ಸಾವಿರಾರು ಬ್ಲಾಗರ್ಗಳ, ವೆಬ್ ಕಂಟೆಂಟ್ ಬರಹಗಾರರ ತಪಸ್ಸಿನ ಫಲವೋ ಎಂಬಂತೆ ಈ ವರ್ಷದ ಆರಂಭದಿಂದ ಕನ್ನಡ ವೆಬ್ ತಾಣಗಳಿಗೆ ಗೂಗಲ್ ಆಡ್ಸೆನ್ಸ್ ಅನುಮತಿ ದೊರಕುತ್ತಿದೆ. ಕಡಿಮೆ ಪೇಜ್ವ್ಯೂಸ್ ಇದ್ದವರಿಗೆ ಕೆಲವು ರೂಪಾಯಿಗಳಲ್ಲಿ ಆದಾಯ ಸಿಗುವುದು ನಿಜವಾಗಿದ್ದರೂ ಲಕ್ಷಲಕ್ಷ ಪೇಜ್ವ್ಯೂಸ್ ಇರುವವರು ಸಾವಿರ ಲೆಕ್ಕದಲ್ಲಿ ಆಡ್ಸೆನ್ಸ್ ಆದಾಯ ಗಳಿಸುತ್ತಿರುವುದು ಸುಳ್ಳಲ್ಲ. ಇನ್ನು ಕೆಲವರು AdSense Account Terminated ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ತಾವು ಎಡವಿದ್ದೆಲ್ಲಿ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಗೂಗಲ್ ಆಡ್ಸೆನ್ಸ್ ಅನ್ನು ಎಚ್ಚರಿಕೆಯಿಂದ ಹೇಗೆ ಬಳಸಬೇಕು ಎಂಬ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕರ್ನಾಟಕ ಬೆಸ್ಟ್ ಮೂಲಕ ಈ ಲೇಖನ ಬರೆಯಲಾಗಿದೆ.
ಈ ಕೆಳಗಿನ ಇಮೇಲ್ ನಿಮಗೂ ಬರಬಹುದು ಎಚ್ಚರ
ನಿಮಗೆ ಗೂಗಲ್ನಿಂದ ಮೊದಲನೇ ಎಚ್ಚರಿಕೆಯ ಕರೆಗಂಟೆ
Hello, |
We recently identified invalid traffic concerns in your AdSense account. As a result, we have introduced an ad serving limit on your account. We will automatically review and update this limit as we continue to monitor your traffic. ಮೇಲಿನ ಸೂಚನೆ ಬಂದರೂ, ಬರದಿದ್ದರೂ, ನೀವು ಇನ್ವ್ಯಾಲಿಡ್ ಕ್ಲಿಕ್ ಮುಂದುವರೆಸಿದರೆ ನಿಮ್ಮ ಆಡ್ಸೆನ್ಸ್ ಖಾತೆ ೩೦ ದಿನಗಳ ಕಾಲ ಬ್ಲಾಕ್ ಆಗಬಹುದು. |
ಮೂವತ್ತು ದಿನ ಆಡ್ಸೆನ್ಸ್ ಬ್ಯಾನ್ ಇಮೇಲ್
Hello,
We recently detected invalid traffic in your account (Publisher Code: pub-೦೦೦೦೦೦೦). As a result, we’ve temporarily suspended your account for 30 days. During this time, no ads will be served on your site(s), mobile app(s), or YouTube channel(s).
ಮುಟ್ಟಬೇಕೆನಿಸುತ್ತದೆ, ಮುಟ್ಟಬೇಡಿ!
ಸುಂದರವಾದ ಹುಡುಗಿಯರನ್ನು ನೋಡಿದರೆ ತರುಣರಿಗೆ ಮುಟ್ಟಬೇಕೆನಿಸಬಹುದು! ಆದರೆ, ಮುಟ್ಟಿದರೆ ಚಪ್ಪಲಿ ಹೊಡೆತ ಗ್ಯಾರಂಟಿಯಲ್ಲವೇ. ಇದೇ ರೀತಿ ನಿಮ್ಮ ವೆಬ್ಸೈಟ್ನಲ್ಲಿರುವ ಗೂಗಲ್ ಆಡ್ಸೆನ್ಸ್ ಅನ್ನು ಕ್ಲಿಕ್ ಮಾಡುತ್ತಿದ್ದರೆ ನಿಮಗೆ ಮೊದಲ ಹೊಡೆತವು “ಒಂದು ತಿಂಗಳ ಬ್ಲಾಕ್’’ ರೂಪದಲ್ಲಿ ಎದುರಾಗಬಹುದು. ಬ್ಲಾಕ್ ಆದ ಒಂದು ತಿಂಗಳ ಬಳಿಕವೂ ಇದೇ ರೀತಿ ಮಾಡಿದರೆ ಪರ್ಮನೆಂಟ್ ಬ್ಲಾಕ್ ಶಿಕ್ಷೆ ಎದುರಾಗಬಹುದು. ಈ ರೀತಿ ಪರ್ಮನೆಂಟ್ ಬ್ಲಾಕ್ ಆದರೆ ಇನ್ನೊಂದು ಇಮೇಲ್ ಖಾತೆ ತೆರೆದು ಆಡ್ಸೆನ್ಸ್ಗೆ ಅರ್ಜಿ ಸಲ್ಲಿಸಬಹುದು ಎಂದುಕೊಂಡಿರಾ? ಜೀಮೇಲ್ ನಿಮ್ಮ ಯಾವುದೇ ಇಮೇಲ್ ಖಾತೆಯನ್ನು ಪತ್ತೆಹಚ್ಚುತ್ತದೆ. ಬೇರೆ ವ್ಯಕ್ತಿಯ ಖಾತೆಯಲ್ಲಿ ಅರ್ಜಿ ಸಲ್ಲಿಸುವುದೊಂದೇ ದಾರಿ. ಆದರೆ, ಬೇರೆ ವ್ಯಕ್ತಿಯ ಖಾತೆಯಲ್ಲಿ ಅರ್ಜಿ ಸಲ್ಲಿಸಿದ್ದು ಗೂಗಲ್ಗೆ ತಿಳಿದಾಗ (ಸ್ವಲ್ಪ ತಡವಾಗಿ ತಿಳಿದರೂ) ಆ ಖಾತೆಯೂ ಬ್ಲಾಕ್ ಆಗುತ್ತದೆ.
ಇದು ಗೂಗಲ್ನ ಅಹಂ ಅಲ್ಲ, ದೂರದರ್ಶಿತ್ವ
ಜಾಹೀರಾತು ಕ್ಲಿಕ್ ಮಾಡಿದರೆ ಜಾಹೀರಾತು ನೀಡಿದ ಕಂಪನಿಗಳಿಂದ ಗೂಗಲ್ಗೆ ಆದಾಯ ದೊರಕುತ್ತದೆ. ಯಾಕೆ ನಮ್ಮನ್ನು ಬ್ಲಾಕ್ ಮಾಡುತ್ತದೆ ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಗೂಗಲ್ಗೆ ನೀವು ಅನಿವಾರ್ಯವಲ್ಲ. ಅದೊಂದು ದೊಡ್ಡ ಕಂಪನಿ. ಅದರ ಜಾಹೀರಾತುಗಳನ್ನು ಪ್ರದರ್ಶಿಸಲು ಹಲವು ಮಿಲಿಯನ್ ಸಂಖ್ಯೆಯಲ್ಲಿ ವೆಬ್ಸೈಟ್ಗಳು, ಬ್ಲಾಗ್ಗಳು, ಯೂಟ್ಯೂಬ್ ಚಾನೆಲ್ಗಳು, ಗೇಮ್ಸ್ ಸಾಫ್ಟ್ವೇರ್ ತಾಣಗಳು ಇವೆ. ಹೀಗಾಗಿ, ನಮ್ಮಂತಹ, ನಿಮ್ಮಂತಹ ವೆಬ್ಸೈಟ್ನಲ್ಲಿ ಜಾಹೀರಾತು ಬರದಿದ್ದರೂ ಅದಕ್ಕೆ ನಷ್ಟವಿಲ್ಲ.
ತನಗೆ ಜಾಹೀರಾತು ನೀಡುವ ಕಂಪನಿಗಳು, ಬಿಸ್ನೆಸ್ಗಳ ಮುಂದೆ ತನ್ನ ಬದ್ಧತೆಯನ್ನು ಕಾಪಾಡಿಕೊಳ್ಳಲು ಹಲವು ವರ್ಷಗಳಿಂದ ಗೂಗಲ್ ಪ್ರಯತ್ನಿಸುತ್ತಿದೆ. ಗೂಗಲ್ ಎನ್ನುವುದು ಸಡನ್ ಬೆಳೆದ ಕಂಪನಿಯಲ್ಲ. ಹಲವು ಹತ್ತು ವರ್ಷ ದೂರದರ್ಶಿತ್ವ ಹೊಂದಿರುವ ಕಂಪನಿ. ಹೀಗಾಗಿ, ತನ್ನ ದೀರ್ಘಕಾಲದ ಗುರಿಯತ್ತ ಲಕ್ಷ್ಯವಿಟ್ಟುಕೊಂಡೇ ಅದು ಹೆಜ್ಜೆಯಿಡುತ್ತದೆ. ನೀವು ಈ ತಿಂಗಳ ಆದಾಯ ಹೆಚ್ಚಿಸಬೇಕೆಂದು ಅಡ್ಡದಾರಿ ಹಿಡಿದರೆ ಗೂಗಲ್ ನಿಮ್ಮ ಆಡ್ಸೆನ್ಸ್ ಖಾತೆಯನ್ನು ಬ್ಲಾಕ್ ಮಾಡುತ್ತದೆ.
ನಿಮ್ಮ ವೆಬ್ಸೈಟ್ ನೀವು ಜಾಸ್ತಿ ನೋಡಬೇಡಿ
ನೀವು ಹೊಸದಾಗಿ ವೆಬ್ಸೈಟ್ ಮಾಡಿದ್ದೀರಿ ಎಂದಿರಲಿ. ಅದಕ್ಕೆ ನಿಮ್ಮದು, ನಿಮ್ಮ ಮನೆಯವರದ್ದು ಬಿಟ್ಟರೆ ಹೆಚ್ಚಿನ ಪೇಜ್ವ್ಯೂಸ್ ಇಲ್ಲ. ಇಂತಹ ಸಮಯದಲ್ಲಿ ಒಳ್ಳೆಯ ಕಂಟೆಂಟ್ ಇರುವ ಕಾರಣ ಆಡ್ಸೆನ್ಸ್ ಅನುಮತಿ ದೊರಕಿರುತ್ತದೆ. ಆದರೆ, ಆ ವೆಬ್ಸೈಟ್ನಲ್ಲಿರುವ ಕಂಟೆಂಟ್ ಅನ್ನು ನಿಮ್ಮ ಕಂಪ್ಯೂಟರ್, ನಿಮ್ಮ ಮೊಬೈಲ್, ನಿಮ್ಮ ಮಕ್ಕಳ ಮೊಬೈಲ್, ಹೆಂಡತಿಯ ಮೊಬೈಲ್ ಮೂಲಕ ಮಾತ್ರ ನೋಡಲಾಗುತ್ತದೆ. ಇನ್ನು ಕೆಲವರು ಹೊರಗಿನಿಂದ ನೋಡಬಹುದು. ಈ ಸಮಯದಲ್ಲಿ ಆ ಜಾಹೀರಾತು ಹೆಚ್ಚು ನೋಡಿದ ಲೊಕೆಷನ್ ನಿಮ್ಮ ಮನೆಯನ್ನೇ ತೋರಿಸುತ್ತದೆ. ಹೆಚ್ಚು ನೋಡಿದ ಡಿವೈಸ್ ನಿಮ್ಮ ಮೊಬೈಲನ್ನೇ ತೋರಿಸುತ್ತದೆ. ಹೆಚ್ಚು ಆಡ್ ಕ್ಲಿಕ್ ಆದ ಸಾಧನ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಆಗಿರುತ್ತದೆ. ಒಂದು ಸಾವಿರ ಜಾಹೀರಾತು ವೀಕ್ಷಣೆಗೆ ನಿಮಗೆ ಒಂದು ಹತ್ತು ರೂಪಾಯಿ ಕೊಡೋಣ ಎಂದುಕೊಂಡ ಗೂಗಲ್ ಅಲ್ಗರಿದಂಗಳಿಗೆ ಈ ಸತ್ಯ ತಿಳಿಯುತ್ತದೆ. ನಿಮ್ಮ ಖಾತೆಯನ್ನು ಬ್ಲಾಕ್ ಮಾಡುತ್ತದೆ.
ಸರಿ, ನಮ್ಮ ಮನೆಯಲ್ಲಿರುವ ಮೊಬೈಲ್ ಬೇಡ. ನಿಮಗೆ ಹತ್ತು ಸ್ನೇಹಿತರು ಇರಬಹುದು.ಅವರೆಲ್ಲರೂ ಬೇರೆ ಬೇರೆ ಊರುಗಳಲ್ಲಿ ಇರಬಹುದು.ಅವರಲ್ಲಿ ಜಾಹೀರಾತು ಕ್ಲಿಕ್ ಮಾಡಲು ಹೇಳುವಿರಿ. ಈಗಲೂ ಒಂದೇ ಸಾಧನದಿಂದ ಹೆಚ್ಚು ಕ್ಲಿಕ್ ಆಗಿರುವುದು ಗೂಗಲ್ಗೆ ತಿಳಿಯುತ್ತದೆ. ನಿಮ್ಮ ಖಾತೆ ಬ್ಲಾಕ್ ಆಗುತ್ತದೆ. ಗೂಗಲ್ ಸರ್ಚ್ನಿಂದ ಬಂದ ವೀಕ್ಷಣೆಗಳಿಗೆ ಹೆಚ್ಚು ಆದಾಯ ದೊರಕುತ್ತದೆ. ಸೋಷಿಯಲ್ ಮೀಡಿಯಾ ಅಥವಾ ನೇರವಾಗಿ ಬಂದ ಪೇಜ್ವ್ಯೂಸ್ಗಳತ್ತ ಒಂದು ಅನುಮಾನದ ಕಣ್ಣು ಯಾವಾಗಲೂ ಇರುತ್ತದೆ. ದಿನಕ್ಕೆ ಹಲವು ಸಾವಿರ ಪೇಜ್ವ್ಯೂಸ್ ಬಂದಾಗ ಇಂತಹ ಸಮಸ್ಯೆ ಕಡಿಮೆ ಇರುತ್ತದೆ. ಆದರೆ, ಆ ಸಮಯದಲ್ಲಿಯೂ ಒಂದೇ ಮೊಬೈಲ್ ಮೂಲಕ ಹೆಚ್ಚು ಕ್ಲಿಕ್ ಆಗಿದೆಯೇ ಎಂದು ಗೂಗಲ್ ಪರಿಶೀಲಿಸುತ್ತದೆ.
ನಿಮ್ಮ ವೈರಿಗಳು ಜಾಹೀರಾತು ಕ್ಲಿಕ್ ಮಾಡಿ ನಿಮ್ಮ ವೆಬ್ಸೈಟ್ ಜಾಹೀರಾತು ಬ್ಲಾಕ್ ಮಾಡಬಹುದಲ್ಲವೇ? ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಇಂತಹ ಸಮಸ್ಯೆ ಆರಂಭದಲ್ಲಿತ್ತು. ಆದರೆ, ಕರ್ನಾಟಕ ಬೆಸ್ಟ್ ಮೂಲಕ ಜಾಹೀರಾತು ಜೋಡಿಸಿಕೊಂಡ ಜನರಿಗೆ ಅಂತಹ ಸಮಸ್ಯೆ ಇರುವುದಿಲ್ಲ. ಯಾಕೆಂದರೆ, ಅದಕ್ಕೆ ಇಂತಹ ಕುತಂತ್ರಗಳನ್ನು ಕಂಡುಹಿಡಿದು, ಆ ಐಪಿ ವಿಳಾಸವನ್ನು ಬ್ಲಾಕ್ ಮಾಡುವ ಶಕ್ತಿಯೂ ಕರ್ನಾಟಕ ಬೆಸ್ಟ್ ವಿನ್ಯಾಸದ ವೆಬ್ಸೈಟ್ಗಳಿಗೆ ಇದೆ. ಇದು ಪ್ರೊಫೆಷನಲ್ ಸಿಕ್ರೇಟ್.
ಸ್ನೇಹಿತರಲ್ಲಿ ಕ್ಲಿಕ್ ಮಾಡಲು ಹೇಳಬೇಡಿ
ಹೊಸದಾಗಿ ಆಡ್ಸೆನ್ಸ್ ದೊರಕಿದಾಗ ಒಂದೊಂದು ಕ್ಲಿಕ್ಗೂ ಡಾಲರ್ ರೂಪದಲ್ಲಿ ಹಣ ಏರುವುದನ್ನು ಕಂಡಾಗ ನಿಮ್ಮ ಸ್ನೇಹಿತರಲ್ಲಿ, ಬಂಧುಬಳಗದವರಲ್ಲಿ ಕ್ಲಿಕ್ ಮಾಡುವಂತೆ ಹೇಳಬೇಡಿ. ಈ ರೀತಿ ಹೆಚ್ಚು ಕ್ಲಿಕ್ ಆದಾಗ ಆಡ್ಸೆನ್ಸ್ ಬ್ಲಾಕ್ ಆಗುತ್ತದೆ.
ಪರಿಹಾರ ಏನು?
ನಿಮ್ಮ ವೆಬ್ಸೈಟ್ಗೆ ನೀವೇ ಕಂಟೆಂಟ್ ಬರೆಯುವ ಕಾರಣ ಕಂಪ್ಯೂಟರ್ನಲ್ಲಿ ದಿನಕ್ಕೆ ಹಲವು ನೂರುಬಾರಿ ವೆಬ್ಸೈಟ್ ನೋಡುತ್ತಿರಬೇಕಾಗುತ್ತದೆ. ಇಂತಹ ಸಮಯದಲ್ಲಿ ಜಾಹೀರಾತುಗಳು ಸಹಜವಾಗಿ ಕಾಣಿಸುತ್ತದೆ. ಇದನ್ನು ತಪ್ಪಿಸಲು ನೀವು
- ಮೊದಲನೆಯದಾಗಿ ಆದಷ್ಟು ಕಂಪ್ಯೂಟರ್ ಅನ್ನೇ ಬಳಸಿ, ಕಂಪ್ಯೂಟರ್ನಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಅನ್ನೇ ಬಳಸಿ.
- ನಿಮ್ಮ ಕ್ರೋಮ್ಗೆ ಗೂಗಲ್ ಆಡ್ಸೆನ್ಸ್ ಮಾನಿಟರ್ ಮಾಡುವ ಎಕ್ಸ್ಟೆನ್ಷನ್ ಅಳವಡಿಸಿಕೊಳ್ಳಿ. ಈ ರೀತಿ ಎಕ್ಸ್ಟೆನ್ಷನ್ ಅಳವಡಿಸಿಕೊಂಡರೆ ನೀವು ನೋಡಿದ ಜಾಹೀರಾತುಗಳನ್ನುಗೂಗಲ್ ಲೆಕ್ಕ ಹಾಕುವುದಿಲ್ಲ. ಈ ಎಕ್ಸ್ಟೆನ್ಷನ್ ಮೊಬೈಲ್ನಲ್ಲಿ ವರ್ಕ್ ಆಗುವುದಿಲ್ಲ ಎನ್ನುವುದನ್ನು ಗಮನಿಸಿರಿ.
ಗಮನಿಸಬೇಕಾದ ಅಂಶಗಳು
- ಮೋಸದ ಕ್ಲಿಕ್ಗಳು, ಮೋಸದ ಟ್ರಾಫಿಕ್ ಮತ್ತು ಮೋಸದ ಟ್ರಿಕ್ಗಳನ್ನು ಗೂಗಲ್ ಗಮನಿಸುತ್ತದೆ. ಹೀಗಾಗಿ ಆಡ್ಸೆನ್ಸ್ನಲ್ಲಿ ಎಚ್ಚರವಹಿಸಿ.
- ಆದಷ್ಟು ಗೂಗಲ್ ಆಡ್ಸೆನ್ಸ್ನ ಷರತ್ತುಗಳು ಮತ್ತು ನಿಬಂಧನೆಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಿ. ಅವರು ತನ್ನಷರತ್ತುಗಳಲ್ಲಿ ಏನು ಹೇಳುವರೋ ಅದನ್ನೇ ಚಾಚುತಪ್ಪದೇ ಪಾಲಿಸುತ್ತಾರೆ.
- ತಕ್ಷಣ ಆದಾಯ ಗಳಿಸುವ ಹುಚ್ಚು ಬೇಡ. ಗೂಗಲ್ ಆಡ್ಸೆನ್ಸ್ ಎನ್ನುವುದು ಅಫೀಮು ತರಹ. ಬೆಳಗ್ಗೆದ್ದು ದಿನಾ ಗೂಗಲ್ ಆಡ್ಸೆನ್ಸ್ ಆದಾಯ ನೋಡುವುದು ಬೇಡ. ನೀವು ಹೆಚ್ಚು ಕೆಲಸ ಮಾಡಿದವತ್ತು ಕಡಿಮೆ ಆದಾಯ ಇರಬಹುದು, ಕಡಿಮೆ ಕೆಲಸ ಮಾಡಿದ ದಿನ ಹೆಚ್ಚು ಆದಾಯ ಬರಬಹುದು.
- ಜಾಹೀರಾತುಗಳನ್ನು ಇಮೇಲ್ ಮೂಲಕ ಕಳುಹಿಸಬೇಡಿ. ಅಥವಾ ಹತ್ತು ಹಲವು ಜಾಹೀರಾತುಗಳನ್ನು ಒಂದು ಪುಟದಲ್ಲಿ ಹಾಕಿ ಆ ಲಿಂಕ್ ಅನ್ನು ಮಾಸ್ ಆಗಿ ಕಳುಹಿಸಬೇಡಿ.
- ಜಾಹೀರಾತಿನ ಮೇಲೆ ಬರುವಂತೆ “ಇಲ್ಲಿ ಕ್ಲಿಕ್ ಮಾಡಿ” “ಇದನ್ನು ಡೌನ್ಲೋಡ್ ಮಾಡಿ’ ಇತ್ಯಾದಿ ಲೇಬಲ್ಗಳನ್ನು ಬರೆಯಬೇಡಿ. ಈ ರೀತಿ ದಾರಿತಪ್ಪಿಸುವ ಗುಣವನ್ನು ಗೂಗಲ್ ಆಲ್ಗರಿದಂ ಬೇಗನೇ ಪತ್ತೆಹಚ್ಚುತ್ತದೆ.
- ಗೂಗಲ್ ಆಡ್ಸೆನ್ಸ್ ಜೊತೆ ಇತರೆ ಆನ್ಲೈನ್ ಜಾಹೀರಾತುಗಳನ್ನು ಬಳಸಬೇಡಿ. ಅಂದರೆ, ಇದಕ್ಕಿಂತ ಕಡಿಮೆ ಆದಾಯ ನೀಡುವ ಇನ್ನಷ್ಟು ಗೂಗಲ್ ಆಡ್ಸೆನ್ಸ್ ಪರ್ಯಾಯಗಳನ್ನು ಬಳಸಬೇಡಿ. ನೀವು ಸ್ವಂತವಾಗಿ ಪಡೆದ ಇಮೇಜ್ ಜಾಹೀರಾತುಗಳನ್ನು ಹಾಕಬಹುದು. ಈ ರೀತಿ ಇಮೇಜ್ ಆದಾಯವೇ ನಿಮಗೆ ಹೆಚ್ಚು ಆದಾಯ ತಂದುಕೊಡುತ್ತದೆ.
- ಆಡ್ಸೆನ್ಸ್ ಕೋಡ್ ಅನ್ನು ಮಾರ್ಪಾಡು ಮಾಡಬೇಡಿ.
- ನಿಮ್ಮ ವೆಬ್ಸೈಟ್ನಲ್ಲಿ ಕಾಪಿರೈಟ್ ಕಂಟೆಂಟ್, ಚಿತ್ರಗಳನ್ನು ಹೆಚ್ಚು ಬಳಸಬೇಡಿ.
- ಅಶ್ಲೀಲ, ಡ್ರಗ್ಸ್, ಹ್ಯಾಕಿಂಗ್, ಕ್ರ್ಯಾಕಿಂಗ್, ಶಸ್ತ್ರಾಸ್ತ್ರ ಮಾರಾಟ ಇತ್ಯಾದಿಗಳಿಗೆ ಸಂಬಂಧಪಟ್ಟ ವಿಷಯಗಳು ನಿಮ್ಮ ವೆಬ್ಸೈಟ್ನಲ್ಲಿ ಇರುವುದು ಬೇಡ. ಇದಕ್ಕೆ ಸಂಬಂಧಪಟ್ಟಂತೆ ಗೂಗಲ್ನಲ್ಲಿ ಬಂದಿರುವ ಎಚ್ಚರಿಕೆಯ ಸಂದೇಶಗಳನ್ನು ನಿರ್ಲಕ್ಷಿಸಬೇಡಿ.
- ಹಣ ಕೊಟ್ಟು ಟ್ರಾಫಿಕ್ ಖರೀದಿಸಬೇಡಿ. ಇದನ್ನೂ ಗೂಗಲ್ ಕಂಡುಹಿಡಿಯುತ್ತದೆ.
- ಜಾಹೀರಾತು ನಿಮ್ಮ ಕಂಟೆಂಟ್ನ ಭಾಗವೆನ್ನುವಂತೆ ಜಾಹೀರಾತು ಮಾರ್ಪಾಡು ಮಾಡಬೇಡಿ. ನೀವು ಜನರ ದಿಕ್ಕು ತಪ್ಪಿಸಬಹುದು, ಆದರೆ, ಗೂಗಲ್ನ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ.
ಹಾಗಂತ, ನೀವು ಮಾತ್ರ ತಪ್ಪಿತಸ್ಥರು, ಗೂಗಲ್ ಸಾಚಾ ಎಂದಲ್ಲ. ಅದು ಆನೆ. ಆನೆ ನಡೆದದ್ದೇ ಹಾದಿ. ನಮ್ಮ ಎಚ್ಚರಿಕೆಯಿಂದ ನಾವಿರಬೇಕು ಅಷ್ಟೇ!
ಅಂದಹಾಗೆ ನಿಮಗೆ ವೆಬ್ಸೈಟ್ ವಿನ್ಯಾಸ ಬೇಕಿದ್ದರೆ ಕರ್ನಾಟಕ ಬೆಸ್ಟ್ ಅನ್ನು ಸಂಪರ್ಕಿಸಲು ಮರೆಯಬೇಡಿ. ಹೋಸ್ಟಿಂಗ್ ಮತ್ತು ಡೊಮೈನ್ಗೆ ಆರಂಭಿಕ ಆಫರ್ ನಂಬಿ ಮೋಸ ಹೋಗಬೇಡಿ. ನಿಖರ ಮತ್ತು ಮಾರುಕಟ್ಟೆ ಬೆಲೆಯಲ್ಲಿ ಮತ್ತು ಭವಿಷ್ಯದಲ್ಲಿ ಯಾವುದೇ ಮೋಸವಾಗದಂತೆ ಒಳ್ಳೆಯ ಹೋಸ್ಟಿಂಗ್ ಸೇವೆಯೂ ನಮ್ಮಲ್ಲಿದೆ. ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ. ಈ ಪ್ಯಾರಾ ನನ್ನ ಕಂಪನಿ ಪ್ರಚಾರ. ಉಳಿದದ್ದು “ಜ್ಞಾನವಿರುವುದು ಉಚಿತವಾಗಿ ಹಂಚಿಕೊಳ್ಳಲು’ ಎನ್ನುವ ನಾನು ನಾನು ನಂಬಿರುವ ಸತ್ಯಕ್ಕಾಗಿ.
ಗೂಗಲ್ ಆಡ್ಸೆನ್ಸ್ ಕುರಿತು ನಾನು ಬರೆದ ಇತರೆ ಲೇಖನಗಳನ್ನು ಓದಲು ಇಲ್ಲಿಗೆ ಹೋಗಿ. ವೆಬ್ ಸೈಟ್ ಗೈಡ್ ಓದಲು ಇಲ್ಲಿಗೆ ಬನ್ನಿ.
ಇದನ್ನೂ ಓದಿ: ನಿಮ್ಮ ವೆಬ್ಸೈಟ್ಗೆ ಗೂಗಲ್ ಆಡ್ಸೆನ್ಸ್ ಅನುಮತಿ ದೊರಕಿಲ್ಲವೇ? ಈ ಟಿಪ್ಸ್ ಗಮನಿಸಿ