ಕರಿಯರ್‌ ಗೈಡ್:‌ ಲಾಯರ್ ಆಗುವುದು ಹೇಗೆ?

ಕೋರ್ಟ್‍ನಲ್ಲಿ ಕಪ್ಪು ಕೋಟ್ ಧರಿಸಿ ವಾದ- ಪ್ರತಿವಾದ ಮಾಡುವ, ಅಪರಾಧಿಗಳಿಗೆ ಶಿಕ್ಷೆ ನೀಡಿಸುವ, ನಿರಾಪರಾಧಿಗಳನ್ನು ಪಾರುಮಾಡುವ ವಕೀಲರನ್ನು ಕಂಡರೆ ನಿಮಗೆ ಗೌರವ ಇರಬಹುದು. ನಿಮ್ಮ ಊರಿನಲ್ಲಿ, ಬಂಧುಬಳಗದಲ್ಲಿ ಅಥವಾ ಟೀವಿಗಳಲ್ಲಿ ಕಾಣುವ ಅಥವಾ ಕೋರ್ಟ್‍ಗಳಲ್ಲಿ ಕಾಣಿಸುವ ವಕೀಲರನ್ನು ಕಂಡಾಗ ನಾನೂ ಭವಿಷ್ಯದಲ್ಲಿ ಲಾಯರ್ ಆಗಬೇಕು ಎಂದು ನೀವು ಕನಸು ಕಂಡಿರಬಹುದು. ದೇಶದ ಪ್ರಮುಖ ಅಂಗಗಳಲ್ಲಿ ಒಂದಾದ ನ್ಯಾಯಾಂಗದಲ್ಲಿ ಕಾರ್ಯನಿರ್ವಹಿಸಲು ಕಾನೂನು ಕ್ಷೇತ್ರವು ಒಂದು ಪ್ರಮುಖ ಆಯ್ಕೆಯಾಗಿದೆ. ವಕೀಲರಾಗಿ, ಜಡ್ಜ್ ಆಗಿ ಮುಂದೊಂದು ದಿನ ನೀವು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯೂ ಆಗಿ ಕರ್ನಾಟಕಕ್ಕೆ ಹೆಸರು ತರಬಹುದು. ನಿಮ್ಮ ಭವಿಷ್ಯವನ್ನು ಈ ರೀತಿ ಬದಲಾಯಿಸಲು ಇಚ್ಚಿಸಿದರೆ ಮೊದಲಿಗೆ ನೀವು ಕಾನೂನು ಪದವಿಯನ್ನು ಅಧ್ಯಯನ ಮಾಡಬೇಕು.

“ಉತ್ತಮ ವಕೀಲರಿಗೆ ಕಾನೂನು ಬಗ್ಗೆ ತಿಳಿದಿರುತ್ತದೆ. ಅತ್ಯುತ್ತಮ ವಕೀಲರಿಗೆ ನ್ಯಾಯಮೂರ್ತಿ ಬಗ್ಗೆ ಅರಿವಿರುತ್ತದೆ”

ಅನಾಮಿಕ

ಕಾನೂನು ಪದವಿ ಅಧ್ಯಯನ ನಡೆಸಲು ಎರಡು ಆಯ್ಕೆಗಳಿವೆ. ನೀವು ಪಿಯುಸಿ ಬಳಿಕ ಐದು ವರ್ಷದ ಎಲ್‍ಎಲ್‍ಬಿ ಕೋರ್ಸ್‍ಗೆ ಸೇರಬಹುದು ಅಥವಾ ಪದವಿ ಮುಗಿಸಿ (3ವರ್ಷ) ಎಲ್‍ಎಲ್‍ಬಿ ಕೋರ್ಸ್ ಮಾಡಬಹುದು. ಎಲ್‍ಎಲ್‍ಬಿ ನಂತರ ಎಲ್‍ಎಲ್‍ಎಂನಂತಹ ಉನ್ನತ ಶಿಕ್ಷಣವನ್ನು ಪಡೆಯಬಹುದು. ಎಲ್‍ಎಲ್‍ಬಿ ಹಂತದಲ್ಲಿಯೇ ಕಾನೂನಿಗೆ ಸಂಬಂಧಪಟ್ಟ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿರಿ. ಪ್ರತಿನಿತ್ಯ ಕಾನೂನುಲೋಕದಲ್ಲಿ ನಡೆಯುವ ವಿದ್ಯಮಾನಗಳ ಕುರಿತು ಗಮನಹರಿಸಿರಿ. ಪ್ರತಿದಿನ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನೀಡುವ ವಿಶೇಷ ತೀರ್ಪುಗಳನ್ನು ಗಮನಿಸಿರಿ.

ಮೂರು ವರ್ಷದ ಕಾನೂನು ಪದವಿಯಲ್ಲಿ ಕ್ರಿಮಿನಲ್ ಲಾ, ಜ್ಯೂರಿಸ್‍ಪ್ರುಡೆನ್ಸ್, ಬಿಸ್ನೆಸ್ ಲಾ, ಇಂಟಲೆಕ್ಚವಲ್ ಪ್ರಾಪರ್ಟಿ ಲಾ ಇತ್ಯಾದಿಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ನೀವು ಪದವಿಯಲ್ಲಿ ಬಿಎ ಅಥವಾ ಬಿಬಿಎ ಓದಿರುವಿರೋ ಎಂಬ ಆಧಾರದಲ್ಲಿ ವಿಷಯಗಳನ್ನು ಓದಬೇಕಾಗುತ್ತದೆ. ನೀವು 5 ವರ್ಷದ ಕೋರ್ಸ್ ಆಯ್ಕೆ ಮಾಡಿಕೊಡರೆ ಕಾಮರ್ಸ್ ಸಂಬಂಧಿತ ವಿಷಯಗಳು ಅಥವಾ ಕಲಾ ವಿಭಾಗಕ್ಕೆ ಸಂಬಂಧಿತ ವಿಷಯಗಳಾದ ಸಮಾಜಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ ಇತ್ಯಾದಿಗಳನ್ನು ಕಾನೂನು ವಿಷಯಗಳೊಂದಿಗೆ ಅಧ್ಯಯನ ಮಾಡಬೇಕಾಗುತ್ತದೆ.

“ಕಾನೂನು ಪದವಿ ಉತ್ತೀರ್ಣರಾದ ನಂತರ ರಾಜ್ಯದ ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ವಕೀಲಿ ವೃತ್ತಿಗೆ ವ್ಯಕ್ತಿ ಸೂಕ್ತರಾಗಿದ್ದಾರೆಯೇ ಎಂದು ತಿಳಿಯಲು ಔಪಚಾರಿಕ ಸಂದರ್ಶನವನ್ನೂ ನಡೆಸಲಾಗುತ್ತದೆ. ಸುಮಾರು ಹತ್ತು ವರ್ಷಗಳ ಹಿಂದೆ ಇಷ್ಟು ಪ್ರಕ್ರಿಯೆ ಮುಗಿದ ಬಳಿಕ ವಕೀಲಿ ವೃತ್ತಿ ಆರಂಭಿಸಬಹುದಿತ್ತು. ವಕಾಲತಿಗೆ ಸಹಿ ಹಾಕಬಹುದಿತ್ತು. ಆದರೆ, ಈಗ ಆಲ್ ಇಂಡಿಯಾ ಬಾರ್ ಕೌನ್ಸಿಲ್ ಎಗ್ಸಾಂ ಬರೆದು ಉತ್ತೀರ್ಣರಾಗಬೇಕು. ಇಷ್ಟಾದ ಬಳಿಕ ನೀವು ಅಧಿಕೃತಕವಾಗಿ ವಕೀಲರಾಗಬಹುದು. ಕೆಲವೊಂದು ರಾಜ್ಯಗಳಲ್ಲಿ ಅಭ್ಯರ್ಥಿಯ ವಿರುದ್ಧ ಯಾವುದಾದರೂ ಪೊಲೀಸ್ ಪ್ರಕರಣಗಳು ಇರುವುದೇ ಎಂದು ತಿಳಿಯಲು ಪೊಲೀಸ್ ದೃಢೀಕರಣವೂ ನಡೆಯುತ್ತದೆ. ಕರ್ನಾಟಕಕ್ಕೆ ಸದ್ಯ ಈ ವಿಧಾನ ಬಂದಿಲ್ಲ. ಇಷ್ಟು ಪ್ರಕ್ರಿಯೆ ಮುಗಿದ ಬಳಿಕ ನೀವು ಯಾವುದೇ ರಾಜ್ಯದಲ್ಲಿಯೂ ವಕೀಲ ವೃತ್ತಿ ಮಾಡಬಹುದು”

ಪದವಿ ಮುಗಿದ ಬಳಿಕ ಈಗಾಗಲೇ ವಕೀಲಿ ವೃತ್ತಿಯಲ್ಲಿ ಸಾಕಷ್ಟು ಹೆಸರುಮಾಡಿರುವ ಹಿರಿಯ ವಕೀಲರ ಬಳಿ ಜೂನಿಯರ್ ಲಾಯರ್ ಆಗಿ ಸುಮಾರು 5-7 ವರ್ಷ ಕಾರ್ಯನಿರ್ವಹಿಸಿ. ನೀವು ಕಾನೂನು ಪದವಿಯಲ್ಲಿ ಓದಿರುವುದಕ್ಕಿಂತ ಹಲವು ಪಟ್ಟು ಜ್ಞಾನ ದೊರಕುತ್ತದೆ. ಮುಖ್ಯವಾಗಿ ಪ್ರ್ಯಾಕ್ಟಿಕಲ್ ಜ್ಞಾನವನ್ನು ಇಲ್ಲಿ ಪಡೆಯಬಹುದು. ಪ್ರತಿನಿತ್ಯ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸುವುದು, ಕಕ್ಷಿದಾರರನ್ನು ಭೇಟಿಯಾಗುವುದು ಇತ್ಯಾದಿಗಳನ್ನು ಮಾಡಬೇಕಾಗುತ್ತದೆ. ಮುಖ್ಯವಾಗಿ ಕೋರ್ಟ್‍ನಲ್ಲಿ ಯಾವ ವಕೀಲರು ಹೇಗೆ ವಾದ ಮಾಡುತ್ತಾರೆ? ಯಾರ ವಾದ-ಪ್ರತಿವಾದ ಪರಿಣಾಮಕಾರಿಯಾಗಿದೆ? ಯಾವ ರೀತಿ ವಾದ ಮಾಡಬಾರದು? ಜಡ್ಜ್ ಅವರೊಂದಿಗೆ ಹೇಗೆ ವರ್ತಿಸಬೇಕು? ಕಕ್ಷಿದಾರರೊಂದಿಗೆ ಹೇಗೆ ವ್ಯವಹರಿಸಬೇಕು? ಅತ್ಯುತ್ತಮ ಸಾಕ್ಷಿ ಕಲೆಹಾಕುವುದು ಹೇಗೆ? ಒಂದು ಪ್ರಕರಣಕ್ಕೆ ಪೂರಕವಾದ ಇತರೆ ಪ್ರಕರಣಗಳ ತೀರ್ಪುಗಳ ಅಧ್ಯಯನ ಮಾಡುವಿಕೆ ಸೇರಿದಂತೆ ಈ ಹಂತದಲ್ಲಿ ನೀವು ಸಾಕಷ್ಟು ವಿಷಯಗಳನ್ನು ಕಲಿಯಬಹುದು.

ನೆನಪಿಡಿ, ಅಪರಾಧಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಲಾ ಓದಿರುವವರಿಗೆ ಬೇಡಿಕೆ ಇರುವುದು ನಿಜ. ಆದರೆ, ದೇಶದಲ್ಲಿ ಇಂದು ಸಾಕಷ್ಟು ವಕೀಲರು ಇದ್ದಾರೆ. ಲಾ ಕಾಲೇಜುಗಳ ಸಂಖ್ಯೆಯೂ ಹೆಚ್ಚಿದೆ. ಇಲ್ಲಿ ಹೆಚ್ಚು ಪ್ರತಿಭೆ ಇರುವವರು ಮಾತ್ರ ಉನ್ನತ ಹಂತ ತಲುಪಲು ಸಾಧ್ಯವಾಗುತ್ತದೆ. ಹೀಗಾಗಿ ಪದವಿ ಮುಗಿಸಿದ ಬಳಿಕ ಸಾಕಷ್ಟು ಹೆಸರುಮಾಡಿರುವ, ನಿಮಗೆ ಕಲಿಯಲು ಹೆಚ್ಚು ಅವಕಾಶ ಒದಗಿಸುವ ಹಿರಿಯ ವಕೀಲರ ಬಳಿ ಪ್ರಾಕ್ಟೀಸ್ ಮಾಡಿರಿ.

ಸುಮಾರು 5-7 ವರ್ಷ ಜೂನಿಯರ್ ಆಗಿ ಕಾರ್ಯನಿರ್ವಹಿಸಿದ ಬಳಿಕ ನೀವು ಸ್ವಂತವಾಗಿ ವಕೀಲರಾಗಿ ಅಥವಾ ಅಡ್ವೋಕೆಟ್ ಆಗಿ ವೃತ್ತಿಜೀವನ ಆರಂಭಿಸಬಹುದು. ಇಂತಹ ಸಮಯದಲ್ಲಿ ನೀವು ನಿಮ್ಮದೇ ಸ್ವಂತ ಆಫೀಸ್ ತೆರೆಯಬಹುದು. ಕ್ಲಯೆಂಟ್‍ಗಳನ್ನು ಪಡೆಯಬಹುದು. ಹೀಗೆ, ಒಂದಿಷ್ಟು ವರ್ಷ ಅನುಭವ ಪಡೆದ ಸಮಯದಲ್ಲಿ ಕೋರ್ಟ್ ನೇಮಕಗಳ ಕುರಿತೂ ಗಮನಹರಿಸಿರಿ. ಜಿಲ್ಲಾ ನ್ಯಾಯಾಲಯದ ಜಡ್ಜ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದಾಗ ಅರ್ಜಿ ಸಲ್ಲಿಸಿರಿ. ಈ ರೀತಿ ಹಂತಹಂತವಾಗಿ ಜಿಲ್ಲಾ ನ್ಯಾಯಾಲಯದ ಜಡ್ಜ್, ಸರಕಾರಿ ಅಭಿಯೋಜಕರು, ಹೈಕೋರ್ಟ್ ಜಡ್ಜ್, ಸುಪ್ರೀಂಕೋರ್ಟ್ ಜಡ್ಜ್ ಇತ್ಯಾದಿ ಹುದ್ದೆಗಳಿಗೆ ಏರುತ್ತ ಹೋಗಬಹುದು.

ಕಾನೂನು ಪದವಿ ಓದಿರುವವರನ್ನು ಕಾರ್ಪೊರೆಟ್ ಸಂಸ್ಥೆಗಳೂ ನೇಮಕ ಮಾಡಿಕೊಳ್ಳುತ್ತವೆ. ನೀವು ಲೀಗಲ್ ಅಡ್ವೈಸರ್ ಆಗಿ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದು. ಬ್ಯಾಂಕ್‍ಗಳು ಸಹ ಕಾನೂನು ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತವೆ. ನಾಗರಿಕ ಸೇವಾ ಪರೀಕ್ಷೆಯನ್ನೂ ಬರೆಯಬಹುದು. ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪಡೆದು ಕಾನೂನು ವಿಷಯದಲ್ಲಿ ಬೋಧಕರಾಗಬಹುದು. ಕಾನೂನು ಪಂಡಿತರಾಗಬಹುದು. ಕಾನೂನು ಸಲಹೆಗಾರರಾಗಬಹುದಾಗಿದೆ.
(ಪೂರಕ ಮಾಹಿತಿ ಒದಗಿಸಿರುವುದು ಬೆಂಗಳೂರಿನ ಜನಪ್ರಿಯ ವಕೀಲರಾದ ಜಯಪ್ರಕಾಶ್ ರೈ ಬೆಳ್ಳಾರೆ)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.