‘ಅವಳ’ ಭಾವಜಗತ್ತಿಗೂ ಇರಲಿ ಗೌರವ…

ಇತ್ತೀಚೆಗೆ ಬಿಡುಗಡೆಯಾದ ಸಿನಿಮಾವೊಂದು ನಿಮಗೆ ನೆನಪಿರಬಹುದು. ಅದರಲ್ಲಿ ನಟಿಯೊಬ್ಬಳು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ದೃಶ್ಯವೊಂದು ಸಾಕಷ್ಟು ಸಂಚಲನ ಉಂಟುಮಾಡಿತ್ತು. ಈ ದೃಶ್ಯದಲ್ಲಿ ನಟಿಸಿದ ನಟಿ ಸ್ವರಾಭಾಸ್ಕರ್ ಸಾಕಷ್ಟು ಟ್ರೋಲ್ ಆಗಿದ್ದರು. ‘ಯಾರವಳು ಏನು ಮಾಡುತ್ತಿದ್ದಾಳೆ ನಾನು ಗೊಂದಲಕ್ಕೀಡಾಗಿದ್ದೇನೆ ಎಂದು ಅಭಿಮಾನಿಯೊಬ್ಬ ವ್ಯಂಗದ ಮಾತನ್ನು ಈ ನಟಿಯ ತಂದೆಗೆ ನಾಟಿದ್ದ. ಆದರೆ ಗಟ್ಟಿಗಿತ್ತಿಯಾದ ಈ ನಟಿ ನಾನೊಬ್ಬಳು ಕಲಾವಿದೆ. ಹಸ್ತಮೈಥುನ ಸಾಧನ ಬಳಸಿಕೊಳ್ಳುತ್ತಿರುವ ರೀತಿ ನಟನೆ ಮಾಡಿದ್ದೇನೆ. ಮುಂದಿನ ಬಾರಿ ಏನೇ ಕೇಳುವುದಿದ್ದರೂ ನೇರವಾಗಿ ನನ್ನ ಕೇಳಿ ತಂದೆಯನ್ನು ಕೇಳಬೇಕೆಂದಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಳು

ಇನ್ನು ಭಾರತೀಯ ಚಾಂಪಿಯನ್ ಓಟಗಾರ್ತಿ ದ್ಯುತಿ ಚಾಂದ್ ಸಲಿಂಗಿ ಜೊತೆ ಸಂಬಂಧ ಹೊಂದಿರುವುದಾಗಿ ಹೇಳಿದ್ದಾರೆ. ‘ನಾನು ಕಳೆದ 5 ವರ್ಷಗಳಿಂದ ನನ್ನೂರಿನ ಯುವತಿಯೊಬ್ಬಳ ಜತೆ ಸಂಬಂಧ ಹೊಂದಿದ್ದೇನೆ. ಅವಳೊಂದಿಗೆ ಮುಂದಿನ ಜೀವನ ಕಳೆಯುವುದು ನನ್ನ ಬಯಕೆ. ನನ್ನ ಜೀವನವನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಎಂದು ನಿರ್ಧರಿಸುವ ಹಕ್ಕು ನನ್ನದೇ ಆಗಿರುತ್ತದೆ’ಎಂದು ದಿಟ್ಟವಾಗಿ ಎಲ್ಲರೆದುರು ದ್ಯುತಿ ಹೇಳಿಕೊಂಡಿದ್ದರು.

ಲಸ್ಟ್ ಸ್ಟೋರಿ ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆದರೂ ಅದರಲ್ಲಿನ ದೃಶ್ಯ ವೀಕ್ಷಕರ ಕಣ್ಣಿನಿಂದ ಮರೆಯಾಗಲಿಲ್ಲ. ಅದರಲ್ಲಿ ಕಿಯಾರ ಅಡ್ವಾಣಿ ನಟನೆ ಹೆಣ್ಣು ತನ್ನ ಹಸಿವು ನಿದ್ರೆ ಪೂರೈಸಿಕೊಳ್ಳುವಂತೆ ಲೈಂಗಿಕ ಬಯಕೆಯನ್ನೂ ತೀರಿಸಿಕೊಳ್ಳುತ್ತಾಳೆ ಎಂಬುದನ್ನು ಸರಳವಾಗಿ ವಿವರಿಸಲಾಗಿತ್ತು.  

ನಟಿ ಕಿಯಾರಾ ಹೇಳುವಂತೆ, ನನ್ನ ಅಜ್ಜಿಯೊಂದಿಗೆ ಕುಳಿತು ನಾನೇ ನಟಿಸಿದ ಹಸ್ತಮೈಥುನದ ಸೀನ್ ನೋಡಿದೆ. ನನ್ನ ಕುಟುಂಬದವರು ಜತೆಯಾಗಿಯೇ ನೋಡಿದರು. ಪ್ರತಿಯೊಬ್ಬರು ನನ್ನ ನಟನೆಯನ್ನು ಕಂಡು ಕೊಂಡಾಡಿದರು ಎಂದು ಹೇಳಿಕೊಂಡಿದ್ದರು.

ಹಾಗೇ ಇತ್ತೀಚೆಗೆ ಜಾಸ್ತಿ ಸದ್ದು ಮಾಡಿದ್ದೆಂದರೆ ನಟಿ ಚಾರ್ಮಿ ಟ್ವೀಟ್. ತ್ರಿಷಾ ಕೃಷ್ಣನ್  ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ತ್ರಿಷಾಗೆ ಸ್ನೇಹಿತೆ ಚಾರ್ಮಿ ಕೌರ್ ವಿಶ್ ಮಾಡುತ್ತಾ, ಬೇಬಿ, ಈ ಲವ್ ಯೂ ಫಾರೆವರ್. ನಾವಿಬ್ಬರೂ ಮದುವೆಯಾಗೋಣವೇ? ನಿನ್ನ ಸಮ್ಮತಿಗಾಗಿ ನಿನ್ನ ಮೊಣಕಾಲ ಬಳಿ ಕುಳಿತು ಕಾಯುತ್ತೇನೆ’ ಎಂದು ಚಾರ್ಮಿ ಕೇಳಿಕೊಂಡಿದ್ದಾರೆ. 

****

ಈ ಮೇಲಿನ ಎಲ್ಲಾ ಸನ್ನಿವೇಶಗಳನ್ನು ಸ್ಥೂಲವಾಗಿ ಅವಲೋಕಿಸಿ. ಬೆಡ್ ರೂಂ ಲೈಟ್ ಅಫ್ ಅದ ಬಳಿಕದ ಸಂಗತಿಗಳನ್ನು ಹೀಗೆ ಬಹಿರಂಗವಾಗಿ ಹೇಳಿಕೊಂಡ ಉದಾಹರಣೆಗಳು ನಿಮಗೆಲ್ಲೂ ಸಿಗದು. ಅದೂ ಹೆಣ್ಣೊಬ್ಬಳು ತನ್ನ ಲೈಂಗಿಕ ಬಯಕೆಗಳ, ಚಟುವಟಿಕೆಗಳ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡದ್ದು ಇಲ್ಲವೇ ಇಲ್ಲವೇನೋ. ಆದರೆ ಈಗ ಕಾಲ ಬದಲಾಗಿದೆ. ನಾತಿಚರಾಮಿ ಚಿತ್ರದಲ್ಲಿ ನಾಯಕಿ ಆನ್ ಲೈನ್ ನಲ್ಲಿ ಖರೀದಿಸುವ ಹಸ್ತಮೈಥುನದ ಕೃತಕ ಸಾಧನವೊಂದರ ದೃಶ್ಯ ಅತಿ ಸಹಜ ಎಂಬಂತೆ ಚಿತ್ರದಲ್ಲಿಬೆರೆತುಹೋಗಿದೆ. ಅದೇ ರೀತಿ ಮುಜುಗರ ಎಂಬಂತಿದ್ದ ವಿಷಯಗಳನ್ನು ಹೆಣ್ಣುಮಕ್ಕಳು ನಾಲ್ಕು ಗೋಡೆಗಳಾಚೆ ಬಂದು ಮುಕ್ತವಾಗಿ ಮಾತನಾಡಲಾರಂಭಿಸಿದ್ದಾರೆ.

ಆವಾಗೆಲ್ಲ ಹೆಣ್ಣು ತನಗಿಸಿದ್ದನ್ನು ಹೇಳಲು ಒಂದು ವೇದಿಕೆ ಇರಲಿಲ್ಲ. ಜತೆಗೆ ಲೈಂಗಿಕ ವಿಷಯಕ್ಕೆ ಸಂಬಂಧಪಟ್ಟಂತೆ ಅವಳೇನಾದರೂ ಮಾತನಾಡಿದರೆ ಅದು ಘೋರ ಅಪರಾಧವಂತೆ ಬಿಂಬಿಸಲಾಗುತ್ತಿತ್ತು. ಅಂಥವರಿಗೆ ಗಂಡಸರ ಜತೆ ಮನೆಯ ಹಿರಿಯ ಹೆಣ್ಣುಮಕ್ಕಳಿಂದಲೇ ವಿರೋಧ ವ್ಯಕ್ತವಾಗುತ್ತಿತ್ತು. ಜತೆಗೆ ಬಜಾರಿ, ಗಂಡುಭೀರಿ ಎಂಬಿತ್ಯಾದಿ ಹೆಸರು ಕೂಡ ಸೇರಿಕೊಳ್ಳುತ್ತಿತ್ತು. ಆದರೆ ಈಗ ಮಿಲೆನಿಯಂ ಹುಡುಗಿಯರ ಜಮಾನ. ಏನೇ ಅನಿಸಿದರೂ ಯಾವುದೇ ಮುಜುರವಿಲ್ಲದೇ ಗಂಡಿನಷ್ಟೇ ಕೆಲವೊಮ್ಮೆ ಅವನನ್ನೂ ಮೀರಿ ಹೆಣ್ಣು ತನ್ನ ಭಾವನೆಗಳನ್ನು, ವ್ಯಕ್ತಪಡಿಸಬಲ್ಲಳು.

ಮೊದಲೆಲ್ಲಾ ಯಾವುದೇ ಪತ್ರಿಕೆ, ನಿಯತಕಾಲಿಕೆಗಳ ಪುಟತಿರುವಿದಾಗ ಅಲ್ಲಿ ಗಂಡೊಬ್ಬ ತನ್ನ ಲೈಂಗಿಕ ಸಮಸ್ಯೆಗಳನ್ನು ಯಾವುದೇ ಮುಜುಗರವಿಲ್ಲದೇ ಹರವಿ ಅದಕ್ಕೆ ಸಂಬಂಧಪಟ್ಟ ಪರಿಹಾರ ಕಂಡುಕೊಳ್ಳುತ್ತಿದ್ದ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ತನ್ನ ಲೈಂಗಿಕ ಭಾವನೆಗಳು , ಸಮಸ್ಯೆಗಳನ್ನು ಯಾವುದೇ ಮುಲಾಜಿಲ್ಲದೇ ಹೇಳಿಕೊಳ್ಳುತ್ತಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅಭಿಪ್ರಾಯವನ್ನು ಸರಳವಾಗಿ ಹರಿಯಬಿಡುತ್ತಾಳೆ. ಗೆಳೆಯರ ವಲಯದಿಂದ ಸಲಹೆಗಳನ್ನೂ ಪಡೆದುಕೊಳ್ಳುತ್ತಾಳೆ.

ತನ್ನ ಖಾಸಗಿ ಸಮಸ್ಯೆ, ತನ್ನ ಅಭಿಪ್ರಾಯ, ಸಂಗಾತಿಯ ಆಯ್ಕೆ ಇವು ಯಾವುದೇ ವಿಚಾರ ಬಂದರೂ ಹೆಣ್ಣು ಅಂಜದೇ ಹೇಳುತ್ತಾಳೆ. ಎಲ್ಲಾ ಹೆಣ್ಣುಮಕ್ಕಳಿಗೂ ಇಂಥದ್ದೊಂದು ಮುಕ್ತ ಅವಕಾಶ ಸಮಾಜದಲ್ಲಿ ನಿರ್ಮಾಣವಾದರೆ ಹೆಣ್ಣು ಮತ್ತಷ್ಟೂ ಸಬಲಳಾಗಿ ಬೆಳೆಯಬಲ್ಲಳೇನೋ.

ಮನೆಯವರ ಬೆಂಬಲ

ಮಗಳು ಸಲಿಂಗಿ ಎಂದು ಗೊತ್ತಾದಾಗಲೂ ಅಥವಾ ಅವಳು ತನ್ನು ಲೈಂಗಿಕ ಬಯಕೆಯನ್ನು ಈಡೇರಿಸಿಕೊಳ್ಳಲು ಹಸ್ತಮೈಥುನ ಅಥವಾ ಯಾವುದಾದರು ಸೆಕ್ಸ್ ಟಾಯ್ಸ್ ಬಳಸುತ್ತಿದ್ದಾಳೆ ಎಂದಾಕ್ಷಣ ಮನೆಯ ಮರ್ಯಾದೆ ಹೋಯ್ತು ಅಥವಾ ಅವಳೆನೋ ಮಾಡಬಾರದ್ದನು ಮಾಡುತ್ತಿದ್ದಾಳೆ ಎಂಬಂತೆ ವರ್ತಿಸಬೇಡಿ.

ಸಂಗಾತಿಯಿಂದ ಹಿಡಿದು ಅವರ ಬದುಕಿನ ಕೆಲವೊಂದು ಬಯಕೆಗಳ ಈಡೇರಿಕೆಗೆ ಅವರದ್ದೇ ಆದ ಆಯ್ಕೆ ಇರುತ್ತದೆ. ಅದನ್ನು ಪೋಷಕರು ಗೌರವಿಸಬೇಕಾಗುತ್ತದೆ.

ಇತರರ ಎದುರು ಅವರನ್ನು ಹೀಯಾಳಿಸಬೇಡಿ.

ಊಟ, ವಸತಿ ಎಂಬ ಮೂಲಭೂತ ಅಗತ್ಯಗಳಂತೆ ಸೆಕ್ಸ್ ಕೂಡಾ ಒಂದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಎಲ್ಲವನ್ನೂ ಹಂಚಿಕೊಳ್ಳುವ ಮನಸ್ಸಿನಲ್ಲಿಟ್ಟುಕೊಂಡು ಕೊರಗದ ಹೆಣ್ಣು ಮಕ್ಕಳನ್ನು ಬೆಂಬಲಿಸಿ. ಆಧುನಿಕ ಕಾಲಘಟ್ಟದಲ್ಲಿ ಆಕೆಗೆ ಮುಕ್ತವಾಗಿ ಉಸಿರಾಡಲು ಜಾಗ ಕೊಡಿ.

Leave a Reply

Your email address will not be published. Required fields are marked *