Kantara: Chapter 1 Review: ದೈವ ಬಲದ ಸೂಪರ್‌ ಹೀರೋ ಕಥೆ, ಹಳೆ ಕಾಂತಾರವೇ ಬೆಸ್ಟ್‌!

Kantara: Chapter 1 Review: ಹಳೆ ಕಾಂತಾರದಲ್ಲಿ ರಿಷಬ್‌ ಶೆಟ್ಟಿ ಮೇಲೆ ದೈವ ಆವಾಹನೆಯಾದ ಸಂದರ್ಭ ದೈವ ಭಕ್ತರು ಅಲ್ಲಿಯೇ ಕೈಮುಗಿದಿದ್ದರು. ದೈವಗಳ ಬಗ್ಗೆ ತಿಳಿಯದೆ ಇದ್ದವರು ವಾವ್ ಗೂಸ್‌ಬಂಪ್ಸ್‌ ಎಂದಿದ್ದರು. ರೋಮಾಂಚನ ಎಂಬ ಶಬ್ದದ ಅರ್ಥ ಗೊತ್ತಿಲ್ಲದವರಿಗೆ ಅರ್ಥ ಗೊತ್ತು ಮಾಡಿಸುವಂತಹ ದೃಶ್ಯವದು. ಅದೇ ದೃಶ್ಯದ ಕ್ಲಿಪ್‌ಗಳನ್ನು ಹತ್ತುಬಾರಿ, ಇಪ್ಪತ್ತು ಬಾರಿ, ಐವತ್ತು ಬಾರಿ, ನೂರು ಬಾರಿ ನೋಡಿದವರು ಇರಬಹುದು. ಹೆಚ್ಚು ನೋಡಿದ ಮೇಲೆ ಆ ದೃಶ್ಯ ಕೂಡ “ಇನ್ನು ನೋಡೋದು ಬೇಡ, ಸಾಕು” ಎಂದೆನಿಸಬಹುದು. ಹೊಸ ಕಾಂತಾರ ಅಂದರೆ, ಚಾಪ್ಟರ್‌ 1ನಲ್ಲಿ ಕೆಲವೊಂದು ದೃಶ್ಯಗಳನ್ನು ನೋಡಿದಾಗ ಹಳೆಯ ಕಾಂತಾರದಲ್ಲಿ ನೋಡಿದ್ದೇವಲ್ಲ ಎನಿಸುತ್ತದೆ. ಹಳೆಯ ಕಾಂತಾರದ ಜನಪ್ರಿಯ ಸನ್ನಿವೇಶಗಳನ್ನ ಇಲ್ಲಿ ಅದ್ಧೂರಿ ಶೈಲಿಯಲ್ಲಿ ಮತ್ತೆ ಇನ್ನೊಮ್ಮೆ ಮಗದೊಮ್ಮೆ ಎಂಬಂತೆ ತೋರಿಸಲಾಗಿದೆ. ಹಳೆಯ ಯಶಸ್ಸಿನ ದೋಣಿಯಲ್ಲಿ ಈ ಸಿನಿಮಾವನ್ನು ಸಾಗಿಸಲು ಯತ್ನಿಸಲಾಗಿದೆ. ದೋಣಿಯೊಳಗೆ ತೂತು ಇದೆಯಾ?

ಕಾಂತಾರ ಚಾಪ್ಟರ್‌ 1 ಸಿನಿಮಾ ತಯಾರಿಸಲು ಮಾಡಿರುವ ಶ್ರಮ ಚಿತ್ರದ ಉದ್ದಕ್ಕೂ ಕಾಣಿಸುತ್ತದೆ. ಯುದ್ಧವೊಂದರ ದೃಶ್ಯ ಬಾಹುಬಲಿ ನೆನಪಿಸಬಹುದು. ನೂರಾರು (ಸಾವಿರಾರು?) ಕಲಾವಿದರ ಶ್ರಮ ಕಾಣಿಸುತ್ತದೆ. ಕಾಂತಾರ ಸಿನಿಮಾವನ್ನು ಹೈಲೆವಲ್‌ಗೆ ಕೊಂಡೊಯ್ಯಲು ಮಾಡಿರುವ ಪರಿಶ್ರಮವಿದೆ. ಆದರೆ, ದೈವ ದರ್ಶನ ಒಂದು ಬಾರಿಯಾದರೆ ರಿಯಲ್‌ ಎನಿಸುತ್ತದೆ. ಪದೇ ಪದೇ ಹಲವು ಬಾರಿ ದೈವ ದರ್ಶನವಾಗಿ ದುಷ್ಟರನ್ನು ಶಿಕ್ಷಿಸುವ ಪರಿಯನ್ನು ನೋಡಿದರೆ ದೈವ ಬಲದ ಸೂಪರ್‌ ಹೀರೋ ಕಥೆಯಂತೆ ಹೊಸ ಕಾಂತಾರ ಕಾಣಿಸುತ್ತದೆ.

ಚಿತ್ರದಲ್ಲಿ ಗಮನ ಸೆಳೆಯುವ ಪ್ರಮುಖ ಅಂಶಗಳು

  • ಕಾಡಿನ ಜನರಲ್ಲಿದ್ದ ದೈವವನ್ನು ನಾಡಿಗೆ ತಂದು ಪ್ರತಿಷ್ಠಾಪನೆ ಮಾಡುವ ಸನ್ನಿವೇಶ. ಆ ಸಂದರ್ಭದ ವಿಧಿವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋಹರವಾಗಿವೆ.
  • ಗುಳಿಗನ ವಿವಿಧ ರೂಪಗಳನ್ನು ಪ್ರಸ್ತುತಪಡಿಸುವ ರೀತಿ.
  • ಕೊನೆಯ ಒಂದು ಗಂಟೆಯ ಹಿಡಿದಿಟ್ಟುಕೊಳ್ಳುವ ದೃಶ್ಯಗಳು.
  • ಕಾಡುಪಾಪಗಳ ದೃಶ್ಯಗಳು (ಕಾಡುಪಾಪಗಳು ಕರಾವಳಿಯ ಕಾಡುಗಳಲ್ಲಿ ಆ ಕಾಲದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದ್ದಿರಬಹುದು, ಈಗ ಕನೆಕ್ಟ್‌ ಆಗುತ್ತಿಲ್ಲ, ಇದು ನಮ್ಮದ್ದಲ್ಲ ಎಂಬ ಫೀಲ್‌ ವೈಯಕ್ತಿಕವಾಗಿ ನನಗೆ ನೀಡಿತ್ತು)
  • ರಿಷಬ್‌ ಶೆಟ್ಟಿಯ ಪರ್ಫಾಮೆನ್ಸ್‌ ಹಳೆಯ ಕಾಂತಾರಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಯುದ್ಧದ ದೃಶ್ಯಗಳಂತೂ ಅದ್ಭುತ.
  • ನಾಯಕಿಗೆ ನೀಡಿರುವ ಪ್ರಾಶಸ್ತ್ಯ ಮತ್ತು ಟ್ವಿಸ್ಟ್‌ ಚಿತ್ರದ ಗಮನ ಸೆಳೆಯುವ ಅಂಶ.
    ಹೀಗೆ ಮನರಂಜನೆಯ ದೃಷ್ಟಿಯಿಂದ, ಸಾಹಸ ದೃಶ್ಯಗಳ ದೃಷ್ಟಿಯಿಂದ ಕಾಂತಾರ ಚಾಪ್ಟರ್‌ 1ರಲ್ಲಿ ಸಾಕಷ್ಟು ಅಂಶಗಳು ಇವೆ. ಸಿನಿಮಾ ನೋಡಿ ಹೊರಬಂದಾಗ ಬಾಹುಬಲಿ, ಕೆಜಿಎಫ್‌(ಅದ್ಧೂರಿ ದೃಶ್ಯವೈಭವಗಳು ಮತ್ತು ಸಿನಿಮಾವನ್ನು ಕಟ್ಟಿಕೊಟ್ಟ ರೀತಿಯಿಂದ) ಇತ್ಯಾದಿ ಸಿನಿಮಾಗಳು ನೆನಪಿಗೆ ಬರಬಹುದು. ಆದರೆ, ಹಳೆ ಕಾಂತಾರದಲ್ಲಿದ್ದ ಮುಗ್ಧತೆ, ಹಳೆ ಕಾಂತಾರದಲ್ಲಿದ್ದ ದೈವಿಕ ಫೀಲ್‌, ಮಣ್ಣಿನ ಸೊಗಡಿಗೆ ಅಂಟಿಕೊಳ್ಳುವ ಗುಣಗಳು ಈ ಸಿನಿಮಾದಲ್ಲಿ ನನಗೆ ಕಾಣಿಸಲಿಲ್ಲ.

ದೈವ ಬಲದ ಸೂಪರ್‌ ಹೀರೋ ಕಥೆ ಯಾಕೆ?

ಹಳೆ ಕಾಂತಾರದಲ್ಲಿ ದೈವ ಆವಾಹನೆಯಾಗುವ ಒಂದು ದೃಶ್ಯ ಗೂಸ್‌ ಬಂಪ್ಸ್‌ ಸೃಷ್ಟಿಸಿತ್ತು. ಇಲ್ಲಿ ಅಂತಹ ದೃಶ್ಯಗಳು ಹಲವು ಬಾರಿ ಪುನಾರವರ್ತನೆಯಾಗಿವೆ. ಹಳೆಯ ಸಿನಿಮಾದಲ್ಲಿ ನೆಲದ ಮೇಲೆ ಕುಣಿಯುತ್ತ ತನ್ನ ಮಾಯಕ ತೋರಿಸುವ ದೈವವಿತ್ತು. ಆದರೆ, ಈಗಿನ ಸಿನಿಮಾದಲ್ಲಿ ನೆಲದಿಂದ ಆಕಾಶದೆತ್ತರಕ್ಕೆ ದೈವ ಶಕ್ತಿ ಕಾಣಿಸುತ್ತದೆ. ನೆಲಬಿಟ್ಟು ಗಾಳಿಯಲ್ಲಿ ಹಾರುತ್ತ ನೆಗೆಯುತ್ತ ಸಾಹಸಗೈಯುವ ಸೂಪರ್‌ಹೀರೋ ರೀತಿ ರಿಷಬ್‌ ಶೆಟ್ಟಿ ಚಿತ್ರದ ಉದ್ದಕ್ಕೂ ಆರ್ಭಟಿಸಿದ್ದಾರೆ.

ಹಳೆಯ ಯಶಸ್ಸಿನ ದೋಣಿಯಲ್ಲಿ ಈ ಸಿನಿಮಾ ಸಾಗಿದೆ. ಹಳೆಯ ಕಾಂತಾರದಲ್ಲಿ ಜನಪ್ರಿಯತೆ ಪಡೆದ ದೃಶ್ಯಗಳು ಇಲ್ಲಿ ಪುನಾರವರ್ತನೆಯಾಗಿವೆ. ಹಳೆಯ ಹಾಡುಗಳೇ ಪುನಾರವರ್ತಿಸಿವೆ. ಹಳೆ ಕಾಂತಾರ ಬಂದು ಮೂರು ವರ್ಷಗಳಾಗಿವೆ. ಅಲ್ಲಿನ ಪಾತ್ರಗಳು, ಸನ್ನಿವೇಶಗಳು, ಹಾಸ್ಯಗಳನ್ನು ಇಲ್ಲಿ ಮತ್ತೆ ಹೇಳಲು ಯತ್ನಿಸಲಾಗಿದೆ. ಆ ಸಿನಿಮಾ ನೋಡಿ ನಕ್ಕಿದ್ದೀರಿ, ಇಲ್ಲಿಯೂ ನಗಿ ಎನ್ನುವಂತೆ ಇದೆ.

ಇದನ್ನೂ ಓದಿ: ಸು ಫ್ರಮ್‌ ಸೋ ಸಿನಿಮಾ ವಿಮರ್ಶೆ: ಕುಲೆಯ ಬಲೆಯೊಳಗೆ ನಗೆಯ ಹಾಯಿದೋಣಿ

ಕಮರ್ಷಿಯಲ್‌ ಆಗಿ ಚಿತ್ರ ಸೂಪರ್

ಹಾಗಂತ, ಯಾವುದೇ ಕಾರಣಕ್ಕೂ ಕಾಂತಾರ ಚಾಪ್ಟರ್‌ 1 ಕೆಟ್ಟ ಸಿನಿಮಾವಲ್ಲ. ಅದ್ಧೂರಿ ಮೇಕಿಂಗ್‌ನಿಂದ ಕೂಡಿ ಬಂದಿರುವ ಸುಂದರ ಸಿನಿಮಾ. ಕಮರ್ಷಿಯಲ್‌ ಆಗಿ ನೂರಾರು ಕೋಟಿ ಬಾಚಿಕೊಳ್ಳುವ ಗುಣವುಳ್ಳ ಚಿತ್ರ. ಕರಾವಳಿಯಾಚೆಗೆ ನಿಂತು ಯೋಚಿಸಿದರೆ (ಬೇರು) ಇದು ಸೂಪರ್‌ ಸಿನಿಮಾ. ತಾಂತ್ರಿಕವಾಗಿ ಅತ್ಯುತ್ತಮವಾಗಿ ಮೂಡಿಬಂದಿದೆ. ರಿಷಬ್‌ ಶೆಟ್ಟಿ ಚಿತ್ರವನ್ನು ಆವರಿಸಿಕೊಂಡ ರೀತಿ ಇಷ್ಟವಾಗುತ್ತದೆ. ನಾಯಕಿಗೂ ಶಕ್ತಿಶಾಲಿ ಪಾತ್ರ ನೀಡಲಾಗಿದೆ. ಖಂಡಿತಾ ಎಲ್ಲರೂ ಥಿಯೇಟರ್‌ ನಲ್ಲಿ ಅನುಭವಿಸಿ ನೋಡಬೇಕಾದ ಸಿನಿಮಾ. ಹಳೆಯ ಕಾಂತಾರದಲ್ಲಿ ಒಂದೇ ಒಂದು ದೃಶ್ಯಕ್ಕೆ ಗೂಸ್‌ಬಂಪ್ಸ್‌ ಎಂದಿರಲ್ವ. ಇಲ್ಲಿ ಅಂತಹ ಹಲವು ದೃಶ್ಯಗಳನ್ನು ಇನ್ನಷ್ಟು ಅದ್ಧೂರಿಯಿಂದ ರಿಷಬ್‌ ಶೆಟ್ರು ಬಗೆಬಗೆದು, ಮೊಗೆಮೊಗದು ಕೊಟ್ಟಿದ್ದಾರೆ. ಹತ್ತು ಹಲವು ದೈವದರ್ಶನವಿದೆ, ಸಾಹಸ ಪ್ರದರ್ಶನವಿದೆ. ಅತಿಯಾದರೆ ಅಮೃತವೂ…

ಕಾಡು ಮತ್ತು ನಾಡಿನ ಸಿನಿಮಾಟೊಗ್ರಫಿ ಅತ್ಯುತ್ತಮವಾಗಿದೆ. ಕ್ಯಾಮೆರಾ ವರ್ಕ್‌ಗೆ ಫುಲ್‌ ಮಾರ್ಕ್‌ ಕೊಡಬಹುದು. ದೈವದ ಆವಾಹನೆಯಾದಂತೆ ಹಿನ್ನೆಲೆ ಧ್ವನಿಯಿದೆ. ಕೆಲವೊಂದು ಕಡೆ ಸಂಭಾಷಣೆ ಸರಿಯಾಗಿ ಅರ್ಥಮಾಡಿಕೊಳ್ಳದ್ದಷ್ಟು ಅಬ್ಬರವಿದೆ. ಸಂಕಲವೂ ಉತ್ತಮ.

ಪುಟ್ಟ ನದಿಯಾಗಿ ಮುದ ನೀಡಿದ ಹಳೆ ಕಾಂತಾರವನ್ನು ಸಮುದ್ರವಾಗಿಸಲು ಮಾಡಿದ ಯತ್ನದಿಂದ ಹೊಸ ಕಾಂತಾರ ಮುಗ್ಧತೆ (ದೈವತ್ವವನ್ನೂ?) ಕಳೆದುಕೊಂಡಂತೆ ನನಗೆ ಭಾಸವಾಯಿತು.

ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು

ಕರ್ನಾಟಕ ಬೆಸ್ಟ್‌ ರೇಟಿಂಗ್: 3.5/5

error: Content is protected !!