ಪನ್ನೀರ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರಿಗೆಲ್ಲಾ ತುಂಬಾ ಇಷ್ಟ. ಇದರಿಂದ ತಯಾರಿಸಲಾಗುವ ಗ್ರೇವಿ ಕೂಡ ತುಂಬಾ ಚೆನ್ನಾಗಿ ಇರುತ್ತೆ. ಚಪಾತಿ, ಪುಲ್ಕ, ರೋಟಿ ಜತೆಗೆ ಈ ಗ್ರೇವಿ ಹೇಳಿಮಾಡಿಸಿದ್ದು. ಹೊರಗಡೆ ಹೊಟೆಲ್ ನಲ್ಲಿ ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿ ಇದರ ರುಚಿ ಸವಿಯಿರಿ.
ಪನ್ನೀರ್ ಗ್ರೇವಿ ಮಾಡಲು ಬೇಕಾಗಿರುವ ಸಾಮಾಗ್ರಿ
ಬಟಾಣಿ-ಕಾಲು ಕಪ್ ತೆಗೆದುಕೊಳ್ಳಿ. ಬೆಣ್ಣೆ-1 ಚಮಚದಷ್ಟು, ಪನೀರ್-50 ಗ್ರಾಂ ಸಾಕು. ತುಪ್ಪ-1 ಚಮಚ, ಹಾಲು-1/4 ಕಪ್, ಒಣಮೆಣಸಿನಪುಡಿ-1 ಚಮಚದಷ್ಟು, ಅರಿಶಿನ-1/12 ಚಮಚ, ಕೊತ್ತಂಬರಿ ಪುಡಿ-1 ಚಮಚ, ದಪ್ಪನೆಯ ಕ್ರಿಮ್-2 ಚಮಚದಷ್ಟು, ಕಸೂರಿ ಮೇಥಿ-1 ಚಿಕ್ಕ ಚಮಚದಷ್ಟು, ಕಾಳುಮೆಣಸಿನಪುಡಿ-ಕಾಲು ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಗರಂ ಮಸಾಲಾ-1/2 ಚಮಚದಷ್ಟು ತೆಗೆದುಕೊಳ್ಳಿ. ಇನ್ನು ರುಚಿಗೆ ತಕ್ಕಷ್ಟು ಉಪ್ಪು.
ಮಸಾಲೆಗೆ ಬೇಕಾದ ಸಾಮಾಗ್ರಿ
ಹದ ಗಾತ್ರದ್ದು ಈರುಳ್ಳಿ ಎರಡು ತೆಗೆದುಕೊಳ್ಳಿ, ಒಂದು ಟೊಮೆಟೋ ಇದನ್ನು ಎರಡು ಭಾಗ ಮಾಡಿಟ್ಟುಕೊಳ್ಳಿ, ಅರ್ಧ ತುಂಡು ಶುಂಠಿ, ಮೆಣಸಿನ ಕಾಯಿ-4, ಹಾಗೇ, ಗೋಡಂಬಿ-8ರಿಂದ 10. ಕೆಂಪು ಮೆಣಸು-1 ಸಾಕು. ಬೆಳ್ಳುಳ್ಳಿ ಎಸಳು-5, ಲವಂಗ-2, ಚಕ್ಕೆ ಚಿಕ್ಕ ತುಂಡು.
ಶಾಹಿ ಮಟರ್ ಪನ್ನೀರ್ ಗ್ರೇವಿ ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಗೆ ನೀರು ಹಾಕಿ ಮೇಲೆ ಮಸಾಲೆಗೆ ಹೇಳಿದ ಪದಾರ್ಥಗಳನ್ನು ಈ ಕುದಿಯುವ ನೀರಿಗೆ ಹಾಕಿ ಸ್ವಲ್ಪ ಹೊತ್ತು ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ ಅದು ತಣ್ಣಗಾಗಲು ಬಿಡಿ. ನಂತರ ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಇದನ್ನೆಲ್ಲಾ ಹಾಕಿಕೊಂಡು ನೀರು ಸೇರಿಸದೇ ನಯವಾಗಿ ರುಬ್ಬಿಟ್ಟುಕೊಳ್ಳಿ.
ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ. ತುಪ್ಪ ಬಿಸಿಯಾಗುತ್ತಲೇ ಅದಕ್ಕೆ ರುಬ್ಬಿಟ್ಟುಕೊಂಡ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ತುಪ್ಪ ಪಸೆ ಬಿಟ್ಟುಕೊಂಡ ನಂತರ ಅದಕ್ಕೆ ಕೊತ್ತಂಬರಿ ಪುಡಿ, ಅರಿಶಿನ, ಮೆಣಸಿನ ಪುಡಿ, ಕಾಳುಮೆಣಸು, ಉಪ್ಪು, ಹಾಲು, ಹಾಲಿನ ಕ್ರೀಮ್ ಸೇರಿಸಿ ಮಿಶ್ರಣ ಮಾಡಿ. ನಂತರ ಅದಕ್ಕೆ ಹಸಿರು ಬಟಾಣಿ ಅಥವಾ ನೆನೆಸಿಟ್ಟುಕೊಂಡ ಬಟಾಣಿಯಾದರೂ ಸರಿ ಸೇರಿಸಿ ಮುಚ್ಚಳ ಮುಚ್ಚಿ. ಇದಕ್ಕೆ ಹಸಿ ಬಟಾಣಿಯಾದರೆ ರುಚಿ ಚೆನ್ನಾಗಿ ಬರುತ್ತದೆ.
ನಂತರ ಇನ್ನೊಂದು ಬಾಣಲೆಗೆ ತುಸು ಬೆಣ್ಣೆ ಹಾಕಿ ಪನ್ನೀರ್ ಅನ್ನು ಚೌಕಾಕಾರದಲ್ಲಿ ಕತ್ತರಿಸಿ ಬಾಣಲೆಗೆ ಹಾಕಿ. ಇದರ ಮೇಲೆ ಕಾಳುಮೆಣಸಿ ಪುಡಿ, ಗರಂ ಮಸಾಲಾ ಪುಡಿ ಚಿಮುಕಿಸಿ ಕಂದುಬಣ್ಣ ಬರುವವರೆಗೂ ಹುರಿದುಕೊಳ್ಳಿ.ನಂತರ ಈ ಪನ್ನೀರ್ ಅನ್ನು ಕುದಿಯುತ್ತಿರುವ ಮಸಾಲೆಗೆ ಹಾಕಿ 3 ನಿಮಿಷ ಚೆನ್ನಾಗಿ ಬೇಯಿಸಿ. ಜಾಸ್ತಿ ಬೇಯಿಸಿದರೆ ಪನ್ನೀರ್ ಚೆನ್ನಾಗಿರಲ್ಲ. ಗ್ಯಾಸ ಆಫ್ ಮಾಡಿ ಕಸೂರಿ ಮೇಥಿಯನ್ನು ಈ ಮಿಶ್ರಣಕ್ಕೆ ಹಾಕಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
















Got a Questions?
Find us on Socials or Contact Us and we’ll get back to you as soon as possible.