ಕ್ಷಣಾರ್ಧದಲ್ಲಿ ಸಾಫ್ಟ್‌ವೇರ್‌ ನಿರ್ಮಿಸುವ ಎಐ; ಸಾಫ್ಟ್‌ವೇರ್ ಎಂಜಿನಿಯರ್‌ಗಳ ಯುಗ ಮುಗಿಯಿತೇ?

ಎಐ ಮೂಲಕ ಸಾಫ್ಟ್‌ವೇರ್‌ ನಿರ್ಮಾಣ

ಕೋಡಿಂಗ್‌ ಮತ್ತು ಪ್ರೋಗ್ರಾಂ ಬರೆಯಲು ಮನುಷ್ಯರು ಬೇಕಿಲ್ಲ ಎನ್ನುವುದು ಈಗಿನ ವಾಸ್ತವ. ಕೆಲವೇ ನಿಮಿಷಗಳಲ್ಲಿ ಬಳಕೆದಾರ ಬಯಸಿದಂತಹ ಸಾಫ್ಟ್‌ವೇರ್‌ಗಳನ್ನು ಎಐ ನಿರ್ಮಿಸಿಕೊಡುತ್ತಿದೆ. ಇವುಗಳ ವಿರಾಟ್‌ ರೂಪ ತಿಳಿಯಬೇಕೆಂದರೆ blink.new ಅಥವಾ buildai.space ಅಥವಾ Builder.ai ವೆಬ್‌ಸೈಟ್‌ಗಳಿಗೆ ಒಮ್ಮೆ ಭೇಟಿ ನೀಡಿ. ಇವು ಉದಾಹರಣೆಯಷ್ಟೇ. ಚಾಟ್‌ಜಿಪಿಟಿ ಸೇರಿದಂತೆ ಬಹುತೇಕ ಎಐಗಳು ಈಗ ಸಾಫ್ಟ್‌ವೇರ್‌ಗಳನ್ನು ಚಕಚಕನೆ ನಿರ್ಮಿಸಿಕೊಡುತ್ತವೆ. ಇಲ್ಲಿ ಸಾಫ್ಟ್‌ವೇರ್‌ ಉದಾಹರಣೆಯಷ್ಟೇ. ಪ್ರತಿಯೊಂದು ಕ್ಷೇತ್ರಗಳ ಅವಶ್ಯಕತೆಗಳನ್ನು ಈಗ ಎಐ ಪೂರೈಸುತ್ತಿದೆ. ಇದರ ಪರಿಣಾಮ ಉದ್ಯೋಗ ಮಾರುಕಟ್ಟೆಯ ಮೇಲೆ ಆಗುತ್ತಿದೆ. ಸಾಕಷ್ಟು ಜನರು ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ. ವಿಶೇಷವಾಗಿ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ಕೆಲಸ ಹುಡುಕುವವರು ಹೆಚ್ಚಾಗಿದ್ದಾರೆ. ಸಿಕ್ಕಸಿಕ್ಕ ಕೆಲಸ ಮಾಡುತ್ತಾ ಗಿಗ್‌ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಾರೆ.

ಎಐ ಮೂಲಕ ಸಾಫ್ಟ್‌ವೇರ್‌ ನಿರ್ಮಿಸಬಹುದು. ಉದಾಹರಣೆಗೆ blink.new ಎಂಬ ವೆಬ್‌ಸೈಟ್‌ಗೆ ಹೋಗಿ. ಅಲ್ಲಿ ನೀವು ಯಾವುದಾದರೂ ಬೇರೆ ವೆಬ್‌ಸೈಟ್‌ನ ಸ್ಕ್ರೀನ್‌ಶಾಟ್‌ ನೀಡಿದರೆ ಸಾಕು, ಅದು ಅಂತಹ ವೆಬ್‌ಸೈಟ್‌ ನೀಡುತ್ತದೆ. ಅಥವಾ ನೀವು ಬಯಸಿದಂತಹ ಫೀಚರ್‌ಗಳು, ಇತರೆ ಮಾಹಿತಿಗಳನ್ನು ಟೈಪ್‌ ಮಾಡಿದರೆ ಅಲ್ಲಿ ಸಾಫ್ಟ್‌ವೇರ್‌ ರೆಡಿಯಾಗುತ್ತದೆ. ಚಾಟ್‌ಜಿಪಿಟಿಯಂತಹ ಟೂಲ್‌ಗಳಲ್ಲಿಯೂ ಇದೇ ರೀತಿ ಸಾಫ್ಟ್‌ವೇರ್‌ಗಳನ್ನು ನಿರ್ಮಿಸಿಕೊಳ್ಳಬಹುದು. ಈಗ ಬಹುತೇಕ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ತಮ್ಮ ಕ್ಲಯೆಂಟ್‌ಗಳಿಗೆ ಇಂತಹ ಎಐ ಟೂಲ್‌ಗಳ ಮೂಲಕವೇ ಸಾಫ್ಟ್‌ವೇರ್‌ಗಳನ್ನು ನಿರ್ಮಿಸಿ ನೀಡುತ್ತಿದ್ದಾರೆ. blink.new ಇತ್ಯಾದಿಗಳ ಉಚಿತ ಆವೃತ್ತಿ ಸಾಫ್ಟ್‌ವೇರ್‌ ನಿರ್ಮಾಣಕ್ಕೆ ಸಾಕಾಗದು, ಹಣ ಪಾವತಿಸಿದರೆ ಮಾತ್ರ ಸಂಪೂರ್ಣ ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆದರೆ, ಇವುಗಳ ಶಕ್ತಿ ತಿಳಿಯಲು ಉಚಿತ ಆವೃತ್ತಿಯಲ್ಲಿ ಪರಿಶೀಲಿಸಬಹುದು.

ಇದನ್ನು ಓದಿ: ಬಾಯಿ ತೆರೆದಿದೆ ಎಐ ತಿಮಿಂಗಿಲ, ಒಳ ಪ್ರವೇಶಿಸದೆ ಇರಲಾರಿರಿ; ರಿಲಯೆನ್ಸ್‌ ಜಿಯೋ ಆ ದಿನಗಳು ನೆನಪಿದೆಯೇ?

ಇಂಟಲಿಜೆನ್ಸ್‌ ಎಂಜಿನಿಯರ್‌ಗಳು ಬೇಕಾಗಿದ್ದಾರೆ!

ಈಗ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಅಥವಾ ತಂತ್ರಜ್ಞಾನ ಬಲ್ಲವರು ಈ ರೀತಿ ಎಐ ಮೂಲಕ ತಮ್ಮ ಗ್ರಾಹಕರಿಗೆ ಸಾಫ್ಟ್‌ವೇರ್‌ಗಳನ್ನು ನಿರ್ಮಿಸಿಕೊಡಬಹುದು. ಆದರೆ, ಭವಿಷ್ಯ ಹೀಗೆ ಇರುವುದಿಲ್ಲ. ಭವಿಷ್ಯದಲ್ಲಿ ಜನರು/ಕಂಪನಿಗಳು ತಮಗೆ ಬೇಕಾದ ಸಾಫ್ಟ್‌ವೇರ್‌ಗಳನ್ನು ತಾವೇ ನಿರ್ಮಿಸಿಕೊಳ್ಳಬಲ್ಲರು/ಬಲ್ಲವು. ಇಂತಹ ಸಮಯದಲ್ಲಿ ಆ ಕಂಪನಿಗಳಿಗೆ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಬೇಕಾಗಿರುವುದಿಲ್ಲ. ಇಂಟಲಿಜೆನ್ಸ್‌ ಎಂಜಿನಿಯರ್‌ಗಳು ಬೇಕಾಗಿರುತ್ತಾರೆ.

ಇಂಟಲಿಜೆನ್ಸ್‌ ಎಂಜಿನ್‌ ಎಂಬ ಪದಗಳನ್ನು ಇತ್ತೀಚೆಗೆ ಮೈಕ್ರೊಸಾಫ್ಟ್‌ ಸಿಇಒ ಸತ್ಯಾ ನಾಡೆಲ್ಲಾ ಉಪಯೋಗಿಸಿದ್ದರು. “ಬಿಲ್‌ಗೇಟ್‌ ಅವರು ಮೈಕ್ರೊಸಾಫ್ಟ್‌ ಕಂಪನಿಯನ್ನು ಸ್ಥಾಪಿಸಿದಾಗ ಅದು ಕೇವಲ ಸಾಫ್ಟ್‌ವೇರ್‌ ಕಂಪನಿಯಾದರೆ ಸಾಲದು, ಸಾಫ್ಟ್‌ವೇರ್‌ ಫ್ಯಾಕ್ಟರಿಯಾಗಿರಬೇಕು ಎಂದು ಕನಸು ಕಂಡಿದ್ದರು. ಹಲವು ದಶಕದ ಬಳಿಕ ಈಗ ಈ ವಿಷನ್‌ ಸಾಕಾಗದು. ಯಾರು ಬೇಕಾದರೂ ತಮಗೆ ಬೇಕಾದ ಇಂಟಲಿಜೆಂಟ್‌ ಟೂಲ್‌ಗಳು ಮತ್ತು ಸೊಲ್ಯುಷನ್ಸ್‌ಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುವಂತಹ ಎಐ ವ್ಯವಸ್ಥೆಯನ್ನು ನಾವು ರಚಿಸಬೇಕಿದೆ” ಎಂದು ಸತ್ಯಾ ನಾಡೆಲ್ಲಾ ಹೇಳಿದ್ದರು. “ಸಾಫ್ಟ್‌ವೇರ್‌ ಫ್ಯಾಕ್ಟರಿಯಿಂದ ಕಂಪನಿಯು ಇಂಟಲಿಜೆನ್ಸ್‌ ಎಂಜಿನ್‌ನತ್ತ ಶಿಫ್ಟ್‌ ಆಗುತ್ತಿದ್ದೇವೆ” ಎಂದು ಅವರು ಹೇಳಿದ್ದರು.

ಎಐ ವ್ಯವಸ್ಥೆಯಿಂದ ತಂತ್ರಜ್ಞಾನ ಜಗತ್ತು ಕ್ಷಿಪ್ರವಾಗಿ ಬದಲಾಗುತ್ತಿದೆ. ಹೊಸ ಬಗೆಯ ಎಐ ಉದ್ಯೋಗಗಳು ಸೇರ್ಪಡೆಯಾಗುತ್ತಿವೆ. ಹಳೆಯ ಉದ್ಯೋಗಗಳು, ಹುದ್ದೆಗಳು ಕಾಣೆಯಾಗುತ್ತಿವೆ (ಸಾಕಷ್ಟು ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ). ಹಾಗಂತ ತುಂಬಾ ಭಯ ಪಡಬೇಕಾಗಿಲ್ಲ. ಈ ಸಮಯದಲ್ಲಿ ನಿಜವಾದ ಮಾನವ ಪ್ರತಿಭೆ ಮತ್ತು ಎಐ ಕೌಶಲಗಳನ್ನು ಜತೆಜತೆಯಾಗಿ ಕೊಂಡೊಯ್ಯುವ ಅವಶ್ಯಕತೆ ಇದ್ದೇ ಇರುತ್ತದೆ. ಏಕೆಂದರೆ, ಎಐ ಕೋಡಿಂಗ್‌ ಬರೆಯಬಹುದು, ಪ್ರೋಗ್ರಾಮಿಂಗ್‌ ಮಾಡಬಹುದು, ಸಾಫ್ಟ್‌ವೇರ್‌ ನಿರ್ಮಿಸಬಹುದು. ಎಐ ನೀಡಿರುವ ಆ ಸಾಫ್ಟ್‌ವೇರ್‌ ಅನ್ನು ಸರ್ವರ್‌ಗೆ ಕನೆಕ್ಟ್‌ ಮಾಡಿ ಲೈವ್‌ ಮಾಡಿದ ಬಳಿಕ ಏನಾದರೂ ಒಂದು ಎರರ್‌ ಬಂತೆಂದು ತಿಳಿದುಕೊಳ್ಳಿ. ಆ ಎರರ್‌ ಸರಿಪಡಿಸಲು, ಆ ಎರರ್‌ ಹುಡುಕಲು ಮತ್ತೆ ಮನುಷ್ಯರು (ಕೋಡಿಂಗ್‌ ಬಲ್ಲವರು) ಬೇಕಾಗುತ್ತದೆ.

ಇದಕ್ಕೆ ಪೂರಕವಾಗಿ ಇತ್ತೀಚೆಗೆ ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬರು ತನ್ನ ಅನುಭವ ಹಂಚಿಕೊಂಡಿದ್ದರು. ಅವರು ತನ್ನ ಕಂಪನಿಗೆ ಅಗತ್ಯವಾದ ಸಾಫ್ಟ್‌ವೇರ್‌ವೊಂದನ್ನು ಕೇವಲ ಹತ್ತು ನಿಮಿಷದಲ್ಲಿ ಎಐ ಮೂಲಕ ರಚಿಸಿದರಂತೆ. ಆ ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಿ ವೆಬ್‌ಸೈಟ್‌ನಲ್ಲಿ ಲೈವ್‌ ಮಾಡಿದ ಬಳಿಕ ಒಂದು ಚಿಕ್ಕ ಸಮಸ್ಯೆ ಕಾಣಿಸಿಕೊಂಡಿತ್ತಂತೆ. ಆ ಸಮಸ್ಯೆ ಬಗೆಹರಿಸಲು ಕಂಪನಿಯ ಪರಿಣತರಿಗೆ ಹಲವು ಗಂಟೆಗಳು ಬೇಕಾದವಂತೆ. ಅಂದರೆ, ಹತ್ತು ನಿಮಿಷದಲ್ಲಿ ಸಾಫ್ಟ್‌ವೇರ್‌ ನಿರ್ಮಾಣವಾಗಬಹುದು. ಆದರೆ, ಅದರಲ್ಲಿ ತೊಂದರೆ ಕಾಣಿಸಿಕೊಂಡರೆ ಸರಿಪಡಿಸಲು ಹತ್ತು ಗಂಟೆ ಬೇಕಾಗಬಹುದು. ಇದೇ ಕಾರಣಕ್ಕೆ ಕೋಡಿಂಗ್‌, ಪ್ರೋಗ್ರಾಮಿಂಗ್‌ ಲ್ಯಾಂಗ್ವೇಜ್‌ ಇತ್ಯಾದಿಗಳನ್ನು ಮನುಷ್ಯರು ಕಲಿಯುತ್ತಾ ಇರಬೇಕು. ಎಐ ಬಂತೆಂದು ಕೋಡಿಂಗ್‌ ಕಲಿಯದೆ ಇದ್ದರೆ ಆಗದು. ಜತೆಗೆ, ಎಐ ಮೂಲಕ “ಸೃಷ್ಟಿಸುವ” ಕೌಶಲಗಳನ್ನೂ ತಮ್ಮದಾಗಿಸಿಕೊಳ್ಳಬೇಕು.

ಭವಿಷ್ಯ ಹೇಗಿರಲಿದೆ?

ಮೊದಲು ಪುಸ್ತಕ ಓದಿ ಕಲಿಯುತ್ತಿದ್ದರು. ಬಳಿಕ ಗೂಗಲ್‌ ಸರ್ಚ್‌ ಮಾಡಿ ಕಲಿಯುವ ಜಮಾನ ಬಂತು. ಈಗ ಎಐ ನೀಡುವುದನ್ನು ಸ್ವೀಕರಿಸುವ ಕಾಲ ಬಂದಿದೆ. ಈ ತಲೆಮಾರಿನ ಮಕ್ಕಳಿಗೆ ಇದು ಸಹಜ ತಂತ್ರಜ್ಞಾನ. ಮುಂದೆ ಜನರು ಕೇವಲ ಎಐ ಮೆದುಳನ್ನು ಪೂರ್ತಿಯಾಗಿ ಅವಲಂಬಿಸಿ ತಮ್ಮ ಮೆದುಳು ಬಳಸುವುದನ್ನು ಮರೆತುಬಿಡಬಹುದೇ? ಈ ಎಐ ತಂತ್ರಜ್ಞಾನ ಜಗತ್ತನ್ನು ಯಾವ ರೀತಿ “ವಿಕಾಸ” ಮಾಡಲಿದೆ?

ಇದನ್ನು ಓದಿದ್ದೀರಾ?: ಎಐ ಜತೆ ಸಂಬಂಧ ಬೆಳೆಸುವಾಗ ಇರಲಿ ಎಚ್ಚರ; ಚಾಟ್‌ಜಿಪಿಟಿ, ಜೆಮಿನಿ, ಗ್ರೋಕ್‌ ಜತೆಗಿನ ಆತ್ಮೀಯತೆ ಪ್ರೀತಿಯಾಗದಿರಲಿ

ಈ ಲೇಖನದಲ್ಲಿ ತಿಳಿಸಿರುವ ಕೆಲವೊಂದು ಅಂಶಗಳ ಮುಂದುವರೆದ ಭಾಗವಾಗಿ ಹೆಚ್ಚಿನ ವಿವರಣೆಯನ್ನು ಈ ಮುಂದೆ ನೀಡಲಾಗಿದೆ.

ಇಂಟಲಿಜೆನ್ಸ್‌ ಎಂಜಿನಿಯರ್‌ಗಳ ಕೆಲಸವೇನು?

ಈ ಇಂಟಲಿಜೆನ್ಸ್‌ ಎಂಜಿನಿಯರ್‌ಗಳ ಕೆಲಸವೇನು? ಇವರು ಕೇವಲ ಕೋಡ್ ಬರೆಯುವವರಲ್ಲ.

  • ಸಮಸ್ಯೆಯನ್ನು ಅರ್ಥೈಸಿಕೊಳ್ಳುವುದು: ಕಂಪನಿಯ ಅಥವಾ ಗ್ರಾಹಕರ ಸಮಸ್ಯೆಯನ್ನು ಆಳವಾಗಿ ಅರ್ಥಮಾಡಿಕೊಂಡು, ಅದಕ್ಕೆ ಯಾವ ರೀತಿಯ ಎಐ ಪರಿಹಾರ ಸೂಕ್ತ ಎಂದು ನಿರ್ಧರಿಸುವುದು.
  • ಸರಿಯಾದ ಎಐ ಮಾಡೆಲ್ ಆಯ್ಕೆ: ಲಭ್ಯವಿರುವ ಸಾವಿರಾರು ಎಐ ಮಾಡೆಲ್‌ಗಳಿಂದ ಸಮಸ್ಯೆಗೆ ಸರಿಹೊಂದುವ ಮಾಡೆಲ್ ಅನ್ನು ಆರಿಸುವುದು.
  • ಎಐಗೆ ತರಬೇತಿ ಮತ್ತು ನಿರ್ವಹಣೆ: ಆಯ್ಕೆ ಮಾಡಿದ ಎಐಗೆ ಬೇಕಾದ ಡೇಟಾವನ್ನು ನೀಡಿ, ಅದನ್ನು ತರಬೇತಿಗೊಳಿಸುವುದು ಮತ್ತು ಅದು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು.
  • ಮಾನವ ಮತ್ತು ಎಐ ನಡುವಿನ ಸೇತುವೆ: ಎಐ ನೀಡುವ ಫಲಿತಾಂಶಗಳನ್ನು ಅರ್ಥೈಸಿ, ಅದನ್ನು ಕಂಪನಿಯ ಬೆಳವಣಿಗೆಗೆ ಹೇಗೆ ಬಳಸಿಕೊಳ್ಳಬಹುದು ಎಂದು ಮಾರ್ಗದರ್ಶನ ನೀಡುವುದು.

ವಿದ್ಯಾರ್ಥಿಗಳು (ಉದ್ಯೋಗಿಗಳು ಕೂಡ) ಏನು ಕಲಿಯಬಹುದು?

  • ಪ್ರಾಮ್ಟ್ ಎಂಜಿನಿಯರಿಂಗ್ (Prompt Engineering) ಕಲಿಯಿರಿ: ಎಐ ನಿಂದ ನಿಖರವಾದ ಉತ್ತರ ಪಡೆಯುವುದು ಹೇಗೆ ಎಂಬುದನ್ನು ಕಲಿಯುವುದು ಇಂದಿನ ಪ್ರಮುಖ ಕೌಶಲ.
  • ಸಿಸ್ಟಂ ಡಿಸೈನ್‌ ಮೇಲೆ ಗಮನ ಹರಿಸಿ: ಕೇವಲ ಕೋಡ್ ಬರೆಯುವುದಕ್ಕಿಂತ, ಒಂದು ಸಂಪೂರ್ಣ ಸಾಫ್ಟ್‌ವೇರ್ ವ್ಯವಸ್ಥೆಯನ್ನು (system) ವಿನ್ಯಾಸಗೊಳಿಸುವುದನ್ನು ಕಲಿಯಿರಿ.
  • ವಿಮರ್ಶಾತ್ಮಕ ಚಿಂತನೆ (Critical Thinking): ಎಐ ನೀಡಿದ ಕೋಡ್ ಅಥವಾ ಪರಿಹಾರವನ್ನು ಕುರುಡಾಗಿ ನಂಬಬೇಡಿ. ಅದರಲ್ಲಿರುವ ತಪ್ಪುಗಳನ್ನು ಹುಡುಕಿ ಸರಿಪಡಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ.
  • ಎಐ ಟೂಲ್‌ಗಳನ್ನು ಬಳಸಿ, ಸೋಮಾರಿಗಳಾಗಬೇಡಿ: ChatGPT, GitHub Copilot ನಂತಹ ಸಾಧನಗಳನ್ನು ನಿಮ್ಮ ಕೆಲಸವನ್ನು ವೇಗಗೊಳಿಸಲು ಬಳಸಿ, ಆದರೆ ಮೂಲಭೂತ ತತ್ವಗಳನ್ನು ಮರೆಯಬೇಡಿ.

ಕರ್ನಾಟಕ ಬೆಸ್ಟ್‌.ಕಾಂನಲ್ಲಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಜಗತ್ತಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

error: Content is protected !!