ಹೆಲಿಕಾಪ್ಟರ್ ಪೈಲೆಟ್ ಆಗುವುದು ಹೇಗೆ?

By | 20/10/2019

ದೊಡ್ಡ ಕನಸು ಕಂಡು ಅದನ್ನು ಈಡೇರಿಸಿಕೊಂಡು ಭವಿಷ್ಯ ಬದಲಾಯಿಸಲು ಬಯಸುವವರು ರೆಕ್ಕೆ ತಿರುಗಿಸುತ್ತ ಹಾರುವ ಹೆಲಿಕಾಪ್ಟರ್ ಪೈಲೆಟ್ ಸೀಟಲ್ಲಿ ಕುಳಿತುಕೊಳ್ಳುವ ಕುರಿತು ಆಲೋಚಿಸಬಹುದು. ಹೆಲಿಕಾಪ್ಟರ್ ಪೈಲೆಟ್ ಆಗಲು ಬಯಸುವವರಿಗೆ ಕಮರ್ಷಿಯಲ್ ಹೆಲಿಕಾಪ್ಟರ್ ಪೈಲಟ್ ಲೈಸನ್ಸ್ (ಸಿಎಚ್‍ಪಿಎಲ್) ಮತ್ತು ಪ್ರೈವೇಟ್ ಹೆಲಿಕಾಪ್ಟರ್ ಪೈಲಟ್ ಲೈಸನ್ಸ್ (ಪಿಎಚ್‍ಪಿಎಲ್) ಕೋರ್ಸ್‍ಗಳು ಲಭ್ಯ ಇರುತ್ತವೆ. ಈ ಕೋರ್ಸ್‍ಗಳ ಅವಧಿ ಬಹುತೇಕ 1 ಅಥವಾ 2 ವರ್ಷದ ಒಳಗೆ ಇರುತ್ತದೆ. ಈ ಕೋರ್ಸ್ ಅನ್ನು ಪುರುಷರು ಅಥವಾ ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. ಆಯಾ ತರಬೇತಿ ಸಂಸ್ಥೆಗಳಿಗೆ ಅನುಗುಣವಾಗಿ ಕನಿಷ್ಠ 17 ಅಥವಾ 18 ವರ್ಷ ಪೂರ್ಣಗೊಳಿಸಿದವರು ಈ ತರಬೇತಿಗೆ ಸೇರಬಹುದು. ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಒಳಗೊಂಡ 10+2 ವಿದ್ಯಾರ್ಹತೆ ಹೊಂದಿರಬೇಕು. ಡಿಜಿಸಿಎ ಬಯಸಿದಂತೆ ದೈಹಿಕ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು.

ಸಿಎಚ್‍ಪಿಎಲ್ ಅಥವಾ ಪಿಎಚ್‍ಪಿಎಲ್ ವಿದ್ಯಾರ್ಥಿಗಳು ಏರ್ ರೆಗ್ಯುಲೇಷನ್ಸ್, ಏರ್ ನ್ಯಾವಿಗೇಷನ್, ಏವಿಯೇಷನ್ ಮೆಥಾಡಲಜಿ, ಟೆಕ್ನಿಕಲ್ (ಏರ್‍ಕ್ರಾಫ್ಟ್ ಮತ್ತು ಎಂಜಿನ್ಸ್) ಮತ್ತು ಸಿಗ್ನಲ್ಸ್ ಸಿಲಬಸ್‍ಗೆ ತಕ್ಕಂತೆ ಲಿಖಿತ ಪರೀಕ್ಷೆ ಬರೆಯಬೇಕು. ನೀವು ಯಾವ ಹೆಲಿಕಾಪ್ಟರ್ ತರಬೇತಿ ಸಂಸ್ಥೆಗೆ ಸೇರುವಿರೋ ಆ ಸಂಸ್ಥೆಯೇ ಈ ವಿಷಯಗಳನ್ನು ಬೋಧಿಸುತ್ತದೆ. ಈ ಪರೀಕ್ಷೆಯಲ್ಲಿ ಪಾಸ್ ಆದವರು ಮುಂದಿನ ಹಂತದ ತರಬೇತಿ ಪಡೆಯಲು ಅರ್ಹತೆ ಪಡೆಯುತ್ತಾರೆ.

ಈಗಿರುವ ಡಿಜಿಸಿಎ ನಿಯಮಗಳಂತೆ ವಿದ್ಯಾರ್ಥಿಯು ಹಲವು ಗಂಟೆಗಳ ಕಾಲ ಹೆಲಿಕಾಪ್ಟರ್ ಹಾರಾಟ ನಡೆಸಿದ ಅನುಭವ ಹೊಂದಿರಬೇಕಾಗುತ್ತದೆ. ಸಾಮಾನ್ಯವಾಗಿ 30 ಗಂಟೆ ಅಥವಾ 40 ಗಂಟೆ ಗಂಟೆ ಇತ್ಯಾದಿ ಹಾರಾಟ ಅನುಭವವನ್ನು ಬಯಸಲಾಗುತ್ತದೆ. ಸೂಕ್ತವಾದ ತರಬೇತಿ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಿ. ಪೂರ್ಣ ಪ್ರಮಾಣದಲ್ಲಿ ಖಾಸಗಿ ಸಂಸ್ಥೆಯಾದರೆ ದುಬಾರಿ ಶುಲ್ಕ ಪಾವತಿಸಬೇಕಾದೀತು.

ಪೈಲೆಟ್ ತರಬೇತಿ ಪಡೆದ ಕೂಡಲೇ ನೀವು ಹೆಲಿಕಾಪ್ಟರ್ ಹಾರಾಟ ನಡೆಸಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಪೈಲೆಟ್ ಲೈಸನ್ಸ್ ಪಡೆಯಬೇಕು. ದೇಶದಲ್ಲಿಂದು ಮೂರು ರೀತಿಯ ಪೈಲೆಟ್ ಲೈಸನ್ಸ್ ಲಭ್ಯ ಇದೆ. ವಿದ್ಯಾರ್ಥಿ ಕಲಿಕಾ ಪೈಲೆಟ್ ಪರವಾನಿಗೆ, ಖಾಸಗಿ ಪೈಲೆಟ್ ಪರವಾನಿಗೆ ಮತ್ತು ಕಮರ್ಷಿಯಲ್ ಪೈಲೆಟ್ ಪರವಾನಿಗೆ ಎಂಬ ಮೂರು ಆಯ್ಕೆಗಳಿವೆ.

ಕೆಲವು ಗಂಟೆಯ ಪ್ರಯಾಣಕ್ಕೆ ಹೆಲಿಕಾಪ್ಟರ್ ಬಳಸಲು ಹಲವು ಸಾವಿರ ರೂ. ನೀಡಬೇಕಾಗುತ್ತದೆ. ಇದರ ನಿರ್ವಹಣಾ ವೆಚ್ಚ ಇತ್ಯಾದಿಗಳು ಹೆಚ್ಚಿರುವುದರಿಂದ ಇದರ ಕಲಿಕಾ ವೆಚ್ಚವೂ ಹೆಚ್ಚಿದೆ. ಹೆಲಿಕಾಪ್ಟರ್ ತರಬೇತಿಗೆ ಕೆಲವು ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಹಾಗಾದರೆ ಬಡವರೂ ಪೈಲೆಟ್‍ಗಳಾಗುವುದು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ನಮ್ಮ ದೇಶದ ವಿಮಾನ ಅಥವಾ ಹೆಲಿಕಾಪ್ಟರ್ ನಡೆಸುವವರಲ್ಲಿ ಸಾಕಷ್ಟು ಜನರು ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು. ವಿದ್ಯಾರ್ಥಿಗಳು ಈ ತರಬೇತಿಗೆ ಬ್ಯಾಂಕ್ ಲೋನ್ ಪಡೆಯಬಹುದು. ಸ್ಕಾಲರ್‍ಷಿಪ್ ನೆರವೂ ಪಡೆಯಬಹುದು.

ಮೋಟಾರ್ ಇಲ್ಲದೆಯೂ ಹಾರಾಟ ನಡೆಸಲು ಸಾಧ್ಯವಿರಬಹುದು. ಆದರೆ, ಜ್ಞಾನ ಮತ್ತು ಕೌಶಲ ಇಲ್ಲದೆ ಹಾರಾಟ ನಡೆಸುವುದು ಸಾಧ್ಯವಿಲ್ಲ

– ವಿಲ್ಬರ್ಟ್ ರೈಟ್

Leave a Reply

Your email address will not be published. Required fields are marked *