- ಬರಹ: ಮಂಜುನಾಥ್ ಕೊಟಗುಣಸಿ
ಟಾಲಿವುಡ್ ನಟ ವಿಜಯ್ ದೇವರಕೊಂಡ ಗೆಲುವಿನ ಹಪಹಪಿಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಗೆಲುವು ಅನ್ನೋದೇ ಮರೀಚಿಕೆಯಾದಂತಿದೆ. ಕಳೆದ ವರ್ಷದ ಅವರ ಫ್ಯಾಮಿಲಿ ಸ್ಟಾರ್ ಸಿನಿಮಾ ಹಿಟ್ ಆಗಲಿಲ್ಲ. ಅದರ ಹಿಂದಿನ ಖುಷಿ ಸಿನಿಮಾ ಹೇಳಿಕೊಳ್ಳುವಂತ ಖುಷಿ ನೀಡಲಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಲೈಗರ್ ಸಿನಿಮಾ ತೋಪಾಯ್ತು. ಹೀಗೆ ಸೋಲಿನ ಸುಳಿಗೆ ಸಿಲುಕಿರೋ ವಿಜಯ್‌ಗೆ ಇದೀಗ ಶತಾಯ ಗತಾಯ ಗೆಲ್ಲಲೇಬೇಕಾದ ಜರೂರತ್ತಿದೆ. ಅದಕ್ಕೆ ಮೆಟ್ಟಿಲಾಗಿ ಬಂದಿದೆ ಕಿಂಗ್‌ಡಮ್ ಸಿನಿಮಾ. ಹೌದು ಕಿಂಗ್‌ಡಮ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಮಾಸ್ ಅವತಾರದಲ್ಲಿ ವಿಜಯ್ ಎದುರಾಗಿದ್ದಾರೆ.
ಎಮೆರ್ಜೆನ್ಸಿ ಆಪರೇಷನ್ ಸಲುವಾಗಿ ಕಥಾನಾಯಕ ವಿಜಯ್ ದೇವರಕೊಂಡ ಅಂಡರ್‌ಕವರ್ ಸ್ಪೈ ಏಜೆಂಟ್ ಆಗ್ತಾನೆ. ಅದಕ್ಕಾಗಿ ಅಮ್ಮ, ಮನೆ, ಹುಟ್ಟಿದೂರು ಉದ್ಯೋಗ ಎಲ್ಲವನ್ನ ಬಿಡ್ತಾನೆ. ಅಲ್ಲಿಂದ ನೇರವಾಗಿ ಆತನನ್ನ ಶ್ರೀಲಂಕಾಕ್ಕೆ ಕಳಿಸ್ತಾರೆ. ಅಲ್ಲಿ ಟ್ರೈಬಲ್ ಜನರ ಜತೆಗಿನ ಸಂಘರ್ಷ, ಸಿಡಿಮದ್ದುಗಳ ಜತೆಗೆ ಆತನ ಸೆಣಸಾಟ, ಜೈಲುವಾಸ.. ಹೀಗೆ ಟ್ರೇಲರ್‌ನಲ್ಲಿ ಹತ್ತು ಹಲವು ಕಥೆಗಳನ್ನ ಪದರುಗಳಾಗಿ ಬಿಡಿಸ್ತಾ ಹೋಗಿದ್ದಾರೆ ನಿರ್ದೇಶಕ ಗೌತಮ್ ತಿನ್ನನುರಿ.
ಶ್ರೀಲಂಕನ್ ಆರ್ಮಿ, ಲೋಕಲ್ ಪಾಲಿಟಿಕ್ಸ್, ರೌಡಿಗಳ ಅಬ್ಬರದ ಜತೆಗೆ ಲಾಂಗು ಮಚ್ಚುಗಳೂ ಇಲ್ಲಿ ಝಳಪಿಸುತ್ತವೆ. ನೆತ್ತರವೂ ನದಿಯಂತೆ ಹರಿಯುತ್ತೆ. ಇದೆಲ್ಲದರ ಜೊತೆಗೆ ಇದೀಗ ತಾನೇ ಯುದ್ಧ ಶುರುವಾಯ್ತು ಅನ್ನೋ ಮೂಲಕ ಟ್ರೈಬಲ್ ಜನಾಂಗದ ಜತೆಗಿನ ಕಥೆಯೂ ತೆರೆದುಕೊಳ್ಳುತ್ತೆ. ಒಟ್ಟಾರೆ ಔಟ್ ಅಂಡ್ ಔಟ್ ಇಂಟೆನ್ಸ್ ಆಕ್ಷನ್ ಪ್ಯಾಕ್ಡ್ ಸಿನಿಮಾ ಅನ್ನೋ ರೀತಿ ಕಿಂಗ್‌ಡಮ್ ಸಿನಿಮಾ ಕಾಣ್ತಿದೆ.
ಆಕ್ಷನ್ ಸೀನ್‌ಗಳಲ್ಲಿ ವಿಜಯ್ ವಿಜೃಂಭಿಸಿದ್ದಾರೆ. ಜೈಲಿನಲ್ಲಿನ ಸಾಹಸ ದೃಶ್ಯ ಕ್ಯೂರಿಯಾಸಿಟಿ ಮೂಡಿಸುತ್ತೆ. ಅಣ್ಣ ತಮ್ಮನ ನಡುವಿನ ಎಮೋಷನ್ ಜತೆಗೂ ಡೈರೆಕ್ಟರ್ ಆಟವಾಡಿದ್ದಾರೆ. ಈ ಹಿಂದೆ ಜೆರ್ಸಿ ಅಂಥ ಕ್ಲಾಸ್ ಸಿನಿಮಾ ಕೊಟ್ಟ ಡೈರೆಕ್ಟರ್ ಗೌತಮ್, ಫಸ್ಟ್ ಟೈಮ್ ಪಕ್ಕ ಆಕ್ಷನ್ ಸಿನಿಮಾ ಹೊತ್ತು ಬಂದಿದ್ದಾರೆ. ಭಾಗ್ಯಶ್ರೀ ಬೋರ್ಸ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಬೇರಾವ ಪಾತ್ರಧಾರಿಗಳನ್ನೂ ಇಲ್ಲಿ ರಿವಿಲ್ ಮಾಡಿಲ್ಲ.
ಅನಿರುದ್ಧ ಅವರ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸಖತ್ ಸ್ಪೈಸಿಯಾಗಿದೆ. ಕ್ಯಾಮರಾವರ್ಕ್ ಅಷ್ಟೇ ಮೊನಚಾಗಿದೆ. ಮೇಕಿಂಗ್ ವಿಚಾರದಲ್ಲಿ ಕೈ ಬಿಚ್ಚಿ ಖರ್ಚು ಮಾಡಿದ್ದಾರೆ ನಿರ್ಮಾಪಕರು. ದೊಡ್ಡ ಕ್ಯಾನ್ವಾಸ್ ಜೊತೆಗೆ ದೊಡ್ಡ ಸ್ಟಾರ್ ಬಳಗ ಇರೋದ್ರಿಂದ ಸಿನಿಮಾ ರಿಚ್ ಆಗಿಯೇ ಮೂಡಿಬಂದಿದೆ. ಸ್ಕ್ರೀನ್ ಮೇಲೆ ಕಾಣಿಸೋ ದೃಶ್ಯಗಳು ಹೊಸತೆನಿಸುತ್ತೆ. ಒಟ್ಟಾರೆ ಟ್ರೇಲರ್‌ನಲ್ಲಿ ಕಂಡಿದ್ದೇನೆಂದರೆ ಇದೊಂದು ರಿವೇಂಜ್ ಆಕ್ಷನ್ ಡ್ರಾಮಾ. ವಿಜಯ್ ಫ್ಯಾನ್ಸ್‌ಗೆ ಸಖತ್ ಇಷ್ಟ ಆಗಬಹುದು. ಇನ್ನೇನು ಇದೇ ತಿಂಗಳ 31ರಂದು ತೆರೆಗೆ ಬರಲಿದೆ. ಸದ್ಯ ಈ ಚಿತ್ರದ ತೆಲುಗು ಟ್ರೇಲರ್ ಮಾತ್ರ ರಿಲೀಸ್ ಆಗಿದೆ. ಹಾಗಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಾ ಅನ್ನೋದನ್ನ ಕಾದು ನೋಡಬೇಕು.











Got a Questions?
Find us on Socials or Contact Us and we’ll get back to you as soon as possible.