ಹಾಸ್ಯ ಲೇಖನ: ಇದು ಉದರ ಪುರಾಣ

ಇದು ಹೊಟ್ಟೆಗೆ ಸಂಬಂಧಪಟ್ಟ ವಿಷಯ! ಆದರೆ ನಾನಿಲ್ಲ್ಲಿ ಯಾವುದೋ ರುಚಿಯಾದ ಅಡುಗೆ ಅಥವಾ ತಿನ್ನುವುದರ ಕುಳಿತು ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ. ನಾವು ತಿಂದ ಮೃಷ್ಟಾನ್ನ ಭೋಜನ ಹೋಗಿ ಸೇರುವ ಮಹಾನ್ ವೇದಿಕೆ ಹೊಟ್ಟೆಯ ಕುರಿತು ಹೇಳುತ್ತಿದ್ದೇನೆ. ಇತ್ತೀಚೆಗೆ ನನ್ನ ಗೆಳತಿಯೊಬ್ಬಳು ಸಿಕ್ಕಿದಾಗ ಮಾತನಾಡಿಸುವ ಎಂದು ಖುಷಿಯಿಂದ ನಾನು ಅವಳ ಹತ್ತಿರ ಹೋದೆ. ಅವಳು ಮಾತ್ರ ನನ್ನನ್ನು ನೋಡಿ ‘ಅರೆ… ನೀನಾ…? ನನಗೆ ನಿನ್ನ ಪರಿಚಯನೇ ಸಿಕ್ತಿಲ್ಲಾ ಮಾರಾಯ್ತಿ! ಎಂತ ನೀನು ಇಷ್ಟು ದಪ್ಪಗಾಗಿದ್ದಿಯಾ? ಯೋಗ ಏನಾದರೂ ಮಾಡು, ನನ್ನ ನೋಡು ಹೇಗೆ ಮೈ ಕರಗಿಸಿಕೊಂಡೆ’ ಎಂದಾಗ ನಾನು ಅಡಿಯಿಂದ ಮುಡಿವರೆಗೆ ನನ್ನ ಗೆಳತಿಯನ್ನು ನೋಡಿದೆ, ಎಲ್ಲೋ ಅಲ್ಪಸ್ವಲ್ಪ ಕರಗಿದ್ದಾಳೆ ಅಷ್ಟೆ. ಅದಕ್ಕೆ ಇಷ್ಟು ದೊಡ್ಡ ಬಿಲ್ಡ್ ಪ್ ತಗೆದುಕೊಂಡು ನನಗೆ ಉಪದೇಶ ಕೊಡೋದಕ್ಕೆ ಶುರುಮಾಡಿದ್ದಾಳೆ ಎಂದನಿಸಿತು. ಆದರೆ ನೇರವಾಗಿ ಹೇಳೋದಕ್ಕೆ ಆಗದೇ ನಾನೂ ನಗಲೋ ಬೇಡವೋ ಎಂಬಂತೆ ಒಂದು ನಗು ಚೆಲ್ಲಿ ಅವಳನ್ನು ಅಲ್ಲಿಂದ ಸಾಗಹಾಕಿದೆ. ನನಗೊತ್ತು ಇನ್ನು ಅದು ನನ್ನ ಉಳಿದ ಸ್ನೇಹಿತೆಯರ ಕಿವಿಗೆಲ್ಲಾ ಶೀಘ್ರದಲ್ಲಿ ಹೋಗಿ ತಲುಪಲಿದೆ! ಅದರಲ್ಲಿ ಕೆಲವರು ಸಹಾನುಭೂತಿ ತೋರಿಸುವುದಕ್ಕಾಗಿ ವಾಟ್ಸಾಫ್‌ನಲ್ಲಿ ಮೇಸೇಜ್ ಹಾಕಿ ಆಯ್ತು. ಏನಾಯ್ತು ಕಣೆ ನಿನಗೆ, ತುಂಬ ದಪ್ಪಗಾಗಿದ್ದಿಯಾ ಅಂತೆ? ಹೀಗೆ ಏನೇನೂ ನನಗೇನೂ ಬರಬಾರದ ರೋಗ ಬಂದವರ ಹಾಗೆ ಮೇಸೇಜ್ ಕಳುಹಿಸುತ್ತಾರೆ. ಇನ್ನು ಕೆಲವರು ಬಿಸಿನೀರಿಗೆ ನಿಂಬೆ ಹಣ್ಣು, ಜೇನುತುಪ್ಪ ಹಾಕಿ ಕುಡಿ, ರಾತ್ರಿ ಊಟಮಾಡಬೇಡ, ಚಪಾತಿ, ಹಣ್ಣು ತಿನ್ನು, ಯೋಗ ಮಾಡು ಎಂಬಿತ್ಯಾದಿ  ಉಪದೇಶಗಳ ಸರಮಾಲೆ. ಅಯ್ಯೋಯ್ಯೋ ಯಾಕಾದರೂ ಈ ‘ಬೆಸ್ಟ್ ಫ್ರೆಂಡ್ಸ್’ ಎಂಬ ಗ್ರೂಫ್‌ಗೆ ಸೇರಿಕೊಂಡೆನೋ ಅನಿಸುತ್ತೆ.

ಅಷ್ಟಕ್ಕೂ ನನಗೇ ಇಲ್ಲದ ನನ್ನ ಫಿಗರ್ ಚಿಂತೆ ಇವರಿಗೆಲ್ಲಾ ಯಾಕೆ ಎಂಬ ಪ್ರಶ್ನೆ ಉದ್ಭವಿಸಿದರೂ ನಾನು ಒಂದಷ್ಟು ಪ್ರಯತ್ನ ಮಾಡಿ ಈಗ ಸೋತು ಸುಮ್ಮನಾಗಿದ್ದೇನೆ ಎಂಬುದು ಸತ್ಯಕ್ಕೆ ಹತ್ತಿರವಾದ ಮಾತು!

ಇನ್ನು ಗಂಡನ ಜತೆ ಹೊರಗೆ ಹೋಗುವಾಗ ಯಾವುದೇ ಚೆಂದದ ಡ್ರೆಸ್, ಸೀರೆ ನೋಡಿದಾಗ ಈ ಸೀರೆ ಅಥವಾ ಡ್ರೆಸ್ ನನಗೆ ಚೆಂದ ಕಾಣುತ್ತದೆ ಅಲ್ವಾ ಎಂದಾಗ ನನ್ನ ಪತಿರಾಯರ ಮುಖದಲ್ಲಿ ತಮಾಷೆಯ ನಗುವೊಂದು ಇಣುಕುತ್ತದೆ. ‘ನೀ ಮೊದಲು ನಿನ್ನ ಹೊಟ್ಟೆ ಕರಗಿಸ್ಕೋ ಆಮೇಲೆ ಆ ಡ್ರೆಸ್ ತೆಗೆದುಕೊಳ್ಳುವಿಯಂತೆ’ ಎಂದು ಹೇಳಿ ಕುಸುಕ್ಕನೇ ನಕ್ಕಾಗ ಹೊಟ್ಟೆಗೆ ಬೈಯುವುದಾ, ಗಂಡನಿಗೆ ಬೈಯುವುದಾ ಎಂದು ಗೊತ್ತಾಗದೇ ಕೊನೆಗೆ ಆ ಡ್ರೆಸ್ ಅನ್ನು ನೇತುಹಾಕಿದ ಅಂಗಡಿ ಅವನಿಗೆ ಬೈದುಕೊಳ್ಳುತ್ತಾ ಮನೆಗೆ ನಡೆಯುತ್ತೇನೆ. ಗಂಡ ಜೇಬಿಗೆ ಬೀಳುವ ಕತ್ತರಿಯಿಂದ ತಪ್ಪಿಸಿಕೊಂಡೆ ಎಂದು ಖುಷಿಪಡುತ್ತಾರೆ.

ಇತ್ತೀಚೆಗೆ ಸಂಬಂಧಿಕರ ಮನೆಗೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಊಟ ಮಗಿಸಿ ಕೈತೊಳೆಯಲು ಬಂದಾಗ ಪರಿಚಯದವರೊಬ್ಬತರು ಏನಾದರೂ ‘ವಿಶೇಷ ಇದೆಯಾ ಎಂದಾಗ’ ನನ್ನ ಪೆದ್ದು ತಲೆಗೆ ಮೊದಲು ಹೊಳೆಯಲಿಲ್ಲ. ಆಮೇಲೆ ಅವರು ನನ್ನ ಆಗಾಧವಾದ ಹೊಟ್ಟೆ ನೋಡಿ ಈ ವಿಶೇಷ ಎಂಬ ಪದ ಉಪಯೋಗಿಸಿದರು ಎಂದು ತಿಳಿದು ಇಲ್ಲ ಎಂದು ಅಡ್ಡಾಡ್ಡ ತಲೆಯಾಡಿಸುವಾಗ ಊಟ ಮಾಡಿದ್ದೆಲ್ಲಾ ಕಕ್ಕಿಬಿಡುವ ಅನ್ನುವಷ್ಟು ಕೋಪ ಒತ್ತರಿಸಿಕೊಂಡು ಬಂದಿತ್ತು. ಎಲ್ಲಿ ಹೋದರೂ ಈ ನನ್ನ ಹೊಟ್ಟೆ ಮೇಲೆನೇ ಎಲ್ಲರಿಗೆ ಕಣ್ಣು .

ಅಂದ ಹಾಗೆ, ಹೈಸ್ಕೂಲಿನಲ್ಲಿರುವಾಗ ಈ ಹೊಟ್ಟೆಯ ಬಗ್ಗೆ ನಾನೇನು ತಲೇನೇ ಕೆಡಿಸಿಕೊಂಡಿರಲಿಲ್ಲ. ಚೆನ್ನಾಗಿ ತಿಂದುAಡು ಆಡುವುದೇ ಮುಖ್ಯ ಕೆಲಸವಾಗಿತ್ತು. ಕಾಲೇಜು ಮೆಟ್ಟಿಲು ಹತ್ತಿದಾಗಲೂ ಸಮಸ್ಯೆಯಾಗಿರಲಿಲ್ಲ. ಓದುವುದು, ಬರೆಯುವುದರಲ್ಲಿಯೇ ತಿಂದ ಅನ್ನವೆಲ್ಲಾ ಜೀರ್ಣವಾಗಿ ಹೊಟ್ಟೆ ಮೂಡುವುದಕ್ಕೆ ಜಾಗವೇ ಇರಲಿಲ್ಲ ಅನ್ನುವ ಹಾಗೆ ಇತ್ತು. ನಿಜದ ಪರಿಸ್ಥಿತಿ ಎದುರಾಗಿದ್ದು ಉದ್ಯೋಗದ ಬೆನ್ನು ಹತ್ತಿ ಬೆಂಗಳೂರಿನತ್ತ ಪಯಣ ಮಾಡಿದಾಗ. ಊರಲ್ಲಿ ಅಮ್ಮನ ಕಷಾಯ, ಇಡ್ಲಿ, ದೋಸೆ, ಕುಚ್ಚುಲಕ್ಕಿ ಅನ್ನ, ಮೀನು ಸಾರಿನ ಸ್ವಾದ ಕುಡಿದಿದ್ದ ನನ್ನ ನಾಲಿಗೆಗೆ ಪಿಜ್ಹಾ ಬರ್ಗರ್ ನ ಸವಿ ಉಣಿಸಿದ್ದೆ ತಪ್ಪಾಯಿತು. ನಿಧಾನಕ್ಕೆ ಹೊಟ್ಟೆ ತನ್ನ ಇರುವು ತೋರಿಸಿಕೊಳ್ಳುವುದಕ್ಕೆ ಶುರುವಾಯಿತು. ಆಮೇಲೆ ಮದುವೆಯಾಗಿ ಮಗುವಾದ ನಂತರ ಯಾವುದೇ ಹಮ್ಮುಬಿಮ್ಮು ಇಲ್ಲದೇ ಹೊಟ್ಟೆ ಬೆಳೆಯತೊಡಗಿತು.

ನನ್ನ ಹೆರಿಗೆಯಾದ ಸಮಯ ನನ್ನ ಸಂಬಂಧಿಕರೊಬ್ಬರು ನನ್ನನ್ನು ನೋಡುವುದಕ್ಕೆಂದು ಆಸ್ಪತ್ರೆಗೆ ಬಂದಿದ್ದರು. ಅವರ ಬಳಿ ನನ್ನ ಹೊಟ್ಟೆಯ ಸಮಸ್ಯೆ ಹೇಳಿಕೊಂಡಾಗ ನೀನು ಇವಾಗಲೇ ಚೆನ್ನಾಗಿ ಹತ್ತಿ ಸೀರೆಯನ್ನು ಹೊಟ್ಟೆಗೆ ಸುತ್ತಿಕೊಳ್ಳು. ಹೊಟ್ಟೆ ಕರಗುತ್ತದೆ ನೋಡು ಎಂದು ಅಲ್ಲಿಯೇ ಇದ್ದ ಸೀರೆಯನ್ನು ನನ್ನ ಹೊಟ್ಟೆಗೆ ಬಿಗಿಯಾಗಿ ಸುತ್ತಿಬಿಟ್ಟರು. ಅವರು ಸುತ್ತಿದ ರೀತಿಗೆ ನನ್ನ ಎತ್ತರದ ಹೊಟ್ಟೆ ಎಲ್ಲಿ ಹೋಗಿತ್ತು ಎಂದು ಗೊತ್ತಾಗಲಿಲ್ಲ. ಇನ್ನು ದಿನಾ ಹೀಗೆ ಸುತ್ತಿದರೆ ಒಂದೆರೆಡು ತಿಂಗಳಲ್ಲಿ ನನ್ನ ಹೊಟ್ಟೆ ಸಮಸ್ಯೆ ಕಡಿಮೆಯಾದಿತು ಎಂದು ಸಮಾಧಾನದ ನಗು ಕಾಣಿಸಿಕೊಂಡಿತ್ತು. ಆದರೆ ಇದೆಲ್ಲಾ ಮುಗಿದು ಮಗನಿಗೆ ವರುಷ ತುಂಬಿದ ಮೇಲೆ ಹೊಟ್ಟೆ ತನ್ನ ಪರಿಚಯವನ್ನು ಮತ್ತೆ ತೋರಿಸಿಕೊಂಡಿತು.

ಹೊಟ್ಟೆ ಕರಗಿಸಿಕೊಳ್ಳುವ ಹಟಕ್ಕೆ ಬಿದ್ದು ಯೋಗ ಶುರುಮಾಡಿದೆ. ಬೇಗ ಕರಗಲಿ ಎಂದು ಯರ್ರಾಬಿರ್ರಿ ಯೋಗ ಮಾಡಿ ನಿಧಾನಕ್ಕೆ ಬೆನ್ನು ನೋವು ಕಾಣಿಸಿಕೊಂಡಿತು., ಒಂದೆರೆಡು ದಿನ ಯೋಗ ಮಾಡಿ ಮತೊಂದು ದಿನ ರೆಸ್ಟ್ ತೆಗದುಕೊಂಡರೆ ಮಾರನೇ ದಿನ ಇಡಿ ಕೈಕಾಲು ಆಡಿಸಲು ಆಗದಷ್ಟು ನೋವು. ಅಷ್ಟೇ ಅಲ್ಲದೇ, ಒಂದು ವಾರ ಯೋಗ ಮಾಡಿ ತಿಂಗಾಳಾನುಗಟ್ಟಲೇ ಸುಮ್ಮನಾಗಿಬಿಟ್ಟೆ. ಒಂದು ವಾರವಿಡೀ ಯೋಗ ಮಾಡಿದ್ದೇನೆ ಅಲ್ವಾ ಹೊಟ್ಟೆ ಹೆದರಿಕೊಂಡು ಓಡಿಹೋಗಿರುತ್ತೆ ಎಂದುಕೊಂಡರೆ ಹೊಟ್ಟೆ ಜತೆಗೆ ಸೊಂಟದ ಸುತ್ತಲೂ ಹುಲುಸಾಗಿ ಮಾಂಸ ಬೆಳೆದುಕೊಳ್ಳಲು ತಯಾರಿ ನಡೆಸುತ್ತಿತ್ತು. ‘ಯೋಗ ಮಾಡಿ ಬಿಡಬೇಡ ಮತ್ತಷ್ಟೂ ದಪ್ಪಗಾಗುತ್ತಿಯಾ’ ಎಂದು ಅಕ್ಕ ಹೇಳಿದಾಗ ಇನ್ನು ಮುಂದೆ ಯೋಗದ ಉಸಾಬರಿ ಬೇಡ ಡಯೆಟ್ ಮಾಡೋಣ ಎಂದು ವೇಳಾಪಟ್ಟಿ ಹಾಕಿಕೊಂಡೆ. ಅಡುಗೆಕೋಣೆಯೊಳಗೆ ರಾಗಿ, ಸೌತೆಕಾಯಿ, ಗೋಧಿಹಿಟ್ಟು,  ಗ್ರೀನ್ ಟೀ, ಕಾರ್ನ್ ಫ್ಲೇಕ್ಸ್ ಗಳ ಪ್ರವೇಶವಾಯಿತು. ಒಂದಷ್ಟು ದಿನ ಇವುಗಳ ಸಹವಾಸದಿಂದ ಬಾಯೆಲ್ಲಾ ಜಿಡ್ಡುಗಟ್ಟಿ ಹೋಗಿ ದಿನಾ ಇವುಗಳನ್ನೇ ತಿನ್ನುತ್ತಿದ್ದರೆ ಬದುಕು ಮತ್ತಷ್ಟೂ ದುಸ್ತರವಾಗುವುದು ಎಂದು ಇವುಗಳಿಗೂ ಗುಡ್ ಬೈ ಹೇಳಿದೆ.

ಈ ಹೊಟ್ಟೆ ಎಲ್ಲ ಸಮಯದಲ್ಲೂ ನಮಗೆ ವೈರಿ ಅಲ್ಲ. ಕೆಲವೊಮ್ಮೆ ಇದರಿಂದ ಉಪಕಾರವಾಗುವುದು ಇದೆ. ನನ್ನ ಸಂಬಂಧಿಕರೊಬ್ಬರು ನೋಡುವುದಕ್ಕೆ ತೆಳ್ಳಗಿದ್ದರೂ, ಆದರೆ ಅವರ ಹೊಟ್ಟೆ ದೊಡ್ಡದಿತ್ತು. ಒಂದು ದಿನ ಅವರು ಕೆಲಸ ಮುಗಿಸಿಕೊಂಡು ಮನೆಗೆ ಬರಲು ಬಸ್ ಹತ್ತಿದಾಗ ಯಾರೋ ಒಬ್ಬರು ಬನ್ನಿ ಕುಳಿತುಕೊಳ್ಳಿ ಎಂದು ಸೀಟು ಬಿಟ್ಟುಕೊಟ್ಟರಂತೆ. ಇಷ್ಟು ಜನ ತುಂಬಿದ್ದ ಬಸ್, ನಿಲ್ಲುವುದಕ್ಕೂ ಜಾಗವಿಲ್ಲ ಅಂತಹದ್ದರಲ್ಲಿ ನನಗ್ಯಾಕೆ ಅವರು ಸೀಟು ಬಿಟ್ಟುಕೊಟ್ಟರು ಎಂದು ಅವರಿಗೆ ಆಶ್ಚರ್ಯವಾಗಿತ್ತಂತೆ. ಆಮೇಲೆ ಅವರ ಹೊಟ್ಟೆ ನೋಡಿ ಗರ್ಭಿಣಿ ಎಂದು ಸೀಟು ಬಿಟ್ಟುಕೊಟ್ಟಿದ್ದು ಎಂಬ ಸತ್ಯ ಗೊತ್ತಾದಾಗ ಅವರು ಮನೆಗೆ ಬಂದು ಬಿದ್ದುಬಿದ್ದು ನಗುತ್ತಿದ್ದರು. ಕೆಲವೊಮ್ಮೆ ರಷ್ ಇದ್ದ ಬಸ್ ನಲ್ಲಿ ಈ ಹೊಟ್ಟೆಯಿಂದ ನಮಗೆ ಲಾಭವಿದೆ.

ಈ ನಟಿಮಣಿಯರ ಚಪ್ಪಟೆಯಾಕಾರದ ಹೊಟ್ಟೆ ನೋಡಿದಾಗ ನನ್ನ ಹೊಟ್ಟೆಯೊಳಗೆ ಕಿಚ್ಚೊಂದು ಧಗಧನೆ ಉರಿಯುತ್ತದೆ. ಅದೇನು ತಿನ್ನುತ್ತಾರೆ, ಹೇಗೆ ವ್ಯಾಯಾಮ ಮಾಡುತ್ತಾರೆ ಎಂದು ಗೂಗಲ್ ಮಾಡಿ ನೋಡಿದರೆ ಇಷ್ಟುದ್ದದ ಪಟ್ಟಿ ಬರುತ್ತದೆ. ಇದೆಲ್ಲಾ ನಮ್ಮ ಹತ್ತಿರ ಮಾಡುವುದಕ್ಕೆ ಆಗುವುದಿಲ್ಲ. ‘ಬಡವ ನೀ ಮಡ್ಹಗದಂಗೆ ಇರು’ ಎಂದು ನನ್ನ ಹೊಟ್ಟೆ ಮೇಲೆ ಪ್ರೀತಿಯಿಂದ ಕೈಯಾಡಿಸುತ್ತೇನೆ.

Leave a Reply

Your email address will not be published. Required fields are marked *