ಟರ್ಮ್ ಇನ್ಶೂರೆನ್ಸ್ ಎಂದರೇನು? ಹಣಕಾಸು ಭದ್ರತೆಗೆ ಈ ವಿಮೆ ಏಕೆ ಅಗತ್ಯ ಎಂದು ತಿಳಿಯಿರಿ

ಟರ್ಮ್‌ ವಿಮೆ ಎನ್ನುವುದು ಒಂದು ಬಗೆಯ ಜೀವ ವಿಮೆಯಾಗಿದ್ದು, ಇದು ನಿರ್ದಿಷ್ಟ ಅವಧಿ ಅಥವಾ ಟರ್ಮ್‌ ಆಫ್‌ ಇಯರ್ಸ್‌ಗೆ ಕವರೇಜ್‌ ನೀಡುತ್ತದೆ. ಈ ನಿರ್ದಿಷ್ಟ ಅವಧಿಯಲ್ಲಿ ವಿಮೆ ಮಾಡಿರುವ ವ್ಯಕ್ತಿಯು ನಿಧನರಾದರೆ ಅವರನ್ನು ಅವಲಂಬಿಸಿದವರಿಗೆ ಮರಣ ಪ್ರಯೋಜನಗಳ ಮೊತ್ತವನ್ನು ನೀಡುತ್ತದೆ. ಎಲ್ಲಾದರೂ ವಿಮೆ ಹೊಂದಿರುವವರು ಮರಣ ಹೊಂದಿದರೆ ಅವರನ್ನು ನಂಬಿರುವ ಕುಟುಂಬಕ್ಕೆ ಹಣಕಾಸು ತೊಂದರೆಯಾಗಬಾರದು ಎಂಬ ಕಾಳಜಿಯಿಂದ ಈ ಟರ್ಮ್‌ ವಿಮೆ ಮಾಡಬೇಕಿರುತ್ತದೆ. ಈಗ ಯಾವುದೇ ಸಮಯದಲ್ಲಿ ಯಾರಿಗೆ ಏನಾಗಬಹುದು ಎಂದು ಹೇಳಲಾಗದು. ಹೃದಯಾಘಾತ ಅಥವಾ ಇತರೆ ತೊಂದರೆಗಳಿಂದ ಇಂದು ಆರೋಗ್ಯವಾಗಿರುವವರು ನಾಳೆ ಇರುತ್ತಾರೆ ಎಂದು ಹೇಳಲಾಗದು. ಇಂತಹ ಸಮಯದಲ್ಲಿ ಟರ್ಮ್‌ ವಿಮೆ ಇದ್ದರೆ ಉತ್ತಮ.

ಟರ್ಮ್‌ ವಿಮೆ ಎಂದರೇನು?

ಪಾಲಿಸಿ ಟರ್ಮ್‌ ಅವಧಿಯಲ್ಲಿ ಪಾಲಿಸಿ ಮಾಡಿರುವವರು ಮೃತಪಟ್ಟರೆ ಅವರನ್ನು ಅವಲಂಬಿಸಿದವರಿಗೆ ಈ ಟರ್ಮ್‌ ವಿಮೆಯು ಹಣಕಾಸು ರಕ್ಷಣೆ ಒದಗಿಸುತ್ತದೆ. ಇದು ಇತರೆ ಉಳಿತಾಯ ಅಥವಾ ಹೂಡಿಕೆಯಂತೆ ಅಲ್ಲ. ಇತರೆ ವಿಮೆಗಳಿಗಿಂತ ಭಿನ್ನವಾಗಿದೆ. ಇಲ್ಲಿ ಟರ್ಮ್‌ ಅಂದರೆ ಪಾಲಿಸಿಯ ನಿರ್ದಿಷ್ಟ ಅವಧಿ. ಇದು ಕೆಲವು ವರ್ಷಗಳಿಂದ ಹಲವು ದಶಕಗಳ ಕಾಲ ಇರಬಹುದು. ಈ ಅವಧಿಯಲ್ಲಿ ವಿಮೆ ಮಾಡಿರುವವರು ಮೃತಟಪ್ಟರೆ ವಿಮೆ ಕಂಪನಿಯು ಮೊದಲೇ ತಿಳಿಸಿದ್ದಷ್ಟು ಮೊತ್ತ ನೀಡುತ್ತದೆ. ಇತರೆ ವಿಮೆಗಳಿಗೆ ಹೋಲಿಸಿದರೆ ಟರ್ಮ್‌ ವಿಮೆಗೆ ಪಾವತಿಸಬೇಕಾದ ಪ್ರೀಮಿಯಂ ಮೊತ್ತ ಕಡಿಮೆ ಇರುತ್ತದೆ. ವಿಮೆಯ ಅವಧಿ ಮುಗಿದ ಬಳಿಕ ಯಾವುದೇ ಮೆಚ್ಯೂರಿಟಿ ಪ್ರಯೋಜನಗಳು ಈ ವಿಮೆಯಲ್ಲಿ ದೊರಕುವುದಿಲ್ಲ.

ಟರ್ಮ್‌ ವಿಮೆ ಏಕೆ ಅಗತ್ಯ?

ಬಹುತೇಕ ಕುಟುಂಬಗಳಲ್ಲಿ ಮನೆಯ ಆಧಾರ ಸ್ತಂಭದಂತೆ ಯಾರಾದರೂ ಇರುತ್ತಾರೆ. ಅವರಿಗೆ ಏನಾದರೂ ಹೆಚ್ಚುಕಮ್ಮಿಯಾದರೆ ಅವರನ್ನು ನಂಬಿರುವ ಕುಟುಂಬ ಅಕ್ಷರಶಃ ಬೀದಿಗೆ ಬರುತ್ತದೆ. ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಅನೇಕ ಅಗತ್ಯಗಳಿಗೆ ಹಣ ಇರುವುದಿಲ್ಲ. ಒಂದಿಷ್ಟು ಉಳಿತಾಯ ಇದ್ದರೆ ಸರಿ. ಇಲ್ಲವಾದರೆ ತುಂಬಾ ಕಷ್ಟಪಡಬೇಕಾಗುತ್ತದೆ. ಮೃತಪಟ್ಟವ ಕೆಲವು ಲಕ್ಷ ರೂಪಾಯಿ ಸಾಲ ಮಾಡಿಟ್ಟರೆ ಮನೆಯಲ್ಲಿ ಉಳಿದವರ ಪರಿಸ್ಥಿತಿ ಕಠಿಣವಾಗುತ್ತದೆ. ಈ ರೀತಿಯಾದ ಸಮಯದಲ್ಲಿ ಕುಟುಂಬಕ್ಕೆ ತೊಂದರೆಯಾಗಬಾರದು ಎಂದಾದರೆ ಟರ್ಮ್‌ ಇನ್ಸೂರೆನ್ಸ್‌ ಮಾಡಿಡಬಹುದು. ಟರ್ಮ್‌ ಇನ್ಸೂರೆನ್ಸ್‌ಗೆ ಕೆಲವು ಸಾವಿರ ರೂಪಾಯಿ ಪಾವತಿಸಿದರೆ ಹಲವು ಲಕ್ಷ ಅಥವಾ ಕೋಟಿ ರೂಪಾಯಿಗಳಲ್ಲಿ ಹಣಕಾಸು ರಕ್ಷಣೆ ದೊರಕುತ್ತದೆ.

ಟರ್ಮ್‌ ವಿಮೆಯ ಪ್ರಯೋಜನಗಳು

ಅವಲಂಬಿತರಿಗೆ ಹಣಕಾಸು ಭದ್ರತೆ

ಇದು ಟರ್ಮ್‌ ವಿಮೆಯ ಪ್ರಮುಖ ಪ್ರಯೋಜನ. ನಿಮ್ಮ ಕುಟುಂಬಕ್ಕೆ ಹಣಕಾಸು ಭದ್ರತೆಯನ್ನು ಒದಗಿಸುತ್ತದೆ. ನೀವು ಇಲ್ಲದೆ ಇರುವಾಗಲೂ ಅವರ ಪ್ರತಿದಿನದ ಖರ್ಚು ವೆಚ್ಚ ನೋಡಿಕೊಳ್ಳಲು, ನೀವು ಮಾಡಿಟ್ಟಿರುವ ಸಾಲಗಳನ್ನು ತೀರಿಸಲು, ಮಕ್ಕಳ ವಿದ್ಯಾಭ್ಯಾಸ, ಸಂಗಾತಿಯ ಬದುಕಿನ ಅವಶ್ಯಕತೆಗೆ ಬೇಕಾದ ಹಣವನ್ನು ಇದು ಒದಗಿಸುತ್ತದೆ. ಕೆಲವೊಮ್ಮೆ ವ್ಯಕ್ತಿಯೊಬ್ಬರು ಮೃತಪಟ್ಟಾಗ ಆ ದುಃಖ ಕೆಲವು ಸಮಯ ಇರಬಹುದು. ಆದರೆ, ಅವರಿಲ್ಲದೆ ಆಗುವ ತೊಂದರೆಗಳು ಜೀವನ ಪರ್ಯಂತ ಇರುತ್ತದೆ. ಮುಖ್ಯವಾಗಿ ಹಣಕಾಸು ಸಮಸ್ಯೆ ಕಾಡುತ್ತದೆ. ಹಣ ಇದ್ದರೆ ಹೇಗೋ ಬದುಕಬಹುದು. ಇಂತಹ ಹಣಕಾಸು ರಕ್ಷಣೆಯನ್ನು ಟರ್ಮ್‌ ವಿಮೆ ನೀಡುತ್ತದೆ.

ಕಡಿಮೆ ಪ್ರೀಮಿಯಂ, ಹೆಚ್ಚು ಕವರೇಜ್‌

ಟರ್ಮ್‌ ವಿಮೆಯ ಪ್ರೀಮಿಯಂ ಕಡಿಮೆ ಇರುತ್ತದೆ. ಹೀಗಾಗಿ, ಹೆಚ್ಚು ಜನರಿಗೆ ಪ್ರಯೋಜಕಾರಿಯಾಗಿದೆ. ಇದೇ ಸಮಯದಲ್ಲಿ ಇದರಿಂದ ದೊರಕುವ ಹಣಕಾಸು ರಕ್ಷಣೆಯ ಮೊತ್ತ ದೊಡ್ಡದಾಗಿರುತ್ತದೆ.
ಹಣಕಾಸು ತೊಂದರೆಗಳನ್ನು ಬಗೆಹರಿಸುತ್ತದೆ: ಸಡನ್‌ ಆಗಿ ಮನೆಯ ಆಧಾರ ಸ್ತಂಭವಾಗಿದ್ದವರು ಮೃತಪಟ್ಟರೆ ಅವರು ಬಾಧ್ಯತೆಗಳು ಮೃತಪಟ್ಟಿರುವುದಿಲ್ಲ. ಅವರು ಕಟ್ಟಬೇಕಿರುವ ಹಣಕಾಸು ಸಾಲಗಳು ಬದುಕಿರುವವರನ್ನು ಕಾಡಬಹುದು. ಅಂದರೆ, ಗೃಹಸಾಲ, ವೈಯಕ್ತಿಕ ಸಾಲ, ಶಿಕ್ಷಣ ವೆಚ್ಚ ಮತ್ತು ತರೆ ಸಾಲಗಳು ಹಾಗೆಯೇ ಇರುತ್ತವೆ. ಟರ್ಮ್‌ ವಿಮೆಯಲ್ಲಿ ಪರಿಹಾರ ದೊರಕಿದರೆ ಆ ಹಣವನ್ನು ಇಂತಹ ಬಾಧ್ಯತೆಗಳನ್ನು ಈಡೇರಿಸಲು ಬಳಸಬಹುದು.

ತೆರಿಗೆ ಪ್ರಯೋಜನಗಳು

ಟರ್ಮ್‌ ವಿಮೆಗೆ ಪಾವತಿಸಿರುವ ಪ್ರೀಮಿಯಂ ಮೊತ್ತಕ್ಕೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿಯಡಿ ತೆರಿಗೆ ವಿನಾಯಿತಿ ಇರುತ್ತದೆ. ಇದೇ ಸಮಯದಲ್ಲಿ ಮೃತಪಟ್ಟ ಬಳಿಕ ದೊರಕುವ ಪರಿಹಾರ ಮೊತ್ತವೂ ತೆರಿಗೆ ರಹಿತವಾಗಿರುತ್ತದೆ.

ನೆಮ್ಮದಿಯಾಗಿರಬಹುದು

ಬಹುತೇಕ ಅಪ್ಪ ಅಥವಾ ಅಮ್ಮ ಅಥವಾ ಪೋಷಕರು ಸಾವು ಎಂದರೆ ಭಯಪಡುತ್ತಾರೆ. ಸಾವು ಎನ್ನುವುದು ಎಲ್ಲರಿಗೂ ಭಯ ತರಿಸುವ ವಿಚಾರ ಅನ್ನುವ ನಿಜ. ಆದರೆ, ತಮ್ಮ ಮಕ್ಕಳ ಗತಿ, ತಮ್ಮನ್ನು ನಂಬಿದವರ ಗತಿ ಏನಾಗಬಹುದು ಎಂದು ಯೋಚಿಸಿ ದಿಗಿಲುಪಡುತ್ತಾರೆ. ಇಂತಹ ಟರ್ಮ್‌ ವಿಮೆ ಮಾಡಿಕೊಂಡರೆ ಈ ಭಯ ತುಸು ಕಡಿಮೆಯಾಗಬಹುದು. ನಾನು ಇಲ್ಲವಾದರೂ ನನ್ನ ಮಕ್ಕಳಿಗೆ ಕಷ್ಟವಾಗದು ಎಂದು ನೆಮ್ಮದಿಯಿಂದ “ಕಣ್ಣು ಮುಚ್ಚಬಹುದು”.

ಫ್ಲೆಕ್ಸಿಬಿಲಿಟಿ

ಟರ್ಮ್‌ ವಿಮೆಯಲ್ಲಿ ಕ್ರಿಟಿಕಲ್‌ ಇಲ್‌ನೆಸ್‌, ಅಪಘಾತದಿಂದ ಮರಣ ಹೊಂದಿದರೆ ಪ್ರಯೋಜನಗಳು ಇತ್ಯಾದಿ ರೈಡರ್‌ (ಹೆಚ್ಚುವರಿ ಪ್ರಯೋಜನಗಳು) ಇರುತ್ತವೆ. ಇವುಗಳನ್ನು ನಿಮ್ಮ ಅವಶ್ಯಕತೆಗೆ ತಕ್ಕಂತೆ ಖರೀದಿಸಬಹುದು.

ಇನ್ನಷ್ಟು ಪ್ರಯೋಜನಗಳು

  • ಕಡಿಮೆ ಪ್ರೀಮಿಯಂ
  • ತೆರಿಗೆ ವಿನಾಯಿತಿ
  • ಕುಟುಂಬದ ಭದ್ರತೆ

ಭವಿಷ್ಯದ ಅವಶ್ಯಕತೆ ಈಡೇರಿಸಿಕೊಳ್ಳಬಹುದು.

ಮಕ್ಕಳ ಶಿಕ್ಷಣ, ಮದುವೆ ಖರ್ಚು, ನಿವೃತ್ತಿಯ ಖರ್ಚು ವೆಚ್ಚಗಳನ್ನು ಮೃತಪಟ್ಟವರ ಕುಟುಂಬದವರು ಟರ್ಮ್‌ ವಿಮೆಯಲ್ಲಿ ದೊರಕುವ ಪ್ರಯೋಜನಗಳ ಮೂಲಕ ಪಡೆಯಬಹುದು.
ನಾವು ಪ್ರತಿನಿತ್ಯ ಅಗತ್ಯವಿದೆಯೋ ಇಲ್ಲವೋ ಎಂದು ಯೋಚಿಸದೆ ಸಾಕಷ್ಟು ಹಣ ಖರ್ಚು ಮಾಡುತ್ತಿರಬಹುದು. ಇಂತಹ ಸಮಯದಲ್ಲಿ ಅನಿರೀಕ್ಷಿತ ಸಂದರ್ಭದಲ್ಲಿ ಆಪತ್‌ಬಾಂಧವವಾಗುವ ಟರ್ಮ್‌ ವಿಮೆಗೂ ಕೆಲವು ಸಾವಿರ ರೂಪಾಯಿ ಮೀಸಲಿಡುವುದು ಇಂದಿನ ತುರ್ತು.

ಯಾರಿಗೆ ಈ ವಿಮೆ ಬೇಕು?

  • ಕುಟುಂಬದ ಆಧಾರಸ್ತಂಭರಾಗಿರುವವರು: ತಾವು ಇಲ್ಲದಿದ್ದರೆ ಕುಟುಂಬದ ದಿನನಿತ್ಯದ ಖರ್ಚು ಸಾಗುವುದಿಲ್ಲ ಎನ್ನುತ್ತಿರುವವರು — ತಂದೆ, ತಾಯಿ ಅಥವಾ ಪಾಲಕರು ಟರ್ಮ್‌ ವಿಮೆ ಮಾಡಿಸಿಕೊಳ್ಳಬೇಕು.
  • ಸಾಲವಿರುವವರು: ಗೃಹಸಾಲ, ವಾಹನ ಸಾಲ ಅಥವಾ ಇತರೆ ಲೋನ್‌ಗಳನ್ನು ತೆಗೆದುಕೊಂಡು ಇಎಂಐ ಕಟ್ಟುತ್ತಿರುವವರು ಮೃತಪಟ್ಟರೆ ಆ ಸಾಲ ಕುಟುಂಬಕ್ಕೆ ಹೊರೆಯಾಗಬಹುದು. ಟರ್ಮ್‌ ಇನ್ಸೂರೆನ್ಸ್‌ ಇದ್ದರೆ ಇಂತಹ ಸಮಸ್ಯೆಯನ್ನು ಬಗೆಹರಿಸುತ್ತದೆ.
  • ನವವಿವಾಹಿತರು: ಕಲ್ಯಾಣ ಮಂಟಪದಲ್ಲಿಯೇ ತಾಳಿ ಕಟ್ಟಿದ ಕೆಲವೇ ಸಮಯದಲ್ಲಿ ಮೃತಪಡುವ ಸುದ್ದಿಗಳನ್ನು ಓದುತ್ತಿದ್ದೇವೆ. ಮದುವೆಯಾದ ಸಮಯದಲ್ಲಿ ನವವಿವಾಹಿತರು ಈ ರೀತಿಯ ಟರ್ಮ್‌ ವಿಮೆ ಮಾಡಿಸಿಕೊಳ್ಳುವುದು ಸೂಕ್ತ.
  • ಮಕ್ಕಳನ್ನು ಹೊಂದಿರುವ ಪೋಷಕರು: ಮಕ್ಕಳ ಭವಿಷ್ಯ, ವಿದ್ಯಾಭ್ಯಾಸ, ಮದುವೆ ಖರ್ಚು— ಎಲ್ಲವೂ ನಿಮ್ಮನ್ನು ಅವಲಂಬಿಸಿರುತ್ತದೆ. ನೀವು ಇಲ್ಲದರೂ ಅವರ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಟರ್ಮ್‌ ವಿಮೆ ನೆರವಾಗುತ್ತದೆ.
  • ಸ್ವತಂತ್ರ ಉದ್ಯೋಗಿಗಳು ಅಥವಾ ಫ್ರೀಲಾನ್ಸರ್‌ಗಳು: ಈ ರೀತಿ ಕೆಲಸ ಮಾಡುತ್ತಿರುವವರ ಬಳಿ ಕಂಪನಿಯ ನಿಗದಿತ ಇನ್ಸೂರೆನ್ಸ್‌ ಇಲ್ಲದ ಕಾರಣ, ಸ್ವತಃ ಟರ್ಮ್‌ ಇನ್ಸೂರೆನ್ಸ್‌ ಮಾಡಿಕೊಳ್ಳುವುದು ಅಗತ್ಯವಾಗಿದೆ.
  • ಆದಾಯ ಸ್ಥಿರವಾಗಿರುವ ಕಡಿಮೆ ವಯಸ್ಸಿನವರು: 25–35 ವರ್ಷದ ಯುವಕ/ಯುವತಿ ಈಗಾಗಲೇ ಉದ್ಯೋಗದಲ್ಲಿ ಇದ್ದರೆ, ಈ ಹಂತದಲ್ಲಿ ಕಡಿಮೆ ಪ್ರೀಮಿಯಂ‌ಕ್ಕೆ ವಿಮೆ ಪಡೆದು ಬಹುದೊಡ್ಡ ಲಾಭ ಪಡೆಯಬಹುದು.
  • ಒಬ್ಬರ ಆದಾಯದಲ್ಲಿ ಮನೆ ನಡೆಯುತ್ತಿದ್ದರೆ: ಹೆಂಡತಿ ಅಥವಾ ಗಂಡ ಮಾತ್ರ ಕೆಲಸ ಮಾಡುತ್ತಿರುವರೆಂದರೆ, ಅವರಿಲ್ಲದಿದ್ರೆ ಸಂಪೂರ್ಣ ಮನೆಯ ಭವಿಷ್ಯ ಅಪಾಯದಲ್ಲಿರುತ್ತದೆ. ಈ ಸಮಯದಲ್ಲಿ ಟರ್ಮ್‌ ವಿಮೆ ನೆರವಾಗುತ್ತದೆ.

ಈಗಿನ ಸಡನ್‌ ಡೆತ್‌ ಕಾಲದಲ್ಲಿ ಟರ್ಮ್‌ ವಿಮೆ ಅತ್ಯಂತ ಅಗತ್ಯ. ನಮ್ಮನ್ನು ನಂಬಿರುವವರ ಆರ್ಥಿಕ ಭದ್ರತೆಗೆ ಇದು ಬೇಕು. ನಾವಿಲ್ಲದರೂ ನಮ್ಮ ಕುಟುಂಬದವರು ಸಂಕಷ್ಟದಲ್ಲಿಯೂ ನೆಮ್ಮದಿಯಿಂದ ಬದುಕಲು ಟರ್ಮ್‌ ವಿಮೆ ಸಹಾಯ ಮಾಡುತ್ತದೆ. ಕೆಲವೇ ಸಾವಿರ ರೂಪಾಯಿ ಪ್ರೀಮಿಯಂ ಇರುವ ಈ ವಿಮೆಯು ನಮ್ಮ ಕುಟುಂಬಕ್ಕೆ ಹಲವು ಲಕ್ಷ/ಕೋಟಿ ರೂ ಮೊತ್ತದ ಆರ್ಥಿಕ ಭದ್ರತೆ ನೀಡುತ್ತದೆ.

error: Content is protected !!