ವೈದ್ಯರಾಗುವುದು ಹೇಗೆ?: ಡಾಕ್ಟರ್ ಆಗಲು ಏನೆಲ್ಲ ಓದಬೇಕು?

Photo by Hike Shaw on Unsplash

ಹೆಚ್ಚಿನ ವಿದ್ಯಾರ್ಥಿಗಳಿಗೆ ವೈದ್ಯ ವೃತ್ತಿ ಅಚ್ಚುಮೆಚ್ಚು. ರೋಗಿಗಳ ಪಾಲಿಗೆ ದೇವರಾಗುವ ಅದ್ಭುತ ಅವಕಾಶವಿದು. ಆದರೆ, ಈಗಿನ ದುಬಾರಿ ಶಿಕ್ಷಣವು ಸಾಕಷ್ಟು ವಿದ್ಯಾರ್ಥಿಗಳನ್ನು ವೈದ್ಯ ವೃತ್ತಿಯಿಂದ ದೂರವಿಟ್ಟಿದೆ. ಆದರೆ, ಅತ್ಯುತ್ತಮ ಅಂಕದ ನೆರವಿನಿಂದ ಸ್ಕಾಲರ್‍ಷಿಪ್ ಮತ್ತು ಬ್ಯಾಂಕ್ ಸಾಲ ಪಡೆದು ವೈದ್ಯರಾದ ಸಾಕಷ್ಟು ಜನರು ನಮ್ಮ ನಿಮ್ಮ ನಡುವೆ ಇದ್ದಾರೆ.

ಪಿಯುಸಿಯಲ್ಲಿ ವಿಜ್ಞಾನ ಓದಿರಬೇಕು. ವೈದ್ಯರಾಗಬೇಕಾದರೆ ಮೊದಲ ಹಂತವಾಗಿ ಎಂಬಿಬಿಎಸ್ ಪದವಿ ಪಡೆಯಬೇಕು. ಇಂಟರ್ನ್‍ಷಿಪ್ ಸೇರಿದಂತೆ ಸುಮಾರು 5-6 ವರ್ಷ ಓದಬೇಕು. ಎಂಬಿಬಿಎಸ್, ಬಿಡಿಎಸ್ ಮತ್ತು ವೆಟರ್ನಿಟಿ ವಿಜ್ಞಾನ ಇತ್ಯಾದಿ ಓದಲು ನೀವು ಮೊದಲು ನೀಟ್ ಎಂಬ ಪ್ರವೇಶ ಪರೀಕ್ಷೆ ಬರೆಯಬೇಕು.

ಡಾಕ್ಟರ್ ಆಗುವ ಕನಸಿನಲ್ಲಿರುವ ವಿದ್ಯಾರ್ಥಿಗಳು ಪಿಯುಸಿ ಸಮಯದಲ್ಲಿ ವಿಜ್ಞಾನ(ಸಂಬಂಧಪಟ್ಟ ವಿಷಯಗಳನ್ನು ಒಳಗೊಂಡಂತೆ) ಆಯ್ದುಕೊಳ್ಳಿ. ವೈದ್ಯರಾಗುವ ಕನಸಿನಲ್ಲಿ ಚೆನ್ನಾಗಿ ಅಧ್ಯಯನ ಮಾಡಿ. ಒಳ್ಳೆಯ ಅಂಕ ಪಡೆದುಕೊಳ್ಳಿ. ನಂತರ ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿ. ಸಮರ್ಪಕವಾಗಿ ಸಿದ್ಧತೆ ನಡೆಸಿ ಪರೀಕ್ಷೆ ಬರೆಯಿರಿ.

ಪ್ರತಿವರ್ಷ ನೀಟ್ ಪರೀಕ್ಷೆಯನ್ನು ಸಿಬಿಎಸ್‍ಇ ಆಯೋಜಿಸುತ್ತದೆ. ನೀಟ್‍ನಲ್ಲಿ ಪಿಯುಸಿಯಲ್ಲಿ ಓದಿರುವ ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಬಯೋಲಜಿ ವಿಷಯಗಳದ್ದೇ ಪ್ರಶ್ನೆಗಳು ಇರುತ್ತವೆ. ನೀವು ಸರಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸೇರಲು ನೀಟ್ ಪರೀಕ್ಷೆಯಲ್ಲಿ ಪಡೆದ ರ್ಯಾಂಕ್ ಪ್ರಮುಖ ಅಂಕವೇ ಮಾನದಂಡವಾಗಿದೆ. ನೀಟ್ ಪರೀಕ್ಷೆಯಲ್ಲಿ ಆಬ್ಜೆಕ್ಟೀವ್ ಮಾದರಿಯ ಪ್ರಶ್ನೆಗಳು ಇರುತ್ತವೆ. ಒಟ್ಟು 180 ಪ್ರಶ್ನೆಗಳು ಇರುತ್ತವೆ. ಬಯೋಲಜಿಗೆ 90 ಅಂಕಗಳು, ಉಳಿದ ಎರಡು ವಿಷಯಗಳಿಗೆ ತಲಾ 45 ಅಂಕ ಇರುತ್ತವೆ.

ಇತ್ತೀಚಿನ ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ ಪ್ರತಿವರ್ಷ ಸುಮಾರು 40ಕ್ಕೂ ಹೆಚ್ಚು ಸಾವಿರ ಅಭ್ಯರ್ಥಿಗಳು ಈ ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಾರೆ . 10-12 ಸಾವಿರ ಅಭ್ಯರ್ಥಿಗಳು ಮಾತ್ರ ನೀಟ್‍ನಲ್ಲಿ ಯಶಸ್ವಿಯಾಗುತ್ತಾರೆ. ಎಂಬಿಬಿಎಸ್ ಪೂರ್ಣಗೊಳಿಸಿದ ಬಳಿಕ ಯಾವುದಾದರೂ ಆಸ್ಪತ್ರೆಯಲ್ಲಿ ಪ್ರ್ಯಾಕ್ಟೀಸ್ ಮಾಡಬಹುದು. ವೈದ್ಯರಾಗಿ ಸೇವೆ ಸಲ್ಲಿಸಬಹುದು.

ದೇಶದಲ್ಲಿಂದು ಎಂಬಿಬಿಎಸ್ ಓದಿರುವ ವೈದ್ಯರಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಎನ್ನಲಾಗುತ್ತಿದೆ. ಎಂಡಿ, ಎಂಎಸ್, ಪಿಜಿಡಿಎಂ ಇತ್ಯಾದಿ ಉನ್ನತ ಕೋರ್ಸ್ ಮಾಡಿರುವವರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ರೋಗಿಗಳು ವೈದ್ಯರ ಬಳಿಗೆ ಹೋಗುವ ಮೊದಲು ಇವರು ಕೇವಲ ಎಂಬಿಬಿಎಸ್ ವೈದ್ಯರೇ ಅಥವಾ ಎಂಡಿ ಇತ್ಯಾದಿ ಕೋರ್ಸ್ ಮಾಡಿದ್ದಾರೆಯೇ ಎಂದು ಪರಿಶೀಲಿಸಿ ಹೋಗುತ್ತಿದ್ದಾರೆ. ಡೆರ್ಮಟೊಲಜಿ, ಸೈಕ್ಯಾಟ್ರಿ, ಕಾರ್ಡಿಯೊಲಜಿ, ಗೈನೊಕೊಲಜಿ, ನ್ಯೋರೊಲಜಿ ಸೇರಿದಂತೆ ಹಲವು ವಿಷಯಗಳಲ್ಲಿ ಎಂಡಿ ಮತ್ತು ಪಿಡಿಯಾಟ್ರಿಕ್ ಸರ್ಜರಿ, ಕಾಸ್ಮೆಟಿಕ್ ಸರ್ಜರಿ, ಯುರೊಲಜಿ, ಪ್ಲಾಸ್ಟಿಕ್ ಸರ್ಜರಿ ಇತ್ಯಾದಿ ಹಲವು ವಿಷಯಗಳಲ್ಲಿ ಎಂಎಸ್ ಪದವಿ ಪಡೆಯಬಹುದು.

ದಂತವೈದ್ಯರಾಗಬೇಕಾದರೆ ಬಿಡಿಎಸ್, ಆರ್ಯುವೇದ ವೈದ್ಯರಾಗಬೇಕಾದರೆ ಬಿಎಎಂಎಸ್, ಹೋಮಿಯೊಪತಿ ಡಾಕ್ಟರ್ ಆಗಬೇಕಿದ್ದರೆ ಬಿಎಚ್‍ಎಂಎಸ್, ಯುನಾನಿ ವೈದ್ಯರಾಗಬೇಕಾದರೆ ಬಿಯುಎಂಎಸ್, ವೆಟರ್ನರಿ ವೈದ್ಯರಾಗಬೇಕಾದರೆ ಬಿ.ವಿ.ಎಸ್ಸಿ ಮತ್ತು ಎಎಚ್, ಫಿಜಿಯೊಥೆರಪಿ ವೈದ್ಯರಾಗಬೇಕಾದರೆ ಫಾರ್ಮ್ ಡಿ ಬಿಪಿಟಿ, ಆಕ್ಯುಪೇಷನಲ್ ಥೆರಪಿಗೆ ಬಿಒಟಿ ಆಯ್ಕೆ ಮಾಡಿಕೊಳ್ಳಬೇಕು. ಇದರೊಂದಿಗೆ ವಿವಿಧ ಪಿಎಚ್.ಡಿ ಅಧ್ಯಯನವನ್ನೂ ಮಾಡಬಹುದು.

“ಉತ್ತಮ ವೈದ್ಯರು ರೋಗಕ್ಕೆ ಚಿಕಿತ್ಸೆ ನೀಡುತ್ತಾರೆ. ಅತ್ಯುತ್ತಮ ವೈದ್ಯರು ರೋಗ ಇರುವ ರೋಗಿಗೆ ಚಿಕಿತ್ಸೆ ನೀಡುತ್ತಾರೆ”-

ವಿಲಿಯಮ್ ಓಸ್ಲೆರ್
ಇದನ್ನೂ ಓದಿ  ಫ್ರಿಲ್ಯಾನ್ಸರ್ ಆಗುವುದು ಹೇಗೆ? ಬಿಡುವಿನ ವೇಳೆಯಲ್ಲಿ ಕೈತುಂಬಾ ಗಳಿಸಿ