ಆ್ಯಪ್ ಡೆವಲಪರ್‌ ಆಗುವುದು ಹೇಗೆ?

ಇಂದು ಸ್ಮಾರ್ಟ್‍ಫೋನ್ ಎಲ್ಲರಿಗೂ ಅನಿವಾರ್ಯ ಸಾಧನವಾಗಿಬಿಟ್ಟಿದೆ. ವಿವಿಧ ಕಂಪನಿಗಳಿಗೆ, ಬಿಸ್ನೆಸ್‍ಗಳಿಗೆ ಗ್ರಾಹಕರನ್ನು ತಲುಪಲು ಮೊಬೈಲ್ ಆ್ಯಪ್ ಅನಿವಾರ್ಯವಾಗಿಬಿಟ್ಟಿದೆ. ಮೊಬೈಲ್ ಸಾಧನಗಳು, ಅಪ್ಲಿಕೇಷನ್‍ಗಳು ನಮ್ಮ ಸಂವಹನದ ರೀತಿಯನ್ನೇ ಬದಲಾಯಿಸಿಬಿಟ್ಟಿದೆ. ಇದೇ ಕಾರಣಕ್ಕೆ ಮೊಬೈಲ್ ಆ್ಯಪ್‍ಗಳನ್ನು ಅಭಿವೃದ್ಧಿಪಡಿಸುವುದು ಅತ್ಯುತ್ತಮ ಬೇಡಿಕೆಯ ಮತ್ತು ವೇಗವಾಗಿ ಪ್ರಗತಿ ಕಾಣುತ್ತಿರುವ ಐಟಿ ಕರಿಯರ್ ಆಗಿದೆ. ಈ ಉದ್ಯೋಗವನ್ನು ಪ್ರಿಲ್ಯಾನ್ಸ್ ಆಗಿಯೂ ಮಾಡಬಹುದು.

ಆ್ಯಪ್ ಅಭಿವೃದ್ಧಿಪಡಿಸಬೇಕಾದರೆ ಮೊದಲು ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿಯಬೇಕು. ಸಿ, ಸಿಪ್ಲಸ್‍ಪ್ಲಸ್, ಜಾವಾ ಇತ್ಯಾದಿಗಳನ್ನು ಕಲಿಯಬೇಕು. ಗೂಗಲ್ ಆಂಡ್ರಾಯ್ಡ್, ಆಪಲ್ ಐಒಎಸ್‍ಗೆ ತಕ್ಕಂತೆ ನೀವು ಕೌಶಲ ಕಲಿಯಬೇಕು. ಈ ರೀತಿಯ ಬೇರೆ ಬೇರೆಯಾದ ಆಪ್ ವೇದಿಕೆಗಳಿಗೆ ಬಳಸುವ ಕೋರ್ ಭಾಷೆಯೂ ಭಿನ್ನವಾಗಿರುತ್ತದೆ.

ನಿಮಗೂ ಆ್ಯಪ್ ಡೆವಲಪರ್ ಆಗಬೇಕಿದ್ದರೆ ಕಂಪ್ಯೂಟರ್ ವಿಜ್ಞಾನದ ಪದವಿ ಅಥವಾ ಸ್ನಾತಕೋತ್ತರ ಪಡೆಯಿರಿ. ಜೊತೆಗೆ ಆ್ಯಪ್ ಡೆವಲಪ್‍ಮೆಂಟ್‍ಗೆ ಸಂಬಂಧಪಟ್ಟ ಸರ್ಟಿಫಿಕೇಷನ್‍ಗಳನ್ನು ಪಡೆದರೆ ಒಳ್ಳೆಯದು. ಹೈಸ್ಕೂಲ್, ಪಿಯುಸಿ ಹಂತದಲ್ಲಿಯೇ ಮೊಬೈಲ್ ಆ್ಯಪ್ ಅಭಿವೃದ್ಧಿ, ವೆಬ್‍ಸೈಟ್ ವಿನ್ಯಾಸ ಇತ್ಯಾದಿಗಳಿಗೆ ಸಂಬಂಧಪಟ್ಟ ಉಚಿತ ಕೋರ್ಸ್‍ಗಳನ್ನು, ಮಾಹಿತಿಗಳನ್ನು ಆನ್‍ಲೈನ್ ಮೂಲಕ ಪಡೆಯಿರಿ.

ಈಗ ಹೆಚ್ಚಿನ ಕಾಲೇಜುಗಳು ಆ್ಯಪ್ ಡೆವಲಪ್‍ಮೆಂಟ್ ವಿಷಯವನ್ನು ತಮ್ಮ ಪಠ್ಯಕ್ರಮದಲ್ಲಿ ಸೇರಿಸಿಕೊಳ್ಳುತ್ತಿವೆ. ನಿಮ್ಮ ಸಮೀಪದ ಕಾಲೇಜುಗಳಲ್ಲಿ ಆ್ಯಪ್ ಡೆವಲಪ್‍ಮೆಂಟ್ ಕೋರ್ಸ್‍ಗಳಿವೆಯೇ ಎಂದು ಕೇಳಿ ತಿಳಿದುಕೊಳ್ಳಬಹುದು. ಕೆಲವು ಸಂಸ್ಥೆಗಳಲ್ಲಿ ಇಂತಹ ಕಲಿಕೆಗೆ ಅವಕಾಶವಿದ್ದರೂ, ಕಲಿಸುವ ಗುಣಮಟ್ಟ ಅಥವಾ ಸೌಲಭ್ಯಗಳ ಕೊರತೆ ಇರಬಹುದು. ಅಂತಹ ಕಾಲೇಜುಗಳಿಂದ ದೂರವಿರುವುದು ಒಳಿತು. ಇನ್ನು ಕೆಲವು ಖಾಸಗಿ ಸಂಸ್ಥೆಗಳು ಆ್ಯಪ್ ಡೆವಲಪರ್ ಕಲಿಕೆಗೆ ದುಬಾರಿ ಶುಲ್ಕ ಬಯಸಬಹುದು. ಕೆಲವು 3 ಅಥವಾ 6 ತಿಂಗಳ ಶಾರ್ಟ್‍ಟರ್ಮ್ ಕೋರ್ಸ್‍ಗಳು ಇರಬಹುದು. ಹೀಗೆ ನಿಮ್ಮ ಆದ್ಯತೆ ನೋಡಿಕೊಂಡು ಕಲಿಯಬಹುದು.

ದೇಶದಲ್ಲಿಂದು ಸ್ಮಾರ್ಟ್‌ ಫೋನ್‌ ಗಳಲ್ಲಿ  ಆಂಡ್ರಾಯ್ಡ್ ಬಳಕೆದಾರರ ಸಂಖ್ಯೆ ಶೇಕಡ 90ಕ್ಕಿಂತಲೂ ಹೆಚ್ಚಿದೆ. ದೇಶ ಮಾತ್ರವಲ್ಲದೆ ಜಗತ್ತಿನಲ್ಲಿ ಸ್ಮಾರ್ಟ್‌ ಫೋನ್‌ ಗಳ ಬೇಡಿಕೆಗೆ ತಕ್ಕಷ್ಟು ಆ್ಯಪ್ ಡೆವಲಪರ್‍ಗಳಿಲ್ಲ. ಹೀಗಾಗಿ ಆ್ಯಪ್ ಡೆವಲಪರ್‍ಗಳಿಗೆ ಬೇಡಿಕೆ ದಿನೇ ದಿನೇ ಏರಿಕೆ ಕಾಣುತ್ತಿದೆ. ಈ ಕೊರತೆಯನ್ನು ನೀಗಿಸಲು ಹೆಚ್ಚು ಹೆಚ್ಚು ಆ್ಯಪ್ ಡೆವಲಪರ್‍ಗಳನ್ನು ಸೃಷ್ಟಿಸಲು ಗೂಗಲ್ ಪ್ರಯತ್ನಿಸುತ್ತಿದೆ.  ತನ್ನ ವೆಬ್‍ಸೈಟ್‍ನಲ್ಲಿಯೇ ಇದಕ್ಕಾಗಿ ವೇದಿಕೆಯನ್ನೂ ಗೂಗಲ್ ನೀಡಿದೆ. ನಿಮ್ಮಲ್ಲಿ ಕೋಡಿಂಗ್‍ನ ಸಾಮಾನ್ಯ ಜ್ಞಾನ ಇದ್ದರೆ ಗೂಗಲ್‍ನಲ್ಲೇ ನೀವು ಉಚಿತವಾಗಿ ಆ್ಯಪ್ ಅಭಿವೃದ್ಧಿ ಮಾಡುವುದನ್ನು ಕಲಿಯಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಗೂಗಲ್ ಡೆವಲಪರ್ಸ್ ಟ್ರೇನಿಂಗ್ ಎಂದು ಗೂಗಲ್ ಸರ್ಚ್ ಎಂಜಿನ್‍ನಲ್ಲಿ ಹುಡುಕಿರಿ.

ಇದರೊಂದಿಗೆ ಡಬ್ಲ್ಯು3ಸ್ಕೂಲ್ ಇತ್ಯಾದಿ ತಾಣಗಳ ಮೂಲಕ ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಉಡಾಸಿಟಿ, ಸಿಂಪ್ಲಿಲರ್ನ್, ಉದೆಮಿ ಇತ್ಯಾದಿ ಇ-ಕಲಿಕಾ ವೇದಿಕೆಗಳ ಮೂಲಕವೂ ಕಲಿಯಬಹುದಾಗಿದೆ. ಈಗಿನ ಸ್ಮಾರ್ಟ್‍ಫೋನ್ ಜಗತ್ತು ಸ್ಮಾರ್ಟ್‍ಫೋನ್ ಮೂಲಕವೇ ಕಲಿಯಲು ಸಾಕಷ್ಟು ಅವಕಾಶಗಳನ್ನು ನೀಡಿದೆ. ನಿಮ್ಮ ಕೈಯಲ್ಲಿರುವ ಸ್ಮಾರ್ಟ್‍ಫೋನೇ ನಿಮಗೆ ವಿಶ್ವವಿದ್ಯಾಲಯವಾಗಬಹುದು. ಇಂತಹ ಅವಕಾಶಗಳನ್ನು ಬಳಸಿಕೊಳ್ಳಿರಿ.

ವಿಜ್ಞಾನಿ ಆಗುವುದು ಹೇಗೆ: ಕಲಿಕೆ ಮತ್ತು ತಯಾರಿ ಹೇಗಿರಬೇಕು?