ಸೈಬರ್ ಸೆಕ್ಯೂರಿಟಿ: ಸೈಬರ್ ಕ್ಷೇತ್ರಕ್ಕೆ ಕಾವಲುಗಾರರಾಗಿ

ಪ್ರತಿನಿತ್ಯ ಮಾಧ್ಯಮಗಳಲ್ಲಿ ಸೈಬರ್ ಮೋಸಕ್ಕೆ ಈಡಾದವರ ಸುದ್ದಿಗಳು ಹೆಚ್ಚಾಗುತ್ತಿವೆ. ಸೈಬರ್ ವಂಚಕರಿಂದ ಕೆಲವು ಲಕ್ಷಗಳಿಂದ ಹಲವು ಕೋಟಿ ರೂ. ಕಳೆದುಕೊಂಡವರಿದ್ದಾರೆ. ಹೊಸ ತಂತ್ರಜ್ಞಾನಗಳು ಮತ್ತು ಸಂಪರ್ಕ ಸಾಧನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಸೈಬರ್ ಅಟ್ಯಾಕ್, ಹ್ಯಾಕಿಂಗ್ ಇತ್ಯಾದಿಗಳು ಹೆಚ್ಚಾಗುತ್ತಿರುವುದರಿಂದ ಈಗ ಸೈಬರ್ ಭದ್ರತಾ ತಜ್ಞರಿಗೆ ಬೇಡಿಕೆ ಹೆಚ್ಚಿದೆ. ದೇಶದಲ್ಲೀಗ ಮೊಬೈಲ್‍ನಲ್ಲಿ ಇಂಟರ್‍ನೆಟ್ ಬಳಕೆ ಹೆಚ್ಚುತ್ತಿದೆ. ಸೋಷಿಯಲ್, ಮೊಬೈಲ್, ಅನಾಲಿಟಿಕ್ಸ್ ಮತ್ತು ಕ್ಲೌಡ್ ಕಂಪ್ಯೂಟರ್, ಇಂಟರ್‍ನೆಟ್ ಆಫ್ ಥಿಂಗ್ಸ್‍ಗಳ ಬಳಕೆ ಹೆಚ್ಚಿರುವುದರಿಂದ ನೆಟ್‍ವರ್ಕ್ ಸೆಕ್ಯೂರಿಟಿ ಎಂಜಿನಿಯರ್‍ಗಳಿಗೆ ಹೊಸ ಸವಾಲು ಎದುರಾಗಿದೆ.

“ಕೆಟ್ಟ ಹುಡುಗನಿಂದ ಅಂತರ್‍ಜಾಲವನ್ನು ಕಾಪಾಡಲು, ಇಂಟರ್‍ನೆಟ್‍ನಲ್ಲಿ ಒಳ್ಳೆಯ ಹುಡುಗ ಇರಬೇಕು”

– ಅನಾಮಿಕ

ಸೈಬರ್ ಲೋಕದ ಇಂತಹ ಸವಾಲುಗಳೇ ಹೊಸ ಬಗೆಯ ಉದ್ಯೋಗಗಳನ್ನು ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಸಿದೆ. ಸೆಕ್ಯುರಿಟಿ ಅಡ್ಮಿನಿಸ್ಟ್ರೇಟರ್ಸ್, ಸೈಬರ್ ಸೆಕ್ಯುರಿಟಿ ಅನಾಲಿಸ್ಟ್ ಮತ್ತು ನೆಟ್‍ವರ್ಕ್ ಸೆಕ್ಯುರಿಟಿ ಸಾಫ್ಟ್‍ವೇರ್ ಎಂಜಿನಿಯರ್ ಸೇರಿದಂತೆ ಸೈಬರ್ ಭದ್ರತಾ ವಿಭಾಗದಲ್ಲಿ ಹಲವು ಉದ್ಯೋಗಗಳಿವೆ. ಇಂತಹ ಉದ್ಯೋಗ ಪಡೆಯಲು ಕಂಪ್ಯೂಟರ್ ಸೈನ್ಸ್‍ನಲ್ಲಿ ಪದವಿ ಪಡೆದಿರಬೇಕು. ಸೈಬರ್ ಸೆಕ್ಯೂರಿಟಿಯ ಯಾವುದಾದರೂ ವಿಶೇಷ ವಿಭಾಗದಲ್ಲಿಯೇ ಪದವಿ ಪಡೆದಿದ್ದರೆ ಇನ್ನೂ ಉತ್ತಮ.

ನೀವು ಕಾಲೇಜಿನಲ್ಲಿ ಓದಿದ ವಿಷಯಗಳ ಮಾನದಂಡದಲ್ಲಿಯೇ ಸೈಬರ್ ಸೆಕ್ಯೂರಿಟಿ ವಿಷಯಗಳಲ್ಲಿ ಪರಿಣತಿ ಪಡೆಯುವುದು ಸಾಧ್ಯವಿಲ್ಲ. ಯಾಕೆಂದರೆ ಈ ಕ್ಷೇತ್ರದಲ್ಲಿ ಸದಾ ಹೊಸತು ಬರುತ್ತಲೇ ಇವೆ. ಇದಕ್ಕಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿರಬೇಕು. ಈಗಿನ ಸ್ಕಿಲ್‍ಗೆ ಹೆಚ್ಚುವರಿಯಾಗಿ ಯಾವುದಾದರೂ ಸ್ಕಿಲ್ ಸೇರಿಸಲು ಸರ್ಟಿಫಿಕೇಷನ್‍ಗಳನ್ನು ಪಡೆಯಿರಿ. ನೆಟ್‍ವರ್ಕ್ ಸೆಕ್ಯೂರಿಟಿ ಅಥವಾ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನುಭವ ಇರುವವರಿಗೆ ಹೆಚ್ಚಿನ ಕಂಪನಿಗಳು ಆದ್ಯತೆ ನೀಡುತ್ತವೆ.

ಕೆಲವು ಕಂಪನಿಗಳು ಈ ಕ್ಷೇತ್ರ ಮಾತ್ರವಲ್ಲದೆ ಇದೇ ಕ್ಷೇತ್ರಕ್ಕೆ ಪೂರಕವಾದ ಇತರ ಉದ್ಯೋಗದಲ್ಲಿ ಅನುಭವ ಇರುವವರನ್ನೂ ಸೈಬರ್ ಭದ್ರತಾ ಪಡೆಗೆ ಸೇರಿಸಿಕೊಳ್ಳುತ್ತವೆ. ಉದಾಹರಣೆಗೆ ನೆಟ್‍ವರ್ಕಿಂಗ್, ಬಿಗ್ ಡೇಟಾ, ಮೊಬಿಲಿಟಿ ಇತ್ಯಾದಿ ಕ್ಷೇತ್ರದ ಅನುಭವ ಇರುವವರಿಗೂ ಮಣೆ ಹಾಕುತ್ತವೆ. ಕೋಡ್‍ಗಳ ಬಗ್ಗೆ ನೀವು ಕಲಿತಷ್ಟು ಒಳ್ಳೆಯದು. ಸಿಐಎಸ್‍ಎಸ್‍ಪಿ, ಎಸ್‍ಎಸ್‍ಸಿಪಿ, ಐಎಸ್‍ಎಸ್‍ಇಪಿ, ಐಎಸ್‍ಎಸ್‍ಎಪಿ, ಐಎಸ್‍ಎಸ್‍ಎಂಪಿ, ಸಿಎಪಿ ಮತ್ತು ಸಿಎಸ್‍ಎಸ್‍ಎಲ್‍ಪಿ ಇತ್ಯಾದಿ ಸರ್ಟಿಫಿಕೇಷನ್‍ಗಳನ್ನು ಐಎಸ್‍ಸಿ2 ಮತ್ತು ಐಎಸ್‍ಎಸಿಎ ಎಂಬೆರಡು ನಾನ್ ಪ್ರಾಫಿಟ್ ಸಂಸ್ಥೆಗಳು ನೀಡುತ್ತವೆ. ಇಂತಹ ಸಂಸ್ಥೆಗಳಲ್ಲಿ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದರೆ ನಿಮಗೆ ಸೈಬರ್ ಭದ್ರತಾ ವಿಭಾಗದಲ್ಲಿ ಉದ್ಯೋಗ ಪಡೆಯುವುದು ಸುಲಭವಾಗಬಹುದು.

ಈ ಉದ್ಯೋಗ ಪಡೆಯಬೇಕಾದರೆ ಕ್ಲಿಷ್ಟವಾದ ನೆಟ್‍ವರ್ಕ್ ಸೆಕ್ಯೂರಿಟಿಯ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಸಾಮಥ್ರ್ಯ ನಿಮ್ಮಲ್ಲಿ ಇರಬೇಕು. ಐಟಿ ಸೆಕ್ಯೂರಿಟಿ ವಿಭಾಗದಲ್ಲಿ ಕರಿಯರ್ ರೂಪಿಸಲು ಬಯಸುವವರು ಕೇವಲ ನೆಟ್‍ವರ್ಕ್ ಡಯಾಗ್ರಾಂ ರಚಿಸಲು ಕಲಿತರೆ ಸಾಲದು. ತಾವು ರಚಿಸಿದ ನೆಟ್‍ವರ್ಕ್ ಎಷ್ಟು ಸುಭದ್ರವಾಗಿದೆ ಎಂದು ತಿಳಿದುಕೊಳ್ಳಬೇಕು. ಈಗಾಗಲೇ ಸೈಬರ್ ಭದ್ರತಾ ವಿಭಾಗದಲ್ಲಿ ಸಕ್ರಿಯರಾಗಿರುವ ವೃತ್ತಿಪರರು ನೀಡಿರುವ ಸೆಮಿನಾರ್‍ಗಳನ್ನು ಗಮನಿಸುತ್ತಿರಿ. ವೃತ್ತಿಪರ ಸೋಷಿಯಲ್ ನೆಟ್‍ವರ್ಕ್ ತಾಣಗಳಲ್ಲಿ ಇಂತವರೊಂದಿಗೆ ಕನೆಕ್ಟ್ ಆಗಿರಿ. ಅವರೊಂದಿಗೆ ಸಲಹೆ ಸೂಚನೆಗಳನ್ನು ಪಡೆಯುತ್ತಿರಿ. ನೆಟ್‍ವರ್ಕ್ ಸೆಕ್ಯೂರಿಟಿ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತಿರುವುದಕ್ಕೆ ಪೂರಕವಾಗಿ ಸಾಕಷ್ಟು ಶೈಕ್ಷಣಿಕ ಸಂಸ್ಥೆಗಳು ಹುಟ್ಟಿಕೊಂಡಿವೆ. ಕೆಲವು ಸಂಸ್ಥೆಗಳು ಸೈಬರ್ ಸೆಕ್ಯೂರಿಟಿ ವಿಷಯದಲ್ಲಿಯೇ ಕೋರ್ಸ್‍ಗಳನ್ನು ನೀಡುತ್ತಿವೆ. ಇವುಗಳನ್ನು ನೀವು ಅಧ್ಯಯನ ಮಾಡಬಹುದಾಗಿದೆ.

ಖಾಸಗಿ ಕಂಪನಿಗಳಲ್ಲಿ ಮಾತ್ರವಲ್ಲದೆ ಸರಕಾರದ ಸೈಬರ್ ವಿಭಾಗಗಳಲ್ಲಿಯೂ ಉದ್ಯೋಗಾವಕಾಶ ಇರುತ್ತದೆ. ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಅವಶ್ಯಕತೆ ಇರುವುದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪರಿಣತರ ಲಭ್ಯತೆಯಿದೆ. ಭವಿಷ್ಯದಲ್ಲಿ ಜಗತ್ತು ಇನ್ನಷ್ಟು ಸೈಬರ್‍ಮಯವಾಗುವುದರಿಂದ ಈ ಹುದ್ದೆಗೂ ಉತ್ತಮ ಭವಿಷ್ಯವಿದೆ. ಹೀಗಾಗಿ, ಈ ವಿಷಯಗಳ ಕಲಿಕೆಯಿಂದ ನೀವು ನಿಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.