ಉದ್ಯೋಗ ಸಂದರ್ಶನ ಸಲಹೆಗಳು: ಫೋನ್‌ ಇಂಟರ್‌ವ್ಯೂನಲ್ಲಿ ಯಶಸ್ಸು ಪಡೆಯಲು ಟಿಪ್ಸ್‌

ಈಗ ಬಹುತೇಕ ಕಂಪನಿಗಳು ಉದ್ಯೋಗ ಸಂದರ್ಶನಕ್ಕೆ ಟೆಲಿಫೋನ್‌ನಲ್ಲಿ ಇಂಟರ್‌ವ್ಯೂ ಮಾಡುತ್ತವೆ. ಟೆಲಿಫೋನ್‌ ಇಂಟರ್‌ವ್ಯೂ, ವಿಡಿಯೋ ಕಾಲ್‌ ಇಂಟರ್‌ವ್ಯೂ ಅಥವಾ ಇನ್ನಿತರ ವಚ್ರ್ಯುವಲ್‌ ಇಂಟರ್‌ವ್ಯೂ ಹೇಗೆ ಎದುರಿಸಬೇಕ ಎಂದು ಇಲ್ಲಿ ಸಲಹೆ ನೀಡಲಾಗಿದೆ. ಇಂತಹ ಸಂದರ್ಶನದ ಆಫರ್‌ ನಿಮಗೆ ಬಂದಾಗ ಸರಿಯಾಗಿ ಸಿದ್ಧತೆ ನಡೆಸಿ ಮುಂದುವರೆಯಿರಿ.

ಟೆಲಿಫೋನಿಕ್‌ ಇಂಟರ್‌ವ್ಯೂನಲ್ಲಿ ಹೇಗಿರಬೇಕು?
ಕೆಲವೊಂದು ಉದ್ಯೋಗದಾತರು ಅಭ್ಯರ್ಥಿಗಳನ್ನು ನೇರವಾಗಿ ಭೇಟಿ ಮಾಡದೆ ದೂರವಾಣಿ ಮೂಲಕ ಸಂಪರ್ಕಿಸಿ ಸಂದರ್ಶನ ನಡೆಸುತ್ತಾರೆ. ಕೊರೊನಾ ವೈರಾಣು ಭಯದ ಸಮಯದಲ್ಲಿ, ಕಂಪನಿಯ ಪ್ರಧಾನ ಕಚೇರಿ ದೂರದ ಊರಲ್ಲಿ ಇದ್ದರೆ, ಅಭ್ಯರ್ಥಿಯ ಉದ್ಯೋಗವು ಬೇರೆ ಸ್ಥಳದಲ್ಲಿದ್ದರೆ ಮುಖತಃ ಭೇಟಿಯಾಗುವ ಅವಶ್ಯಕತೆ ಇಲ್ಲದ ಹುದ್ದೆಗಳಿಗೆ ಹೆಚ್ಚಾಗಿ ಈ ರೀತಿ ಫೋನ್‌ ಇಂಟರ್‌ವ್ಯೂ ನಡೆಸಲಾಗುತ್ತದೆ.
ಆದರೆ, ಫೋನ್‌ನಲ್ಲಿ ನಡೆಸುವ ಸಂದರ್ಶನವು ತುಂಬಾ ಸರಳವಾಗಿಯೇನೂ ಇರುವುದಿಲ್ಲ. ಈ ಸಂದರ್ಶನಕ್ಕೂ ಅಭ್ಯರ್ಥಿಗಳು ಸಾಕಷ್ಟು ಸಿದ್ಧತೆ ನಡೆಸಬೇಕು. ಎಲ್ಲಾದರೂ ನಿಮಗೆ ಇಂತಹ ಸಂದರ್ಶನ ಎದುರಿಸುವ ಸಂದರ್ಭ ಎದುರಾದರೆ ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿರಿ.

  • ನಿಮ್ಮ ರೆಸ್ಯೂಂ ಜೊತೆಗಿರಲಿ: ಎಲ್ಲಾದರೂ ನಿಮ್ಮಲ್ಲಿ ಸಂದರ್ಶಕರು ಹೆಚ್ಚಿನ ವಿವರಣೆ ಕೇಳಿದಾಗ ಉತ್ತರಿಸಲು ಅನುಕೂಲವಾಗುವಂತೆ ಸಂದರ್ಶನದ ಸಮಯದಲ್ಲಿ ರೆಸ್ಯೂಂ ಪಕ್ಕದಲ್ಲಿಟ್ಟುಕೊಳ್ಳಿ.
  • ನೋಟ್‌ಪ್ಯಾಡ್‌ ಸಿದ್ಧವಾಗಿಟ್ಟುಕೊಳ್ಳಿರಿ: ಟೆಲಿಫೋನಿಕ್‌ ಇಂಟರ್‌ವ್ಯೂನಲ್ಲಿ ಕೆಲವೊಂದು ವಿಷಯಗಳನ್ನು ಬರೆದಿಟ್ಟುಕೊಳ್ಳಬೇಕಾಗಬಹುದು. ಎಲ್ಲಾದರೂ ಸಂದರ್ಶಕರು ಯಾವುದಾದರೂ ಇಮೇಲ್‌ ವಿಳಾಸ ಅಥವಾ ದೂರವಾಣಿ ಸಂಖ್ಯೆ ಅಥವಾ ಭೇಟಿಯಾಗಬೇಕಾದ ವ್ಯಕ್ತಿಯ ವಿವರ ನೀಡಬಹುದು. ಅದನ್ನು ತಕ್ಷಣ ಬರೆಯಲು ಅನುಕೂಲವಾಗುವಂತೆ ನೋಟ್‌ಪ್ಯಾಡ್‌ ಹತ್ತಿರದಲ್ಲಿಟ್ಟುಕೊಳ್ಳಿರಿ.
  • ಕಂಪನಿಯ ಕುರಿತು ಅಧ್ಯಯನ ನಡೆಸಿ: ನೇರ ಸಂದರ್ಶನಕ್ಕೆ ಸಿದ್ಧರಾಗುವಂತೆ ನೀವು ಕಂಪನಿಯ ಕುರಿತು ಒಂದಿಷ್ಟು ಮಾಹಿತಿಯನ್ನು ಮೊದಲೇ ತಿಳಿದುಕೊಂಡಿರಿ. ಕಂಪನಿಯ ವಿಷನ್‌ ಮತ್ತು ಮಿಷನ್‌, ವ್ಯವಹಾರ, ಸಾಧನೆ ಇತ್ಯಾದಿಗಳ ಮಾಹಿತಿ ತಿಳಿದಿರಲಿ.
  • ಸಾಧನೆಯ ಕುರಿತು ಪಟ್ಟಿ ಸಿದ್ಧವಾಗಿರಲಿ: ನೀವು ಮಾಡಿರುವ ಸಾಧನೆಗಳು, ನಿಮ್ಮ ಸಾಮರ್ಥ್ಯ‌ ಮತ್ತು ದೌರ್ಬಲ್ಯತೆ ಇತ್ಯಾದಿ ವಿವರಗಳನ್ನು ಸಂದರ್ಶಕರು ಕೇಳಬಹುದು. ಇಂತಹ ಪ್ರಶ್ನೆಗಳಿಗೆ ಅತ್ಯುತ್ತಮವಾಗಿ ಉತ್ತರ ನೀಡಲು ಸಿದ್ಧರಾಗಿರಿ.
  • ಮಾತನಾಡುವ ಸ್ಥಳದಲ್ಲಿ ಗದ್ದಲ ಇಲ್ಲದೆ ಇರಲಿ: ಸಂದರ್ಶಕರು ಸಂದರ್ಶನಕ್ಕೆ ಸಮಯ ನಿಗದಿಪಡಿಸಿದ ಸಮಯದಲ್ಲಿ ಆದಷ್ಟು ನಿಶ್ಯಬ್ದವಾಗಿರುವ ಸ್ಥಳವನ್ನು ಆಯ್ಕೆಮಾಡಿಕೊಳ್ಳಿ. ಮನೆಯಲ್ಲಿ ಮಕ್ಕಳು ಬೊಬ್ಬೆ ಹೊಡೆಯುತ್ತಿದ್ದರೆ ಬೇರೆ ಕಡೆಗೆ ಬನ್ನಿ. ರಸ್ತೆಯಲ್ಲಿ ಹೋಗುತ್ತ, ವಾಹನದಲ್ಲಿ ಸಂಚರಿಸುತ್ತ ಸಂದರ್ಶನ ಎದುರಿಸಬೇಡಿ.
  • ನೀವು ಫೋನ್‌ನಲ್ಲಿ ಮಾತನಾಡುತ್ತಿರುವಾಗ ಇತರ ಫೋನ್‌ನ ನೋಟಿಫಿಕೇಷನ್‌ ಸದ್ದುಗಳನ್ನು ಆಫ್‌ ಮಾಡಿಡಿ.
  • ನಿಮ್ಮ ಧ್ವನಿಯ ಕುರಿತೂ ಎಚ್ಚರಿಕೆ ಇರಲಿ. ಯಾಕೆಂದರೆ, ಸಂದರ್ಶನದಲ್ಲಿ ನಿಮ್ಮನ್ನು ಸಂದರ್ಶಕರು ಮುಖತಃ ನೋಡುವುದಿಲ್ಲ. ಅವರಿಗೆ ನಿಮ್ಮ ಧ್ವನಿಯ ಮೂಲಕವೇ ಭರವಸೆ ಹುಟ್ಟಿಸಬೇಕು. ನಿಮ್ಮ ಧ್ವನಿಯಲ್ಲಿ ದೃಢತೆ ಇರಲಿ. ಭಯದಲ್ಲಿ ಮಾತನಾಡಬೇಡಿ.
  • ದೂರವಾಣಿ ಸಂದರ್ಶನಗಳು ಕೆಲವೊಮ್ಮೆ ಕೆಲವು ನಿಮಿಷದಲ್ಲಿ ಮುಗಿಯಬಹುದು. ಇನ್ನು ಕೆಲವೊಮ್ಮೆ ಗಂಟೆಗಳ ಕಾಲ ಇರಬಹುದು. ಹೀಗಾಗಿ, ಬಾಯಾರಿಕೆ ಆದಾಗ ಕುಡಿಯಲು ನೀರು ಹತ್ತಿರದಲ್ಲಿ ಇರಲಿ.
  • ಶಿಸ್ತು ಇರಲಿ: ನೇರ ಸಂದರ್ಶನದಲ್ಲಿ ಇರುವಂತೆಯೇ ಫೋನ್‌ನಲ್ಲಿ ಶಿಸ್ತಾಗಿ ವರ್ತಿಸಿರಿ. ಏನಾದರೂ ತಿನ್ನುತ್ತ, ಜಗಿಯುತ್ತ, ಧೂಮಪಾನ ಮಾಡುತ್ತ ಫೋನ್‌ನಲ್ಲಿ ಮಾತನಾಡಬೇಡಿ.
  • ಕೆಲವರಿಗೆ ಬೆಡ್‌ನಲ್ಲಿ ಬಿದ್ದುಕೊಂಡು ಫೋನ್‌ನಲ್ಲಿ ಮಾತನಾಡುವ ಅಭ್ಯಾಸ ಇರುತ್ತದೆ. ಟೆಲಿಫೋನ್‌ ಸಂದರ್ಶನದ ಸಮಯದಲ್ಲಿ ಈ ರೀತಿ ಮಾಡಬೇಡಿ. ಪರಿಣಿತ ಸಂದರ್ಶಕರಿಗೆ ಇಂತಹ ಅಂಶಗಳು ತಿಳಿಯುತ್ತದೆ. ಮೇಜ್‌ನ ಮುಂದೆ ಚೇರ್‌ನಲ್ಲಿ ಕುಳಿತು ಮಾತನಾಡುವುದು ಉತ್ತಮ.
  • ಸಂದರ್ಶನ ಸಮಯದಲ್ಲಿ ಉತ್ತರ ನೀಡಲು ನಿಮಗೆ ಕೊಂಚ ಸಮಯ ಬೇಕಾಗಬಹುದು. ಆದರೆ, ಇದಕ್ಕಾಗಿ ತುಂಬಾ ಸಮಯ ತೆಗೆದುಕೊಳ್ಳಬೇಡಿ. ಆ ಕಡೆಯವರಿಗೆ ಹೆಚ್ಚು ಕಾಯುವ ವ್ಯವಧಾನ ಇರದು.
  • ಆಗಾಗ ನೀರು ಕುಡಿಯುತ್ತಿರಿ. ಇದು ನಿಮ್ಮನ್ನು ರಿಲಾಕ್ಸ್‌ ಆಗಿರಲು ಸಹಕರಿಸುತ್ತದೆ.
  • ನಿಧಾನವಾಗಿ ಮಾತನಾಡಿ. ತುಂಬಾ ವೇಗವಾಗಿ ಮಾತನಾಡುವುದು ಬೇಡ. ಎದುರಿನಲ್ಲಿರುವ ವ್ಯಕ್ತಿಗೆ ನೀವು ಏನು ಹೇಳುವಿರಿ ಎನ್ನುವುದು ಅರ್ಥವಾಗುವಂತೆ ಇರಲಿ.
  • ಫೋನ್‌ನಲ್ಲಿ ನಿಮ್ಮ ಮುಖ ಸಂದರ್ಶಕರಿಗೆ ಕಾಣಿಸುವುದಿಲ್ಲ ನಿಜ. ಆದರೆ, ನಗುಮುಖ ಇರಲಿ. ನಿಮ್ಮ ಮುಖದಲ್ಲಿ ನಗುವಿದ್ದರೆ ನಿಮ್ಮ ಮಾತಿನಲ್ಲಿ ಉಲ್ಲಾಸ, ಉತ್ಸಾಹ ಇರುತ್ತದೆ.
  • ಸಂದರ್ಶಕರ ಹೆಸರು ಕೇಳಿರಿ. ಸಂದರ್ಶನದ ಆರಂಭದಲ್ಲಿ ನಿಮ್ಮನ್ನು ಪರಿಚಯಿಸಿಕೊಳ್ಳಿ.
  • ಸಂದರ್ಶಕರು ಏನಾದರೂ ಮಾತನಾಡುತ್ತಿದ್ದಾಗ ನಡುವೆ ಬಾಯಿಹಾಕಬೇಡಿ. ಅವರು ಪೂರ್ತಿ ಹೇಳುವವರೆಗೆ ಕೇಳಿ. ನಂತರ ಮಾತನಾಡಿ.
  • ಸಂದರ್ಶನ ಮುಗಿದು ಫೋನ್‌ ಕಟ್‌ ಮಾಡುವ ಮೊದಲು ಅವರಿಗೆ ಹೃದಯಪೂರ್ವಕವಾಗಿ ಧನ್ಯವಾದ ತಿಳಿಸಿ.
    ನೆನಪಿಡಿ: ಮುಖತಃ ನಿಮ್ಮನ್ನು ನೋಡದೆ ಇರುವುದರಿಂದ ನಿಮ್ಮ ಮಾತಿನಿಂದ ಮತ್ತು ನೀವು ನೀಡುವ ಮಾಹಿತಿಯ ಮೂಲಕ ಸಂದರ್ಶಕರನ್ನು ಸೆಳೆಯಬೇಕಾಗುತ್ತದೆ. ಹೀಗಾಗಿ, ದೂರವಾಣಿ ಸಂದರ್ಶನವನ್ನು ನೇರ ಸಂದರ್ಶನದಷ್ಟೇ ಗಂಭೀರವಾಗಿ ಪರಿಗಣಿಸಿ.
error: Content is protected !!