ಬೆಂಗಳೂರಿಗೆ ಕರ್ನಾಟಕದ ಹಳ್ಳಿಹಳ್ಳಿಗಳಿಂದ, ಹೊರರಾಜ್ಯಗಳಿಂದ ವಿವಿಧ ಲೋಕಲ್ ಹಣ್ಣುಗಳು ಆಗಮಿಸುತ್ತ ಇರುತ್ತವೆ. ಮೂಲತಃ ಗ್ರಾಮೀಣ ಮೂಲದ ಜನರು ಪಟ್ಟಣ, ನಗರ ಸೇರಿದರೂ ಅವರ ಮನಸ್ಸಿನಲ್ಲಿ ಹಳ್ಳಿಯ ಸೆಳೆತ ಇದ್ದೇ ಇರುತ್ತದೆ. ಇದೇ ಕಾರಣಕ್ಕೆ ಮಂಗಳೂರು ಸ್ಟೋರುಗಳು, ಮಳೆನಾಡು ಸ್ಟೋರುಗಳು, ಹುಬ್ಬಳ್ಳಿ ಅಂಗಡಿಗಳು, ಜೋಳದ ರೊಟ್ಟಿ, ಕೋಳಿ ರೊಟ್ಟಿ ಎಂದೆಲ್ಲ ಮಾರಾಟವಾಗುತ್ತಿವೆ. ಇದೇ ಸಮಯದಲ್ಲಿ ಬೀದಿ ಬದಿಯ ವ್ಯಾಪಾರಿಗಳು ಕೂಡ ಇಲ್ಲಿನ ಜನರ ನಾಡಿಮಿಡಿತ ಅರಿತು ಆಗಾಗ ಆಗಾಗ ಸೀಸನ್ ಹಣ್ಣು ಹಂಪಲುಗಳನ್ನು ಮಾರಾಟ ಮಾಡುತ್ತಾರೆ. ಪೇರಳೆ ಅಥವಾ ಸೀಬೆ ಹಣ್ಣುಗಳು ವರ್ಷದ ಎಲ್ಲಾ ಕಾಲದಲ್ಲಿಯೂ ಇಲ್ಲಿ ಮಾರಾಟವಾಗಬಹುದು. ಆದರೆ, ಹಲಸು, ನೇರಳೆ ಹಣ್ಣುಗಳು ಅಥವಾ ತಾಳೆ ಮರದ ಕಾಯಿ (ಮಂಗಳೂರು ಕಡೆ ಈರೋಳು ಅನ್ನುತ್ತಾರೆ) ಇತ್ಯಾದಿಗಳು ಆಯಾ ಸೀಸನ್‌ನಲ್ಲಿ ಮಾರಾಟವಾಗುತ್ತವೆ. ಈಗ ಬೆಂಗಳೂರಿನಲ್ಲಿ ಹಲಸು ಮತ್ತು ನೇರಳೆ ಹಣ್ಣುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತದೆ. ಮೊದಲೆಲ್ಲ ಒಂದೊಂದು ಹಲಸಿನ ಹಣ್ಣಿಗೆ 500 ರೂಪಾಯಿ, 1 ಸಾವಿರ ರೂಪಾಯಿ ಎಂದು ಮಾರಾಟ ಮಾಡುತ್ತಿದ್ದರು. ಈ ವರ್ಷ ಬೇಗನೇ ಮಳೆ ಬಂದಿರುವುದರಿಂದಲೋ, ಹಲಸಿನ ಫಸಲು ಹೆಚ್ಚಿರುವುದರಿಂದಲೋ ನೂರು ಇನ್ನೂರು ರೂಪಾಯಿಗೆ ಹಲಸು ಮಾರಾಟ ಮಾಡುತ್ತಿದ್ದಾರೆ.
ನೇರಳೆ ಹಣ್ಣು ಮಾರಾಟ
ಅಂದಹಾಗೆ ಭಾರತದ ಬ್ಲ್ಯಾಕ್‌ಬೆರ್ರಿ ಎಂದು ಖ್ಯಾತಿ ಪಡೆದಿರುವ ಜಾಮೂನ್ ಫ್ರೂಟ್ ಅಥವಾ ಜಾವಾ ಪಮ್ ಎಂದು ಕರೆಯಲ್ಪಡುವ ನೇರಳೆ ಹಣ್ಣು ಈಗ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಮಾರಾಟವಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಬೀದಿಗಳು ನೇರಳೆಯಾಗಿವೆ. ಬೀದಿಬದಿಯ ವ್ಯಾಪಾರಿಗಳು ತಮ್ಮ ತಳ್ಳುಗಾಡಿಗಳಲ್ಲಿ ನೇರಳೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಹಿಂದಿನ ವರ್ಷಗಳನ್ನು ಗಮನಿಸಿದರೆ ಈ ವರ್ಷ ನೇರಳೆ ಹಣ್ಣು ಭರ್ಜರಿ ಫಸಲು ಬಂದಂತೆ ಇದೆ. ಮೊದಲೆಲ್ಲ ಐವತ್ತು ರೂಪಾಯಿ ಕೊಟ್ಟರೆ ಹತ್ತು ಹನ್ನೆರಡು ನೇರಳೆ ಹಣ್ಣುಗಳನ್ನು ಎಣಿಸಿ ತೂಕಕ್ಕೆ ಹಾಕುತ್ತಿದ್ದರು. ಆದರೆ, ಈ ವರ್ಷ ಒಂದು ಕೆಜಿ ನೇರಳೆ ಹಣ್ಣು 100 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಒಳ್ಳೆಯ ಗಾತ್ರದ, ಹೆಚ್ಚು ಗುಂಡಗೆ, ದುಂಡಗೆ ಇರುವ ನೇರಳೆ ಹಣ್ಣುಗಳಿಗೆ ಅರ್ಧ ಕೆಜಿಗೆ 60 ರೂಪಾಯಿ ಎಂದು ಬೆಂಗಳೂರಿನ ಎಜಿಎಸ್ ಬಡಾವಣೆಯ ಸಮೀಪ ಮಾರಾಟಗಾರ್ತಿಯೊಬ್ಬರು ಹೇಳಿದರು. ಆದರೆ, ಇಟ್ಟಮಡು, ಕತ್ರಿಗುಪ್ಪೆ, ಬನಶಂಕರಿ ಕಡೆಯೆಲ್ಲ ನೇರಳೆ ಹಣ್ಣುಗಳು ಕೆಜಿಗೆ 100 ರೂಪಾಯಿಗೆ ಮಾರಾಟವಾಗುತ್ತಿವೆ. ಅರ್ಧ ಕೆಜಿ ಎಂದು ಕೇಳಿದರೆ ಒಂದು ಕೆಜಿ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಏಕೆಂದರೆ, ಅವರ ಗಾಡಿ ತುಂಬಾ ನೇರಳೆ ಹಣ್ಣುಗಳಿವೆ. ಅವು ಮುಗಿದರೆ ಮಾತ್ರ ಅವರಿಗೆ ಲಾಭ.
ಬೆಂಗಳೂರಿನಲ್ಲಿ ಮಾರಾಟವಾಗುತ್ತಿರುವ ನೇರಳೆ ಹಣ್ಣು ಸಿಹಿಯಾಗಿದೆ. ಹೆಚ್ಚು ಹುಳಿ ಅಥವಾ ಒಗರು ಒಗರಾಗಿ ಇಲ್ಲ. ಒಂದು ಬಾಯಿಗೆ ಹಾಕಿಕೊಂಡರೆ ಇನ್ನೊಂದು ಬಾಯಿಗೆ ಹಾಕಿಕೊಳ್ಳಬೇಕೆನ್ನಿಸುವಷ್ಟು ಖುಷಿಯಾಗುತ್ತದೆ. ನೇರಳೆ ಹಣ್ಣು ಆರೋಗ್ಯಕಾರಿ. ಇದೇ ಕಾರಣಕ್ಕೆ ಆಯುರ್ವೇದದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ನಾನು ಊರಲ್ಲಿ ಇದ್ದಾಗ ಹತ್ತಾರು ವರ್ಷಗಳ ಹಿಂದೆ ದೊಡ್ಡ ನೇರಳೆ ಮರದಡಿ ರಾಶಿ ಬಿದ್ದಿರುತ್ತಿದ್ದ ನೇರಳೆ ಬೀಜಗಳನ್ನು ಕೆಲವರು ಕೊಂಡೊಯ್ಯುತ್ತಿದ್ದರು. ಇದನ್ನು ಆಯುರ್ವೇದ ಔಷಧಕ್ಕೆ ಬಳಸಲಾಗುತ್ತದೆ ಎಂದು ಆ ಸಮಯದಲ್ಲಿ ಅವರು ಹೇಳಿದ್ದರು.
ನೇರಳೆ ಹಣ್ಣಿನ ಆರೋಗ್ಯ ಪ್ರಯೋಜನಗಳು
ನೇರಳೆ ಹಣ್ಣಿನಲ್ಲಿ ಹಲವು ಬಗೆಯ ವಿಟಮಿನ್‌ಗಳು ಇವೆ. ಇದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ವೈದ್ಯರುಗಳು ಹೇಳುತ್ತಾರೆ. ಅತಿಸಾರ, ಅತಿಯಾದ ರಕ್ತಸ್ರಾವ, ಲ್ಯುಕೋರಿಯಾ, ವಾಕರಿಕೆ, ವಾಂತಿ, ಐಬಿಎಸ್ ಮುಂತಾದ ತೊಂದರೆ ಇರುವವರ ಆರೋಗ್ಯ ಉತ್ತಮಪಡಿಸಲು ನೇರಳೆ ಹಣ್ಣು ಅಥವಾ ನೇರಳೆ ಬೀಜ ನೆರವು ನೀಡುತ್ತದೆಯಂತೆ. ಚರ್ಮದ ತ್ವಚೆ ಉತ್ತಮಗೊಳ್ಳಲು ಕೂಡ ನೇರಳೆ ಹಣ್ಣು ನೆರವಾಗುತ್ತದೆಯಂತೆ.
ಈಗ ಎಲ್ಲರೂ ತಮ್ಮ ಹೃದಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ನೇರಳೆ ಹಣ್ಣಿನಲ್ಲಿ ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿಯಾದ ಸಾಕಷ್ಟು ಅಂಶಗಳು ಇವೆ. ನೇರಳೆ ಹಣ್ಣು ಮಾತ್ರವಲ್ಲದೆ ಅದರ ಬೀಜ, ಎಲೆ, ತೊಗಟೆಗಳೂ ಔಷಧವಾಗಿವೆ. ಮಧುಮೇಹ, ರಕ್ತಹೀನತೆ, ಕೆಮ್ಮು, ಉಬ್ಬಸ, ಹೈಪರ್ಗೈಸೀಮಿಯಾ, ಬ್ರಾಂಕೈಟಿಸ್, ಲೈಂಗಿಕ ದೌರ್ಬಲ್ಯ, ಲ್ಯುಕೋರೋಹಿಯಾ ಕಾಯಿಲೆಗಳಿಗೆ ಇದು ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ಮಾನಸಿಕ ಆರೋಗ್ಯ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ ಎಂದು ವಿವಿಧ ಮೆಡಿಕಲ್ ವರದಿಗಳಲ್ಲಿ ತಿಳಿಸಲಾಗಿದೆ.
ಸದ್ಯ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ನೇರಳೆ ಹಣ್ಣುಗಳು ಮಾರಾಟವಾಗುತ್ತಿವೆ. ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ ದೊಡ್ಡದೊಡ್ಡ ಮರಗಳಲ್ಲಿ ಬನ್ನಿರಿ ನನ್ನ ತಿನ್ನಿರಿ ಎಂದು ನೇರಳೆಗಳು ಕೈಬೀಸಿ ಕರೆಯುತ್ತಿರಬಹುದು. ಕೆಲವೊಂದು ದೊಡ್ಡ ಮರಗಳನ್ನು ಹತ್ತಲಾಗದೆ “ನೇರಳೆ ಹಣ್ಣು ಹುಳಿ” ಎಂದು ತಿನ್ನದೇ ಹಾಗೇ ಹೋಗುವವರೂ ಇರಬಹುದು. ಹಣ್ಣಿನ ವ್ಯಾಪಾರಿಗಳ ಪ್ರಕಾರ ಇದು ಇನ್ನೊಂದು ತಿಂಗಳು ಮಾತ್ರ ಇರುತ್ತದೆ. ಕೆಲವರ ಪ್ರಕಾರ ಇನ್ನು ಹತ್ತು ಹದಿನೈದು ದಿನಗಳ ಬಳಿಕವೇ ಕಾಣಿಸದು. ಹೀಗಾಗಿ ಈ ಸೀಸನ್‌ನಲ್ಲಿ ನೇರಳೆ ಹಣ್ಣುಗಳನ್ನು ತಿನ್ನಿರಿ. ಆರೋಗ್ಯವಾಗಿರಿ. ಹೆಚ್ಚು ತಿಂದು ಆರೋಗ್ಯ ಕೆಟ್ಟರೆ “ಅತಿಯಾದರೆ ಅಮೃತವೂ ವಿಷ” ಎಂಬ ಗಾದೆ ಮಾತು ನೆನಪಿಸಿಕೊಳ್ಳಿರಿ.


















Got a Questions?
Find us on Socials or Contact Us and we’ll get back to you as soon as possible.