Avoid Property Purchase Mistakes: ಆಸ್ತಿ ಖರೀದಿಯ ಸಮಯದಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ

By | 04/03/2021

ದೇಶದಲ್ಲೀಗ ಕೊರೊನಾ ಆತಂಕ ತಗ್ಗಿದ್ದು, ಗೃಹಸಾಲ ಬಡ್ಡಿದರ ಹೆಚ್ಚಳ, ಮನೆ ದರ ಹೆಚ್ಚಳ, ನಗರಕ್ಕೆ ಸಮೀಪದಲ್ಲಿ ನಿವೇಶನಗಳ ಲಭ್ಯತೆ ಕಡಿಮೆಯಾಗುತ್ತಿರುವ ನಡುವೆಯೇ ರಿಯಲ್‌ ಎಸ್ಟೇಟ್‌ ಮೇಲೆ ಹೂಡಿಕೆ ಮಾಡುವವರ ಪ್ರಮಾಣ ಹೆಚ್ಚಾಗುತ್ತಿದೆ. ಬಹುತೇಕರು ಲಾಭ ಗಳಿಸುವ ದೃಷ್ಟಿಯಿಂದ ಮತ್ತು ಹೂಡಿಕೆಯ ಉದ್ದೇಶದಿಂದ ಪ್ರಾಪರ್ಟಿ ಖರೀದಿಸುತ್ತಾರೆ. ಆದರೆ, ಪ್ರಾಪರ್ಟಿಯೊಂದರಲ್ಲಿ ಒಳಗೊಂಡಿರುವ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮತ್ತು ಸಂಪೂರ್ಣ ವೆಚ್ಚವನ್ನು ಗಮನದಲ್ಲಿಟ್ಟುಕೊಳ್ಳದೆ ಖರೀದಿಸಿದರೆ ತೊಂದರೆಯಾಗಬಹುದು. ಇದರಿಂದ ನಿಮಗೆ ನೀವು ಬಯಸಿದ ಲಾಭ ಬರದೆ ಹೋಗಬಹುದು ಅಥವಾ ನಷ್ಟ ಅನುಭವಿಸಬೇಕಾಗಬಹುದು.
ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದೆಂದರೆ ಅಕ್ಷಯ ತೃತೀಯಾದಂದು ಚಿನ್ನ ಖರೀದಿಸಿದಷ್ಟು ಸರಳವಲ್ಲ. ಎಲ್ಲಿ ಭೂಮಿ/ಮನೆ ಖರೀದಿಸುವಿರಿ?, ಡೆವಲಪರ್‌/ಬಿಲ್ಡರ್‌ ನಂಬಿಕಸ್ಥರೇ?, ಖರೀದಿಸಿದ ಪ್ರಾಪರ್ಟಿಗೆ ಮುಂದಿನ ದಿನಕ್ಕೆ ಮೌಲ್ಯ ಬರಬಹುದೇ? ಪ್ರಾಪರ್ಟಿ ಮೇಲೆ ಕಾನೂನು ತಕರಾರುಗಳಿವೆಯೇ? ಹೀಗೆ ತಲೆಕೆಡಿಸಿಕೊಳ್ಳಲು ಸಾಕಷ್ಟು ಸಂಗತಿಗಳನ್ನು ಪ್ರಾಪರ್ಟಿ ಖರೀದಿ ಹೊಂದಿದೆ. ಪ್ರಾಪರ್ಟಿ ಖರೀದಿ ಸಮಯದಲ್ಲಿ ಈ ಮುಂದಿನ ತಪ್ಪುಗಳನ್ನು ಮಾಡದಿರಲು ಪ್ರಯತ್ನಿಸಿ.

ಕ್ರೆಡಿಟ್‌ ಸ್ಕೋರ್‌ ತಿಳಿಯದೆ ಪ್ರಾಪರ್ಟಿ ಖರೀದಿಗೆ ಮುಂದಾಗಬೇಡಿ


ಎಲ್ಲಾದರೂ ನೀವು ಪ್ರಾಪರ್ಟಿ ಖರೀದಿ ಉದ್ದೇಶದಿಂದ ಸಾಲ ಮಾಡಲು ಉದ್ದೇಶಿಸಿದರೆ ಬ್ಯಾಂಕ್‌ ನಿಮ್ಮ ಕ್ರೆಡಿಟ್‌ ಇತಿಹಾಸವನ್ನು ಪರಿಶೀಲಿಸುತ್ತದೆ. ‘ಎಲ್ಲಾದರೂ ನಿಮ್ಮ ಕ್ರೆಡಿಟ್‌ ಇತಿಹಾಸದಲ್ಲಿ ಸಮಸ್ಯೆ ಇದ್ದರೆ ಒಂದಾ, ನಿಮ್ಮ ಅರ್ಜಿ ನಿರಾಕರಿಸಲ್ಪಡಬಹುದು ಅಥವಾ ಎಲ್ಲಾದರೂ ಸಾಲ ಸಿಕ್ಕರೂ ಹೆಚ್ಚು ಬಡ್ಡಿದರ ಪಾವತಿಸಬೇಕಾಗಬಹುದು. 750 ಅಥವಾ ಅದಕ್ಕಿಂತ ಹೆಚ್ಚು ಕ್ರೆಡಿಟ್‌ ಸ್ಕೋರ್‌ ಇರುವವರಿಗೆ ಅತ್ಯುತ್ತಮ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರಕುತ್ತದೆ’ ಎಂದು ಆನ್‌ಲೈನ್‌ ಪ್ರಾಪರ್ಟಿ ತಾಣವೊಂದರ ಸಿಇಒ ಆದಿಪ್‌ ಶೆಟ್ಟಿ ಹೇಳುತ್ತಾರೆ. ‘ಹೀಗಾಗಿ, ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಕ್ರೆಡಿಟ್‌ ಸ್ಕೋರ್‌ ತಿಳಿಯಲು ಕೆಲವು ನಿಮಿಷ ವ್ಯಯಿಸಿ’ ಎಂದು ಅವರು ಸಲಹೆ ನೀಡುತ್ತಾರೆ.

ಪ್ರಾಪರ್ಟಿ ಖರೀದಿ ಹೊಂದಿರುವ ಸಂಪೂರ್ಣ ವೆಚ್ಚ ತಿಳಿಯದಿರುವುದು


ರಿಯಲ್‌ ಎಸ್ಟೇಟ್‌ಗೆ ಹೂಡಿಕೆ ಮಾಡುವಾಗ ನೀವು ಹೂಡಿಕೆಯ ಪೂರ್ಣ ವೆಚ್ಚದ ಕುರಿತು ಮಾಹಿತಿ ಹೊಂದಿರಬೇಕು. ಉದಾಹರಣೆಗೆ ಬೇಸ್‌ ದರ 100 ರೂಪಾಯಿ ಇದ್ದರೆ, ಜಿಎಸ್‌ಟಿ, ನೋಂದಣಿ, ಸ್ಟ್ಯಾಂಪ್‌ ಡ್ಯೂಟಿ, ಬ್ರೋಕರೇಜ್‌, ಫರ್ನಿಷಿಂಗ್‌, ಸಾಲದ ಮೇಲಿನ ಬಡ್ಡಿದರ ಇತ್ಯಾದಿಗಳಿಂದಾಗಿ ನಿಮ್ಮ ಒಟ್ಟು ವೆಚ್ವು 120 ಅಥವಾ 130 ರೂ.ಗೆ ತಲುಪಬಹುದು. ‘ಅಂಡರ್‌ ಕನ್‌ಸ್ಟ್ರಕ್ಷನ್‌ ಪ್ರಾಪರ್ಟಿಗೆ ನೀವು ಶೇಕಡ 5 ಜಿಎಸ್‌ಟಿ ಪಾವತಿಸಬೇಕಾಗುತ್ತದೆ, ನಿಮ್ಮ ರಾಜ್ಯಕ್ಕೆ ತಕ್ಕಂತೆ ಶೇಕಡ 5-7ರಷ್ಟು ನೋಂದಣಿ ಮತ್ತು ಸ್ಟ್ಯಾಂಪ್‌ ಡ್ಯೂಟಿ ಪಾವತಿಸಬೇಕಾಗುತ್ತದೆ. ಮನೆ ಫರ್ನಿಷಿಂಗ್‌ಗೆ ಮತ್ತೆ ಶೇಕಡ 5ರಷ್ಟು ವೆಚ್ಚವಾಗಬಹುದು. ನಿಮ್ಮ ಪ್ರಾಪರ್ಟಿ ವೆಚ್ಚ 1 ಕೋಟಿ ಎಂದು ನೀವು ನೋಡಿದರೆ, ಅಲ್ಲಿನ ಹೆಚ್ಚುವರಿ ವೆಚ್ಚಗಳು ಸೇರಿ 15 ಲಕ್ಷ ರೂ. ಹೆಚ್ಚಾಗಿರುತ್ತದೆ’ ಎಂದು ರಿಯಲ್‌ ಎಸ್ಟೇಟ್‌ ತಜ್ಞರು ಹೇಳಿದ್ದಾರೆ.
‘‘ಇಷ್ಟು ಮಾತ್ರವಲ್ಲದೆ ಬ್ಯಾಂಕ್‌ ಶೇಕಡ 75ರಷ್ಟು ಹೈವ್ಯಾಲ್ಯೂ ಲೋನ್‌ ಅಥವಾ ಶೇಕಡ 90ರಷ್ಟು ಲೋ-ವ್ಯಾಲ್ಯೂ ಲೋನ್‌ ನೀಡಬಹುದು. ಉಳಿದ ಮೊತ್ತವನ್ನು ನೀವು ಪಾವತಿಸಬೇಕು. ಬಹುತೇಕ ಸಂದರ್ಭದಲ್ಲಿ ನೀವು ಶೇಕಡ 20-25ರಷ್ಟು ಹೆಚ್ಚುವರಿ ಬಜೆಟ್‌ ಅನ್ನು ಸಿದ್ಧವಾಗಿಟ್ಟುಕೊಳ್ಳಬೇಕು’’ ಎಂದು ಬೆಂಗಳೂರಿನ ಖಾಸಗಿ ಬ್ಯಾಂಕೊಂದರ ಮ್ಯಾನೇಜರ್‌ ಪ್ರಭಂಜನ್‌ ಮಿಶ್ರಾ ಹೇಳಿದ್ದಾರೆ.

ಅವಸರವೇ ಅಪಾಯಕ್ಕೆ ಕಾರಣ


ಅವಸರದಲ್ಲಿ ಪ್ರಾಪರ್ಟಿ ಖರೀದಿಸುವ ತಪ್ಪನ್ನು ಬಹುತೇಕರು ಮಾಡುತ್ತಾರೆ. ‘ಪ್ರಾಪರ್ಟಿ ಖರೀದಿ ಸಂದರ್ಭದಲ್ಲಿ ಅವಸರ ಮಾಡಬಾರದು. ಖರೀದಿದಾರರು ಕನಿಷ್ಠ 10 ಪ್ರಾಪರ್ಟಿಗಳನ್ನು ನೋಡಿದ ಬಳಿಕ ಖರೀದಿ ನಿರ್ಧಾರ ಕೈಗೊಳ್ಳಬೇಕು. ಆಫರ್‌ಗಳು ಸಿಕ್ಕಿದೆ ಎಂದು ಅವಸರ ಮಾಡಬೇಡಿ. ಕೆಲವೊಮ್ಮೆ ಬ್ರೋಕರ್‌ಗಳು ಅವರ ಕಮಿಷನ್‌ಗಾಗಿ ಅವಸರ ಮಾಡಬಹುದು. ಹೀಗಾಗಿ, ಸಾವಧಾನವಾಗಿ ಯೋಚಿಸಿ, ಸಾಕಷ್ಟು ಪ್ರಾಪರ್ಟಿಗಳನ್ನು ಅವಲೋಕಿಸಿದ ಬಳಿಕ ಖರೀದಿ ನಿರ್ಧಾರ ಮಾಡಿ’ ಎಂದು ಅನರಾಕ್‌ ಪ್ರಾಪರ್ಟಿ ಕನ್ಸಲ್ಟೆಂಟ್‌ನ ಉಪಾಧ್ಯಕ್ಷರಾದ ಸಂತೋಷ್‌ ಕುಮಾರ್‌ ಹೇಳಿದ್ದಾರೆ.

ರಿಸರ್ಚ್‌ ಮಾಡದೆ ಪ್ರಾಪರ್ಟಿ ಖರೀದಿಸುವುದು ತಪ್ಪು


ವಿವಿಧ ರೀತಿಯಾಗಿ ಸಾಕಷ್ಟು ರಿಸರ್ಚ್‌ ಮಾಡುವ ಮೂಲಕ ಅತ್ಯುತ್ತಮ ಪ್ರಾಪರ್ಟಿ ನಿಮ್ಮದಾಗಿಸಿಕೊಳ್ಳಬಹುದು. ದರ, ಸ್ಥಳ ಹೊರತುಪಡಿಸಿ, ಅಲ್ಲಿನ ಮೂಲಸೌಕರ್ಯ, ಸುತ್ತಮುತ್ತಲಿನ ಅನುಕೂಲಗಳು ಇತ್ಯಾದಿಗಳ ಬಗ್ಗೆಯೂ ಗಮನ ನೀಡಬೇಕು. ಇದರ ಜೊತೆಗೆ ಪ್ರಾಪರ್ಟಿಯ ಮೇಲೆ ಏನಾದರೂ ದಾವೆಗಳಿರುವುದೇ ಎಂದು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ‘ನೀವು ಪ್ರತಿಷ್ಠಿತ ಡೆವಲಪರ್‌ಗಳನ್ನು ಆಯ್ಕೆ ಮಾಡಿಕೊಂಡರೆ ಪ್ರಾಪರ್ಟಿಯಲ್ಲಿ ಏನೂ ತೊಂದರೆ ಅನುಭವಿಸದೆ ಇರಬಹುದು. ಇಲ್ಲವಾದರೆ, ಭವಿಷ್ಯದಲ್ಲಿ ಕೋರ್ಟ್‌ ಸುತ್ತಬೇಕಾಗಬಹುದು. ನಿಮ್ಮ ಕುಟುಂಬದ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯವನ್ನು ಪರಿಶೀಲಿಸಿ’ ಎಂದು ಕುಮಾರ್‌ ಅಭಿಪ್ರಾಯಪಡುತ್ತಾರೆ.
ಇಂತಹ ಹಲವು ತಪ್ಪುಗಳನ್ನು ಮಾಡದೆ ಎಚ್ಚರಿಕೆಯಿಂದ ಖರೀದಿಸಿದರೆ ಪ್ರಾಪರ್ಟಿಯು ಅತ್ಯುತ್ತಮ ಹೂಡಿಕೆ. ಬುದ್ಧಿವಂತಿಕೆಯಿಂದ ಪ್ರಾಪರ್ಟಿ ಖರೀದಿಸಿದವರು ಕೆಲವೇ ವರ್ಷದಲ್ಲಿ ಹಲವು ಪಟ್ಟು ಲಾಭಗಳಿಸುತ್ತಾರೆ. ರಿಯಲ್‌ ಎಸ್ಟೇಟ್‌ ಕುರಿತು ಮಾರುಕಟ್ಟೆ ಜ್ಞಾನ ಮತ್ತು ಸಾಮಾನ್ಯ ಜ್ಞಾನ ಗಳಿಸಿಕೊಂಡು ಎಚ್ಚರಿಕೆಯಿಂದ ಹೂಡಿಕೆ ಮಾಡಿ.

Leave a Reply

Your email address will not be published. Required fields are marked *