ನಾಡಿನೆಲ್ಲೆಡೆ ನಾಡಹಬ್ಬದ ಸಂಭ್ರಮ, ಮೈಸೂರು ದಸರಾದ ಇತಿಹಾಸ ಗೊತ್ತೆ? ಎಲ್ಲರೂ ತಿಳಿದಿರಬೇಕಾದ ಅಮೂಲ್ಯ ಮಾಹಿತಿ ಇಲ್ಲಿದೆ..

By | 07/10/2021

ವಿಜಯನಗರ ದೊರೆಗಳು 15ನೇ ಶತಮಾನದಲ್ಲಿ ದಸರಾ ಉತ್ಸವ ಆರಂಭಿಸಿದರು.  ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಶ್ರೀರಂಗಪಟ್ಟಣದಲ್ಲಿಮೈಸೂರು ಮೂಲದ ದೊರೆ ರಾಜ ಒಡೆಯರ್‌ ಮಹಾನವಮಿ ಉತ್ಸವವನ್ನು ಪುರುಜ್ಜೀವನಗೊಳಿಸಿದರು. ಶ್ರೀರಂಗಪಟ್ಟಣದಲ್ಲಿವಿಜಯನಗರದ ಪ್ರತಿನಿಧಿಯಾಗಿದ್ದ ಶ್ರೀರಂಗರಾಯನನ್ನು ನಿಗ್ರಹಿಸಿ, ಮೈಸೂರು ಸೀಮೆಯ ದೊರೆಯಾದ ರಾಜ ಒಡೆಯರ್‌ ತನ್ನ ಶಕ್ತಿ ಸಾಮರ್ಥ್ಯ‌ದಿಂದ ಭದ್ರಬುನಾದಿ ಹಾಕಿದನಲ್ಲದೆ 1610ರಿಂದ ಮಹಾನವಮಿ ಹಬ್ಬದ ಪರಂಪರೆಯನ್ನು  ಮುಂದುವರಿಸಿದರು.

ವಿಜಯನಗರ ಕಾಲದಲ್ಲಿ


ಕ್ರಿ.ಶ. 1336ರಿಂದ 1565ರವರೆಗೆ ವಿಜಯನಗರ ಹಿಂದೂ ಸಾಮ್ರಾಜ್ಯ ಭಾರತದ ಇತಿಹಾಸದಲ್ಲೊಂದು ಪ್ರಮುಖ ಘಟ್ಟ. ವಿಜಯನಗರದ ಅರಸರಿಗೆ ರಾಜ್ಯ ವಿಸ್ತರಣೆಯ ಜೊತೆಗೆ ಬಿಜಾಪುರದ ಆದಿಲ್‌ಷಾಹಿ ಮೊದಲಾದ ಮುಸಲ್ಮಾನ ರಾಜ್ಯಗಳನ್ನು ಬಗ್ಗುಬಡಿಯುವುದು ಪ್ರಮುಖ ಉದ್ದೇಶವಾಗಿತ್ತು. ಈ ಕಾರಣಕ್ಕಾಗಿ ಸೈನ್ಯಬಲವನ್ನು ವೃದ್ಧಿಪಡಿಸಿಕೊಳ್ಳಬೇಕಾದ ಪರಿಸ್ಥಿತಿ ವಿಜಯನಗರದ ದೊರೆಗಳಿಗೆ ಅನಿವಾರ್ಯವಾಗಿತ್ತು. ತಮ್ಮ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟ ಮಾಂಡಲೀಕರು, ಸಾಮಂತರು , ಪಾಳೆಯಗಾರರು  ಮೊದಲಾದವರಿಂದ ಸೇನಾ ಕಾಣಿಕೆ ಮತ್ತಿತರ ಕಪ್ಪ ಕಾಣಿಕೆಗಳನ್ನು ಸ್ವೀಕರಿಸುವುದಕ್ಕಾಗಿ ಅವರು ನಿಗದಿತ ಕಾಲವೊಂದನ್ನು ಗೊತ್ತು ಮಾಡಿದ್ದರು. ಆ ಕಾಲವೇ ಆಶ್ವಯುಜ  ಮಾಸದ ಪಾಡ್ಯಮಿಯಿಂದ ನವಮಿವರೆಗಿನ 9  ದಿನಗಳು. ಹಂಪೆಯಲ್ಲಿರುವ ಮಹಾನವಮಿ ಹಬ್ಬ (1513) ಈ ಉದ್ದೇಶಕ್ಕಾಗಿಯೇ ನಿರ್ಮಿತವಾದುದು.


ರಾಜರ ಆಚರಣೆ


ಮಹಾನವಮಿಯ ದಿನ ವಿಜಯನಗರದ ದೊರೆ ಆ ದಿಬ್ಬದ ಮೇಲೆ ಕುಳಿತು ತನಗೆ ಸಂದಾಯವಾಗುತ್ತಿದ್ದ ಕಾಣಿಕೆಗಳನ್ನು ಸ್ವೀಕರಿಸುತ್ತಿದ್ದನಲ್ಲದೆ,  ಆ ಹೊತ್ತಿನಲ್ಲಿ ಅಲ್ಲಿ ಮತ್ತು ಅರಮನೆಯಲ್ಲಿ ನಡೆಯುತ್ತಿದ್ದ ವಿವಿಧ ಮನರಂಜೆ ಹಾಗೂ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ವೀಕ್ಷಿಸುತ್ತಿದ್ದ. ವಿಜಯನಗರದ ದೊರೆಗಳು ಆಶ್ವಯುಜ ಮಾಸದ ನವಮಿಯನ್ನೇ ತಾವು ದಿಗ್ವಿಜಯಕ್ಕೆ ಹೊರಡಲು ಆರಿಸಿಕೊಂಡಿದ್ದಕ್ಕೆ ಕಾರಣವಿದೆ. ವಾಸ್ತವವಾಗಿ ಹಿಂದೂಗಳಿಗೆ ವರ್ಷದಲ್ಲಿಎರಡು ನವಮಿಗಳು ಮುಖ್ಯವಾದವು. 1) ಚೈತ್ರ ಮಾಸದ ನವಮಿ (ರಾಮನವಮಿ ) (2) ಆಶ್ವಯುಜ ಮಾಸದ ನವಮಿ (ಮಹಾನವಮಿ ಅಥವಾ ನವರಾತ್ರಿ) ಆಶ್ವಯುಜ ಮಾಸದ ಹೊತ್ತಿಗೆ ಮಳೆಯ ರಭಸ ಕಡಿಮೆಯಾಗುತ್ತ ಬರುತ್ತದೆ ಹಾಗಾಗಿ ಶತ್ರುಗಳ ಮೇಲೆ ಎರಗಲು ಅನುಕೂಲವಾಗಿರುತ್ತದೆ ಎಂಬ ಆಶಯ ಇರಬಹುದು. ವಿಜಯನಗರ ಅರಸರ ರಾಜ್ಯ ವಿಸ್ತರಣೆಯ ಪ್ರಯತ್ನವೆಲ್ಲ ನಡೆದಿರುವುದು ಬಹುಪಾಲು ಆಶ್ವಯುಜ ಮಾಸದ ನಂತರವೇ ಎಂಬುದನ್ನು ಗಮನಿಸಬಹುದು. ಹೀಗೆ ಯುದ್ಧ ಸಂಬಂಧಿಯಾದ ಮಹಾನವಮಿ ಪ್ರಮುಖವಾಗಿ ರಾಜರ ಆಚರಣೆಯಾಗಿತ್ತು.


ಮಹಾನವಮಿಗೆ ದಸರಾ ಹೆಸರು

1799ರಿಂದ ರಾಜಧಾನಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾದ ನಂತರ ಬ್ರಿಟಿಷರ ಅಧೀನದ ಮೈಸೂರು  ಸಂಸ್ಥಾನ ಸ್ಥಾಪನೆಯಾಗಿ ಮುಮ್ಮಡಿ ಕೃಷ್ಣರಾಜರಿಂದ ಮೊದಲ್ಗೊಂಡು ಜಯಚಾಮರಾಜ ಒಡೆಯರ್‌ವರೆಗೆ ಇತಿಮಿತಿಯಲ್ಲಿರಾಜ್ಯಾಡಳಿತ ನಡೆಯಿತು. ಮತ್ತು 19ನೇ ಶತಮಾನದ  ಕೊನೆಯ ದಿನಗಳಿಂದ ಮಹಾನವಮಿಯು ‘ದಸರಾ’ ಎಂಬ ಹೆಸರನ್ನು ಪಡೆದು ಕೇವಲ ಧಾರ್ಮಿಕ, ಸಾಂಸ್ಕೃತಿಕ ಆಚರಣೆಯಾಗಿ ನೆಲೆ ನಿಂತಿತು. ನಂತರದ ಕಾಲಾವಧಿಯಲ್ಲಿಇದು ತನ್ನದೇ ಆದ ವೈಭವ ಪಡೆಯುವುದರೊಂದಿಗೆ ವಿಶ್ವವಿಖ್ಯಾತ ಪಡೆದಿದ್ದು ಇತಿಹಾಸ.


ಖಾಸಗಿ ದರ್ಬಾರ್‌


ಮೈಸೂರು ಸಂಸ್ಥಾನ ಬ್ರಿಟಿಷರ ಅಧೀನವಾದ ಬಳಿಕ  ಮುಮ್ಮಡಿ ಕೃಷ್ಣರಾಜ ಒಡೆಯರ್‌  (1799-1868)  ಅವಧಿಯಿಂದ ಯುದ್ಧ ಸಿದ್ಧತೆಗೆ ಬದಲಾಗಿ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಮಹಾನವಮಿ ಆಚರಣೆ ಸೀಮಿತವಾಯಿತು. ಇದೇ ಪರಿಸ್ಥಿತಿ ಮತ್ತು ಮನಸ್ಥಿತಿ ಮೈಸೂರು  ಸಂಸ್ಥಾನದ ಕೊನೆಯ ರಾಜರಾದ ಜಯಚಾಮರಾಜ ಒಡೆಯರ್‌ (ಕ್ರಿ.ಶ.1941-47 ಇದು ಅವರ ಆಳ್ವಿಕೆಯ ಕಾಲ. ಮರಣ 1974) ಕಾಲದವರೆಗೂ ಮುಂದುವರಿಯಿತು. 1947ರ ಅಕ್ಟೋಬರ್‌ 24ರಂದು ಜಯಚಾಮರಾಜ ಒಡೆಯರ್‌ ಅವರು ಮೈಸೂರು ರಾಜ್ಯದ ಪ್ರಜಾಪ್ರತಿನಿಧಿಯಾದ ರಾಜ್ಯದ ಮೊದಲ ಮುಖ್ಯಮಂತ್ರಿ ಚೆಂಗಲರಾಯರೆಡ್ಡಿ ಅವರಿಗೆ ರಾಜ್ಯದ ಆಡಳಿತವನ್ನು ಹಸ್ತಾಂತರಿಸಿದಾಗ ಒಡೆಯರ್‌ ಅವರ ರಾಜತ್ವ ಇಲ್ಲವಾಯಿತು. ಆಮೇಲೆ ಜಯಚಾಮರಾಜ ಒಡೆಯರ್‌ ಭಾರತ ಸರಕಾರದ ಪ್ರತಿನಿಧಿಯಾಗಿ, ರಾಜಪ್ರಮುಖರಾಗಿ, ರಾಜ್ಯಪಾಲರಾಗಿ ನಾನ ಹುದ್ದೆಗಳನ್ನು ಸ್ವೀಕರಿಸಿದರೆಂಬುದು ಇತಿಹಾಸ. 1948ರಿಂದ 1969ರವರೆಗೆ (ಕೊನೆಯ ಬಾರಿ ಜಯಚಾಮರಾಜ ಒಡೆಯರ್‌ ಅವರು ಸಿಂಹಾಸನ ಏರಿ, ದರ್ಬಾರ್‌ ನಡೆಸಿದ ವರ್ಷ)  ಒಡೆಯರ್‌ ಅವರು ದಸರಾ ಎಂದು ಪರಿವರ್ತಿತವಾದ ನವರಾತ್ರಿ ಆಚರಣೆಯನ್ನು ಮುಂದುವರಿಸಿದರಾದರೂ ಅದು ಅಧಿಕೃತವಾಗಿರಲಿಲ್ಲ ಮತ್ತು ಅದೊಂದು  ಖಾಸಗಿ ದರ್ಬಾರೇ ಆಗಿತ್ತು.



ನಾಡಹಬ್ಬ ದಸರಾ

1971ರಿಂದ ಅಂದಿನ ಮೈಸೂರು ಸರಕಾರ ದಸರಾವನ್ನು ‘ನಾಡಹಬ್ಬ ದಸರಾ’ ಎಂದು ಪುನರ್‌ ನಾಮಕರಣ ಮಾಡಿ ದಸರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಕಳೆದ ವರ್ಷದವರೆಗೆ (2003)  ಶ್ರೀಕರಂಠದತ್ತ ನರಸಿಂಹರಾಜ ಒಡೆಯರ್‌ ಅವರು ಅರಮನೆಯೊಳಗೆ ಖಾಸಗಿ ದರ್ಬಾರ್‌  ನಡೆಸಿಕೊಂಡು ಬರುತ್ತಿದ್ದರು.


10 ದಿನಗಳ ಹಬ್ಬ

ಮೈಸೂರು ದಸರಾ 10 ದಿನಗಳ ಹಬ್ಬವಾಗಿದೆ. ಇದು ದುಷ್ಟಶಕ್ತಿಯನ್ನು ನಿಗ್ರಹಿಸಿ ವಿಜಯಪಡೆದ ಸಂಕೇತವೂ ಹೌದು. ಇಡೀ ಮೈಸೂರು ನಗರ ದೀಪಾಲಂಕಾರದಿಂದ ಝಗಮಗಿಸುತ್ತದೆ. ಮೈಸೂರು ಅರಮನೆ  ಸೇರಿದಂತೆ ಪ್ರಮುಖ ಕಟ್ಟಡಗಳನ್ನು  ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಲಾಗುತ್ತದೆ.  ನವರಾತ್ರಿ ಆರಂಭದ 9 ದಿನಗಳ ಕಾಲ ಅಂದರೆ ಪಾಡ್ಯದಿಂದ ಬಿದಿಗೆ, ತದಿಗೆ, ಚತುರ್ಥಿ,  ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಹೀಗೆ 9 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ಚಾಮುಂಡಿಬೆಟ್ಟ ಹಾಗೂ  ಅಂಬಾವಿಲಾಸ ಅರಮನೆಯಲ್ಲಿನಡೆದರೆ, ಆ ನಂತರ ವಿಜಯದಶಮಿಯಂದು  ಜಂಬೂ ಸವಾರಿಯೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾಗೆ ತೆರೆ ಬೀಳುತ್ತದೆ.



ಸಾಂಸ್ಕೃತಿಕ ಕಾರ್ಯಕ್ರಮ

ಚಾಮುಂಡಿಬೆಟ್ಟದಲ್ಲಿತಾಯಿ ಚಾಮುಂಡೇಶ್ವರಿಗೆ ವಿದಿವಿಧಾನದಂತೆ ಪೂಜೆ ಸಲ್ಲಿಸಿ ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ. ಬಳಿಕ ಪ್ರತಿದಿನವೂ ದಸರಾ ಸಂಗೀತೋತ್ಸವ, ನಾಟಕೋತ್ಸವ, ಜನಪದೋತ್ಸವ, ಕವಿಗೋಷ್ಟಿ, ಚಲನಚಿತ್ರೋತ್ಸವ, ಫಲಪುಷ್ಪ ಪ್ರದರ್ಶನ, ಕುಸ್ತಿ ಪ್ರದರ್ಶನ , ಬೊಂಬೆ ಪ್ರದರ್ಶನ, ಆಹಾರ ಮೇಳ , ಯುವದಸರಾ ಹೀಗೆ ನಾನಾ ಕಾರ್ಯಕ್ರಮಗಳು ನಡೆಯುತ್ತವೆ. ಈ ಬಾರಿ ಕೊರೊನಾದಿಂದಾಗಿ ಸೀಮಿತ ಪ್ರಮಾಣದ ಕಾರ್ಯಕ್ರಮಗಳು ನಡೆಯುತ್ತವೆ.



ಅರಮನೆಯಲ್ಲಿ


ದಸರಾ ಹಬ್ಬದಂದು ಮೈಸೂರಿನ ರಾಜಮನೆತನದವರು ಚಾಮುಂಡೇಶ್ವರಿ ದೇವಿಗೆ  ವಿಶೇಷ ಪೂಜೆ ಸಲ್ಲಿಸುವರು. ಚಂಡಿಕಾಹೋಮ, ಬಲಿ, ಮಹಿಷವಧೆ, ಶಮೀವೃಕ್ಷ ಸೇರಿದಂತೆ ಹಲವು ಪೂಜಾ ವಿಧಾನಗಳನ್ನು ಸಾಂಗೋಪವಾಗಿ ನಡೆಸಲಾಗುತ್ತದೆ. ದೇವಿ ಭಾಗವತವನ್ನು ಪಾರಾಯಣ ಮಾಡಲಾಗುತ್ತದೆ. ಈ ಸಂದರ್ಭದಲ್ಲಿಸಾಂಕೇತಿಕವಾಗಿ ಮಹಿಷಾಸುರನನ್ನು ಸಂಹರಿಸಲಾಗುತ್ತದ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಿಧನರಾಗುವವರೆಗೆ ಒಡೆಯರ್‌ ದಂಪತಿಗೆ ಪೂಜೆ ಮಾಡಲಾಗುತಿತ್ತು. ರಾಜಗತ್ತಿನಲ್ಲಿದರ್ಬಾರ್‌ ಹಾಲ್‌ಗೆ ಆಗಮಿಸುತ್ತಿದ್ದ ಒಡೆಯರ್‌ ಸಿಂಹಾಸನಕ್ಕೆ ಪೂಜೆ ಮಾಡಿ ಬಳಿಕ  ರಾಜಗತ್ತಿನಲ್ಲಿ ಸಂಹಾಸನದಲ್ಲಿ ಆಸೀನರಾಗುತ್ತಿದ್ದರು. ಈ ಸಂದರ್ಭ ಹೊಗಳುಭಟರಿಂದ ಬಹುಪರಾಕ್‌ ಕೇಳಿಬರುತಿತ್ತು. ನವರಾತ್ರಿಯ ಮೊದಲ ದಿನ ಅಂದರೆ ಪಾಡ್ಯದಂದು ಬೆಳಗ್ಗೆಯಿಂದ ಖಾಸಗಿ ದರ್ಬಾರ್‌ ನಡೆದರೆ ಉಳಿದಂತೆ ಸಂಜೆ  ವೇಳೆಯಲ್ಲಿನಡೆಯುತಿತ್ತು. ಈಗ ರಾಜರು ಇಲ್ಲದಿರುವುದರಿಂದ ಬಹುಶಃ ಸಿಂಹಾಸನದ ಮೇಲೆ ಖಡ್ಗವನ್ನಿಟ್ಟು ಪೂಜಾ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಯಿತು.
ಹತ್ತುದಿನಗಳ ಕಾಲ ಪ್ರತಿ ದಿನ ಖಾಸಗಿ ದರ್ಬಾರ್‌ ನಡೆಯುವ ಮುನ್ನ ಕೆಲ ವಿಧಿವಿಧಾನಗಳು ಕೂಡ ಇಲ್ಲಿನಡೆಯುತ್ತವೆ. ಅದರಂತೆ ಪಟ್ಟದ ಆನೆ, ಹಸು, ಕುದುರೆಗಳಿಗೆ ಅಲಂಕಾರ ಮಾಡಿ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅರಮನೆಗೆ ಇವುಗಳ ಪ್ರವೇಶವಾಗುತ್ತದೆ. ನಂತರ ದರ್ಬಾರ್‌ ಆರಂಭವಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಈ ಖಾಸಗಿ ದರ್ಬಾರ್‌ ದಸರಾದ ಅತ್ಯಕರ್ಷಣೆಯಾಗಿರುತ್ತದೆ.



ಜಂಬೂಸವಾರಿ

ಆನೆಗಳು ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಆನೆಗಳಿಲ್ಲದ ದಸರಾವನ್ನು ಊಹಿಸಲು ಸಾಧ್ಯವಿಲ್ಲ. ದಸರಾಕ್ಕೆ ಕೆಲವು ದಿನಗಳಿರುವಾಗ ವಿವಿಧ ಆನೆ ಶಿಬಿರಗಳಿಂದ ಮೈಸೂರಿನ ಅರಮನೆಯ ಆವರಣಕ್ಕೆ ಗಜಪಡೆಯನ್ನುಕರೆದುಕೊಂಡು ಬರಲಾಗುತ್ತದೆ.  ಎರಡು ತಂಡಗಳಾಗಿ ಆಗಮಿಸುವ ಗಜಪಡೆಗೆ ದಿನನಿತ್ಯ ಭೂರಿ ಭೋಜನ  ಮತ್ತು ಮಜ್ಜನದ ವೈಭೋಗ ಮಾಡಿ ಅಂಬಾರಿಯನ್ನು ಹೊರಿಸುವ ತಾಲೀಮು ನಡೆಸಲಾಗುತ್ತದೆ. 750 ಕೆ.ಜಿ ತೂಕದ ಮರದ ಅಂಬಾರಿಯನ್ನು ಹೊರುವ ಆನೆಗೆ  ಹಾಗೂ ಉಳಿದ ಆನೆಗಳಿಗೆ ಅರಮನೆಯಿಂದ ಸಯ್ಯಾಜಿರಾವ್‌ ರಸ್ತೆಯಲ್ಲಿಬನ್ನಿಮಂಟಪದವರೆಗೆ ಕಡ್ಡಾಯವಾಗಿ ಮಾರ್ಚ್‌ಫಾಸ್ಟ್‌ ನಡೆಸಲಾಗುತ್ತದೆ.



ರತ್ನಖಚಿತ ಸಿಂಹಾಸನ

ಅರಮನೆಯ ದರ್ಬಾರ್‌ ಹಾಲ್‌ನಲ್ಲಿರುವ ರತ್ನಖಚಿತ ಸಿಂಹಾಸನವು ಆಕರ್ಷಕವಾಗಿದ್ದು, ಇದನ್ನು ದಸರಾ ಸಂದರ್ಭ ಮಾತ್ರ ಜೋಡಿಸಲಾಗುತ್ತದೆ. ಈ ಕಾರ್ಯಕ್ಕೆ  ಮೈಸೂರು ಸಮೀಪದ ಗೆಜ್ಜಗಳ್ಳಿ ಗ್ರಾಮದಿಂದ ಆಯ್ದ ಕೆಲವರನ್ನು ಮಾತ್ರ ಕರೆತರಲಾಗುತ್ತದೆ. ಇದು ತಲತಲಾಂತರದಿಂದ ನಡೆದು ಬಂದಿದೆ. ಸಿಂಹಾಸನವು ಚಿನ್ನದ ಬಾಳೆಯ ಕಂಬ ಮತ್ತು ಚಿನ್ನದ ಮಾವಿನ ಎಲೆಗಳಿಂದ ಅಲಂಕರಿಸಲ್ಪಟ್ಟಿದೆ. ಛತ್ರಿಯ ತುದಿಯಲ್ಲಿಒಡವೆಗಳಿಂದ ಅಲಂಕರಿಸಿದ ಪಕ್ಷಿಯನ್ನು ಕೂರಿಸಲಾಗಿದೆ. ಸಿಂಹಾಸನವನ್ನು ಹತ್ತುವ ಎರಡು ಕಡೆಗಳಲ್ಲೂಸ್ತ್ರೀ ಪುತ್ಥಳಿಯನ್ನಿ ನಿರ್ಮಿಸಲಾಗಿದೆ. ಜೊತೆಗೆ ಛತ್ರಿಯ ಸುತ್ತಲೂ ಮುತ್ತಿನ ಕುಚ್ಚುಗಳನ್ನು ಕಟ್ಟಲಾಗಿದೆ. ಅಲ್ಲದೆ ಸಿಂಹಾಸನಕ್ಕೆ ಕರ್ಮರೂಪದ ಆಸನವನ್ನು ಒದಗಿಸಲಾಗಿದೆ. ಉಭಯ ಪಾಶ್ರ್ವಗಳಲ್ಲಿಯಾಳಿಗಳನ್ನು ಮತ್ತು ನಾಲ್ಕು ಕಡೆಗಳಲ್ಲಿಬಳ್ಳಿ ಲತೆಗಳನ್ನು ಕೆತ್ತಲಾಗಿದೆ. ಸಿಂಹಾಸನದ ದಕ್ಷಿಣದಲ್ಲಿಬ್ರಹ್ಮ, ಉತ್ತರದಲ್ಲಿಶಿವ , ಮಧ್ಯದಲ್ಲಿವಿಷ್ಣುವನ್ನು ನಿಲ್ಲಿಸಲಾಗಿದೆ. ವಿಜಯಸೂಚಕ ನಾಲ್ಕು ಸಿಂಹಗಳನ್ನು ಇಡಲಾಗಿದೆ. ಮೂರು ಕೋನಗಳಲ್ಲೂರಾಕ್ಷಸ ಶರೀರ, ಎರಡು ಕುದುರೆಗಳು ಮತ್ತು ನಾಲ್ಕು ಹಂಸಪಕ್ಷಿಗಳನ್ನಿಡಲಾಗಿದೆ. ನಾಗದೇವತೆಗಳ ಚಿತ್ರಗಳು, ಸ್ವಾಸ್ತಿಕ ಆಕೃತಿ ಮತ್ತು ಮುತ್ತಿನ ಹಡಗು ಮೇಲಿನ ಗುಡಾರಗಳ ಚಿತ್ರಣಗಳಿವೆ. ಸಿಂಹಾಸನವನ್ನು ನಾಲ್ಕು ದಿಕ್ಕುಗಳಲ್ಲಿತೆರೆಯಲಾಗಿದೆ. ಸಿಂಹಾಸನದ ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಶ್ಲೋಕಗಳಿವೆ.




ರಾಜ್ಯದ ಬೇರೆಲ್ಲಿ ದಸರಾ ನಡೆಯುತ್ತದೆ?


ನಾಡಹಬ್ಬವಾಗಿ ಮೆರೆಯುತ್ತಿರುವ ದಸರಾ  ಮೈಸೂರು ಮಾತ್ರವಲ್ಲದೆ  ಮಡಿಕೇರಿ, ಮಂಗಳೂರು, ಉಡುಪಿ, ಶ್ರೀರಂಗಪಟ್ಟಣ , ಕಾರವಾರ ಮುಂತಾದ ಜಿಲ್ಲೆಗಳಲ್ಲೂದಸರಾ ನಡೆಯುವ ಸಂಪ್ರದಾಯ ಕೆಲ ವರ್ಷಗಳಿಂದ ಆರಂಭಗೊಂಡಿದೆ. ಈ ಅರ್ಥದಲ್ಲಿ ರಾಜರ ಕಾಲದ ದಸರಾ ಹೋಗಿ ಪ್ರಜಾರಾಜ್ಯದ ದಸರಾ ವಿಜೃಂಭಿಸುತ್ತಿದೆ.        

Leave a Reply

Your email address will not be published. Required fields are marked *