ಕೀವರ್ಡ್ ಎಂದರೇನು, ಎಸ್‌ಇಒ ಸ್ನೇಹಿಯಾಗಿ ಕೀವರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? ಗೂಗಲ್‌ನ ಇತ್ತೀಚಿನ 2025ರ ಕೋರ್ ಅಪ್‌ಡೇಟ್‌ಗೆ ತಕ್ಕಂತೆ ನ್ಯೂಸ್ ಮತ್ತು ಬ್ಲಾಗ್ ಕಂಟೆಂಟ್ ಬರೆಯುವವರಿಗೆ ಇಲ್ಲಿ ಎಸ್‌ಇಒ ಸಲಹೆ ನೀಡಲಾಗಿದೆ.
ಈಗ ಕರ್ನಾಟಕದಲ್ಲಿ ಸಾಕಷ್ಟು ನ್ಯೂಸ್ ವೆಬ್‌ಸೈಟ್‌ಗಳು ಇವೆ. ಪ್ರತಿಯೊಂದು ಊರುಊರುಗಳಲ್ಲಿಯೂ ನೂರಾರು ನ್ಯೂಸ್ ವೆಬ್‌ಸೈಟ್‌ಗಳು ಇವೆ. ವರದಿಗಾರರು, ಸ್ಟ್ರಿಂಜರ್‌ಗಳು ತಮ್ಮದು ಒಂದು ಇರಲಿ ಎಂದು ನ್ಯೂಸ್ ವೆಬ್‌ಸೈಟ್ ಮಾಡಿಕೊಂಡಿದ್ದಾರೆ. ಪತ್ರಿಕೋದ್ಯಮ ಉದ್ಯೋಗ ಬಿಟ್ಟವರು, ಪತ್ರಿಕೋದ್ಯಮ ಉದ್ಯೋಗ ಕಳೆದುಕೊಂಡವರು ಸ್ವಂತ ನ್ಯೂಸ್ ಪೋರ್ಟಲ್ ಮಾಡಿಕೊಂಡಿದ್ದಾರೆ. ಇದರ ನಡುವೆ ಪತ್ರಿಕೋದ್ಯಮದ ಗಂಧಗಾಳಿ ಗೊತ್ತಿಲ್ಲದವರೂ ನ್ಯೂಸ್ ವೆಬ್‌ಸೈಟ್ ಮಾಡಿದ್ದಾರೆ. ಬೇರೆ ವೆಬ್‌ಸೈಟ್‌ಗಳಿಂದ ಕಾಪಿ ಮಾಡಿ ಸ್ವಲ್ಪ ಹಿಂದೆ ಮುಂದೆ ಮಾಡಿ ಪಬ್ಲಿಷ್ ಮಾಡುವುದರಲ್ಲಿ ಪಳಗಿದವರು ಸಾಕಷ್ಟು ಜನರು ಇದ್ದಾರೆ. ರಾಜ್ಯಮಟ್ಟದ ಮಾತ್ರವಲ್ಲದೆ ಹೈಪರ್ ಲೋಕಲ್ ಮಟ್ಟದಲ್ಲಿ ಈಗ ನ್ಯೂಸ್ ವೆಬ್‌ಸೈಟ್‌ಗಳು ರಾರಾಜಿಸುತ್ತಿವೆ. ಯಾವುದು ಸತ್ಯ ಸುದ್ದಿ, ಯಾವುದು ಸುಳ್ಳು ಸುದ್ದಿ ಎಂದು ತಿಳಿಯದೆ ಜನರು ಡಿಜಿಟಲ್ ಪೋರ್ಟಲ್‌ಗಳಲ್ಲಿ ಬಂದಿರುವ ಸುದ್ದಿಗಳನ್ನು ಓದುತ್ತಿದ್ದಾರೆ.
ಇದರ ನಡುವೆ ಕೆಲವು ಜನರು ಗುಣಮಟ್ಟದಲ್ಲಿ ರಾಜಿಯಾಗದಂತೆ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಕಂಟೆಂಟ್ ನೀಡುತ್ತಿದ್ದಾರೆ. ಕೆಲವೊಂದು ರಾಜ್ಯಮಟ್ಟದ ನ್ಯೂಸ್ ವೆಬ್‌ಸೈಟ್‌ಗಳು “ಇದು ಪತ್ರಿಕೋದ್ಯಮವೇ?” ಎಂದು ನಾಚಿಕೆಪಡುವಂತೆ ಕ್ಲಿಕ್‌ಬೈಟ್ ಹೆಡ್ಡಿಂಗ್‌ಗಳನ್ನು ನೀಡುತ್ತ ಕಂಟೆಂಟ್ ನೀಡುತ್ತಿವೆ. ಒಂದು ಹೆಡ್ಡಿಂಗ್, ಒಂದೆರಡು ಪ್ಯಾರಾ ಕಂಟೆಂಟ್, ಒಂದು ಫೋಟೋ ಹಾಕಿ ಬಿಸಾಕಿಬಿಡುವುದು ನಿಜಕ್ಕೂ ಡಿಜಿಟಲ್ ಪತ್ರಿಕೋದ್ಯಮವಲ್ಲ.
ಒಂದು ಸುಂದರವಾದ ಹೆಡ್ಡಿಂಗ್ ನೀಡಬೇಕು. ತಪ್ಪಿಲ್ಲದಂತೆ ಒಳ್ಳೆಯ ಕಂಟೆಂಟ್ ಬರೆಯಬೇಕು. ಜನರು ಏನು ಓದುತ್ತಾರೆಯೋ ಅದು ಅವರ ಮೇಲೆ ನಮ್ಮ ಬರಹ ಪ್ರಭಾವ ಬೀರುತ್ತದೆ. ಪತ್ರಿಕೋದ್ಯಮದ ಮೂಲ ಆಶಯ “ಜನರಿಗೆ ಒಳ್ಳೆಯದನ್ನು ಮಾಡುವುದು, ಒಳ್ಳೆಯದನ್ನು ನೀಡುವುದು”. ಕೆಟ್ಟಕೆಟ್ಟ ಹೆಡ್ಡಿಂಗ್, ಕೆಟ್ಟಕೆಟ್ಟ ವಾಕ್ಯಗಳು, ತಪ್ಪುಗಳು ಕೂಡ ಜನರ ಮೇಲೆ ಪ್ರಭಾವ ಬೀರುತ್ತವೆ. ಜನರು ಇಂತಹದ್ದೇನ್ನೇ ಬಯಸುತ್ತಾರೆ ಎಂದು ಡಿಜಿಟಲ್ ಪತ್ರಕರ್ತರು ಅಥವಾ ಕಂಟೆಂಟ್ ಬರಹಗಾರರು ನಿರ್ಧಾರಕ್ಕೆ ಬರಬಾರದು. ಒಂದು ಹೆಡ್ಡಿಂಗ್, ಒಂದೆರಡು ಪ್ಯಾರಾ ಕಂಟೆಂಟ್, ಒಂದು ಫೋಟೋ ಮಾತ್ರ ಸಾಕಾಗುವುದಿಲ್ಲ. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಎಸ್‌ಇಒಗೆ ಗಮನ ನೀಡಬೇಕು. ಬರಹ ಮತ್ತು ಎಸ್‌ಇಒ ಜತೆಜತೆಯಾಗಿ ಹೋಗಬೇಕು.
ಗೂಗಲ್ ಆಗಾಗ ಕೋರ್ ಅಪ್‌ಡೇಟ್ ಮಾಡುತ್ತ ಇರುತ್ತದೆ. ಅದು EAT ಕಂಟೆಂಟ್ ಬಯಸುತ್ತದೆ. ಇದೇ ಕಾರಣಕ್ಕೆ ಪ್ರಮುಖ ಡಿಜಿಟಲ್ ಮಾಧ್ಯಮಗಳಿಗೆ ಕೆಲವು ತಿಂಗಳು ಭರ್ಜರಿ ಪೇಜ್‌ವ್ಯೂಸ್, ಇನ್ನು ಕೆಲವು ತಿಂಗಳು ಕಡಿಮೆ ಪೇಜ್‌ವ್ಯೂಸ್ ಬರುತ್ತಾ ಇರುತ್ತವೆ. ಸಣ್ಣ ಡಿಜಿಟಲ್ ವೆಬ್‌ಸೈಟ್‌ಗಳಿಗೆ ಪೇಜ್‌ವ್ಯೂಸ್ ಅತ್ಯಂತ ಕಡಿಮೆ ಬರಲು ಕೂಡ ಎಸ್‌ಇಒ ಉತ್ತಮವಾಗಿರದೆ ಇರುವುದು ಪ್ರಮುಖ ಕಾರಣ. ಇದೇ ಕಾರಣಕ್ಕೆ ಕರ್ನಾಟಕ ಬೆಸ್ಟ್ ಡಿಜಿಟಲ್ ಸರ್ವೀಸ್ “ಎಸ್‌ಇಒ ಸರ್ವೀಸ್” ಮೂಲಕ ಸಾಕಷ್ಟು ಜನರಿಗೆ ನೆರವಾಗುತ್ತಿದೆ.
ಕೀವರ್ಡ್ ಎಂದರೇನು?
ಡಿಜಿಟಲ್ ಕಂಟೆಂಟ್ ಬರೆಯುವಾಗ ಕಂಟೆಂಟ್ ಜತೆಗೆ ಎಸ್‌ಇಒಗೂ ಸಮಯ ಮತ್ತು ಗಮನ ನೀಡಬೇಕು. ಗೂಗಲ್‌ನಂತಹ ಸರ್ಚ್ ಎಂಜಿನ್‌ಗಳಲ್ಲಿ ಜನರು ಹುಡುಕಾಟ ನಡೆಸುವಾಗ ಟೈಪ್ ಮಾಡುವ ಪದಗಳನ್ನು ಕೀವರ್ಡ್ ಎಂದು ಕರೆಯಬಹುದು. ನೀವು ಬರೆದ ಬರಹ ಮತ್ತು ಗೂಗಲ್‌ನಲ್ಲಿ ಜನರು ನಡೆಸುವ ಹುಡುಕಾಟದ ನಡುವಿನ ಸೇತುವೆಯಾಗಿ ಕೀವರ್ಡ್‌ಗಳು ಕೆಲಸ ಮಾಡುತ್ತವೆ. ಈಗ ಎಐ ಸ್ನಿಪ್ಪೆಟ್‌ಗಳು ಇರುವ ಕಾರಣ ಹೆಚ್ಚು ಎಚ್ಚರಿಕೆಯಿಂದ ಕೀವರ್ಡ್‌ಗಳನ್ನು ಬರೆಯಬೇಕಾಗುತ್ತದೆ. ಕೀವರ್ಡ್‌ಗಳನ್ನು ಕಂಟೆಂಟ್‌ನಲ್ಲಿ ಬಲವಂತವಾಗಿ ತುರುಕಬಾರದು. ಅದು ಸಹಜವಾಗಿ ಕಂಟೆಂಟ್‌ನೊಳಗೆ ಬರುವಂತೆ ಇರಬೇಕು. ಈ ಸಮಯದಲ್ಲಿ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಬರೆಯುವವರು ಎಸ್‌ಇಒ ಸ್ನೇಹಿಯಾಗಿ ಸೃಜನಶೀಲತೆಯಿಂದ ಬರೆಯುವ ಅಗತ್ಯವಿದೆ.
ಕೀವರ್ಡ್ಸ್ ಯಾಕೆ ಅಗತ್ಯ?
ಕೀವರ್ಡ್‌ಗಳು ಸರ್ಚ್ ಎಂಜಿನ್‌ಗೆ ಅತ್ಯಂತ ಅಗತ್ಯ. ನೀವು ಬರೆದಿರುವ ಕಂಟೆಂಟ್ ಯಾವ ವಿಷಯಕ್ಕೆ ಸಂಬಂಧಪಟ್ಟದ್ದು ಎಂದು ತಿಳಿಯಲು ಕೀವರ್ಡ್ ನೆರವಾಗುತ್ತದೆ. ಸರ್ಚ್‌ನಲ್ಲಿ ಜನರು ಏನೋ ಹುಡುಕುವಾಗ ಆ ಹುಡುಕಾಡುವವರಿಗೆ ಅಗತ್ಯವಿರುವುದು ನಿಮ್ಮ ಆರ್ಟಿಕಲ್‌ನಲ್ಲಿ ಇದೆಯೇ ಎಂದು ತಿಳಿಯಲು ಎಸ್‌ಇಒ ಬೇಕಾಗುತ್ತದೆ. ಆರ್ಗ್ಯಾನಿಕ್ ಟ್ರಾಫಿಕ್ ಹೆಚ್ಚಲು ಇದು ನೆರವಾಗುತ್ತದೆ. ಅಂದರೆ, ಉಚಿತ ಟ್ರಾಫಿಕ್ ದೊರಕಲು ನೆರವಾಗುತ್ತದೆ. ಜನರು ನಿಜಕ್ಕೂ ಏನು ಬಯಸುತ್ತಾರೋ ಅದೇ ಕಂಟೆಂಟ್ ನೀಡಲು ನೆರವಾಗುತ್ತದೆ. ನೀವು ಹೆಡ್ಡಿಂಗ್‌ನಲ್ಲಿ ಚಿಕನ್ ಕರಿ ಎಂದು ಬರೆದು, ಕಂಟೆಂಟ್‌ನಲ್ಲಿ ಫಿಶ್ ಕರಿ ಬಗ್ಗೆ ಬರೆದರೆ ಗೂಗಲ್ ನಿಮ್ಮ ವೆಬ್‌ಸೈಟ್‌ಗೆ ಪನಿಶ್‌ಮೆಂಟ್ ನೀಡುತ್ತದೆ. ಒಂದು ಒಳ್ಳೆಯ ಕಂಟೆಂಟ್ ಹೆಚ್ಚು ಜನರಿಗೆ ತಲುಪಲು ಸಮರ್ಪಕವಾದ ಕೀವರ್ಡ್‌ಗಳು ಅಗತ್ಯ.
ನ್ಯೂಸ್ ಕಂಟೆಂಟ್‌ಗೆ ಕೀವರ್ಡ್ ಆಯ್ಕೆ ಹೇಗೆ?
ಆ ಸಮಯಕ್ಕೆ ಸೂಕ್ತವಾದ ಕೀವರ್ಡ್ ಆಗಿರಬೇಕು. ನಿಮ್ಮ ಹಳೆಯ ಕೀವರ್ಡ್ ವರ್ಕ್ ಆಗೋದಿಲ್ಲ. ವಿಮಾನ ಕ್ರ್ಯಾಶ್ ಆದಾಗ ಆ ಸಮಯಕ್ಕೆ ಅತ್ಯಂತ ಸೂಕ್ತವಾದ ಕೀವರ್ಡ್‌ಗಳು ಯಾವುವು ಎಂದು ಆಯ್ಕೆ ಮಾಡಿಕೊಳ್ಳುವ ಪ್ರತಿಭೆ ಡಿಜಿಟಲ್ ಪತ್ರಕರ್ತನಿಗೆ ಇರಬೇಕು. ನೀವು ಆಯ್ಕೆ ಮಾಡುವ ಕೀವರ್ಡ್ ಟ್ರೆಂಡಿಂಗ್ ಸಬ್ಜೆಕ್ಟ್‌ಗೆ ಕನೆಕ್ಟ್ ಆಗಿರಬೇಕು. ಪ್ರಾದೇಶಿಕ ಸುದ್ದಿಗಳನ್ನು ನೀಡುವಾಗ ಲೋಕಲ್ ಕೀವರ್ಡ್‌ಗೆ ಕನೆಕ್ಟ್ ಆಗಿರಬೇಕು. ಎಡಿಟರ್ ನೋಡ್ತಾರೆ, ಎಸ್‌ಇಒ ಟೀಮ್‌ನವರು ಬಯ್ತಾರೆ ಅನ್ನೋ ಕಾರಣಕ್ಕೆ ಸಿಕ್ಕಸಿಕ್ಕ ಇಂಗ್ಲಿಷ್ ಮತ್ತು ಕನ್ನಡ ಪದಗಳನ್ನು ತುರುಕುವುದು ಎಸ್‌ಇಒ ಅಲ್ಲ.
ಗೂಗಲ್ ಆಗಾಗ ತನ್ನ ಕೋರ್ ಅಪ್‌ಡೇಟ್ ಮಾಡುತ್ತಾ ಇರುತ್ತದೆ. ಸದ್ಯ ಗೂಗಲ್ ಕೀವರ್ಡ್ ಸ್ಟಫ್ಪಿಂಗ್ ಇಲ್ಲದ ಗುಣಮಟ್ಟದ ಕಂಟೆಂಟ್‌ಗಳಿಗೆ ಆದ್ಯತೆ ನೀಡುತ್ತದೆ. ಇದರೊಂದಿಗೆ ಆಥರ್ ಕೂಡ ಪ್ರಮುಖ ಅಂಶ. ನಿರ್ದಿಷ್ಟ ವಿಷಯಗಳಲ್ಲಿ ಆಥರ್ ಖ್ಯಾತಿ ಹೊಂದಿರಬೇಕು. ಅಂದರೆ, ಬಿಸ್ನೆಸ್ ಸುದ್ದಿ ಬರೆಯುವವರು ಸಿನಿಮಾ ಸುದ್ದಿ ಬರೆಯಬಾರದು. ಬಿಸ್ನೆಸ್ ವಿಷಯದಲ್ಲಿಯೇ ರೆಪ್ಯುಟೇಷನ್ ಕ್ರಿಯೆಟ್ ಮಾಡುತ್ತಿರಬೇಕು. ಗೂಗಲ್‌ಗೆ ಈಟ್ ಕಂಟೆಂಟ್ ಬೇಕು. ಈಟ್ ಎಂದರೆ E-A-T (Expertise, Authoritativeness, Trustworthiness) .
ಇದನ್ನೂ ಓದಿ: ಆನ್ ಪೇಜ್ – ಆಫ್ ಪೇಜ್ ಎಸ್‌ಇಒ ಎಂದರೇನು? ವೆಬ್‌ಸೈಟ್ ಯಶಸ್ಸಿಗೆ ಬೇಕು ಈ ಅವಳಿ ಸರ್ಚ್ ಎಂಜಿನ್ ಆಪ್ಟಿಮೈಜೇಷನ್ ತಂತ್ರ
ನ್ಯೂಸ್ ಕಂಟೆಂಟ್‌ಗೆ ಅತ್ಯುತ್ತಮವಾಗಿ ಎಸ್‌ಇಒ ಕೀವರ್ಡ್‌ಗಳನ್ನು ಬರೆಯುವುದು ಹೇಗೆ?
ಇದಕ್ಕಾಗಿ ಕೆಲವೊಂದು ಟೂಲ್‌ಗಳನ್ನು ಬಳಸಬೇಕು. ಮೊದಲನೆಯ ಟೂಲ್ ನಮ್ಮ ಕಾಮನ್‌ಸೆನ್ಸ್. ಗೂಗಲ್ ಕೋರ್ ಅಪ್‌ಡೇಟ್‌ಗೆ ತಕ್ಕಂತೆ ತಮ್ಮ ತಲೆ ಅಪ್‌ಡೇಟ್ ಆಗುತ್ತಾ ಇರಬೇಕು. ಅಂತಹ ಎಸ್‌ಇಒ ಬುದ್ಧಿವಂತಿಕೆ ಡಿಜಿಟಲ್ ಪತ್ರಕರ್ತರಲ್ಲಿ ಅಥವಾ ಡಿಜಿಟಲ್ ಕಂಟೆಂಟ್ ಕ್ರಿಯೆಟರ್‌ಗಳಲ್ಲಿ ಇರಬೇಕು. ಗೂಗಲ್ ಟ್ರೆಂಡ್ಸ್, ಗೂಗಲ್ ನ್ಯೂಸ್ ಆಟೋ ಸಜೆಷನ್, ಟ್ವಿಟ್ಟರ್/ಎಕ್ಸ್ ಟ್ರೆಂಡ್‌ಗಳನ್ನು ಗಮನಿಸುತ್ತಾ ಇರಬೇಕು. ಇದರೊಂದಿಗೆ SEMrush ಅಥವಾ Ahrefsನಂತಹ ಕೆಲವೊಂದು ಎಸ್‌ಇಒ ಟೂಲ್‌ಗಳು ಇವೆ.
ಕೀವರ್ಡ್ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಪ್ರೈಮರಿ ಅಥವಾ ಪ್ರಾಥಮಿಕ ಕೀವರ್ಡ್, ಸೆಕೆಂಡರಿ ಕೀವರ್ಡ್, ಲೊಕೆಷನ್ ಕೀವರ್ಡ್, ಕೊಶ್ಚನ್ ಕೀವರ್ಡ್ ಇತ್ಯಾದಿಗಳ ಮಿಶ್ರಣವನ್ನು ನಿಮ್ಮ ಕೀವರ್ಡ್‌ಗಳು ಹೊಂದಿರಬೇಕು.
ಕಂಟೆಂಟ್‌ನೊಳಗೆ ಕೀವರ್ಡ್‌ಗಳು
ಕೀವರ್ಡ್‌ಗಳನ್ನು ಕೇವಲ ಕೀವರ್ಡ್‌ಗಳನ್ನು ಹಾಕುವ ಬಾಕ್ಸ್‌ನೊಳಗೆ ಹಾಕಿಬಿಟ್ಟರೆ ಕೆಲಸ ಮುಗಿಯದು. ಟೈಟಲ್ ಅಥವಾ ಎಚ್1, ಮೊದಲ ನೂರು ಪದಗಳು, ಸಬ್‌ಹೆಡ್ಡಿಂಗ್‌ಗಳು ಅಂದ್ರೆ ಎಚ್2 ಅಥವಾ ಎಚ್3, ನೀವು ಕಂಟೆಂಟ್ ಜತೆಗೆ ಬಳಸುವ ಚಿತ್ರಗಳ ಆಲ್ಟ್ ಟೆಕ್ಸ್ಟ್‌ಗಳು, ಮೆಟಾ ಡಿಸ್ಕ್ರಿಪ್ಷನ್, ಯುಆರ್‌ಎಲ್ ಸ್ಲಗ್, ಆಂಕರ್ ಲಿಂಕ್‌ಗಳಲ್ಲಿಯೂ ಸರಿಯಾದ ರೀತಿಯಲ್ಲಿ ಕೀವರ್ಡ್‌ಗಳು ಬರುವಂತೆ ಇರಬೇಕು. ನೆನಪಿಡಿ, ಇಲ್ಲೆಲ್ಲ ಕೀವರ್ಡ್‌ಗಳನ್ನು ತುರುಕಬಾರದು. ಸಹಜವಾಗಿ ಕೀವರ್ಡ್‌ಗಳು ಬರಬೇಕು. ಈಗ ಬಹುತೇಕ ಡಿಜಿಟಲ್ ನ್ಯೂಸ್ ವೆಬ್‌ಸೈಟ್‌ಗಳು ಕೀವರ್ಡ್ ಸ್ಟಫಿಂಗ್ ಮೂಲಕ ತಮ್ಮ ರಾಕಿಂಗ್ ಕಳೆದುಕೊಳ್ಳುತ್ತಿವೆ.
ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಕಂಟೆಂಟ್ ಕ್ರಿಯೆಟರ್‌ಗಳು “ಜನರು ಮತ್ತು ಸರ್ಚ್ ಎಂಜಿನ್” ಈ ಇಬ್ಬರನ್ನೂ/ ಎರಡನ್ನೂ ಗಮನದಲ್ಲಿಟ್ಟುಕೊಂಡು ಸುದ್ದಿ ಪ್ರಕಟಿಸಬೇಕು. ಎಸ್‌ಇಒ ಎಂದರೆ ಒಂದೆರಡು ದಿನದ ಮ್ಯಾಜಿಕ್ ಅಲ್ಲ. ಇಡೀ ಡಿಜಿಟಲ್ ಮಾಧ್ಯಮದೊಳಗೆ ಎಸ್‌ಇಒ ಹೈಜಿನ್ ರೂಪಿಸುವ ಪ್ರಕ್ರಿಯೆ ನಡೆಯಬೇಕು.
ಕರ್ನಾಟಕ ಬೆಸ್ಟ್ ಡಿಜಿಟಲ್ ಸರ್ವೀಸ್ ಮೂಲಕ ಎಸ್‌ಇಒ ಸೇವೆಗಳನ್ನು ಪಡೆಯಿರಿ














Got a Questions?
Find us on Socials or Contact Us and we’ll get back to you as soon as possible.