ಬೆಸ್ಟ್ ರೆಸಿಪಿ: ಗರಿಗರಿಯಾಗಿ ಮಾಡಿ ಅವಲಕ್ಕಿ ಚೂಡಾ

Bisibele bath recipe kannada

ಮಳೆ ಧೋ ಎಂದು ಸುರಿಯುತ್ತಿರುತ್ತದೆ, ಇಲ್ಲವೇ, ತಣ್ಣಗಿನ ಗಾಳಿ ಬೀಸುತ್ತಿರುತ್ತದೆ. ಈ ಸಮಯದಲ್ಲಿಯೇ ಬಾಯಾಡಿಸುವ ಚಪಲ ಉಂಟಾಗುತ್ತದೆ. ಅಂಗಡಿಯಿಂದ ಚಿಪ್ಸ್, ಮುರುಕು ಏನಾದರೂ ತಂದು ತಿನ್ನೋಣವೆಂದರೆ ಆರೋಗ್ಯ ಕೆಡುವ ಭಯ. ಹೇಗೆ ಮಾಡಿರುತ್ತಾರೋ, ಯಾವ ಎಣ್ಣೆಯಲ್ಲಿ ಮಾಡಿರುತ್ತಾರೋ ಎಂಬ  ಆತಂಕ. ಹಾಗಾಗಿ ಮನೆಯಲ್ಲಿಯೇ ಕಡಿಮೆ ಸಮಯದಲ್ಲಿ ತಯಾರಿಸಿ ಸಾಕಷ್ಟು ದಿನ ಇಟ್ಟುಕೊಳ್ಳುವಂತಹ ತಿಂಡಿಯಲ್ಲಿ ಅವಲಕ್ಕಿ ಚೂಡಾವೋ ಒಂದು.

ಎಷ್ಟೇ ಬಗೆಯ ತಿಂಡಿಗಳಿದ್ದರೂ, ಅವಲಕ್ಕಿ ಚೂಡಾವೆಂದರೆ ಎಲ್ಲರ ಬಾಯಲ್ಲೂ ನೀರಾಡುತ್ತದೆ. ಚಹಾದ ಜೊತೆಗೆ ಅವಲಕ್ಕಿಯ ಚೂಡವಿದ್ದರೆ ಅದರ ಸ್ವಾದ ಸವಿದವನಿಗೆ ಗೊತ್ತು. ಇದನ್ನು ಸಂಜೆಯ ತಿಂಡಿಗಲ್ಲದೆ, ಅಲ್ಲದೇ, ಪ್ರವಾಸ ಹೋದಾಗಲೂ  ತೆಗೆದುಕೊಂಡು ಹೋಗಬಹುದು. ಗಾಳಿಯಾಡದ ಡಬ್ಬಿಯಲ್ಲಿ ತುಂಬಿಸಿಟ್ಟುಕೊಂಡರೆ ಜಾಸ್ತಿ ದಿನ ಕೆಡದೇ ಉಳಿಯುತ್ತದೆ. ಮನೆಯಲ್ಲಿ ಮಕ್ಕಳಿದ್ದರೆ, ನೆಂಟರಿಷ್ಟರು ಬರುತ್ತಾರೆ ಎಂಬ ಚಿಂತೆ ಇದ್ದವರು ಅವಲಕ್ಕಿ ಚೂಡ ಮಾಡಿಟ್ಟುಕೊಂಡರೇ, ಯಾವುದೇ ತಲೆಬಿಸಿ ಇಲ್ಲದೇ, ಮಕ್ಕಳ ಹೊಟ್ಟೆಯೂ ತುಂಬಿಸಬಹುದು, ದೊಡ್ಡವರ ಬಾಯಿ ಚಪಲವನ್ನು ಕಡಿಮೆ ಮಾಡಬಹುದು.

ಅವಲಕ್ಕಿ ಚೂಡಾಕ್ಕೆ ಬೇಕಾಗುವ ಸಾಮಾಗ್ರಿಗಳು 

 • ತೆಳು ಅವಲಕ್ಕಿ- ಅರ್ಧಕೆಜಿ
 • ಬೆಳ್ಳುಳ್ಳಿ-1 ಗಡ್ಡೆ
 • ಈರುಳ್ಳಿ-1 ದೊಡ್ಡದ್ದು
 • ಕಡಲೆಬೀಜ-3 ಚಮಚ
 • ಕೊಬ್ಬರಿ ಚೂರುಗಳು ಸಣ್ಣದ್ದಾಗಿ ಕತ್ತರಿಸಿದ್ದು-2 ಚಮಚ
 • ಹುರಿ ಕಡಲೆ-1 ದೊಡ್ಡ ಚಮಚ
 • ಹಸಿಮೆಣಸು-3
 • ಮೆಣಸಿನಕಾಯಿ ಪುಡಿ-1 ಚಿಕ್ಕ ಚಮಚ
 • ಅರಿಶಿನ ಪುಡಿ-1/2 ಚಮಚ
 • ಕರಿಬೇವು-10 ಎಸಳು
 • ಉಪ್ಪು-ರುಚಿಗೆ ತಕ್ಕಷ್ಟು
 • ಎಣ್ಣೆ-1/2 ಕಪ್

ಅವಲಕ್ಕಿ ಚೂಡಾ ಮಾಡುವ ಸುಲಭ ವಿಧಾನ

ಮೊದಲಿಗೆ ಅವಲಕ್ಕಿಯನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಸ್ವಲ್ಪ ಹೊತ್ತು.  ನಂತರ ಅವಲಕ್ಕಿಯನ್ನು ನಾಲ್ಕು ಪಾಲು ಮಾಡಿ. ಒಂದು ಅಗಲವಾದ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಅದಕ್ಕೆ ಒಂದು ಪಾಲು ಅವಲಕ್ಕಿಯನ್ನು ಹಾಕಿ. ಅವಲಕ್ಕಿಯನ್ನು ಗರಿ ಗರಿಯಾಗಿ ಹುರಿಯಿರಿ. ಹೀಗೆ ಪ್ರತಿ ಪಾಲು ಅವಲಕ್ಕಿಯನ್ನು ಒಂದೊಂದು ಚಮಚ ಎಣ್ಣೆಯಲ್ಲಿ ಹುರಿದು ತೆಗೆಯಿರಿ. ಹುರಿದ ಅವಲಕ್ಕಿ ಯನ್ನು ಒಂದು ದೊಡ್ಡ ಡಬ್ಬಿಯಲ್ಲಿ ಹಾಕಿ.

ನಂತರ ಬಾಣಲೆಗೆ 4 ಚಮಚ ಎಣ್ಣೆ ಹಾಕಿ. ಅದು ಕಾದ ನಂತರ ಈರುಳ್ಳಿಯನ್ನು ಹಾಕಿ ಗರಿ ಗರಿಯಾಗುವ ತನಕ ಕರಿದು ತೆಗೆಯಿರಿ. ನಂತರ ಬೆಳ್ಳುಳ್ಳಿ, ಹುರಿ ಕಡಲೆ, ಕಡಲೇಬೀಜ, ಕೊಬ್ಬರಿ ಹೀಗೆ ಎಲ್ಲವನ್ನು ಬೇರೆ ಬೇರೆಯಾಗಿ ಹುರಿದು ಅವಲಕ್ಕಿಗೆ ಸೇರಿಸಿ.

ಆಮೇಲೆ ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಸಾಸಿವೆ ಹಾಕಿ. ಸಾಸಿವೆ ಸಿಡಿದ ಮೇಲೆ ಹಸಿ ಮೇಣಸಿನಕಾಯಿ ಸೇರಿಸಿ. ಅದು ಹುರಿದ ನಂತರ ಮೆಣಸಿನಪುಡಿ, ಅರಿಸಿನ ಪುಡಿ, ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಕಿ ಕೆಳಕ್ಕೆ ಇಳಿಸಿ. ನಂತರ ಇದನ್ನು ಅವಲಕ್ಕಿಗೆ ಸೇರಿಸಿದರೆ ರುಚಿಯಾದ ಅವಲಕ್ಕಿ ಚೂಡಾ ಸವಿಯಲು ಸಿದ್ಧವಾಗುತ್ತದೆ.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 

ನಮ್ಮ ಇಮೇಲ್ ವಿಳಾಸ: bpchand@gmail.com
ಇದನ್ನೂ ಓದಿ  ರುಚಿಕರವಾದ ಟೊಮೆಟೊ ದೋಸೆ ಮಾಡುವುದು ಹೇಗೆ ಗೊತ್ತಾ?