ಕರ್ನಾಟಕದಲ್ಲಿ ಕೈಗೆಟುಕದ ಕಲ್ಪವೃಕ್ಷ: ತೆಂಗಿನಕಾಯಿ, ಕೊಬ್ಬರಿ, ಕೊಬ್ಬರಿ ಎಣ್ಣೆ ಎಳನೀರು ದುಬಾರಿ

selective focus photo of coconuts
Photo by NipananLifestyle.com on Pexels.com

ಬೆಂಗಳೂರಿನ ಎಳನೀರು ವ್ಯಾಪಾರಿಗಳು ಹತ್ತಿಪ್ಪತ್ತು ಎಳನೀರುಗಳನ್ನು ಇಟ್ಟುಕೊಂಡು ಎಳನೀರುವೊಂದಕ್ಕೆ 70 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ತೆಂಗಿನಕಾಯಿ ದರವಂತೂ ದುಬಾರಿಯಾಗಿ ಮನೆಯಲ್ಲಿ ಅಡುಗೆಗೆ ತೆಂಗಿನಕಾಯಿ ಬಳಸುವ ಮೊದಲು ಹಲವು ಬಾರಿ ಯೋಚಿಸುವಂತೆ ಆಗಿದೆ. ಸಣ್ಣ ತೆಂಗಿನಕಾಯಿ ದರ 50 ರೂಪಾಯಿಗಿಂತಲೂ ಹೆಚ್ಚಾಗಿದೆ. ತಿಪಟೂರಿನಲ್ಲಿ ತೆಂಗಿನಕಾಯಿ ದರ ಕ್ವಿಂಟಾಲ್‌ಗೆ 32 ಸಾವಿರ ರೂಪಾಯಿ ವರೆಗೆ ತಲುಪಿದೆ. ಚಾಮರಾಜನಗರದಲ್ಲಿಯೂ ಕ್ವಿಂಟಾಲ್‌ಗೆ ಸರಾಸರಿ ದರ 32 ಸಾವಿರ ರೂವರೆಗೆ ಇದೆ. ಕಾರಾವರದ ಕುಮಟಾದಲ್ಲಿ 42 ಸಾವಿರ ರೂ ದಾಟಿದೆ. ಬೆಂಗಳೂರಿನಲ್ಲಿ ಮದುವೆ ಇತ್ಯಾದಿ ಶುಭ ಕಾರ್ಯಕ್ರಮಗಳಲ್ಲಿ ತೆಂಗಿನಕಾಯಿ ಬದಲು ಮೂಸಂಬಿ, ಕಿತ್ತಲೆಯನ್ನು ಪುಟ್ಟ ಕವರ್‌ನಲ್ಲಿ ನೀಡುತ್ತಿದ್ದಾರೆ. ಕೆಲವು ಹೋಟೆಲ್‌ಗಳಲ್ಲಿ ತೆಂಗಿನಕಾಯಿ ಚಟ್ನಿ ಕಾಣಿಸುತ್ತಿಲ್ಲ. ಕೊಬ್ಬರಿ ದರವೂ ದುಬಾರಿಯಾಗಿದೆ. ಕೇಳಿದ್ದೆಲ್ಲವನ್ನು ಕೊಡುವ ಕಲ್ಪವೃಕ್ಷ ಈಗ ಕೈಗೆಟುಕುತ್ತಿಲ್ಲ. ತೆಂಗಿನ ಗೆರಟೆಯೂ ದುಬಾರಿಯಾಗಿದೆ. ತಿಪಟೂರು, ತುಮಕೂರು, ಹಾಸನ, ಮೈಸೂರು, ದಾವಣಗೆರೆ, ಮಾಲೂರು, ಮಂಗಳೂರಿನಲ್ಲಿ ತೆಂಗಿನಕಾಯಿ ದರ ಕ್ವಿಂಟಾಲ್‌ಗೆ 24 ಸಾವಿರ ರೂನಿಂದ 32 ಸಾವಿರ ರೂವರೆಗೆ ಇದೆ.

ಕರ್ನಾಟಕದಲ್ಲಿ ತೆಂಗಿನಕಾಯಿ ದುಬಾರಿ

ಚಿನ್ನದ ಬೆಲೆಯಂತೆ ತೆಂಗಿನಕಾಯಿ ದರವೂ ಏರುತ್ತಲೇ ಇದೆ. ಮೂರು ವರ್ಷದ ಹಿಂದೆ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ದರ ಕೆಜಿಗೆ 18-20 ರೂಪಾಯಿ ಆಸುಪಾಸಿನಲ್ಲಿತ್ತು. ಕಳೆದ ವರ್ಷ ತೆಂಗಿನಕಾಯಿ ಕೆಜಿಗೆ 30-35 ರೂಪಾಯಿ ಇತ್ತು. ಆದರೆ, ಈ ವರ್ಷದ ಆರಂಭದಲ್ಲಿ ಕಾಯಿ ದರ 60-65 ರೂಗೆ ತಲುಪಿತ್ತು. ಈಗ 75-80 ರೂಪಾಯಿ ಆಸುಪಾಸಿನಲ್ಲಿದೆ. ಸದ್ಯದಲ್ಲಿಯೇ ಒಂದು ಕೆಜಿ ತೆಂಗಿನಕಾಯಿ ದರ 100 ರೂಪಾಯಿ ದಾಟಿದರೂ ಅಚ್ಚರಿಯಿಲ್ಲ.

ಹೋಟೆಲ್‌ ಮಾಲೀಕರ ಕಿಸೆಗೆ ಹೊರೆ

“ಮೊದಲು ಪ್ರತಿತಿಂಗಳು ನಮ್ಮ ಹೋಟೆಲ್‌ಗೆ ತಿಂಗಳಿಗೆ 5 ಸಾವಿರ ರೂಪಾಯಿಯ ತೆಂಗಿನಕಾಯಿ ತರುತ್ತಿದ್ದೇವು. ಈಗ ತೆಂಗಿನಕಾಯಿಗೆ 10 ಸಾವಿರ ರೂಪಾಯಿ ತಿಂಗಳ ಬಜೆಟ್‌ ಮೀಸಲಿಡಬೇಕಿದೆ. ತೆಂಗಿನಕಾಯಿ ಬಳಸುವ ಸಾಂಬಾರ್‌, ಚಟ್ನಿ ಇರುವ ತಿಂಡಿಗಳಿಗೆ ದರ ತುಸು ಹೆಚ್ಚಿಸುವುದು ನಮಗೆ ಅನಿವಾರ್ಯವಾಗಿದೆ” ಎಂದು ಬೆಂಗಳೂರಿನ ಬನಶಂಕರಿ ಬಳಿಯ ಹೋಟೆಲ್‌ವೊಂದರ ರಾಮಪ್ಪ ಗೌಡ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಬೀದಿಬೀದಿಗಳಲ್ಲಿ ನೇರಳೆ ಹಣ್ಣುಗಳ ಮಾರಾಟ, ಕೆಜಿಗೆ 100 ರೂಪಾಯಿ, ನೇರಳೆಯ ಆರೋಗ್ಯ ಪ್ರಯೋಜನ ತಿಳಿಯಿರಿ

ಎಳನೀರು ದರವೂ ತುಟ್ಟಿ

ಎಳನೀರುವೊಂದಕ್ಕೆ ದರ 70 ರೂಪಾಯಿ ಇದೆ. ಪ್ರತಿದಿನವೂ ದೊಡ್ಡ ಎಳನೀರು ರಾಶಿಯ ಮುಂದೆ ಇರುತ್ತಿದ್ದ ಕತ್ರಿಗುಪ್ಪೆ ಸಮೀಪದ ವ್ಯಾಪಾರಿಯೊಬ್ಬರ ಬಳಿ ಹತ್ತಿಪ್ಪತ್ತು ಬಾಡಿದ ಎಳನೀರು ಇದೆ. “ದರ ಹೆಚ್ಚಿದೆ. ಇಷ್ಟು ದರ ನೀಡಿ ತರಲು ಧೈರ್ಯ ಸಾಲುತ್ತಿಲ್ಲ. ಜನರು ಕೂಡ ಇಷ್ಟು ಹಣ ನೀಡಿ ಎಳನೀರು ಕುಡಿಯಲು ಹಿಂಜರಿಯುತ್ತಾರೆ” ಎಂದು ಅವರು ಹೇಳಿದ್ದಾರೆ.

ಯಾಕೆ ತೆಂಗಿನಕಾಯಿ ದುಬಾರಿಯಾಗಿದೆ?

  • ಕಡಿಮೆಯಾಗಿರುವ ಇಳುವರಿ
  • ವರ್ಷದ ಆರಂಭದಲ್ಲಿ ಎಳನೀರು ಮಾರಾಟ ಹೆಚ್ಚಳದಿಂದ ಈಗ ತೆಂಗಿನಕಾಯಿ ಪೂರೈಕೆ ಕಡಿಮೆಯಾಗಿರುವುದು.
  • ಹವಾಮಾನದ ಬದಲಾವಣೆ
  • ತೆಂಗಿನಕಾಯಿ ಡ್ರೈಪೌಡರ್‌ ಫ್ಯಾಕ್ಟರಿಗಳಿಗೆ ತೆಂಗಿನಕಾಯಿ ಪೂರೈಸುತ್ತಿರುವುದು

ತಿಪಟೂರಿನ ರೈತರೊಬ್ಬರ ಪ್ರಕಾರ “ಈಗ ಇಳುವರಿ ಕಡಿಮೆಯಾಗಿದೆ. ಮೊದಲಿನಷ್ಟು ಇಳುವರಿ ಇಲ್ಲ. ಜತೆಗೆ ತೆಂಗಿನಕಾಯಿಯು ಮಂಡಿ ಬದಲು ಫ್ಯಾಕ್ಟರಿಗೆ ಹೆಚ್ಚಿನ ಪ್ರಮಾಣದಲ್ಲಿ ಹೋಗುವುದು ಕಾರಣ”. ಮಂಗಳೂರಿನ ಕೃಷಿಕರೊಬ್ಬರ ಪ್ರಕಾರ “ಮೊದಲು ನಮ್ಮ ಮನೆಯಲ್ಲಿ ತೆಂಗಿನಕಾಯಿ ಸ್ಟಾಕ್‌ ಇತ್ತು. ಈ ಬಾರಿ ಮರದಲ್ಲಿ ಕಾಯಿಗಳು ಕಡಿಮೆ. ಮನೆಯಲ್ಲಿ ನಮ್ಮ ಬಳಕೆಗೆ ಆಗುವಷ್ಟು ಇದೆ. ಬೆಂಗಳೂರಿನಿಂದ ಮಗ ಮತ್ತು ಸೊಸೆ ಬಂದರೆ ಅವರಿಗೆ ಕೊಂಡೊಯ್ಯಲು ನಮ್ಮ ಮನೆಯಲ್ಲಿ ಕಾಯಿ ಇಲ್ಲ ಎನ್ನುವ ಪರಿಸ್ಥಿತಿ ಇದೆ” ಎನ್ನುತ್ತಾರೆ.

“ಈ ವರ್ಷದ ಆರಂಭದಲ್ಲಿಯೇ ಎಳನೀರಿಗೆ ದರ ದುಬಾರಿಯಾಗಿತ್ತು. ಸಾಕಷ್ಟು ಕೃಷಿಕರು ತೆಂಗಿನಕಾಯಿ ಬದಲು ಎಳನೀರು ಕೊಯ್ದು ಮಾರಾಟ ಮಾಡಿದ್ದರು. ಎಳನೀರು ಮಾರಿದ ನಂತರ ಮರದಲ್ಲಿ ತೆಂಗಿನಕಾಯಿ ಇಲ್ಲ. ಇದು ಕೂಡ ಈಗ ತೆಂಗಿನಕಾಯಿ ಪೂರೈಕೆ ಕಡಿಮೆಯಾಗಲು ಕಾರಣ” ಎಂದು ಮಂಡಿ ವ್ಯಾಪಾರಿ ಬಾಬು ಕೆ ಹೇಳಿದ್ದಾರೆ.

“ಈಗ ತೆಂಗಿನಕಾಯಿ ಪೌಡರ್‌ಗೆ ಬೇಡಿಕೆ ಹೆಚ್ಚಿದೆ. ಸಾಕಷ್ಟು ಜನರು ಮಾರುಕಟ್ಟೆಯಲ್ಲಿ ಇಡಿ ತೆಂಗಿನಕಾಯಿ ಬದಲು ತೆಂಗಿನಕಾಯಿ ಪೌಡರ್‌ ಬಳಸಲು ಆದ್ಯತೆ ನೀಡುತ್ತಿದ್ದಾರೆ. ತೆಂಗಿನಕಾಯಿ ಪೌಡರ್‌ ಪ್ಯಾಕೆಟ್‌ ಮಾಡುವ ಫ್ಯಾಕ್ಟರಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಕಾಯಿ ರವಾನೆಯಾಗುವುದು ಕೂಡ ಕಾಯಿ ದುಬಾರಿಯಾಗಲು ಕಾರಣ” ಎಂದು ಬಾಬು ಹೇಳಿದ್ದಾರೆ. ಹೀಗೆ, ಇಳುವರಿ ಕುಸಿತ, ಹವಾಮಾನ ಬದಲಾವಣೆ, ಎಳನೀರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿರುವುದು, ತೆಂಗಿನಕಾಯಿ ಡ್ರೈಪೌಡರ್‌ಗೆ ಬೇಡಿಕೆ ಇತ್ಯಾದಿಗಳು ಮಾರುಕಟ್ಟೆಗೆ ತೆಂಗಿನಕಾಯಿ ಪೂರೈಕೆ ಕಡಿಮೆ ಮಾಡಿದ್ದು, ಕರ್ನಾಟಕ ಮಾರುಕಟ್ಟೆಯಲ್ಲಿ ದರ ಹೆಚ್ಚಲು ಕಾರಣವಾಗಿದೆ.

error: Content is protected !!