benefits of registry in female name: ಆಸ್ತಿ ಖರೀದಿಗೆ ಸಾಲ ಪಡೆಯಲು ಬಯಸುವ ಮಹಿಳೆಯರಿಗೆ ಸಲಹೆ

By | 08/03/2020

ಮನೆ ಖರೀದಿಸುವ ಮಹಿಳೆಯರು ಗೃಹಸಾಲ ಬಡ್ಡಿದರ ಕಡಿತ, ಮುದ್ರಾಂಕ ಶುಲ್ಕ ಕಡಿತ, ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಮನೆಯ ಮಹಿಳಾ ಸದಸ್ಯರ ಹೆಸರಿನಲ್ಲಿ ಪ್ರಾಪರ್ಟಿ ಖರೀದಿಸುವುದು ಅಥವಾ ಪ್ರಾಪರ್ಟಿ ಖರೀದಿಸುವಾಗ ಮಹಿಳೆಯರನ್ನು ಜಂಟಿ-ಪಾಲುದಾರರನ್ನಾಗಿ ಮಾಡಿಕೊಳ್ಳುವುದರಿಂದಲೂ ಹಲವು ಪ್ರಯೋಜನಗಳು ಇವೆ.

ಬೆಂಗಳೂರಿನಂತಹ ನಗರಗಳಲ್ಲಿ ಉದ್ಯೋಗಸ್ಥ ಪುರುಷರು, ಮಹಿಳೆಯರು ಸ್ವಂತ ಪ್ರಾಪರ್ಟಿ ಹೊಂದಲು ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ವಿಶೇಷವಾಗಿ ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌, ವಿಲ್ಲಾ ಖರೀದಿಸಿ ಬಾಡಿಗೆ ಮನೆಯಿಂದ ಮುಕ್ತಿ ಪಡೆಯುವುದು ನಗರದ ಬಹುತೇಕ ಮಹಿಳೆಯರ ಬಯಕೆಯಾಗಿರುತ್ತದೆ. ಒಂದೋ ತಾವು ಉಳಿತಾಯ ಮಾಡಿ, ಇಲ್ಲವಾದರೆ ಗಂಡನ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ ಸ್ವಂತ ಮನೆ ಖರೀದಿ ಕನಸು ಈಡೇರಿಸಿಕೊಳ್ಳಲು ಬಯಸುತ್ತಾರೆ. ದೇಶದಲ್ಲಿ ಮನೆ ಖರೀದಿಸಲು ಬಯಸುವ ಮಹಿಳೆಯರಿಗೆ ಉತ್ತೇಜನ ನೀಡುವ ಸಲುವಾಗಿ ಭಾರತ ಸರಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ, ಪ್ರಾಪರ್ಟಿ ಖರೀದಿಸುವ ಮಹಿಳೆಯರು ಮುಖ್ಯವಾಗಿ ಈ ಮುಂದಿನ ಲಾಭಗಳನ್ನು ಪಡೆಯಬಹುದು.

  • ದೇಶದ ಕೆಲವು ರಾಜ್ಯಗಳಲ್ಲಿ ಮನೆ ಮನೆ ಖರೀದಿಗೆ ಮಹಿಳೆಯರು ಕಡಿಮೆ ನೋಂದಣಿ ಶುಲ್ಕ ಪಾವತಿಸಿದರೆ ಸಾಕು.
  • ಮಹಿಳೆಯರಿಗೆ ಗೃಹಸಾಲದಲ್ಲಿ 50-100 ಮೂಲಾಂಶದಷ್ಟು ಕಡಿಮೆ ಬಡ್ಡಿದರಕ್ಕೆ ಸಾಲ ದೊರಕುತ್ತದೆ.
  • ಗಂಡ ಅಥವಾ ಹೆಂಡತಿ ಜಂಟಿ ಹೆಸರಿನಲ್ಲಿ ಮನೆ ಖರೀದಿಸಿದರೆ ಇವರಿಬ್ಬರೂ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು.
  • ಪಿಎಂಎವೈ ಸ್ಕೀಮ್‌ ಲಾಭ ಪಡೆಯಲು ಪ್ರಾಪರ್ಟಿಯನ್ನು ಕಡ್ಡಾಯವಾಗಿ ಮನೆಯ ಒಬ್ಬರು ಮಹಿಳಾ ಸದಸ್ಯರ ಹೆಸರಿನಲ್ಲಿ ನೋಂದಣಿ ಮಾಡಬೇಕು.

ಕಡಿಮೆ ಮುದ್ರಾಂಕ ಶುಲ್ಕ


ದೇಶದ ಬಹುತೇಕ ರಾಜ್ಯಗಳಲ್ಲಿ ಮಹಿಳೆಯರು ಪ್ರಾಪರ್ಟಿ ನೋಂದಣಿಗೆ ಕಡಿಮೆ ಮುದ್ರಾಂಕ ಶುಲ್ಕ ಪಾವತಿಸಿದರೆ ಸಾಕು. ಉದಾಹರಣೆಗೆ ದಿಲ್ಲಿಯಲ್ಲಿ ಪುರುಷರು ಶೇಕಡ 6ರಷ್ಟು ಮುದ್ರಾಂಕ ಶುಲ್ಕ ಪಾವತಿಸಿಬೇಕು. ಮಹಿಳೆಯರಾದರೆ ಶೇಕಡ 4 ಸ್ಟ್ಯಾಂಪ್‌ ಡ್ಯೂಟಿ ಪಾವತಿಸಿದರೆ ಸಾಕು. ಮುಂಬಯಿಯಲ್ಲಿಯೂ ಮಹಿಳೆಯರು ಶೇಕಡ 6ರ ಬದಲು ಶೇಕಡ 5ರಷ್ಟು ಮುದ್ರಾಂಕ ಶುಲ್ಕ ಪಾವತಿಸಿದರೆ ಸಾಕಾಗುತ್ತದೆ. ಜಾರ್ಖಂಡ್‌ ಮತ್ತು ಜಮ್ಮುವಿನಂತಹ ರಾಜ್ಯಗಳಲ್ಲಿ ಮಹಿಳೆಯರು ಪ್ರಾಪರ್ಟಿ ಖರೀದಿಸಿದರೆ ಮುದ್ರಾಂಕ ಶುಲ್ಕ ಸಂಪೂರ್ಣ ಮನ್ನಾ ಮಾಡಲಾಗುತ್ತದೆ. ಜಾರ್ಖಂಡ್‌ನಲ್ಲಿ ಮಹಿಳೆಯರಲ್ಲಿ ಔಪಚಾರಿಕವಾಗಿ ಒಂದು ರೂಪಾಯಿ ಮುದ್ರಾಂಕ ಶುಲ್ಕ ಪಡೆಯಲಾಗುತ್ತದೆ. 10 ಲಕ್ಷ ರೂ.ವರೆಗಿನ ಪ್ರಾಪರ್ಟಿ ಸಾಲಕ್ಕೆ ಉತ್ತರ ಪ್ರದೇಶದದಲ್ಲಿ ಮಹಿಳೆಯರಿಗೆ ಶೇಕಡ 1ರಷ್ಟು ಮುದ್ರಾಂಕ ಶುಲ್ಕ ಕಡಿತವಿದೆ. ಹಿಮಾಚಲಪ್ರದೇಶದಲ್ಲಿ ಮಹಿಳೆಯರಿಗೆ ಮುದ್ರಾಂಕ ಶುಲ್ಕದಲ್ಲಿ ಶೇಕಡ 2 ಕಡಿತ ಮಾಡಲಾಗಿದೆ. ಆದರೆ, ಬೇಸರದ ಸಂಗತಿಯೆಂದರೆ ಕರ್ನಾಟಕದ ಮಹಿಳಾ ಪ್ರಾಪರ್ಟಿ ಖರೀದಿದಾರರಿಗೂ ಪುರುಷ ಪ್ರಾಪರ್ಟಿ ಖರೀದಿದಾರರಿಗೂ ಒಂದೇ ರೀತಿಯ ಮುದ್ರಾಂಕ ಶುಲ್ಕ (ಶೇಕಡ 5.6) ವಿಧಿಸಲಾಗುತ್ತದೆ. ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿಯೂ ಮುದ್ರಾಂಕ ಶುಲ್ಕದಲ್ಲಿ ಮಹಿಳೆಯರಿಗೆ ಯಾವುದೇ ವಿನಾಯಿತಿ ನೀಡಲಾಗಿಲ್ಲ.

ಗೃಹಸಾಲ ಬಡ್ಡಿದರ


ದೇಶದ ಬಹುತೇಕರು ಮನೆ ಕಟ್ಟುವ ಕನಸನ್ನು ವಸತಿ ಸಾಲದ ಮೂಲಕ ಈಡೇರಿಸಿಕೊಳ್ಳುತ್ತಾರೆ. ಹಣ ಉಳಿತಾಯ ಮಾಡುವುದರಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಜಾಗರೂಕರಾಗಿರುತ್ತಾರೆ. ತಾವು ಕಷ್ಟಪಟ್ಟು ದುಡಿದ ಹಣವನ್ನು ಎಚ್ಚರಿಕೆಯಿಂದ ಬಳಸಿ ಭವಿಷ್ಯದ ಅವಶ್ಯಕತೆಗಾಗಿ ಉಳಿಸುತ್ತಾರೆ. ಬಹುತೇಕ ಬ್ಯಾಂಕ್‌ಗಳು ಮಹಿಳಾ ಸಾಲಗಾರರಿಗೆ ಕೊಂಚ ಕಡಿಮೆ ಬಡ್ಡಿದರಕ್ಕೆ ಸಾಲ ನೀಡುತ್ತವೆ. ಸಾಮಾನ್ಯವಾಗಿ ಬಡ್ಡಿದರದಲ್ಲಿ 50-100 ಬೇಸಿಸ್‌ ಪಾಯಿಂಟ್‌ವರೆಗೆ ಕಡಿಮೆ ಮಾಡುತ್ತವೆ. 100 ಬೇಸಿಸ್‌ ಪಾಯಿಂಟ್‌ ಎಂದರೆ ಶೇಕಡ 1ಕ್ಕೆ ಸಮ.
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮೂಲಕ 30 ಲಕ್ಷ ರೂಪಾಯಿವರೆಗೆ ಗೃಹ ಸಾಲ ಖರೀದಿಸುವ ಮಹಿಳೆಯರಿಗೆ ಶೇಕಡ 6.80ರಷ್ಟು ಬಡ್ಡಿದರ ವಿಧಿಸಲಾಗುತ್ತಿದೆ. ಪುರುಷರಾದರೆ ಎಸ್‌ಬಿಐ ಬ್ಯಾಂಕ್‌ಗೆ ಶೇಕಡ 7 ಬಡ್ಡಿದರ ಪಾವತಿಸಬೇಕು. ಇದೇ ಮೊತ್ತದ ಸಾಲಕ್ಕೆ ಎಚ್‌ಡಿಎಫ್‌ಸಿಯು ಮಹಿಳೆಯರಿಗೆ ಶೇಕಡ 6.90 ಬಡ್ಡಿದರಕ್ಕೆ ಗೃಹ ಸಾಲ ನೀಡುತ್ತದೆ.
ಗೃಹಸಾಲದಲ್ಲಿ ಅರ್ಧ ಪರ್ಸೆಂಟ್‌ ಬಡ್ಡಿದರ ತಗ್ಗಿದರೂ ಒಟ್ಟು ಸಾಲದ ಬಡ್ಡಿದರದಲ್ಲಿ ಸಾಕಷ್ಟು ಕಡಿಮೆಯಾಗುತ್ತದೆ. ಉದಾಹರಣೆಗೆ ನೀವು 20 ವರ್ಷದ ಅವಧಿಗೆ 30 ಲಕ್ಷ ರೂಪಾಯಿಯನ್ನು ಶೇಕಡ 7 ಸಾಲಕ್ಕೆ ಪಡೆದುಕೊಂಡಿದ್ದೀರಿ ಎಂದಿರಲಿ. 20 ವರ್ಷಗಳಲ್ಲಿ ಬಡ್ಡಿದರ ಸೇರಿದಂತೆ ನೀವು ಪಾವತಿಸಬೇಕಾದ ಒಟ್ಟು ಮೊತ್ತ 55,95,125 ರೂ. ಆಗಿರುತ್ತದೆ. ಎಲ್ಲಾದರೂ ನೀವು ಶಶೇಕಡ 7.2 ಬಡ್ಡಿದರಕ್ಕೆ ಸಾಲ ಪಡೆದಿದ್ದರೆ ಒಟ್ಟಾರೆ ಮೊತ್ತ 56,68,915 ರೂ. ಆಗಿರುತ್ತದೆ. ಶೇಕಡ .2 ಬಡ್ಡಿದರದಲ್ಲಿ ಆದ ದೊಡ್ಡ ಬದಲಾವಣೆಯನ್ನು ಇಲ್ಲಿ ನೀವು ಗಮನಿಸಬಹುದು.

ತೆರಿಗೆ ಪ್ರಯೋಜನಗಳು
ಎಲ್ಲಾದರೂ ಪ್ರಾಪರ್ಟಿಯನ್ನು ಗಂಡ-ಹೆಂಡತಿ ಜಂಟಿಯಾಗಿ ಖರೀದಿಸಿದರೆ, ಹೆಂಡತಿ ಇಲ್ಲಿ ಗೃಹ ಸಾಲದ ಸಹ-ಅರ್ಜಿದಾರರಾಗಿರುತ್ತಾರೆ. ಇದರಿಂದ ಇವರಿಬ್ಬರೂ ಸೆಕ್ಷನ್‌ 80ಸಿ, ಸೆಕ್ಷನ್‌ 24 ಮತ್ತು ಸೆಕ್ಷನ್ಸ್‌ 80 ಇಇ ಮತ್ತು 80ಇಇಎಯಡಿ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಬಹುದು. ಎಲ್ಲಾದರೂ ಮಹಿಳೆಯು ಪ್ರಾಪರ್ಟಿಯ ಸಹ-ಮಾಲೀಕರಾಗದೆ ಇದ್ದರೂ, ಜಂಟಿ ಸಾಲದಲ್ಲಿ ಪಾಲುದಾರರಾಗಿದ್ದರೆ ಸ್ಯಾಲರಿ ಆದಾಯದಲ್ಲಿ ತೆರಿಗೆ ವಿನಾಯಿತಿ ಕ್ಲೇಮ್‌ ಮಾಡಿಕೊಳ್ಳಬಹುದು.

ಪಿಎಂಎವೈ ಪ್ರಯೋಜನಗಳು
ಪ್ರಧಾನ ಮಂತ್ರಿ ಆವಾಸ ಯೋಜನೆ(ಪಿಎಂಎವೈ)ಯ ಪ್ರಯೋಜನ ಪಡೆಯಲು ಪ್ರಾಪರ್ಟಿಯನ್ನು ಮನೆಯ ಒಬ್ಬರು ಮಹಿಳಾ ಸದಸ್ಯರ ಹೆಸರಿನಲ್ಲಿ ನೋಂದಾಯಿಸುವುದನ್ನು ಸರಕಾರ ಕಡ್ಡಾಯಗೊಳಿಸಿದೆ. ಮಹಿಳೆ ಗೃಹ ಸಾಲವನ್ನು ಕ್ರೆಡಿಟ್‌ ಲಿಂಕ್ಡ್‌ ಸಬ್ಸಿಡಿ ಸ್ಕೀಮ್‌ (ಸಿಎಲ್‌ಎಸ್‌ಎಸ್‌) ಮೂಲಕ ಪಡೆದಿದ್ದರೆ ಬಡ್ಡಿದರದಲ್ಲಿ ಸಾಕಷ್ಟು ವಿನಾಯಿತಿಯನ್ನು ಪಡೆಯಬಹುದು. ಎಲ್ಲಾದರೂ ಮಹಿಳೆಯು ಆರ್ಥಿಕವಾಗಿ ದುರ್ಬಲ ವಿಭಾಗದಲ್ಲಿ ಇದ್ದರೆ (ವಾರ್ಷಿಕ 3 ಲಕ್ಷ ರೂ.ಗಿಂತ ಕಡಿಮೆ ಆದಾಯ) ಮತ್ತು ಕಡಿಮೆ ಆದಾಯದ ಗುಂಪು (ಎಲ್‌ಐಜಿ) ಕೆಟಗರಿಯಲ್ಲಿದ್ದರೆ ಶೇಕಡ 6.5 ಬಡ್ಡಿದರ ಸಬ್ಸಿಡಿಯನ್ನು (6 ಲಕ್ಷ ರೂ.ವರೆಗೆ ) ಪಡೆಯಬಹುದು.

Leave a Reply

Your email address will not be published. Required fields are marked *