wooden flooring: ಮನೆಗೆ ವುಡನ್‌ ಫ್ಲೋರಿಂಗ್‌ ಮಾಡಿಸುವಿರಾ? ಹಾಗಾದರೆ ಇದನ್ನು ತಪ್ಪದೇ ಓದಿ

By | 08/03/2021

ಮನೆಯ ವಿವಿಧ ಕೊಠಡಿಗಳ ನೆಲದ ಆಕರ್ಷಣೆ ಹೆಚ್ಚಿಸುವಲ್ಲಿ ಬಳಸುವ ಫ್ಲೋರಿಂಗ್‌ ಮೆಟಿರಿಯಲ್‌ಗಳ ಪಾತ್ರ ಹಿರಿದಾದದ್ದು. ಇಟಲಿಯನ್‌ ಮಾರ್ಬಲ್‌, ಗ್ರಾನೈಟ್‌ ಮತ್ತು ಇತರೆ ಕಲ್ಲುಗಳು ನೆಲಕ್ಕೆ ಆಕರ್ಷಣೀಯ ಲುಕ್‌ ನೀಡುತ್ತವೆ. ವಿವಿಧ ಬಗೆಯ ಟೈಲ್ಸ್‌ಗಳಿಂದಲೂ ಮನೆಯ ನೆಲದ ಅಂದ ಹೆಚ್ಚಿಸಬಹುದು. ಕಲ್ಲುಗಳು ಮಾತ್ರವಲ್ಲದೆ ಮರದ ಫ್ಲೋರಿಂಗ್‌ ಕೂಡ ಈಗಿನ ಟ್ರೆಂಡಾಗಿದ್ದು, ಇಂತಹ ಮರದ ನೆಲವು ಮನೆಗೆ ಕ್ಲಾಸಿಕ್‌ ಲುಕ್‌ ನೀಡುವುದರ ಜೊತೆಗೆ ಹಿತವಾದ ಫೀಲ್‌ ಕೂಡ ನೀಡುತ್ತದೆ.
ವುಡನ್‌ ಫ್ಲೋರಿಂಗ್‌ನಲ್ಲೂ ವೈವಿಧ್ಯಮಯ ಬಗೆಗಳಿವೆ. ಹಾರ್ಡ್‌ವುಡ್‌ ಫ್ಲೋರಿಂಗ್‌, ಲ್ಯಾಮಿನೇಟೆಡ್‌ ಫ್ಲೋರಿಂಗ್‌, ಮರದಂತೆ ಕಾಣಿಸುವ ವಿನೈಲ್‌ ಫ್ಲೋರಿಂಗ್‌ ಇತ್ಯಾದಿ ಹಲವು ಆಯ್ಕೆಗಳು ಇವೆ. ಮರದ ಪಟ್ಟಿ, ಮರದ ಹಲಗೆ, ಮರದ ನೆಲಹಾಸು ಬಳಸಿ ಸಾಮಾನ್ಯವಾಗಿ ಮರದ ಫ್ಲೋರಿಂಗ್‌ ಮಾಡಲಾಗುತ್ತದೆ. ಹಾರ್ಡ್‌ವುಡ್‌ ಫ್ಲೋರಿಂಗ್‌ ಮಾಡುವವರು ಸಾಮಾನ್ಯವಾಗಿ ಒಂದೇ ರೀತಿಯ ಸಂಸ್ಕರಿತ ಮರದ ಹಲಗೆಗಳನ್ನು ಬಳಸುತ್ತಾರೆ. ಇಂತಹ ಹಲಗೆಗಳನ್ನು ನೆಲದಲ್ಲಿ ನೀಟಾಗಿ ಜೋಡಿಸಲಾಗುತ್ತದೆ. ಅಲಂಕಾರದ ಉದ್ದೇಶಕ್ಕೆ ಫ್ಲೋರಿಂಗ್‌ ಮಾಡುವವರು ವಿನೈಲ್‌ ಹಾಳೆಗಳನ್ನು ನೆಲಕ್ಕೆ ಅಂಟಿಸುತ್ತಾರೆ.
ನಿಜವಾದ ಮರದ ಹಲಗೆಗಳನ್ನು ಬಳಸಿ ಹಲವು ಬಾರಿ ರಿಫೈನ್‌ ಮಾಡಿ ಹಾರ್ಡ್‌ವುಡ್‌ ಫ್ಲೋರಿಂಗ್‌ಗೆ ಬಳಸಲಾಗುತ್ತದೆ. ವಿವಿಧ ಮರಗಳ ಹಲಗೆಗಳನ್ನು ಅಂಟಿಸಿ ಎಂಜಿನಿಯರಿಂಗ್‌ ವುಡನ್‌ ಫ್ಲೋರಿಂಗ್‌ ಕೂಡ ಮಾಡಲಾಗುತ್ತದೆ. ಸಿಂಥೆಟಿಕ್‌ ಮೆಟಿರಿಯಲ್‌ಗಳನ್ನು ಬಳಸಿ ಮರದಂತೆ ಕಾಣಿಸುವ ವಸ್ತುಗಳನ್ನು ತಯಾರಿಸಿ ಲ್ಯಾಮಿನೇಟ್‌ ವುಡನ್‌ ಫ್ಲೋರ್‌ ಟೈಲ್‌ಗಳನ್ನು ಜೋಡಿಸಲಾಗುತ್ತದೆ.
ಧೂಳು ಮತ್ತು ಇತರೆ ಕಸಗಳು ಸುಲಭವಾಗಿ ಕಾಣಿಸದಂತೆ ಇರಲು ಕಪ್ಪು ಶೇಡ್‌ನ ವುಡನ್‌ ಫ್ಲೋರಿಂಗ್‌ ಬಳಕೆ ಹೆಚ್ಚಿದೆ. ತೆಳು ಶೇಡ್‌ನ ಬಣ್ಣಗಳನ್ನು ಬಳಸಿದರೂ ಮನೆಯು ವಿಶಾಲವಾಗಿ ಕಾಣಿಸುತ್ತದೆ. ವುಡನ್‌ ಫ್ಲೋರ್‌ಗಳಲ್ಲಿ ಬರಿಗಾಲಲ್ಲಿ ನಡೆಯುವಾಗ ‘ನ್ಯಾಚುಯಲ್‌’ ಫೀಲ್‌ ದೊರಕುತ್ತದೆ.
ಮನೆಯ ನಿರ್ದಿಷ್ಟ ಕೋಣೆಗಳಿಗೆ (ಉದಾಹರಣೆಗೆ, ಬೆಡ್‌ರೂಂ) ಮಾತ್ರ ವುಡನ್‌ ಫ್ಲೋರಿಂಗ್‌ ಮಾಡಿಸಬಹುದು. ಆದರೆ, ಸದಾ ಒದ್ದೆಯಾಗಿರುವ ಬಾತ್‌ರೂಂಗೆ ಮತ್ತು ಅಡುಗೆಮನೆಗೆ ವುಡನ್‌ ಫ್ಲೋರಿಂಗ್‌ ಬೇಡ ಎನ್ನುತ್ತಾರೆ ತಜ್ಞರು. ಮರದ ಹಲಗೆಗಳನ್ನು ಬಳಸಿ ಮಾಡಿದ ಫ್ಲೋರಿಂಗ್‌ ಬೇಗನೇ ತೇವ ಹೀರಿಕೊಳ್ಳುತ್ತದೆ. ಮರದ ನೆಲದಲ್ಲಿ ಬೇಗನೇ ಗೀರುಗಳಾಗುತ್ತವೆ. ಮರದ ಫ್ಲೋರಿಂಗ್‌ಗೆ ಹೀರುವ ಗುಣವಿರುವುದರಿಂದ ಏನಾದರೂ ಕೆಮಿಕಲ್‌ ಚೆಲ್ಲಿದರೆ ಅಪಾಯ. ಹೀಗಾಗಿ, ವುಡನ್‌ ಫ್ಲೋರಿಂಗ್‌ ಅನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕಾಗುತ್ತದೆ.
ಆಯಾ ಋುತುಮಾನಕ್ಕೆ ತಕ್ಕಂತೆ ವುಡನ್‌ ಫ್ಲೋರಿಂಗ್‌ ಹಿತವಾದ ಫೀಲ್‌ ನೀಡುತ್ತವೆ. ಬೇಸಿಗೆಯಲ್ಲಿ ಮರದ ನೆಲವು ಕೂಲ್‌ ಫೀಲ್‌ ನೀಡಬಹುದು. ಚಳಿಗಾಲದಲ್ಲಿ ಬೆಚ್ಚನೆಯ ಫೀಲ್‌ ನೀಡಬಹುದು. ಮಕ್ಕಳು ಬಿದ್ದರೂ ಸುರಕ್ಷತೆಯ ಫೀಲ್‌ ನೀಡಬಹುದು. ಕೆಲಸಗಾರರ, ಪರಿಣಿತರ ನೆರವಿಲ್ಲದೆ ನಾವೇ ಜೋಡಿಸಬಹುದಾದ ವುಡನ್‌ ಫ್ಲೋರಿಂಗ್‌ ಮೆಟಿರಿಯಲ್‌ಗಳೂ ಮಾರುಕಟ್ಟೆಯಲ್ಲಿವೆ. ಮನೆಯೊಳಗೆ ಮಾತ್ರವಲ್ಲದೆ ಮನೆಯ ಹೊರಗೆ ಬಳಸಬಹುದಾದ ವುಡನ್‌ ಫ್ಲೋರಿಂಗ್‌ ಮೆಟಿರಿಯಲ್‌ಗಳು ಮಾರುಕಟ್ಟೆಯಲ್ಲಿವೆ. ಈಗಾಗಲೇ ಪ್ರಕೃತಿಯ ಮೇಲೆ ಮಾನವರ ಹಸ್ತಕ್ಷೇಪ ಹೆಚ್ಚಿದ್ದು, ಸಾಕಷ್ಟು ಮರಗಳು ಬಲಿಯಾಗುತ್ತಿವೆ. ಇಂತಹ ಸಮಯದಲ್ಲಿ ಮರದ ಬಳಕೆ ಕಡಿಮೆ ಮಾಡುವುದು ಒಳ್ಳೆಯದು ಎನ್ನುವುದು ಪ್ರಕೃತಿಪ್ರಿಯರ ಅಭಿಪ್ರಾಯ.

ಟ್ರೆಂಡ್‌ಗಳು

  • ವುಡನ್‌ ಫ್ಲೋರಿಂಗ್‌ನಲ್ಲಿ ತೆಳು ಕಂದು ಜನಪ್ರಿಯ ಬಣ್ಣ. ಬೂದು ಬಣ್ಣದ ಫ್ಲೋರಿಂಗ್‌ ಬಳಕೆಯೂ ಹೆಚ್ಚಿದೆ. ನಿಜವಾದ ಮರಗಳ ಫೀಲ್‌ ನೀಡುವ ಬಣ್ಣಗಳ ಬಳಕೆಯೂ ಹೆಚ್ಚಿದೆ.
  • ಪ್ರಕೃತಿಗೆ ಹೆಚ್ಚು ಹೊರೆಯಾಗಲು ಬಯಸದೆ ಇರುವವರು ಮರದ ಫೀಲ್‌ ನೀಡುವ ಕೃತಕ ವುಡನ್‌ ಫ್ಲೋರಿಂಗ್‌ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ.
  • ಮನೆಯೊಳಗೆ ಸೂರ್ಯನ ನೇರ ಬೆಳಕು ಬೀರುತ್ತಿದ್ದರೆ ಬೆಳಕಿಗೆ ಅಡ್ಡ ಕಟ್ಟುವುದು ಒಳ್ಳೆಯದು. ಇಲ್ಲವಾದರೆ ದೀರ್ಘಾವಧಿಯಲ್ಲಿ ಮರದ ಹಲಗೆಗಳು ಒಡೆಯಬಹುದು.
  • ಬಾಲ್ಕನಿ ಮತ್ತು ಟೇರಸ್‌ ಮೇಲೂ ಬಳಸಬಹುದಾದ ವುಡನ್‌ ಫ್ಲೋರಿಂಗ್‌ ಪ್ರಾಡಕ್ಟ್ಗಳು ಮಾರುಕಟ್ಟೆಯಲ್ಲಿವೆ.

ಇತ್ತ ಗಮನಿಸಿ

  • ಸೋಪುಗಳು ಮತ್ತು ಡಿಟರ್ಜೆಂಟ್‌ಗಳ ಬಳಕೆ ತಪ್ಪಿಸಿ. ವುಡನ್‌ ಫ್ಲೋರಿಂಗ್‌ ಫಿನಿಶಿಂಗ್‌ಗೆ ಇದರಿಂದ ಹಾನಿಯಾಗಬಹುದು.
  • ಮರದ ಮೇಲೆ ಕಲೆಗಳಾದರೆ ತಕ್ಷಣ ತೆಗೆಯಲು ಪ್ರಯತ್ನಿಸಿ. ಇಲ್ಲವಾದರೆ ಅದು ಅಳಿಸಲಾಗದೆ ಶಾಶ್ವತ ಕಲೆಯಾಗಿ ಅಳಿಸಲಾಗದೆ ತೊಂದರೆಯಾಗಬಹುದು.
  • ನೀರು ಬಳಸಿ ವುಡನ್‌ ಫ್ಲೋರಿಂಗ್‌ ಕ್ಲೀನ್‌ ಮಾಡಬೇಡಿ. ಪೊರಕೆಯಿಂದ ಗುಡಿಸಿದರೆ ಸಾಕು.
  • ಧೂಳು, ಕಸಗಳನ್ನು ತೆಗೆಯಲು ವಾಕ್ಯೂಮ್‌ ಕ್ಲೀನರ್‌ ಬಳಕೆ ಉತ್ತಮ.
  • ಕಾಲಕಾಲಕ್ಕೆ ವುಡನ್‌ ಫ್ಲೋರಿಂಗ್‌ ಅನ್ನು ಪಾಲೀಷ್‌ ಮಾಡುತ್ತಿರಿ. ಇಲ್ಲವಾದರೆ ಮರಕ್ಕೆ ಹಾನಿಯಾಗಬಹುದು.

Leave a Reply

Your email address will not be published. Required fields are marked *