: ಬಹುಮಹಡಿ ಕಟ್ಟಡಗಳಲ್ಲಿ ನಿಮಗೆ ಗೊತ್ತಿಲ್ಲದೆ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಮಹಡಿಯ ಎತ್ತರ ಹೆಚ್ಚಿದಂತೆ ಅಲ್ಲಿಗೆ ಮೊಬೈಲ್‌ ನೆಟ್‌ವರ್ಕ್‌ ಕನೆಕ್ಟ್ ಆಗದೆಯೂ ಇರಬಹುದು. ಹೀಗಾಗಿ, ಮೇಲಿನ ಮಹಡಿಯಲ್ಲಿ ಮೊಬೈಲ್‌ ನೆಟ್‌ವರ್ಕ್‌ ಲಭ್ಯತೆ ಇರುವುದನ್ನು ಖಚಿತಪಡಿಸಿಕೊಳ್ಳಿ.
  • ಕೂಲ್‌ ಮತ್ತು ಬಿಸಿ: ಮೇಲಿನ ಮಹಡಿಗಳು ಸಾಮಾನ್ಯವಾಗಿ ಹೆಚ್ಚು ಬಿಸಿಯಾಗಿರುತ್ತವೆ. ಕೆಳಮಹಡಿಗಳು ಹೆಚ್ಚು ಕೂಲ್‌ ಆಗಿರುತ್ತವೆ. ಬೇಸಿಗೆಯಲ್ಲಿ ಫ್ಯಾನ್‌, ಕೂಲರ್‌ ಇತ್ಯಾದಿಗಳ ಬಳಕೆಯು ಮೇಲಿನ ಮಹಡಿಗಳಲ್ಲಿ ಅನಿವಾರ‍್ಯವಾಗಿಬಿಡಬಹುದು. ಇದರಿಂದ ಹೆಚ್ಚು ವಿದ್ಯುತ್‌ ಬಿಲ್‌ ಸಹ ಬರಬಹುದು.

Leave a Reply

Your email address will not be published. Required fields are marked *