ಗೌರಿ ದುಃಖ: ಗಂಡಸರಿಗೆ ಹೇಗೆ ಅರ್ಥವಾದಿತು?

Being a mom is like being on house arrest…you cant go anywhere including the bathroom alone, and there always someone asking what you are doing!

ಈ ಮಾತು ತುಂಬಾ ನಿಜ ಅನಿಸುತ್ತೆ. ಅದು ಮನೆಯವರ ಸಹಾಯವಿಲ್ಲದೇ, ದೂರದ ಊರಿನಲ್ಲಿ ಗಂಡ ಮತ್ತು ಮಗುವಿನ ಜತೆ ಇರುವ ತಾಯಂದಿರಿಗೆ ಇದರ ಬಿಸಿ ತಟ್ಟಿರುತ್ತದೆ. ಇತ್ತೀಚೆಗೆ ನನ್ನ ಸಂಬಂಧಿಕರೊಬ್ಬರು ಫೋನ್ ಮಾಡಿದ್ದರು, ಮಾತಾಡೋಕೆ ಸಮಯವಿಲ್ಲ ಎನ್ನುತ್ತಿದ್ದಂತೆ, ‘ಅಂತದ್ದೇನು ದೊಡ್ಡ ಕೆಲಸ ನಿನಗೆ ಮನೆಯಲ್ಲಿಯೇ ಇರ್ತಿಯಾ ಮಗುವನ್ನು ನೋಡಿಕೊಳ್ಳುವುದು ಏನು ಮಹಾ ದೊಡ್ಡ ಕೆಲಸ’ಎಂದು ಬಿಟ್ಟರು. ಒಂದು ಸಲ ಕೋಪ ಬಂದಿತ್ತಾದರೂ, ಗಂಡಸರಿಗೆ ಹೇಗೆ ತಾನೆ ಅರ್ಥವಾದಿತು ಗೌರಿ ದುಃಖ ಎಂದು ಸುಮ್ಮನಾದೆ. ಅದು ಅಲ್ಲದೇ, ಅವರಿಗೆ ವಿವರಿಸುತ್ತಾ ಕುಳಿತುಕೊಳ್ಳುವುದು ಸಮಯ ವರ್ಥ್ಯ ಮಾಡಿದಂತೆ. ಆದರೆ ಈ ಪ್ರಶ್ನೆ ಬರೀ ಗಂಡಸರಿಂದಲೇ ತೂರಿ ಬರುತ್ತದೆ ಎಂದುಕೊಳ್ಳಬೇಡಿ. ಹೆಣ್ಣಿಗೆ ಹೆಣ್ಣೆ ಶತ್ರು ಎನ್ನುವಂತೆ ಹೆಂಗಸರೇನು ಇದರಿಂದ ಹೊರತಾಗಿಲ್ಲ! ‘ಮನೆಯಲ್ಲಿಯೇ ಇದ್ದು ಒಂದು ಮಗುವನ್ನು ನೋಡಿಕೊಂಡು, ಅಡುಗೆ ಮಾಡುವುದು ದೊಡ್ಡ ಯಜ್ಞ ಮಾಡಿದ ಹಾಗೆ ಮಾಡ್ತಾಳಪ್ಪ ಇವಳು’ ಎಂದು ಮಾತಿನಲ್ಲಿಯೇ ತಿವಿಯುವ ನಮ್ಮದೇ ಅತ್ತೆನೋ, ದೊಡ್ಡಮ್ಮನೋ, ಚಿಕ್ಕಮ್ಮನೋ ಅಥವಾ ಗೆಳತಿಯರು ಈ ಸಾಲಿನಲ್ಲಿ ಇದ್ದಾರೆ.

ಒಂದು ಮಗುವನ್ನು ಸಾಕುವುದು ಅಷ್ಟು ಸುಲಭದ ಕೆಲಸವೇ…? ಮಗು ಹಸಿದಾಗ ಊಟ ತಿನ್ನಿಸಿ, ಅತ್ತಾಗ ಹಾಲು ಕುಡಿಸಿ, ನಿದ್ರೆ ಬಂದಾಗ ಜೋಗುಳ ಹಾಡಿ ಮಲಗಿಸುವ ಕೆಲಸ ಸುಲಭವೆಂದವರು…? ಮಗುವಿಗೆ ಒಂದು ತುತ್ತು ಅನ್ನ ತಿನ್ನಿಸೋಕೆ ತಾಯಂದಿರು ಪಡುವ ಪಡಿಪಾಟಲು ಬೇರೆ ಅವರಿಗೆ ಅರ್ಥಮಾಡಿಸೋಕೆ ತುಸು ಕಷ್ಟನೇ. ನಿದ್ದೆಯಿಂದ ಎದ್ದ ಮಗು ದೇವರಂತೆ ಸುಮ್ಮನೇ ಕುಳಿತುಕೊಳ್ಳುತ್ತದೆಯೇ…? ಇನ್ನು ಮಗುವೊಂದು ಸ್ವಲ್ಪ ನಡೆದಾಡಲು ಕಲಿತರಂತೂ ತಾಯಿ ಪಾಡು ನೋಡುವುದಕ್ಕೆ ಆಗುವುದಿಲ್ಲ. ನಮ್ಮ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು ‘ನಡೆದಾಡುವ ಮಗು ಹರದಾಡುವ ಹಾಗೆ ಆದರೆ ತನ್ನ ಚಿನ್ನದ ಕಿವಿಯೋಲೆಯೊಂದನ್ನು ದೇವರ ಹುಂಡಿಗೆ ಹಾಕುತ್ತೇನೆ’ಎಂದು ಆಗಿನ ಕಾಲದ ತಾಯಿಯೊಬ್ಬಳು ಹೇಳಿದ್ದಳಂತೆ. ಅಂದರೆ ಮಗುವಿದ್ದ ಮನೆಯಲ್ಲಿ ತಾಯಿಗೆ ಒಂದರೆಗಳಿಗೆ ಪುರುಸೊತ್ತು ಅನ್ನುವುದು ಕೂಡ ಕೈಗೆಟುಕದಷ್ಟು ದುಬಾರಿ! ಮಗುವಿನ ಮೇಲೆ ಸದಾ ತನ್ನ ಕಣ್ಣೊಂದನ್ನು ಇಟ್ಟುಕೊಂಡೇ ಆಕೆ ಅಡುಗೆ ಇತ್ಯಾದಿ ಕೆಲಸ ಮಾಡಬೇಕು. ಇನ್ನು ಸ್ವಲ್ಪ ಮಾತನಾಡೋಕೆ ಶುರುಮಾಡಿದ ಮಗು ಮನೆಯಲ್ಲಿದ್ದರೆ ಎಂತಹ ಮೆದು ದನಿಯ ತಾಯಿಯಾದರೂ ಅವಳ ದನಿ ತಾರಕಕ್ಕೆ ಏರುತ್ತದೆ. ಒಂದು ಪ್ರಶ್ನೆಯನ್ನು ನೂರು ಬಾರಿ ಕೇಳಿದರೂ ಮಗುವಿನ ಕುತೂಹಲ ತಣಿಯದು. ಉತ್ತರಿಸಿ ಸೋತ ತಾಯಿಯ ದಣಿವನ್ನು ಬಲ್ಲವರು?

ತಾಯ್ತನ ಎಂದರೆ ಅಷ್ಟು ಸುಲಭವಲ್ಲ. ತಾಯ್ತನ ಎನ್ನುವುದು ಎಷ್ಟು ಬಂಧನವಾಗಿರುತ್ತೋ ಅಷ್ಟೇ ಒಂದು ವೃತ್ತಿ ಕೂಡ ಆಗಿರುತ್ತದೆ. ಮಗುವಿಗೆ ಆಹಾರ ತಯಾರಿಸುವುದು, ಊಟ ಮಾಡಿಸುವುದು, ಸ್ನಾನ ಮಾಡಿಸುವುದು, ಅದರ ಜತೆ ಆಟವಾಡುವುದು, ಇದರ ನಡುವೆ ಮಗುವಿದ್ದ ಮನೆಯಲ್ಲಿ ಬಟ್ಟೆ, ಪಾತ್ರೆಗಳದ್ದೆ ರಾಶಿ ತುಂಬಿರುತ್ತದೆ. ಮಗು ಮಲಗಿದ ಮೇಲೆ ಒಂದಷ್ಟು ಕ್ಲೀನಿಂಗ್, ಬಟ್ಟೆ ಒಗೆಯುವುದು ಕೆಲಸಗಳನ್ನು ಮಾಡಿ ಮುಗಿಸಬೇಕಾಗುತ್ತದೆ. ಅದರಲ್ಲೂ ಕೋಳಿ ನಿದ್ದೆ ಮಾಡಿ ಏಳುವ ಮಕ್ಕಳಿದ್ದರೆ ಆ ತಾಯಂದಿರ ಕಷ್ಟ ಹೇಳಲು ಸಾಧ್ಯವಿಲ್ಲ. ಅರೆಗಳಿಗೆ ಬಾತ್ ರೂಂಗೆ ಹೋಗುವುದಕ್ಕೂ ಕೂಡ ಆಕೆ ಯೋಚಿಸಬೇಕಾಗುತ್ತದೆ. ಇಷ್ಟೆಲ್ಲ ಕೆಲಸ ಮಾಡಿಯೂ ಬೇರೆ ಅವರು ಮನೆಯಲ್ಲಿಯೇ ಇರ್ತಿಯಾ ಏನು ಮಹಾ ಕೆಲಸವೆಂದಾಗ ಸಿಟ್ಟು ನೆತ್ತಿಗೇರುವುದು ಸಹಜವಾದ ಪ್ರಕ್ರೀಯೆ.

ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದಳು ‘ಒಂದು ತಿಂಗಳು ತಾಯಿ ಮನೆಗೆ ಹೋಗಿ ಇದ್ದು ಚೆನ್ನಾಗಿ ನಿದ್ದೆ ಮಾಡಬೇಕು. ನಿದ್ದೆ ಮಾಡದೇ ಎಷ್ಟೋ ವರ್ಷ ಆದ ಹಾಗಿದೆ’ ಎನ್ನುತ್ತಿದ್ದಳು. ಈ ನಿದಿರೆಯ ಕಾರಣಕ್ಕಾಗಿ ಅವಳ ಮತ್ತು ಗಂಡನ ಮಧ್ಯೆ ಮುನಿಸಿಗೂ ಕಾರಣವಾಗಿತ್ತೂ. ತಿಂಗಳ ಸುಸ್ತಿನ ಕಾರಣದಿಂದ ಒಂದ್ಹತ್ತು ನಿಮಿಷ ಮಲಗುತ್ತೇನೆ, ಮಗುವನ್ನು ನೋಡಿಕೊಳ್ಳಿ ಎಂದು ಗಂಡನಿಗೆ ಹೇಳಿದ್ದಳು. ಆದರೆ ರಚ್ಚೆ ಹಿಡಿದ ಮಗುವನ್ನು ಗಂಡ ಸಮಾಧಾನ ಪಡಿಸಲಾಗದೇ ಇವಳ ಬಳಿ ಬಿಟ್ಟು ಹೋದಾಗ ಸಿಟ್ಟಿನಲ್ಲಿ ಮಗುವಿಗೆ ಒಂದೇಟು ಹೊಡದೇ ಬಿಟ್ಟಳು. ಮಗುವಿಗೆ ಏಟು ಹೊಡೆದದ್ದಕ್ಕೆ ಗಂಡನಿಗೆ ಕೋಪ ಬಂದು ಆಕೆಗೆ ಡಿವೋರ್ಸ್ ಕೊಡುತ್ತೇನೆ ಎನ್ನುವ ಹಂತದ ತನಕ ಬಂದಿದ್ದ ಆ ಗಂಡ ಮಹಾಶಯ! ‘ರಾತ್ರಿ ಇಡೀ ಮಗು ನಿದ್ದೆ ಮಾಡಲ್ಲ, ಮೊಲೆ ಹಾಲು ಕುಡಿಯುತ್ತಿರುತ್ತದೆ. ಬೆಳಿಗ್ಗೆ ಎದ್ದರೆ ಮನೆಕೆಲಸ, ಕೆಲವೊಮ್ಮೆ ರಾತ್ರಿ ನಿದ್ದೆ ಇಲ್ಲದ ಕಾರಣ ಬೆಳಿಗ್ಗೆ ಕಣ್ಣು ತೆರೆಯುವುದಕ್ಕೂ ಕೂಡ ಆಗುವುದಿಲ್ಲ. ಮಲಗಿದರೆ ಅತ್ತೆ ಕೊಂಕು ನುಡಿಯುತ್ತಾರೇನೋ ಎಂಬ ಭಯ. ಈ ಮದುವೆ, ಮಕ್ಕಳಿಗಿಂತ ಮದುವೆ ಆಗದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿರುತ್ತೆ’ ಎಂದು ನೋವಿನಿಂದ ನುಡಿಯುತ್ತಾಳೆ ಆಕೆ.

ಮಗುವಾದ ನಂತರ ತಾಯಿಗೆ ಮೊದಲು ಕಾಡುವುದೇ ನಿದ್ದೆಯ ಕೊರತೆ. ಚೆನ್ನಾಗಿ ಮಲಗುವ ಮಗುವಾದರೆ ಪರ್ವಾಗಿಲ್ಲ ಹತ್ತು ನಿಮಿಷ ಮಲಗಿದಂತೆ ಆಡಿ ಇನ್ನೊಂದೈದು ನಿಮಿಷದಲ್ಲಿ ಎದ್ದೇಳುವ ಮಗುವಿದ್ದರೆ ಆ ತಾಯಿ ಕಷ್ಟ ಅವಳಿಗೆ ಮಾತ್ರ ತಿಳಿಯಲು ಸಾಧ್ಯ. ಹಗಲು ಹೊತ್ತಿನಲ್ಲಿ ಮಗುವನ್ನು ಮಲಗಿಸಿ ತಾನು ನಿದ್ರೆಯ ಮಡಿಲಿನೊಳಗೆ ಜಾರೋಣವೆಂದರೆ ಮನೆಕೆಲಸ, ಅಡುಗೆ ಕೆಲಸ ಕಾದಿರುತ್ತದೆ ಹಾಗಾಗಿ ಸುಖನಿದ್ರೆಯ ಮಾತೇ ಇಲ್ಲ.

ಸರಿಯಾದ ನಿದ್ದೆ ಇರದ ಕಾರಣ ಭಾವನಾತ್ಮಕ ಏರಿಳಿತಗಳು ಉಂಟಾಗುತ್ತದೆ. ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಎಲ್ಲರ ಮೇಲೂ ಸಿಟ್ಟು ಬರುತ್ತದೆ. ಮನೆಯವರ ಮೇಲೆ ಸಿಟ್ಟು ತೋರಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಆಗ ರಚ್ಚೆ ಹಿಡಿದಿರುವ ಮಗುವಿಗೆ ಒಂದೇರಡೇಟು ಕೊಟ್ಟು ತನ್ನ ಕೋಪ ಶಮನಮಾಡಿಕೊಳ್ಳುತ್ತಾಳೆ ತಾಯಿ.

ಸಾಮಾನ್ಯವಾಗಿ ಈಗಿನವರು ಅತ್ತೆ-ಮಾವನ ಜತೆ ಅಥವಾ ತಾಯಿ ಜತೆ ಇರುವುದು ಕಡಿಮೆ. ತಮ್ಮದೇ ಪುಟ್ಟ ಸಂಸಾರ ಮಾಡಿಕೊಂಡು ಬೇರೆ ಇರುತ್ತಾರೆ. ಮೊದಲು ಯಾವುದೇ ರಗಳೆ ಇಲ್ಲದೇ ನೆಮ್ಮದಿಯ ಬದುಕು ಬದುಕುತ್ತಿದ್ದವರಿಗೆ ಒಂದು ಮಗುವಿನ ಆಗಮನದ ನಂತರ ಜವಾಬ್ದಾರಿಗಳು ಹೆಗಲಿಗೇರುತ್ತವೆ. ಇಂದಿನ ದುಬಾರಿ ಯುಗದಲ್ಲಿ ಕೆಲಸದವರನ್ನು ಇಟ್ಟುಕೊಳ್ಳುವುದು ಮತ್ತೊಂದು ದೊಡ್ಡ ಹೊರೆ. ಹಾಗಾಗಿ ಮಗುವನ್ನು ನೋಡಿಕೊಂಡು, ಮನೆಕೆಲಸವನ್ನು ಮಾಡಿಕೊಂಡು ಹೆಣ್ಣೊಂದು ತನ್ನ ತಾಯ್ತನದ ಸಂತೋಷವನ್ನು ಅನುಭವಿಸುತ್ತಿರುತ್ತಾಳೆ. ಹಾಗಾಗಿ ಇನ್ನೊಬ್ಬರ ಕಷ್ಟಕ್ಕೆ ನಮಗೆ ಸಹಾಯ ಮಾಡುವುದಕ್ಕೆ ಆಗದಿದ್ದರೂ ಪರ್ವಾಗಿಲ್ಲ. ಕೊಂಕು ಮಾತಿನ ಬಾಣ ಬಿಟ್ಟು ಚುಚ್ಚಬೇಡಿ. ಒಂದು ಮಗುವನ್ನು ಸಾಕಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ತಾಯಿಪಡುವ ಶ್ರಮ ಬೆಲೆಕಟ್ಟಲಾಗದಂತದ್ದು.

Leave a Reply

Your email address will not be published. Required fields are marked *